ಕೊರೋನಾ
ಕೊರೋನಾ


ಕೊರೋನಾ ಕೊರೋನಾ ಅಗೋಚರ ಕೊರೋನಾ
ಸೂಕ್ಷ್ಮ ದರ್ಶಕದಲ್ಲಿ ನಿನ್ನ ಭಯಾನಕ ದರ್ಶನ
ಜಾತಿ ಧರ್ಮ ಗಂಡು ಹೆಣ್ಣು ಭೇದ ಭಾವ ಮಾಡದೇ
ವಿಶ್ವವನ್ನೇ ಮೆಟ್ಟಿ ನಿಂತು ತಲ್ಲಣಗೊಳಿಸಿದ ಕೊರೋನಾ
ನೆರೆ ಹೊರೆಯವರನು ದೂರವಿಟ್ಟು
ಬಂಧು ಬಾಂಧವರ ಸಂಪರ್ಕ ಬಿಟ್ಟು
ಸಾಮಾಜಿಕ ದೂರದ ಈ ಕಟ್ಟು ನಿಟ್ಟು
ಬೆಚ್ಚಿ ಬೀಳಿಸುವಂತಿದೆ ಕೊರೋನಾ ಪೆಟ್ಟು
ಜೀವನ ಚಕ್ರಕ್ಕೆ ಕಡಿವಾಣ ಹಾಕಿ
ದುಡ್ಡೇ ದೊಡ್ಡಪ್ಪ ಗಾದೆ ಹುಸಿ ಮಾಡಿ
ಜೀವನ ಮೌಲ್ಯದ ಅರಿವು ಮಾಡಿ
ಮಂದಹಾಸ ಬೀರುತಿದೆ ಜೈವಿಕ ಮಾರಿ
ತತ್ತರಿಸುತ್ತಿದೆ ಪ್ರಪಂಚ ನಿನ್ನ ಪ್ರಹಾರಕ್ಕೆ
ವಿಶ್ವವೇ ಸನ್ನದ್ಧವಾಗುತ್ತಿದೆ ನಿನ್ನ ಪ್ರತೀಹಾರಕ್ಕೆ
ಸನಿಹಕೆ ಬರುತಿದೆ ನಿನ್ನ ಕಾಲಾವಧಿ
ಪಲಾಯನ ಒಂದೇ ನಿನಗುಳಿದಿರುವ ದಾರಿ
ಇದೇನು ಶಾಪವೋ ವರವೋ ಅರಿಯದಂತಾಯಿತು
ಮನೆಯ ಬಂಧನ ಅನಿವಾರ್ಯವಾಯಿತು
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಪತ್ತನ್ನು ಎದುರಿಸುವ ವಿಶ್ವಾಸ ಧೃಡವಾಯಿತು