ಜಾಣ ಮರೆವು
ಜಾಣ ಮರೆವು
ವೇದನೋದಿದವ ವೇದನೆ ಮರೆತನೇ?
ಶಸ್ತ್ರವ ಹಿಡಿದವ ಶಾಸ್ತ್ರವ ಮರೆತನೆ? ॥ಪ॥
ಪದಗಳ ಚಂದದಿ ಪೋಣಿಸೋ ಕವಿಯು
ನೋವಿನ ದನಿಯನು ಮರೆತನೇ?
ಚಿನ್ನದ ಚಮಚದ ಸಿರಿತನವಿದ್ದರೂ
ಧನಿಕನು ಹಿರಿತನ ಮರೆತನೇ?
ಮಂತ್ರ-ತಂತ್ರವ ಪಠಿಸುವ ಭೂಸುರ
ಮೈತ್ರಿ-ಕರುಣೆಯ ಮರೆತನೇ?
ವಿದ್ಯಾಲಯದಲೇ ಶ್ರೇಷ್ಠನೆನುವವ
ಮನುಜ ಮತವನೇ ಮರೆತನೇ?
ಬಡವಗೆ ದುಡಿಮೆಯ ಬೋಧಿಸುವವ
ಕೈ ಮಣ್ಣಾದೀತೆಂದು ಬೈದನೇ ಮಗನಿಗೆ?
ಬೆವರಿನ ಬಗ್ಗೆ ಬೋಧಿಸಿದಾತನು
ಮರೆತನೆ ಮಣ್ಣಿನ ಗುಣವನೆ?
ಕುಶಲದಿ ಕಲಿದ ಡಾಕ್ಟರರೊಬ್ಬನು
ಹಣದಲೇ ರೋಗಿಯ ಅಳೆದನೇ?
ಜನರೇ ಕಳಿಸಿದ ಜನಪ್ರತಿನಿಧಿಯೊಬ್ಬ
ಸಮತೆಯ ನೆಲೆಯನೇ ಮರೆತನೇ?
ಕಾವಿ- ಖಾದಿ - ಖಾಕಿ ತೊಟ್ಟವ
ಸಂವಿಧಾನವನೇ ಮರೆತರೇ?
ಸ್ವಾರ್ಥದಿಂದ ಮರೆಯೊ ತಂತ್ರಕೂ
ವಿನಾಶವಿದೆ ಅನ್ನೋದನ್ನೂ ಮರೆತರೇ?
