ಪುಸ್ತಕದ ಹುಳು
ಪುಸ್ತಕದ ಹುಳು
ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಎಲ್ಲರೂ "ಇ ರೀಡಿಂಗ್ " ನಲ್ಲಿ ವಿದ್ಯಾರ್ಥಿಗಳು ಅನ್ ಲೈನ್ ನ ಮೇಲೆ ಅವಲಂಬಿತವಾಗಿ, ಪುಸ್ತಕಗಳು ನುಸಿ ಹಿಡಿಯುವ ಸ್ಥಿತಿ ಬಂದಿರುವಾಗ, ಅಜಯ್ ಮಾತ್ರ, ಪ್ರತಿನಿತ್ಯ ಗ್ರಂಥಾಲಯಕ್ಕೆ ಹೋಗಿ, ದೊಡ್ಡ ದೊಡ್ಡ ಗ್ರಂಥಗಳನ್ನು ತಂದು, ನಿಧಾನವಾಗಿ ಒಂದೊಂದೇ ಪುಟಗಳನ್ನು ಒಂದು ಅಕ್ಷರವನ್ನೂ ಬಿಡದೇ ಓದಿ, ಮುಖ್ಯವಾದ ವಿಷಯಗಳನ್ನು ಗುರುತು ಹಾಕಿಕೊಂಡು, ಟಿಪ್ಪಣಿ ಮಾಡಿ, ಓದುತ್ತಿರುತ್ತಾನೆ. ಅವನು ಸ್ನಾತಕೋತ್ತರ ವಿದ್ಯಾರ್ಥಿ.
ಅವನಿಗೆ ಮೂಲ ಗ್ರಂಥಗಳನ್ನು ಓದುವ ಅಭ್ಯಾಸ. ಇದರಿಂದ ಅವನು ತನ್ನದೇ ಆದ ನೋಟ್ಸ್ ಅನ್ನು ತಯಾರಿಸಿ, ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ .
ಅವನನ್ನು ನೋಡುತ್ತಿದ್ದ ಅವನ ಸಹಪಾಠಿಗಳು, ಅವನಿಗೆ "ಪುಸ್ತಕದ ಹುಳ" ಅಂತ ಅಡ್ಡ ಹೆಸರನ್ನು ಇಟ್ಟು, ಅವನನ್ನು ಚುಡಯಿಸುತ್ತಿದ್ದರು. ಆಗೆಲ್ಲ ಅವನು ಅಚ್ಚಾಗಿರುವ ಪುಸ್ತಕಗಳನ್ನು ಹಾಳೆ ತಿರುಗಿಸಿ, ನಿಧಾನವಾಗಿ ಓದುವುದರಿಂದ, ಅದರಲ್ಲಿರುವ ವಿಷಯಗಳು ಕಣ್ಣಿಗೆ ಕಟ್ಟಿದಂತೆ ಮನದಟ್ಟು ಆಗುತ್ತದೆ ಎಂದು ತನ್ನ ಓದನ್ನು ಸಮರ್ಥಿಸಿಕೊಳ್ಳುತ್ತಿದ್ದ.
ಆಗೆಲ್ಲಾ ಅವನ ಗೆಳೆಯರು
"ಇವನು ಯಾವ ಜಮಾನದಲ್ಲಿ ಇದ್ದಾನೆ, ಓಬಿರಾಯನ ಕಾಲದವನು, ತಂತ್ರಜ್ಞಾನದ ಪರಾಕಾಷ್ಠೆಯ ಈ ದಿನಗಳಲ್ಲಿ ಎಲ್ಲಾ ಮಾಹಿತಿಗಳು ಬೆರಳಿನ ತುದಿಯಲ್ಲಿ ಸಿಗುವಾಗ, ಇವನು ಇಂದಿಗೂ ಆ ಗ್ರಂಥಾಲಯಕ್ಕೆ ಹೋಗಿ, ನುಸಿ ಹಿಡಿದು ಹೋಗಿರುವ ದಪ್ಪ ದಪ್ಪ ಪುಸ್ತಕಗಳನ್ನು ಹೊತ್ತುಕೊಂಡು ಓಡಾಡುತ್ತಾನಲ್ಲ, ಓಲ್ಡ್ ಮಾಡಲ್" ಅಂತೆಲ್ಲಾ ಗೇಲಿ ಮಾಡುತ್ತಲೇ ಇದ್ದರು.
ಪರೀಕ್ಷೆಯ ಸಮಯ ಹತ್ತಿರವಾದಾಗ, ಅಜಯ್ ತಾನು ಮಾಡಿಕೊಂಡ ನೋಟ್ಸ್ ಅನ್ನು ಒಮ್ಮೆ ಅವಲೋಕಿಸಿ ಹೋಗುತ್ತಿದ್ದ. ಪರೀಕ್ಷೆ ಬರೆಯುವಾಗ, ಅವನ ತಲೆಯಲ್ಲಿ, ಯಾವ ಪುಟದಲ್ಲಿ ಯಾವ ವಿಷಯ ಎಷ್ಟನೇ ಸಾಲಿನಲ್ಲಿ ಇದೆ ಎನ್ನುವುದನ್ನು ನೆನಪಿಸಿಕೊಳ್ಳುವಾಗ, ಅವನ ಕಣ್ಣ ಮುಂದೆ ಪುಸ್ತಕದ ಹಾಳೆಗಳು ಹಾದು ಹೋಗುತ್ತಿದ್ದವು. ಇದರಿಂದ ಅವನು ಸರಾಗವಾಗಿ ಉತ್ತರಗಳನ್ನು ಬರೆದು ಮುಗಿಸುತ್ತಿದ್ದ. ಇವನನ್ನು ಚುಡಾಯಿಸುತ್ತಿದ್ದ ಅವನ ಸ್ನೇಹಿತರು ಪರೀಕ್ಷೆಯ ಹಿಂದಿನ ದಿನ ತಮ್ಮ ತಮ್ಮ ಲ್ಯಾಪ್ಟಾಪ್ ತೆಗೆದು ಸರ್ಚ್ ಮಾಡುತ್ತಾ ಹೋದಾಗ, ಇಂಟರ್ನೆಟ್ ಕೈ ಕೊಟ್ಟು, ಮಾಹಿತಿಯು ದೊರಕದೇ, ಪರದಾಡಿ ,
ಪರೀಕ್ಷೆಗೆ ಹೊರಡುವಾಗ ಅತಿಯಾದ ಒತ್ತಡವನ್ನ್ ಅನುಭವಿಸಿ, ಹೇಗೋ ಕಷ್ಟಪಟ್ಟು ಪರೀಕ್ಷೆಯಲ್ಲಿ ಉತ್ತರವನ್ನು ತೋಚಿದಷ್ಟೂ ಗೀಚಿ ಎದ್ದು ಬಂದಿದ್ದರು. ಅದೂ ಅಲ್ಲದೇ, ಅವರಿಗೆ ನಿರಂತರವಾಗಿ ಬರೆಯುವ ಅಭ್ಯಾಸವೂ ಇಲ್ಲದಿದ್ದರಿಂದ,
ನಿಗಧಿತ ಅವಧಿಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಲಾಗಲಿಲ್ಲ.
ಕಡೆಗೂ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಾಗ, "ಪುಸ್ತಕದ ಹುಳ" ಎಂದು ಗೇಲಿಗೊಳಗಾಗಿದ್ದ ಅಜಯ್ ಮೊದಲನೇ ಸ್ಥಾನ ದಲ್ಲಿ ಉತ್ತೀರ್ಣನಾಗಿದ್ದ. ಅವನಿಗೆ ಹಲವು ಪ್ರಶಸ್ತಿ ಪದಕಗಳು ದೊರೆತು, ಅವನನ್ನು ಹಲವು ಪತ್ರಿಕೆಗಳು, ಅವನ ಸಂದರ್ಶನದಲ್ಲಿ, ಅವನ ಈ ಯಶಸ್ಸಿನ ಹಿನ್ನಲೆಯ ಕಾರಣವನ್ನು ಕೇಳಿದಾಗ, ಅವನು
"ನನ್ನ ಈ ಯಶಸ್ಸಿಗೆ ಪುಸ್ತಕಗಳ ಅಧ್ಯಯನವೇ ಕಾರಣ. ಪುಸ್ತಕದ ಅಕ್ಷರಗಳು ಮಸ್ತಕದಲ್ಲಿ ಅಚ್ಚೊತ್ತಿ, ನನ್ನ ಬರವಣಿಗೆಗೆ ಪ್ರೇರೇಪಣೆ ಕೊಟ್ಟವು. ಮೂಲಗ್ರಂಥಗಳನ್ನು (ಟೆಕ್ಸ್ಟ್ ಬುಕ್ಸ್) ಆಮೂಲಾಗ್ರವಾಗಿ ಓದಿದಾಗ ಮಾತ್ರ ನಾವು ಪರೀಕ್ಷೆಯಲ್ಲಿ ಜಯವನ್ನು ಸಾಧಿಸಬಹುದು" ಎಂದು ಹೇಳಿದಾಗ, ಅಲ್ಲಿ ನೆರೆದಿದ್ದವರೆಲ್ಲರೂ ಕರತಾಡನ ಮಾಡಿದರು.
