ಮಕ್ಕಳ ಸಂಭಾಷಣೆ.
ಮಕ್ಕಳ ಸಂಭಾಷಣೆ.
ರಾಮು ಸೋಮು ನೆರೆಹೊರೆಯ ಮನೆಯ ಮಕ್ಕಳು.ಅವರಲ್ಲಿ ಅನ್ಯೂನ್ಯತೆ ಇತ್ತು.ಅವರಿಬ್ಬರೂ ಸಮ ವಯಸ್ಕರು.ಸಮಾನ ಮನಸ್ಕರೂ ಹೌದು.ಊಟ ತಿಂಡಿ ಆಟ ಪಾಠ ಎಲ್ಲಾ ಒಟ್ಟೊಟ್ಟಿಗೆ ಮಾಡುತ್ತಾರೆ.ಸದಾ ನಗುತ್ತಾ ಆಡುವ ಮಕ್ಕಳವರು.
ಇವತ್ತು ರಾಮುವಿನ ಮನೆಯಲ್ಲಿ ಜನವೋ ಜನ.ಎಲ್ಲರೂ ಗಡಿಬಿಡಿ ಗೌಜಿಯಲ್ಲಿರುವರು. ಮಗುವಿನ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲಾ. ರಾಮುವಿನ ತಾಯಿ ಮೊದಲೇ ನಿರೀಕ್ಷಿಸಿ ಹೇಳಿದ್ದಂತೆ, ಸೋಮುವಿನ ತಾಯಿಯೇ ರಾಮುವನ್ನೂ ಕೂರಿಸಿಕೊಂಡು ಉಣ್ಣಿಸುವ ಕೆಲಸ ಮಾಡಿದರು.ಇಬ್ಬರೂ ಊಟಮಾಡುತ್ತಾ ಕೆಲ ಸಂಭಾಷಣೆಯಲ್ಲಿ ಮುಳುಗಿದರು. ಇಬ್ಬರೂ ಗುಟ್ಟಾಗಿ ಮಾತನಾಡತೊಡಗಿದರು. ಸೋಮುವಿನ ತಾಯಿಗೂ ಕುತೂಹಲವಾಯ್ತು. ಹುಷಾರಾಗಿ ಅವರ ಸಂಭಾಷಣೆಯನ್ನು ಸಂಗ್ರಹಿಸಿದರು. ಸೋಮು ಕೇಳಿದ, ಯಾಕೋ ರಾಮು ನೀನು ಇವತ್ತು ಮನೆಗೆ ಹೋಗಲ್ವಾ?
ಇಲ್ಲಾ ಕಣೋ ಸೋಮು. ನಮ್ಮನೇಲಿ ಬಹಳ ಜನ ಸೇರಿದ್ದಾರೆ. ನನ್ನನ್ನು ಯಾರೂ ಕೇಳೋರೇ ಇಲ್ಲ.ಎಲ್ಲಾ ಏನೇನೋ ಕೆಲಸದಲ್ಲಿ ತೊಡಗಿಕೊಂಡುಬಿಟ್ಟಿದ್ದಾರೆ ಕಣೋ. ನಮ್ಮಮ್ಮ ಅಂತೂ ಹತ್ತಿರಕ್ಕೇ ಬಿಟ್ಕೊಳ್ಳಲ್ಲಾ. ಹೊರಗೆ ಹೋಗಿ ಆಡ್ಕೋ ಹೋಗೋ ಅಂತಿರ್ತಾರೆ. ನಮ್ಮಪ್ಪನೂ ಅಷ್ಟೇ. ಬಹಳ ಬಿಜಿಯಾಗಿದ್ದಾರೆ. ಇನ್ನು ಅಜ್ಜಿ ತಾತನ ಕಥೆನೋ ಕೇಳೋದೇ ಬೇಡಾ ಕಣೋ.
ಹೌದೇನೋ ರಾಮು ಅದೇಕೋ. ಏನಾಯ್ತು ನಿಮ್ಮನೇಲಿ.?.
ಅಯ್ಯೋ ನಮ್ಮ ಸೋದರತ್ತೆ ಮದುವೆ ಕಣೋ. ಅದಕ್ಕೆ ಎಲ್ಲರೂ ಬಹಳ ಬಿಜಿಯಾಗಿದ್ದಾರೋ.
ಅರೇ ರಾಮು , ಮದುವೆ ಅಂದ್ರೇನೋ. ಅದೇಕೆ ಅಷ್ಟು ಬ್ಯುಸಿ ಹೇಳೋ.
ಸೋಮು ನಿನಗೆ ಅಷ್ಟೂ ಗೊತ್ತಿಲ್ವೇನೋ ನಾಳೆ ನಮ್ಮತ್ತೇನ ಮದುವೆ ಮಾಡಿ ಬೇರೆ ಊರಲ್ಲಿನ ನಮ್ಮ ಮಾವನ ಮನೆಗೆ ಕಳಿಸಿ ಬಿಡುತ್ತಾರಂತೆ ಕಣೋ.
ಅದಕ್ಕೇನಂತೆ ನಿನಗೇನಾಗಬೇಕೋ ಅದರಿಂದಾ?.
ಅಹಾ ಸರಿಯಾಗಿ ಕೇಳಿದೆ ಕಣೋ ಸೋಮು. ನನಗೆ ಎಲ್ಲರೂ ಹೊಸ ಬಟ್ಟೆ ಬರೆ ತಿಂಡಿ ತಿನಿಸು ಕಾಸು ಎಲ್ಲಾ ಕೊಡಿಸಿ ಮುದ್ದಿಸುತ್ತಾರೆ ಕಣೋ.
ಅರರೇ ಹಾಗಾದ್ರೆ ಇನ್ಮೇಲೆ ನಿಮ್ಮತ್ತೆ ನಿಮ್ಮ ಮನೆ ಬಿಟ್ಟು ಹೋಗಬೇಕೇನೋ, ರಾಮು?.
ಹೌದಂತೆ ಕಣೋ ಸೋಮು. ನಮ್ಮಮ್ಮನೂ ಬೇರೆ ಊರಿನ ಬೇರೊಬ್ಬರ ಮನೆಯಿಂದಲೇ ಬಂದವರಂತೆ ಕಣೋ.
ಹೌದೇನೋ ರಾಮು.ಇದೇಕೋ ನನಗೆ ಬಹಳ ವಿಚಿತ್ರಾನ್ನಿಸುತ್ತಿದೆ ಕಣೋ.ಯಾಕಪ್ಪಾಂದ್ರೆ ನಮ್ಮನೇಲಿ ಎಲ್ಲರೂ ಮನೆಯವರನ್ನೇ ಮದುವೆಯಾಗಿದ್ದಾರೆ ಕಣೋ ರಾಮು. ನೋಡು ನಮ್ಮಮ್ಮನ್ನ ನಮ್ಮಪ್ಪ,ನಮ್ಮಚಿಕ್ಕಮ್ಮನ್ನಾ ನಮ್ಮ ಚಿಕ್ಕಪ್ಪಾ ಹೀಗೆ ಮದುವೆ ಮಾಡಿಕೊಂಡಿದ್ದಾರಪ್ಪಾ.
ಹೌದೇನೋ ಸೋಮು ಹಾಗಾ.ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲಾ ಬಿಡೋ ಸೋಮು.ಹಾಗಾದರೆ ನಾವೀಗಲೇ ಮನೆಯಲ್ಲಿ ವಿಚಾರಿಸಬೇಕುಕಣೋ ನೀನೂ ಬರ್ತೀಯಾ ಜೊತೆಗೋಗ್ಹೋಣ?
