ನಂದಿನಿ
ನಂದಿನಿ
ಅಂದು ಸಾಯಂಕಾಲ ತೋಟದ ಕೆಲಸ ಮುಗಿಸಿ ,ಹಾಲನ್ನು ಕರೆಯಲು ಕೊಟ್ಟಿಗೆಗೆ ಬಂದ ಬಸವಣ್ಣ. ಗಂಗೆ, ಗೌರಿ, ಮತ್ತು ಕಪಿಲೆ ಮೂವರೂ ಕೊಟ್ಟಿಗೆಯಲ್ಲಿ ಹುಲ್ಲು ಜಗಿಯುತ್ತಾ ಮಲಗಿದ್ದವು. ಇವನು ಒಳಗೆ ಬಂದ ಕೂಡಲೇ ಎಲ್ಲವೂ ಇವನ ಕಡೆಗೇ ಕಣ್ಣರಳಿಸಿ ನೋಡಿದವು. ಆದರೆ ಅವನ ಕಣ್ಣು ಬಿಳಿ ಮತ್ತು ಕಪ್ಪು ಬಣ್ಣ ಮಿಶ್ರಿತವಾಗಿದ್ದ ಹೊಳಪು ಕಣ್ಣುಗಳಿಂದ ದಷ್ಟಪುಷ್ಟವಾಗಿದ್ದ ನಂದಿನಿ ಗಾಗಿ ಹುಡುಕಾಡಿದವು. ಆದರೆ ಅದು ಇನ್ನೂ ಕೊಟ್ಟಿಗೆಗೆ ವಾಪಸ್ ಬಂದಿರದೇ ಇರುವುದನ್ನು ನೋಡಿ, ಅವನು ಅದು ಹುಲ್ಲು ಮೇಯಲು ಹೋಗುತ್ತಿದ್ದ ಗೋಮಾಳವನ್ನೆಲ್ಲಾ ಸುತ್ತಾಡಿ ಹುಡುಕಾಡಿದ. ಅದು ಮಾಮೂಲು ಜಾಗದಲ್ಲಿ ಎಲ್ಲಿಯೂ ಕಾಣದಿದ್ದಾಗ, ತನ್ನ ಅಕ್ಕ ಪಕ್ಕದ ಗೋಪಣ್ಣ,ಭೂಪಣ್ಣ ಎಲ್ಲರನ್ನೂ ವಿಚಾರಿಸಿದ. ರಾತ್ರಿ ಎಂಟು ಗಂಟೆಯಾಗುತ್ತಾ ಬಂದರೂ ನಂದಿನಿ ಇನ್ನೂ ಬಂದಿಲ್ಲವಲ್ಲ ಎಂದು ಕೊಳ್ಳುತ್ತಾ, ಉಳಿದ ಮೂರು ಹಸುಗಳ ಹತ್ತಿರ ಕರುವನ್ನು ಬಿಟ್ಟು ಹಾಲು ಕರೆದು ಮುಗಿಸಿದ. ನಂದಿನಿಯ ಕರು ಅವನನ್ನೇ ನೋಡುತ್ತಾ, ತನ್ನ ಅಮ್ಮನ ಕೆಚ್ಚಲಿಗಾಗಿ ಹಂಬಲಿಸಿ,
’ಅಂಬಾ ಅಂಬಾ ಅಂಬಾ’ ಅಂತ ಒಂದೇ ಸಮನೆ ಕೂಗಲು ಶುರು ಮಾಡಿತು. ಅದರ ಹತ್ತಿರ ಹೋಗಿ ಮೈ ದಡವಿ, ಅದನ್ನು ಗಂಗೆಯ ಕೆಚ್ಚಲಿನ ಹತ್ತಿರ ಕರೆದುಕೊಂಡು ಹೋಗಿ ಹಾಲು ಕುಡಿಯುವುದಕ್ಕೆ ಬಿಟ್ಟು ನೋಡಿದ. ಆದರೆ ಅದು ಕೆಚ್ಚಲ ಹತ್ತಿರ ಹೋಗಿ, ಅದನ್ನು ಮೂಸಿ ನೋಡಿ, ಹಾಲನ್ನು ಕುಡಿಯದೇ ಹಿಂದಕ್ಕೆ ಬಂದು ಬಿಟ್ಟಿತು. ಬಹುಶಃ ಆ ಪುಟ್ಟ ಕರುವಿಗೆ ಆ ಕೆಚ್ಚಲು ತನ್ನ ಅಮ್ಮನದಲ್ಲವೆಂದು ತಿಳಿದಿರಬೇಕು. ಕಡೆಗೆ ಅದನ್ನು ಗೂಟಕ್ಕೆ ಕಟ್ಟಿ ಹಾಕಿ ಅದರ ಮುಂದೆ ಹಸಿ ಹುಲ್ಲನ್ನು ಇಟ್ಟು ಮೈ ತಡವಿ ಹೊರಗೆ ಬಂದ, ಅದು ಆಗಾಗ ಅಂಬಾ ಅಂಬಾ ಅಂತ ಕೂಗುತ್ತಿದುದು ಅವನ ಕಿವಿಗೆ ಬೀಳುತ್ತಲೇ ಇದ್ದಾಗ, ಬಸವಣ್ಣನಿಗೆ ಸಂಕಟವಾಯಿತು. ಅದೂ ಅಲ್ಲದೆ ಗಂಗೆ ,ಗೌರಿ ಮತ್ತು ಕಪಿಲೆ ಮೂವರಿಗಿಂತ ನಂದಿನಿ ಸಮೃದ್ಧವಾಗಿ ಹಾಲು ಕೊಡುತ್ತಿತ್ತು.
’ಅಯ್ಯೋ ನಂದಿನಿ ಎಲ್ಲಿ ತಪ್ಪಿಸಿಕೊಂಡಿದ್ದಾಳೆ? ಯಾರದರೂ ಕಟುಕರ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದ್ಡಾಳ?’ ಈ ಯೋಚನೆ ಬಂದಾಗ ಬಸವಣ್ಣನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಇಲ್ಲೇ ಎಲ್ಲಾದರೂ ಹತ್ತಿರದಲ್ಲಿ ಇದ್ದರೆ ಹುಡುಕಿಕೊಂಡು ಬರುತ್ತೇನೆಂದುಕೊಂಡ ಬಸವಣ್ಣ, ಕಾಲಿಗೆ ಚಪ್ಪಲಿ ಹಾಕಿಕೊಂಡು ಹೊರಡುವುದಕ್ಕೆ ಸಿದ್ಧವಾಗುತ್ತಿದ್ದಾಗ, ಹೊರಗಿನಿಂದ ಏದುಸಿರು ಬಿಡುತ್ತಾ ಓಡಿ ಬಂದ ನಿಂಗ,
"ಬುದ್ಧಿ, ನಮ್ಮ ನಂದಿನಿಯನ್ನು ಕಟುಕರು ಕಸಾಯಿ ಖಾನೆಗೆ ಕರೆದುಕೊಂಡು ಹೋಗುವ ಹುನ್ನಾರ ನಡೆಸಿ, ಇಲ್ಲಿಂದ ಐದು ಕಿ.ಮೀ ದೂರದ ಗುರಿಕಾರಿನ ದೊಡ್ಡ ಬಯಲಿನಲ್ಲಿ ಕಸಾಯಿಖಾನೆಗೆ ಕರೆದುಕೊಂಡು ಹೋಗಲು ಕಟ್ಟಿ ಹಾಕಿದ್ದಾರಂತೆ, ಅತ್ತ ಕಡೆಯಿಂದ ಬಂದ ನನ್ನ ಮಗ ನಂದಿನಿಯನ್ನು ನೋಡಿದನಂತೆ, ಈಗಲೇ ಬೈಕ್ ನಲ್ಲಿ ನಡೆಯಿರಿ ಬುದ್ಧಿ,ನಾನೂ ನಿಮ್ಮ ಜೊತೆಗೆ ಬರುತ್ತೇನೆ. "
ಹೇಳಿದ್ದನ್ನು ಕೇಳಿದ ಬಸವಣ್ಣ ಕೂಡಲೇ ತನ್ನ ಬೈಕ್ ನಲ್ಲಿ ನಿಂಗನನ್ನು ಕೂರಿಸಿಕೊಂಡು ಹೊರಟ.
ಬಸವಣ್ಣ ಗುರಿಕಾರ್ ಮೈದಾನಕ್ಕೆ ಬರುವ ವೇಳೆಗೆ ಸರಿಯಾಗಿ, ನಂದಿನಿಯ ಕತ್ತು, ಕೈಕಾಲುಗಳಿಗೆ ಹಗ್ಗ ಬಿಗಿದು ಲಾರಿಗೆ ಹತ್ತಿಸುತ್ತಿದ್ದರು. ಆದರೆ ನಂದಿನಿ ತನ್ನ ಕಾಲನ್ನು ಝಾಡಿಸುತ್ತಾ, ಅದರಲ್ಲಿ ಹತ್ತುವುದಕ್ಕೆ ಮುರಾಡ ಮಾಡುತ್ತಿತ್ತು.
ಬೈಲ್ ನಿಲ್ಲಿಸಿಸ್ದ ಬಸವಣ್ಣ ’ನಂದಿನಿ ನಂದಿನಿ’ ಅಂತ ಹೆಸರು ಹಿಡಿದು ಕೂಗುತ್ತ ಅದರ ಹತ್ತಿರ ಓಡಿದಾಗ, ಅದು ’ಅಂಬಾ ಅಂಬಾ’ಅಂತ ಕೂಗಲು ಪ್ರಾರಂಭಿಸಿತು. ಆ ಮೂಕ ಜೀವಕ್ಕೆ ತನ್ನ ಯಜಮಾನ ತನ್ನನ್ನು ರಕ್ಷಿಸುವುದಕ್ಕೆ ಬರುತ್ತಿದ್ದಾನೆನ್ನುವುದು ತಿಳಿದು ಹೋಯಿತು.
ಬಸವಣ್ಣ ಓಡಿ ಹೋಗಿ, ಅದರಮೈಯ್ಯನ್ನು ತಡವುತ್ತಾ,
"ಹೆದರಬೇಡ ನಂದಿನಿ, ನಾನು ಇಲ್ಲೇ ಇದ್ದೀನಿ, ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ’" ಅಂತ ಹೇಳಿದಾಗ, ಅದು ತನ್ನ ದೊಡ್ಡದಾದ ಕಣ್ಣುಗಳಿಂದ ಅವನನ್ನು ನೋಡಿತು. ಕಣ್ಣಂಚಿನಿಂದ ನೀರು ಇಳಿಯುತ್ತಿದ್ದುದ್ದನ್ನು ಗಮನಿಸಿದ ಬಸವಣ್ಣ.
ಕೂಡಲೇ ನಿಂಗನ ಸಹಾಯದಿಂದ ಅದರ ಕೈಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚುತ್ತಾ ಹೋದ. ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದ ಕದೀಮರನ್ನು ಪೋಲಿಸರ ಆಥಿತ್ಯಕ್ಕೆ ಕಳುಹಿಸಿ, ಉಳಿದ ಎಲ್ಲಾ ಹಸುಗಳ ಕಟ್ಟುಗಳನ್ನು ಬಿಚ್ಚಿ ಬಿಟ್ಟ. ಈಗಾಗಲೇ ಅಲ್ಲಿಗೆ ಬಂದಿದ್ದ ಉಳಿದ ಹಸುಗಳ ಯಜಮಾನರು ತಮ್ಮ ತಮ್ಮ ಹಸುಗಳನ್ನು ಕರೆದುಕೊಂಡು ಮನೆಗೆ ಹೊರಟರು.
ಬಸವಣ್ಣ , ನಂದಿನಿಯಮ್ಮು ನಿಂಗನ ಕೈಗೆ ಕೊಟ್ಟು, ಜೋಪಾನವಾಗಿ ಮನೆಗೆ ಕರೆದುಕೊಂಡು ಬರುವಂತೆ ಹೇಳಿ, ತಾನು ಬೈಕ್ ಹತ್ತಿ ಮನೆ ಕಡೆ ಹೊರಟ.
ಮನೆಯ ಮುಂದೆನಂದಿನಿ ಬಂದಾಗ, ಅದಕ್ಕೆ ಕೆಂಪು ನೀರಿನ ಆರತಿ ಬೆಳಗಿ ಒಳಗೆ ಕೊಟ್ಟಿಗೆಗೆ ಕರೆದುಕೊಂಡು ಹೋದ.ಮ್ಮನನ್ನು ನೋಡಿದ ಅದರ ಕರು ಅಂಬಾ ಅಂಬ ಎಂದು ಹತ್ತಿರ ಓಡಿ ಬಂದಾಗ, ನಂದಿನಿ ಅದರ ಮೈಯ್ಯನ್ನು ನೆಕ್ಕಿ ನೆಕ್ಕಿ ಮುದ್ದು ಮಾಡಿತು. ಬಸವಣ್ಣ ನಂದಿನಿಯ ಕರುವನ್ನು ಹಾಲು ಕುಡಿಯಲು ಬಿಟ್ಟು, ತಾಯಿ ಮಗುವಿನ ಪುನರ್ ಮಿಲನವನ್ನು ನೋಡುತ್ತಾ ನಿಂತ.