Sulochana C.M.

Action Classics Others

4  

Sulochana C.M.

Action Classics Others

ಅನೂಹ್ಯತೆಗಳ ಮಾಲೆಯೇ ಬದುಕು.

ಅನೂಹ್ಯತೆಗಳ ಮಾಲೆಯೇ ಬದುಕು.

3 mins
12


ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ .

ಅವನು ಹೇಳ್ದಂತೆ ಕುದುರೆ ನಡೆ ನೀನ್

ಮದುವೆಗೋ ಮಸಣಕೋ ಮಂಕುತಿಮ್ಮಾ....ಡಿವಿಜಿ.


ಡಿವಿಜಿಯವರ ಕಗ್ಗ ಬದುಕಿಗೆ ಬಲು ಸನಿಹ.ನಾವು 2019ರಲ್ಲಿ ಉತ್ತರ ಭಾರತ ಪ್ರವಾಸದಲ್ಲಿದ್ದೆವು. ಈ ಬಾರಿಯ ವಿಶೇಷವೆಂದರೆ ನಾನು ಇಪ್ಪತ್ತೆಂಟು ಜನ ಬಂಧುಗಳೇ ಒಗ್ಗೂಡಿ ಬೆಂಗಳೂರಿನ ಒಂದು ಟ್ರಾವೆಲ್ ಏಜನ್ಸಿ ಮೂಲಕ ಪ್ರವಾಸ ಮಾಡಿದೆವು.ಏಜಂಟರು ನಮ್ಮನ್ನು ವಿಶೇಷಾಸಕ್ತಿಯಿಂದ ನೋಡಿಕೊಂಡರು. ನಾವೆಲ್ಲಾ ಹಿರಿಯ ನಾಗರೀಕರೇ ಆಗಿದ್ದೆವು. ಕೆಲ ಮಧ್ಯವಯಸ್ಕ ಬಂಧುಗಳೂ ನಮ್ಮೊಂದಿಗಿದ್ದರು. ನಮ್ಮ ಆಯ್ಕೆಯ ಸ್ಥಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ನಮಗೆಲ್ಲಾ ಈ ಸ್ಥಳಗಳು ಸುಪರಿಚಿತವಿದ್ದವು.ಆದರೆ ನಮಗೆ ಉತ್ತರ ಭಾರತದ ಆಹಾರ ಒಗ್ಗದೇ ಸಮಸ್ಯೆಯಾಗುತ್ತಿತ್ತು.ಹಾಗಾಗಿ ನಮ್ಮ ಆರೋಗ್ಯದೃಷ್ಟಿ,ಹಾಗೂ ಅನುಕೂಲತೆಗಳ ಕಾರಣ ನಾವೇ ಸಾಕಷ್ಟು ಸೀಟುಗಳನ್ನು ಕೂಡಿಸಿಕೊಂಡು ಸೌಲಭ್ಯ ನಿರ್ವಹಣೆಗಾಗಿ ಏಜಂಟರನ್ನು ಬಳಸಿಕೊಂಡಿದ್ದೆವು.ನಮ್ಮ ಪ್ರವಾಸ ಸುಗಮವಾಗಿತ್ತು.ಭಗವದನುಗ್ರಹದಿಂದ ಎಲ್ಲೆಡೆ ದೇವರ ದರುಶನ ದೊರೆಯಿತು.ಕೇದಾರ ಬದರಿ,ಗಂಗೋತ್ರಿ,ಯಮುನೋತ್ರಿಯರ ದರುಶನ ನೆಮ್ಮದಿ ತಂದಿತ್ತು.

ನಮ್ಮ ಪ್ರವಾಸ ಬೆಂಗಳೂರಿಂದ ಆರಂಭವಾಯ್ತು.ಎಲ್ಲರೂ ಬೆಂಗಳೂರು ರೈಲು ನಿಲ್ದಾಣದಲ್ಲಿ ಕಲೆತು ದೆಹಲಿತನಕ ನಮ್ಮ ಆಹಾರ ದಾಸ್ತಾನಿನಲ್ಲೆ ತಲುಪಿದೆವು.ದೆಹಲಿಯಲ್ಲಿ ರೈಲು ನಿಲ್ದಾಣಕ್ಕೆ ನಮ್ಮ ಏಜಂಟರು ತಮ್ಮ ವಾಹನದಲ್ಲಿ ಬಂದು ಕಾದಿದ್ದರು.ಅಲ್ಲಿಂದ ಮುಂದೆ ಅವರ ಸುಪರ್ದಿನಲ್ಲಿ ಮುನ್ನಡೆದೆವು.ಬಹು ಕಾಲದ ಅನುಭವವಿರುವ ಏಜಂಟರು.ಈ ಏಜನ್ಸಿಯವರ ಮೂಲಕ ನಾನು ಪ್ರಥಮ ಬಾರಿಗೆ 2006ರಲ್ಲಿ ಬದರಿ ಕೇದಾರಗಳ ವೀಕ್ಷಣೆ ಮಾಡಿದ್ದೆ.ಅಂದರೆ ಆಗಲೇ ಹದಿಮೂರು ವರ್ಷಗಳಾಗಿದ್ದವು.ನಮ್ಮ ಬಸ್ಸಿನ ಮುಂಭಾಗದಲ್ಲಿ ಒಬ್ಬ ವಯೋವೃದ್ಧರು, ಕೃಶಕಾಯ ಜೀವ ಕುಳಿತಿತ್ತು.ಎಲ್ಲ ನೌಕರ ಚಾಕರ,ಚಾಲಕರೂ ಅವರ ಬಳಿಸಾರಿ ಬಹು ಗೌರವದಿಂದ ವರ್ತಿಸುತ್ತಿದ್ದರು.ಸ್ವಲ್ಪ ಸಮಯದ ನಂತರ ತಿಳಿಯಿತು ಆ ವೃದ್ಧ ವ್ಯಕ್ತಿಯೇ ನಮ್ಮ ಪ್ರವಾಸದ ಏಜಂಟರು ಎಂದು.ನನಗೆ ಒಮ್ಮೆಲೇ ಶಾಕ್ ಆದಂತಾಯ್ತು.ಕಾರಣ ಆ ವ್ಯಕ್ತಿ ಈಗಲೋ ಆಗಲೋ ಎನ್ನುವಂತಾ ಜೀರ್ಣ ಶೀರ್ಣ ದೇಹಿಯಾಗಿದ್ದರು.ಈ ವ್ಯಕ್ತಿಯೇ ನಾನು ಈ ಹಿಂದೆ ನೋಡಿದ್ದವರು ಎಂದು ಆಶ್ಚರ್ಯವೂ ಆಯ್ತು.ಹಾಗಾದರೆ ನಮ್ಮ ಪ್ರವಾಸದ ಗತಿ ಏನಪ್ಪಾ ದೇವರೇ,ಈತ ಯಾವಾಗ ಟಿಕೇಟು ಪಡೆಯುತ್ತಾರೋ. ನಮ್ಮ ಟೀಂನ ಗತಿ ಹೇಗಪ್ಪಾ ಎಂಬ ಚಿಂತೆ ಮನದಲ್ಲಿ ಮುಸುಕಿದರೂ ಯಾರಲ್ಲಿಯೂ ಈ ಗಂಭೀರ ವಿಚಾರವನ್ನು ನಾನು ಚರ್ಚಿಸದೇ ದೇವರ ಮೇಲೆ ಭಾರಹಾಕಿ ಸುಮ್ಮನಾದೆ.

ನಮ್ಮ ಪ್ರವಾಸ ಸರಳವಾಗಿ ಸಂಪನ್ನವಾಗಿ ನಡೆದಿತ್ತು.ನಾವು ಬದರಿಗೆ ಬಂದಿಳಿದಾಗ ಸಂಜೆಯಾಗಿತ್ತು. ಅದು ಸೆಪ್ಟಂಬರ್ ತಿಂಗಳ ಕಾಲ .ಇನ್ನೇನು ಬದರಿ,ಕೇದಾರ ದೇಗುಲಗಳು ಆರುತಿಂಗಳಿಗಾಗಿ ಬಾಗಿಲು ಮುಚ್ಚುವ ಸಂಪ್ರದಾಯಿಕ ಸಂದರ್ಭ.ನಾವಿಲ್ಲಿ ನವರಾತ್ರಿಯನ್ನು ಮುಗಿಸಿಕೊಂಡು ಮರುದಿನವೇ ಪ್ರವಾಸದಲ್ಲಿದ್ದೆವು. ದೀಪಾವಳಿ ಹೊತ್ತಿಗೆ ಅಲ್ಲಿ ವಿಪರೀತ ಹಿಮಪಾತ ಆರಂಭವಾಗುವ ಸಮಯ. ಹಾಗಾಗಿ ಆರುತಿಂಗಳು ದೇವಾಲಯಗಳನ್ನು ಮುಚ್ಚಿ ದೇವತೆಗಳೇ ಪೂಜೆ ಮಾಡಿಕೊಳ್ಳುವಂತೆ ಅನುವು ಮಾಡುವ ಸಂದರ್ಭವದಾಗಿತ್ತು.ಅಂಥ ಚಳಿಯ ವಾತಾವರಣ ಅದು. ಪ್ರತಿದಿನ ನಾನು, ನಮ್ಮ ಏಜಂಟರನ್ನು ಅವರ ಇಡೀ ಶರೀರ ತೂಕ ಮಾಡಿದರೆ ಹತ್ತು ಕೆಜಿ ಇದ್ದಿತೇನೋ!. ಎದ್ದಿರುವರೇ ಎಂದು ನೋಡಿ ದೇವರಿಗೆ ಮನದಲ್ಲೇ ನಮಸ್ಕರಿಸುತ್ತಿದ್ದೆನು.ಅಷ್ಟರಲ್ಲಿ ನಮ್ಮ ಏಜಂಟರಿಗೆ ಮಕ್ಕಳು ಮರಿಗಳು ಯಾರೂ ಇಲ್ಲವೆಂದೂ,ಜೊತೆಗೆ ಬಂದಿದ್ದ ಅವರ ರೀತಿಯೇ ,ಅದೇ ಸ್ಥಿತಿಯಲ್ಲಿದ್ದ ಅವಿವಾಹಿತ ಸೋದರನನ್ನು ಬಿಟ್ಟರೆ ಬೇರಾರೂ ಇಲ್ಲವೆಂದು ತಿಳಿದು ,ಇನ್ನಷ್ಟು ದಿಗಿಲಾದದ್ದು ನಿಜ.

ಸರಿ ನಾವು ಬದರಿಯಲ್ಲಿ ನಮಗೆ ಕೊಡಮಾಡಿದ್ದ ಸ್ಥಳದಲ್ಲಿ ಲಗೇಜು ಇಟ್ಟು ಫ್ರೆಶ್ಆದೆವು.ದೇಶದ ಕೊನೆಯ ಗ್ರಾಮ ಮಾನಾ ಕ್ಕೂ ಹೋಗಿ ಸರಸ್ವತಿ ನದಿ ,ವ್ಯಾಸ ಗುಹೆ ಎಲ್ಲಾ ವೀಕ್ಷಿಸಿದೆವು.ಉಣ್ಣೆಯ ಬಟ್ಟೆಗಳನ್ನು ಮಕ್ಕಳಿಗಾಗಿ ಕೊಂಡು, ಬದರಿನಾಥನ ದರುಶನವನ್ನು ಪಡೆದು ಬಂದೆವು.ಎಂದಿನಂತೆ,ಬೆಂಗಳೂರಿನ ಭಟ್ಟರು ಅಂದೂ ಸಹಾ ಉತ್ತಮ ಆಹಾರ ನೀಡಿದರು.ಅವತ್ತು ಸಿಹಿ ಜೊತೆಗೆ ಬೊಂಡಾ ಎಲ್ಲಾ ಬಿಸಿಬಿಸಿಯಾಗಿ ತೃಪ್ತಿಯಾಗಿ ಬಡಿಸಿದರು.

ನಮ್ಮ ಆಹಾರದ ಘಮ ನಮ್ಮಂತೆ ಕರ್ನಾಟಕದಿಂದ ಬಂದಿದ್ದ ಇನ್ನೊಂದು ತಂಡದವರನ್ನೂ ಆಕರ್ಷಿಸಿತಂತೆ.ಅವರ ತಂಡದ ನಾಯಕ ಅಂದರೆ ಏಜಂಟರು ,ಸೀದಾ ನಮ್ಮ ಗುಂಪಿಗೆ ಬಂದು ನಮ್ಮೊಂದಿಗೆ ಬಹಳ ಸಂತೋಷದಿಂದ ಊಟ ಮಾಡಿದರು.ಅವರೂ ಬೆಂಗಳೂರಿನವರಂತೆ.ನಮ್ಮ ಏಜಂಟರ ಸ್ನೇಹಿತರಂತೆ.ಇಬ್ಬರೂ ಜೊತೆಯಲ್ಲಿ ಮಾತಾಡಿಕೊಂಡು ಊಟ ಮಾಡಿದರು.ಆವ್ಯಕ್ತಿ ಧಡೂತಿ ಅಸಾಮಿ.ನೋಡಲು ಕರ್ರಗೆ ,ಎತ್ತರವಾಗಿ,ಡುಮ್ಮಣ್ಣನಂತಿದ್ದರು.ಅವರ ಮಾತೂ ಗಂಟೆ ಹೊಡೆದಂತೆ ಕೇಳುತ್ತಿತ್ತು.ಇಬ್ಬರೂ ಆತ್ಮೀಯತೆಯಿಂದ ಮಾತಿಗೆ ತೊಡಗಿದ್ದರು.ನನ್ನ ಎದುರಿಗೇ ಕುಳಿತಿದ್ದ ಕಾರಣ ಆವ್ಯಕ್ತಿಯನ್ನು ನಾನು ಗಮನಿಸುತ್ತಿದ್ದೆ.ಬಲಭೀಮನಂತಾ ಶರೀರದ ಅಸಾಮಿಯಾಗಿ ಕಂಡರು.ಸರಿ.ಊಟವಾಗಿ ನಾವೆಲ್ಲಾ ನಮ್ಮ ನಮ್ಮ ಕೋಣೆಗೆ ವಿಶ್ರಾಂತಿಗೆ ಹೋದೆವು.ಆ ಇನ್ನೊಂದು ತಂಡದವರೂ ನಮ್ಮ ನಿವಾಸದಲ್ಲೇ ವಸತಿ ಮಾಡಿದ್ದರೆಂದು ನಮಗೆ ಬೆಳಗ್ಯೆ ತಿಳಿಯಿತು.

ಬೆಳಗ್ಯೆ ಬೇಗ ಎದ್ದು ತಯಾರಾಗಿರಬೇಕೆಂದು ನಮ್ಮಏಜಂಟರು ಸೂಚಿಸಿದ್ದರು.ಅದರಂತೆ ನಾವೆಲ್ಲಾ ನಮ್ಮ ನಮ್ಮ ಪ್ರಾಥಃವಿಧಿ ಮುಗಿಸಿ ಮುಂದಿನ ಪಯಣಕ್ಕೆ ಸಿದ್ಧರಾಗಿ ಕೋಣೆಯಿಂದ ಹೊರಬಂದೆವು.ಹೊರಗೆ ಜನರೆಲ್ಲಾ ಏನೋ ಕೋಲಾಹಲ ಭರಿತರಾಗಿದ್ದುದು ತಿಳಿಯಿತು.ನಾನು ಏನೆಂದು ನಾಲ್ಕು ಹೆಜ್ಜೆ ಮುಂದಿಟ್ಟೆ .ಅದೇ ಅದೇ ವ್ಯಕ್ತಿ ನಿನ್ನೆ ದಿನ ನನ್ನೆದುರಿಗೆ ಕುಳಿತು ತಮಾಷೆ ,ಹಾಸ್ಯ ಮಾಡಿಕೊಂಡು ಊಟವನ್ನು ಕೊಂಡಾಡಿ, ಮತ್ತೆ ಮತ್ತೆ ಬೇಕೆಂದು ಬಡಿಸಿ ಚಪ್ಪರಿಸುತ್ತಿದ್ದ ದಢೂತಿ ಅಸಾಮಿ.ಒಂದು ಖುರ್ಚಿಯಲ್ಲಿ ಕೂತಿದ್ದಾರೆ ಗೋಣು ಒಂದೆಡೆಗೆ ಸ್ವಾಧೀನವಿಲ್ಲದೇ ವಾಲಿದೆ.ನಾಲ್ವರು ಅಸಾಮಿಗಳು ಖಿರ್ಚಿಯನ್ನು ಪ್ರಯಾಸದಿಂದ ಎತ್ತಿ ತರುತ್ತಿದ್ದಾರೆ.ನಾನು ಭಯದಿಂದ ನಮ್ಮವರನ್ನು ಹುಡುಕಿಕೊಂಡು ಗಾಬರಿಯಿಂದ ಓಡಿದೆ.ಅಲ್ಲೆ ಇತರರೊಂದಿಗೆ ಮಾತನಾಡುತ್ತಿದ್ದ ಇವರೆಂದರು :ವಸ್ತು ಮುಂಜಾನೆ ಹೋಗಿದೆಯಂತೆ.ಅವರಿಗೆ ಯಾರೂ ಇಲ್ಲವಂತೆ.ಅಂತ್ಯಕ್ರಿಯೆಗೆ ಕಳಿಸುತ್ತಿದ್ದಾರಂತೆ .ನಿನಗೆ ಗಾಬರಿಯಾಗುತ್ತದೆಂದು ನಾನು ನಿನಗೆ ತಿಳಿಸಲಿಲ್ಲಾ,ಎಂದರು ,ನಿರ್ವಿಕಾರ ಭಾವದಿಂದ.ಒಂದು ಕ್ಷಣ ಎಲ್ಲಾ ಅಯೋಮಯ ಎನಿಸಿತಾದರೂ ನಂತರ ಅನಿಸಿತು ಃಈ ಪಯಣ ವೆಷ್ಟು ನಿಗೂಢ!.ಎಷ್ಟು ಜನ ಇಲ್ಲಿಗೆ ಬರುತ್ತಾರೆ ಭಗವಂತನ ಪಾದಸೇರುವಾಸೆಯಿಂದ.ಅಂಥಾದ್ದರಲ್ಲಿ ಈ ಧಡೂತಿ ಅಸಾಮಿ ಇನ್ನೂ ಅನಂತ ಕಾಲ ಬದುಕುವವರಂತೆ ತೋರುತ್ತಾ,ಸಂತೋಷದಿಂದ ತಿಂದುಂಡು ಹಾಯಾಗಿದ್ದವ.,ಎಲ್ಲರಿಗೂ ಪುಣ್ಯಯಾತ್ರೆ ಮಾಡಿಸುತ್ತಿದ್ದವ. ಏಕಾಂಗಿಯಾಗಿ ಬದುಕಿದ್ದವ,ಯಾವ ರೋಗವಿಲ್ಲದವರಂತೆ ಕಾಣುತ್ತಿದ್ದವ.ಪ್ರಯಾಣಿಕರು ಭರವಸೆ ಯಿಟ್ಟಿದ್ದವ .ಹೀಗೆ ಏಕಾಏಕಿ ಕೈಚೆಲ್ಲಿ ಹರಿಸನ್ನಿಧಿಯಲ್ಲಿ ಪಯಣ ಮುಗಿಸುವುದೇ!ಅಬ್ಬಾ ನಮ್ಮ ಊಹೆ ಕಲ್ಪನೆಗಳೆಲ್ಲಾ ಪೊಳ್ಳುಜೊಳ್ಳು.ನಮ್ಮ ಏಜಂಟರು ಉಸಿರಾಡುವುದೇ ದುಸ್ತರವಾಗಿದ್ದಂತೆ ತೋರುತ್ತಿದ್ದವರು, ನಮ್ಮನ್ನು ಪ್ರವಾಸ ಮುಗಿಸಲು ವ್ಯವಸ್ಥೆ ಮಾಡಿ ದೆಹಲಿ ರೈಲು ನಿಲ್ದಾಣದಲ್ಲಿ ಮತ್ತೆ ಕೈಮುಗಿದು ಬೀಳ್ಕೊಟ್ಟರಲ್ಲಾ.!ಭಗವಂತಾ ಏನು ನಿನ್ನ ಮಾಯೆ.ನಿಶ್ಚಿತವೆಂಬುದು ಅನಿಶ್ಚಿತ.ಅನಿಶ್ಚಿತವೆಂಬುದು ನಿಶ್ಚಿತವೇ ದೇವಾ.!ನಿನ್ನ ಮಹಿಮೆಯ ಮುಂದೆ ಯಾರೂ ಇಲ್ಲಾ ಏನೂ ಇಲ್ಲಾ ಎನಿಸಿತು.

.


Rate this content
Log in

Similar kannada story from Action