Padmashree Hegde

Romance Thriller

3.7  

Padmashree Hegde

Romance Thriller

2- ಹೆಜ್ಜೆಗೊಂದು ಹೆಜ್ಜೆ

2- ಹೆಜ್ಜೆಗೊಂದು ಹೆಜ್ಜೆ

6 mins
23.4K


ಮಹಿಮಾ ಮತ್ತು ರಜನಿ ಇಬ್ಬರೂ ಮಹಿಮಾ ಸ್ಕೂಟಿಯಲ್ಲಿ ತಮ್ಮ ಮನೆಕಡೆ ಹೊರಟಿದ್ದರು. ರಜನಿ ಎಂದಿನಂತೆ ನಾನ್ ಸ್ಟಾಪ್ ಆಗಿ ಮಾತನಾಡುತ್ತಿದ್ದರೆ, ಮಹಿಮಾ ತನ್ನ ಎಂದಿನ ಗಂಭೀರತೆಯಿಂದ ಗಾಡಿ ಓಡಿಸುತ್ತಿದ್ದಳು. ಅವಳು ರಜನಿಯ ಮಾತುಗಳನ್ನು ಕೇಳುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುವವಳಲ್ಲ. ಇದು ರಜನಿಗೂ ಗೊತ್ತಿದ್ದರಿಂದ ಅವಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.


ಮಹಿಮಾ ಬಗ್ಗೆ ಏನೇನೂ ಗೊತ್ತಿಲ್ಲದಿದ್ದರೂ ಅವಳೆಂದರೆ ಅದೇನೋ ಸೆಳೆತ ರಜನಿಗೆ!!. ಬಸವನ ಹಿಂದೆ ಬಾಲದ ಥರಾ ಯಾವಾಗಲೂ ಅವಳ ಹಿಂದೆ ಓಡುವವಳು. ಯಾರೊಡನೆಯೂ ತಾನಾಗೇ ಗೆಳೆತನ ಮಾಡದವಳು. ತಾವಾಗೇ ಯಾರಾದರೂ ಬಂದು ಗೆಳೆತನ ಮಾಡಿದರೆ ಮಾತ್ರ ಇವಳಷ್ಟು ಮಾತುಗಾರ್ತಿ ಇನ್ನೊಬ್ಬರಿಲ್ಲ. ಅಂಥವಳು ಮಹಿಮಾಳೊಟ್ಟಿಗೆ ತಾನಾಗೇ ಹೋಗಿ ಗೆಳೆತನ ಮಾಡಿದ್ದಲ್ಲದೆ ಅವಳು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಕೂಡ ವಟ ವಟ ಎನ್ನುತ್ತಲೇ ಇರುತ್ತಿದ್ದಳು. ಇವಳ ಈ ವರ್ತನೆ ಮಹಿಮಾಗೂ ಏನೂ ಬೇಜಾರಲ್ಲ. ಮೊದಮೊದಲಿಗೆ ಇವಳ ಮಾತುಗಳಿಂದ ಕಿರಿಕಿರಿಯಾಗುತ್ತಿದ್ದರೂ ಈಗ ಅವಳ ಮಾತುಗಳು ಮುದ ನೀಡುತ್ತಿದ್ದವು.


ಹೀಗೆ ರಜನಿಯ ಅರ್ಥವಿಲ್ಲದ ಕಥೆಗಳನ್ನು ಕೇಳುತ್ತ ಅವಳ ಮನೆಯ ಹತ್ತಿರ ಬಂದಿದ್ದರು. ಮಹಿಮಾ ಸಡನ್ನಾಗಿ ಗಾಡಿ ಬ್ರೇಕ್ ಹಾಕಿದಾಗ ಈ ಲೋಕಕ್ಕೆ ಬಂದಳು ರಜನಿ.


"ಒಹ್ಹ್ ಇಷ್ಟು ಬೇಗ ನಮ್ಮನೆ ಬಂದ್ಬಿಡ್ತ!! ಗೊತ್ತೇ ಆಗಲಿಲ್ಲ...ಮಹಿ ನಾನೊಂದು ಮಾತು ಕೇಳಲಾ?"


ಮಹಿಮಾ ಏನು ಹೇಳಬಹುದು ಅನ್ನೋ ಕಾತರದಲ್ಲಿ ಕೇಳಿದ್ದಳು. ಆದ್ರೆ ಅವಳಿಗೆ ಮಹಿಮಾಳ ಗಂಭೀರ ಮುಖ ನೋಡಿದಾಗಲೆಲ್ಲ ಭಯವಾಗುತ್ತಿತ್ತು.


ಮಹಿಮಾ: "ಹ್ಮ್ ಕೇಳು... " ಶಾಂತವಾಗಿ ಉತ್ತರಿಸಿದ್ದಳು.


ರಜನಿ: "ನಾನು ನಿನ್ನನ್ನ ಒಂದು ವರ್ಷದಿಂದ ನೋಡ್ತಾ ಇದೀನಿ...ಆದ್ರೆ ಇದುವರೆಗೂ ನಿಮ್ಮನೆ ಎಲ್ಲಿ ಬರುತ್ತೆ ಅಂತಾನೇ ನಂಗೆ ಗೊತ್ತಿಲ್ಲ...ಅದು ಗೊತ್ತಿದ್ದಿದ್ರೆ ಸ್ಯಾಟರ್ಡೆ ಮತ್ತೆ ಸಂಡೇ ನಿಮ್ಮನೆಗೆಲ್ಲ ಬಂದು ಹೋಗ್ಬಹುದಲ್ವಾ?"


ಅಷ್ಟೇ....ಆಮೇಲೆ ಕೆಲವು ಸಮಯ ಮಾತೇ ಇಲ್ಲ ಇಬ್ಬರಲ್ಲೂ. ಈ ಕಡೆ ರಜನಿ ಅವಳು ಏನು ಉತ್ತರ ಕೊಡ್ತಾಳೆ ಅಂತ ಭಯದಿಂದ ಕಾಯ್ತಾ ಇದ್ರೆ ಆ ಕಡೆ ಮಹಿಮಾ ಒಂದು ಮಾತನಾಡದೆ ಸುಮ್ಮನೆ ನಿಂತಿದ್ದಳು. ಅವಳಿಗೆ ಗೊತ್ತಿತ್ತು...ಒಂದಲ್ಲ ಒಂದು ದಿನ ಈ ಪ್ರಶ್ನೆ ಯಾರಾದ್ರೂ ಕೇಳ್ತಾರೆ ಅಂತ. ಆದ್ರೆ ಆಗ ಅದರಿಂದ ಹೇಗೆ ತಪ್ಪಿಸಿಕೊಳ್ಳುವುದು ಅಂತಾನೆ ಗೊತ್ತಾಗ್ತಾ ಇರಲಿಲ್ಲ. ಹೀಗೆ ಕೆಲವು ಸಮಯದ ಬಳಿಕ ಮಹಿಮಾನೆ ಮೌನವನ್ನು ಮುರಿದಿದ್ದಳು.


"ಯಾಕೆ? ನೀನು ನಮ್ಮನೆಗೆ ಬಂದು ಏನ್ಮಾಡ್ತಿಯ?"


ರಜನಿ: "ಹಾಗೆ ಸುಮ್ನೆ ಬಂದು ಹೋಗಿ ಮಾಡ್ತೀನಿ...ಯಾಕೆ ಬರ್ಬಾರ್ದ? ನೀನು ನನ್ ಫ್ರೆಂಡ್ ಅಂದ್ಮೇಲೆ ನಿಮ್ಮನೆಗೆ ಹೋಗಿ ಬಂದು ಮಾಡೋದ್ರಲ್ಲಿ ಏನು ತಪ್ಪು? ಈಗ ನನಗೆ ನಮ್ ಕಾಲೇಜಿನ ಎಲ್ಲ ಸ್ಟಾಫ್ ಮನೇನು ಗೊತ್ತು...ನಿನ್ ಮನೆ ಮಾತ್ರ ನಂಗೆ ಗೊತ್ತಿಲ್ಲ...ನಂಗೆ ಅಷ್ಟೇ ಅಲ್ಲ ಯಾರಿಗೂ ಗೊತ್ತಿಲ್ಲ ನಿಮ್ಮನೆ ಎಲ್ಲಿ ಬರುತ್ತೆ ಅಂತ...ನೀನಂತೂ ಹೇಗೂ ಕರೆಯೋಲ್ಲ...ಅದಕ್ಕೆ ನಾನೇ ಕೇಳಿ ಬರೋಣ ಅಂತ" ಅವಳು ಮುಖ ಉಬ್ಬಿಸಿ ಹೇಳಿದ ರೀತಿಗೆ ಮಹಿಮಾ ಮುಖದಲ್ಲಿ ಕಿರುನಗೆ ಮೂಡಿತ್ತು.


ಆದ್ರೂ ಅವಳ ಪ್ರಶ್ನೆಗೆ ಏನು ಉತ್ತರಿಸದೆ ಸುಮ್ಮನೆ ತನ್ನ ಸ್ಕೂಟಿ ಹತ್ತಿ ಮನೆ ಕಡೆ ನಡೆದಿದ್ದಳು. ಈ ಕಡೆ ಅವಳು ಏನೂ ಹೇಳದೆ ಹಾಗೆ ಹೋಗಿದ್ದರಿಂದ ರಜನಿಯ ಮನಸ್ಸಿಗೆ ತುಂಬಾನೇ ನೋವಾಗಿತ್ತು. ತಕ್ಷಣ ಅವಳ ಮನಸ್ಸಿಗೆ ಜನ್ಮಿಯ ಮಾತುಗಳು ನೆನಪಾಗಿದ್ದವು 'ಎಲ್ಲರಿಗೂ ಅವಳನ್ನ ಕಂಡ್ರೆ ತುಂಬಾ ಇಷ್ಟ ಅಂತ ಅಹಂಕಾರ ಅವಳಿಗೆ...ಅದಕ್ಕೆ ನೀನು ಅಷ್ಟು ಮಾತನಾಡಿಸಲು ಹೋದ್ರು ಕೂಡ ಸರಿಯಾಗಿ ಮಾತಾಡೋಲ್ಲ...ಈ ಮಿಡ್ಲ್ ಕ್ಲಾಸ್ ಜನನೆ ಹೀಗೆ! ಸ್ವಲ್ಪ ಯಾರಾದ್ರೂ ಸಲಿಗೆ ಕೊಟ್ರೆ ಸಾಕು ಅಹಂಕಾರ ಬಂದ್ಬಿಡುತ್ತೆ' ಅಂತ ಒಂದು ಸಲ ಹೇಳಿದ್ದಳು.


ಆಗ ನಾನು 'ಅವ್ಳು ಮಿಡ್ಲ್ ಕ್ಲಾಸ್ ಹುಡುಗಿ ಅಂತ ಹೇಗೆ ಹೇಳ್ತಿಯ' ಅಂತ ಕೇಳಿದ್ದೆ.


ಆಗ ಅವಳು 'ನೋಡಿದ್ರೆ ಗೊತ್ತಾಗೋಲ್ವಾ? ಅದೆಷ್ಟು ಸಿಂಪಲ್ ಆಗಿ ಬರ್ತಾಳೆ ಅಂತ...ನಂಗಂಸುತ್ತೆ ಅವಳ ಸ್ಯಾಲರಿ ಪೂರ್ತಿ ಅವಳ ಮನೆ ನಿಭಾಯಿಸೋಕೆ ಬೇಕೇನೋ!!! ಅದಕ್ಕೆ ಹಾಗಿರ್ತಾಳೆ...ಪೂರ್ ಗರ್ಲ್!!' ಅಂತ ಹೇಳಿ ನಕ್ಕಿದ್ದಳು. ಆಗ ನನಗೆ ಅದೆಷ್ಟು ಸಿಟ್ಟು ಬಂದಿತ್ತು!! ಅವಳ ಕೆನ್ನೆಗೆ ನಾಲಕ್ಕು ಬಾರಿಸೋಣ ಅನ್ನೋ ಅಷ್ಟು. ಆದ್ರೆ ಅವಳು ನನ್ನ ಕ್ಲೋಸ್ ಫ್ರೆಂಡ್ ಅನ್ನೋ ಕಾರಣಕ್ಕೆ ಕಷ್ಟ ಪಟ್ಟು ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದೆ. ಜನ್ಮಿ ಕೂಡ ಏನೂ ಕೆಟ್ಟವಳಲ್ಲ. ಅಷ್ಟು ಶ್ರೀಮಂತರ ಮಗಳಾಗಿದ್ದರೂ ಒಂದು ಸ್ವಲ್ಪವೂ ಜಂಭವಿಲ್ಲ ಆಕೆಯಲ್ಲಿ! ಕಾಲೇಜಿನಲ್ಲಿಯೂ ಎಲ್ಲರೊಡನೆ ಎಷ್ಟು ಚಂದ ಬೆರೆಯುತ್ತಾಳೆ ಆಕೆ. ಆದರೆ ಮಹಿಯನ್ನು ಕಂಡಾಗ ಮಾತ್ರ ಅದೇಕೆ ಆ ರೀತಿ ಉರಿದುಕೊಳ್ಳುತ್ತಾಳೆಂದೇ ಗೊತ್ತಿಲ್ಲ ನನಗೆ. ಇದೊಂದು ವಿಷಯವನ್ನ ಬಿಟ್ಟು ಬೇರೆಲ್ಲ ವಿಷಯದಲ್ಲಿಯೂ ಜನ್ಮಿ ಅಪರಂಜಿಯೇ!!


ಇನ್ನು ಮಹಿಯ ವಿಷಯಕ್ಕೆ ಬರುವುದಾದರೆ ಅವಳನ್ನು ನೋಡಿದಾಗೆಲ್ಲ ನನಗೊಂದು ಆತ್ಮೀಯತೆ ಉಂಟಾಗುತ್ತದೆ. ಅದಕ್ಕೆ ಅಲ್ಲವಾ...ಅವಳು ನನ್ನನ್ನ ಅಷ್ಟು ಇಗ್ನೋರ್ ಮಾಡುತ್ತಿದ್ದರೂ ಕೂಡ ನಾನು ಮಾತ್ರ ಅವಳನ್ನು ಮತ್ತೆ ಮತ್ತೆ ಮಾತನಾಡಿಸುವುದು. ಆದರೆ ಅವಳನ್ನ ನೋಡಿದರೆ ನನಗೆ ಜನ್ಮಿ ಹೇಳಿದಂತೆ ಅಹಂಕಾರ ಕಾಣಿಸುವುದಿಲ್ಲವಲ್ಲ!! ಶುದ್ಧ ಮನಸ್ಸು ಮಾತ್ರ ಕಾಣುತ್ತದೆ. ಅವಳ ಕಣ್ಣುಗಳಲ್ಲಿ ನನಗೆ ಲೆಕ್ಕಕ್ಕೆ ಸಿಗದಷ್ಟು ನೋವುಗಳು ಕಾಣುತ್ತವೆ. ಯಾರಿಗೂ ಹೇಳಿಕೊಳ್ಳಲಾಗದ ನೋವು! ಅವಳೇನಾದ್ರು ನನ್ನ ಹತ್ರ ಹೇಳಿದಿದ್ದರೇ ನಾನು ಹೇಗಾದ್ರು ಮಾಡಿ ಅವಳ ಕಷ್ಟವನ್ನ ದೂರ ಮಾಡಲು ಪ್ರಯತ್ನಿಸುತ್ತಿದ್ದೆ. ಆದ್ರೆ ಅವಳೋ... ನನ್ನ ಹತ್ರ ತನ್ನ ಕಷ್ಟವನ್ನ ಹೇಳುಕೊಳ್ಳುವುದಿರಲಿ, ಮಾತೇ ಆಡುವುದು ಕಡಿಮೆ. ಏನಾದ್ರು ಹೇಳಿದರೆ ಒಂದು ಸ್ಮೈಲ್ ಕೊಟ್ಟು ತನ್ನ ಕೆಲಸಕ್ಕೆ ಹೊರಡುತ್ತಾಳೆ. ಈ ಹುಡುಗಿಯನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟನಪ್ಪ....


ರಜನಿಯ ಯೋಚನಾಲಹರಿ ಬಿಟ್ರೆ ಇದೆ ರೀತಿ ಮುಂದುವರೆಯುತ್ತಿತ್ತೇನೋ...ಅಷ್ಟರಲ್ಲಿ ಯಾವುದೋ ಒಂದು ಧ್ವನಿ ತನ್ನನ್ನ ಕರಿತಾ ಇದ್ದ ಹಾಗೆ ಅನ್ನಿಸಿ ತಿರುಗಿ ನೋಡಿದ್ದಳು. ಅಲ್ಲಿ ಅವಳಮ್ಮ ಗೊಂದಲದಿಂದ ಅವಳ ಮುಖ ನೋಡುತ್ತಾ ನಿಂತುಕೊಂಡಿದ್ದರು...ಅವರನ್ನು ನೋಡಿ ರಜನಿಗೆ ಕಾಡಿಸುವ ಮನಸ್ಸಾಗಿತ್ತು😄.


"ಇದೇನಮ್ಮ? ನನ್ನನ್ನ ನೀನು ಇಷ್ಟೆಲ್ಲ ಮಿಸ್ ಮಾಡ್ಕೋತ್ತಿಯಾ ಅಂತ ಗೊತ್ತೇ ಇರಲಿಲ್ಲ ನಂಗೆ. ನನ್ನನ್ನ ಹುಡುಕಿಕೊಂಡು ಬಸ್ ಸ್ಟ್ಯಾಂಡ್ ತನಕ ಬರೋ ತೊಂದ್ರೆ ಯಾಕೆ ತಗೊಳೋಕೆ ಹೋದೆ ನೀನು? ಹೇಗೂ ಇನ್ನು ಹತ್ತು ನಿಮಿಷದಲ್ಲಿ ನಾನೇ ಮನೇಲಿ ಇರ್ತಿರ್ಲಿಲ್ವಾ??"


 ರಜನಿಯ ಮಾತು ಕೇಳಿ ಅವರಮ್ಮ ಹುಬ್ಬುಗಂಟಿಕ್ಕಿದ್ದರು.


"ಏನಂದೆ...ಇನ್ನು ಹತ್ತು ನಿಮಿಷಕ್ಕೆ ಮನೆಗೆ ಬರ್ತಿದ್ಯಾ? ನೀನು ಇನ್ನು ಹತ್ತು ನಿಮಿಷಕ್ಕೆ ಹೋಗ್ತಾ ಇದ್ದಿದ್ದು ಮನೆಗಲ್ಲ...ನರಕಕ್ಕೆ. ಒಂದು ಸಲ ಕಣ್ಣು ಬಿಟ್ಟು ನಿನ್ನ ಸುತ್ತ ಮುತ್ತ ನೋಡು...ಎಲ್ಲಿಗೆ ಬಂದಿದಿಯ ಅಂತ. ಆಗಿನಿಂದ ಕರಿತಾನೆ ಇದೀನಿ. ಒಳ್ಳೆ ಹುಚ್ಚು ಹಿಡಿದಿರುವ ಥರ ಕೈ ಬಾಯಿ ಎಲ್ಲ ಸನ್ನೆ ಮಾಡಿಕೊಳ್ಳುತ್ತಾ ಹೋಗ್ತಾನೆ ಇದೀಯ. ನಾನು ಮೊದಲಿನಿಂದನೆ ಹೇಳ್ತಾ ಬಂದೆ... ಒಂದ್ಸಲ ಡಾಕ್ಟರ್ ಗೆ ತೋರಿಸ್ಕೊಂಡು ಬಾ ಅಂತ. ಈಗ ನೋಡು ಹುಚ್ಚು ತಲೆಗೆ ಏರಿದೆ ಅನ್ಸುತ್ತೆ. ಅದಕ್ಕೆ ಈ ರೀತಿ ಆಡ್ತಿದೀಯ. ಅಯ್ಯೋ ದೇವರೇ ಇವಾಗ್ಲೇ ಹೀಗೆ ಆಗ್ಬೇಕಿತ್ತಾ? ಅಲ್ಲಿ ನಿನ್ನ ಅನಿ ಅಪ್ಪ ಅಮ್ಮ ನೋಡಿದ್ರೆ ಇದೇ ವರ್ಷದಲ್ಲಿ ಮದುವೆ ಇಟ್ಕೋಳೋಣ ಅಂತ ಹೇಳ್ತಿದ್ರು. ನೀನು ನೋಡಿದ್ರೆ ಈ ರೀತಿ ಆಡ್ತಿದೀಯ. ನಿನ್ನ ಮದ್ವೆ ಆದ್ಮೇಲೆ ಏನಾಗಿದ್ರು ತೊಂದ್ರೆ ಇರ್ಲಿಲ್ಲ. ಆದ್ರೆ ಈಗೇನಾದ್ರು ಮದ್ವೆ ನಿಂತು ಹೋದ್ರೆ ನನ್ನ ಮನೇಲಂತೂ ನೀನು ಇರ್ಬೇಡಾ. ನನ್ನ ಕೈ ಅಲ್ಲಿ ಈ ನಿನ್ನ ಕಾಟ ತಡಿಯೋಕೆ ಆಗೋಲ್ಲ" ಅಂತ ಬೈತಾ ಮುಂದೆ ಹೋಗ್ತಾ ಇದ್ರೆ ಅವರ ಹಿಂದೇ ಒಳ್ಳೆ ನಾಯಿ ಮರಿ ಥರ ನಮ್ಮ ರಜನಿ ಮುಖ ಸಪ್ಪಗೆ ಮಾಡ್ಕೊಂಡು ಹೋಗ್ತಾ ಇದ್ಲು. ಅವಳಿಗಿನ್ನು ಅರಗಿಸಿಕೊಳ್ಳೋಕೆ ಆಗ್ತಿರ್ಲಿಲ್ಲ. ತಾನು ಅಲ್ಲಿವರೆಗೂ ಹೋಗಿದ್ನಾ ಅಂತ.


ಅಲ್ಲಿ ಆಗಿದ್ದು ಇಷ್ಟೇ. ರಜನಿ ಜನ್ಮಿ ಮತ್ತೆ ಮಹಿ ವರ್ತನೆ ಬಗ್ಗೆ ಯೋಚ್ನೆ ಮಾಡ್ತಾ ಹೋಗ್ತಾ ಹೋಗ್ತಾ ತನ್ನ ಮನೆ ದಾಟಿ ತುಂಬಾನೇ ಮುಂದೆ ಬಂದ್ಬಿಟಿದ್ಲು. ಇನ್ನು ಒಂದು ಸಲ್ಪದೂರ ಹೋದ್ರೆ ಅಲ್ಲೊಂದು ವ್ಯೂ ಪಾಯಿಂಟ್ ಇತ್ತು...ಹೋದ ವಾರ ಅಲ್ಲಿ ಆಕ್ಸಿಡೆಂಟ್ ಆಗಿದ್ರಿಂದ ಅಲ್ಲಿ ಸೇಫ್ಟಿಗೆ ಅಂತ ಹಾಕಿದ್ದ ಸಿಮೆಂಟಿನ ಕಟ್ಟೆ ಒಡೆದುಹೋಗಿತ್ತು. ಇವ್ಳು ಹೀಗೆ ಹೋಗಿದಿದ್ರೆ ಸೀದಾ ಅಲ್ಲಿಂದ ಕೆಳಗೆ ಬೀಳೋ ಸಾಧ್ಯತೆ ಇತ್ತು...ಅದು ತುಂಬಾ ಎತ್ತರದ ಪ್ರದೇಶವಾದ್ದರಿಂದ ಕೆಳಗೆ ಪೂರ್ತಿ ಪ್ರಪಾತ! ರಜನಿಗೆ ಒಂದ್ಸಲ ಭಯವಾಗ್ಬಿಟ್ಟಿತ್ತು... ಅಮ್ಮ ಬರದೆ ಇದಿದ್ರೆ ತನ್ನ ಗತಿ ಏನಾಗ್ತಿತ್ತು ಅಂತ!


      


ಹಾಗೆ ತಕ್ಷಣಕ್ಕೆ ಅವಳಿಗೆ ತನ್ನ ಅಮ್ಮ ಸ್ವಲ್ಪ ಸಮಯದ ಹಿಂದೆ ಹೇಳಿದ್ದ ಮಾತು ನೆನಪಾಗಿತ್ತು...ಅದೇ... 'ಇನ್ನು ಹತ್ತು ನಿಮಿಷ ಬಿಟ್ಟಿದ್ರೆ ನರಕಕ್ಕೆ ಹೋಗ್ತಿದ್ದೆ' ಅಂದಿದ್ದು. ತಕ್ಷಣಕ್ಕೆ ಅಮ್ಮನಿಗೆ ಅಡ್ಡ ಹಾಕಿ ನಿಂತು ಪ್ರಶ್ನಿಸಿಯೇ ಬಿಟ್ಟಿದ್ದಳು ನಮ್ಮ ರಜನಿ.


"ಒಂದು ನಿಮಿಷ ಅಮ್ಮ...ಈಗಷ್ಟೇ ಏನೋ ಅಂದ್ಯಲ್ಲ ನೀನು ಏನದು...ಅದೇ...ಏನೋ ನರಕಕ್ಕೆ ಹೋಗ್ತಿಯ ಅಂತ!..ನಾನು ನರಕಕ್ಕೆ ಯಾಕೆ ಹೋಗ್ಲಿ..ಸ್ವರ್ಗಕ್ಕೆ ತಾನೇ ಹೋಗ್ಬೇಕಾಗಿರೋದು!!...ನಾನೇನು ರಾಕ್ಷಸಿನ? ನರಕಕ್ಕೆ ಹೋಗಕ್ಕೆ"


ಅವಳ ಮಾತು ಕೇಳಿ ಅವಳಮ್ಮನಿಗೆ ಜೋರಾಗಿ ನಗು ಬಂದಿತ್ತು...


" ಇದೇನು ಕೇಳೋ ವಿಷ್ಯನ? ನಿನ್ನ ನೋಡಿದ್ರೆ ಯಾರಾದ್ರೂ ಹೇಳ್ತಾರೆ...ಇನ್ನು ನೀನು ಎಲ್ರಿಗೂ ಕೊಡೋ ಕಾಟಕ್ಕೆ ಸ್ವರ್ಗದಲ್ಲಿ ನಿನ್ನ ಒಳಗೆ ಬಿಡ್ತಾರೆ ಅಂದ್ಕೊಂಡಿದ್ಯಾ...ನರಕದಲ್ಲಿ ಮಾತ್ರ ಜಾಗ ಸಿಗೋದು ನಿಂಗೆ...ನೀನು ರಾಕ್ಷಸರ ಥರ ಮನುಷ್ಯರನ್ನ ಕೊಲ್ಲದೆ ಇದ್ರು ಕೂಡ ಅವರ ತಲೆ ಅಂತೂ ತಿಂತಿಯಲ್ಲಾ!!! ಅಷ್ಟು ಸಾಕು ನೀನು ನರಕಕ್ಕೆ ಹೋಗೋಕೆ" ಅಂತ ಜೋರಾಗಿ ನಗಲು ಶುರು ಮಾಡಿದ್ದರು.


ಇದರಿಂದ ರಜನಿಗೆ ಅತಿಯಾಗಿ ಕೋಪ ಬಂದಿತ್ತು. ಅವಳಿಗೆ ಗೊತ್ತಿತ್ತು. ತನಗೆ ತನ್ನಮ್ಮನ ಎದುರಿಸಲು ಕಷ್ಟ ಅಂತ. ಅದಕ್ಕೆನಿದ್ರೂ ಅವಳಪ್ಪನ ಜೊತೆ ಸಿಕ್ಕಾಗ ಮಾತ್ರ ಸಾಧ್ಯ. ಅದಕ್ಕೆ ಅವಳಮ್ಮನಾ ವಿರುದ್ಧ ಆಪ್ಲಿಕೇಶನ್ ಹಾಕೋಕೆ ಮನೆಗೆ ಓಡಿದ್ದಳು.


ರಜನಿ ಶ್ರೀದೇವಿ ಮತ್ತು ಶ್ರೀನಾಥ್ ಅವರ ಮೊದಲನೇ ಮಗಳು. ಇವಳಿಗೆ ಒಬ್ಬ ತಮ್ಮ ಕೂಡ ಇದ್ದಾನೆ. ಅವನು ಈಗ ಎಂಬಿಎ ಓದುತ್ತಾ ಇದ್ದಾನೆ. ಇನ್ನು ಶ್ರೀನಾಥ್ ಅವರು ತಮ್ಮದೇ ಆದ ಒಂದು ಕಂಪನಿಯನ್ನು ನಡೆಸುತ್ತ ಇದ್ದಾರೆ. ಅಷ್ಟಾಗಿ ದೊಡ್ಡ ಕಂಪೆನಿಯಲ್ಲದಿದ್ದರು ಒಂದು ಸುಖ ಜೀವನಕ್ಕೆ ಯಾವುದೇ ಕೊರತೆಯಿಲ್ಲ. ಸುಮಾರು 50 ಜನರು ಇವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಜನಿ ಎಂಕಾಮ್ ಮುಗಿಸಿದಾಗ ಅವಳ ಅಪ್ಪನಿಗೆ ಅವಳು ತಮ್ಮ ಕಂಪನಿಯನ್ನು ನೋಡಿಕೊಳ್ಳುತ್ತಾಳೆಂದು ಅಂದುಕೊಂಡಿದ್ದರು. ಆದರೆ ಅವಳು ಕಾಲೇಜಿಗೆ ಲೆಕ್ಚರರ್ ಆಗಿ ಸೇರಿದ್ದಳು. ಮೊದಲಿಗೆ ಸ್ವಲ್ಪ ಬೇಜಾರಾದರೂ ನಂತರ ಅವಳ ಇಷ್ಟದಂತೆ ಅಗಲೆಂದು ಸುಮ್ಮನಾಗಿದ್ದರು. ಈಗ ಅವಳ ತಮ್ಮ ಎಂಬಿಎ ಮುಗಿಸಿ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವವನಿದ್ದ.


ಮಹಿಮಾ ಗಾಡಿ ಒಂದು ದೊಡ್ಡ ಕಂಪೌಂಡಿನ ಎದುರಿಗೆ ಬಂದು ನಿಂತಿತ್ತು. ಎಕರೆಗಳಷ್ಟು ದೊಡ್ಡದಾಗಿ ಹರಡಿಕೊಂಡಿರುವ ಹಾಗೂ ಆಳೆತ್ತರದಷ್ಟು ಎತ್ತರವಾಗಿರುವ ಕಾಂಪೌಂಡ್ ಅದು. ಅದರ ಮಧ್ಯದಲ್ಲಿ ಒಂದು ದೊಡ್ಡ ಗೇಟ್. ಆ ಗೇಟ್ ಪಕ್ಕದ ಗೋಡೆಯಲ್ಲಿ ದೊಡ್ಡದಾಗಿ 'ಮಮತಾ ಮ್ಯಾಂಶನ್' ಎಂದು ಇಂಗ್ಲಿಷಿನಲ್ಲಿ ಕೆತ್ತಲಾಗಿತ್ತು. ಅದನ್ನು ನೋಡಿದ ಮಹಿಮಾಳ ಮುಖದಲ್ಲಿ ಒಂದು ವ್ಯಂಗ್ಯ ನಗುವರಳಿತ್ತು.


"ಹ್ಹ್! ಮಮತಾ ಮ್ಯಾಂಶನ್...ಹೆಸರಿಗೆ ತಕ್ಕಂತೆ ಮನೇನು ಇದ್ದಿದ್ರೆ ಎಷ್ಟು ಚೆನ್ನಾಗಿರೋದು!! ಆದ್ರೆ ಇದು ಮಮತೆನೆ ಇಲ್ದೆ ಇರೋ ಮ್ಯಾಂಶನ್!!"

ಅಷ್ಟರಲ್ಲಿ ಇವಳು ಬಂದಿದ್ದನ್ನ ನೋಡಿದ ವಾಚ್ಮ್ಯಾನ್ ಆ ದೆವ್ವದಂತಹ ಗೇಟನ್ನು ತೆಗೆದಿದ್ದ. ಮಹಿಮಾ ಗಾಡಿ ಆ ಕಾಂಪೌಂಡಿನ ಒಳಗೆ ಚಲಿಸಿತ್ತು. ಅಲ್ಲಿ ಇದ್ದದ್ದು ಒಂದು ದೊಡ್ಡ ಬಂಗಲೆ. ಅದನ್ನು ನೋಡಿದ ಯಾರೇ ಆದರೂ ವ್ಹಾವ್ ಅನ್ನೋಷ್ಟು ಚಂದದ ಮನೆ. ಆದ್ರೆ ಅಲ್ಲಿ ಎಲ್ಲರ ಗಮನ ಹೆಚ್ಚಾಗಿ ಸೆಳೆಯುವುದು ಮನೆಯಲ್ಲ. ಅದರ ಸುತ್ತಲೂ ಹರಡಿಕೊಂಡಿರುವ ಗಾರ್ಡನ್. ಅದು ಖುದ್ದು ಮಹಿಮಾ ಅಲ್ಲಿಯ ಕೆಲಸದವರಲ್ಲಿ ಹೇಳಿ ತನಗಿಷ್ಟವಾದ ರೀತಿಯಲ್ಲಿ ಮಾಡಿಸಿದ್ದು. ಆದಂತೂ ನೋಡಲು ಇನ್ನೊಂದು ಸ್ವರ್ಗವೇ!!. ಅಷ್ಟು ಅದ್ಭುತವಾಗಿತ್ತು.


ಮಹಿಮಾ ಅಲ್ಲಿಂದ ಸೀದಾ ತನ್ನ ಕೋಣೆಗೆ ಹೋಗಿದ್ದಳು. ಅವಳಿಗೆ ಅಲ್ಲಿ ಯಾರು ಬೇಡ. ಏನು ಬೇಡ. ಹೇಳಬೇಕೆಂದರೆ ಅವಳಿಗೆ ಆ ಮನೆಯಲ್ಲಿರುವುದೇ ಸಹ್ಯವಲ್ಲ. ಆದ್ರೂ ಅಲ್ಲಿ ಅವಳು ಬದುಕುತ್ತಿದ್ದಾಳೆಂದರೆ ಅದು ಅವಳ ಅತ್ತೆಗಾಗಿ ಮಾತ್ರ!


ರೂಮಿಗೆ ತೆರಳಿದ ಮಹಿಮಾ ಸೀದಾ ಬಾತ್ರೂಮಿಗೆ ಹೋಗಿ ಫ್ರೆಶಾಗಿ ಬಟ್ಟೆ ಬದಲಿಸಿ ತನ್ನ ಎಂದಿನ ನೈಟ್ ಡ್ರೆಸ್ಸಿನಲ್ಲಿ ಬಂದಿದ್ದಳು. ಅಲ್ಲಿಂದ ಆಕೆ ಸೀದಾ ಹೋಗಿದ್ದು ಬಾಲ್ಕನಿಗೆ. ಆ ಇಡೀ ಮನೆಯಲ್ಲಿ ಅವಳಿಗೆ ಇಷ್ಟವಾಗುವಂತಹ ಸ್ಥಳಗಳೆಂದರೆ ಒಂದು ಅವಳೇ ತಯಾರು ಮಾಡಿಸಿದ ಗಾರ್ಡನ್ ಇನ್ನೊಂದು ಅವಳ ರೂಮಿನ ಬಾಲ್ಕನಿ. ಏಕೆಂದರೆ ಆ ಬಾಲ್ಕನಿ ಇಂದ ಗಾರ್ಡನ್ ಕಾಣಿಸುತ್ತಿತ್ತು.


ಮಹಿಮಾ ಅಲ್ಲಿ ನಿಂತುಕೊಂಡು ಯೋಚನೆಗೆ ತೊಡಗಿದ್ದಳು. ಅವಳ ಯೋಚನೆ ರಜನಿಯ ಸುತ್ತ ಸುತ್ತುತ್ತಿತ್ತು.


'ಅವಳನ್ನ ನಾನು ನೋಡ್ತಾ ಒಂದು ವರ್ಷದ ಮೇಲಾಗ್ತಾ ಬಂತು. ಈ ಒಂದು ವರ್ಷದಲ್ಲಿ ಅವಳು ನನಗೆ ಅದೆಷ್ಟು ಹತ್ತಿರವಾಗಿದ್ದಾಳೆ ಹುಡುಗಿ! ಅದೆಷ್ಟು ಹಚ್ಚಿಕೊಂಡಿದ್ದಾಳೆ ನನ್ನನ್ನ! ಪ್ರತಿ ಸಲಾನು ಅವಳು ನನ್ನ ಹತ್ತಿರ ಮಾತನಾಡಲು ಬಂದಾಗ ನನ್ನಿಂದ ಅವಳಿಗೆ ಸಿಗುತ್ತಿದ್ದದ್ದು ಕೇವಲ ತಿರಸ್ಕಾರ ಅಷ್ಟೇ. ಆದರೂ ಅವಳು ಸ್ವಲ್ಪವೂ ಬೇಸರಿಸದೆ ನನ್ನ ಜೊತೆಗೆ ಇಂದಿಗೂ ಮಾತನಾಡುತ್ತಲೇ ಬಂದಿದ್ದಾಳೆ. ಆದರೆ ಇಂದು....ಇಂದು ಅವಳು ನನ್ನ ಹತ್ತಿರ ಕೇಳಿಕೊಂಡಿದ್ದಾದರು ಏನೂ? ನಿಮ್ಮ ಮನೆ ಎಲ್ಲಿದೆ? ತಾನು ಬರ್ತೀನಿ ಅಂತ ತಾನೇ! ಅದನ್ನೂ ಹೇಳಲಾಗದೆ ಬಂದುಬಿಟ್ಟೆ ನಾನು. ಪಾಪ ರಜನಿ...ಅದೆಷ್ಟು ನೋವು ಮಾಡಿಕೊಂಡಳೊ ಏನೋ!! ಅವಳು ಕೇಳಿದ್ದರಲ್ಲಿ ತಪ್ಪಾದರೂ ಏನಿತ್ತು? ಪ್ರತಿಯೊಬ್ಬರಿಗೂ ಅವರ ಫ್ರೆಂಡ್ಸ್ ಮನೆಗೆ ಹೋಗಬೇಕು ಅಂತ ಆಸೆ ಇರಲ್ವಾ? ಹಾಗೆ ಅವಳು ಕೇಳಿದ್ದಾಳೆ ಅಷ್ಟೇ...ಆದರೆ ಅವಳು ಕೇಳಿಕೊಂಡ ಹಾಗೆ ಇಲ್ಲಿಗೆ ಅವಳನ್ನು ಕರೆದುಕೊಂಡು ಬರಲು ಸಾಧ್ಯನಾ? ಈ ನರಕಕ್ಕೆ!!! ಸಾಧ್ಯಾನೆ ಇಲ್ಲ...ಒಂದು ವೇಳೆ ಇದೊಂದು ವಿಷಯಕ್ಕೆ ಸರಿ ಅಂತ ಬಿಟ್ಟರೆ ಮುಂದೆ ಎಲ್ಲವೂ ಕಷ್ಟವಾಗುತ್ತದೆ...ಇದುವರೆಗೂ ಯಾರಿಗೂ ನನ್ನ ಬಗ್ಗೆ, ನನ್ನ ಜೀವನದ ಬಗ್ಗೆ, ನನ್ನ ನೋವಿಗೆ ಬಗ್ಗೆ ಗೊತ್ತಿಲ್ಲ. ಆಮೇಲೆ ಎಲ್ಲರಿಗೂ ಗೊತ್ತಾಗುತ್ತೆ. ಹೇಗೋ ಈಗ ಮಕ್ಕಳಿಗೆ ಪಾಠ ಮಾಡ್ತಾ ಅದನ್ನೆಲ್ಲ ಮರೆಯೋದಕ್ಕೆ ಪ್ರಯತ್ನ ಪಡ್ತಾ ಇದೀನಿ...ಆಮೇಲೆ ಮತ್ತೆ ಅದೆಲ್ಲ ಮರುಕಳಿಸಿವಂತೆ ಆಗುವುದು ಬೇಡ...ಈಗ ಹೇಗಿದಿಯೋ ಮುಂದೆಯೂ ಹಾಗೆಯೇ ಇದ್ದು ಬಿಡಲಿ' ತನ್ನ ಕಣ್ಣಲ್ಲಿದ್ದ ನೀರನ್ನು ಒರೆಸಿಕೊಳ್ಳುತ್ತಾ ಒಳಗೆ ಬಂದು ಮಂಚದ ಮೇಲೆ ಮಲಗಿದ್ದಳು.


ಸಶೇಷ



Rate this content
Log in

Similar kannada story from Romance