ನಿರ್ಧಾರ.
ನಿರ್ಧಾರ.
ರಾಮಪ್ಪನಿಗೆ ಹತ್ತು ಜನ ಕೂತುಂಡರೂ ಸವೆಯದಷ್ಟು ಭೂ ಸಂಪತ್ತಿತ್ತು. ಜೊತೆಗೆ ರಾಮಪ್ಪನಿಗೆ ಕೈಕೆಲಸವೂ ಇತ್ತು. ಸಮಾಜದಲ್ಲಿ ಗೌರವಾದರಗಳೂ ಇದ್ದವು. ಅವನ ಹೆಂಡತಿ ಒಳ್ಳೆಯವಳಾಗಿದ್ದಳು. ವಿವಾಹಾನಂತರ ಮೊದಲ ಮಗು ಹೆಣ್ಣಾಯಿತು. ಎಲ್ಲರೂ ಸಂತಸ ಪಟ್ಟರು.ರಾಮಣ್ಣನೂ ಸಂತಸದಿಂದಿದ್ದ. ಎರಡನೆಯದೂ ಹೆಣ್ಣಾಯಿತು. ಯಾರೂ ಬೇಸರಿಸಲಿಲ್ಲಾ. ಮೂರನೆಯದು ಹೆಣ್ಣಾದಾಗ, ನಾಲ್ಕನೆಯದು ಗಂಡಾದರೆ ಮತ್ತೂ ಒಳ್ಳೆಯದಾಗುತ್ತದೆ ಎಂದು ಸುಮ್ಮನಾದರು. ನಾಲ್ಕನೆಯ ಮಗು ಹೆಣ್ದಾದಾಗ ಎಲ್ಲರೂ ಮುಖ ಮುಖ ನೋಡಿಕೊಂಡರು.ರಾಮಣ್ಣ ಮಾತ್ರ ನಿರ್ಧಾರ ಮಾಡಿಬಿಟ್ಟಿದ್ದ,ನನಗೆ ಗಂಡು ಮಗು ಬೇಕೇಬೇಕೆಂದು.ಸರಿ ಹೆಂಡತಿ ಮಾಡಬಹುದೇನು?.ಗಂಡನ ಹಟಕ್ಕೆ ಆಕೆ ಹಡೆದಳು ಆರು ಹೆಣ್ಣಾದವು.ಚಿಂತೆ ಇಲ್ಲಾ ಬಿಡು ,ನನಗೆ ಗಂಡು ಬೇಕೇ ಬೇಕೆಂದ ಗಂಡ. ಇಷ್ಟರಲ್ಲಾಗಲೇ ಮೊದಲ ಮಗಳು ಮೈನೆರೆದಳು. ಎರಡನೆಯದೂ ಈಗಲೋ ಆಗಲೋ ಎಂಬಂತೆ ಕಾಣುತ್ತಿತ್ತು.ಹೆಣ್ಣು ಮಕ್ಕಳು,ಕೊಟ್ಟಮನೆಗೆ ಹೋಗುವಂಥವು.ಅವುಗಳಿಗೆ ಹೆಚ್ಚು ಕಾಳಜಿ ಯಾರಿಂದಲೂ ಸಿಗಲಿಲ್ಲಾ. ಒಮ್ಮೊಮ್ಮೆ ಹಿರಿಯ ಮಗಳಿಗೆ ಅನ್ನಿಸುವುದು ನಾವೇನು ಪಾಪ ಮಾಡಿದ್ದೆವು. ಅಪ್ಪನಿಗೆ ನಾವು ಮಕ್ಕಳಲ್ಲವೇನು. ಎಲ್ಲರ ಮನೆಯಲ್ಲೂ ಕೇವಲ ಒಂದೋ ಎರಡೋ ಮಕ್ಕಳಿರುತ್ತವೆ ನಮ್ಮನೆಯಲ್ಲಿ ಮಾತ್ರ ಯಾಕೆ ಹೀಗೆ. ನಾನು ಯಾಕಾದರೂ ಹಿರಿಯ ಮಗಳಾಗಿ ಹುಟ್ಟಿದೆನೋ. ಯಾವಾಗಲೂ ಅಮ್ಮ ತಪ್ಪಿದರೆ ಅಪ್ಪ ನನಗೆ ಕರೆದು ಕೆಲಸ ಹೇಳುತ್ತಲೇ ಇರುತ್ತಾರೆ. ನೀನು ಶಾಲೆಗೆ ಹೋದೆಯಾ ಬಿಟ್ಟೆಯಾ ಎಂದು ಕೇಳುವವರಾರೂ ಇಲ್ಲಾ. ಸದಾ ಅಮ್ಮ ಹೆರುವ ಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡೇ ತಿರುಗುತ್ತಿರಬೇಕು. ಒಬ್ಬರು ತಪ್ಪಿದರೆ ಇನ್ನೊಬ್ಬರನ್ನು ಎತ್ತಿ ಎತ್ತಿ ನನ್ನ ಕೈಗಳು ರಟ್ಟೆಗಳು ಮೇಲೇಳದಂತೆ ನೋಯುತ್ತವೆ. ಆದರೂ ನನಗೇ ಹೆಚ್ಚು ಕೆಲಸ ಬೀಳುತ್ತವೆ. ಕೇಳಿದರೆ ಅವ್ವೀ ನೀನು ಹಿರಿ ಮಗಳು ಸಹನೆ ಇರಬೇಕು ಎನ್ನುವ ಅಪ್ಪನೂ ನನ್ನನ್ನೇ ಕರೆದು ಕೆಲಸ ಹೇಳುವನು. ಏನೂ ಸರಿಯಾಗಿ ಉಣ್ಣುವಂತಿಲ್ಲಾ . ತಿನ್ನುವಂತಿಲ್ಲಾ. ಯಾರಾದರೂ ತಂಗಿಯರು ಸದಾ ನನಗೆ ಸರ್ಪಗಾವಲಿರುವರು. ಸಾಕಪ್ಪಾ ಸಾಕು ಈ ಅಪ್ಪ ಅಮ್ಮನ ತಾಪತ್ರಯ ಎಂದು ಗೊಣಗುವಳು.
ಹೀಗೆ ಕಾಲಕಳೆಯುವಷ್ಟರಲ್ಲಿ ಯಾರೋ ಮಧ್ಯವಯಸ್ಕ ಆಸ್ತಿ ಅಂತಸ್ತು ಇದ್ದವನು ಬಂದ ಹೆಣ್ಣು ಕೇಳಲೆಂದು. ಸರಿ ರಾಮಣ್ಣನ ಬುದ್ದಿ ಚುರುಕಾಯಿತು. ಅವನಿಗೆ ಗಂಡಿನ ವಯಸ್ಸಿಗಿಂತಾ ಅವನ ಆಸ್ತಿ ಮುಖ್ಯವೆನಿಸಿ ಹದಿಹರೆಯದ ಹಿರಿಯ ಮಗಳನ್ನು ಧಾರೆಎರೆದುಬಿಟ್ಟ.. ಅವನ ಹೆಮ್ಮೆ ನೋಡುವಂತಿತ್ತು ಶ್ರೀಮಂತಿಕೆಯ ಗತ್ತು ಇವನಿಗೇ ಬಂದಂತಾಗಿ ಬಿಟ್ಟಿತ್ತು. ಈಗ ಅಂತೂ ಹಿರಿಯ ಮಗಳು ಗಂಡನ ಮನೆ ತಲುಪಿದಳು. ಇತ್ತ ರಾಮಣ್ಣನ ಆಸೆ ತೀರಲೇ ಇಲ್ಲಾ. ಹೆಂಡತಿ ಮತ್ತೆ ಹೆತ್ತಳು. ಅಹಾ ಏನು ಅದೃಷ್ಟಾಂತೀರಿ. ಈ ಬಾರಿ ಗಂಡೇ ಹುಟ್ಟಿಬಿಟ್ಟಿತು. ಸರಿ ಸಂಭ್ರಮಾಚರಣೆ ಮಾಡಿಬಿಟ್ಟ ರಾಮಪ್ಪಾ. ಇತ್ತ ವರುಷ ತುಂಬುತ್ತಿದ್ದಂತೆ ಹಿರಿಯ ಮಗಳೂ ಗರ್ಭಿಣಿ ಎಂಬ ಸುದ್ದಿ. ಸರಿ ತಾಯಿ ಮಗಳ ಬಾಣಂತಿತನ ಜೊತೆಗೇ ನಡೆಯಿತು. ರಾಮಣ್ಣನ ಹೆಂಡತಿ ಸಂಕೋಚದಿಂದ ಮುದುಡಿ ಬಿಟ್ಟಳು. ಯಾರ ಮನೆಗೂ ಹೋಗುವುದನ್ನೇ ಬಿಟ್ಟಳು. ಈಕೆ ಬಿಟ್ಟರೆ ಕಾಲ ಬಿಡುವುದೇ. ಎರಡು ಮೂರನೇ ಮಕ್ಕಳು ಮೈನೆರೆದು ನಿಲ್ಲುತ್ತಿದ್ದಂತೆ ಅವರಿವರು ಕೇಳಿದವರಿಗೆ ರಾಮಣ್ಣ ಧಾರೆ ಎರೆದುಕೊಟ್ಟ. ಅಂತೂ ಪ್ರಾಯ ತಗ್ಗುತ್ತಿದ್ದಂತೆ ರಾಮಣ್ಣನ ಮನೆಯಲ್ಲಿ ಬರು ಹೋಗುವ ಜನ ಜಾಸ್ತಿ. ನೆಂಟರಿಷ್ಟರು, ಹೆಚ್ಚು. ಈ ನಡುವೆ ಮಗನನ್ನು ಅತಿ ಮುದ್ದಿನಿಂದ ಬೆಳೆಸಿದ ರಾಮಣ್ಣ. ಅವನು ಏನು ಮಾಡಿದರೂ ಚೆಂದ ರಾಮಣ್ಣನಿಗೆ. ಮಗ ಉಡಾಳನಾದ. ವಯಸ್ಸಿಗೆ ಮೊದಲೇ ದುಷ್ಟ ಸಹವಾಸ ಕಾರಣ ದುರ್ಮಾರ್ಗ ಹಿಡಿದ. ದುಡಿಮೆಗೆ ಹೇಗೂ ಅಪ್ಪನಿರುವನಲ್ಲಾ. ಕೇಳುವ ಮೊದಲೇ ಹಣ ಅವನ ಕೈಗೆ ಸಿಗುತ್ತಿತ್ತು. ಅಪ್ಪಕೊಡದಿದ್ದರೆ ಸೋದರಿಯರು ನೆಂಟರಿಷ್ಟರಲ್ಲಿ ಹಣ ಸಂಗ್ರಹಿಸುವುದನ್ನು ಕಲಿತ. ಮೋಜು ಮಸ್ತಿಯಲ್ಲಿ ಕಾಲಕಳೆಯುತ್ತಾ ಅಪಾಪೋಲಿಯಾದ. ರಾಮಣ್ಣ ಕಣ್ಣು ತೆರೆಯುವ ವೇಳೆಗೆ ಪರಿಸ್ಥಿತಿ ಕೈಮೀರಿತ್ತು. ಈಗ ರಾಮಣ್ಣ ಚಿಂತಿಸತೊಡಗಿದ. ನಾನು ತಪ್ಪು ಮಾಡಿದೆ. ಹುಡುಗನನ್ನು ಶಿಕ್ಷೆಯಲ್ಲಿ ಬೆಳೆಸಲಿಲ್ಲಾ. ಗಂಡು ಹುಡುಗನೆಂದು ಅತಿ ಸಲುಗೆ ನೀಡಿದೆನೆಂದು ಕೈಕೈಹಿಸುಕಿಕೊಂಡ ಆದರೆ ಮಾಡುವುದೇನು?. ಹುಡುಗ ದುಷ್ಚಟಗಳ ದಾಸನಾಗಿ ಬಹುವಿಧ ರೋಗಗಳಿಗೆ ಶರೀರವನ್ನು ದಾನಮಾಡಿದ್ದ. ಯಾವ ಔಷಧಿ ಮದ್ದೂ ಮಗನ ಆರೋಗ್ಯ ಭಾಗ್ಯಕ್ಕೆ ನೆರವಾಗಲಿಲ್ಲಾ. ಹುಡುಗನು ಸಕಲ ಗುಣ ಸಂಪನ್ನನಾದ ಕಾರಣ ಯಾರೂ ಹೆಣ್ಣು ಕೊಡಲಿಲ್ಲಾ. ಉಡಾಳನಾದ ಮಗ ಉಂಡಾಡಿ ಗುಂಡನಂತೆ ಕಾಲ ಹಾಕಿ ಈಗ ಅಪ್ಪನೆದುರೇ ಹಾಸಿಗೆ ಹಿಡಿದ. ಹೆತ್ತ ತಪ್ಪಿಗೆ ಅಪ್ಪನೇ ಔಷದಿ ಕುಡಿಸುವನು. ಅಮ್ಮನ ಕಣ್ಣೀರು ತಪ್ಪಲೇ ಇಲ್ಲಾ. ಹಾಗೆ ಹೀಗೆನ್ನುವಷ್ಟರಲ್ಲಿ ರಾಮಪ್ಪ ವ್ಯಥೆಯಿಂದ ಕುಗ್ಗಿ ಮನೋರೋಗಿಯಾದ. ಅಪ್ಪ ಮಕ್ಕಳಿಬ್ಬರನ್ನೂ ನೋಡುತ್ತಾ ತಾಯಿ ಬಳಲಿಬೆಂಡಾದಳು. ಈಗ ಅಪ್ಪ ಮೊದಲು ಶಾಶ್ವತ ನಿದ್ರೆಗೆ ಜಾರಿದ. ಕೆಲ ಸಮಯದಲ್ಲೇ ಮಗನೂ ಅಪ್ಪನ ಹಾದಿ ಹಿಡಿದ. ಈಗ ಕುಲದೀಪಕನೂ ಇಲ್ಲಾ . ಅವನ ತಂದೆಯೂ ಇಲ್ಲ. ಕುಲಕ್ಕೆ ದೀಪ ಹಚ್ಚಲು ಯಾರಾದರೊಬ್ಬ ಹೆಣ್ಣು ಮಕ್ಕಳೇ ಬರುವರು. ತಾಯಿಯ ಆರೈಕೆ ಮಾಡುವರು. ನೋಡಿದವರು ರಾಮಣ್ಣನಿಂದ ಘನವಾದ ಪಾಠ ಕಲಿತರು. ಹೆಣ್ಣಿರಲಿ ಗಂಡಿರಲಿ,ಜ ವಾಬ್ದಾರಿಯುತ ಮಕ್ಕಳಿರಲಿ ಎಂದು ಮನಗಂಡರು
