ಚಿನ್ಮಯಿ .

Drama

2  

ಚಿನ್ಮಯಿ .

Drama

6- ಹೆಜ್ಜೆಗೊಂದು ಹೆಜ್ಜೆ

6- ಹೆಜ್ಜೆಗೊಂದು ಹೆಜ್ಜೆ

5 mins
304


ಆಗಿನ್ನೂ ಬೆಳಿಗ್ಗೆ ಆರು ಗಂಟೆ. ಹೊರಗಡೆ ಜೋರಾದ ಜಡಿಮಳೆ ಜೊತೆಗೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ ಮೋಡ ಮುಸುಕಿದ ವಾತವರಣವಿದ್ದುದರಿಂದ ಆರು ಗಂಟೆಗೆ ಇನ್ನೂ ಐದು ಗಂಟೆಯೇನೋ ಅನ್ನುವಷ್ಟು ಕತ್ತಲಾಗಿತ್ತು.

ರಜನಿಯ ರೂಮಿನಲ್ಲಿಯ ಅಲಾರಾಂ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಆದರೆ ಅವಳು ಮಾತ್ರ ಲೋಕದ ಪರಿವೆಯಿಲ್ಲದಂತೆ ನಿದ್ರಿಸುತ್ತಿದ್ದಳು.


ಸುಮಾರು ನಾಲ್ಕು ಸಲ ಹೀಗೆ ಮುಂದುವರೆದಾಗ ನಿಧಾನಕ್ಕೆ ಎಚ್ಚರವಾಗತೊಡಗಿತ್ತು ಹುಡುಗಿಗೆ. ಎದ್ದಾಗ ಮೊದಲು ಕಣ್ಣಿಗೆ ಬಿದ್ದಿದ್ದೇ ಅಲ್ಲೇ ಕಿಟಕಿಯಿಂದ ಹೊರಗೆ ಕಾಣುತ್ತಿರುವ ಮಬ್ಬುಕತ್ತಲು. ತಕ್ಷಣಕ್ಕೆ ಅವಳಿಗೆ ನಿನ್ನೆಯ ತನ್ನ ಹೊಸ ನಿರ್ಧಾರವೆಲ್ಲ ನೆನಪಾಗಿದ್ದವು. 'ಅರೆ! ನಾನು ಅಲಾರಾಂ ಇಟ್ಟಿದ್ದು ಆರು ಗಂಟೆಗಲ್ವಾ? ಇಷ್ಟು ಬೇಗ ಯಾಕೆ ಹೋಡ್ಕೊತ ಇದೆ ಇದು' ಅಂತ ಗಡಿಯಾರವನ್ನು ತೆಗೆದು ನೋಡಿದ್ದಳು. ಅದು ನೋಡಿದರೆ 6:15 ಅಂತ ತೋರಿಸುತ್ತಿದೆ!! ರಜನಿ ತಲೆಕೆರೆದುಕೊಳ್ಳತೊಡಗಿದಳು. 'ಮಳೆಗಾಲ ಅಲ್ವಾ ಅದಕ್ಕೇ ಇನ್ನೂ ಬೆಳಗಾಗಿಲ್ಲ ಅನ್ಸುತ್ತೆ' ಅಂತ ಏಳೋಕೆ ಹೋದ್ರೆ ಏಳೋಕೆ ಮನಸ್ಸಿಲ್ಲ...ಇಷ್ಟು ವರ್ಷಗಳಲ್ಲಿ ಇಷ್ಟು ಬೇಗ ಎಂದಾದರೂ ಎದ್ದಿದ್ದರೆ ತಾನೇ? ಕೊರೆಯುವ ಚಳಿ ಬೇರೆ...ಮತ್ತೆ ಹೊದ್ದು ಐದು ನಿಮಿಷ ಬಿಟ್ಟು ಏಳುವ ಎಂದು ಮಲಗಿದಳು. ಆದರೆ ಮತ್ತೆ ಎದ್ದು 'ಇಲ್ಲ ನಾನು ಬದಲಾಗಬೇಕು' ಎಂದು ಹೇಳಿಕೊಂಡು ಸ್ನಾನಕ್ಕೆ ಓಡಿದ್ದಳು.


ಸ್ನಾನ ಮುಗಿಸಿ ಬಂದಾಗ ಶ್ರೀದೇವಿಯವರು ಹೊರಗಡೆ ಅಂಗಳದಲ್ಲಿ ರಂಗೋಲಿ ಹಾಕಲು ಹೊರಟಿದ್ದರು. ಅವರ ಮನೆಯ ಎದುರಿಗೆ ಕೂಡ ಮುಚ್ಚಿಗೆ ಮಾಡಿದ್ದರಿಂದ ಅವರ ಅಂಗಳದ ಅರ್ಧದಷ್ಟು ಮುಚ್ಚಿ ಹೋಗುತ್ತಿತ್ತು. ಹಾಗಾಗಿ ಮಳೆಗಾಲದಲ್ಲಿ ಕೂಡ ರಂಗೋಲಿ ಹಾಕುವುದರಿಂದ ಏನೂ ತೊಂದರೆಯಿರಲಿಲ್ಲ. ನೀರು ಕೂಡ ಒಳಗೆ ನುಗ್ಗುತ್ತಿರಲಿಲ್ಲ.

ಅಮ್ಮನನ್ನು ನೋಡಿ ರಜನಿಗೆ ತನ್ನಮ್ಮ ಇಷ್ಟೆಲ್ಲ ಬೇಗ ಏಳುತ್ತರಾ? ಅಂತ ಆಶ್ಚರ್ಯವಾಗಿತ್ತು. ಅವರ ಹತ್ತಿರ ಬಂದು ನಿಂತಾಗ ಶ್ರೀದೇವಿಯವರಿಗೆ ಮಗಳನ್ನು ನೋಡಿ ದಂಗುಬಡಿದುಬಿಟ್ಟಿದ್ದರು. ನಿನ್ನೆ ಅವಳು ಅಲಾರಾಂ ಇಟ್ಟಿದ್ದು ನೋಡಿ ಆಫ್ ಮಾಡಿ ಹಾಗೆ ಮಲಾಗುತ್ತಾಳೆಂದೇ ತಿಳಿದಿದ್ದರು. ಈಗ ನೋಡಿದರೆ ಈಕೆ ನಿಜವಾಗಿಯೂ ಎದ್ದುಬಿಟ್ಟಿದ್ದಾಳೆ!! ಅನಿ ಹೇಳಿದ ಅದೊಂದು ಮಾತು ಎಷ್ಟು ಬಡಲಾಯಿಸಿದೆ ಈಕೆಯಲ್ಲಿ!!


"ಅಮ್ಮ ನಂಗೆ ರಂಗೋಲಿ ಹಾಕೋಕೆ ಹೇಳಿ ಕೊಡ್ತೀಯ? ಪ್ಲೀಸ್" ಅಂತ ಅವಳು ತನ್ನಮ್ಮನ ಎದುರಿಗೆ ನಿಂತು ಮುದ್ದುಮುದ್ದಾಗಿ ಕೇಳುತ್ತಿದ್ದರೆ ಶ್ರೀದೇವಿಯವರಿಗೆ ಹಾರ್ಟ್ ಅಟ್ಯಾಕ್ ಅಗೋದೊಂದೆ ಬಾಕಿ.

ಒಂದೇ ದಿನಕ್ಕೆ ಇಷ್ಟೆಲ್ಲ ಯಾರಾದ್ರೂ ಬದ್ಲಾದ್ರೆ ಹೇಗೆ ತಡ್ಕೊಳೋಕ್ಕೆ ಸಾಧ್ಯ? ಅದ್ರಲ್ಲೂ ರಜನಿಯಂತಹ ಸೋಮಾರಿ ಸುಬ್ಬಿ ಹೀಗೆ ಕೇಳ್ತಿದ್ದಾಳೆ ಅಂದ್ರೆ ಅವರಿಗೆ ಹೇಗಾಗಬೇಡ! "ಅಮ್ಮ...ಹೇಳಮ್ಮ..ಪ್ಲೀಸ್...ನಂಗೆ ಕಲಿಸ್ತೀಯ? ಅಂತ ತನ್ನನ್ನೇ ಪಿಳಿ ಪಿಳಿ ಕಣ್ಣಿನಿಂದ ನೋಡುತ್ತಿದ್ದ ತನ್ನಮ್ಮನಿಗೆ ಮತ್ತೊಮ್ಮೆ ಕೇಳಿದ್ದಳು ರಜನಿ. ಅವರಮ್ಮ ಒಂದೇ ಒಂದು ಮಾತನಾಡದೆ ಸುಮ್ಮನೆ ತಲೆಯಾಡಿಸಿದರಷ್ಟೇ. ನಂತರ ಅವಳನ್ನ ದೇವರ ಮುಂದೆ ಕರೆದುಕೊಂಡು ಹೋಗಿ ಮೊದಲು ಅಲ್ಲೆಲ್ಲ ಕ್ಲೀನ್ ಮಾಡಿಸಿದ್ದರು.


ದೇವರ ಮುಂದೆ ರಂಗೋಲಿಯನ್ನ ಸ್ವತಃ ಶ್ರೀದೇವಿಯವರೆ ಹಾಕಿದ್ದರೂ ಕೂಡ ಅದನ್ನ ರಜನಿ ಆಸ್ಥೆಯಿಂದ ನೋಡಿಕೊಂಡಿದ್ದಳು. ಶ್ರೀದೇವಿಗಂತೂ ಆಗುತ್ತಿರುವ ಖುಷಿಗೆ ಪಾರವೆ ಇರಲಿಲ್ಲ. ಸದಾ ಗಂಡು ಭೀರಿಯಂತೆ ಆಡುತ್ತಿದ್ದ ಮಗಳನ್ನು ತಾವು ಒಂದು ದಿನ ಈ ರೀತಿಯಾಗಿ ಕೂಡ ನೀಡುತ್ತೇನೆಂದು ಬಹುಶಃ ಅವರು ಕನಸಿನಲ್ಲಿಯೂ ಏಣಿಸಿರಲಿಕ್ಕಿಲ್ಲ. ನಂತರ ತಾವೇ ಮಗಳನ್ನ ರೆಡಿಯಾಗಲು ಕಳುಹಿಸಿದ್ದರು, ಅವಳು ಬೇರೆ ಏನಾದರೂ ಕೆಲ್ಸ ಹೇಳು ಮಾಡುತ್ತೇನೆಂದು ಎಷ್ಟು ಕೋರಿಕೊಂಡರೂ ಬಿಡದೆ. ಪಾಪ...ಅವರದು ಮೊದಲೇ ವಯಸ್ಸಾದ ಜೀವ...ಒಂದೇ ದಿನಕ್ಕೆ ಎಷ್ಟು ಅಂತ ಶಾಕನ್ನು ಸಹಿಸಿಕೊಳ್ಳಬಲ್ಲರು!? ಅಂದು ಶ್ರೀದೇವಿಯವರು ಖುಷಿಯಿಂದಲೇ ತಮ್ಮ ಮಗಳಿಗೆ ತಿಂಡಿ ಹಾಕಿಕೊಟ್ಟು, ಅವಳು ತಿಂದಾದ ನಂತರ ತಾವೇ ಸ್ವತಃ ಅವಳನ್ನು ಕಳುಹಿಸಲು ಗೇಟಿನವರೆಗೂ ಬಂದಿದ್ದರು. ಇದನ್ನೆಲ್ಲ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಾ ಕುಳಿತಿದ್ದ ಅಪ್ಪ ಮಗನಿಗಂತೂ ತಲೆ ಬುಡ ಗೊತ್ತಾಗುತ್ತಾ ಇರಲಿಲ್ಲ. ಆಗ ತಾನೇ ಒಳಗೆ ಬಂದ ಶ್ರೀದೇವಿಯವರು ಮಗ ಮತ್ತು ಗಂಡನ ಮುಖದಲ್ಲಿದ್ದ ಪ್ರಶ್ನೆಯನ್ನು ಗಮನಿಸಿ ನಿನ್ನೆಯಿಂದ ನಡೆದ ಎಲ್ಲವನ್ನೂ ವಿವರಿಸಿದಾಗ ಅವರಿಗೂ ಕೂಡ ರಜನಿಯನ್ನು ನೆನೆದು ನಗು ಬಂದಿತ್ತು. ಇದೆಲ್ಲದರ ಜೊತೆಗೆ ಅವರ ಮನೆಯಿಂದ ಎಲ್ಲ ವಿಷಯಗಳೂ ಚಾಚೂ ತಪ್ಪದೆ ಅನಿಗೂ ಕೂಡ ಮೆಸೇಜ್ ಮೂಲಕ ರವಾನೆಯಾಗಿತ್ತು.


ತನ್ನ ಸ್ಕೂಟಿಯನ್ನ ಅದರ ಸ್ವಸ್ಥಾನದಲ್ಲಿ ನಿಲ್ಲಿಸಿ ಕಾಲೇಜಿನ ಅವರಣದೊಳಕ್ಕೆ ಬರುತ್ತಿದ್ದ ಮಹಿಮಾಗೆ ಆಗ ತಾನೇ ಕಾಲೇಜಿಗೆ ಬರುತ್ತಿದ್ದ ರಜನಿಯನ್ನ ನೋಡಿ ಅವಳಿಗೇ ಅರಿವಿಲ್ಲದಂತೆ ಮುಖವರಳಿತ್ತು. ರಜನಿಯೂ ಕೂಡ ಮಹಿಮಾಳನ್ನ ನೋಡಿ ಖುಷಿಯಿಂದ ಓಡಿಬಂದು "ಗುಡ್ ಮಾರ್ನಿಂಗ್ ಮಹಿ" ಎಂದು ವಿಶ್ ಮಾಡಿದ್ದಳು.

ಅದಕ್ಕೆ ಪ್ರತಿಯಾಗಿ ಮಹಿಮಾ ಕೂಡ ಮೊದಲನೆ ಬಾರಿ ಅವಳಿಗೆ ವಿಶ್ ಮಾಡಿದ್ದಳು, ಅದೂ ಮಲ್ಲಿಗೆ ಹೂವಿನಂತಹ ಸುಂದರ ನಗುವಿನೊಂದಿಗೆ. ಇದನ್ನ ನೋಡಿ ರಜನಿಗೆ ಆದ ಖುಷಿ ಅಷ್ಟಿಷ್ಟಲ್ಲ. ಅದನ್ನು ಹತ್ತಿಕ್ಕಲಾರದೆ ಗಟ್ಟಿಯಾಗಿ ಮಹಿಯನ್ನ ಅಪ್ಪಿಕೊಂಡಿದ್ದಳು ರಜನಿ. ಮಹಿಮಾ ಕೂಡ ಖುಷಿಯಿಂದ ಅವಳನ್ನು ಅಪ್ಪಿದ್ದಳು.

ಮಹಿಮಾಗೆ ಈ ಎರಡು ದಿನಗಳಲ್ಲಿ ತನ್ನ ಜೀವನದಲ್ಲಿ ರಜನಿಯ ಸ್ಥಾನವೇನೂ ಅನ್ನುವುದು ಚೆನ್ನಾಗಿ ಅರ್ಥವಾಗಿತ್ತು. ಕೃತಿಯ ಜೊತೆ ಕಳೆದ ಎರಡು ದಿನಗಳಲ್ಲಿ ಪ್ರತಿ ಕ್ಷಣವೂ ಕೂಡ ಅವಳಲ್ಲಿ ರಜನಿಯನ್ನೇ ಅರಸುತ್ತಿದ್ದಳು ಮಹಿಮಾ. ಇದಕ್ಕೆ ಕೃತಿ ಮತ್ತು ರಜನಿಯಲ್ಲಿ ಬಹಳಷ್ಟು ಸಾಮ್ಯತೆಯಿರುವುದೂ ಕೂಡ ಒಂದು ಕಾರಣವಿರಬಹುದು. ಗಳಗಳನೆ ಉಸಿರು ಕಟ್ಟಿಕೊಂಡು ಮಾತನಾಡಿ ಮಾತನಾಡಿ ಅದ್ಯಾವಾಗ ಮಹಿಮಾಳ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಳೋ ಏನೋ ರಜನಿ.


ಮಹಿಮಾಳ ಜೀವನದಲ್ಲಿ ಒಂದು ಸುಂದರ ಸ್ನೇಹವು ಅಲ್ಲಿಂದ ಶುರುವಾಗಿತ್ತು.


ರಜನಿಯ ಜೊತೆ ಕೆಲ ಸಮಯದವರೆಗೆ ಮಾತನಾಡಿದ ಮಹಿಮಾ ಮನಸ್ಸಿಗೆ ಎಷ್ಟೋ ಸಮಾಧಾನವೆನ್ನಿಸಿತ್ತು. ಮಾತನಾಡಿದ್ದು ಲೋಕಾಭಿರಾಮವಾದರೂ ಕೂಡ ಮನಸ್ಸು ಉಲ್ಲಾಸವಾಗಿದ್ದಂತೂ ಸುಳ್ಳಲ್ಲ. ಅದನ್ನೇ ನೆನೆಯುತ್ತ ತನ್ನ ಡಿಪಾರ್ಟ್ಮೆಂಟಿಗೆ ಆಗಷ್ಟೇ ಬಂದು ಕುಳಿತಿದ್ದ ಮಹಿಮಾಗೆ ಅಟೆಂಡರ್ ಒಂದು ಮೆಮೋ ತಂದು ಕೈಯಲ್ಲಿ ಕೊಟ್ಟಿದ್ದ. ಅದರಲ್ಲಿ ಎಲ್ಲಾ ಟೀಚಿಂಗ್ ಮತ್ತು ನಾನ್ ಟೀಚಿಂಗ್ ಸ್ಟಾಫ್ಗಳನ್ನು ಸರಿಯಾಗಿ ಹತ್ತು ಗಂಟೆಗೆ ಮೀಟಿಂಗ್ ಹಾಲಿಗೆ ಬರಬೇಕಾಗಿ ಸೂಚಿಸಲಾಗಿತ್ತು. ಗಡಿಯಾರದ ಕಡೆಗೆ ನೋಡಿದಾಗ ಇನ್ನು ಐದು ನಿಮಿಷ ಮಾತ್ರಾ ಬಾಕಿಯಿದ್ದರಿಂದ ಮಹಿಮಾ ಲಗುಬಗೆಯಿಂದ ಹಾಲಿನ ಕಡೆಗೆ ಓಡಿದ್ದಳು.

ಅವಳು ಅಲ್ಲಿ ಬರುವ ವೇಳೆಗಾಗಲೇ ಅಲ್ಲಿ ಎಲ್ಲರೂ ಬಂದು ಕುಳಿತಾಗಿತ್ತು. ಮಹಿಮಾ ತನಗೆ ಕೂರಲು ಜಾಗವನ್ನು ಹುಡುಕಬೇಕಾದರೆ ರಜನಿ ಅವಳಿಗೆ ಕೈ ಮಾಡಿ ಕರೆದಿದ್ದಳು. ಅವಳ ಒಂದು ಪಕ್ಕಕ್ಕೆ ಅನಿಕೇತ್ ಕುಳಿತಿದ್ದರೆ ಇನ್ನೊಂದು ಪಕ್ಕಕ್ಕೆ ಮಹಿಮಗೆಂದು ಸೀಟನ್ನು ಕಾಯ್ದಿರಿಸಿದ್ದಳು ರಜನಿ. ಖುಷಿಯಿಂದ ಅವಳ ಪಕ್ಕ ಹೋಗಿ ಕುಳಿತಿದ್ದಳು ಮಹಿಮಾ.

ಜನ್ಮಿತಾಳ ಬಳಿ ಹರಟೆ ಹೊಡೆಯುತ್ತಿದ್ದ ಸಂಜಯ್ ಗೆ ತನ್ನ ಪಕ್ಕ ಯಾರೋ ಕೂತಂತಾಗಿ ಪಕ್ಕಕ್ಕೆ ತಿರುಗಿ ನೋಡಿದರೆ ಮಹಿಮಾ....ತನ್ನ ಕಣ್ಣನ್ನೇ ನಂಬಲಾಗಲಿಲ್ಲ ಅವನಿಗೆ. ಇಷ್ಟು ದಿನ ಯಾರ ಜೊತೆ ಒಂದು ವಾಕ್ಯವನ್ನೂ ಕೂಡ ಮಾತನಾಡಲಾಗದೆ ಆದರೆ ಮಾತನಾಡಬೇಕೆಂದು ಚಡಪಡಿಸುತ್ತಿದ್ದನೋ ಅವರೇ ತಾನಾಗಿ ಬಂದು ಇಂದು ತನ್ನ ಪಕ್ಕ ಕುಳಿತಿದ್ದರು.


ಸಂಜಯ್ ದೃಷ್ಟಿಯನ್ನು ಅರಸುತ್ತಾ ಆ ಕಡೆಯೇ ನೋಡಿದ ಜನ್ಮಿತಾಳ ಮೈ ಎಲ್ಲ ಉರಿದಂತಾಗಿತ್ತು, ತಾನು ಇಷ್ಟ ಪಡುವ ಹುಡುಗನ ಪಕ್ಕ ಮಹಿಮಾಳನ್ನು ನೋಡಿ!! ಅವಳಿಗೆ ಮಹಿಮಾಳ ಮೇಲೆ ಅಸಾಧ್ಯ ಸಿಟ್ಟಿರುವುದೇ ಈ ಕಾರಣಕ್ಕೆ. ಸಂಜಯ್ ಅವಳನ್ನ ಇಷ್ಟಪಡುತ್ತಿರುವನೆಂದು. ಆದರೆ ಇದರಲ್ಲಿ ಮಹಿಮಾಳದೇನೂ ತಪ್ಪಿರಲಿಲ್ಲ. ಅವಳಿಗೆ ಇವೆಲ್ಲ ವಿಷಯ ಗೊತ್ತಿದ್ದರೆ ತಾನೇ! ಸಂಜಯ್ ತನ್ನನ್ನ ಇಷ್ಟಪಡುತ್ತಿರುವ ವಿಷಯ ಕೂಡ ತಿಳಿಯದು. ಜೊತೆ ಜೊತೆಗೆ ಈ ಕಾರಣದಿಂದಾಗಿ ಜನ್ಮಿಗೆ ತನ್ನನ್ನ ಕಂಡರೆ ಕೋಪವೆಂಬ ವಿಷಯವೂ ತಿಳಿಯದು ಹುಡುಗಿಗೆ. ಅಷ್ಟಕ್ಕೂ ಅವಳಿಗೆ ಜನ್ಮಿತಾ ಮತ್ತು ಸಂಜಯ್ ಪರಿಚಯ ಕೂಡ ಸರಿಯಾಗಿರಲಿಲ್ಲ. ರಜನಿಯ ಬಾಯಿಂದ ಆಗಾಗ ಜನ್ಮಿತಾಳ ಹೆಸರನ್ನು ಕೇಳುತ್ತಿದ್ದರಿಂದ ಅವಳು ರಜನಿ ಫ್ರೆಂಡ್ ಎನ್ನುವ ವಿಷಯ ಗೊತ್ತಿತ್ತಷ್ಟೇ. ಇದನ್ನ ಬಿಟ್ಟರೆ ಅವಳ ಬಗ್ಗೆ ಮತ್ತೇನೂ ತಿಳಿಯದು.


ರಜನಿಯ ಬಳಿ ಮಾತನಾಡುತ್ತಿದ್ದ ಮಹಿಮಾಗೆ ಯಾರೋ ತನ್ನನ್ನು ಗಮನಿಸುತ್ತಿರುವಂತೆ ಅನ್ನಿಸಿ ಪಕ್ಕಕ್ಕೆ ಹೊರಳಿದರೆ ಸಂಜಯ್... ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಗಲಿಬಿಲಿಗೊಂಡಳು. ಅವಳಿಗೆ ಮುಜುಗರವಾಗುತ್ತಿತ್ತು. ಆದರೆ ಸಂಜಯನೋ ಇದ್ಯಾವುದರ ಪರಿವೆಯಿಲ್ಲದೆ ಅವಳನ್ನ ನೋಡುವುದರಲ್ಲೇ ತಲ್ಲೀನನಾಗಿಬಿಟ್ಟಿದ್ದ. ಅವನು ಇಷ್ಟು ದಿನಗಳಲ್ಲಿ ಅವಳನ್ನು ಕೇವಲ ದೂರದಿಂದ ನೋಡಿದ್ದನೇ ಹೊರತು ಹೀಗೆ ಇಷ್ಟು ಹತ್ತಿರದಲ್ಲಿ ನೋಡುತ್ತಿದ್ದದು ಇದೆ ಮೊದಲು. ಅವನ ಏಕಾಗ್ರತೆಗೆ ಧಕ್ಕೆ ತರುವಂತೆ ಅದೇ ಸಮಯಕ್ಕೆ ಅಲ್ಲಿಗೆ ಕಾಲೇಜಿನ ಪ್ರಾಂಶುಪಾಲರು ಬಂದು ಮಾತನ್ನ ಆರಂಭಿಸಿದ್ದರು. ಇದರಿಂದಾಗಿ ಮಹಿಮಾಗೂ ಸ್ವಲ್ಪ ನಿರಾಳವೆನಿಸಿತ್ತು. "ಗುಡ್ ಮಾರ್ನಿಂಗ್ ಆಲ್...ನಿಮಗೆಲ್ಲರಿಗೂ ಮೊದಲೇ ಗೊತ್ತಿರುವ ಹಾಗೆ ನಮ್ಮ ಕಾಲೇಜಿನಲ್ಲಿ ಯಾವುದೇ ಹೊಸ ಸ್ಟಾಫ್ ಸೇರ್ಪಡೆಯಾದರೂ ಕೂಡ ಅವರನ್ನ ಎಲ್ಲರಿಗೂ ಪರಿಚಯಿಸುವುದು ರೂಢಿ. ಅವರು ಟೀಚಿಂಗ್ ಸ್ಟಾಫ್ ಆಗಿದ್ದರೂ ಸರಿ, ನಾನ್ ಟೀಚಿಂಗ್ ಸ್ಟಾಫ್ ಆಗಿದ್ದರೂ ಸರಿ. ನಮ್ಮ ಕಾಲೇಜಿನ ಎಲ್ಲಾ ಸ್ಟಾಫ್ಗಳಿಗೂ ಒಬ್ಬರಿಗೊಬ್ಬರು ಪರಿಚಯವಿರಬೇಕೆಂಬುದು ನಮ್ಮ ಉದ್ದೇಶ. ಇದೆಲ್ಲ ನಿಮಗೆ ಗೊತ್ತಿರುವ ವಿಷಯವೇ... ಇನ್ನು ನಮ್ಮ ಕಾಲೇಜಿನ ಸೀನಿಯರ್ ಲೆಕ್ಚರರ್ ಆಗಿದ್ದ ಮಮತಾ ಮೇಡಂ ಅವರು ಕೆಲವು ದಿನಗಳ ಹಿಂದೆಯಷ್ಟೇ ಅವರ ಕೆಲವು ವಯಕ್ತಿಕ ಕಾರಣಗಳಿಂದ ಕೆಲಸವನ್ನು ಬಿಟ್ಟು ಹೋಗಿದ್ದಾರೆ. ಅವರ ಸ್ಥಾನಕ್ಕೆ ಒಬ್ಬ ಯೋಗ್ಯ ವ್ಯಕ್ತಿಯ ಹುಡುಕಾಟದಲ್ಲಿ ನಾವೆಲ್ಲರೂ ಕಳೆದ ಕೆಲವು ದಿನಗಳಿಂದ ಇದ್ದೆವು. ಆಗ ನಮಗೆ ಸಿಕ್ಕಿದ್ದೇ ಈ ವ್ಯಕ್ತಿ" ಎಂದು ತಮ್ಮ ಪಕ್ಕದಲ್ಲಿ ನಿಂತಿದ್ದ ಇನ್ನು 27-28 ವರ್ಷಗಳಾಗಿರಬಹುದಾದ ತರುಣನನ್ನು ತೋರಿಸಿದ್ದರು.

ಈಗ ಎಲ್ಲರ ಗಮನ ಆ ವ್ಯಕ್ತಿಯತ್ತ ತಿರುಗಿತ್ತು. ಇಷ್ಟೊತ್ತು ಪ್ರಿನ್ಸಿಪಾಲರ ಮಾತನ್ನ ಕೇಳುತ್ತಾ ಕುಳಿತಿದ್ದವರಿಗೆ ಅವರ ಪಕ್ಕ ಒಬ್ಬ ಹುಡುಗ ಬಂದು ನಿಂತಿದ್ದು ಕೂಡ ಗೊತ್ತಾಗಿರಲಿಲ್ಲ.


ಆ ವ್ಯಕ್ತಿಯನ್ನ ನೋಡಿದ ರಜನಿಗೆ ಮಾತೇ ಬಾರದಾಯಿತು. ಕಣ್ಣ ರೆಪ್ಪೆಯನ್ನ ಮುಚ್ಚದೆ ದೀರ್ಘವಾಗಿ ಅವನನ್ನೇ ನೋಡುತ್ತಿದ್ದ ರಜನಿಯನ್ನು ನೋಡಿದ ಅನಿಕೇತ್ ಗೆ ಉರಿದುಹೋಗಿತ್ತು. ಅಷ್ಟರಲ್ಲಿ ಪ್ರಿನ್ಸಿಪಾಲ್ ಮತ್ತೆ ಮಾತು ಶುರುಮಾಡಿದ್ದರಿಂದ ಸುಮ್ಮನಾಗಿದ್ದನು. "ಈತ ವಯಸ್ಸಿನಲ್ಲಿ ಇನ್ನು ಚಿಕ್ಕವನಾದರೂ ಕೂಡ ಇವನಲ್ಲಿರುವ ಮೇಧಾಶಕ್ತಿ ತುಂಬಾ ದೊಡ್ಡದು. ದೆಲ್ಲಿಯ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಎಂಬಿಎ ಗೋಲ್ಡ್ ಮೆಡಲಿಸ್ಟ್. ತಮ್ಮದೇ ಸ್ವಂತ ಕಂಪೆನಿಯಿದ್ದರೂ ಕೂಡ ಟೀಚಿಂಗ್ ಫೀಲ್ಡ್ ಅಲ್ಲಿ ಆಸಕ್ತಿಯಿದ್ದರಿಂದ ಇಲ್ಲಿಗೆ ಬಂದಿದ್ದಾರೆ. ಇವರನ್ನ ನಾವು ಇಂಟರ್ವ್ಯೂ ಮಾಡಿದಾಗ ಇವರು ಅವೆಲ್ಲದಕ್ಕೆ ಉತ್ತರಿಸಿದ ರೀತಿ, ಇವರ ಅಚೀವ್ಮೆಂಟ್ಸ್ ಇದೆಲ್ಲವನ್ನ ನೋಡಿ ಮಮತಾ ಮೇಡಂ ಅವರ ಸ್ಥಾನಕ್ಕೆ ಇವರೇ ಯೋಗ್ಯ ವ್ಯಕ್ತಿ ಅಂತ ಆರಿಸಿದ್ದೇವೆ. ಇನ್ನು ಮುಂದೆ ನಮ್ಮ ಈ ಭಾರತೀ ಕಾಲೇಜಿನ ಸದಸ್ಯರಾಗಿ ನಮ್ಮೆಲ್ಲರ ಜೊತೆ ಒಂದಾಗಿ ಇರುತ್ತಾರೆ. ಇನ್ನು ಇವರ ಪರಿಚಯವನ್ನ ಸ್ವತಃ ಇವರೇ ಮಾಡಿಕೊಳ್ಳುತ್ತಾರೆ"

"ಹೆಲೋ ಎವರಿವನ್... ಗುಡ್ ಮಾರ್ನಿಂಗ್ ಟು ಯು ಅಲ್...ನಾನು ಮಾನವ್ ರಾವ್. ಕಾಮರ್ಸ್ ಡಿಪಾರ್ಟ್ಮೆಂಟಿಗೆ ಹೊಸದಾಗಿ ಸೇರಿದ್ದೀನಿ. ಟೀಚಿಂಗ್ ಅಲ್ಲಿ ಮೊದಲಿನಿಂದಲೂ ತುಂಬಾ ಆಸಕ್ತಿ ನನಗೆ. ಹಾಗಾಗಿ ನಮ್ಮದೇ ಸ್ವಂತ ಕಂಪೆನಿಯಿದ್ದರೂ ಕೂಡ ಅಲ್ಲಿ ಕೆಲಸ ಮಾಡಲು ಮನಸ್ಸೇ ಬರಲಿಲ್ಲ. ಅದೇ ಸಮಯಕ್ಕೆ ಈ ಕಾಲೇಜಿನಲ್ಲಿ ವೇಕೆನ್ಸಿ ಇರುವುದು ಗೊತ್ತಾಯ್ತು. ಹಾಗಾಗಿ ಇಂಟರ್ವ್ಯೂಗೆ ಬಂದುಬಿಟ್ಟೆ. ನನ್ನ ಅದೃಷ್ಟಕ್ಕೆ ಸೆಲೆಕ್ಟ್ ಕೂಡ ಆಗಿ ಈಗ ನಿಮ್ಮಲ್ಲಿ ಒಬ್ಬನಾಗಿ ನಿಂತಿದ್ದೇನೆ. ಇನ್ನೇನಿದ್ದರೂ ಇಲ್ಲಿ ನಿಷ್ಠೆಯಿಂದ ಮಕ್ಕಳಿಗೆ ಪಾಠ ಮಾಡುತ್ತ, ಅವರಿಗೆ ಒಬ್ಬ ಒಳ್ಳೆಯ ಗುರುವಾಗಿ, ನಿಮಗೆ ಒಳ್ಳೆಯ ಸ್ನೇಹಿತನಾಗಿ ಇರುವುದಷ್ಟೇ. ನನ್ನನ್ನ ನಿಮ್ಮ ಸ್ನೇಹಿತನಾಗಿ ಒಪ್ಪಿಕೊಳ್ಳುತ್ತೀರಿ ಅಲ್ವಾ?" ಅಂತ ಹೇಳಿ ತನ್ನ ಮಾತನ್ನ ಮುಗಿಸಿದ್ದ ಮಾನವ್.


ಅವನ ಮಾತು ಮುಗಿಯುತ್ತಿದ್ದಂತೆ ಅಲ್ಲಿ ಉಂಟಾದ ಜೋರಾದ ಚಪ್ಪಾಳೆಯ ಸದ್ದೆ ಅವನ ಪ್ರಶ್ನೆಗೆ ಉತ್ತರವನ್ನ ಕೊಟ್ಟಿತ್ತು. ಆ ಕಾಲೇಜಿನ ವಿಶೇಷತೆಯೇ ಅದು. ಅಲ್ಲಿ ಯಾರಿಗೂ ಭೇಧಭಾವವಿರಲಿಲ್ಲ. ಯಾವುದೇ ದೀಪಾರ್ಟ್ಮೆಂಟ್ ಆದರೂ ಸರಿ. ಎಲ್ಲರೂ ಒಂದೇ ಅಲ್ಲಿ. ನಂತರ ಮಾನವ್ ಒಂದೊಂದೇ ಸ್ಟಾಫ್ ಹತ್ತಿರ ಹೋಗಿ ಅವರನ್ನ ಪರಿಚಯ ಮಾಡಿಕೊಳ್ಳುತ್ತ ಅವರ ಕೈಯನ್ನು ಕುಲುಕುತ್ತ ಬರುತ್ತಿದ್ದ. ಹಾಗೆ ಅನಿಕೇತ್ ಹತ್ತಿರ ಬಂದಾಗ ಅವನೇನೋ ತುಂಬಾ ವರ್ಷಗಳ ಪರಿಚಯದವನಂತೆ ನಕ್ಕು ಕೈ ಕುಲುಕಿದ್ದರು ಇಬ್ಬರೂ. ನಂತರ ರಜನಿಯ ಬಾರಿ. ಅವಳೋ ತನ್ನ ಪರಿಚಯವನ್ನ ಹೇಳುತ್ತಾ ಅವನಿಗೆ ಕೈ ಕುಲುಕಿದವಳು ಬಿಡಕ್ಕೆ ತಯಾರಿರಲಿಲ್ಲ. ನಂತರ ಅದನ್ನ ನೋಡಿದ ಅನಿಯೇ ಅವಳನ್ನ ಎಚ್ಚರಿಸಲು ಬರಬೇಕಾಯ್ತು. ಇನ್ನು ಅವಳ ಪಕ್ಕದಲ್ಲಿದ್ದವಳೆಂದರೆ ಮಹಿಮಾ. ಮಾನವ್ ಅವಳ ಎದುರಿಗೆ ಬಂದು ನಿಂತಾಗ ಅವಳು ಆರಾಮಾಗಿ ತನ್ನ ಪರಿಚಯವನ್ನ ಹೇಳುತ್ತಿದ್ದರೆ ಇವನು ಮಾತ್ರ ಮಾತೇ ಬರದವನಂತೆ ಶಾಕಾಗಿ ಅವಳನ್ನ ನೋಡುತ್ತಾ ನಿಂತುಬಿಟ್ಟಿದ್ದ.


ಸಶೇಷ


Rate this content
Log in

Similar kannada story from Drama