Vijaya Bharathi.A.S.

Abstract Tragedy Others

3  

Vijaya Bharathi.A.S.

Abstract Tragedy Others

ಶ್ವೇತಾಂಬರಿ

ಶ್ವೇತಾಂಬರಿ

2 mins
6


ಶ್ವೇತಾಂಬರಿ 

ಕಲ್ಯಾಣೀ ಒಬ್ಬ ಕಲಾವಿದೆ.  ಸರಸ್ವತೀ ಪುತ್ರಿ. ಕರ್ನಾಟಕ ಸಂಗೀತದಲ್ಲಿ ಅವರು ಮಾಡಿರುವ ಜೀವಮಾನ ಸಾಧನೆಗೆ ರಾಷ್ಟ್ರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ದೊರಕಿದಾಗ ಅವರಿಗೆ ಎಂಭತ್ತರ ಹರಯ. ಈ ಇಳಿವಯಸ್ಸಿನಲ್ಲಿಯಾದರೂ ತಾನು ರಾಷ್ಟ್ರಪತಿಯವರಿಂದ ಪ್ರಶಸ್ತಿ ತೆಗೆದುಕೊಳ್ಳುವಂತಾಯಿತಲ್ಲ ಎಂಬ ಸಾತ್ವಿಕ ಗರ್ವ. ದೇಶದ ಒಂದು ಸಣ್ಣ ಪಟ್ಟಣ ರಾಮ್ ಪುರದಿಂದ ನವದೆಹಲಿಗೆ ಹೊರಡಬೇಕಾಗಿತ್ತು. ಆದರೆ ಅವಳು ಹೆತ್ತ ಮಕ್ಕಳಿಬ್ಬರೂ ದೂರದ ಅಮೇರಿಕೆಯಲ್ಲಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದಾರೆ. ತಮ್ಮದೇ ಸ್ವಂತ ಮನೆಯಲ್ಲಿ , ಒಬ್ಬಂಟಿಯಾಗಿ ಸ್ವತಂತ್ರವಾದ ಜೀವನ ನಡೆಸುತ್ತಿದ್ದಾರೆ. ಅವರ ಶಿಷ್ಯರು ಅವರಿಗೆ ಸಹಕಾರ ನೀಡುತ್ತಾ  ತಮ್ಮ ಕೈಲಾದಷ್ಟು ಗುರು ಸೇವೆ ಮಾಡುತ್ತಿರುವುದರಿಂದ, ಅವರಿಗೆ ತಾವು ಒಂಟಿ ಎಂದು ಎಂದಿಗೂ ಅನ್ನಿಸುವುದಿಲ್ಲ.  ಅವರ ಈ ಕೆಚ್ಚನ್ನು ನೋಡುವ ಆ ಊರಿನವರಿಗೆ ಅವರ ಬಗ್ಗೆ ಆಶ್ಚರ್ಯವೂ ಆಗದೇ ಇಲ್ಲ. 
ಈ ಇಳಿ ವಯಸ್ಸಿನಲ್ಲಿ ತನಗೆ ಬಂದಿರುವ ಈ ಅತ್ಯುನ್ನತ ಪ್ರಶಸ್ತಿಯ ಬಗ್ಗೆ ಹೆಮ್ಮೆ ಎನಿಸಿದರೂ, ಕೈಲಾಗದೇ ಇರುವ ಈ ಕಾಲಮಾನದಲ್ಲಿ ತಾವೊಬ್ಬರೇ ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸುವುದಾದರೂ ಸಾಧ್ಯವೇ? ಎಂದು ಕಲ್ಯಾಣಿ ಯೋಚಿಸುತ್ತಿದ್ದಾಗ, ಅದೇ ಊರಿನಲ್ಲಿರುವ ಅವರ ಅಕ್ಕನ ಮಗ ಅವರನ್ನು ದೆಹಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದಾಗ, ಅವರ ಮನಸ್ಸಿಗೆಷ್ಟೋ ಸಮಾಧಾನವಾಗುತ್ತದೆ. 
ದೆಹಲಿಗೆ ಹೊರಡುವ ಹಿಂದಿನ ದಿನ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಳ್ಳಲು ತಮ್ಮ ಬೀರುವನ್ನು ತೆಗೆದಾಗ, 
ಅವರಿಗೆ ಯಾವ ಸೀರೆ ಇಟ್ಟುಕೊಳ್ಳಬೇಕೆಂದೇ ಗೊತ್ತಾಗದೇ ಒಂದು ಕ್ಷಣ ಹಾಗೆ ನಿಂತು ಬಿಡುತ್ತಾರೆ.  ಇಡೀ ಬೀರುವಿನ ಹ್ಯಾಂಗರ್ ಗಳಲ್ಲಿ, ಬಿಳಿಯ ಬಣ್ಣದ ಮೇಲೆ ಚಿತ್ತಾರವಿರುವ ಸೀರೆಗಳೇ ಕಾಣುತ್ತವೆ. ಅವರ ಬೀರುವಿನ ಭರ್ತಿ ಇರುವ ಸೀರೆಗಳೆಲ್ಲವೂ ಬಿಳಿಯ ಬಣ್ಣದ್ದವೇ ಆಗಿರುವುದರಿಂದ, ಯಾವ ಸೀರೆ ಉಟ್ಟರೂ ಒಂದೇ ಎನ್ನುವ ತೀರ್ಮಾನಕ್ಕೆ ಬಂದು, ಬಿಳಿಯ ಧರ್ಮಾವರಮ್ ಸೀರೆಗೆ ಕೆಂಪು ಅಂಚು ಮತ್ತು ಸೆರಗಿರುವ 
ಸೀರೆಯನ್ನು ತೆಗೆದು ಇಟ್ಟು ಕೊಳ್ಳುತ್ತಾರೆ. ಇನ್ನೆರಡು ಬಿಳಿಯ ಬಣ್ಣದ ಮೇಲೆ ಹಸಿರು ,ನೇರಳೆ ಬಣ್ಣಗಳ ಚಿತ್ತಾರವಿರುವ ಸೀರೆಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ.    
ತಮ್ಮ ಅಕ್ಕನ ಮಗನ ಜೊತೆ ದೆಹಲಿಗೆ ಹೊರಟ ಕಲ್ಯಾಣಿಯವರ ಜೊತೆ ,ಅವರ ಆಪ್ತ ಶಿಷ್ಯೆಯರಾದ ಗೀತ ಮತ್ತು ಗಾಯತ್ರಿ ಇಬ್ಬರೂ ಹೊರಡುತ್ತಾರೆ. ವಯೋ ಸಹಜವಾದ ಆಯಾಸದಿಂದ ಬಳಲುತ್ತಿದ್ದ ಕಲ್ಯಾಣಿಯವರಿಗೆ ಇವರಿಬ್ಬರೂ ಜೊತೆಗೆ ಬರುತ್ತಿರುವುದು ಎಷ್ಟೋ ಧೈರ್ಯ. 

ನಿಗಧಿತ ಸಮಯಕ್ಕೆ ದೆಹಲಿಯನ್ನು ತಲುಪಿ, ಸನ್ಮಾನ ನಡೆಯುವ ರಾಷ್ಟ್ರಪತಿ ಭವನಕ್ಕೆ ಬಂದ ಕಲ್ಯಾಣಿಯವರಿಗೆ ಅಲ್ಲಿಯ ವ್ಯವಸ್ಥೆಗಳನ್ನು ನೋಡಿ, ರೋಮಾಂಚನವಾಗುತ್ತದೆ. ಕಡೆಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ಸಾಧನೆಗೆ ಗೌರವ ಹಾಗೂ ಪುರಸ್ಕಾರಗಳು ಸಿಕ್ಕಿತಲ್ಲಾ ಎಂದು ಮನಸ್ಸಿನಲ್ಲೇ ಖುಷಿ ಪಡುತ್ತ, ತಮ್ಮ ಸೀಟ್ ನಲ್ಲಿ ಹೋಗಿ ಕುಳಿತು ಕೊಳ್ಳುತ್ತಾರೆ. ದೇಶದ ಅತ್ಯುನ್ನತ ಪದವಿಯಲ್ಲಿರುವ ಸಚಿವರು ಹಾಗೂ ಇತರ ಗಣ್ಯರುಗಳ ಸಮ್ಮುಖದಲ್ಲಿ ತಾವು ಪ್ರಶಸ್ತಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ,ತಾನು ಹೆತ್ತ ಮಕ್ಕಳೇ ತನ್ನ ಬಳಿ ಇಲ್ಲವಲ್ಲ ಎಂದು ಕಲ್ಯಾಣಿಯವರಿಗೆ ಮನಸ್ಸು ಖಿನ್ನವಾಗುತ್ತದೆ. 

ಬಿಳಿಯ ಬಣ್ಣದ ಒಡಲಿಗೆ ಕೆಂಪು ಬಣ್ಣದ ಅಂಚಿರುವ  ಧರ್ಮಾವರಂ ಸೀರೆಯುಟ್ಟು, ಬಿಳಿಯ ಕೂದಲನ್ನು ಎತ್ತಿ ತುರುಬು ಕಟ್ಟಿ,  ಹಣೆಗೆ ಅಗಲವಾದ ಕೆಂಪು ಕುಂಕುಮ ಇಟ್ಟುಕೊಂಡು, ಕಣ್ಣಿಗೆ ಬಿಳಿಯ ಫ಼್ರೇಂ ನ ಕನ್ನಡಕ ಧರಿಸಿದ ಕಲ್ಯಾಣಿಯವರು ಅತ್ಯಂತ ಗಂಭೀರವಾಗಿ   ನಿಧಾನವಾಗಿ ಹೆಜ್ಜೆ ಹಾಕುತ್ತಾ ವೇದಿಕೆಯ ಕಡೆ ಹೋಗುತ್ತಿದ್ದರೆ, ಸಭಿಕರೆಲ್ಲರೂ ಈ ಶ್ವೆತಾಂಬರಿಯನ್ನೇ   ನೋಡುತ್ತಿದ್ದರು. ರಾಷ್ಟ್ರಪತಿಯವರಿಂದ ಪದ್ಮಶ್ರೀ ಪದಕವನ್ನು ಪಡೆದು, ಎಲ್ಲರಿಗೂ ಕೈ ಮುಗಿದಾಗ,  ಈ ಗಾನ ಸರಸ್ವತಿಯನ್ನು ನೋಡಿ ಸಭೆಯಲ್ಲಿ ಜೋರಾಗಿ ಕರತಾಡನವಾಯಿತು. 
ಪ್ರಶಸ್ತಿ ಪಲಕಗಳನ್ನು ತೆಗೆದುಕೊಂಡು ಬಂದು ತಮ್ಮ ಸೀಟಿನಲ್ಲಿ ಕುಳಿತ ಕಲ್ಯಾಣಿಯವರು, ಸಭೆ ಮುಗಿಯುವ ವೇಳೆಗೆ ನಿಶ್ಚಲವಾಗಿದ್ದರು. ಎಲ್ಲವೂ ಮುಗಿದು ಇವರನ್ನು ಎಬ್ಬಿಸಿಕೊಂಡು ಹೊರಡುವುದಕ್ಕೆ ಹತ್ತಿರ ಬಂದ ಗೀತ ಮತ್ತು ಗಾಯತ್ರಿಗೆ ಇವರು ಕಡೆದ ಶಿಲ್ಪದಂತೆ ಕುಳಿತಿರುವುದನ್ನು ನೋಡಿ, ಆತಂಕವಾಗಿ, ಕೂಡಲೇ ಅಲ್ಲೇ ಸ್ವಲ್ಪದೂರದಲ್ಲಿ ಕುಳಿತಿದ್ದ ಕಲ್ಯಾಣಿಯವರ ಅಕ್ಕನ ಮಗನನ್ನು ಕರೆದುಕೊಂಡು ಬಂದರು. ಕಲ್ಯಾಣಿಯವರನ್ನು ನೋಡಿ ಅವರೆಲ್ಲರಿಗೂ ಅನುಮಾನ ಬಂದು  ಅವರನ್ನು  ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆ ವೇಳೆಗೆ ಎಲ್ಲವೂ ಮುಗಿದು ಹೋಗಿತ್ತು. ಶ್ವೇತಾಂಬರಿಯ ಆತ್ಮ 
ಆ ಶಾರದೆಯ ಕಂಠದಲ್ಲಿ ಹೋಗಿ ಸೇರಿತ್ತು.   

ವಿಜಯಭಾರತೀ ಎ.ಎಸ್.
---------------------------------------------------------------------------------------------------------------------


Rate this content
Log in

Similar kannada story from Abstract