ಅವಳ ಪತ್ರಗಳು
ಅವಳ ಪತ್ರಗಳು
ಮೊದಮೊದಲು
ಅವಳ ಪತ್ರಗಳು ಸುದೀರ್ಘವಾಗಿರುತ್ತಿದ್ದವು
ಅವುಗಳಲ್ಲಿ ಎಲ್ಲವೂ ಇರುತ್ತಿದ್ದವು
ಸುಖ ದು:ಖ
ನೋವು ನಲಿವು
ಕೋಪತಾಪ
ಉಕ್ಕುತ್ತಿದ್ದವು
ಆಗಾ ಬಿಕ್ಕುತ್ತಿದ್ದವು!
ಆಮೇಲಾಮೇಲೆ
ಅವು ಪುಟ್ಟದಾಗತೊಡಗಿದವು
ಸ್ವವಿವರಗಳು ಮರೆಯಾಗಿ
ವಿಚಾರಣೆಗಳು ಶುರುವಾದವು
ಕಾಲ ಸರಿದಂತೆ
ಅವೂ ಇಲ್ಲವಾಗಿ
ಬರೀ ಪ್ರಶ್ನೆಗಳು
ಹರಿದಾಡತೊಡಗಿದವು
ನಂತರದಲ್ಲಿ
ಬರಿ ಆಜ್ಞೆಗಳು ಉಳಿದುಕೊಂಡವು
ಕೊನೆಕೊನೆಗೆ
ತಲುಪಿದ್ದಕ್ಕೆ ಉತ್ತರಿಸು
ಎಂಬಲ್ಲಿಗೆ ಬಂದು ನಿಂತವು
ಕೊನೆಯ ಪತ್ರದಲ್ಲಂತು
ಕನಿಷ್ಠ ತಾರೀಖನ್ನೂ
ಅವಳು ಬರೆದಿರಲಿಲ್ಲ