ಸಂತ್ರಸ್ತೆಯೊಬ್ಬಳು ಹೇಳುತ್ತಾಳೆ
ಸಂತ್ರಸ್ತೆಯೊಬ್ಬಳು ಹೇಳುತ್ತಾಳೆ
ನನ್ನಪ್ಪ ಮದಿರೆಯ ವಾಸನೆ ಹೊಡೆವ ಬಾಯಿ ತೆರೆದಾಗಲೆಲ್ಲ
ನನ್ನ ಬಾಲ್ಯದ ದಿನಗಳಲ್ಲಿ ವಿಷ ತುಂಬುತ್ತಿದ್ದ
ಆಗೆಲ್ಲ ನಾನೆಷ್ಟು ಹೊಟ್ಟೆ ಕಿಚ್ಚು ಪಡುತ್ತಿದ್ದೆ
ಪಕ್ಕದ ಮನೆಯ ಹುಡುಗಿಯರ ಅಪ್ಪ ಮೂಕನಾಗಿದ್ದದ್ದಕ್ಕೆ.
ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ
ನನ್ನ ರಾತ್ರಿಗಳನ್ನೆಲ್ಲ ಕರಾಳಗೊಳಿಸುತ್ತಿದ್ದ
ಆಗೆಲ್ಲ ನಾನೆಷ್ಟು ಹೊಟ್ಟೆ ಕಿಚ್ಚು ಪಡುತ್ತಿದ್ದೆ
ಎದುರುಮನೆಯವರ ಗಂಡ ಶಂಡನಾಗಿದ್ದದ್ದಕ್ಕೆ.
ನನ್ನ ಮಕ್ಕಳು , ಸೊಸೆಯಂದಿರು ಕಟು ಮ್ತಿನ
ಚಾಕುವಿನಿಂದ ನನ್ನನ್ನು ಚುಚ್ಚಿ ಚುಚ್ಚಿ ನೋಯುಸುತ್ತಿರುವಾಗ
ನಾನು ಹೊಟ್ಟೆಕಿಚ್ಚು ಪಡುತ್ತೇನೆ
ಕೊನೆ ಮನೆಯ ಹೆಂಗಸು ಬಂಜೆಯಾಗಿರುವುದಕ್ಕೆ!