Vaman Acharya

Comedy Drama Classics

4.3  

Vaman Acharya

Comedy Drama Classics

ಸೊಪ್ಪು ಮಾರುವವರ ಜೊತೆ ಹಾಸ್ಯ ಕತೆ

ಸೊಪ್ಪು ಮಾರುವವರ ಜೊತೆ ಹಾಸ್ಯ ಕತೆ

2 mins
476


"ಸೊಪ್ಪು, ಸೊಪ್ಪು"

 ಎಂದು ಕೂಗುತ್ತ  ನಿಂಗಪ್ಪ ಬೆಳಗಿನ ಎಂಟು ಗಂಟೆಗೆ ಸರಿಯಾಗಿ ನಮ್ಮ ಮನೆ ಗೇಟ್ ಬಳಿ ಬರುವ ಸಮಯ. ಅವನು ಚಂದನಪುರ ಗ್ರಾಮದಿಂದ ಮೂರು ಕಿಲೋಮೀಟರು ದೂರ ಇರುವ ರಾಘವಪುರ ನಗರಕ್ಕೆ ತುಂಬಾ ಹಳೆ ಸಾಯಕಲ್ ಮೇಲೆ ಮುಂದೆ ಹಿಂದೆ ದೊಡ್ಡ ದೊಡ್ಡ ತರಕಾರಿ ತುಂಬಿದ ಚೀಲಗಳನ್ನು ಇಟ್ಟುಕೊಂಡು ಬರುವನು.  ಮಧ್ಯ ದಲ್ಲಿ ಅವನ ಸೀಟ್. ಅದರಲ್ಲಿಯೇ ಕುಡಿಯುವ ನೀರಿನ ಬಾಟಲ್. ಅಂದು ಅವನು ಬೇಗನೆ ವ್ಯಾಪಾರ ಮುಗಿಸುವ ಅವಸರದಲ್ಲಿ ಇರುವಾಗ ನಾನು ಬೇಕಾಗಿರುವ ಸೊಪ್ಪು ತೆಗೆದುಕೊಂಡು ದುಡ್ಡು ಕೊಟ್ಟು, 

"ಏನಯ್ಯಾ, ಈ ಮುರುಕಲು ಹಳೆಯ ಸಾಯಕಲ್ ಮೇಲೆ ಇಷ್ಟು ಭಾರವಾದ ಸೊಪ್ಪು ತುಂಬಿ ಗಂಟಲು ಕೆರೆಯುವ ಹಾಗೆ ಜೋರಾಗಿ ಕೂಗುತ್ತಿ. ಈ ಮುದಿ ವಯಸ್ಸಿನಲ್ಲಿ ಇಂಥ ಕೆಲಸ ನಿನಗೆ ಬೇಕಾ? ಉಳಿದ ವ್ಯಾಪಾರಿಗಳು ಎಷ್ಟು ಮುಂದುವರೆದಿದ್ದಾರೆ ಗೊತ್ತಾ? ಅವರೆಲ್ಲ ತೆರೆದ ಆಟೋ ದಲ್ಲಿ ರೆಕಾರ್ಡೆಡ್ ಮೈಕ್ ಫಿಕ್ಸ್ ಮಾಡಿರುವರು. ನಡು ನಡುವೆ ಚಲನಚಿತ್ರ ಹಾಡು ಹಾಕುವರು.  ಯಾವ ತರಹದ ಶ್ರಮ ಇಲ್ಲದೆ ಬಹಳಷ್ಟು ಮನೆಗೆ ಭೇಟಿ ಕೊಟ್ಟು ವ್ಯಾಪಾರ ಸಕತ್ ಮಾಡಿ ಹೆಚ್ಚಿಗೆ ಹಣ ಸಂಪಾದನೆ ಮಾಡಿಕೊಳ್ಳುವರು. ನೀನು ಹಾಗೆ ಮಾಡು," ಎಂದಾಗ ಅವನ ಉತ್ತರ ಕೇಳಿ ಚಕಿತನಾದೆ.

"ಸ್ವಾಮಿ, ಅದೆಲ್ಲ ನಮಗೇಕೆ?  ಚಂದನ ಹಳ್ಳಿಯಲ್ಲಿ ಒಂದು ಎಕರೆ ನೀರಾವರಿ ಜಮೀನು ಇದೆ. ವರ್ಷದಲ್ಲಿ ಎರಡು ಬೆಳೆ ಬರುತ್ತದೆ. ಇಷ್ಟೆಲ್ಲ ಇದ್ದರೂ ಸೊಪ್ಪು ಮಾರುವದು ಬಿಡುವ ಹಾಗಿಲ್ಲ. ನಮ್ಮಪ್ಪ ಸಾಯುವಾಗ ಎಷ್ಟೇ ಶ್ರೀಮಂತನಾದರೂ  ಸೊಪ್ಪು ಮಾರುವದನ್ನು ಬಿಡಬಾರದು. ಆಟೋಕ್ಕಾಗಲಿ,  ಮೈಕ್ ಗಾಗಲಿ ವ್ಯರ್ಥ ಖರ್ಚು ಮಾಡಬೇಡ ಎಂದು ವಚನ ತೆಗೆದುಕೊಂಡು ಜೀವ ಬಿಟ್ಟ. ಏಕೆಂದರೆ ಇದು ನಮ್ಮ ಮುತ್ತಾತನಿಂದ ಬಂದ ವ್ಯಾಪಾರ. ಅದನ್ನು ಈಗ ನಾನು ಹಾಗೂ ನನ್ನ ಮಗ ಹಾಗೆ ಮುಂದುವರೆಸಿ ದ್ದೇವೆ," ಎಂದು ಹೇಳಿ ಸಾಯಕಲ್ ಪೆಡಲ್ ಹೊಡೆದು ಹೊರಟೇ ಬಿಟ್ಟ.

ಅದೇ ಸಮಯದಲ್ಲಿ ಅವನ ಮಗ ಯುವಕ ನಾಗಪ್ಪ ಬಂದ. ಅಪ್ಪನಂತೆ ಮಗ ಹಳೆ ಸಾಯಕಲ್ ಹಿಂದೂ ಮುಂದೂ ಸೊಪ್ಪಿನ ಚೀಲಗಳು. ವ್ಯತ್ಯಾಸ ಅಂದರೆ ಕೂಗುವದಕ್ಕೆ ಒಂದು ತಗಡಿನ ಉಪಕರಣ. ಸಿಳ್ಳೆ ಹೊಡೆಯುತ್ತಾ, ಹಾಡು ಹಾಡುತ್ತ ನೃತ್ಯ ಮಾಡುತ್ತ ಬರ್ರಿ ಅಮ್ಮ, ಬರ್ರಿ ಅಕ್ಕ, ಎಂದು ಜನರನ್ನು ಆಕರ್ಷಣೆ ಮಾಡುತ್ತಾ ಹೋಗುವನು. ನಾನು ಅಲ್ಲಿಯೇ ನಿಂತಿರುವದನ್ನು ನೋಡಿದ ನಾಗಪ್ಪ, 

"ನನ್ನ ಅಪ್ಪ ಹೇಳಿದ್ದು ನಿಜವೋ ಅಥವಾ ಸುಳ್ಳೋ?" ಎನ್ನುವ ಯೋಚನೆಯಲ್ಲಿ ಇದ್ದೀರಾ ಸಾರ್, ?" ಎಂದ ನನಗೆ. 

"ಹೌದಪ್ಪ." ಎಂದೆ.

"ಒಂದು ನಿಮಿಷ ನಿಲ್ಲಿ. ಅಪ್ಪ ಹೇಳೋದು ಅರ್ಧ ನಿಜ ಅರ್ಧ ಸುಳ್ಳು," ಎಂದ ನಗುತ್ತ.

ನನಗೂ ಕುತೂಹಲವಾಗಿ,

 "ಅದೇನಯ್ಯ ಬಿಡಿಸಿ ಹೇಳು?" ಎಂದೆ. 

"ಒಂದು ಎಕರೆ ಭೂಮಿ ಹಾಗೂ ಬಾವಿ ಇರುವದು ನಿಜ. ಆದರೆ ನೀರಾವರಿ ಇಲ್ಲ. ಹಾಳು ಬಿದ್ದ ಬಾವಿ ಇದೆ. ಬರಡು ಭೂಮಿ ಇರುವದರಿಂದ ವರ್ಷದಲ್ಲಿ ಒಂದೇ ಬೆಳೆ ಮಳೆ ಬಂದರೆ ಬೆಳೆ. ಇಲ್ಲ ಎಂದರೆ ಅದು ಇಲ್ಲ.  ಅಜ್ಜನು ಅಪ್ಪನಿಂದ ವಚನ ತೆಗೆದು ಕೊಂಡಿರುವದು ನಿಜ. ಆದರೆ ವ್ಯಾಪಾರ ವೃದ್ಧಿ ಮಾಡಲು ತೆರೆದ ಆಟೋ, ಮೈಕ್ ಮಾಡಬೇಡ ಎಂದು ಹೇಳಿಲ್ಲ. ನಮಗೆ ಭೂಮಿಯನ್ನು ಸಾಗುವಳಿ ಮಾಡಲು ಆಗುವದಿಲ್ಲ ಎಂದು ಇನ್ನೊಬ್ಬರಿಗೆ ಅದನ್ನು ವಹಿಸಿ ಅದಕ್ಕಾಗಿ ಒಪ್ಪಂದ ಆಗಿದೆ. ಇದು ನಮ್ಮ ಜಮೀನಲ್ಲಿ ಬೆಳೆದ ಸೊಪ್ಪು ವ್ಯಾಪಾರ ಮಾಡುತ್ತಿದ್ದೇವೆ." ಎಂದು ಸಾಯಕಲ್ ಅಡ್ಡ ತಿಡ್ಡ ಓಡಿಸುತ್ತ ಹೋಗಿಯೇ ಬಿಟ್ಟ.

ಹಿಂದೆ ಬಂದ ನನ್ನ ಮಡದಿ,

"ಸೀತಾಪತಿ ಅವರೇ, ನಿಮಗೆ ಬೇರೆ ಕೆಲಸ ಇಲ್ಲವೇ? ಬೆಳಗಿನ ಸಮಯ ಸೊಪ್ಪಿನವರ ಕಥೆ ಕೇಳಿ ನಿಮಗೇನಾಗಬೇಕಾಗಿದೆ? ನೀವು ಬ್ಯಾಂಕ್ ನಲ್ಲಿ ಮಾಡಿದ ಕಿತಾಪತಿ ಸೊಪ್ಪಿನವರಿಗಿಂತಲೂ ಭಿನ್ನ ಇದ್ದರೂ  ಅದು 'ಸೀತಾಪತಿಯ ಕಿತಾಪತಿ' ಎಂದೆ ಪ್ರಸಿದ್ಧವಾಯಿತು. ಸುಮ್ಮನೆ ಒಳಗೆ ಬನ್ನಿ," ಎಂದಳು ಜೋರಾಗಿ ಪತ್ನಿ ಸೀತಾ ಅದು ರಸ್ತೆ ಮೇಲೆ.

ಪುಣ್ಯಕ್ಕೆ ರಸ್ತೆ ಮೇಲೆ ನಾವಿಬ್ಬರು ಬಿಟ್ಟರೆ ಬೇರೆ ಯಾರೂ ಇದ್ದಿಲ್ಲ. 

"ಆಯಿತು ಒಳಗೆ ಬಂದೆ' ಎಂದೆ ನಗುತ್ತ. 

ಬೆಳಗಿನ ಸಮಯ ಮಡದಿ ಬಯ್ದರೆ ಒಳ್ಳೇದಾಗುವದು ತಲೆ ಕೆಡಿಸಿಕೊಳ್ಳಬೇಡ ಎಂದು ಯಾರೋ ಹೇಳಿದ್ದು ನೆನಪು ಬಂದು  ಮನಸ್ಸಿನಲ್ಲಿ ಸಮಾಧಾನ ಮಾಡಿಕೊಂಡೆ.

 



Rate this content
Log in

Similar kannada story from Comedy