ಕನಸಿನಲ್ಲಿ ಬಂದವನು
ಕನಸಿನಲ್ಲಿ ಬಂದವನು
ಕನಸಿನಲ್ಲಿ ಬಂದವನು.
ಅವಳು ಸ್ವಪ್ನ. ಇತ್ತೀಚೆಗೆ ರಾತ್ರಿಯ ವೇಳೆ ಒಂದೇ ರೀತಿಯ ಕನಸು. ಅದೂ ಆ ಕನಸಿನ ನೆನಪು ಅವಳ ಮಸ್ಠಿಷ್ಕದಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತಿತ್ತು. ಪ್ರತಿದಿನ ವೂ ತನ್ನ ಕನಸಿನಲ್ಲಿ ಬರುವ ಆ ಚೆಲುವ ಯಾರು? ಅವಳಿಗೆ ಅರ್ಥವಾಗುತ್ತಿರಲಿಲ್ಲ. ಆದರೂ ಅವಳಿಗೆ ಆ ಕನಸೆಂದರೆ ತುಂಬಾ ಇಷ್ಟವಾಗುತ್ತಿತ್ತು. ಹೀಗಾಗಿ ಅವಳು ತುಂಬಾ ಬೇಗ ನಿದ್ರೆಗೆ ಜಾರುತ್ತಿದ್ದಳು. ಎಷ್ಟೋ ಸಲ ಅವಳು ತನ್ನ ಅಮ್ಮನಿಂದ ಓದುವುದರ ಕಡೆ ಗಮನ ಕೊಡದೇ ಬೇಗ ಮಲಗಿ ಬಿಡುವ ಬಗ್ಗೆ ಬೈಸಿಕೊಂಡಿರುವುದೂ ಇದೆ. ಅವಳಿಗೆ ತನ್ನ ಕನಸಿನ ಚೆಲುವನ ಬಗ್ಗೆ ತನ್ನ ಆಪ್ತ ಗೆಳತಿ ವಿಂಧ್ಯಳ ಜೊತೆಯೂ ಹೇಳಿಕೊಳ್ಳುವುದಕ್ಕೆ ಏನೋ ಒಂದು ರೀತಿ ಸಂಕೋಚ ವಾಗುತ್ತಿತ್ತು.
ಸ್ವಪ್ನಾಳಿಗೆ ಕನಸಿನಲ್ಲಿ ಬರುವ ಆ ಚೆಲುವನ ಜೊತೆಗೆ ಕಲ್ಪಾನ ಲೋಕದಲ್ಲಿ ವಿಹರಿಸುತ್ತಾ, ತನ್ನ ಕನಸಿನ ರಾಜ ಕುಮಾರನಿಗಾಗಿ ಕಾಯುತ್ತಿದ್ದಳು. ಹೀಗೆ ಬೀಳುತ್ತಿದ್ದ ಕನಸು ಇದ್ದಕ್ಕಿದ್ದಂತೆ ನಿಂತು ಹೋದಾಗ, ಸ್ವಪ್ನ ಏನೋ ಕಳೆದುಕೊಂಡವಳಂತೆ
ತುಂಬಾ ಮಂಕಾಗಿರುತ್ತಿದ್ದಳು. ಆಗೆಲ್ಲಾ ಅವಳ ಅಮ್ಮ ಅವಳನ್ನು ಬಯ್ದು, ಮುಂದೆ ಬರುವ ಫ಼ೈನಲ್ ಡಿಗ್ರಿ ಪರೀಕ್ಷೆಗೆ ಚೆನ್ನಾಗಿ ಓದುವಂತೆ ಬಲವಂತ ಮಾಡುತ್ತಿದ್ದಳು.
ಪರೀಕ್ಷೆಗಳು ಹತ್ತಿರವಾಗುತ್ತಾ ಬಂದಂತೆ ಅವಳು ನಿದ್ರೆಗೆಟ್ಟು ಓದಲು ಪ್ರಾರಂಭಿಸಿದ್ದರಿಂದ, ಆ ಕನಸು, ಕನಸಿನಲ್ಲಿ ಬರುವ ಆ ಚೆಲುವ ಎಲ್ಲವೂ ಅವಳ ಮಸ್ಟಿಷ್ಕದಿಂದ ದೂರವಾಗುತ್ತಾ ಹೋದವು.
ಸ್ವಪ್ನಾಳ ಫ಼ೈನಲ್ ಬಿ.ಎಸ್.ಸಿ. ಮುಗಿದು ಅವಳಿಗೆ ಉದ್ಯೋಗವೂ ದೊರಕಿದಾಗ, ಅವಳು ತನಗೆ ಬೀಳುತ್ತಿದ್ದ ಕನಸುಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗುತ್ತಿದ್ದಳು. ಅವಳ ಮದುವೆ ಮಾಡುವುದಕ್ಕೆ ಸ್ವಪ್ನಾಳ ಅಮ್ಮ ಅಪ್ಪ ಹುಡುಗರನ್ನು ಹುಡುಕಲು ಪ್ರಾರಂಭಿಸಿದರು. ಅವಳ ಮದುವೆಗಾಗಿ ಹುಡುಗರನ್ನು ನೋಡುವ ಇಂಟರ್ವ್ಯೂಗಳು ಶುರುವಾದವು.
ಅವಳಿಗೆ ಯಾವ ಹುಡುಗನೂ ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಬರುವ ಹುಡುಗ ರ್ಯಾರೂ ಅವಳ ಕನಸಿನಲ್ಲಿ ಬರುತ್ತಿದ್ದ ಆ ರಾಜಕುಮಾರನಾಗಿರಲಿಲ್ಲ. ಅವಳ ಮನಸ್ಸಿನ ಮೂಲೆಯಲ್ಲಿ ಆ ಕನಸಿನ ಚೆಲುವ ಅಚ್ಚೊತ್ತಿಬಿಟ್ಟಿದ್ದ.
ಸ್ವಪ್ನಳ ಅಮ್ಮನಿಗೂ ಮಗಳ ಮನಸ್ಸಿನಲ್ಲೇನಿದೆ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಅವಳು ಯಾಕೆ ಬಂದ ಯಾವ ಹುಡುಗನನ್ನೂ ಒಪ್ಪಿಕೊಳ್ಳುತ್ತಿಲ್ಲ ವೆಂದು ಅವರಿಗೂ ಯೋಚನೆಯಾಯಿತು.
ಒಂದು ದಿನ ಸ್ವಪ್ನಾಳ ತಾಯಿ., ಮಗಳ ಹತ್ತಿರ ಈ ವಿಷಯದ ಬಗ್ಗೆ ಕೇಳಿದಾಗ, ಆಗ ಅವಳು ತನಗೆ ಬೀಳುತ್ತಿದ್ದ ಕನಸು, ಅದರಲ್ಲಿ ಬರುತ್ತಿದ್ದ ಚೆಲುವನ ಬಗ್ಗೆ ಹೇಳಿಕೊಂಡಳು. ಮಗಳ ಈ ಹುಚ್ಚಾಟವನ್ನು ಕೇಳಿದ ಅವಳ ತಾಯಿ,
"ಮಗಳೇ, ನಮಗೆ ಬೀಳುವ ಕನಸುಗಳು ಕೇವಲ ಮನಸ್ಸಿನ ಒಂದು ಭಾವನೆಗಳು. ಕನಸಿನಂತೆ ನಡೆಯುತ್ತದೆಂದು ಅದನ್ನೇ ನಂಬಿಕೊಂಡು ಕೂತಿರಬಾರದು, ಕನಸೇ ಬೇರೆ, ವಾಸ್ತವವೇ ಬೇರೆ, ಕನಸೆಲ್ಲವೂ ನನಸಾಗುವುದೆಂದು ನೀನು ನಂಬಿ , ಬಂದ ಒಳ್ಳೆಯ ಸಂಬಂಧಗಳನ್ನು ಮಿಸ್ ಮಾಡಿಕೊಳ್ಳಬೇಡ. ಇನ್ನು ನಾನು ಯಾವುದಾದರೂ ಸಂಬಂಧ ಕೂಡಿಬಂದರೆ ನಿನ್ನ ಮದುವೆಯನ್ನು ಗೊತ್ತು ಮಾಡಿಯೇ ತೀರುತ್ತೇನೆ." ಹೇಳಿದಾಗ, ಸ್ವಪ್ನ ಅಮ್ಮ ಹೇಳುವುದೂ ನಿಜ ಎಂದು ಒಪ್ಪಿಕೊಂಡು ಸುಮ್ಮನಾದಳು.
ಒಂದು ದಿನ ಒಬ್ಬ ಸಾಫ಼್ಟ್ವೆರ್ ಇಂಜಿನಿಯರ್ ಹುಡುಗ ನ ಸಂಬಂಧ ಬಂದಾಗ ಸ್ವಪ್ನಳ ತಂದೆ ತಾಯಿಗೆ ತುಂಬಾ ಖುಶ್ಃಇಯಾಗಿ, ಅವರನ್ನು ತಮ್ಮ ಮನೆಗೆ ಹುಡುಗಿಯನ್ನು ನೋಡುವುದಕ್ಕೆ ಬರಹೇಳಿದ್ದರು. ಸ್ವಪ್ನ ತಾಯಿಯ ಮಾತಿಗೆ ಎದುರಾಡದೇ ಹುಡುಗನ ಮನೆಯವರ ಎದುರು ಬಂದು ಕುಳಿತಳು. ಸ್ವಪ್ನಾಳ ತಂದೆ ತಮ್ಮ ಮಗಳಿಗೆ ಎಲ್ಲರನ್ನೂ ಪರಿಚಯ ಮಾಡಿಸುತ್ತಾ
ಕಡೆಗೆ "ಸ್ವಪ್ನಾ ಇವರು ಸುಶಾಂತ್ " ಅಂತ ಹುಡುಗನನ್ನು ಪರಿಚಯ ಮಾಡಿಸಿದಾಗ, ಅವಳು ಅವನನ್ನೇ ನೋಡಿದಾಗ, ಅವಳಿಗೆ ಅಚ್ಚರಿಯಾಗಿತ್ತು. ’ ಅರೇ, ಇದೇ ಮುಖ್ವಲ್ಲವೇ ತನ್ನ ಕನಸಿನಲ್ಲಿ ಕಾಡುತ್ತಿದ್ದುದು? ಅಂದರೆ ಇವನೇ ನನ್ನ ಕನಸಿನ ಚೆಲುವ" ,
ಒಂದರೆಕ್ಷಣ ಅವನನ್ನೇ ನೋಡಿ ಮುಗುಳ್ನಕ್ಕಳು. ಮುಂದೆ ಸುಶಾಂತ್ ನ ಮದುವೆಯಾಗಿ ಅವನ ಮನೆಯ ಮೆಟ್ಟಕ್ಕಿ ತುಳಿದು ಹೋಗುವಾಗ, ತನ್ನ ಅಮ್ಮನ ಕಿವಿಯಲ್ಲಿ"ಅಮ್ಮ, ನನ್ನ ಕನಸಿನಲ್ಲಿ ಬರುತ್ತಿದ್ದ ರಾಜಕುಮಾರನೇ ಕಡೆಗೂ ನನಗೆ ಸಿಕ್ಕಿಬಿಟ್ಟ"
ಏಂದು ಹೇಳಿದಾಗ, ಅವಳ ಅಮ್ಮನ ಮುಖದಲ್ಲಿ ನಗು ಮೂಡಿತು.
