8- ಹೆಜ್ಜೆಗೊಂದು ಹೆಜ್ಜೆ
8- ಹೆಜ್ಜೆಗೊಂದು ಹೆಜ್ಜೆ


"ಅಕ್ಕ, ಇವತ್ತೇನಾಯ್ತು ಗೊತ್ತಾ!? ಓಹ್ಹ್ ಮೈ ಗಾಡ್! ನನಗೆ ಈಗಲೂ ಅದನ್ನ ನೆನೆಸಿಕೊಂಡರೆ ನಗು ತಡಿಯೋಕೆ ಆಗ್ತಾ ಇಲ್ಲ...ಅವಾಗ ಅದು ಹೇಗೆ ಅಷ್ಟೊತ್ತು ನಗು ತಡ್ಕೊಂಡಿದ್ದೆ ಅಂತಾನೆ ಗೊತ್ತಿಲ್ಲ ನಂಗೆ... ಅನಿಗೆ ಹೊಟ್ಟೆ ಉರಿಸಬೇಕು ಅಂತ ತುಂಬಾ ದಿನದಿಂದ ಆಸೆಯಿತ್ತು. ಅದು ಇವತ್ತು ನೆರವೇರಿತು. ನಿಮ್ ಮೈದುನನ ಮುಖ ಹೊಟ್ಟೆ ಉರಿಯಿಂದ ಟೊಮ್ಯಾಟೋ ಹಣ್ಣಿನ ಕಲರ್ಗೆ ಬಂದ್ಬಿಟ್ಟಿದೇ" ರಜನಿ ಉತ್ಸಾಹದಿಂದ ಇವತ್ತಿನ ಕಥೆಯನ್ನ ಹೇಳುತ್ತಿದ್ದರೆ, ಸಮನ್ವಿ ಅದನ್ನ ಆಸಕ್ತಿಯಿಂದ ಕೇಳುತ್ತಿದ್ದಳು.
"ಓಹೋ...ಇಷ್ಟೆಲ್ಲ ಆಯ್ತಾ? ಅದಕ್ಕೆ ಸಾಹೇಬರು ಸೈಲೆಂಟ್ ಮೋಡಲ್ಲಿ ಇದ್ದಾರೆ ಇವತ್ತು. ಸರಿಯಾಗಿ ಮಾಡಿದೆ ಅವನಿಗೆ. ಅದು ಸರಿ ನೀನು ಅಷ್ಟೆಲ್ಲ ಹೊಗಳಿಕೆ ಹಾಕಿದ್ಯಲ್ಲ...ಆ ಹೊಸ ಲೆಕ್ಚರರ್...ಯಾರಪ್ಪಾ ಅದು?" ಕುತೂಹಲದಿಂದ ಪ್ರಶ್ನಿಸಿದ್ದಳು ಸಮನ್ವಿ.
"ಓಹ್ಹ್... ನಿಮಗೆ ನಾನಿನ್ನೂ ಅವನ ಹೆಸರೇ ಹೇಳಿಲ್ಲ ಅಲ್ವಾ!! ಅವನ ಹೆಸರು ಮಾನವ್ ಅಂತ...ಮಿಸ್ಟರ್ ಮಾನವ್ ರಾವ್. ನಮ್ ಡಿಪಾರ್ಟ್ಮೆಂಟಿಗೇ ಹೊಸ ಲೆಕ್ಚರರ್ ಆಗಿ ಸೇರಿದ್ದಾನೆ. ಎಷ್ಟು ಚಂದ ಇದ್ದಾನೆ ಅಂತೀರಾ ಅಕ್ಕ! ನೋಡೋಕೆ ಸ್ವಲ್ಪ ಅನಿ ಥರಾನೇ ಇದ್ದಾನೆ...ಆದ್ರೆ ವ್ಯತ್ಯಾಸ ಏನು ಅಂದ್ರೆ ಮಾನವ್ ನೋಡೋಕೆ ಚೆನ್ನಾಗಿದ್ದಾನೆ ಅಷ್ಟೇ" ಅಂತ ಹೇಳಿ ನಾಲಿಗೆ ಕಚ್ಚಿಕೊಂಡಿದ್ದಳು ರಜನಿ.
"ಅಂದ್ರೆ...ನನ್ ಮೈದುನ ಚೆನ್ನಾಗಿಲ್ಲ ಅಂತ ನೀನು ಇಂಡೈರೆಕ್ಟಾಗಿ ಹೇಳ್ತಾ ಇದ್ದಿಯ ಅಲ್ವಾ? ನೋಡು ರಜನಿ...ಅನಿ ವಿಷಯದಲ್ಲಿ ನಾನು ಯಾವತ್ತೂ ನಿಂಗೆ ಸಪೋರ್ಟ್ ಮಾಡಲ್ಲ ಗೊತ್ತಲ್ಲ? ಅವನು ನನ್ ಮೈದುನ...ಸೋ ನನ್ನ ಸಪೋರ್ಟ್ ಎನಿದ್ರೂ ಅವನಿಗೆ ಯಾವಾಗ್ಲೂ... ಇರ್ಲಿ ಇರ್ಲಿ...ಈಗ ಅನಿ ಹತ್ರ ನಾನು ಹೋಗಿ ಇದನ್ನೆಲ್ಲ ಹೇಳ್ತೀನಿ ತಡಿ. ಅವಾಗ ಅವನೇ ನಿನ್ನ ವಿಚಾರಿಸಿಕೊಳ್ತಾನೆ" ಅಂತ ನಗುವನ್ನು ತಡೆಯುತ್ತ ಗಂಭೀರವಾಗಿ ಹೇಳಿದ್ದಳು ಸಮನ್ವಿ.
"ಅಯ್ಯೋ ಅಕ್ಕ...ಅದೊಂದು ಕೆಲ್ಸ ಮಾಡಬೇಡಿ ಪ್ಲೀಸ್...ಇವತ್ತು ಅವ್ನಿಗೆ ಸಮಾಧಾನ ಮಾಡಬೇಕಾದ್ರೆ ಸಾಕಾಯ್ತು. ನಂಗೆ ಐಸ್ ಕ್ರೀಮ್ ಕೊಡುಸ್ತೀನಿ ಬಾ ಕರ್ಕೊಂಡು ಹೋಗಿದ್ದ. ಆದ್ರೆ ನಿಜವಾಗ್ಲೂ ಅದರ ಅವಶ್ಯಕತೆ ಅವನಿಗೆ ಜಾಸ್ತಿ ಇತ್ತು. ಅದಕ್ಕೆ ನಾನೇ ಅವನಿಗೆ ಕೊಡ್ಸಿ ತಣ್ಣಗೆ ಮಾಡಿ ಕರ್ಕೊಂಡು ಬಂದೆ. ಇಲ್ಲಾಂದಿದ್ರೆ ಇವತ್ತು ಅವನ ಸ್ಟುಡೆಂಟ್ಸ್ ಕಥೆ ಅಷ್ಟೇ ಆಗಿತ್ತು"
"ಇನ್ನು ನಿಮ್ಮಿಬ್ಬರ ಬಗ್ಗೆ ಗೊತ್ತಿಲ್ವಾ ನಂಗೆ...ನೀವು ಯಾವತ್ತು ಅವನಿಗೆ ವಿರೋಧವಾಗಿ ಮಾತನಾಡ್ತಿರ ಹೇಳಿ...ಆದ್ರೆ ನಿಜ ಹೇಳಿ ನಿಮಗೆ ಆ ನಾರ್ಮಲ್ ಆಗಿರೋ ಕಾಡುಪಾಪ ಅನಿಗಿಂತ ಇವತ್ತಿನ ಈ ಜೆಲಸ್ ಅನಿನೇ ಜಾಸ್ತಿ ಚಂದ ಅನ್ನಿಸ್ತಿಲ್ವಾ? ನಿಜ ಹೇಳ್ಬೇಕು..." ಅಂತ ಪ್ರಶ್ನಿಸಿದ್ದಳು ರಜನಿ.
ಅವಳ ಮಾತುಗಳನ್ನು ಕೇಳಿ ಸಮಾನ್ವಿಗೆ ಜೋರಾಗಿ ನಗು ಬಂದಿತ್ತು.
"ಹ್ಮ್ ಹೌದು...ಇವತ್ತಿನ ಅನಿನೆ ಜಾಸ್ತಿ ಚಂದ ಕಾಣ್ತಿದಾನೆ"ಅಂತ ನಗುತ್ತಾ ಸತ್ಯವನ್ನು ಒಪ್ಪಿಕೊಂಡಿದ್ದಳು.
"ಅಲ್ವಾ ನಾನು ಹೇಳ್ದೆ ತಾನೇ...ಈ ರಜನಿ ಹಾಗೆಲ್ಲ ಸುಳ್ಳು ಹೇಳೋಲ್ಲಪ್ಪ...ಸರಿ ಸರಿ ನಮ್ಮಮ್ಮ ಕುಗ್ತಾ ಇದ್ದಾರೆ ನಾನು ಇನ್ನೊಂದ್ಸಲ ಫೋನ್ ಮಾಡ್ತೀನಿ ನಿಮ್ಗೆ...ಬಾಯ್ ಅಕ್ಕ" ಅಂತ ಫೋನಿಟ್ಟು ಓಡಿದ್ದಳು ರಜನಿ.
ಈ ಕಡೆ ಅವಳ ಜೊತೆ ಮಾತನಾಡಿ ಅದರ ಬಗ್ಗೆನೇ ನೆನೆಸಿಕೊಂಡು ನಗುತ್ತಿದ್ದ ಸಮನ್ವಿಯ ಹತ್ತಿರ ಅನಿಕೇತ್ ಮತ್ತು ಸಾಕೇತ್ ಇಬ್ಬರೂ ಬಂದಿದ್ದರು.
"ಏನು ಮೇಡಂ ತುಂಬಾ ನಗ್ತಾ ಇದ್ದಿರಲ್ಲ...ಏನು ವಿಷಯ" ಅಂತ ಸಾಕೇತ್ ಪ್ರಶ್ನಿಸಿದ್ದರೆ, ಅನಿ ಅಣ್ಣ ಅತ್ತಿಗೆಯನ್ನು ರೇಗಿಸಲು ಶುರುಮಾಡಿದ್ದ.
"ಇನ್ನೇನಿರುತ್ತೆ ಅಣ್ಣಾ... ಅತ್ತಿಗೆ ಡಾಕ್ಟರ್ ಅಲ್ವಾ? ಇವತ್ತು ಯಾವುದಾದ್ರು ಪೇಶಿಯಂಟ್ ಬಂದು ಇವರಿಗೆ ಪ್ರೊಪೋಸ್ ಮಾಡಿರಬಹುದು...ಅದರ ಬಗ್ಗೆನೇ ಯೋಚನೆ ಮಾಡ್ತಾ ನಗ್ತಾ ಇರ್ತಾರೆ ಅಲ್ವಾ ಅತ್ತಿಗೆ?" ಅಂತ ಕಣ್ಣೊಡೆದು ಪ್ರಶ್ನಿಸಿದ್ದನು ಅನಿಕೇತ್.
"ನಾನು ಯೋಚ್ನೆ ಮಾಡ್ತಾ ಇದ್ದದ್ದು ನನ್ನ ಲವರ್ ಬಗ್ಗೆ ಅಲ್ವೋ ಅನಿ...ನಿನ್ ಲವರ್ ಬಗ್ಗೆ" ಎಂದು ಹೇಳಿದ್ದಳು.
"ಏನು ನನ್ ಲವರ್ ಆ? ಅಂದ್ರೆ ರಜನಿ ಬಗ್ಗೆನಾ?"
"ಇನ್ಯಾವ ಲವರ್ ಇದ್ದಾಳೆ ನಿನಗೆ? ಅವಳ ಬಗ್ಗೆನೆ ನಾನು ಯೋಚ್ನೆ ಮಾಡ್ತಾ ಇದ್ದಿದ್ದು...ಈಗಷ್ಟೇ ಫೋನ್ ಮಾಡಿ ಇವತ್ತು ಕಾಲೇಜಲ್ಲಿ ನಡೆದ ಎಲ್ಲ ವಿಷಯನೂ ಹೇಳಿದ್ಲು...ತಾವೇನೋ ಭಾರಿ ಉರ್ಕೊಂಡ್ರಂತೆ!?
ಅದೂ ಮಾನವ್ ಬಗ್ಗೆ!!"
"ಒಹ್ಹ್ ಎಲ್ಲ ಹೇಳಿ ಆಯ್ತಾ ನಿಂಹತ್ರ? ಸ್ಟುಪಿಡ್...ಒಂದು ವಿಷಯನೂ ಹೊಟ್ಟೇಲಿ ಇರೋಲ್ಲ ಅವಳಿಗೆ...ಅವ್ಳಿಗೆ ಗೊತ್ತಿಲ್ಲ ಪಾಪ...ನಾನು ನಿಜವಾಗ್ಲೂ ಹೊಟ್ಟೆ ಉರಿಕೊಂಡೇ ಅಂತ ಅಂದ್ಕೊಂಡಿದ್ದಾಳೆ...ಅವಳು ಬೇರೆ ಯಾರದ್ದಾದ್ರು ಬಗ್ಗೆ ಹೇಳಿದ್ರೆ ಜೆಲಸ್ ಫೀಲ್ ಆಗ್ತಿತ್ತೇನೋ...ಆದ್ರೆ ಅಲ್ಲಿರೋದು ಮಾನವ್! ಅವನ ಬಗ್ಗೆ ಹೇಳಿದ್ರೆ ನನಗೇನೂ ಡಿಫರೇನ್ಸ್ ಆಗೋಲ್ಲ" ಅಂತ ಕೂಲಾಗಿ ಹೇಳಿದ್ದ ಅನಿ.
"ಅಂದ್ರೆ ನೀನು ಅವಳ ಎದುರಿಗೆ ಆ ರೀತಿ ಮಾಡಿದ್ದೆಲ್ಲ ನಾಟಕನಾ?" ಆಶ್ಚರ್ಯದಿಂದ ಕೇಳಿದ್ದ ಸಾಕೇತ್.
"ಹ್ಮ್ ಅಣ್ಣಾ... ಅವಳು ನನಗೆ ಉರಿಸೋಕೆ ಅಷ್ಟೆಲ್ಲ ಕಷ್ಟ ಪಡಬೇಕಾದ್ರೆ ನಾನು ಯಾಕೆ ಬೇಜಾರು ಮಾಡ್ಲಿ ಅಂತ ಸ್ವಲ್ಪ ಆಕ್ಟ್ ಮಾಡಿದೆ ಅಷ್ಟೇ...ಅಷ್ಟಕ್ಕೂ ನೀನೇ ಹೇಳಣ್ಣ... ಮಾನವ್ ಮೇಲೆ ನಂಗ್ಯಾಕೆ ಜೆಲಸ್ ಆಗುತ್ತೆ" "ನೀನು ಹೇಳಿದ್ದು ನಿಜ ಅನಿ...ಆದ್ರೆ ಈ ವಿಷ್ಯ ಎಲ್ಲ ರಜನಿಗೆ ಗೊತ್ತಿಲ್ವಲ್ಲ...ಮಾನವ್ ನನಗೆ, ನಿನಗೆ ಎಲ್ಲ ಏನ್ ಸಂಬಂಧ ಅಂತ!! ಪಾಪ ಅದು ಗೊತ್ತಾದಾಗ ಅವಳ ರಿಯಾಕ್ಷನ್ ಏನಿರುತ್ತೋ ಏನೋ?" ಅಂತ ಹೇಳಿದ್ದಳು ಸಮನ್ವಿ. "ಇನ್ನೇನಿರುತ್ತೆ ಅತ್ತಿಗೆ...ಸಿಟ್ಟಲ್ಲಿ ನನ್ನ ಹಾಕಿ ರುಬ್ಬುತ್ತಾಳೆ ಅಷ್ಟೇ...ಮೊದ್ಲೇ ಯಾಕೆ ಹೇಳಿಲ್ಲ ಅಂತ! ಆದ್ರೆ ಅದಕ್ಕೋಸ್ಕರ ನಾವು ನಮ್ಮ ಪ್ಲ್ಯಾನ್ ಹಾಳು ಮಾಡ್ಕೊಳೋಕೆ ಆಗುತ್ತಾ ಹೇಳಿ...ಇದು ನಮ್ ಪ್ಲ್ಯಾನ್ ಅನ್ನೋದಕ್ಕಿಂತ ಮಾನವ್ ಪ್ಲ್ಯಾನ್ ಅನ್ನೋದೇ ಹೆಚ್ಚು ಸೂಕ್ತ. ಅವನ ಕೆಲಸ ಅಲ್ಲಿ ಮುಗಯೋ ತನಕ ನನ್ನ ಮತ್ತು ಮಾನವ್ ಸಂಬಂಧ ಯಾರಿಗೂ ಗೊತ್ತಾಗಬಾರದು. ಹಾಗೆ ಅವನು ಯಾರು ಅಂತಾನೂ ಗೊತ್ತಾಗೋದು ಒಳ್ಳೇದಲ್ಲ" "ಅದೂ ನಿಜ...ಹೌದು...ಮಾನವ್ ಕೆಲಸ ಸ್ಟಾರ್ಟ್ ಆಯ್ತಾ ಅಲ್ಲಿ...ಏನಾದ್ರು ಗೊತ್ತಾಯ್ತಾ?" ಕುತೂಹಲದಿಂದ ಕೇಳಿದ್ದನು ಸಾಕೇತ್. "ಇಲ್ಲ ಅಣ್ಣಾ... ಇವತ್ತಷ್ಟೇ ಜಾಯಿನ್ ಆಗಿರೋದಲ್ವಾ...ಈಗ್ಲೇ ಅವನು ಕೆಲಸ ಸ್ಟಾರ್ಟ್ ಮಾಡೋಕೆ ಆಗೋಲ್ಲ. ಮೊದ್ಲು ಅಲ್ಲಿ ಇರುವವರ ನಂಬಿಕೆ ಗಳಿಸಬೇಕು. ಸರಿಯಾಗಿ ಕಾಲೇಜಿನ ಎಲ್ಲಾ ಜಾಗನೂ ಗಮನಿಸಬೇಕು...ಆಮೇಲೆ ಸ್ಟಾರ್ಟ್ ಮಾಡೋಕೆ ಸಾಧ್ಯ" "ನೀನು ಹೇಳೋದು ಸರಿ ಅನಿ...ಆದಷ್ಟು ಬೇಗ ಅವನ ಕೆಲಸ ಅಲ್ಲಿ ಮುಗಿದ್ರೆ ಸಾಕು" ಅಂತ ಆತಂಕದಿಂದ ಹೇಳಿದ್ದಳು ಸಮನ್ವಿ. ಅದಕ್ಕೆ ಸಾಕೇತ್ ಅವಳ ಭುಜ ಒತ್ತಿ ಧೈರ್ಯ ಹೇಳಿದ್ದ.
ಹೀಗೆ ದಿನಗಳು ಉರುಳುತ್ತಿತ್ತು. ಮಾನವ್ ಕಾಲೇಜಿನಲ್ಲಿ ಎಲ್ಲರ ಸ್ನೇಹ ಸಂಪಾದಿಸುತ್ತಿದ್ದ. ಅದರ ಜೊತೆಗೆ ಮಹಿಮಾ ಬಗ್ಗೆ ಕೂಡಾ ತಿಳಿಯಲು ಪ್ರಯತ್ನ ನಡೆಯುತ್ತಿತ್ತು. ಆದರೆ ಏನೂ ತಿಳಿದಿರಲಿಲ್ಲ. ಅವಳು ಇವನಿಗೆ ಮಾತಿಗೇ ಸಿಗುತ್ತಿರಲಿಲ್ಲ. ಪ್ರತಿದಿನ ಸರಿಯಾಗಿ ಕ್ಲಾಸ್ ಶುರುವಾಗೋ ಸಮಯಕ್ಕೆ ಬಂದರೆ ಸಂಜೆ ಎಲ್ಲರ ಕ್ಲಾಸ್ ಬಿಟ್ಟು ಸ್ವಲ್ಪ ಸಮಯದ ಬಳಿಕ ಇವಳದು ಬಿಡುತ್ತಿತ್ತು. ಅದರ ನಂತರ ಅಲ್ಲಿ ಒಂದು ನಿಮಿಷವೂ ನಿಲ್ಲುತ್ತಿರಲಿಲ್ಲ. ಹಾಗೆ ಒಂದು ವೇಳೆ ಮಧ್ಯದಲ್ಲೆಲ್ಲಾದರೂ ಅವಳು ಫ್ರೀ ಇದ್ದರೂ ಕೂಡ ಅವಳು ರಜನಿಯ ಜೊತೆಯಿರುತ್ತಿದ್ದಳು. ಇನ್ನು ಸಂಜೆ ಅವಳನ್ನ ಫಾಲೋ ಆದರೂ ಮಾಡೋಣವೆಂದರೆ ಆಗಲೂ ಅವಳ ಜೊತೆಗಾರ್ತಿ ರಜನಿಯೇ! ಅವಳಿದ್ದಾಗಲಂತೂ ಮಾನವ್ ಆ ಕಡೆ ತಲೆನೆ ಹಾಕುತ್ತಿರಲಿಲ್ಲ. ಅವನಿಗೆ ಅನಿಯಿಂದಾಗಿ ರಜನಿಯ ಬಗ್ಗೇ ಎಲ್ಲಾ ವಿಷಯವೂ ಗೊತ್ತಿತ್ತು. ಹಾಗಾಗಿ ಅವನು ಅವಳ ಮನಸ್ಸಿನಲ್ಲಿ ಯಾವುದೇ ಕಾರಣಕ್ಕೂ ಅನುಮಾನಕ್ಕೀಡಾಗಲಾರ.
"ಈ ರಜನಿಯಿಂದಾಗಿ ನನಗೆ ನನ್ನ 'ಏಂಜಲ್' ಜೊತೆ ಒಂದು ಸಲವೂ ಮಾತಾಡೋಕ್ಕೆ ಆಗ್ತಾ ಇಲ್ವಲ್ಲಪ್ಪ. ಅವತ್ತು ಮೀಟಿಂಗ್ ಹಾಲಲ್ಲಿ ಅವಳ ಜೊತೆ ಮಾತಾಡಿದ್ದೆ ಫರ್ಸ್ಟ್ ಅಂಡ್ ಲಾಸ್ಟ್ ಆಗ್ಬಿಟ್ಟಿದೆ. ಅವತ್ತಿನಿಂದ ಇಲ್ಲಿತನಕ ಒಂದು ದಿನನೂ ಅವಳ ಜೊತೆ ಮಾತಾಡೋದು ಹೋಗ್ಲಿ ಅವಳನ್ನ ಸರಿಯಾಗಿ ನೋಡೋಕೂ ಕೂಡ ಅಗಲಿಲ್ಲ. ದೇವ್ರೇ ನೀನೇ ಏನಾದ್ರು ಮಾಡಿ ನನ್ನ ಏಂಜಲ್ ಜೊತೆ ಒಂದು ಮೀಟಿಂಗ್ ಫಿಕ್ಸ್ ಮಾಡಿ ಕೊಡು ಪ್ಲೀಸ್" ಅಂತ ತುಂಬಾ ದಿನದಿಂದ ಕ್ಲಾಸ್ ಮುಗಿಸಿ ಮನೆ ಕಡೆ ಹೊರಡಬೇಕಾದರೆ ದೇವರಲ್ಲಿ ಕೇಳಿಕೊಳ್ಳುತ್ತಿದ್ದ.
ಆದ್ರೆ ದೇವರು ಇನ್ನು ಇವನ ಕಡೆ ದೃಷ್ಟಿ ಹಾಯಿಸಿರಲಿಲ್ಲ ಅನ್ಸುತ್ತೆ. ಪಾಪ ಅವನಿಗೆ ಇನ್ನೂ ಅವನ ಏಂಜಲ್ ಮೀಟಿಂಗ್ ಭಾಗ್ಯವನ್ನು ಕರುಣಿಸಿರಲಿಲ್ಲ.
ಆದ್ರೆ ಅವನು ದೇವರಿಗೆ ದಿನಾ ಬೇಡಿಕೊಳ್ಳುವುದನ್ನು ಮಾತ್ರ ತಪ್ಪದೆ ಮಾಡುತ್ತಿದ್ದ....ಪೂರ್ ಮಾನವ್.
ಸಶೇಷ