ಅಂದು ತನ್ನ ಗೆಳತಿಯರ ಜೊತೆ ಕಾಫಿಕುಡಿಯುವುದಕ್ಕಾಗಿ "ಕೆಫೆ ಕಾಫಿ" ಗೆ ಹೋಗಿದ್ದ ಬಾನುವಿಗೆ ಕೆಫೆಯಲ್ಲಿ ಮುತ್ತಿಗೆ ಹಾಕಿದ್ದ ಹೆಂಗೆಳೆಯರ ದಂಡನ್ನು ನೋಡಿ ಆಶ್ಚರ್ಯವಾಯಿತು. ಅವರಲ್ಲಿ ಕೆಲವರು ಇವಳ ಕ್ಲಾಸ್ಮೆಟ್ ಆಗಿದ್ದವರೂ ಇದ್ದರು. ಇವಳನ್ನು ದೂರದಿಂದಲೇ ನೋಡುತ್ತಿದ್ದ ಭುವನ್.
ಕೌಂಟರ್ ನಲ್ಲಿ ಹಣ ಕೊಟ್ಟು ಟೋಕನ್ ತೆಗೆದುಕೊಳ್ಳುವಾಗ ಅವನು ಬಾನುವಿನ ಹತ್ತಿರದಲ್ಲೇ ನಿಂತು ಅವಳನ್ನೇ ಓರೆಗಣ್ಣಿನಲ್ಲಿ ನೋಡುತ್ತಿದ್ದ. ಆದರೆ ಬಾನು ಅವನನ್ನು ಗಮನಿಸದೇ ತನ್ನ ಟೊಕನ್ ತೆಗೆದುಕೊಂಡು ಗೆಳತಿಯರನ್ನು ಸೇರಿದಳು.
ಗುಲಾಬಿ ಬಣ್ಣದ ಸೆಲ್ವರ್ ಕಮೀಜ್ ನಲ್ಲಿ ಮುದ್ದಾಗಿ ಕಾಣುತ್ತಿದ್ದ ಬಾನುವನ್ನೇ ನೋಡುತ್ತಿದ್ದ ಭುವನ್.
ಅಂದು ಪ್ರೇಮಿಗಳ ದಿನಾಚರಣೆ . ಜೋಡಿ ಪ್ರೇಮಿಗಳು ತಮ್ಮ ಲೋಕದಲ್ಲಿ ವಿಹರಿಸುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ, ಭುವನ್ ಗೂ ಅದೇನೋ ಹೊಸ ಹೊಸ ಭಾವಗಳು ಬಿಚ್ಚಿಕೊಳ್ಳುತ್ತಾ ಹೋದವು. ಬಾನು ತನ್ನ ಗೆಳತಿಯರ ಜೊತೆ ಕೆಫೆ ಕಾಫಿಯಿಂದ ಹೊರಟ ನಂತರ ಭುವನ್ ಮನಸ್ಸಿಲ್ಲದ ಮನಸ್ಸಿನಿಂದ ತನ್ನ ಕಾರನ್ನು
ಸ್ಟಾರ್ಟ್ ಮಾಡಿದ್ದ. ಅವನ ಮನಸ್ಸಿನ ತುಂಬಾ ಬಾನುವೇ ತುಂಬಿ ಹೋಗಿದ್ದಳು. ಹೇಗಾದರೂ ಮಾಡಿ ಅವಳ ವಿವರಗಳನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ.
ಈ ಘಟನೆಯಾದ ನಂತರ, ಒಂದು ಮಧ್ಯಾಹ್ನ ಬಾನು ಕಾಲೇಜಿನಿಂದ ನಡೆದುಕೊಂಡು ಬರುತ್ತಿದ್ದಾಗ, ಅವಳು ಕಾರೊಂದಕ್ಕೆ ಡಿಕ್ಕಿ ಹೊಡೆದು ಜೋಲಿ ತಪ್ಪಿ ಬಿದ್ದು ಬಿಟ್ಟಾಗ,
ಕಾರಿನಲ್ಲಿದ್ದ ಭುವನ್ ಅವಳನ್ನು ನೋಡಿ,ಕಾರನ್ನು ಗಕ್ಕನೆ ನಿಲ್ಲಿಸಿ,ಕಾರಿನಿಂದ ಕೆಳಗಿಳಿದು, ಅವಳನ್ನು ಎಬ್ಬಿಸಿ,
ತನ್ನ ಕಾರಿನಲ್ಲಿಯೇ ಕೂರಿಸಿಕೊಂಡು, ಅವಳಿಗೆ ಕುಡಿಯಲು ನೀರು ಕೊಟ್ಟು, ಅವಳನ್ನು ಹತ್ತಿರದಲ್ಲಿದ್ದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ,ಟ್ರೀಟ್ಮೆಂಟ್ ಕೊಡಿಸಿ, ಅವಳನ್ನು ಮನೆಯವರೆಗೂ ಬಿಟ್ಟ. ಆಗ ಅವನಿಗೆ ಬಾನುವಿನ ಬಗ್ಗೆ ವಿವರಗಳು ದೊರಕಿದವು. ಸ್ಮಾರ್ಟ್ ಲುಕಿಂಗ್ ಭುವನ್ ಬಾನುವಿನ ಮನಸ್ಸನ್ನು ಗೆದ್ದಿದ್ದ.
ಕಂಪನಿಯೊಂದರಲ್ಲಿ ಸೀನಿಯರ್ ಇಂಜಿನಿಯರ್ ಆಗಿದ್ದ ಅವನು, ಅವನ ವಿಸಿಟಿಂಗ್ ಕಾರ್ಡ್ ಅನ್ನು ಬಾನುವಿಗೆ ಕೊಟ್ಟು ಹೊರಟ.
ಮುಂದೆ ಬಾನು ಮತ್ತು ಭುವನ್ ಇಬ್ಬರ ನಡುವೆ ಗೆಳೆತನ ಬೆಳೆಯಿತು. ಫ಼ೈನಲ್ ಸೆಮಿಸ್ಟರ್ ಬಿ.ಇ. ನಲ್ಲಿದ್ದ ಬಾನುವಿಗೆ ಮದುವೆಯ ಪ್ರಯತ್ನಗಳು ನಡೆಯತೊಡಗಿದವು. ತನ್ನ ಮನಸ್ಸಿನಲ್ಲಿ ಭುವನ್ ಇರುವಾಗ, ತಾನು ಬೇರೆಬ್ಬರೊಂದಿಗೆ ಮದುವೆಯಾಗುವುದು ಹೇಗೆ ಎಂದು ಯೋಚಿಸಿದ ಬಾನು, ಭುವನ್ ಹತ್ತಿರ ಮಾತನಾಡಿ, ಇಬ್ಬರೂ ಮದುವೆಯಾಗುವುದಾಗಿ ನಿರ್ಧರಿಸಿದರು.
ಒಂದು ದಿನ ಬಾನುವಿನ ತಾಯಿ ಮಗಳಿಗೆ ಅಂದು ಬರಲಿರುವ ಹುಡುಗನ ವಿಷಯ ಹೇಳಿದಾಗ, ಬಾನು ತನ್ನ ಮತ್ತು ಭುವನ್ ನಡುವೆ ಇರುವ ಪ್ರೀತಿಯ ವಿಷಯವನ್ನು ಹೇಳಿಕೊಂಡಳು. ಅದರೆ ಅವಳ ತಾಯಿಗೆ ಭುವನ್ ನ ಜಾತಿಯ ಬಗ್ಗೆ ಒಪ್ಪಿಗೆಯಾಗಲಿಲ್ಲ. ಮಗಳ ಮನಸ್ಸನ್ನು ಬದಲಾಯಿಸಿಕೊಳ್ಳುವಂತೆ ಹೇಳಿದರು. ಬಾನುವಿನ ತಂದೆಯೂ ಮಗಳಿಗೆ ಚೆನ್ನಾಗಿ ಯೋಚಿಸುವಂತೆ ಹೇಳಿ ಸ್ವಲ್ಪ ಕಾಲಾವಕಾಶ ಕೊಟ್ಟರು.
ಮತ್ತೊಂದು ಪ್ರೇಮಿಗಳ ದಿನವೂ ಹತ್ತಿರ ಬಂದಿತ್ತು. ಕಳೆದ ವರ್ಷ ಒಬ್ಬರಿಗೊಬ್ಬರು ಯಾರೆನ್ನುವುದು ಗೊತ್ತಿರದಿದ್ದರೂ, ಅವಳ ಪಿಂಕ್ ಡ್ರೆಸ್ ಅನ್ನು ಕಂಡು ಬೆರಗಾಗಿ ಮೆಚ್ಚಿದ್ದ ಭುವನ್ ಗೆ ಈ ಬಾರಿ ಅವಳನ್ನು ಮದುವೆಯಾಗುವವರೆಗೂ ಮುಂದುವರಿದಿದ್ದ. ಅಂದು ಅವನು ಆಕಾಶ ನೀಲಿ ಬಣ್ಣದ ದಿರಿಸಿನಲ್ಲಿ ಬಂದಿದ್ದ ಭುವನ್, ಬಾನು ಅದೇ ಪಿಂಕ್ ಡ್ರೆಸ್ ನಲ್ಲಿ ಅವನ ಮುಂದೆ ಇದ್ದಳು. ಇಬ್ಬರೂ ಅದೇ ಕೆಫೆ ಕಾಫಿಯಲ್ಲಿ
ಕಾಫಿ ಮಗ್ ಹಿಡಿದು, ತಮ್ಮ ಮದುವೆಯ ನಿರ್ಧಾರವನ್ನು ಘಟ್ಟಿಗೊಳಿಸಿದರು.
ಪಿಂಕ್ ಮತ್ತು ಬ್ಲೂ ಎರಡೂ ಅವರಿಬ್ಬರ ಒಲವಿನ ಬಣ್ಣವಾಗಿ ಇಬ್ಬರನ್ನೂ ಒಟ್ಟುಗೂಡಿಸಿತ್ತು.
ವಿಜಯಭಾರತೀ ಎ.ಎಸ್.