ಪರಿಣಯ ರಂಗು ಮಾಸಿದಾಗ
ಪರಿಣಯ ರಂಗು ಮಾಸಿದಾಗ


ಬದುಕು ಇದು ಹೀಗೇ..
ಅದರ ರೀತಿಯೇ ಹಾಗೇ..!
ಕಂಡಳು ಅವಳು ನೂರಾರು ಕನಸುಗಳು
ಮದುಮಗಳಾಗಿ
ಸಪ್ತಪದಿ ತುಳಿಯುತ್ತಿರಲು..
ಆದರೆ ವಿಧಿ!
ಭಗವಂತನ ಲಿಖತವೇ ಬೇರೆ ಇತ್ತು
ಕನಸನು ನನಸು ಮಾಡೋ
ಹಾದಿಯಲಿ ಮೊದಲ ಹೆಜ್ಜೆಯೇ
ಎಡವಿತ್ತು...
ವಿಧವೆಯೆಂಬ ಪಟ್ಟ ಕೇಳದೆಯೇ
ದೊರಕಿತ್ತು..!
ಕೇಶಗಳ ಮರೆಯಲ್ಲಿ ಅರಳುತ್ತಿದ್ದ
ನಗು ಮಾಯವಾಗಿತ್ತು..
ಅದರ ಮೇಲೆ ದುಃಖದ ನೆರಳೊಂದು
ಬಯಸದೆ ಸುಳಿದಾಡಿತ್ತು
ಬಣ್ಣಗಳ ರಂಗಲ್ಲಿ ಕಂಗೊಳಿಸುತ್ತಿದ್ದವಳಿಂದು
ಬಣ್ಣ ರಹಿತ ಶ್ವೇತ ರಂಗಿನ ಒಡತಿಯಾಗಿಹಳು
ಗಂಡನ ಗೋರಿಯ ಮೇಲೆ ಸತ್ತ ಕುಂಕುಮ
ಅದರ ಜೊತೆಯಲ್ಲಿ ಆಗಿದೆ ಅವಳ
ಜೀವನ ಯಾನದ ಅಂತ್ಯ..
ಮದುವೆಯೆಂಬ ಬಂಧದಿ ಬಂಧಿಯಾಗಿ
ಪತಿ-ಮಕ್ಕಳು ಎಂದು.. ಸುಂದರ
ಸಂಸಾರದ ಕನಸು ಕಂಡಿದ್ದವಳಿಗೆ...
ನೀಡಿದೆಯಿಂದು ಈ ಕುಲಗೆಟ್ಟ ಸಮಾಜ...
ವಿಧವೆಯೆಂಬ ಪಟ್ಟ...!
ಬಿಟ್ಟು ಹೋದ ಜೀವನದಲ್ಲಿ
ತುಂಬಿಕೊಂಡಿದೆ ಕತ್ತಲೆ...
ಕುಂಕುಮ ಅಳಿಸಿದ ಹಣೆ ಬೋಳಾಗಿದೆ
ಕಣ್ಣೀರಿಲ್ಲದೆ ಬತ್ತಿ ಹೋಗಿದೆ
ಕಂಗಳ ಕೊಳಗಳು..
ತುಂಡಾಗಿ ಅಳುತ್ತಾ ನೆಲ ಸೇರಿವೆ
ಜಣಜಣವೆನ್ನುತ್ತಿದ್ದ ಕೈ ಬಳೆಗಳು
ಮನಸ್ಸು ತುಂಬಿಕೊಂಡಿದ್ದ ಕನಸು
ಕೊನೆಯುಸಿರೆಳೆದು ಯುಗವಾಗಿದೆ..
ಒಬ್ಬಂಟಿಯಾಗಿ ಬಿಟ್ಟು ಹೋದ
ಸಂಬಂಧಿಕರನ್ನು
ಸಾಂತ್ವನ ಕೊಟ್ಟು ಮರೆಯಾಗುವ
ಗೆಳೆಯರನ್ನು..
ದೂರ ಸರಿಸಿ ತನ್ನ ಪಾಡಿಗೆ ಹೋಗುವ
ಜನರನ್ನು ಕಂಡು
ಕಣ್ಣೀರಾಗುವಳು ತನ್ನ ವಿಧಿಯೆಂದು
ನೆನೆದು ಮೂಕಳಾಗುತ್ತಾ..
ಮನದಲ್ಲಿದ್ದರೂ ಆಸೆ ನೂರಾರು
ಅವುಗಳಿಗೆ ಆಸರೆ ಯಾರು..?
ಪತಿಯ ಆಯಸ್ಸು ಅಷ್ಟೇ ಆಗಿದ್ದಲ್ಲಿ
ಅವಳ ತಪ್ಪೇನು...?
ವಯಸ್ಸಿಗೂ ಮೊದಲೇ ವಿಧವೆ
ಆಗಿದ್ದು ಅವಳಿಗೆ ದೊರೆತ ಶಾಪವೇನು..?
ವಿಧವೆಯಾದರೇನು..?
ಅವಳಿಗೆ ಬಾಳಿಲ್ಲವೇನು..?
ನಮ್ಮ ನಿಮ್ಮಂತೆ ಅವಳೂ
ಮನುಷ್ಯಲ್ಲವೇನು..?
ಅವಳಿಗೂ ಒಂದು ಮನಸ್ಸಿಲ್ಲವೇನು?
ಕಾಣದಾಗಿದೆ ಅವಳಿಗೆ ಜೀವನದ ಹಾದಿ
ದುಷ್ಟ ಸಭ್ಯ ಜನರಿಂದ ಕಾಪಾಡಬೇಕಿದೆ
ಅವಳ ಮಾನ...
ಬೆತ್ತಲೆ ಸಮಾಜದಲ್ಲಿ ಅವಳಿಗೂ
ಎಂದಿಗೆ ಸಿಗಬಹುದು ಒಂದು ಚೂರು ಸನ್ಮಾನ..?