ಮಾತು ಬಂದಿದ್ದರೇ...!
ಮಾತು ಬಂದಿದ್ದರೇ...!
ಓ.. ನನ್ನ ರೂಮಿಗೆ ಯಾರೋ ಬರುತ್ತಿರುವ ಹಾಗಿದೆ. ನನ್ನ ಕೆಲಸ ಪ್ರಾರಂಭ ಮಾಡುವ ಸಮಯ ಬಂದಾಯ್ತಾ? ಅಯ್ಯೋ ಇಷ್ಟು ಬೇಗನಾ? ಎಂದು ಆಲೋಚಿಸುತ್ತಿದ್ದಂತೆ ಪೂರ್ವಿ ಆಗಷ್ಟೇ ಖರೀದಿಸಿದ ಟೆಡ್ಡಿ ಬೇರ್ ಒಂದನ್ನು ತಂದು ಹಾಸಿಗೆ ಮೇಲೆ ಇಟ್ಟು ಹೊರ ಹೋದಳು... ಅಬ್ಬಾ ಬಹುಶಃ ಇನ್ನು ಮುಂದೆ ನಮಗೆ ಕೆಲಸ ಸ್ವಲ್ಪ ಕಡಿಮೆಯಾಗಬಹುದು ಎನಿಸುತ್ತದೆ.ಹೊಸದಾಗಿ ಬಂದಿರುವ ಈ ಕೆಂಪು ಗೊಂಬೆ ತಂದು ಒಳ್ಳೆಯ ಕೆಲಸ ಮಾಡಿದಳು ಎಂದು ಮಾತನಾಡುತ್ತಿದ್ದ ತಲೆದಿಂಬುಗಳ ಮಾತನ್ನು ಕೇಳಿಸಿಕೊಂಡ ಟೆಡ್ಡಿ ಗೆ ಅಬ್ಬಾ ಅಂತೂ ನನಗೆ ಇಲ್ಲಿ ಗೆಳೆಯರಿದ್ದಾರೆ ಎಂದು ನಿಟ್ಟುಸಿರು ಬಿಡುತ್ತಾ... ಹಲೋ, ನಾನು ಟೆಡ್ಡಿ. ಇನ್ನೂ ಹೆಸರಿಟ್ಟಿಲ್ಲ ಏನ್ ಹೆಸರು ಇಡ್ತಾರೋ ಗೊತ್ತಿಲ್ಲ.. ಹೇಗಿದ್ದೀರಾ??ಅಂತ ತಲೆ ದಿಂಬುಗಳನ್ನು ಪ್ರಶ್ನಿಸಿತು. ಇಷ್ಟು ದಿನ ತುಂಬಾ ಕಷ್ಟ ಇತ್ತು ಈಗ ನೀನು ಬಂದಿದ್ದೀಯಲ್ಲ ಇನ್ನು ನಾವು ಆರಾಮ್ ಎಂದು ಹೇಳಿ ನಗಲು ಆರಂಭಿಸಿದವು. ತಲೆದಿಂಬುಗಳು ನಗುವುದನ್ನು ನೋಡಿ ಟಡ್ಡಿಗೆ ಚಿಂತೆ ಹತ್ತಿತು. ನನಗೆ ಈ ಮನೆ ಹೊಸದು. ಮನೆಯವರ ಬಗ್ಗೆ ನನಗೆ ಪರಿಚಯ ಇಲ್ಲ .ಈ ಮನೆಯಲ್ಲಿ ನೀವೇ ನನ್ನ ಮೊದಲ ಗೆಳೆಯರು ಮನೆಯಲ್ಲಿ ಎಷ್ಟು ಜನ ಇದ್ದಾರೆ? ಪರಿಚಯ ಮಾಡಿ ಕೊಡುತ್ತೀರಾ ಎಂದು ಪ್ರಶ್ನಿಸಿತು. ಓಹೋ ಈ ಮನೆಯವರ ಕಥೇನಾ ಹೇಳ್ತೀವಿ ಕೇಳು. ಬರಿ ಈ ಮನೆಯವರ ಕಥೆ ಮಾತ್ರ ಏಕೆ ಅದರ ಜೊತೆ ನಮ್ಮ ಗೋಳಿನ ಕಥೆಯನ್ನು ಹೇಳುತ್ತೇನೆ ಕೇಳು ಎಂದು ಕಥೆ ಹೇಳಲು ಆರಂಭಿಸಿತು.ನಾನು ಈ ಮನೆಗೆ ಬಂದು ಅದಾಗಲೇ ಐದು ವರ್ಷ ಕಳೆದಿದೆ .ಇವಳು ಬಂದು ಒಂದು ವರ್ಷವಾಯಿತು ಅಷ್ಟೇ, ಈ ಮನೆಯ ಯಜಮಾನಿ ಇದ್ದರಲ್ಲಾ ಅದೇ ಈಗ ನಿನ್ನನ್ನು ತಂದು ಹಾಸಿಗೆ ಮೇಲೆ ಇಟ್ಟು ಹೋದಳಲ್ಲ ಅವಳ ಅಮ್ಮ ಹೆಸರು ಪುಷ್ಪ. ಅದೇನೋ ಕುತ್ತಿಗೆ ನೋವು ಅಂತ ನನ್ನ ಜೊತೆಗೆ ಇದ್ದ ನನ್ನ ಗೆಳೆಯನನ್ನು ಬದಿಗಿರಿಸಿ ಇವಳನ್ನು ತಂದು ಇಲ್ಲಿ ಇಟ್ಟಿದ್ದಾರೆ. ಅದು ಎಷ್ಟರಮಟ್ಟಿಗೆ ಕುತ್ತಿಗೆ ನೋವು ಕಡಿಮೆ ಆಯ್ತು ಎಂದು ನನಗೆ ತಿಳಿಯದು ಎಂದು ಹೇಳುತ್ತಿದ್ದಂತೆ ಪಕ್ಕದಲ್ಲಿ ಇದ್ದ ದಿಂಬು ದುರುಗುಟ್ಟಿಕೊಂಡು ಕಥೆ ಹೇಳುತ್ತಿದ್ದ ದಿಂಬನ್ನು ನೋಡಿತು. ಆಯ್ತು ಆಯ್ತು ಗುರಾಯಿಸ್ಬೇಡ...ಸಾರಿ, ಬಂದವನನ್ನು ಈಗಲೇ ಹೆದರಿಸಬೇಡ ಎಂದು ಹೇಳುತ್ತಾ ಕಥೆಯನ್ನು ಮುಂದುವರಿಸಿತು.ಈ
ಮನೆಯ ಯಜಮಾನ ಪರಮೇಶ್ವರ್ ಕೆಲಸಕ್ಕೆಂದು ಹೊರಗೆ ಹೋಗಿದ್ದಾರೆ. ಅವರು ಬಂದರೆಂದರೆ ಮೊದಲು ಹುಡುಕುವುದೇ ನನ್ನನ್ನು.ಬೆನ್ನಿಗೆ ಇಟ್ಟುಕೊಳ್ಳಲು ನಾನೇ ಬೇಕು ತಲೆಗೆ ಇಟ್ಟುಕೊಳ್ಳಲು ನಾನೇ ಬೇಕು. ಒಟ್ಟಿನಲ್ಲಿ ಆ ಮನುಷ್ಯ ಮನೆಯಲ್ಲಿದ್ದರೆ ನನಗೆ ಬಿಡುವಿಲ್ಲ ಇಡೀ ದಿವಸ ಅವರ ಶಾಖವನ್ನು ಸಹಿಸಿಕೊಳ್ಳಬೇಕು. ಇನ್ನು ಈ ಮನೆಯ ಮಗ.ಹೆಸರು ಪಂಕಜ್. ಕಾಲೇಜಿಗೆ ಹೋಗುವ ಹುಡುಗ. ಅವನ ಕಾಲ ಮೇಲೆ ನನ್ನನ್ನು ಇರಿಸಿಕೊಳ್ಳದಿದ್ದರೆ ಅವನಿಗೆ ಸಮಾಧಾನವಿಲ್ಲ. ತಿನ್ನುವಾಗಲೂ ನಾ ಬೇಕು. ಅವನು ಹಾಡು ಕೇಳುತ್ತಿದ್ದರು ನಾನು ಬೇಕು. ಓದುವಾಗಲು ನಾನು ಬೇಕು. ಸಾವಿರ ರೂಪಾಯಿ ಕೊಟ್ಟು ಟೇಬಲ್ ತಂದಿದ್ದರೂ ನನ್ನ ಮೇಲಿಟ್ಟುಕೊಂಡೇ ಬರೆಯಬೇಕು. ಇನ್ನು ರಾತ್ರಿ ಮಲಗುವಾಗಂತೂ ತಲೆಯಡಿಗೂ ನಾನೇ ಬೇಕು ಅಪ್ಪಿಕೊಂಡು ಮಲಗಲು ನಾನು ಪಕ್ಕದಲ್ಲಿ ಇರಲೇಬೇಕು.
ಕಥೆಯ ಮಧ್ಯ ಪ್ರವೇಶಿಸುವಂತೆ ಟೆಡ್ಡಿ ಕೇಳಿತು ಎಲ್ಲರೂ ಇದೇ ಕೋಣೆಯಲ್ಲಿಯೇ ಮಲಗುತ್ತಾರ??
ಅಯ್ಯೋ ದಡ್ಡ ಇದು ಫೋರ್ ಬಿ ಎಚ್ ಕೆ.ನಾಲ್ಕು ರೂಮ್ಗಳಿವೆ .ನಾನು ಬರೀ ನನ್ನ ಕಥೆಯನ್ನು ಹೇಳುತ್ತಿಲ್ಲ ನನ್ನ ಜೊತೆಗಾರರ ಕಥೆಯನ್ನು ಸೇರಿಸಿ ಹೇಳುತ್ತಿದ್ದೇನೆ. ಇದು ನನ್ನೊಬ್ಬನ ಕಥೆಯಲ್ಲ.ನನ್ನ ಎಲ್ಲಾ ಮಿತ್ರರ ಕಥೆ. ಮಧ್ಯ ಮಾತನಾಡದೆ ಕೇಳಿಸಿಕೋ ಎಂದು ಗದರಿ ಕಥೆಯನ್ನು ಮುಂದುವರಿಸಿತು. ಈ ಮನೆಯಲ್ಲಿ ಒಬ್ಬರು ಅಜ್ಜ ಇದ್ದಾರೆ. ಅವರಿಗೆ ರಾತ್ರಿ ಕಾಲು ಸೆಳೆತ ಬರುತ್ತದೆ ಕಾಲಿನಡಿಯಲ್ಲಿ ನಾನು ಬೇಕು .ಅವರು ಕಾಲಿಗೆ ಹಚ್ಚುವ ಆ ನೋವಿನ ಎಣ್ಣೆಯ ಘಾಟು ಉಸಿರುಗಟ್ಟಿಸುವಂತಿರುತ್ತದೆ. ಅದು ಹೇಗೆ ಸಹಿಸಿಕೊಳ್ಳುತ್ತಾನೊ ಆ ನನ್ನ ಮಿತ್ರ. ಒಮ್ಮೊಮ್ಮೆ ತಲೆನೋವು ಎಂದು ಹಚ್ಚಿಕೊಳ್ಳುವ ಅಮೃತಂಜನ್ ಪರಿಮಳವನ್ನೇ ನನ್ನಿಂದ ಸಹಿಸಲಾಗದು. ನಿತ್ಯವೂ ಆ ನೋವಿನ ಎಣ್ಣೆಯ ಪರಿಮಳವನ್ನು ಎಣಿಸಿಕೊಂಡರೆ ತಲೆ ತಿರುಗಿದಂತಾಗುತ್ತದೆ. ಇನ್ನು ಅಜ್ಜನ ಮೊಮ್ಮಗಳು 3ವರ್ಷದ ಮಗುವೊಂದು ಮನೆಗೆ ಅಪರೂಪಕ್ಕೆ ಬರುತ್ತದೆ. ಆಟವಾಡುತ್ತಾ ಮಲಗುವ ಮಗುವಿಗೆ ರಕ್ಷಣೆಯಾಗಿ ನಮ್ಮನ್ನು ಬಳಸುತ್ತಾರೆ. ಆ ಮಗುವಿನ ಸುತ್ತಲೂ ಮಗು ಮಂಚದಿಂದ ಕೆಳಗೆ ಬೀಳದಂತೆ ನಮ್ಮನ್ನು ಇಡುತ್ತಾರೆ. ಆ ಮಗುವಿಗೆ ಒಬ್ಬ ಅಣ್ಣನಿದ್ದಾನೆ ಅವನಿಗೆ ಡಬ್ಲ್ಯೂ ಡಬ್ಲ್ಯೂ ಎಫ್ ನೋಡುವ ಚಟ. ಅದನ್ನು ನೋಡಿಕೊಂಡು ನಮ್ಮೊಂದಿಗೆ ಗುದ್ದಾಡುತ್ತಾನೆ. ಒಮ್ಮೊಮ್ಮೆ ಅವ ಕೊಡುವ ಪೆಟ್ಟು ಸಹಿಸಲಾಗದು. ಇನ್ನು ನಿನ್ನನ್ನು ಕರೆದುಕೊಂಡು ಬಂದಿದ್ದಾಳಲ್ಲ ಅವಳಿಗೆ ನಿದ್ದೆ ಕಣ್ಣಿನಲ್ಲಿ ಮಾತನಾಡುವ ಚಟ ಇದೆ. ಜೊತೆಗೆ ಬಾಯಿ ಕಳೆದುಕೊಂಡು ಜೊಲ್ಲು ಇಳಿಸುತ್ತಾ ಮಲಗಿರುತ್ತಾಳೆ.ಅದನ್ನೂ ಸಹಿಸಿಕೊಳ್ಳಬೇಕು. ಇನ್ನು ನಮಗೆ ಆ ತಾಪತ್ರಯವಿಲ್ಲ. ನೀನು ಬಂದಿದ್ಯಲ್ಲ ಇನ್ನು ಮುಂದೆ ಅವಳು ನಿನ್ನನ್ನು ಅಪ್ಪಿಕೊಂಡೆ ಮಲಗುತ್ತಾಳೆ. ಆಲ್ ದ ಬೆಸ್ಟ್ ಗೆಳೆಯ ಎಂದು ನಕ್ಕವು.
ಎಷ್ಟೇ ಕಷ್ಟವಾದರೂ ನಮ್ಮಿಂದ ಉಪಯೋಗವಿದೆಯಲ್ಲ ಎಂಬ ಸಾರ್ಥಕತೆ ನಮಗಿದೆ. ಅದೆಷ್ಟೋ ಜನ ಯಾರ ಬಳಿಯಲ್ಲಿಯೂ ಹೇಳಲಾಗದ ರಹಸ್ಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಎಷ್ಟೇ ಗಟ್ಟಿಗಿತ್ತಿಯರೆಂದು ಹೊರಗಿನ ಸಮಾಜಕ್ಕೆ ತೋರಿಸಿಕೊಳ್ಳುವ ಮಹಿಳಾ ಮಣಿಗಳ ಕಣ್ಣೀರಿಗೆ ಸಾಕ್ಷಿ ನಾವು. ಹದಿಹರೆಯದವರಂತೂ ಅವರ ಮನದ ಭಾವನೆಗಳನ್ನೆಲ್ಲಾ ಮಲಗುವಾಗ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನಾಚಿಕೆಯಾದರೂ ಸುಮ್ಮನೆ ಆಲಿಸಿಕೊಳ್ಳುತ್ತೇವೆ. ನಾವೆಂದರೆ ಎಲ್ಲರಿಗೂ ಅಷ್ಟು ನಂಬಿಕೆ. ನಂಬಿಕೆಯನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಹಾಗಾಗಿ ಏನನ್ನೂ ಆಲಿಸಿದವರಂತೆ ಸುಮ್ಮನಿರುತ್ತೇವೆ... ಈಗಷ್ಟೇ ಬಂದಿದ್ದೀಯಾ...ಪೂರ್ವಿ ಬೆಳೆಯುತ್ತಾ ಹೋದಂತೆ ನಿನಗೂ ಈ ಎಲ್ಲಾ ಅನುಭವಗಳು ಸಿಗುತ್ತದೆ ಎಂದು ಹೇಳಿ ಸುಮ್ಮನಾದವು..
ನಾವು ಉಪಯೋಗಿಸುವ ದಿಂಬು ಕುರ್ಚಿಗಳಿಗೆ ಮಾತು ಬಂದಿದ್ದರೆ ಎಂಬ ಚಿಕ್ಕ ಕಲ್ಪನೆ ಇದು. ಯಾರಿಗೆ ಗೊತ್ತು ಗಿಡ ಮರಗಳು ಆಡುವ ಮಾತುಗಳು ನಮಗೆ ಕೇಳಿಸದಂತೆ ಇತರ ವಸ್ತುಗಳು ಮಾತನಾಡಬಹುದಲ್ಲವೇ..
