Vijaya Bharathi.A.S.

Abstract Romance Others

4  

Vijaya Bharathi.A.S.

Abstract Romance Others

ಹಗಲುಗನಸು

ಹಗಲುಗನಸು

3 mins
11



ಹದಿನೆಂಟರ ಹರೆಯದ ಸುಮಾ,  ಭಾವನಾ ಜೀವಿ, ತನ್ನದೇ ಕಲ್ಪನೆಗಳಲ್ಲಿ ತೇಲುತ್ತಾ , ತನ್ನ ಹಳ್ಳಿಯ ಹಸಿರು ಮರಗಿಡಗಳ ನಡುವೆ ಸ್ವಚ್ಚಂದವಾಗಿ ಸುತ್ತಾಡುತ್ತಾ, ತನ್ನ ಭವಿಷ್ಯದ ಕನಸನ್ನು ಕಾಣುತ್ತಾ ತನ್ನದೇ ಲೋಕದಲ್ಲಿ ಇದ್ದು ಬಿಡುತ್ತಿದ್ದಳು. 

ಹಳ್ಲಿಯಲ್ಲಿ ಎಸ್.ಸ್.ಎಲ್ ಸಿ ಮುಗಿಸಿದ್ದ ಅವಳಿಗೆ, ಹತ್ತಿರದ ನಗರದಲ್ಲಿದ್ದ ಕಾಲೇಜ್ ಗೆ ಹೋಗಿ ತನ್ನ ಓದನ್ನು ಮುಂದುವರಿಸಬೇಕೆಂದಿದ್ದರೂ, ಅವಳ ಅಪ್ಪ ಅಮ್ಮ ಅದಕ್ಕೆ ಸಮ್ಮತಿಸಲಿಲ್ಲವಾದ್ದರಿಂದ, ತನ್ನ ಅಮ್ಮನಿಗೆ ಮನೆಗೆಲಸಗಳಲ್ಲಿ ಸಹಾಯ ಮಾಡಿಕೊಂಡು, ಹೊಲಿಗೆ ಕಸೂತಿ ,ಹಾಡು ಹಸೆಗಳನ್ನು ಕಲಿತುಕೊಳ್ಳುತ್ತಾ, ಆ ಹಳ್ಳಿಯಲ್ಲಿದ್ದ ಸರ್ಕ್ಯುಲೇಟಿಂಗ್ ಲೈಬ್ರೆರಿಯಿಂದ ಕಥೆ ಕಾದಂಬರಿಗಳನ್ನು ತಂದು ಓದುತ್ತಾ, ತನ್ನದೇ ಆದ ಕನಸಿನ ಲೋಕದಲ್ಲಿ ತೇಲುತ್ತಾ ಕಾಲ ಕಳೆಯುತ್ತಿದ್ದಳು. 

ಹರೆಯದ ಮನಸ್ಸು ತನಗೂ ಕಾದಂಬರಿಯ ಕಥಾನಾಯಕನಂತಹ ಮನ್ಮಥನಂತಹ, ಕುಬೇರನಂತಹ ಗಂಡನೇ ಸಿಗಬೇಕೆಂದು ಬಯಸುತ್ತಿತ್ತು. ಅವಳೂ ಹಗಲುಗನಸನ್ನು ಕಾಣುತ್ತ ತನ್ನದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಸಂತೋಷದಿಂದ ಕಾಲ ಕಳೆಯುತ್ತಿದ್ದಳು. ಹುಚುಕೋಡಿ ಮನಸು ಅದು ಹದಿನಾರರ ವಯಸು ಅನ್ನುವಂತಾಗಿತ್ತು ಅವಳ ಸ್ಥಿತಿ. 


ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡುವುದಕ್ಕೆ ಯೋಚಿಸುತ್ತಿದ್ದ ಅವಳ ತಂದೆ , ವರಾನ್ವೇಷ್ವಣೆಗೆ ಪ್ರಾರಂಭಿಸಿದರು. 

ಹಗಾಲುಗನಸು ಕಾಣುತ್ತಾ ಇದ್ದ ಸುಮಾಳಿಗೆ ತನಗೆ ಮದುವೆಯ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದಾಗ, ಕುದುರೆ ಏರಿ ಬರುವ ರಾಜಕುಮಾರನ ಕನಸು ಕಾಣುವುದಕ್ಕೆ ಶುರು ಮಾಡಿದಳು. 

ಅವಳನ್ನು ನೋಡುವುದಕ್ಕೆ ಮೊಟ್ಟ ಮೊದಲನೇ ಹುಡುಗ ಬಂದಾಗ, ಅವಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ಹುಡುಗನ ಮುಂದೆ ಬಂದು ಕುಳಿತಳು. ನೋಡುವುದಕ್ಕೆ ದಂತದ ಗೊಂಬೆಯಂತೆ ಇರುವ ಅವಳು ಅಲಂಕಾರ ಮಾಡಿಕೊಂಡಾಗ ತುಂಬಾ ಚೆನ್ನಾಗಿ ಕಾಣುತ್ತಿದ್ದಳು. ಅವಳು ಓರೆಗಣ್ಣಿನಿಂದ ಬಂದ ಹುಡುಗನನ್ನು ನೋಡಿದಳು. ಅವಳಿಗೆ ತುಂಬಾ ನಿರಾಸೆಯಾಯಿತು. ಕಪ್ಪು ಬಣ್ಣದ ದಪ್ಪನೆಯ ಹುಡುಗ ಒಳ್ಳೆಯ ಉದ್ಯೋಗದಲ್ಲಿದ್ದು ಸಂಪಾದನೆ ಮಾಡುತ್ತಿದ್ದರಿಂದ, ಸುಮಾಳ ತಂದೆ ತಾಯಿಗೆ ಆ ಹುಡುಗನ ಬಾಹ್ಯ ರೂಪ ಮುಖ್ಯವೆನಿಸಲಿಲ್ಲ. ಹುಡುಗಿಯನ್ನು ನೋಡಿಕೊಂಡು ಹೊರಟ ಹುಡುಗನ ಮನೆಯವರು ಒಂದೆರಡು ದಿನಗಳಲ್ಲೇ ಹುಡುಗಿ ತಮಗೆ ಒಪ್ಪಿಗೆಯಾಗಿದೆ ಎಂದು ತಿಳಿಸಿದಾಗ, ಸುಮಾಳ ತಂದೆ ತಾಯಿಗೆ ತುಂಬಾ ಖುಷಿಯಾಗಿ, ಮಗಳನ್ನು ಕರೆದು ಹುಡುಗ ಅವಳನ್ನು ಒಪ್ಪಿರುವ ವಿಷಯ ತಿಳಿಸಿದರು. ಆ ಕೂಡಲೇ ಸುಮಾ, ತಾನು ಈ ಹುಡುಗನನ್ನು ಒಪ್ಪಿಲ್ಲವೆಂದು ಹೇಳಿ ಬಿಟ್ಟಳು. ಅವಳ ಅಪ್ಪ ಅಮ್ಮ ಇಬ್ಬರೂ ಎಷ್ಟು ವಿಧದಲ್ಲಿ ಹೇಳಿದರೂ ಅವಳು ಆ ಹುಡುಗನನ್ನು ಒಪ್ಪದೇ ಹೋದಾಗ, ಮದುವೆಯ ಮಾತುಕತೆಗಳು ಮುಂದುವರಿಯಲಿಲ್ಲ. 


ಹೀಗೆ ಶುರುವಾದ ಅವಳ ಮದುವೆಯ ಪ್ರಯತ್ನ ಒಂದಾದ ಮೇಲೆ ಒಂದು ಮುಂದುವರೆಯುತ್ತಲೇ ಹೋಯಿತು. ಯಾಕೋ ಸುಮಾ, ತನ್ನ ಕನಸಿನ ಹುಡುಗನಂತೆ ಯಾರು ಇಲ್ಲ ಅಂತ ಹೇಳಿಕೊಂಡು, ಯಾವ ಹುಡುಗನನ್ನೂ ಒಪ್ಪಿಕೊಳ್ಳದೇ ಇದ್ದಾಗ, ಅವಳ ಅಪ್ಪ ಅಮ್ಮನಿಗೂ ಮಗಳ ಮದುವೆ ಹೇಗೆ ಮಾಡುವುದೆಂದೇ ಗೊತ್ತಾಗದೇ ಹೋಯಿತು. ಕಡೆಗೊಂದು ದಿವಸ, ಅವಳ ಅಮ್ಮ ಮಗಳಿಗೆ ಚೆನ್ನಾಗಿ ಬಯ್ದು ಬುದ್ಧಿ ಹೇಳಿ, ಹೀಗೇ ಮಾಡುತ್ತಾ ಹೋದರೆ ತಾವು ಮದುವೆಯ ಪ್ರಯತ್ನವನ್ನು ನಿಲ್ಲಿಸುತ್ತೇವೆ ಎಂದು ಜೋರಾಗಿ ಗಲಾಟೆ ಮಾಡಿ ಬಿಟ್ಟಾಗ, ಸುಮಾಳಿಗೂ ತುಂಬಾ ನೋವಾಯಿತು. ತಾನು ಈ ಹಳ್ಳಿಯಲ್ಲೇ ಇದ್ದರೆ, ತನ್ನ ಕನಸಿನ ರಾಜಕುಮಾರನನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವೆನಿಸಿ, ಅಪ್ಪ ಅಮ್ಮನನ್ನು ಒಪ್ಪಿಸಿ ಕಾಲೇಜ್ ಗೆ ಸೇರಿಬಿಟ್ಟಳು. 

ಮಗಳು ಪ್ರತಿದಿನವೂ ಹಳ್ಲಿಗೆ ಬರುವ ಒಂದೇ ಬಸ್ ಹಿಡಿದು, ಕಾಲೇಜಿಗೆ ಹೋಗಿ ಬರುವುದು ಕಷ್ಟವೆಂದು ಮನಗಂಡ ಸುಮಾಳ ತಂದೆ ಮಗಳನ್ನು ನಗರದಲ್ಲಿದ್ದ ತಮ್ಮ ಸ್ನೇಹಿತ ನ ಮನೆಯಲ್ಲಿ ಉಳಿಯುವುದಕ್ಕೆ ವ್ಯವಸ್ಥೆ ಮಾಡಿದರು. 


ಹಳ್ಳಿಯಿಂದ ನಗರಕ್ಕೆ ಬಂದ ಸುಮಾಳಿಗೆ ಕಾಲೇಜ್ ನಲ್ಲಿ ಹೊಸ ಹೊಸ ಗೆಳೆಯ ಗೆಳತಿಯರು ಸಿಕ್ಕಿದಾಗ, ಅವಳು ತನ್ನ ಕನಸಿನ ಸಾಕಾರವಾಗುವುದರ ಕಡೆ ಗಮನ ಹರಿಸಿದಳು.  ಸುಮಾ ಕಾಲೇಜ್ ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡುವುದಕ್ಕೆ ಶುರು ಮಾಡಿದಳು. ಅವಳು ಹಲ್ಳಿಯಿಂದ ಬಂದವಳೆಂದು ಕೆಲವರು ಅವಳನ್ನು ತಿರಸ್ಕಾರದಿಂದ ನೋಡುತ್ತಿದ್ದಾಗ, ಅವಳ ಪರವಾಗಿ ನಿಂತವನು ಸುಮಂತ್. ನೋಡಲು ತುಂಬಾ ಸುಂದರವಾಗಿದ್ದ ಸುಮಂತ್ , ಅವಳ ಮನಸ್ಸನ್ನು ಗೆದ್ದಿದ್ದ. ಸುಮಾಳ ಸ್ನೇಹಕ್ಕಾಗಿ ಅವನು ಕೈ ಮುಂದೆ ಚಾಚಿದಾಗ, ತನ್ನನ್ನು ಸಪೋರ್ಟ್ ಮಾಡುತ್ತಿದ್ದ ಸುಮಂತ್ ನ ಸ್ನೇಹಕ್ಕೆ ಅವಳು ಒಪ್ಪಿಗೆ ಕೊಟ್ಟಳು. 


ಕಾಲೇಜ್ ವಿದ್ಯಾಭ್ಯಾಸ ಮುಗಿಯುವ ವೇಳೆಗೆ ಸುಮಂತ್ ಮತ್ತು ಸುಮಾಳ ಸ್ನೇಹ ಗಾಢವಾಗಿ, ಇವರಿಬ್ಬರ ಸುದ್ಧಿ ಸುಮಾಳ ತಂದೆಯವರೆಗೂ ತಲುಪಿ, ಅವರು ತಮ್ಮ ಮಗಳನ್ನು ವಾಪಸ್ ಹಳ್ಳಿಗೆ ಕರೆಸಿಕೊಂಡರು. ಫ಼ಿನಲ್ ಇಯರ್ ಬಿ.ಎ. ಪರೀಕ್ಷೆ 

ಉಳಿದಿತ್ತು. ಸುಮಾ ತಾನು ಪರೀಕ್ಷೆಗೆ ಹೋಗಲೇ ಬೇಕೆಂದು ಹಠ ಮಾಡಿದಾಗ, ಸುಮಾಳ ತಾಯಿ ಅವಳ ಜೊತೆ ನಗರದಲ್ಲಿ ಬಂದು ಇದ್ದು, ಅವಳನ್ನೇ ಕಾದು ಕುಳಿತಿರುತ್ತಿದ್ದರು. 

ಪರೀಕ್ಷೆಯ ಕೊನೆಯ ದಿನ ಸುಮಾ, ಸುಮಂತ್ ನ ಹಿಂದೆ ಯಾರಿಗೂ ಹೇಳದೇ ಓಡಿ ಹೋಗಿ, ದೇವಸ್ಥಾನದಲ್ಲಿ ಮದುವೆಯಾಗಿಯೇ ಬಂದು ತನ್ನ ತಾಯಿಯ ಎದುರು ನಿಂತು ಕ್ಷಮೆ ಕೇಳಿದಾಗ, ಸುಮಾಳ ತಾಯಿಗೆ ಭೂಮಿ ಬಾಯಿ ಬಿಡಬಾರದೇ ಎನ್ನುವಂತಾಯಿತು. ಕಡೆಗೆ ಅವರು ಮಗಳ ವಿಷಯವನ್ನು ತಮ್ಮ್ ಯಜಮಾಣ್ರಿಗೆ ತಿಳಿಸಿದಾಗ, ಸುಮಾಳ ಅಪ್ಪ ಮುಲಾಜಿಲ್ಲದೇ ಅವಳು ತನ್ನ ಮಗಳೆ ಅಲ್ಲ ಎಂದು ಬಿಟ್ಟರು.

ಇನ್ನೂ ಉದ್ಯೋಗವಿಲ್ಲದ ಸುಮಂತ್, ಸುಮಾಳನ್ನು ಮದುವೆ ಮಾಡಿಕೊಂಡು ತನ್ನ ಮನೆಗೆ ಬಂದಾಗ, ಅಲ್ಲಿಯೂ ಇವರಿಬ್ಬರನ್ನೂ ಛೀಮಾರಿ ಹಾಕಿ,ಮನೆಯಿಂದ ಹೊರಗೋಡಿಸಿ ಬಿಟ್ಟಾಗ, ಇಬ್ಬರೂ ಬೀದಿಗಿಳಿಯ ಬೇಕಾಯಿತು. 

ಕೈಯ್ಯಲ್ಲಿ ಕಾಸಿಲ್ಲ, ನಿಲ್ಲಲು ನೆರಳಿಲ್ಲ, ಮುಂದೆ ಎಲ್ಲಿ ಹೋಗುವುದೆಂದು ತಿಳಿಯದೇ ಒಂದು ಪಾಳು ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು, ತಮ್ಮ ಮುಂದಿನ ದಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕುಳಿತರು. 

ತನ್ನನ್ನು ಮದುವೆಯಾಗುವವನು ಕಥೆಗಳಲ್ಲಿ ಬರುವ ಹೀರೋ ನಂತೆ ಇರಬೇಕು, ಹಾಗಿರಬೇಕು, ಹಣವಂತನಾಗಿರಬೇಕು ಅಂತ ಹಗಲುಗನಸು ಕಾಣುತ್ತಿದ್ದ ಸುಮಾಳಿಗೆ ಈಗ ನಿಜ ಜೀವನವೆಂದರೇನು ಎನ್ನುವುದು ಅರ್ಥವಾಗಿತ್ತು. ಆದರೆ ಈಗ ಇಬ್ಬರ ಹೆತ್ತವರೂ ಇವರನ್ನು ಮನೆಯಿಂದ ಹೊರಗೆ ಹಾಕಿದ್ದರಿಂದ ಅವಳಿಗೆ ಜೀವನವೆನ್ನುವುದು ಕೇವಲ ಕಲ್ಪನಾಲೋಕದಲ್ಲಿ ಕಾಣುವ ಕನಸಲ್ಲ, ಕನಸು ಕಾಣುವುದೆಲ್ಲ ನಿಜವಾಗುವುದಿಲ್ಲ ವೆಂದು ಅರಿವಾಗಿ ಪಶ್ಚಾತ್ತಾಪ ವಾಗುತ್ತಿತ್ತು. ಆದರೆ ಪ್ರಯೋಜನವೇನು? ಮುಂದಿನ ಬದುಕನ್ನು ಹೇಗೋ ನಿಭಾಯಿಸಲೇ ಬೇಕು ಅಂತ ಇಬ್ಬರೂ ನಿರ್ಧರಿಸಿ, ತಮ್ಮ ಹತ್ತಿರವಿದ್ದ ಅಲ್ಪ ಸ್ವಲ್ಪ ಹಣದಿಂದ ಸುಮಂತ್ ನ ಸ್ನೇಹಿತನ ತಂದೆಯ ಫ಼ಾರ್ಂ ಹೌಸ್ ಗೆ ಬಂದು, ಅಲ್ಲಿ ಅವರ ಸಹಾಯದಿಂದ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬಹಳ ಕಷ್ಟ ದಿಂದ ತಮ್ಮ ನವಜೀವನವನ್ನು ಪ್ರಾರಂಭಿಸಿದರು. ಕಷ್ಟವೇನೆಂಬುದೇ ಗೊತ್ತಿಲ್ಲದ ಬೆಳೆದಿದ್ದ ಇಬ್ಬರಿಗೂ ತಮ್ಮ ದುಡುಕಿನಿಂದ ಎಂತಹ ಕಷ್ಟ ಪಡಬೇಕಾಯಿತಲ್ಲ ಎನ್ನುವಂತಾಗಿತ್ತು. ಸುಮಂತ್ ಗೆ ತಾನು ಇವಳ ಕಣ್ಣು ತಪ್ಪಿಸಿ ತನ್ನ ಮನೆಗೆ ವಾಪಸ್ ಹೋಗಿಬಿಡಬೇನ್ನುವ ಯೋಚನೆ ಬರುವುದಕ್ಕೆ ಶುರುವಾಗಿ, ಒಂದು ದಿನ ಅವನು ಹೇಳದೇಕೇಳದೇ ಸುಮಾಳನ್ನು ಒಂಟಿಯಾಗಿ ಬಿಟ್ಟು ತನ್ನ ಮನೆಗೆ ನಡೆದೇ ಬಿಟ್ಟ. ಸುಮಂತ್ ಹೀಗೆ ಕೈ ಕೊಟ್ಟಾಗ, ಸುಮಳಿಗೆ ದಿಘ್ಬ್ರಮೆಯಾಯಿತು. ಅವನು ಕೊಟ್ಟ ವಾದ ಪ್ರತಿಜ್ಞೆಗಳೆಲ್ಲವೂ ಕೇವಲ ಬಾಯಿಮಾತಾಗಿತ್ತು . ಈಗ ಅವಳು ಒಬ್ಬಂಟಿಯಾಗಿ ಆ ಫ಼ಾರ್ಮ್ ಹೌಸ್ ನಲ್ಲಿ ಸಾಹುಕರರ ಮನೆಯ ಕೆಲಸ ಮಾಡಿಕೊಂಡು , ಜೀವನ ನಡೆಸುವ ಪರಿಸ್ಥಿತಿ ಬಂದಿತು. ಅವಳಿಗೆ ತಾನು ಕಂಡದ್ದು ಕೇವಲ ಹಗಲುಗನಸು ಎಂಬ ಅರಿವಾಗುವುದರೊಳಗೇ ಅವಳ ಜೀವನ ಮೂರಾಬಟ್ಟೆಯಾಗಿತ್ತು.ಈಗ ಅವಳ ಮುಖದಿಂದ ಬರುವುದು ಕೇವಲ ನಿಟ್ಟುಸಿರು.


Rate this content
Log in

Similar kannada story from Abstract