ಕಡಲು ನೀನು
ಕಡಲು ನೀನು


ಸಾಗುವೆ ನೀ ನಗು ತುಳುಕಿಸುತ್ತಾ
ತುಟಿಯಂಚಿನಲಿ.
ಮರುಳಾಗಿರುವೆ ನಾನು
ಕಂಪಿಸುವ ನಿನ್ನ ಪಿಸುಮಾತಿಗೆ.
ಕನಲುವೆ ನೀ ಒಮ್ಮಿಂದೊಮ್ಮೆಗೆ
ಎದುರು ಸಿಕ್ಕವರ ಕತ್ತರಿಸಿ ಹಾಕುವ ಆವೇಶದಿ.
ಹೇಗೆ ಅರಿಯಲಿ ನಾನು?
ನಿನ್ನಾಳದಿ ಉರಿಯುತ್ತಿರೋ ಆ ಬೇಗುದಿಯ!
ನರರೂ ಹೆದರಿ ನಡುಗುವ ಆ
ನಿನ್ನ ಭೋರ್ಗರೆತ ಬರಿ ಹೊರ ಕವಚವಷ್ಟೇ.
ತಳದಲ್ಲಿ ಬೆಂಕಿ ಮಿಡಿಯುವ
ಏಕಾಂಗಿ ನೀನು!
ಕಂಗೆಡಿಸುತಿದೆ ನನ್ನ, ನಿನ್ನೀ
ಕಣ್ಣಂಚಿನ ಬಿಸಿಯುಸಿರು.
ಸಿಗದ ತಾರಾಗಣಕ್ಕಾಗಿ ನಿನ್ನ ಹಂಬಲ
ಕಡೆಗೆ ಸೋತು ಒರಗುವೆ
ನೀಳ ತೋಳುಗಳ ಹಾಸಿ.
ಅಪ್ಪಲಾಗದೆ, ತಲೆ ಸವರಿ ಸಂತೈಸಲಾಗದೆ
ನಿನ್ನೊಡನೆ ಸೆಣಸುವುದೊಂದೇ ದಾರಿ ನನಗೆ!
ಆವರಿಸುವೆ ಮತ್ತೆ ನೀಲಿ ಹಾಡಾಗಿ ನಲಿದು
ಓರೆಗಣ್ಣಿನ ನೋಟದಿ ಆಡಿಸಿ
ಬಿಗಿದಪ್ಪಲು ಕಾದು.
ಅಡಗಿದೆ ನಿನ್ನೆದೆಯಲಿ ನಿಗೂಢ ನೂರು
ಅನಂತ ಪ್ರೀತಿಯ ಕ್ಷೋಭೆಯಬ್ಬರದಲಿ
ದಡಕ್ಕಪ್ಪಳಿಸುವೆ ಭೂಮಿ ಸೀಳುವಂತೆ ಬಂದು.
ಚಾಚಿದ ತೋಳುಗಳಲಿ ಆಮಂತ್ರಿಸುವೆ ಮೋಡವ,
ತರಿಸುವೆ ಧರೆಗೆ ವರ್ಷಧಾರೆಯ.
ಬಿಚ್ಚಿ ಹರಡಿರುವ ಕೇಶರಾಶಿಯ
ಕೇಕೆ, ಆಕಾಶವ ಅಳೆದಿದೆ
ಪಟಪಟಿಸುವೆ ನೀಲಿ ಹಾಯಿ ಸೆರಗು,
ಹಾರಿ ಹಿಡಿಯಲೆತ್ನಿಸುತಿರುವೆ ವ್ಯರ್ಥವಾಗಿ
ಬಿದ್ದಷ್ಟೂ ಬಿದ್ದು
ತಿರು ತಿರುಗಿ ತ್ರಾಣ ತುಂಬಿಕೊಳ್ಳೋ ಶಿಖೆಯೇ.
ಸರಿಸಾಟಿ ಯಾರಿಹರು ನಿನಗೆ?
ಬಿದ್ದು ಎದ್ದು ನಡೆಯುವ ಈ ಪ್ರಯತ್ನಕೆ
ಅಡಗಿದೆ ಜಗದ ಸಂತಸ
ನಿನ್ನೊಡಲಿನ ಆ ಉಪ್ಪು ಬೆವರಿನಲಿ
ಕಾದಿರುವೆ ನಾನು ಆ ನಿನ್ನ ಒಂದೇ ಒಂದು
ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ಮೀಯಿಸಿ ಬಿಡು ಒಮ್ಮೆ
ನನ್ನೆದೆಯ ಬಂಜರು ಭೂಮಿಯ.
ಎಂದೆಂದಿಗೂ ನಿನ್ನಂತೆ,
ನೋವನ್ನೆಲ್ಲಾ ಒ
ಡಲಾಳದಿ ಬಟ್ಟಿಟ್ಟು ಮಂದಸ್ಮಿತಳಾಗುವಂತೆ!
ಮಿರಿ ಮಿರಿವ ತೆರೆಗಳ ಹುಚ್ಚು ಕುಣಿತ
ಉಲ್ಲಾಸದಿ ಸಿಡಿಯುವ ಅನವರತ ಜಿಗಿತ
ರೆಕ್ಕೆ ಬಿಚ್ಚಿ ಹಾರುವಂತೆ ಹಕ್ಕಿ
ಕಣ ಕಣದಲು ಅಗುಳು ಕುದಿಯುವಂತೆ ಉಕ್ಕಿ
ಉರಿ ಬಿಸಿಲ ಜೊತೆ ಬೆರೆಯುವ ಉಪ್ಪು ಗಾಳಿ
ಶಬ್ದ ನಿಶ್ಶಬ್ಧಗಳಲಿ, ಒದ್ದೆ ಕಂಗಳಲಿ
ತಬ್ಬುತಾ ಆಕಾಶ ಭೂಮಿ..
ಮಧುರ ಬೆಳಂದಿಗಳ ನೊರೆ ನಾದದಲೂ
ಅಡಗಿದೆ ಉಪ್ಪು ದುಃಖದ ಭರತ ಇಳಿತ
ಅಲೆಗಳ ಮೊರೆತಕ್ಕೆ, ಮೌನ ಮುರಿಯುವೆ ನೀನು
ಮರಳು ಹಾದಿಯ ತುಂಬೆಲ್ಲಾ ನಿನ್ನದೇ ಗುನುಗು
ಎಷ್ಟೋ ಪ್ರೇಮಿಗಳ ಸಮ್ಮಿಲನಕ್ಕೆ ಸಾಕ್ಷಿ ನೀನು
ಎಷ್ಟೋ ದುಷ್ಟರ ಹಾಹಾಕಾರಕ್ಕೆ
ಮೌನಿ ನೀನು
ಮಾನವ ತಂದು ಸುರಿಯೋ ವಿಷ
ಅನಿಲಗಳಿಗೆ ಬಲಿ ನೀನು
ಜಗದ ನಿತ್ಯ ಪ್ರೇಮಿ ನೀನು
ನಿತ್ಯ ಮಿಲನ ನಿನಗೆ
ಲಕ್ಷ ಲಕ್ಷ ನದಿಗಳ ಬೆಸುಗೆಯಿದ್ದರೂ
ತೀರದು ನಿನ್ನ ಬಯಕೆ
ಉಗ್ರ ನದಿಗಳ ಆವೇಗವ ಮಣಿಸುವೆ
ನಿನ್ನ ತೆಕ್ಕೆಗೆ ಸೆಳೆದು, ನಿನ್ನಾಳದಿ ಸೇರಿಸುತ್ತಾ
ಇನ್ನು ಕೆಲವು ಮಂದ-ಶಾಂತ, ಒಯ್ಯಾರ ಒನಪು
ಆದರೆ ನಿನಗಿಲ್ಲ ಭೇದ ಭಾವ,
ಅದೇ ಮುದ್ದು-ಬಿಸುಪು
ದಿನವೂ ಹರಿವೆ ನೀನು ಹೊಸದಾಗಿ
ಹೊಸ ಹರಿವಿನ ಸೇರಿಕೆಯೊಂದಿಗೆ
ಆದರೂ ನಿನಗಿಲ್ಲ ಅಹಂಕಾರ
ಗಮ್ಯವಿರದೆ ಸಾಗೋ ಬಾಳ
ಧನ್ಯ ಮಾಡೋ ಮೋಹನ ನೀನು
ಬರೀ ಪ್ರೇಮಿಯಲ್ಲ, ಶಕ್ತಿವಂತ ಚೇತನ ನೀನು
ಅಂತ್ಯವೆಂದು ಬಂದು ನಿನ್ನ ಸೇರೋ
ನೀರ್ಜರಿಗಳು ಸಾಸಿರ
ಆದರೂ ನಿನ್ನೊಡಲ ಸೇರಿ ಹಿಗ್ಗಿ,
ವಿಶಾಲ ಹರಿವ ಸಾಗರ!
ಆದರೂ ಏಕೆ ಕುಸಿದಿರುವೆ ನೀ ಹೀಗೆ?
ಈ ಪರಿ ಮುಂಗಾಲುಗಳಲಿ ಮುದುರಿ!
ಕಣ್ಣ ಕೊಳದಲ್ಲೇನದು, ದಣಿವಿನ ಮೋಡ?