ದುಡಿ
ದುಡಿ
ರಾತ್ರಿ ಗಾಢಮೌನದೊಳಗೆ
ನೀಲ ಕಾಡಹಾಡಿಯೊಳಗೆ ||
ಕಾನುಜೀವ ಮಿಡಿಯುತ್ತಿತ್ತು
ಬಿದಿರಕೋಲು ದುಡಿಯೊಳಗೆ ||
ಇದ್ದ ಒಂದು ಸಣ್ಣಬೆಳಕು
ಸಾಯೋ ಮುಂಚೆ ಹೇಳಬೇಕು ||
ಕಾನುಜೀವ ಉಳಿಸಬೇಕು
ಹಾಡಿ ದುಡಿಗೆ ಅನ್ನಬೇಕು ||
ದುಡಿಯ ಹಿಡಿದ ಕಪ್ಪು ಕೈ
ಮಾತೇ ಬರದ ಮೂಕದನಿ ||
ಹೇಳಲೊರಟ ಧಾಟಿ ಮಾತ್ರ
ದುಡಿಯಚರ್ಮ-ಬಿದಿಎ ಕೋಲು ||
ನೆರಕೆಗೋಡೆ ದಾಟಿ ಬಂದು
ಕಾನುದಾಟಿ ಬರಲು ಯತ್ನ||
ದುಡಿದು ಬಂದ ದೇಹಕ್ಕೊಂದು
ನೆಮ್ಮದಿಯ ಹುಡುಕಲೆತ್ನ ||
ಮುತ್ತನೆದೆಯರಾಗ ಮಿಡಿತ
ದುಡಿಯ ಬಡಿತ ಸಿಡಿತವು ||
ಅಡಗಿ ಹೋದ ಅಡವಿದನಿಯ
ಕಪ್ಪುಕತ್ತಲೆಯಾ ಸೆಡವು ||
ದುಡಿಯ ಶಬ್ದ ರಣರಣ
ಅನುದಿನವೂ ಅನುರಣನ||
ಸವೆದ ಚರ್ಮಕರ್ಮದಲ್ಲಿ
ಶಬ್ದ ಧ್ವನಿಯ ಹೂರಣ||
ದುಡಿವ ಕೈಗೆ ದುಡಿಯು ಸಿಕ್ಕಿ
ಹೇಳಲೊರಟ ಮುತ್ತನು||
ದುಡಿಯೇ ಕೂಗಿ ಹೇಳುತ್ತಿತ್ತು
ಗುಡಿಯ ನೆಪದಿ ಬರದಿರಿ||
ನೆರಕೆ ಮೀರಿ ಕಾನುದಾಟಿ
ಹೇಳಲೊರಟ ನೋವಲಯವು||
ಒಡಲ ಬೇಗೆ ಧ್ವನಿಯ ಮೀಟಿ
ಹೊರಟ ದುಡಿಯ ಶಬ್ದವು||
ದುಡಿಯೇ ಕೂಗಿ ಹೇಳುತ್ತಿತ್ತು
ಗುಡಿಯ ನೆಪದಿ ಬರದಿರಿ||
