ಹೃದಯ ದೀಪ ನಿನದೇ
ಹೃದಯ ದೀಪ ನಿನದೇ
(ಪ್ರತಿಬಂಧದಲ್ಲೂ ಬಂದಿಯಾಗದ ಪ್ರೀತಿ)
ಜಿಟಿ ಜಿಟಿ ಮಳೆ. ವಾತಾವರಣವೇ ನಡುಗು ಬರಿಸೋ ಅಷ್ಟು ತಂಪು. ಭಯ ಹುಟ್ಟಿಸೋ ಅಷ್ಟು ಕತ್ತಲು. ಸುತ್ತಲೂ ನೀರವ ಮೌನ. ಮಳೆ ಹನಿಯ ಸದ್ದು, ಒಮ್ಮೆಮ್ಮೆ ಕೂಗುವ ಗೂಬೆಯ ಸದ್ದು ಬಿಟ್ಟರೆ ಅಲ್ಲಿ ಸ್ಮಶಾನ ಮೌನ. ಹೌದು ನಿಜಕ್ಕೂ ಅದು ಸ್ಮಶಾನವೆ. ಈ ಕಾರ್ಗತ್ತಲ ಮಳೆಯಲ್ಲಿ ಅಲ್ಲಿ ಯಾವುದೇ ಅಂತ್ಯ ಸಂಸ್ಕಾರ ನಡೆಯುತ್ತಿಲ್ಲ. ಆದರೆ ಅಲ್ಲಿ ಒಬ್ಬ ಮಳೆಯ, ಚಳಿಯ, ಕತ್ತಲೆಯ ಯಾವೊಂದರ ಪರಿವೂ ಇಲ್ಲದೆ ಒಂದು ಸಮಾಧಿಯ ಮುಂದೆ ಕೂತು ಸಮಾಧಿಯ ಬಳಿ ನಿಲ್ಲಿಸಿದ ಕಲ್ಲಿನ ಮೇಲೆ ಬರೆದ ಹೆಸರನ್ನೇ ತದೇಕ ಚಿತ್ತದಿಂದ ನೋಡುತ್ತಾ, ಅದನ್ನೇ ತನ್ನ ಉಸಿರಾಟಕ್ಕೂ ಹೆಚ್ಚು ಬಾರಿ ಜಪಿಸುತ್ತಾ ಕೂತಿದ್ದಾನೆ. ಅವಳ ಹೆಸರು ಉಚ್ಚರಿಸುತ್ತಲೇ ಅವಳ ಸಮಾಧಿ ಮೇಲೆ ಬಿದ್ದನು. ಅವಳ ತೋಳ ತೆಕ್ಕೆಯಲ್ಲಿ ದಿನ ಕಳೆಯಲು ಬಯಸಿದ ಮನ, ಅವಳ ಮಡಿಲಲ್ಲಿ ಮಲಗಿ ಜಗತ್ತೇ ಮರೆಯಲು ಹಾತೋರೆದವನು ಇಂದು ಅವಳ ಸಮಾಧಿ ಮೇಲೆ ಮಲಗಿದ್ದಾನೆ. ಒಂದೇ ಸಾಮ್ಯತೆ ಎಂದರೆ, ಅವನಿಗೆ ಈಗಲೂ ಜಗದ ಪರಿವಿಲ್ಲಾ.
ಆ ಕಲ್ಲಿನ ಮೇಲಿನ ಬರಹ
ಹೆಸರು ಮುಕ್ತಿ
ಜನನ ೨೦ ೫ ೧೯೯೦
ಮರಣ ೨೦ ೫ ೨೦೧೩
******************
ಜೂನ್ ಮೊದಲ ವಾರ. ಕಾಲೇಜು ಫಸ್ಟ್ ಡೇ....
7-8 ಹುಡುಗಿಯರ ಗುಂಪೊಂದು (ಸೀನಿಯರ್ಸ್) ಫರ್ಸ್ಟ್ year ಒಬ್ಬ ಹುಡುಗಿಯನ್ನು ಸುತ್ತುವರೆದು ರಾಗ್ಗಿಂಗ್ ಮಾಡ್ತಾ ಇದ್ರು. (ಈ ಗುಂಪಿನ ನಾಯಕಿ ನಮ್ಮ ಹೀರೋಯಿನ್ ಮುಕ್ತಿ. ನಗರದ ಪ್ರತಿಷ್ಠಿತ ಶ್ರೀಮಂತ ಕುಟುಂಬದ ರಾಜಕುಮಾರಿ. ಶ್ರೀಮಂತಿಕೆಯ ದರ್ಪ ಹಾಗೂ ತನ್ನ ಸೌಂದರ್ಯ ಕಾಲೇಜ್ ನ ವಿಶ್ವ ಸುಂದರಿ. ಯಾರಿಗೂ ಕೇರ್ ಮಾಡದ ಶ್ರೀಮಂತ ಜಂಬದ ಕೋಳಿ.) ಆ ಹುಡುಗಿ ತುಂಬಾ ಹೆದರಿ ಅಳ್ತಾ ಇದ್ಲು.
ಕರೆಕ್ಟ್ ಟೈಂ ಗೆ ನಮ್ ಹೀರೋ ಎಂಟ್ರಿ ಆಯ್ತು. ( ಹೆಸರು ಭಕ್ತಾಮರ್. ಸ್ನೇಹಿತರೆಲ್ಲರಿಗೂ ನೆಚ್ಚಿನ ಭಕ್ತಿ. ಬಡ ಕುಟುಂಬದ ಹಿನ್ನೆಲೆ ಇದ್ರೂ ಕೂಡಾ ತನ್ನ ಓದಿನ ಚಾಕ ಚಕ್ಯತೆ ಇಂದ ಕಾಲೇಜ್ ಅಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ. ಇವನಿಗೆ ಕಾಲೇಜ್ ನಾ ಪ್ರತಿಯೊಬ್ಬರೂ ಪ್ರೀತಿಪಾತ್ರರು. ಆದರೆ ನಮ್ಮ ಜಂಬಾದ ಕೋಳಿ ಮುಕ್ತಿ and ಗ್ಯಾಂಗ್ ಬಿಟ್ಟು. ಅವರ ಮೇಲೆ ದ್ವೇಷ ಅಲ್ಲ. ಅವರ ಅಹಂಕಾರದ ಮೇಲೆ ತಿರಸ್ಕಾರ).
ನೀವುಗಳು ಒಂದು ಹೆಣ್ಣಾ. ನೀವೆಲ್ಲಾ ಹೆಣ್ಣು ಕುಲಕ್ಕೆ ಅಪಮಾನ.
ಏಯ್ ಯಾರ್ ಜೊತೆ ಮಾತಾಡ್ತಾ ಇದೀಯ ಅಂತ ನೆನಪಿದೆಯೇ?? ಪೂರ್ ಬಾಯ್. ಯೋಗ್ಯತೆಗೆ ತಕ್ಕಂತೆ ನಡ್ಕೊಳೋದ್ ಕಲೀಬೇಕು. ಎಂದು ಎಲ್ಲರೂ ನಕ್ಕರು
ಅವನಿಗೆ ಅವಮಾನ ಆದರೂ ಜಗ್ಗದೇ ಆ ಹುಡುಗಿಗೆ ಸಮಾಧಾನ ಮಾಡಿ ಧೈರ್ಯ ಹೇಳಿ ಕಳಿಸಿದ.
ಅವಳ ಅಹಂಕಾರ ಅವನಿಗೆ ಹೇಸಿಗೆ. ಹೆಣ್ಣು ಕುಲಕ್ಕೆ ಅವಳು ಕಪ್ಪು ಚುಕ್ಕೆ ಅನ್ನೋ ಭಾವ ಅವನದು.
ಇದು ಒಂದು ಘಟನೆಯ ಉದಾಹರಣೆ ಅಷ್ಟೇ. ಅವರಿಬ್ಬರ ಯೋಚನೆ, ಆಲೋಚನೆ, ದಾರಿ ಎಲ್ಲವೂ ವಿರುದ್ಧ ದಿಕ್ಕುಗಳೇ..
******************
ಅವನ ಮೇಲಿನ ಸಿಟ್ಟಿಗೆ ಅವನಿಗೆ ಆಟ ಆಡಿಸುವ ಉದ್ದೇಶದಿಂದ ಮುಕ್ತಿ ಹೇಗೋ ಅವನ ಫೋನ್ ನಂಬರ್ ಕಲೆಕ್ಟ್ ಮಾಡಿ ಅವನಿಗೆ ಮೆಸೇಜ್ ಮಾಡೋಕೆ ಶುರು ಮಾಡ್ತಾಳೆ. ಮೊದಮೊದಲು ಅವನು ಯಾವ್ದೋ unknown ನಂಬರ್ ಅಂತ ಉದಾಸೀನ ಮಾಡಿದ್ರು, ಪ್ರತಿದಿನ ಬರೋ ಮೆಸೇಜ್ ಗೆ ಒಂದು ದಿನ ರಿಪ್ಲೈ ಮಾಡ್ತಾನೆ. ಮುಕ್ತಿ ತನ್ನ ಹೆಸರು ಮೋಕ್ಷ ಎಂದು ತನ್ನ ಊರು ಪರಿಚಯ ಎಲ್ಲವನ್ನೂ ಬೇರೆ ಬೇರೆ ಹೇಳ್ತಾಳೆ.
ಅವಳ ಮೃದು ಧ್ವನಿ ಅವನ ಎದೆಯಲ್ಲಿ ಹೊಸ ತರಂಗ ಸೃಷ್ಟಿಸುತ್ತದೆ. ಅವನಲ್ಲಿ ನವೀನ ಭಾವ ಉದಯ ಆಗುತ್ತದೆ. ಅವನಿಗೆ ಅವಳ ಪರಿಚಯ ಇಷ್ಟ ಆಗುತ್ತದೆ. ಪರಿಚಯ ಸ್ನೇಹ ಆಗುತ್ತದೆ. ಇಬ್ಬರೂ ಪ್ರತಿದಿನ ಗಂಟೆ ಗಟ್ಟಲೆ ಮಾತನಾಡಲು ಶುರು ಮಾಡ್ತಾರೆ. ಊಟ ತಿಂಡಿ ಮರೆತರೂ ಪರಸ್ಪರ ಮಾತನಾಡುವುದು ಮರೆಯರು.
ಅವನೊಂದಿಗೆ ಆಟ ಆಡಲು ಅಂತ ಶುರು ಮಾಡಿದ ಫೋನ್ ಪುರಾಣ ಮುಕ್ತಿ ಮನದಲ್ಲಿ ಹೊಸ ಭಾವಗಳ ಉಗಮಕ್ಕೆ ನಾಂದಿ ಆಗುತ್ತದೆ. ಕ್ರಮೇಣ ಅವನ ಒಳ್ಳೆತನದ ದರ್ಶನ ಅವನ ಆದರ್ಶ ಬದುಕು ಅವಳಲ್ಲಿನ ಅಹಂಕಾರವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೆಣ್ತನ ಜಾಗೃತೆ ಗೊಳಿಸುತ್ತೆ. ಅವ ಎದುರಿಗೆ ಕಂಡಾಗ ಜಗಳ ಮಾಡುವುದು ಕಡಿಮೆ ಆಗುತ್ತದೆ. ಅವನೆಡೆಗೆ ಪ್ರೇಮ ನೋಟ ಒಲವ ಭಾವ ಶುರು ಆಗುತ್ತೆ.
ಅವಳ ಗೆಳತಿಯರಿಗೆ ಇವಳ ಫೋನ್ ಕಾಲ್ ಪುರಾಣ ತಿಳಿಯದು. ಇವಳ ಬದಲಾದ ವರ್ತನೆಗೆ ಅವರಿಗೆ ಆಶ್ಚರ್ಯ ಆಗುತ್ತದೆ. ಅವಳ ಬಳಿ ಅದನ್ನು ಕೇಳಿಯೂ ಕೇಳುತ್ತಾರೆ. ಎಲ್ಲರಿಗೂ ಇನ್ನು ಸ್ವಲ್ಪ ದಿನದಲ್ಲಿ ಕಾಲೇಜ್ ಮುಗಿಯುತ್ತೆ. ಮುಂದೆ ಯಾರ್ ಯಾರು ಎಲ್ಲಿ ಇರ್ತಿವೋ ತಿಳಿಯದು. ಇರುವ ಸ್ವಲ್ಪ ದಿನ ದ್ವೇಷ ಮರೆತು ಹಾಯಾಗಿ ಇರೋಣ ಎಂದು ಬಾಯಿಗೆ ಬಂದ ಸುಳ್ಳು ಹೇಳಿ ಅವರ ಬಾಯಿ ಮುಚ್ಚಿಸುತ್ತಾಳೆ.
ಇವಳ ಬದಲಾದ ವರ್ತನೆ ಭಕ್ತಿಯ ಗಮನಕ್ಕೂ ಬರುತ್ತದೆ. ಆದರೆ ಅವನು ಅದಕ್ಕೆ ಊಸರವಳ್ಳಿ ಎಂಬ ನಾಮಕರಣ ಮಾಡಿ, ಸುಂಟರಗಾಳಿ ಬಿಸೋ ಮೊದಲು ವಾತಾವರಣ ಶಾಂತವಾಗಿ ಇರುತ್ತದೆ. ಇವಳು ಬದಲಾಗಲು ಸಾದ್ಯವೇ ಇಲ್ಲ. ಇದು ಇವಳ ನಾಟಕವೇ ಎಂದು ಭಾವಿಸುತ್ತಾನೆ.
ಇಬ್ಬರ ಫೋನ್ ಮೆಸೇಜ್ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತದೆ. ಇಬ್ಬರ ಭಾಂದವ್ಯವೂ ಗಟ್ಟಿ ಆಗುತ್ತಾ ಬರುತ್ತದೆ. ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಕೆ. ಆದರೂ ಪರಸ್ಪರರ ಮನದಲ್ಲಿ ಒಲವು ಮೂಡಿರುವುದು ಇಬ್ಬರ ಅರಿವಿಗೂ ಬಂದಿರುತ್ತದೆ. ಅವನು ಅವಳನ್ನು ನೋಡಲು ಬಯಸಿದಾಗಲೆಲ್ಲಾ ಕಾಲ ಬಂದಾಗ ನಾನೇ ನಿನ್ನ ಕಣ್ಣೆದುರು ಬರ್ತೀನಿ. ಅಲ್ಲಿ ತನಕ ನನ್ನ ಫೋಟೋ ಕೂಡ ತೋರ್ಸಲ್ಲ ಅಂತ ಹೇಳ್ತಾ ಇರ್ತಾಳೆ. ಕ್ರಮೇಣ ಅವನು ಸುಮ್ಮನಾಗುತ್ತಾನೆ.
ಫೆಬ್ರವರಿ 14. ಪ್ರೇಮಿಗಳ ದಿನಾಚರಣೆ. ಮುಕ್ತಿ ತನ್ನ ಒಲವನ್ನು ಭಕ್ತಿ ಬಳಿ ಹೇಳಲು ತೀರ್ಮಾನಿಸಿ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಅವನಿಗಾಗಿ ಕಾಯುತ್ತಿರುತ್ತಾಳೆ. ಭಕ್ತಿಯೂ ಮೋಕ್ಷ ಹೇಳಿದ ಜಾಗಕ್ಕೆ ಅವಳನ್ನು ಮೊದಲ ಬಾರಿ ನೋಡುವ ಆತುರ, ಕಾತುರ ಹೊತ್ತು, ಅವಳಿಗೆ ತನ್ನ ಮನದ ಭಾವನೆ ತಿಳಿಸಿ ಅವಳೊಂದಿಗಿನ ತನ್ನ ಮುಂದಿನ ಜೀವನದ ಕನಸ ಕಾಣುತ್ತಾ ಬರುತ್ತಾನೆ.
ಸುತ್ತಲೂ 💖 ಶೇಪ್ ನ ರೆಡ್ ಬಣ್ಣದ ಬಲೂನುಗಳಿಂದ ಆ ಪ್ರದೇಶವೆಲ್ಲ ತುಂಬಿ ಹೋಗಿರುತ್ತದೆ. ಅವ ನಡೆದು ಬರುವ ಹಾದಿಯುದ್ದಕ್ಕೂ ಕೆಂಪು ಗುಲಾಬಿಯ ಹೂ ಹಾಸಿರುತ್ತದೆ. ಎಲ್ಲೆಲ್ಲಿಯೂ ಬಣ್ಣ ಬಣ್ಣದ ದೀಪಗಳ ಅಲಂಕಾರ. ಅದನ್ನೆಲ್ಲಾ ನೋಡುತ್ತಾ ಒಂದು ಕ್ಷಣ ಮೈ ಮರೆತು ತಾನು ಸ್ವರ್ಗದಲ್ಲಿರುವೆನೋ ಎಂದು ಭಾವಿಸುತ್ತಾನೆ. ಪ್ರಕೃತಿ ಸೌಂದರ್ಯದ ಜೊತೆ ಕೃತಕ ಅಲಂಕಾರದ ಸೌಂದರ್ಯವೂ ಸೇರಿ ಕಣ್ಣು ಕೋರೈಸುವ ಅಧ್ಬುತ ಲೋಕ ಸೃಷ್ಟಿ ಆಗಿರುತ್ತದೆ. ನೋಡುತ್ತಾ ತನ್ಮಯನಾಗಿ ನಿಂತವನ ಎಚ್ಚರಿಸಿದ್ದು ಅವನ ಮೊಕ್ಷಳ ಕರೆ. "ಏನು ಸಾಹೇಬರು ಅಲ್ಲೇ ನಿಲ್ಲುವಿರೋ ಅಥವಾ ನಮ್ಮನ್ನು ನೋಡುವಿರೋ" ಎಂಬ ಅವಳ ಒಲವಿನ ಮಾತು ಕೇಳಿ ಉನ್ಮಾದನಾಗಿ ಹೆಜ್ಜೆ ಮುಂದಿಡುತ್ತಾನೆ.
ಅವ ಎಣಿಸಿದಂತೆ ಅವನ ಎದುರಿಗೆ ಕೆಂಪು ಬಣ್ಣದ ಉದ್ದ ಗೌನ್ ತೊಟ್ಟ ಅವನ ಮನದ ಅರಸಿ ಮೋಕ್ಷ ಅವನಿಗೆ ಬೆನ್ನು ಮಾಡಿ ನಿಂತಿರುತ್ತಾಳೆ. ಅವಳ ಬೆನ್ನ ಮೇಲೆ ಬಿದ್ದ ನೀಳ ಕೇಶರಾಶಿ ಕಂಡು ಅವನ ಮೈ ಮನ ಪುಳಕಗೊಳ್ಳುತ್ತದೆ. ಹತ್ತಿರ ಹೋಗಿ ಅವಳ ಭುಜ ಹಿಡಿದು ಅವನೆಡೆಗೆ ತಿರುಗಿಸಿಕೊಳ್ಳುತ್ತಾನೆ. ಅವ ನಿರೀಕ್ಷಿಸಿದ ಅವನ ಒಲವಿನ ಮೋಕ್ಷ ಬದಲು ಅಲ್ಲಿ ನಿಂತಿದ್ದ ಮುಕ್ತಿಯನ್ನು ಕಂಡು ಅವನು ಕೋಪಾಗೊಳ್ಳುತ್ತಾನೆ. ನಿನಗೇನು ಕೆಲಸ ಇಲ್ಲಿ? ಇಲ್ಲಿ ನೀನು ಏನು ಮಾಡುತ್ತಿರುವೆ ಎಂದು ಹಲ್ಲು ಕಡಿಯುತ್ತಾನೆ. ಅಲ್ಲಿ ಮುಕ್ತಿ ಕಂಡಳು ಅನ್ನೋಕಿಂತ ಮೋಕ್ಷ ಕಾಣ್ತಾ ಇಲ್ಲ ಅನ್ನೋ ವೇದನೆ ಅವನಿಗೆ ಅವಳ ಮೇಲೆ ಕೋಪ ತರಿಸುತ್ತೆ. ಅವಳ ಯಾವ ಮಾತುಗಳನ್ನೂ ಅವ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನಾನೇ ನಿನ್ನ ಮೋಕ್ಷ ಎಂದು ಆಕೆ ಕೂಗಿ ಕೂಗಿ ಹೇಳಿದರೂ ಆ ದ್ವನಿ ಅವನ ಕರ್ಣ ಹೋಕ್ಕುವುದೇ ಇಲ್ಲ.
ಆಸೆ ಇಂದ ನೋಡ ಬಂದ ಒಲವ ಮೂರ್ತಿಯ ಕಾಣದೇ ಹತಾಶನಾಗಿ ಮುಕ್ತಿ ಮೇಲೆ ಕೋಪಗೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಅವನ ತಿರಸ್ಕಾರ ಆಸೆಯ ಮಹಾಪೂರವೇ ಕುಸಿದು ಬಿದ್ದು ಒಲವಿನ ಉತ್ತುಂಗ ಶಿಖರ ಏರ ಹೊರಟವಳು ಒಮ್ಮೆಲೇ ಪ್ರಪಾತಕ್ಕೆ ಬಿದ್ದು ಮೇಲೆ ಏಳಲೂ ಆಗದ ಪರಿಸ್ಥಿತಿ ಮುಕ್ತಿಯದು. ಅವನಾಡಿದ ಪ್ರತಿಯೊಂದು ಮಾತು ಅವಳ ಹೃದಯವನ್ನು ನೂರು ಚೂರಿಗಳಿಂದ ಯಾರೋ ಚುಚ್ಚಿ ಚುಚ್ಚಿ ಹಿರಿದ ಅನುಭವ.
"ನೀನು ಹೆಣ್ಣು ಜಾತಿಗೆ ಅವಮಾನ", "ನಿನ್ನ ಮುಖ ನೋಡಲು ನನಗೆ ಅಸಹ್ಯ ಅನಿಸುತ್ತೆ" "ಹೆಣ್ಣನ್ನು ಪೂಜೆ ಮಾಡೋ ಪವಿತ್ರ ಭೂಮಿಯಲ್ಲಿ ಹುಟ್ಟಿದ, ನಾನು ಅಸಹ್ಯ ಪಡೋ, ಏಕೈಕ ಹೆಣ್ಣು ನೀನು ಮಾತ್ರ" "ನಿನ್ನೆಡೆಗೆ ನನಗೆ ಸ್ನೇಹ ಭಾವವೇ ಇಲ್ಲ. ಇನ್ನು ಒಲವು ಮೂಡಲು ಸಾಧ್ಯವೇ ಇಲ್ಲ" "ನೀನು ನನ್ನ ಮೋಕ್ಷ ಆಗಲು ಸಾಧ್ಯವೇ ಇಲ್ಲ. ಅವಳು ದೇವತೆ. ನೀನು ದೆವ್ವಕ್ಕೆ ಸಮಾನ" "ಒಂದು ವೇಳೆ ನೀನೇ ಹೇಳಿದಂತೆ ನೀನೇ ಮೋಕ್ಷ ಅನ್ನೋದೇ ಸತ್ಯ ಆದರೆ ನನಗೆ ಮೊಕ್ಷಳೂ ಬೇಡ" "ನನಗೆ ಸುಳ್ಳು ಮೋಸ ಅರಿಯದ ಆ ಮುಗ್ಧ ಮೋಕ್ಷ ಇಷ್ಟ. ಅವಳಿಗೆ ನಿನ್ನಂತೆ ಇನ್ನೊಬ್ಬರ ಜೀವನದಲ್ಲಿ ಆಟ ಆಡುವುದು, ಇನ್ನೊಬ್ಬರ ಭಾವನೆಗಳ ಒಟ್ಟಿಗೆ ಆಟ ಆಡುವುದು ಗೊತ್ತಿಲ್ಲ. ನಿನ್ನ ಮುಖ ನನಗೆ ತೋರಿಸಬೇಡ" ಎಂದು ಅಲ್ಲಿ ನಿಲ್ಲದೇ ಹಿಂತಿರುಗಿ ನೋಡದೇ ಹೊರಟು ಹೋಗುತ್ತಾನೆ.
ಅವನ ಮಾತುಗಳ ಕೇಳಿ ಅವಳ ಹೃದಯವೇ ಸ್ತಬ್ಧ ಆಗುತ್ತದೆ. ಸುಮಾರು ಹೊತ್ತು ಅಲ್ಲೇ ಅತ್ತು ಸ್ವಲ್ಪ ಸುಧಾರಿಸಿ ಮನೆ ದಾರಿ ಹಿಡಿಯುತ್ತಾಳೆ. ಮನೆಗೆ ಬಂದು ಕೋಣೆ ಹೊಕ್ಕವಳ ದುಃಖ ಮಿತಿ ಮೀರಿದ್ದು. ಅವಳ ದುಃಖಕ್ಕೆ ಸಾಕ್ಷಿ ಒದ್ದೆ ಆದ ಅವಳ ತಲೆದಿಂಬು.
ಇತ್ತ ರೂಮಿಗೆ ಬಂದ ಭಕ್ತಿ ಮೊಕ್ಷಳಿಗೆ ಎಷ್ಟು ಬಾರಿ ಕರೆ ಮಾಡಿದರೂ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವನಿಗೆ ಮೋಕ್ಷ, ಮುಕ್ತಿ ಇಬ್ಬರ ಮೇಲೂ ಅಸಾಧ್ಯ ಕೋಪ. ಕೋಪಗೊಂಡ ಮರುಕ್ಷಣವೇ ಮುಕ್ತಿ ಹಠಮಾರಿ. ಅವಳು ಮೊಕ್ಷಾಗೆ ಏನಾದರೂ ಮಾಡಿರಬಹುದೇ, ಅವಳಿಂದ ಮೋಕ್ಷಾಗೆ ತೊಂದರೆ ಆಗಿದ್ದೆ ನಿಜ ಆದ್ರೆ ಮುಕ್ತಿಗೆ ನನ್ನಿಂದ ಉಳಿಗಾಲವಿಲ್ಲ ಎಂದು ಸ್ವಗತ ನುಡಿದು ಮಲಗುತ್ತಾನೆ. ಎಷ್ಟು ಒದ್ದಾಡಿದರು ನಿದ್ದೆಯ ಸುಳಿವಿಲ್ಲ. ಮೊಕ್ಷನ ಹುಡುಕಿ ಹೋಗಲು ಅವಳ ವಿಳಾಸ ಅವಳ ಕಾಲೇಜು ಯಾವುದೂ ತಿಳಿಯದು. ಅವಳ ಹೆಸರು ಒಂದು ಬಿಟ್ಟು ಅವಳ ಬಗ್ಗೆ ಅವನಿಗೆ ಬೇರೇನೂ ಗೊತ್ತಿಲ್ಲ.
ಹೀಗೆ ಸ್ವಲ್ಪ ದಿನ ಕಲೆಯುತ್ತೆ. ಕಾಲೇಜ್ ಅಲ್ಲಿ ಸದಾ ಪುಟಿದೇಳುವ ಉತ್ಸಾಹದ ಚಿಲುಮೆಯಂತೆ ಇದ್ದ ಭಕ್ತಿ ಇಂದು ಸರ್ವಸ್ವವನ್ನೂ ಕಳೆದುಕೊಂಡು, ಜೀವನದಲ್ಲಿ ಉತ್ಸಾಹವೇ ಇಲ್ಲದ ಜೀವಂತ ಶವದಂತೆ ಇರುವುದು ಅವನ ಆಪ್ತ ವಲಯಕ್ಕೆ ನಿಗೂಡ ಯಕ್ಷ ಪ್ರಶ್ನೆ. ಅವನ ಸಮಸ್ಯೆ ಏನು ಎಂದು ತಿಳಿಯದೇ ಅವನ ಪರಿಸ್ಥಿತಿ ಸುದಾರಿಸುವುದಾದರೂ ಹೇಗೆ ಸಾಧ್ಯ ಎಂಬುದೇ ಅವರೆಲ್ಲರ ಗೋಳು.
ಇತ್ತ ಆ ದಿನದ ನಂತರ ಭಕ್ತಿಯ ಕಣ್ಣೆದುರಿಗೇ ಬರದೇ, ಕಾಲೇಜ್ ಗೆ ಹೋದರೆ ಅವನ ಎದುರುಗೊಳ್ಳಬೇಕಾದ ಸಂದರ್ಭ ಒದಗಬಹುದು ಎಂದು ತನ್ನ ತಂದೆಯ ಪ್ರಭಾವ ಬಳಸಿ ಕಾಲೇಜ್ ಗೆ ಹೋಗದೇ ಮನೆಯಲ್ಲೇ ತನ್ನ ವಿಧ್ಯಾಭ್ಯಾಸ ಮುಂದು ವರೆಸಿದ ಮುಕ್ತಿಗೆ ಅವನ ವಾಸ್ತವದ ಅರಿವು ಇರದು. ಒಂದು ದಿನ ಅವಳ ಸ್ನೇಹಿತೆ ಫೋನ್ ಮಾಡಿ ಕಾಲೇಜಿನ ವಿಷಯ ಮಾತಾಡುತ್ತಾ ಮಾತಿನ ಮಧ್ಯೆ, ಭಕ್ತಿಯ ವಿಷಯವೂ ಬಂದು ಮುಕ್ತಿಯ ಎದುರಿಗೆ ಅವನ ವಾಸ್ತವ ಪರಿಸ್ಥಿತಿಯ ಅನಾವರಣಗೊಳ್ಳುತ್ತದೆ.
ಅವನ ಈಗಿನ ಪರಿಸ್ಥಿತಿಗೆ ತಾನೇ ಕಾರಣ. ಇದರಿಂದ ಅವನ ಭವ್ಯ ಭವಿಷ್ಯ ಹಾಳಾಗಬಾರದು ಎಂದು ಒಂದು ತೀರ್ಮಾನಕ್ಕೆ ಬಂದು, ಅವನಿಗೆ ಕರೆ ಮಾಡುತ್ತಾಳೆ. ಪ್ರತಿಕ್ಷಣವೂ ಅವಳ ಕರೆಯ ನಿರೀಕ್ಷೆಯಲ್ಲಿ ಇದ್ದ ಭಕ್ತಿಗೆ ಅವಳ ಕರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಆದಂತೆ ಆಗುತ್ತದೆ. ಅವಳಲ್ಲಿ ಕೇಳಲು ಸಾವಿರ ಪ್ರಶ್ನೆಗಳು ಇದ್ದರೂ ಅವಳ ಧ್ವನಿ ಕೇಳಿ ಅವನ ಸ್ವರವೇ ಹೊರಡದು. ಅವಳದ್ದು ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಏನಲ್ಲ.
ಆದರೂ ಅವಳೇ ಮೊದಲು ಮಾತು ಆರಂಭಿಸಿ, ಏನಾಯ್ತು ಹೇಗೆ ಏನು ಎಂಬ ಯಾವ ಮಾತು ಬೇಡ. ಇನ್ನು ಸ್ವಲ್ಪ ದಿನದಲ್ಲಿ ನಿನ್ನ ಪರೀಕ್ಷೆ ಶುರು ಆಗುತ್ತೆ. ನೀನು ಚೆನ್ನಾಗಿ ಓದಿ ನಿನ್ನ ಗುರಿ ಮುಟ್ಟು. ನಿನ್ನ ಗುರಿ ಮುಟ್ಟದ ದಿನ ನಾನು ನಿನ್ನೆದುರು ಬಂದು ಇಷ್ಟು ದಿನ ನಾನು ನಿನ್ನಿಂದ ದೂರ ಸರಿದ ಕಾರಣ ತಿಳಿಸುವೆ. ಅಲ್ಲಿಯವರೆಗೂ ನನ್ನನ್ನ ಏನೂ ಕೇಳಬೇಡ ಎಂದು ವಿನಂತಿ ಮಾಡುತ್ತಾಳೆ. ಅವಳಿಗೆ ಮುಕ್ತಿ ಏನಾದರೂ ಮಾಡಿರಬಹುದು ಎಂಬ ಆತಂಕದಲ್ಲಿ ದಿನ ಕಲೆಯುತ್ತಿದ್ದವನಿಗೆ ತನ್ನ ಹೃದಯದ ಒಡತಿ ಕ್ಷೇಮವಾಗಿ ಇರುವುದೇ ದೊಡ್ಡ ಸಮಾಧಾನವಾಗಿ ಅವಳ ಮಾತಿಗೆ ಒಪ್ಪುತ್ತಾನೆ. ಆದರೆ ಇನ್ನೂ ಮುಂದೆ ಹೀಗೆಲ್ಲ ಮಾಡದೇ ಮುಂಚೆ ಹಾಗೆ ಪ್ರತಿದಿನ ಕರೆ ಮಾಡಿ ಮಾತಾಡುವ ಒಪ್ಪಂದ ಮಾಡುತ್ತಾನೆ.
ಪರೀಕ್ಷೆ ಎಲ್ಲಾ ಮುಗಿದು ಪಲಿತಾಂಶ ಪ್ರಕಟಗೊಂಡು ಅವನು ಇಡೀ ಕಾಲೇಜ್ ಗೆ ಟಾಪರ್, 1st rank ಬರುತ್ತಾನೆ. ಈ ವಿಷಯ ಅವನ ಪ್ರೀತಿಯ ಮೋಕ್ಷಳಿಗೆ ತಿಳಿಸಬೇಕು ಎಂಬ ಖುಷಿಗೆ ಅವಳಿಗೆ ಕರೆ ಮಾಡುತ್ತಾನೆ. ಎಷ್ಟು ಬಾರಿ ಕರೆ ಮಾಡಿದರೂ ಆ ಕಡೆ ಇಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಅವನಿಗೆ ತುಂಬಾ ನಿರಾಸೆ ಆಗುತ್ತದೆ. ಪುನಃ ಪುನಃ ಪ್ರಯತ್ನ ಮಾಡುತ್ತಾನೆ. ಅವನ ಪ್ರಯತ್ನ ಪಲಿಸಿ ಕರೆ ಸ್ವೀಕರಿಸಲಾಗುತ್ತದೆ.
ಅವ ಮಾತನಾಡುವ ಮೊದಲೇ ಆ ಕಡೆ ಇಂದ ಒಂದು ಗಂಡು ದ್ವನಿ ಕೇಳುತ್ತದೆ. ಸರ್ ನೀವು ಯಾರು ನನಗೆ ತಿಳಿಯದು, ನೀವು ಕರೆ ಮಾಡಿರುವ ವ್ಯಕ್ತಿಗೆ ಆಕ್ಸಿಡೆಂಟ್ ಆಗಿದೆ. ನಾನೇ ಹಾಸ್ಪಿಟಲ್ ಸೇರ್ಸಿದ್ದಿನಿ. ಅವರ ಮೊಬೈಲ್ ಸೈಲೆಂಟ್ ಇದ್ದಿದ್ರಿಂದ ನನಗೆ ನೀವು ಕರೆ ಮಾಡಿದ್ದು ತಿಳಿದಿಲ್ಲ. ಅವರ ಫೋನ್ ಲಾಕ್ ಇದ್ದಿದ್ರಿಂದ ಈ ವಿಷಯ ಅವರ ಕಡೆಯವರಿಗೆ ತಿಳಿಸಲು ಸಾಧ್ಯ ಆಗಿಲ್ಲ. ನೀವು ಹಾಸ್ಪಿಟಲ್ ಬಂದ್ರೆ ನಾನು ಹೊರದುವೆ ಎಂದು ಹಾಸ್ಪಿಟಲ್ ಅಡ್ರೆಸ್ಸ್ ಕೊಟ್ಟು ಕರೆ ಸ್ಥಗಿತಗೊಳಿಸುತ್ತಾನೆ.
ಸುದ್ದಿ ತಿಳಿದ ಭಕ್ತಿಯ ಜಂಗಾಬಲವೇ ಉಡುಗಿ ಹೋಗುತ್ತದೆ. ಯಾರನ್ನು ಕಾಣಲು ಪ್ರತಿಕ್ಷಣ ಅವನ ಜೀವ ಹಂಬಲಿಸಿತ್ತೋ ಅವರನ್ನು ಇಂತಹ ಪರಿಸ್ಥಿತಿಯಲ್ಲಿ ನೋಡುವ ಪ್ರಸಂಗ ಅವನ ಊಹೆಗೂ ಮೀರಿದ್ದು. ಅವಸರದಿ ಹಾಸ್ಪಿಟಲ್ ದಾರಿ ಹಿಡಿಯುತ್ತಾನೆ.
ಇವನಿಗೆ ಮಾಹಿತಿ ನೀಡಿದ ವ್ಯಕ್ತಿ ಇವನ ಗುರುತಿಸಿ, ರಸ್ತೆ ಮಧ್ಯೆ ಆಕ್ಸಿಡೆಂಟ್ ಆಗಿ ಬಿದ್ದಿದ್ದು, ಅಲ್ಲೇ ಜನರ ಸಹಾಯದಿಂದ ತಾನು ಅವರನ್ನು ಹಾಸ್ಪಿಟಲ್ ಸೇರಿಸಿದ್ದು ಎಲ್ಲಾ ತಿಳಿಸಿ, ಸಧ್ಯಕ್ಕೆ ಪರಿಸ್ಥಿತಿ ಗಂಭೀರ ಇದ್ದು, ಒಳಗೆ ಟ್ರೀಟ್ಮೆಂಟ್ ನಡೀತಾ ಇದೆ. ಬೇರೆ ಏನಾದರೂ ಸಹಾಯ ಬೇಕಿದ್ದರೆ ತನಗೆ ಕರೆ ಮಾಡುವಂತೆ ತಿಳಿಸಿ ಹೊರಡುತ್ತಾನೆ. ಭಕ್ತಿಗೆ ಏನು ಮಾಡಬೇಕು ಎಂಬುದೇ ತಿಳಿಯದು.
ಸ್ವಲ್ಪ ಹೊತ್ತಿನ ನಂತರ ಅವನ ಕೈಲಿದ್ದ ಮುಕ್ತಿಯ ಫೋನ್ ರಿಂಗ್ ಆಗುತ್ತದೆ. Dad ಎಂಬ ಹೆಸರು ನೋಡಿ ಕರೆ ಸ್ವೀಕರಿಸಿ ಅವರಿಗೂ ವಿಷಯ ತಿಳಿಸುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಮುದ್ದಿನ ಮಗಳ ನೋಡಲು ಆ ತಂದೆ ತಾಯಿ ಜೀವ ಕೈಲಿ ಹಿಡಿದು ಆಸ್ಪತ್ರೆ ತಲುಪುತ್ತಾರೆ. ಆಪರೇಷನ್ ಮುಗಿಸಿ ಹೊರ ಬಂದ ಡಾಕ್ಟರ್ ಎಲ್ಲರನ್ನೂ ಕಂಡು, ಸಾರಿ. ಆಕ್ಸಿಡೆಂಟ್ ಅಲ್ಲಿ ತಲೆಗೆ ಹೆಚ್ಚು ಪೆಟ್ಟು ಬಿದ್ದಿದ್ದ ಕಾರಣ ಅವರನ್ನು ಉಳಿಸಲು ಸಾಧ್ಯ ಆಗಲಿಲ್ಲ. ಅವರು ನಮ್ಮ ಯಾವುದೇ ಟ್ರೀಟ್ಮೆಂಟ್ ಗೆ ರೆಸ್ಪಾನ್ಸ್ ಮಾಡಲಿಲ್ಲ ಎಂದು ತಿಳಿಸಿ ಹೋಗುತ್ತಾರೆ.
ಪ್ರೀತಿಯ ಒಬ್ಬಳೇ ಮಗಳು. ಮನೆಯ ರಾಜಕುಮಾರಿ ಅವಳ ಹುಟ್ಟಿದ ದಿನವೇ ಹೀಗೆ ಮರಣ ಹೊಂದಿದ ಆಘಾತ ಆ ತಂದೆ ತಾಯಿಯನ್ನು ನಿಂತ ಸ್ಥಳದಲ್ಲೇ ಕುಸಿಯುವಂತೆ ಮಾಡಿತು. ಎಷ್ಟೋ ದಿನದಿಂದ ತನ್ನ ಬರಡು ಬದುಕಲ್ಲಿ ಪ್ರೀತಿಯ ಸೋನೆ ಮಳೆ ಸುರಿಸಿದ ಗೆಳತಿಯ ಮುಖ ನೋಡುವ ಭಾಗ್ಯ ತನಗೆ ಈ ರೀತಿ ಒಲಿದಿದ್ದಕ್ಕೆ ಭಕ್ತಿ ಆ ದೈವಕ್ಕೆ ಹಿಡಿ ಶಾಪ ಹಾಕುತ್ತಾ ಕೂತಿದ್ದ.
ನೊಂದ ಆ ಹಿರಿ ಜೀವಗಳಿಗೆ ತಾನೇ ಸಾಂತ್ವಾನ ಹೇಳಿ ಮುಂದಿನ ಕಾರ್ಯದ ತಯಾರಿ ನಡೆಸುತ್ತಾನೆ. ಹೊರ ಬಂದ ಶವದ ಮೇಲಿನ ಬಟ್ಟೆ ಸರಿಸಿ ಒಮ್ಮೆ ಅವಳ ಮುಖ ನೋಡಲೂ ಅವನಿಗೆ ಭಯ. ಅವಳು ಹೇಗಿರುವಳು ಎಂಬ ಕುತೂಹಲ ಅವನಲ್ಲಿ ಈಗ ಇಲ್ಲ. ಅವನಿಗೆ ಪ್ರಪಂಚವೇ ಶುನ್ಯ. ಅವನಿಗೆ ಅವಳ ಸಾಮೀಪ್ಯದ ಹೊರತು ಬೇರೇನೂ ಬೇಡ.
ಮನೆಗೆ ಬಂದ ಮೇಲೆ ಅವಳ ಮುಖ ದರುಶನ ಮಾಡಲು ಅವಳ ಮುಖದ ಮೇಲಿನ ಬಿಳಿ ಬಟ್ಟೆ ಸರಿಸಿದಾಗ ಅವನಿಗಾದ ಆಘಾತ ಅಪಾರ. ಯಾವುದು ಸತ್ಯ ಯಾವುದು ಮಿತ್ಯ. ಹೃದಯದ ಮಾತು ಕೇಳುವುದೋ ಕಣ್ಣ ಮುಂದೆ ಇರೋ ಸತ್ಯಾನ ಒಪ್ಪಿಕೊಳ್ಳುವುದೋ ತಿಳಿಯದು.
ಅವಳ ಅಂತ್ಯ ಸಂಸ್ಕಾರದ ತನಕವೂ ಅವಳ ಸಾಮೀಪ್ಯ ತೊರೆದು ಅರೆ ಗಳಿಗೆಯೂ ಅಗಲಿ ಕೂರಲಿಲ್ಲ. ಮಗಳ ಅಗಲಿಕೆಯ ನೋವಲ್ಲಿ ಯೂ ಇವನ ವರ್ತನೆ ಅವರಲ್ಲಿ ಅನುಮಾನ ಹುಟ್ಟು ಹಾಕಿತು. ಆದರೂ ಮುಂದೆ ವಿಚಾರಿಸಿದರೆ ಆಯ್ತು ಅಂತ ಸುಮ್ಮನಾದರು.
ಎಲ್ಲರೂ ಎಲ್ಲಾ ಕಾರ್ಯ ಮುಗಿಸಿ ಮನೆಗೆ ಬಂದರು. ಎಲ್ಲರ ಪರಿಸ್ಥಿತಿಯೂ ಒಂದೇ. ಯಾರಿಗೂ ಜಗದ ಪರಿವೇ ಇಲ್ಲ. ಹಾಸ್ಪಿಟಲ್ ಅಲ್ಲಿ ಭಕ್ತಿಯ ಕೈ ಸೇರಿದ ಮುಕ್ತಿಯ ಫೋನ್ ಅವನ ಬಳಿಯೇ ಇತ್ತು. ಅವನ ಗೊಂದಲಗಳ ಪರಿಹಾರ ಮಾಡಿಕೊಳ್ಳುವ ಏಕೈಕ ದಾರಿ ಇದೊಂದೇ ಎಂದು ಬಗೆದು, ತನ್ನ ಸ್ನೇಹಿತನ ಸಹಾಯದಿಂದ ಫೋನ್ ಲಾಕ್ ತೆಗೆದು ಅವಳ ಮೊಬೈಲ್ ಚೆಕ್ ಮಾಡಿದ. ಅವಳೊಟ್ಟಿಗೆ ಅವನ ಪ್ರತಿದಿನದ ಸಂಭಾಷಣೆಯ ರೆಕಾರ್ಡ್, ಮೆಸೇಜ್ ಎಲ್ಲಾ ನೋಡಿ ಅವನ ಕಣ್ಣು ತುಂಬಿತು. ಇವರ ನಡುವಿನ ಪ್ರತಿ ವಿಷಯಗಳನ್ನು ಮುಕ್ತಿ ಅವಳ ಒಬ್ಬ ಸ್ನೇಹಿತೆಯ ಬಳಿ ಪ್ರತಿದಿನ ಹಂಚಿಕೊಳ್ಳುತ್ತಿದ್ದಳು. ಅವರ ಸಂಭಾಷಣೆಯ ರೆಕಾರ್ಡ್ ಕೂಡಾ ಕೇಳಿದಾಗ ಅವನಿಗೆ ಎಲ್ಲವೂ ಅರ್ಥವಾಗಿತ್ತು. ಅವತ್ತಿನ ಅವಳ ಪ್ರೇಮ ನಿವೇದನೆ ಹಾಗೂ ಅವನ ಪ್ರತಿಕ್ರಿಯೆ ನೇನೆದವನ ಮನ ಭಾರವಾಗಿತ್ತು.
ಕೂಡಲೇ ಮುಕ್ತಿಯ ಮನೆಗೆ ಬಂದನು. ಅವನನ್ನು ಆ ದಿನ ಕಂದ ಆ ಹಿರಿ ಜೀವಗಳು ಅವನ ಬಗ್ಗೆ ವಿಚಾರಿಸಲು, ಅವನು ಹಿಂಜರಿಕೆ ಇಂದಲೇ ಎಲ್ಲವನ್ನೂ ವಿವರಿಸಿದನು. ಆಗ ಆ ಜೀವಗಳು ತಮಗೆ ತಮ್ಮ ಮಗಳ ಪ್ರೀತಿಯ ವಿಷಯ ತಿಳಿದಿದ್ದು, ಅಂದು ಅವಳ ಹುಟ್ಟಿದ ಹಬ್ಬದ ಆಚರಣೆ ಮಾಡಲು ತಾವು ತಯಾರಿ ನಡೆಸಿದ್ದು, ನಿನ್ನನ್ನು ಸ್ವತಃ ತಾನೇ ಖುದ್ದಾಗಿ ಕರೆತರುವುದಾಗಿ ಹೇಳಿ ಹೋಗಿದ್ದವಳು ನಿನ್ನನ್ನೇನೋ ಕರೆ ತಂದಳು. ಆದರೆ ನಿನ್ನನ್ನು ನಮಗೆ ಖುದ್ದು ಪರಿಚಯಿಸಿದೇ ಹೊರಟು ಹೋದಳು ಎಂದು ದುಃಖಿಸಿದರು.
ಅಲ್ಲಿಂದ ಸೀದಾ ಅವಳ ಸಮಾಧಿಯ ಬಳಿ ಬಂದ ಭಕ್ತಿ ಮನಸ್ಸೋ ಇಚ್ಛೆ ಜೋರಾಗಿ ಕೂಗಿ ಅತ್ತನು. ಅವನ ಗೋಳು ಕೇಳಲಾಗಲಿ, ಅವನ ಕಣ್ಣೋರೆಸಿ ಸಾಂತ್ವಾನ ನೀಡಲಾಗಲೀ ಯಾರೂ ಇಲ್ಲ. ಹಸಿವೆಯ ಹಂಗಿಲ್ಲ, ನಿದಿರೆಯ ಪರಿವಿಲ್ಲ. ದಿನ ಕಳೆದಂತೆ ಸ್ಮಶಾನವೇ ಅವನ ಮನೆ ಆಯಿತು. ಹಸಿವು ನಿದ್ರೆ ತೊರೆದ ಜೀವ ಇನ್ನೆಷ್ಟು ದಿನ ಬದುಕಿರಲು ಸಾಧ್ಯ. ಅವನೂ ಒಂದು ದಿನ ಅವಳ ಸಮಾಧಿಯ ಮೇಲೆ ತಲೆ ಇಟ್ಟು ಇಹ ಲೋಕ ತ್ಯಜಿಸಿ ತನ್ನ ಒಲವನ್ನು ಸೇರಲು ಹೋದನು. ಅವನ ಹೃದಯ ದಿಪವೇ ಅವಳು. ಅವಳೇ ಇಲ್ಲದ ಜಗದಲ್ಲಿ ಅವನ ಹೃದಯ ದೀಪವೇ ನಂದಿಹೋದಾಗ ಆ ಹೃದಯ ಉಳಿಯುವುದಾದರೂ ಹೇಗೆ.......
"ಪ್ರತಿದಿನ ಪ್ರೀತಿಯ ಹಂಬಲಿಕೆಯಲ್ಲಿ ಇದ್ದ ಮನ ಒಮ್ಮೆಲೇ ಅಪ್ಪಳಿಸಿದ ಆಘಾತದ ಹೊಡೆತಕ್ಕೆ ಮೌನವೆಂಬ ಸಮಾಧಿ ಸೇರಿದೆ"
ಮುಕ್ತಾಯ
