STORYMIRROR

JAISHREE HALLUR

Abstract Romance Tragedy

4  

JAISHREE HALLUR

Abstract Romance Tragedy

ನಿನ್ನೊಡನೆ ಕಳೆದ ಒಂದಿನಿತು ಕನಸು

ನಿನ್ನೊಡನೆ ಕಳೆದ ಒಂದಿನಿತು ಕನಸು

1 min
368

ನಿನ್ನೊಡನೆ ಕಳೆದ ಒಂದಿನಿತು ಕನಸು

ಇನಿಪಾಗಿತ್ತು ಎಂದು ಈಗನಿಸುತ್ತಿದೆ ನಲ್ಲಾ!

ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,

ರಾತ್ರಿಯಿಡೀ ನೆನಪಲ್ಲೇ ಕಳೆದೆನೆಂದು.


ಮಂದನಗೆಯ ತುಟಿಯಂಚಲಿ ತೇಲಿದೆ

ಸ್ನಿಗ್ಧ ಸೌಂದರ್ಯ , ಮುತ್ತಿನ ಮಳೆಯಲಿ ತೋಯ್ದು..

ಆನಂದ ತುಂದಿಲಳಂತೆ ಪುಟಿದೇಳುವ

ಎದೆಬಡಿತದಲ್ಲಿ ಅನುರಾಗದಾರಾಧನೆ..


ತಣಿದ ಮನಕೆ ಮಣಿದ ಭಾವಗಳು

ಕುಣಿವ ಮುಂಗುರುಳಿಗೆ ಬೆರಳಸ್ಪರ್ಶ

ಅಣಿಮಾಡಿದೆ ನೀನು , ಕಣಕಣದಲ್ಲೂ

ಇನಿಪನಿತ್ತು ಹನಿಹನಿಯಾಗಿ..


ನೆನಪಿನಂಗಳಕೆ ಮೃದುಮಲ್ಲಿಗೆಯಂತೆ

ಮಧುಚೆಲ್ಲಿ ಮೃದುಹಾಸಿದೆ ಮೆಲ್ಲಗೆ

ಎನಿತು ಮಧುರಕಂಪನ , ಭಾವೋಲ್ಹಾಸದ ಸಿಂಚನ!


ಆಗೊಂದು, ಈಗೊಂದು ಎಂಬಂತೆ ಕೆಣಕವ , ತುಂಟನೆಪಗಳ ಸಂತೆಯಲಿ

ಕಂತಿನಲಿ ಮುತ್ತುತಿವೆ ಒಂದೊಂದಾಗಿ.

ಅಂಕೆಶಂಕೆಯಿಲ್ಲದೇ..


ನೋಡು ಹುಡುಗಾ! ನಿನ್ನ ಭಾವಸ್ಪರ್ಶಕೆ

ನಲುಗಿಹೋದ ಹಣೆಯಬಿಂದುವೀಗ

ಮುನಿದಿದೆ ಸಲುಗೆ ಹೆಚ್ಚಿತೆಂದು.


ಮುಂಜಾನೆ ಬಾನು ತನ್ನಷ್ಟಕ್ಕೇ ನಕ್ಕು

ಗಾಜನ್ನೂ ತೂರಿ ಗಲ್ಲ ಸವರಿದನಲ್ಲಾ..

ರೆಪ್ಪೆಗಳು ಸೋತು ಅಪ್ಪಿದವು ಮತ್ತೆ.


ಮತ್ತೆ ಕಾಡುವ ನೆನಪು ಬೇಕೆಂಬಾಸೆ

ಒತ್ತೆಯಿಟ್ಟಾದರೂ ಇರುಳನೆಲ್ಲಾ.

ಬತ್ತಿದೆದೆಯಲ್ಲಿ ಮೂಡಿಸುವ ಪ್ರೇಮ

ಸೆಲೆಯಾದ ನಿನ್ನ ನೆನಪುಗಳ ಗಲ್ಲಾ...!


Rate this content
Log in

Similar kannada poem from Abstract