Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕಂಡೆನೊಂದ ಕನಸು

ಕಂಡೆನೊಂದ ಕನಸು

3 mins
7


ಅಂದು ರಾತ್ರಿ ಮಲಗುವಾಗ ಹನ್ನೊಂದು ಗಂಟೆಯಾಗಿತ್ತು. ಅದು ಕರೋನಾ ದ ಸಮಯ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ರವರ ರಾಮಾಯಣ ಮತ್ತು ಚೋಪ್ರಾ ರವರ ಮಹಾಭಾರತ ದ ಧಾರಾವಾಹಿಗಳನ್ನು ಬಿಟ್ಟರೆ ಬೇರೆ ಯಾವ ‌ಸೀರಿಯಲ್ಗಳೂ ಇರಲಿಲ್ಲ. ಹೀಗಾಗಿ ಪ್ರತಿದಿನ ಪ್ರಸಾರವಾಗುವ ರಾಮಾಯಣವನ್ನು ನೋಡಿ ಮಲಗುತ್ತಿದ್ದೆ. ಅಂದು ಹಾಗೆ ಮಾಡಿದ್ದೆ. ಮಲಗಿದ ಸ್ವಲ್ಪ ಹೊತ್ತಿಗೆ ನಿದ್ರೆ ಬಂದು ನಾನು ಕನಸಿನ ಲೋಕಕ್ಕೆ ಜಾರಿದೆ. 

'ಸುತ್ತಲೂ ಸುಂದರವಾದ ಪ್ರಕೃತಿ. ಹಿಮಗಿರಿಯ ಸಾಲುಗಳು . ನಾನು ಅಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಭವ್ಯವಾದ ಅರಮನೆ ಕಾಣಿಸಿತು. ಬೆರಗುಗಣ್ಣುಗಳಿಂದ ಹಾಗೇ ನೋಡುತ್ತಾ ನಿಂತಿದ್ದಾಗ, ಅರಮನೆಯ ಉಪ್ಪರಿಗೆಯಲ್ಲಿ ನಿಂತಿದ್ದ ಮಹಾರಾಜ ನನ್ನನ್ನು ಅರಮನೆಯೊಳಗೆ ಬರುವಂತೆ ಕರೆಯುತ್ತಾನೆ. 

ನನಗೋ ಹೆದರಿಕೆ ಮತ್ತು ಸಂಕೋಚ. ಆ ಮಹಾರಾಜನನ್ನು ನಾನು ಈಗಾಗಲೇ ನೋಡಿದ್ದೇನೆ ಎನಿಸುತ್ತದೆ. ನೆನಪುಗಳನ್ನು ಹೆಕ್ಕಿ ತೆಗೆದಾಗ ನೆನಪುಗಳು ಮರುಕಳಿಸಿ ಅದು ಶ್ರೀ ರಾಮಚಂದ್ರ ಎಂದು ನೆನಪಾಯಿತು. ಬಹಳ ಸಂತೋಷ ವಾಗಿ, ಮೆಲ್ಲಗೆ ಅರಮನೆಯ ಮಹಾದ್ವಾರ ದ ಬಳಿ ಬಂದು ನಿಂತೆ. ಆದರೆ ದ್ವಾರಪಾಲಕ ನನ್ನನ್ನು ತಡೆದು, ಯಾರೆಂದು ಕೇಳಿದಾಗ, ನಾನು ಉಪ್ಪರಿಗೆಯಿಂದ ಮಹಾರಾಜರೇ ನನ್ನನ್ನು ಬರುವಂತೆ ಹೇಳಿದ್ದಾರೆ ಎಂದು ತಿಳಿಸಿದೆ. ಆ ವೇಳೆಗೆ ಮಹಾರಾಜರಿಂದ ಸೇವಕನಿಗೆ ಆದೇಶವೂ ಬಂತು. ನನ್ನನ್ನು ಒಳಗೆ ಹೋಗಲು ಬಿಟ್ಟಾಗ ನಾನು ಮೆಲ್ಲ ಮೆಲ್ಲನೆ ಅಡಿಯಿಡುತ್ತಾ ಅರಮನೆಯ ಒಳಗೆ ಹೋದೆ. ಅಲ್ಲಿ ಯ ವೈಭವಗಳನ್ನು ಕಂಡು ಬೆರಗಾಗಿ ಹೋಗಿ, ಸುತ್ತಲೂ ನೋಡುತ್ತಾ ನಿಂತೆ. ಸುತ್ತಲೂ ಚಿತ್ತಾರ ವಿರುವ ಗೋಡೆಗಳು, ತೂಗು ಬಿಟ್ಟ ದೀಪಗಳು, ಎತ್ತರವಾದ ರಾಜ ಸಿಂಹಾಸನ, ಶ್ವೇತಚ್ಛತ್ರ, ಮೇಲಿನ ಉಪ್ಪರಿಗೆಯ ಲ್ಲಿದ್ದ ಅಂತ:ಪುರದ ರಾಜ ಮಾತೆಯರು, ಪರಿಜನರು, ಅಬ್ಬಾ ಎಂತಹ ವೈಭವದ ವಿಲಾಸವಿದು? ಬೆರಗಾಗಿ ಹೋದೆ.ಆದರೆ ಇಷ್ಟು ದೊಡ್ಡ ಅರಮನೆಯಲ್ಲಿ ಜನರೇ ಇಲ್ಲವೆ? ಮೆಲ್ಲಗೆ ಒಂದೊಂದೇ ಹೆಜ್ಜೆ ಇಡುತ್ತಾ ಒಳಗೊಳಗೆ ಹೋದೆ. ನನ್ನನ್ನು ಬರಹೇಳಿದ ಆ ರಾಮಚಂದ್ರ ಪ್ರಭುವೆಲ್ಲಿ?, ಹುಡುಕುತ್ತಾ ಹೋದೆ.


ಆ ವೇಳೆಗೆ ಸಖೀ ಜನರು ಇಳಿದು ಬಂದು ನನ್ನನ್ನು ವಿಚಾರಿಸಿದರು. ಏನು ಹೇಳಲೂ ತೋಚದೆ ಸುಮ್ಮನೆ ನಿಂತಿದ್ದೆ. ಅವರು ನನ್ನನ್ನು ಅರಮನೆಯೊಳಗೆ ಕರೆದುಕೊಂಡು ಹೋಗಿ, ಎಲ್ಲದರ ಪರಿಚಯ ಮಾಡಿಕೊಟ್ಟರು. ಕಡೆಗೆ ಮಹಾರಾಜರ ಕೋಣೆಯ ಮುಂದೆ ನಿಂತಾಗ, ನನಗೆ ಭಯ. ಹಾಗೇ ಹಿಂತಿರುಗಿ ಓಡಿ ಹೋಗಲು ಪ್ರಾರಂಭಿಸಿದೆ. ಆಗ ಉಪ್ಪರಿಗೆಯಿಂದ ನನ್ನನ್ನು ಒಳಗೆ ಬರಲು ಹೇಳಿದ ಮಹಾರಾಜರೇ ನನ್ನನ್ನು ನಿಲ್ಲುವಂತೆ ಹೇಳಿದಾಗ, ನಾನು ಹಾಗೇ ನಿಂತೆ. ಅವರನ್ನೇ ದಿಟ್ಟಿಸಿದಾಗ, ಅವರು ನಗುತ್ತಾ ನಿಂತಿದ್ದರು. ಅಬ್ಬ ಇದು ಅದೇ ರಾಮಾಯಣದ ಶ್ರೀರಾಮ. ನನಗೆ ಏನು ಮಾಡಲು ತೋಚದೇ ನಿಂತೆ. ಅಲ್ಲೇ ಇದ್ದ ಯಾಗ ಶಾಲೆಯಲ್ಲಿ ನಿಲ್ಲಿಸಿದ್ದ ಚಿನ್ನದ ಸೀತೆಯ ಪುತ್ಥಳಿ ಕಡೆ

ನನ್ನ ಗಮನ ಹರಿದು , ನನಗೆ ಆ ಮಹಾರಾಜನ ಮೇಲೆ ತುಂಬಾ ಕೋಪ ಬಂತು. 

'ಲೋಕಾಪವಾದಕ್ಕೆ ಅಂಜಿ ತುಂಬು ಗರ್ಭಿಣಿ ಸೀತೆಯನ್ನು ಅರಮನೆಯಿಂದ ಕಾಡಿಗೆ ಕಳುಹಿಸಿದ ನೀವು ಎಂತಹ ಪ್ರಜಾ ರಕ್ಷಕರು?. ಜೀವಂತವಾಗಿರುವ ಮಡದಿಯನ್ನು ತೊರೆದು, ಸ್ವರ್ಣ ಸೀತೆಯನ್ನು ಪಕ್ಕದಲ್ಲಿ ಇಟ್ಟುಕೊಂಡಿರುವ ನೀವು ಎಂತಹ ಗಂಡ? ಗುಣವಾನ್ ಎಂದು ಹೊಗಳಿಸಿಕೊಂಡಿರುವ ನೀವು ನಿಮ್ಮ ಹೆಂಡತಿಗೆ ಹೀಗೆ ಅನ್ಯಾಯ ಮಾಡಿದ್ದು ಸರಿಯೇ?'

ನಾನು ನೂರಾರು ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ನನ್ನ ಎಲ್ಲಾ ಪ್ರಶ್ನೆಗಳಿಗೂ ಅವರ ಮುಗುಳ್ನಗೆ ಯೇ ಉತ್ತರ.

ನನಗೂ ತುಂಬಾ ಕೋಪ ಬಂದು ಇನ್ನೇನು ಅಲ್ಲಿಂದ ಹೊರಬೇಕೆನ್ನುವಾಗ, ಆ ಮಹಾರಾಜರು (ಶ್ರೀ ರಾಮ)

ನನ್ನನ್ನು ಕೂಗಿ ಕರೆದರು.ನಾನು ಅವರನ್ನು ಹಿಂದೆ ತಿರುಗಿ ನೋಡಿದಾಗ, ನನ್ನನ್ನು ತಮ್ಮ ಹತ್ತಿರಕ್ಕೆ ಬರುವಂತೆ ಕರೆದು, ಅಲ್ಲಿಯೇ ಇದ್ದ ಒಂದು ಆಸನದಲ್ಲಿ ತಾವು ಕುಳಿತು , ಮತ್ತೊಂದರಲ್ಲಿ ನನ್ನನ್ನು ಕುಳಿತು ಕೊಳ್ಳಲು ಹೇಳಿದರು.

'ಮಗು, ನಾನು ವೈದೇಹಿಯನ್ನು ತೊರೆದಿರುವುದು ಇಡೀ ಜಗತ್ತಿಗೇ ಕೋಪ ತಂದಿದೆ . ನಿನಗೇ ಇಷ್ಟು ಬೇಸರ ತಂದಿದೆ ಎಂದಮೇಲೆ ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅವಳನ್ನು ಬಿಟ್ಟು ಇರುವುದು ನನಗೆಷ್ಟು ಕಷ್ಟ ನೋಡು. ನಾನೇನು ಸುಖವಾಗಿದ್ದೀನಾ??ಆದರೂ ಒಬ್ಬ ಮಹಾರಾಜನಿಗೆ ತನ್ನ ಸ್ವಂತ ಸುಖಕ್ಕಿಂತ ಆದರ್ಶ ವೇ ಮುಖ್ಯ ವಾಗುತ್ತದೆ. ರಾಜ ಧರ್ಮದ ಪಾಲನೆ ಇಲ್ಲಿ ಮುಖ್ಯ

ವಾಗುತ್ತದೆ. ಮಹಾರಾಜನಿಗೆ ಈ ರತ್ನ ಖಚಿತ ಸಿಂಹಾಸನ ಮುಳ್ಳಿನ ಕುರ್ಚಿ ಯೂ ಆಗಬಹುದು. ಆದರೂ ನನ್ನ ಜಾನಕಿ ನನ್ನ ಹೃದಯ ಸಿಂಹಾಸನದಲ್ಲಿ ಇದ್ದಾಳೆ. ನಿತ್ಯವೂ ಅವಳ ಜೊತೆ ನಾನು ಸಂಭಾಷಣೆ ನಡೆಸುತ್ತೇನೆ. ಅವಳು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಸುರಕ್ಷಿತ ವಾಗಿದ್ದಾಳೆ. ಈ ರಾಮರಾಜ್ಯದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೇ ಮೊದಲ ಆದ್ಯತೆ. 'ಯಥಾ ರಾಜ ತಥಾ ಪ್ರಜಾ' . ರಾಜನಾದವನೇ 

ತನ್ನ ಧರ್ಮ ವನ್ನು ಪಾಲಿಸದಿದ್ದರೆ, ಪ್ರಜೆಗಳೂ ಸಹ ಅವನನ್ನೇ ಅನುಸರಿಸುತ್ತಾರೆ. ನನ್ನ ಹೃದಯಕ್ಕೆ ಸೀತೆ ಪರಮ ಪವಿತ್ರಳೆಂದು ಗೊತ್ತಿದ್ದರೂ, ಪ್ರಜೆಗಳಿಗೆ ತಿಳಿಯುವುದಾದರು ಹೇಗೆ?ಇದು ನಮ್ಮಿಬ್ಬರ ಜೀವನದ ಮತ್ತೊಂದು ಅಗ್ನಿ ಪರೀಕ್ಷೆ ಅಷ್ಟೇ. ನೀನು ಕೋಪ ಮಾಡಿಕೊಳ್ಳಬೇಡ ಮಗು , ನಾವಿಬ್ಬರೂ ಮತ್ತೆ ಒಂದಾಗುತ್ತೇವೆ.'

ನಾನು ಮಹಾರಾಜರ ಮಾತು ಕೇಳುತ್ತಿರುವಂತೆಯೇ 

ಅರಮನೆಯ ಸಖೀ ಜನರು ನನಗೆ ವಿಧ ವಿಧವಾದ ಭಕ್ಷ್ಯ ಭೋಜ್ಯಗಳನ್ನು ಚಿನ್ನದ ಹರಿ ವಾಣದಲ್ಲಿ ಮುಂದಿಟ್ಟಾಗ, ನನಗೆ ಅವೆಲ್ಲವನ್ನೂ ಕಂಡು ಅಚ್ಚರಿ ಯಾಗಿ, 

'ಅಯ್ಯೋ,ನನಗೆ ಇಷ್ಟೊಂದು ಉಪಹಾರ ಗಳು ಬೇಡ, ನಾನು ನನ್ನ ಮನೆಗೆ ಹೋಗಬೇಕು, ನನಗೆ ಈ ವೈಭವೋಪೇತ ಅರಮನೆಯ ರಾಜ ವೈಭೋಗ ಗಳು ಬೇಡ, ನನಗೆ ನನ್ನ ಸಾಧಾರಣ ವಾದ ಮನೆಯೇ ಸಾಕು, ನಾನು ಇನ್ನು ಹೊರಡುತ್ತೇನೆ. ' 

ನಾನು ಅಲ್ಲಿಂದ ಎದ್ದು ಓಡುತ್ತಾ ಓಡುತ್ತಾ ಅರಮನೆಯ ಹೊರಗೆ ಬರುವಷ್ಟರಲ್ಲಿ ನನ್ನ ಕಾಲು ಸೋತು ಹೋಗಿ, ಎಡವಿ ಬಿದ್ದು ಬಿಟ್ಟೆ.

'ಅಮ್ಮಾ'ಎಂದು ಚೀರುತ್ತಾ ಕಣ್ಣು ಬಿಟ್ಟಾಗ, ನಾನು ಮಂಚದಿಂದ ಕೆಳಗೆ ಉರುಳಿದ್ದೆ. 

"ಏನಾಯ್ತು ಪುಟ್ಟಿ?ಏನಾದರೂ ಕೆಟ್ಟ ಕನಸು ಕಂಡೆಯಾ?",

ಅಲ್ಲೇ ಇದ್ದ ಅಮ್ಮ ನನ್ನನ್ನು ಕೇಳಿದಾಗ, 

', ಅಮ್ಮ ನಾನೊಂದು ಒಳ್ಳೆಯ ಕನಸು ಕಂಡೆ, ಅದೊಂದು ಸುಂದರ ಅರಮನೆಯಲ್ಲಿ ಶ್ರೀ ರಾಮನೊಂದಿಗೆ ಸಂವಾದ ನಡೆಸಿದ ಸುಂದರ ಸ್ವಪ್ನವನ್ನು ಕಂಡೆ. ,,,,,'

'ಮತ್ತೇಕೆ ಹಾಗೇ ಕೂಗಿಕೊಂಡೆ?'ಎಂದು ಅಮ್ಮ ಕೇಳಿದಳು.

'ಅಮ್ಮಾ, ಅಂತಹ ಭವ್ಯ ವಾದ ಅರಮನೆಯಲ್ಲಿ ಎಲ್ಲವೂ ಇದ್ದರೂ, ಯಾರೂ ಇರದ ಏಕಾಂಗಿತನ ನನಗೆ ಅನುಭವವಾಯಿತು. ಅಲ್ಲಿಯ ರಾಜ ವೈಭವದ ,ಚಿನ್ನದ

ಹರಿವಾಣದ ಊಟೋಪಚಾರ ಗಳಿಗಿಂತ ನನಗೆ ನಮ್ಮ ಮನೆಯ ಸರಳವಾದ ಊಟವೇ ಇಷ್ಟವಾಗಿ, ನಾನು ಅಲ್ಲಿಂದ ಹೊರಗೆ ಬರುವಾಗ, ಕಾಲು ಎಡವಿ ಬಿದ್ದು ಬಿಟ್ಟೆ.ಆಗ ಎಚ್ಚರ ವಾಗಿ ಹೋಯಿತು. ಆದರೆ ನನ್ನ ಕನಸಿನ

ಭವ್ಯ ಅರಮನೆ ಶ್ರೀ ರಾಮಚಂದ್ರನದಾಗಿತ್ತು. ನಾನು ಶ್ರೀ ರಾಮನನ್ನು ಮಾತನಾಡಿಸಿದ ಈ ಸುಂದರ ಸ್ವಪ್ನವನ್ನು ಎಂದಿಗೂ ಮರೆಯುವುದಿಲ್ಲ ಅಮ್ಮ 'ಎನ್ನುತ್ತಾ, ಮತ್ತೆ ಈ ಕನಸಿನ ಅರಮನೆಯನ್ನು ಕಾಣಲು ಮುಸುಕೆಳೆದು ಮಲಗಿದೆ.


ವಿಜಯಭಾರತೀ.ಎ.ಎಸ್.


 


Rate this content
Log in

Similar kannada story from Abstract