ಮರೆಯುವೆಯಾ ನನ್ನ?
ಮರೆಯುವೆಯಾ ನನ್ನ?
ಸುಳ್ಳು ಹೇಳದಿರು ಗೆಳತೀ
ಪ್ರೀತಿ ಸತ್ಯವ ಮರೆಮಾಚಿ
ಹೃದಯ ಮುಟ್ಟಿ ಕೇಳು
ಮರೆಯುವೆಯಾ ನನ್ನ?
ಬೇರೆ ಕಾರಣವ ಕೊಡದಿರು
ಮೌನ ಗಿಳಿಯ ಕೊಕ್ಕು
ಚುಚ್ಚಿ ಚುಚ್ಚಿ ಕೊಲ್ಲುತಿರಲು
ಮರೆಯುವೆಯಾ ನನ್ನ?
ನನಗೆ ಗೊತ್ತು ಈ ಪ್ರೀತಿ
ಸುಲಭದಲ್ಲಿ ಅಳಿಸಲು
ನಿನ್ನಕೈಲಾಗದೆಂಬುದೂ ಗೊತ್ತು
ಮರೆಯುವೆಯಾ ನನ್ನ?
ಬರಡು ಎದೆಯೊಳಗಿನ
ಹಸಿರು ಕನಸ ಚಿಗುರಿಸಿ
ಮತ್ತೆ ಅದನು ಹೊಸಕಿ
ಮರೆಯುವೆಯಾ ನನ್ನ?
ಜಾತಿಯಮಾತು ಬೇಲಿ
ಹಾಕಿದೆ ನಮ್ಮಿಬ್ಬರಿಗೆ
ಅದ ದಾಟಲಾರದ ನೀ
ಮರೆಯುವೆಯಾ ನನ್ನ?
ಮರೆತಂತೆ ನಟಿಸುವ
ನಿನ್ನ ನಟನೆ ಗೊತ್ತಿದೆ
ಪ್ರೀತಿ ಬಚ್ಚಿಟ್ಟ ಗುಬ್ಬಚ್ಚಿಯಾಗೇ
ಮರೆಯುವೆಯಾ ನನ್ನ?
ಅಪ್ಪನ ಅಕ್ಕರೆಯಲ್ಲಿ
ಅಮ್ಮನ ಮಡಿಲಲ್ಲಿ
ಮಗುವಾಗಿದ್ದರೂ ನೀ
ಮರೆಯುವೆಯಾ ನನ್ನ?
ಅವರಿಬ್ಬರ ಒಟ್ಟು ಪ್ರೀತಿ
ನನ್ನಲ್ಲಿ ಕಂಡ ಮೇಲೂ
ಗುಣಿಸಿ ಕಡೆಗಣಿಸಿ
ಮರೆಯುವೆಯಾ ನನ್ನ?

