ಭಯದ ಸಾವು
ಭಯದ ಸಾವು
ಬಹಳ ವರ್ಷಗಳ ಹಿಂದೆ ಮುಳುಬಾಗಿಲನಲ್ಲಿ ನಡೆದಿದೆ ಎನ್ನಲಾದ ಒಂದು ಘಟನೆ.ಒಂದು ಹುಡುಗರ ಹಾಸ್ಟಲ್. ಒಂದು ದಿನ ಹೀಗೆ ದೆವ್ವ ಭೂತಗಳ ನಂಬಿಕೆ ವಿಷಯದಲ್ಲಿ ಚರ್ಚೆಯಾಗಿ ನಂಬಿಕೆ ಇಲ್ಲವೆಂದ ಒಬ್ಬ ಹುಡುಗನಿಗೆ ಉಳಿದವರು ಒಂದು ಪರೀಕ್ಷೆ ಒಡ್ಡಿದರು. ಅದೇನೆಂದರೆ ಭಾನುವಾರ ಅಮಾವಾಸ್ಯೆ ರಾತ್ರಿ ಊರಾಚೆ ಇರುವ ದೊಡ್ಡ ಹುಣಿಸೇ ಮರವನ್ನು ಮುಟ್ಟಿ ಬರುವುದು. ಅಷ್ಟೇ ತಾನೆ ಅಂತ ಧೈರ್ಯವಾಗಿ ಹುಡುಗ ಅದಕ್ಕೆಒಪ್ಪಿಕೊಂಡ . ಮತ್ತೊಂದು ಕಾರಣ ಹತ್ತು ರೂಪಾಯಿ ಪಂದ್ಯದ ಹಣ. ಇವನು ಹೋಗಿ ಮರ ಮುಟ್ಟುವುದನ್ನ ಖಾತ್ರಿ ಪಡಿಸಿಕೊಳ್ಳಲು ಅವನ ಕೈಲಿ ಒಂದು ಸುತ್ತಿಗೆ ಮತ್ತು ದೊಡ್ಡ ಮೊಳೆಯನ್ನು ಕೊಟ್ಟು ಮರಕ್ಕೆ ಹೊಡೆದು ಬರಲು ತಿಳಿಸಿದರು.
ಆ ರಾತ್ರಿಯವರೆಗೂ ಧೈರ್ಯದಿಂದಲೆ ಇದ್ದವನಿಗೆ ಏಕೋ ಸ್ವಲ್ಪ ಅಳುಕು, ಆದರೂ ಗೆದ್ದರೆ ಹತ್ತು ರೂಪಾಯಿ ಬರುತ್ತಲ್ಲ ಅನ್ನೋ ಆಸೆ. ಹೇಗೋ ಧೈರ್ಯ ಮಾಡಿ ಅವರು ಹೇಳಿದಂತೆ ಸುತ್ತಿಗೆ ಮೊಳೆ ಜೊತೆ ಹೊರಟ. ಅಮಾವಾಸ್ಯೆ ಕತ್ತಲು ಹಾಗೆ ಮೈ ನಡುಗಿಸೋ
ಚಳಿ. ಹತ್ತಿರ ಹೋದಂತೆಲ್ಲ ಭಯ ಹೆಚ್ಚಾಗುತ್ತಾ ಹೋಯ್ತು. ಬೇಡ , ವಾಪಸ್ ಹೋಗಿ ಬಿಡೋಣ ಅಂತ ಒಳ ಮನಸ್ಸು ಹೇಳಿತು. ಆದ್ರೆ ಮೊಂಡು ಧೈರ್ಯದ ಜೊತೆ ಏನಾದ್ರೂ ಆಗ್ಲಿ ಮಾಡ್ತೀನಿ ಅನ್ನೋ ಛಲ. ಭಯದಲ್ಲೇ ಅಂತೂ ಮರದ ಹತ್ತಿರ ಬಂದು ಬೇಗ ಬೇಗ ಮರಕ್ಕೆ ಮೊಳೆ ಹೊಡೆದು ಅಲ್ಲಿಂದ ಓಡಿ ಬರಬೇಕು ಅನ್ನೋ ಅಷ್ಟ ರಲ್ಲಿಯಾರೋ ಪಂಚೆಯನ್ನು ಗಟ್ಟಿಯಾಗಿ ಹಿಡಿದು ಕೊಂಡ ಅನುಭವ .ಕಿರುಚಿ ಕೊಳ್ಳಕ್ಕೂ ಆಗದೆ ಅಲ್ಲೇ ಬಿದ್ದಿದ್ದಾನೆ. ಬೆಳಗ್ಗೆ ಇವನು ಎಷ್ಟು ಹೊತ್ತಾದರೂ ಬಾರದೆ ಇದ್ದುದಕ್ಕೆ ಹೆದರಿ ಸ್ನೇಹಿತರು ಮರದ ಹತ್ತರ ಹೋಗಿ ನೋಡಿದ್ರೆ ಆಗ್ಲೇ ಸುಮಾರು ಜನ ಅಲ್ಲಿ ಸೇರಿದ್ದಾರೆ. ಹತ್ತಿರ ಹೋಗಿ ನೋಡ್ತಾರೆ ಅವನು ಮರಕ್ಕೆ ಮೊಳೆ ಹೊಡೆಯುವಾಗ ಭಯದಲ್ಲಿ ಅವನ ಪಂಚೆ ಕೊನೆ ಸೇರಿಸಿ ಹೊಡೆದು ಬಿಟ್ಟು
ಭಯಕ್ಕೆ ಸಾವು ತಂದು ಕೊಂಡಿದ್ದಾನೆ. ಉಳಿದವರು ಬಹಳ ವರ್ಷ ಈ ವಿಷಯ ಯಾರಿಗೂ ಹೇಳಿರಲಿಲ್ಲವಂತೆ.