ಅವಳು ಮತ್ತು ಸುಳ್ಳುಗಳು
ಅವಳು ಮತ್ತು ಸುಳ್ಳುಗಳು
ಸುಳ್ಳಿನ ಸುಖ!
ಅವಳು ಸುಳ್ಳುಗಳನ್ನು ಪ್ರೀತಿಸತೊಡಗಿದಳು
ಯಾಕೆಂದರೆ ಅವಳವನನ್ನು ಪ್ರೀತಿಸುತಿದ್ದಳು!
ಅವನನ್ನು ಪ್ರೀತಿಸುವುದೆಂದರೆ
ಅವನಾಡುವ ಸುಳ್ಳುಗಳನ್ನು
ಸತ್ಯಗಳೆಂದು ನಂಬುವುದು ಮಾತ್ರ
ಎಂದು ತಿಳಿದ ಅವಳಿಗೆ ನಿರಾಸೆಯಾಗಲು
ತಡವೇನೂ ಆಗಲಿಲ್ಲ
ಮುಗಿದ ಮೊದಲ ರಾತ್ರಿಯ ಹಿಂದೆಯೇ
ಹರಡಿಕೊಂಡ ಹಗಲು ಹರಿಯುವಷ್ಟರಲ್ಲಿ
ಅವಳಿಗರ್ಥವಾಗಿಬಿಟ್ಟಿತು
ಸುಳ್ಳು ಬೇರೆಯಲ್ಲ ಅವನು ಬೇರೆಯಲ್ಲ
ಮತ್ತು ಅವನೇ ಸ್ವತ: ಸುಳ್ಳಾಗಿದ್ದ
ಆಮೇಲಾಮೇಲೆ ಅವನ ಸುಳ್ಳುಗಳನ್ನು ಜಗದೆದುರು
ಅನಾವರಣಗೊಳಿಸಹೊರಟಳು
ಯಾರೂ ಅವಳ ಮಾತ ನಂಬಲಿಲ್ಲ
ಅವಳನ್ನೇ ಮಹಾಸುಳ್ಳಿಯಂತೆ ನೋಡಿದರು
ಆಗವಳಿಗರ್ಥವಾಗಿದ್ದೆಂದರೆ ಸುಳ್ಳನ್ನು ನಂಬಿದಷ್ಟು ಸುಲಭಕ್ಕೆ
ಜಗತ್ತು ಸತ್ಯವನ್ನು ನಂಬುವುದಿಲ್ಲ
ಬದಲಾಗದೆ ತಾನು ವಿಧಿಯಿಲ್ಲವೆನಿಸಿ
ಸ್ವತ:ಸುಳ್ಳು ಹೇಳುವುದ ಕಲಿಯತೊಡಗಿದಳು
ಅದೇನೂ ಅಷ್ಟು ಕಷ್ಟವಾಗಲಿಲ್ಲ!
ಈಗವಳು ಜಗದೆದುರು ಸುಳ್ಳೇ ನಗುತ್ತಾಳೆ
ಸುಖದ ಮಾತಾಡುತ್ತಾಳೆ
ಜನ ಮೊದಲಿನಂತೆ ಮುಖ ತಿರುಗಿಸುವುದಿಲ್ಲ
ಅವಳ ಸುಳ್ಳಿಗೆ ಚಪ್ಪಾಳೆ ತಟ್ಟುತ್ತಾರೆ.
ಇನ್ನೂ ಮದುವೆಯಾಗದ ತಮ್ಮ ಹೆಣ್ಣು ಮಕ್ಕಳಿಗೆ ಅವಳ
ಸಂಸಾರದ ಉದಾಹರಣೆ ಕೊಡುತ್ತಾರೆ!