ನನಸು
ನನಸು
ಸೊಂಟದ ಕೆಳಗಿನ ಮೂಳೆ ಮುರಿತದಿಂದ ಸುಮಾರು ಒಂದು ತಿಂಗಳಿನಿಂದಲೂ ಹಾಸಿಗೆ ಹಿಡಿದು ಮಲಗಿದ್ದ ವೆಂಕೋಬ ರಾವ್ , ಅಸಹಾಯಕತೆಯಿಂದ ಒಂದೇ ಸಮನೆ ಬಳಲುತ್ತಿದ್ದರು. ನಿವೃತ್ತಿ ಯಾಗಿ ಒಂದೆರಡು ವರ್ಷಗಳ ಕಾಲ ಆರಾಮವಾಗಿ ಕಾಲ ಕಳೆಯುತ್ತಿದ್ದ ಅವರು, ಒಂದು ದಿನ ಏಣಿಯಿಂದ ಕೆಳಗೆ ಬಿದ್ದಾಗ,
ಅವರ ಸೊಂಟದ ಮೂಳೆ ಮುರಿದು, ಹಾಸಿಗೆ ಹಿಡಿಯುವಂತಾಗಿತ್ತು. ತನಗೆ ಹೀಗಾಗಿ ಹೋಯಿತಲ್ಲ ಎಂಬ ಚಿಂತೆಯಿಂದ ಅವರ ಬಿ.ಪಿ. ಶುಗರ್ ಹೆಚ್ಚಾಗುತ್ತಾ ಹೋಯಿತು. ರಕ್ತ ದಲ್ಲಿನ ಸೋಡಿಯಂ ಲೆವೆಲ್ ಆಗಾಗ ಕಡಿಮೆಯಾಗುತ್ತಿದ್ದು ದ್ದರಿಂದ, ಅವರು ಏನೇನೋ ಮಾತನಾಡುತ್ತಾ ಇರುತ್ತಿದ್ದರು.
ಒಂದು ದಿನ ವೆಂಕೋಬ ರಾವ್ ಬೆಳಿಗ್ಗೆ ಕಾಫಿ ಕೊಡಲು ಬಂದ ಹೆಂಡತಿಯ ಕೈ ಹಿಡಿದು ಕೊಂಡು ತುಂಬಾ ಆತಂಕದಿಂದ,
"ನೋಡೇ ರಾಜಿ,ನಿನ್ನೆ ನನ್ನ ಕನಸಿನಲ್ಲಿ ನನ್ನ ದೊಡ್ಡ ಅಣ್ಣ,ನನ್ನ ಅಮ್ಮ,ನನ್ನ ತಂಗಿ ಎಲ್ಲರೂ ಬಂದಿದ್ದರು. ಅವರೆಲ್ಲರೂ ನನ್ನ ಕೈ ಹಿಡಿದು ಕೊಂಡು, 'ನೀನೂ ನಮ್ಮ ಜೊತೆ ಬಂದು ಬಿಡು ಒಟ್ಟಿಗೆ ಇರೋಣ' ಎಂದರು.ನಾನು ಖುಷಿ ಯಾಗಿ ಅವರು ಜೊತೆ ಹೊರಡಲು ಮಲಗಿದ್ದಲ್ಲಿಂದ ಮೇಲೆ ಏಳಲು ಪ್ರಯತ್ನ ಪಟ್ಟೆ. ನನಗೆ ಮೇಲಕ್ಕೆ ಏಳಲು ಆಗಲೇ ಇಲ್ಲ. ಬಲವಂತವಾಗಿ ಏಳುವುದಕ್ಕೆ ಪ್ರಯತ್ನ ಮಾಡಿದಾಗ, ನನ್ನ ಸೊಂಟದ ಕೆಳಗೆ ವಿಪರೀತ ನೋವಾಯಿತು. ತಕ್ಷಣ ಕಣ್ಣು ಬಿಟ್ಟೆ.
ಇದು ಬೆಳಗಿನ ಜಾವದ ಕನಸೆಂದು ತಿಳಿಯಿತು. ಇದೇನು ಸೂಚನೆಯೊ ಕಾಣೆ" ಎಂದರು.
"ಅಯ್ಯೋ ಸುಮ್ಮನಿರಿ, ನಿಮಗೆ ದೈಹಿಕವಾಗಿ ಅಸಹಾಯಕ ಸ್ಥಿತಿ ಇರುವುದರಿಂದ, ಮನಸ್ಸಿನಲ್ಲಿ ಬೇಡದ ಚಿಂತೆ ತುಂಬಿಕೊಂಡಿದ್ದೀರಿ. ಎಲ್ಲಾ ಕನಸುಗಳು
ನನಸಾಗುವುದೇ? ಸುಮ್ಮನೆ ಮಲಗಿಕೊಳ್ಳಿ " ಹೆಂಡತಿ ರಾಜಮ್ಮ ಗಂಡನಿಗೆ ಧೈರ್ಯ ಹೇಳಿ ,ಖಾಲಿ ಕಾಫಿ ಲೋಟ ಹಿಡಿದು ಹೊರಟಳು.
ಇದೇ ರೀತಿ ವೆಂಕೋಬ ರಾಯರಿಗೆ ಈಗಾಗಲೇ
ಸ್ವರ್ಗ ಸ್ಥರವಾಗಿದ್ದ ಅವರ ತಂದೆ,ತಾಯಿ,ಅಣ್ಣ,ತಂಗಿ ಎಲ್ಲರೂ ಕನಸಿನಲ್ಲಿ ಆಗಾಗ್ಗೆ ಬರುತ್ತಿದ್ದರು. ಅವರು ಇದನ್ನು ಅವರ ಹೆಂಡತಿ ಮಕ್ಕಳಿಗೆ ಹೇಳುತ್ತಿದ್ದಾಗಲೆಲ್ಲಾ, ಅವರೆಲ್ಲರೂ "ಇದೊಂದು ರೀತಿಯ ಭ್ರಮೆ"ಎನ್ನುತ್ತಾ ಸುಮ್ಮನಿದ್ದರು .
ವೆಂಕೋಬ ರಾಯರಿಗೆ ಈ ರೀತಿಯ ಕನಸುಗಳು ಹೆಚ್ಚಾಗಿ, ಒಮ್ಮೊಮ್ಮೆ ಅವರ ಹೆಂಡತಿ ಮತ್ತು ಮಕ್ಕಳಿಗೂ ಸ್ವಲ್ಪ ಆತಂಕ ಮೂಡಿತು.
ಕೆಲವು ತಿಂಗಳುಗಳ ನರಳುವಿಕೆಯಿಂದ ಇಂಚಿಂಚಾಗಿ ಇಳಿದು ಹೋದ ವೆಂಕಟರಾಯರು, ಒಂದು ದಿನ ಬೆಳಗಿನ ಜಾವ ಪ್ರಾಣ ಬಿಟ್ಟರು.
ನಂತರ,ಗಂಡನ ಕಳೇಬರದ ಪಕ್ಕ ಕುಳಿತಿದ್ದ ರಾಜಮ್ಮ,ಗಂಡನಿಗೆ ಬೀಳುತ್ತಿದ್ದ ಬೆಳಗಿನ ಜಾವದ ಕನಸು ನಿಜವಾಗಿಯೂ ಅವರ ಸಾವಿನ ದ್ಯೋತಕವೇ? ಎಂದು ಪೇಚಾಡಿ ಕೊಳ್ಳುತ್ತಿದ್ದರು