ತಪ್ಪಾದ ಆಯ್ಕೆ
ತಪ್ಪಾದ ಆಯ್ಕೆ
ಇಂದಿನ ಈ ಸ್ಥಿತಿಗೆ ನಾನಲ್ಲ, ಅವನೇ ಕಾರಣ. ಈ ಆಯ್ಕೆ ನನ್ನದಲ್ಲ ಸಾಗರನದು.
ನಾನು ಶಾಂಭವಿ. ಮೊದಲಿಂದಲೂ ಪ್ರಕೃತಿಯ ಜೊತೆಯಲ್ಲಿ ಬೆಳೆದವಳು ನಾನು. ಶಿವಮೊಗ್ಗದ ಸಿರಿ, ಆ ಹಸಿರು ನನ್ನನ್ನು ವಶೀಕರಣ ಮಾಡಿತ್ತೆಂದರೂ ತಪ್ಪಿಲ್ಲ. ಅಮ್ಮ ಕನ್ನಡ ಶಾಲೆಯ ಟೀಚರ್. ಅಪ್ಪ ನಮ್ಮದೇ ಜಮೀನನನ್ನು ನೋಡಿಕೊಳ್ಳುತ್ತಿದ್ದರು. ಹೌದು ಅಪ್ಪ ವ್ಯವಸಾಯ ಮಾಡುತ್ತಿದ್ದರು. ಅಪ್ಪ ಅಮ್ಮನದು ಲವ್ ಮ್ಯಾರೇಜ್. ಅಮ್ಮ ಬಯಲುಸೀಮೆಯಿಂದ ಈ ಹಸಿರಿನ ನಾಡಿಗೆ ಶಿಕ್ಷಕಿಯಾಗಿ ಬಂದಾಗ ನಮ್ಮ ಮನೆಯಲ್ಲೇ ಬಾಡಿಗೆಗೆ ಇದ್ದರಂತೆ. ಆಗಲೂ ಅಪ್ಪ ವ್ಯವಸಾಯ ಮಾಡುತ್ತಿದ್ದರಂತೆ. ಅಪ್ಪನ ಶ್ರಮ, ದುಡಿದು ಉಣ್ಣುವ ಗುಣಕ್ಕೆ ಅಮ್ಮ ಅಪ್ಪನಿಗೆ ಸೋತಿದ್ದರು.
ಆದರೆ ತಮ್ಮ ಮಗಳು ಸರಕಾರಿ ಉದ್ಯೋಗದಲ್ಲಿದ್ದು ಹೀಗೆ ವ್ಯವಸಾಯ ಮಾಡುವವನನ್ನು ಮದುವೆ ಆಗುವುದು ಬೇಡ ಎಂದು ಅಮ್ಮನ ಹೆತ್ತವರು ವಿರೋಧಿಸಿದಾಗಲೂ ನನ್ನ ಅಮ್ಮನ ಆಯ್ಕೆ ಅಪ್ಪನೇ ಆಗಿತ್ತು.
ಇವತ್ತಿಗೂ ಊರಿನ ಎಲ್ಲರಿಗೂ ನನ್ನಮ್ಮನೆಂದರೆ ಗೌರವ ಜಾಸ್ತಿ. ಅಮ್ಮನ ಆಯ್ಕೆ ಸರಿಯಿತ್ತು ಎಂದು ಎಲ್ಲರಿಗೂ ಮದುವೆಯಾಗಿ ಕೆಲವೇ ದಿನಗಳಿಗೆ ಗೊತ್ತಾಗಿತ್ತು. ಶಾಲೆಗೆ ರಜೆ ಇದ್ದಾಗ ಅಮ್ಮನೂ ಅಪ್ಪನ ಜೊತೆ ಜಮೀನಿಗೆ ಹೋಗುತ್ತಿದ್ದರು. ದನ ಕರುಗಳಿಗೆ ಮೇವು ಹಾಕಿ ನೀರು ಕುಡಿಸುವುದನ್ನು ಕಲಿತಿದ್ದರು. ಅವರಿಬ್ಬರ ಒಬ್ಬಳೇ ಮುದ್ದಿನ ಮಗಳು ನಾನು ಶಾಂಭವಿ. ಅಮ್ಮನಂತೆ ನಾನು ಸಹ ಓದಿನಲ್ಲಿ ಮುಂದಿದ್ದೆ. ಅಪ್ಪನಂತೆ ಕಷಪಟ್ಟು ಓದಿದರೆ ನನ್ನ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿದಿದ್ದೆ. ವಿಧ್ಯಾಭ್ಯಾಸವೆಲ್ಲ ಶಿವಮೊಗ್ಗದಲ್ಲೇ ಮುಗಿಯಿತು. ನಾನು ಮದುವೆ ವಯಸ್ಸಿಗೆ ಬಂದುಬಿಟ್ಟೆ.
ಹೀಗೆ ನನಗೂ ಮದುವೆ ಮಾಡಲು ಅಪ್ಪ ಅಮ್ಮ ವರ ನೋಡುತ್ತಿದ್ದರು. ಅಪ್ಪ ಅಮ್ಮ ಎಂದೂ ನನ್ನ ವಿರುದ್ಧ ಅಧಿಕಾರ ಚಲಾಯಿಸುತ್ತಿರಲಿಲ್ಲ. ಬದಲಾಗಿ, ಮಗಳೇ ನಿನಗೆ ಯಾರಾದರೂ ಇಷ್ಟವಾಗಿದ್ದರೆ ತಿಳಿಸು ಹುಡುಗನ ಮನೆ ನೋಡಿ ಮದುವೆ ಮಾಡಿಸುತ್ತೇವೆ ಎಂದಿದ್ದರು. ನಾನು ಓದಿನ ಹೊರತಾಗಿ ಪ್ರೀತಿ ಪ್ರೇಮದಲ್ಲೆಂದೂ ಬೀಳಲಿಲ್ಲ. ಹಾಗಾಗಿ ಹುಡುಗನನ್ನು ನೋಡುವ ಕೆಲಸ ಅಪ್ಪ ಅಮ್ಮನಿಗೆ ವಹಿಸಿದ್ದೆ. ಅವರು ಸಹ ಉತ್ತಮ ಹುಡುಗನೆಂದು ಸಾಗರ್ ಎಂಬುವವನನ್ನು ಆಯ್ಕೆ ಮಾಡಿದ್ದರು. ನನಗೂ ಒಪ್ಪಿಗೆಯಾಗಿತ್ತು. ಅಡಿಕೆ ತೋಟವಿತ್ತು, ಗೊಬ್ಬರದ ಅಂಗಡಿಯಿತ್ತು. ನಾನು ಆಗಷ್ಟೇ ಶಿವಮೊಗ್ಗದಲ್ಲೇ ಕೆಲಸಕ್ಕೆ ಸೇರಿದ್ದೆ. ಮದುವೆ ನಂತರವೂ ಇದೇ ಹಸಿರು ನಾಡಲ್ಲಿ ಇರುವುದೇ ನಾನು ಸಾಗರನನ್ನು ಒಪ್ಪಲು ಕಾರಣವಾಗಿತ್ತು. ಮದುವೆಯೂ ಆಯಿತು.
ಮೊದಲ ರಾತ್ರಿಯೇ ನಾನು ಸಾಗರನನ್ನು ಕೇಳಿದ್ದೆ. ನೀನು ಬಿಡು ಎಂದರೆ ಕೆಲಸ ಬಿಟ್ಟು ನಿನ್ನ ಜೊತೆ ಜಮೀನಿನಲ್ಲಿ ಕೆಲಸ ಮಾಡುತ್ತೇನೆ, ನನಗೆ ಅಪ್ಪನೊಂದಿಗೆ ಜಮೀನಿನಲ್ಲಿ ಕೆಲಸ ಮಾಡಿದ ಅನುಭವಿದೆ ಎಂದಾಗ, ನನ್ನ ಮಾತಿಗೆ ಸಾಗರ್, ಬೇಡ ಬೇಡ ಅಷ್ಟೆಲ್ಲ ಓದಿ ಮಣ್ಣಲ್ಲಿ ಮಣ್ಣು ಹೊರುವುದಕ್ಕಾ ನಿನ್ನ ಮದುವೆಯಾಗಿದ್ದು? ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಅಪ್ಲೈ ಮಾಡಿದ್ದೆ. ಮುಂದಿನ ವಾರ ಸಂದರ್ಶನ ಇದೆ. ನಾನೇನಾದರೂ ಆಯ್ಕೆ ಆದರೆ ನಾನು ನೀನು ಬೆಂಗಳೂರಿಗೆ ಹೋಗಿ ಅಲ್ಲಿಯೇ ಜೀವನ ನಡೆಸೋಣ. ಇಬ್ಬರೂ ದುಡಿದರೆ, ನಾವು ಇನ್ನಷ್ಟು ಆರಾಮಾಗಿ ಐಷಾರಾಮಿ ಬದುಕನ್ನೇ ಕಾಣಬಹುದು ಎಂದಾಗ ನಾನು ಕುಸಿದಿದ್ದೆ. ಬೆಂಗಳೂರಿಗೆ ಹೋಗಲು ಮನಸ್ಸು ಎಷ್ಟು ಕೊರಗಿತ್ತೋ ಅದಕ್ಕೂ ಹೆಚ್ಚು ಕೊರಗಿದ್ದು ಸಾಗರ್ ಹೇಳಿದ ಇನ್ನೊಂದು ಮಾತಿನಿಂದ. ತನ್ನ ಗೊಬ್ಬರದ ಅಂಗಡಿ, ಅಡಿಕೆ ತೋಟ ಎಲ್ಲವನ್ನೂ ಮಾರಬೇಕು ಎಂದಿದ್ದು. ಇಷ್ಟು ಓದಿದರೂ ನಾನು ಸಾಗರನನ್ನು ಇಷ್ಟಪಟ್ಟಿದ್ದೆ ಅವನೊಂದಿಗೆ ಜೀವನ ಪರ್ಯಂತ ಈ ಹಸಿರಿನ ಮಡಿಲಲ್ಲಿ ನನ್ನ ಬದುಕು ಹಸನಾಗಲಿ ಎಂದು. ಭೂಮಿತಾಯಿಯ ಸಹವಾಸ ಕಳೆದುಕೊಳ್ಳಲು ನಾನು ಕನಸಲ್ಲೂ ಎಣಿಸಿರಲಿಲ್ಲ.
ನಾನೆಷ್ಟೇ ತಿಳಿಹೇಳಿದರೂ ಸಾಗರ್ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಈ ಭೂಮಿತಾಯಿಯನ್ನು ಬಿಟ್ಟು ದೂರದ ಬೆಂಗಳೂರಿಗೆ ಹೋಗುವ ಆ ಆಯ್ಕೆ ನನ್ನದಾಗಿರಲಿಲ್ಲ. ಇಷ್ಟು ದಿನ ಅನ್ನ ಕೊಟ್ಟ ಭೂಮಿತಾಯಿಯನ್ನು ಈಗ ನಮ್ಮ ಸ್ವಾರ್ಥಕ್ಕೆ ಬೇರೆಯವರಿಗೆ ಮಾರಿದ್ದರಿಂದ ಆ ಶಾಪ ನಮ್ಮ ಹಿಂದೆಯೇ ಬಂತು ಅನ್ಸತ್ತೆ.
ಬೆಂಗಳೂರಿಗೆ ಬಂದು ನಾಲ್ಕೈದು ವರ್ಷಗಳು ಆಗಿತ್ತು ಅಷ್ಟೇ. ಮಾರಿದ ದುಡ್ಡಲ್ಲಿ ಒಂದು ಮನೆಯಾದರೂ ಕೊಳ್ಳೋಣ ಎಂದು ಸಾಗರನನ್ನು ಒತ್ತಾಯ ಮಾಡಿದೆ. ಗೆಳೆಯರ ಮಾತಿಗೆ ಮರುಳಾಗಿ ಗೊತ್ತಿಲ್ಲದ ಜಾಗಗಳಲ್ಲಿ ಹಣ ದುಪ್ಪಟ್ಟು ಮಾಡುವ ಹುಚ್ಚಿಗೆ ಬಿದ್ದು ಇದ್ದ ದುಡ್ಡನ್ನು ಕಳೆದುಕೊಂಡ. ಆ ಆಯ್ಕೆಯು ನನ್ನದಾಗಿರಲಿಲ್ಲ. ಈ ಮಧ್ಯೆ ನಾವಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದೆವು. ಹಳಿ ತಪ್ಪುತ್ತಿದ್ದ ಸಂಸಾರವನ್ನು ದಡ ಸೇರಿಸಬೇಕೆಂದರೆ ಮನೆಗೊಂದು ಮಗು ಬಂದರೆ ಗಂಡನ ವರ್ತನೆ ಬದಲಾಗಬಹುದೆಂದು ಇಚ್ಚಿಸಿದೆ. ತಾಯಿಯೂ ಆಗುವವಳಿದ್ದೆ. ಇದು ಮಾತ್ರ ನನ್ನ ಆಯ್ಕೆಯೇ ಆಗಿತ್ತು . ಮತ್ತೆ ಸಾಗರ್ ಕೊಂಕು ತೆಗೆದ. ನಾವು ಒಂದು ಹಂತಕ್ಕೆ ಬರುವರೆಗೂ ಮಕ್ಕಳು ಬೇಡ, ಮಕ್ಕಳಾದರೆ ನೀನು ಕೆಲಸ ಬಿಡಬೇಕಾಗುತ್ತದೆ. ನನ್ನೊಬ್ಬನಿಗೆ ದುಡಿಯುವುದು ಕಷ್ಟ ಆಗುತ್ತೆ. ಇನ್ನೊಂದು ಮೂರ್ನಾಲ್ಕು ವರ್ಷ ಮಕ್ಕಳು ಬೇಡ, ಭ್ರೂಣ ತೆಗೆಸಿಬಿಡು ಎಂದು ಹಠಕ್ಕೆ ಬಿದ್ದ. ಇಲ್ಲದಿದ್ದರೆ ನಾನು ಮನೆ ಬಿಟ್ಟು ಹೋಗುವೆ ಎಂದ. ತಾಯಿಯಾಗಿ ನನ್ನ ಮಗುವನ್ನು ಕೊಲ್ಲುವ ಮನಸ್ಸು ಹೇಗೆ ಮಾಡಲಿ. ಭ್ರೂಣಹತ್ಯೆ ನನ್ನ ಆಯ್ಕೆ ಆಗಿರಲಿಲ್ಲ. ಇವೆಲ್ಲ ಜಂಜಾಟಗಳು ಬೇಡವೆಂದು ಹೆತ್ತವರಿಗೂ ಹೇಳದೇ ಕೊನೆಯುಸಿರೆಳೆಯುವ ವಿಫಲ ಪ್ರಯತ್ನ ಮಾಡಿ ಬದುಕಿದೆ. ಕಂದನನ್ನು ಕಳೆದುಕೊಂಡೆ !
ಕಂದನ ಆ ಶಾಪವೂ ನಮ್ಮ ಹಿಂದೆ ಬಂತು. ದಿನೇ ದಿನೇ ನಮ್ಮಲ್ಲಿ ಪ್ರೀತಿ ಸತ್ತು ಹೋಗುತ್ತಿತ್ತು. ಅವನು ಕುಡಿತದ ದಾಸನಾದ. ನಾನು ಉಳಿಸಿದ್ದ ದುಡ್ಡು ಈಗ ಬಳಸಬೇಕಿತ್ತು. ನಮ್ಮ ಸಮಯ ಕೆಟ್ಟು ಕೊರೋನಾ ಕಾರಣದಿಂದಾಗಿ ಮೂರು ತಿಂಗಳು ಲಾಕ್ ಡೌನ್ ಆಗಿ ಜೀವನ ಇನ್ನೂ ಅತಂತ್ರವಾಯಿತು ಅಪ್ಪ ಅಮ್ಮನಿಗೆ ಎಲ್ಲವನ್ನೂ ಹೇಳಿದೆ. ಅಪ್ಪ ದುಡ್ಡು ಕಳಿಸಿದರೂ ಸಾಗರ್ ಮಾಡಿದ ಸಾಲಕ್ಕೆ ಹೋಗುತ್ತಿತ್ತು.
ಜೀವನ ತೀರ ಕಷ್ಟವಾದಾಗ ಸಾಗರನಿಗೆ ತನ್ನ ಆಯ್ಕೆ ತಪ್ಪಾಗಿತ್ತು ಎಂದು ಎನಿಸಿತೇನೋ ಗೊತ್ತಿಲ್ಲ. ಒಂದು ದಿನ ನನ್ನ ಬಳಿ ಬಂದು 'ಶಾಂಭವಿ ನಾನು ಜಮೀನು ಮಾರಬಾರದಾಗಿತ್ತು. ಭೂಮಿತಾಯಿಯ ಸೇವೆ ಮಾಡಿಕೊಂಡು ನೀನು ಹೇಳಿದಂತೆ ನಾವು ಅಲ್ಲೇ ಇದ್ದಿದ್ದರೆ ನಮ್ಮ ಜೀವನ ಇವತ್ತು ಎಷ್ಟೋ ಸುಂದರವಾಗಿರುತ್ತಿತ್ತು. ಕಡೆ ಪಕ್ಷ ನಿನ್ನ ಮಾತಿನಂತೆ ಆ ದುಡ್ಡಲ್ಲಿ ಒಂದು ಮನೆಯಾದರೂ ಕೊಂಡುಕೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ತುಂಬ ಗೋಳಾಡಿದ.
ನಾನು ಅವನ ಎದುರಿಗೆ ನನ್ನ ತಂದೆ ತಾಯಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿ ಮತ್ತೆ ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿದೆ. ಒಬ್ಬಳೇ ಮಗಳಾದ್ದರಿಂದ ಅಪ್ಪ ಅಮ್ಮ ತಮ್ಮ ಮನೆ ಜಮೀನನ್ನು ನಮಗಾಗಿ ಇಟ್ಟಿದ್ದರು. ಮತ್ತೆ ಹಸಿರಿನ ಮಧ್ಯೆ ಅರಳುವ ಹೂವಾಗುವ ಕನಸಿನೊಂದಿಗೆ ಮಲಗಿದೆ. ಬೆಳಿಗ್ಗೆ ಚೆಲ್ಲಿದ ಮಾತ್ರೆಗಳನ್ನು ನೋಡುತ್ತಲೇ ಕೋಣೆಯಿಂದ ಆಚೆ ಬಂದರೆ ಸಾಗರ್ ನಿಶ್ಚಲನಾಗಿ ಬಿದ್ದಿದ್ದ . ನನ್ನ ಕನಸು ಮೊಗ್ಗಾಗಿಯೇ ಉಳಿಯಿತು. ಅವನೆದೆಗೆ ಕಿವಿಯಿಟ್ಟೆ, ನನಗಂತೂ ಅವನ ಎದೆಬಡಿತ ಕೇಳದಷ್ಟು ನನ್ನ ಕಿವಿಗಳು ಸೂಕ್ಷ್ಮವಾಗಿದ್ದವು.
(ಕಾಲ್ಪನಿಕ )
