STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕಾವ್ಯೋಲ್ಲಾಸ

ಕಾವ್ಯೋಲ್ಲಾಸ

2 mins
12

ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದ

ಕಾವ್ಯ, ತರಗತಿಯಲ್ಲಿ ಕುಳಿತಿದ್ದಳು. ಆದಿಕವಿ ಪಂಪನ ಆದಿಪುರಾಣ ದ ಒಂದು ಮುಖ್ಯ ಪ್ರಸಂಗ ವನ್ನು ಉಪನ್ಯಾಸಕರು ವರ್ಣಿಸುತ್ತಾ ಇದ್ದರು. ಕಾವ್ಯ ಅದರಲ್ಲೇ ತಲ್ಲೀನಳಾಗಿ ಬಿಟ್ಟಳು.


"ಕನ್ನಡದ ಆದಿಕವಿ ಪಂಪನ ಆದಿಪುರಾಣ ದ ಅತಿ ಮುಖ್ಯ ಪ್ರಸಂಗ ನೀಲಾಂಜನೆಯ ನೃತ್ಯ. ಅಂದು ವೃಷಭನಾಥ, ತನ್ನ ಒಡ್ಡೋಲಗದಲ್ಲಿ ,ನೀಲಾಂಜನೆಯ ನೃತ್ಯ ಪ್ರದರ್ಶನ ಏರ್ಪಡಿಸಿದ್ದ. ಇಂದ್ರನ ಒಡ್ಡೋಲಗದಂತೆ ಕಂಗೊಳಿಸುತ್ತಿದ್ದ ಅವನ ಆ ರಂಗಮಂಟಪ ದಲ್ಲಿ 

ವೃಷಭ ದೇವ ತನ್ನ ಪರಿವಾರ ಸಮೇತನಾಗಿ ನೃತ್ಯವನ್ನು ವೀಕ್ಷಿಸುತ್ತಿದ್ದನು. ಆ ನೀಲಾಂಜನೆಯ ನೃತ್ಯ ಅದ್ಭುತವಾಗಿ ಎಲ್ಲರನ್ನೂ ಆಕರ್ಷಿಸಿತ್ತು. ವೃಷಭದೇವನೂ ಸಹ ಆ ನೃತ್ಯವನ್ನು ತನ್ಮಯತೆ ಯಿಂದ ವೀಕ್ಷಿಸುತ್ತಿದ್ದನು.ಅವನ ಚಿತ್ತವೆಲ್ಲವೂ ನೀಲಾಂಜನೆಯ ನೃತ್ಯದಲ್ಲಿ ನಿಂತು, ಎಲ್ಲವನ್ನೂ ಮರೆಸಿತ್ತು.


"ಸುರಗಣಿಕಾ ನಾಟ್ಯರಸಂ

ಪರಮನ ಚಿತ್ತಮುಮನೆಯ್ದೆ ರಂಜಿಸುದುದು ವಿ

ಸ್ಪುರಿತಸ್ಫಟಿಕಂ ಶುದ್ಧಾಂ

ತರಂಗವೇನನ್ಯ ರಾಗದಿಂ ರಂಜಿಸದೇ"


ಇಂತಹ ಅದ್ಭುತ ನಾಟ್ಯ ನಡೆಯುತ್ತಿದ್ದಂತೆಯೇ ನೀಲಾಂಜನೆಯ ಆಯುಷ್ಯ ಮುಗಿದು ಇದ್ದಕ್ಕಿದ್ದಂತೆ ರಂಗ ಮಂಟಪದಿಂದ ಅದೃಶ್ಯಳಾಗಿ ಹೋದಾಗ, ಸಭಿಕರ ರಸಭಂಗವಾಗದಿರುವಂತೆ ,ಇಂದ್ರನು ತಾನೇ ನೀಲಾಂಜನ ಪಾತ್ರವನ್ನು ಹೊಕ್ಕು, ನೃತ್ಯವನ್ನು ಮುಂದುವರಿಸಿದನು.ಸಭೆಯಲ್ಲಿ ಬೇರೆ ಯಾರಿಗೂ ನರ್ತಕಿಯ ಪಾತ್ರಧಾರಿಯ ಮಾರುವೇಷದ ಅರಿವಾಗದಿದದರೂ, ವೃಷಭ ದೇವನಿಗೆ ಮಾತ್ರ ನೀಲಾಂಜನೆಯ ಅದೃಶ್ಯದ ಅರಿವು ಥಟ್ಟನೇ ತಿಳಿದು ಹೋಯಿತು. ಅವನ ಮನಸ್ಸು ಆ ಕ್ಷಣದಿಂದ ವೈರಾಗ್ಯವನ್ನು ಹೊಂದಿತು.


"ನಾರೀರೂಪದ ಯಂತ್ರಂ

 ಚಾರುತರಂ ನೋಡೆ ನೋಡೆ ಕರಗುದಿದೀ ಸಂ

 ಸಾರದನಿತ್ಯತೆ ಮನದೊಳ್

 ಬೇರೂರಿದುದೀಗಳೆಂತಿದಂ ಕಡೆಗಣಿಪೆಂ"


ಆ ಕ್ಷಣದಿಂದಲೇ ಈ ದೇಹದ ಅನಿತ್ಯತೆಯ ಅರಿವಾಗಿ, ವೃಷಭ ದೇವ ಈ ಸಂಸಾರ ದ ವಿಷಯ ಸುಖ ಬೋಗಗಳಲ್ಲಿ ವೈರಾಗ್ಯವನ್ನು ತಾಳಿದನು."


ಇದೊಂದು ಆದಿಪುರಾಣ ಕಾವ್ಯದಲ್ಲಿ ಬರುವ ಅದ್ಭುತ ಪ್ರಸಂಗ. ಈ ನೀಲಾಂಜನೆಯ ನೃತ್ಯವೇ ವೃಷಭ ದೇವನನ್ನು ಭೋಗದಿಂದ ಯೋಗಕ್ಕೆ, ರಾಗದಿಂದ ವಿರಾಗಕ್ಕೆ,ಸಂಸಾರದಿಂದ ಸಂನ್ಯಾಸಕ್ಕೆ ಕೊಂಡೊಯ್ದು

"ಆದಿದೇವ" ನನ್ನಾಗಿಸಿ, ಪ್ರಥಮ ತೀರ್ಥಂಕರನನ್ನಾಗಿಸಿತು. 

ಭೋಗದ ತುತ್ತು ತುದಿಯಿಂದ ದಿಢೀರನೆ ವೈರಾಗ್ಯಕ್ಕೆ 

ಹೋಗುವಂತೆ ಮಾಡಿದ ಈ "ನೀಲಾಂಜನೆಯ ನೃತ್ಯ"

ವಿಶಿಷ್ಟವಾದ ನೃತ್ಯ."


ಅಂದಿನ ತರಗತಿ ಮುಗಿದರೂ, ಕಾವ್ಯಳ ಮನಸ್ಸು ನೀಲಾಂಜನೆಯ ನೃತ್ಯದಲ್ಲೇ ಸೇರಿ ಹೋಗಿತ್ತು.

ಅವಳ ಮನಸ್ಸು ನೀಲಾಂಜನೆಯ ನೃತ್ಯದ ಅದ್ಭುತ ವರ್ಣನೆಯ ರಸಾಸ್ವಾದನೆ ಮಾಡುತ್ತಿದ್ದರೂ, ಜೊತೆ ಜೊತೆಗೆ, ವೃಷಭದೇವನ ಮನಸ್ಸನ್ನು ಭೋಗದಿಂದ ವೈರಾಗ್ಯ ದ ಕಡೆ ಸೆಳೆದುಕೊಂಡ ಈ ನೀಲಾಂಜನೆಯ ನೃತ್ಯದ ಪರಿಣಾಮ ಅಂತಿತಹುದಲ್ಲ ಅಂತಲೂ ಚಿಂತನೆ ನಡೆಸುತ್ತಿತ್ತು.

ಅಂದು ರಾತ್ರಿ ಅವಳು ಮನೆಗೆ ಹೋಗಿ , ಆದಿಪುರಾಣ ದ ಮೂಲಗ್ರಂಥವನ್ನು ಹಿಡಿದು 

ನಿಧಾನವಾಗಿ ಓದುತ್ತಾ ಹೋದಳು. ಹಳೆಗನ್ನಡದ ಕೆಲವು ಪದಗಳು ಕ್ಲಿಷ್ಟಕರವೆನಿಸಿದರೂ, ಕಾವ್ಯದ ಓಘದಲ್ಲಿ ಮುಳುಗಿ ಬಿಟ್ಟಳು. 

ಅಂದು ಅವಳಿಗೆ ಆದಿಪುರಾಣ ದಂತಹ ಮಹಾಕಾವ್ಯ ದ ರಸಾಸ್ವಾದನೆಯ ಮಹತ್ವ ತಿಳಿಯಿತು.ಜೊತೆಗೆ ಜೀವನದ ನಶ್ವರತೆಯ ಬಗ್ಗೆಯೂ ಅರಿವಾಯಿತು.

ಮಹಾಕಾವ್ಯಗಳನ್ನು ಮೂಲ ಗ್ರಂಥ ಹಿಡಿದು ಓದುವುದರಿಂದ ಎಂತಹ ಕಾವ್ಯೋಲ್ಲಾಸ ಸಿಗುತ್ತದೆ ಎಂದು ಅವಳಿಗೆ ಅನುಭವವಾಯಿತು.



Rate this content
Log in

Similar kannada story from Abstract