ನಾಗನಹಳ್ಳಿಯ ಪಂಚಾಯತ್ ಆಫ಼ೀಸಿನ ಮುಖ್ಯಸ್ಥನಾಗಿದ್ದ ರಾಮೇಗೌಡರು, ತನ್ನ ಹತ್ತಿರ ದೂರನ್ನು ತೆಗೆದುಕೊಂಡು ಬರುತ್ತಿದ್ದ ಆ ಹಳ್ಳಿಗರೆಲ್ಲರಿಗೂ ನ್ಯಾಯ ಒದಗಿಸಿಕೊಡುತ್ತಾ ಒಳ್ಳೆಯ ಹೆಸರನ್ನು ಸಂಪಾದಿಸಿದ್ದ. ಹೀಗಾಗಿ ಆ ಹಳ್ಳಿಯ ಹತ್ತೂ ಹಲವು ಜನರು ಅವರನ್ನು ದೇವರೆಂದೇ ಭಾವಿಸಿದ್ದರು.
ರಾಮೇಗೌಡರ ಜನಪ್ರಿಯತೆಯನ್ನು ಕಂಡು ಆ ಊರಿನ ಮತ್ತೊಬ್ಬ ಸಾಹುಕಾರ ಶಿವರಾಮೇಗೌಡರು ಕರುಬುತ್ತಿದ್ದರು. ಅವರು ಈ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ರಾಮೇಗೌಡರ ಪ್ರತಿಸ್ಪರ್ಧಿಯಾಗಿ ನಿಂತು ಸೋತು ಹೋಗಿದ್ದರಿಂದ, ರಾಮೇಗೌಡರ ವಿರುದ್ಧ ತನ್ನ ಚೇಲಾಗಳನ್ನು ಸೇರಿಸಿಕೊಂಡು, ಒಳಗೊಳಗೇ ಸಂಚುಗಳನ್ನು ರೂಪಿಸಿ,ಅವರ ಹೆಸರನ್ನು ಹಾಗೂ ಜನಪ್ರಿಯತೆಯನ್ನು ಕೆಡಿಸಬೇಕೆಂದು ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದರು. ಇದರ ಪರಿಣಾಮವಾಗಿ ಆ ಹಳ್ಳಿಯ ಬಡಜನರ ಗುಡಿಸಲಿಗೆ ಬೆಂಕಿ ಬೀಳುವುದು, ಹೆಣ್ಣು ಮಕ್ಕಳ ಮಾನ ಹಾನಿ ಪ್ರಕರಣಗಳು, ಕಳ್ಳತನಗಳು ಹೆಚ್ಚುತ್ತಾ ಹೋದಾಗ, ನೊಂದ ಸಂತ್ರಸ್ತರು ರಾಮೇಗೌಡರ ಹತ್ತಿರ ಬಂದು ತಮ್ಮ ನೋವನ್ನು ಹೇಳಿಕೊಂಡು, ಪರಿಹಾರ ಕೇಳುತ್ತಿದ್ದರು. ಆಗ ರಾಮೇಗೌಡರು ನೊಂದವರಿಗೆ ತಮ್ಮ ಕೈಲಾದ ಸಹಾಯವನ್ನು ಸರ್ಕಾರದ ವತಿಯಿಂದ ಮಾಡಿಸಿಕೊಡುತ್ತಿದ್ದರು. ಆದರೆ ಶಿವರಾಮೇಗೌಡ ಮಾತ್ರ ನೊಂದವರೆದುರು ಮೊಸಳೆ ಕಣ್ಣಿರಿಡುತ್ತಾ, ಪಂಚಾಯತ್ ಆಫ಼ಿಸ್ ನ ಮುಂದೆ ನ್ಯಾಯಕ್ಕಾಗಿ ಗಲಾಟೆ ಮಾಡುತ್ತಾ, ಮುಂದಿನ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದರೆ ಈ ಹಳ್ಳಿಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆಂದು ಜನಗಳ ಪರವಾಗಿ ನಿಂತಂತೆ ನಾಟಕವಾಡುತ್ತಿದ್ದರು.
ಇದ್ದಕ್ಕಿದ್ದಂತೆ ತಮ್ಮ ನಾಗನ ಹಳ್ಳಿಯಲ್ಲಿ ಹೀಗೆ ಹೆಚ್ಚುತ್ತಿರುವ ಅವಗಡಗಳಿಗೆ ಕಾರಣ ಏನು ಎಂಬುದರ ಬಗ್ಗೆ ರಾಮೇಗೌಡರಿಗೆ ಯೋಚನೆಯಾಯಿತು. ಇದರ ಹಿಂದೆ ಯಾರದೋ ಕೈವಾಡವಿರುವುದು ಅವರ ಗಮನಕ್ಕೂ ಬಂತು. ಇಂತಹ ದುಷ್ಕೃತ್ಯಗಳ ಹಿಂದಿರುವವರನ್ನು ಪತ್ತೆ ಹಚ್ಚಬೇಕೆಂದು, ತಮ್ಮ ಆಪ್ತವಲಯದ ಕೆಲವರನ್ನು ಕರೆದು, ಅವರಿಗೆ ಗೂಡಚಾರಿಕೆ ನಡೆಸಲು ಹೇಳಿದರು.
ರಾಮೇಗೌಡರ ಆಪ್ತರು ತಮ್ಮ ಕೆಲಸಗಳನ್ನು ಶುರು ಮಾಡಿಕೊಂಡರು. ಅವರೆಲ್ಲರೂ ತೆರೆಮರೆಯಲ್ಲಿ ನಿಂತು ನಾಗನಹಳ್ಳಿಯಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರು.
ಒಂದು ದಿನ ಮಧ್ಯ ರಾತ್ರಿ ರಾಮೇಗೌಡರ ತೋಟಕ್ಕೆ ನುಗ್ಗಿದ ಮೂರು ಜನರ ಗುಂಪನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದು ತಂದು ವಿಚಾರಣೆ ನಡೆಸಿದಾಗ, ಅವರೆಲ್ಲರೂ ಶಿವರಾಮೇಗೌಡರ ಚೇಲರೆನ್ನುವುದು ಗೊತ್ತಾಯಿತು. ಕಡೆಗೆ ಆ ಮೂವರನ್ನು ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಪೋಲಿಸ್ ಆತಿಥ್ಯವನ್ನು ನೀಡಿದಾಗ, ಇಷ್ಟು ದಿವಸಗಳ ಎಲ್ಲಾ ದುಷ್ಕೃತ್ಯಗಳ ಹಿಂದೆ ಶಿವರಾಮೇಗೌಡರ ಕೈವಾಡವಿದೆ ಎನ್ನುವುದನ್ನು ಬಾಯಿ ಬಿಟ್ಟರು. ನಂತರ ಶಿವರಾಮೇಗೌಡರನ್ನು ಪೋಲಿಸ್ ಸ್ಟೇಷನ್ ಗೆ ಕರೆಸಿದಾಗ, ಅವರ ನಿಜವಾದ ಬಣ್ಣ ಬಯಲಾಯಿತು. ಆ ಹಳ್ಳಿಯ ಜನರ ಮುಂದೆ ತಲೆತಗ್ಗಿಸಿ ನಿಲ್ಲಬೇಕಾಯಿತು.
ವಿಜಯಭಾರತೀ ಎ.ಎಸ್
------------------------------------------------------------------------------------------------------------------