Revati Patil

Tragedy Classics Inspirational

4  

Revati Patil

Tragedy Classics Inspirational

ಡಾಕ್ಟರ್ ಕವನಾ

ಡಾಕ್ಟರ್ ಕವನಾ

11 mins
413



'ಡಾಕ್ಟ್ರೇ,ನೀವ್ ಮನುಷ್ಯರಲ್ಲಾ, ನಮ್ ಪಾಲಿನ ದೇವ್ರು. ಎಷ್ಟೇಷ್ಟೋ ಖರ್ಚು ಮಾಡಿದ್ದಾಯ್ತು, ಮಾಡದೇ ಇರೋ ಪೂಜೆ ಇಲ್ಲಾ, ಕಟ್ಕೋಳ್ದೆ ಇರೋ ಹರಕೆ ಇಲ್ಲಾ ಡಾಕ್ಟ್ರೆ. ರಿಪೋರ್ಟ್ಗಳೆಲ್ಲಾ ನಾರ್ಮಲ್ ಅಂತಾನೇ ಬರ್ತಿತ್ತು. ಈ ಜನ್ಮದಲ್ಲಿ ನಾನು, ಇವಳು ಅಪ್ಪಾ-ಅಮ್ಮಾ ಆಗಲ್ವೇನೋ ಅಂತಾ ಅನ್ಕೊಂಡಿದ್ದೆ. ಯಾರೋ ಹೇಳಿದ್ರು, ಕವನಾ ಅಂತಾ ಡಾಕ್ಟರ್ ಇದಾರೆ, ಹೈ ರಿಸ್ಕ್ ಪ್ರೆಗ್ನೆನ್ಸಿಯಲ್ಲಿ ಸ್ಪೆಷಲಿಸ್ಟ್ ಅಂತಾ. ನಾನ್ ನಿಜವಾಗ್ಲೂ ನಂಬಿರಲಿಲ್ಲಾ ಡಾಕ್ಟ್ರೆ, ಆದ್ರೆ ನನ್ ಹೆಂಡತಿ ಹಠ ಮಾಡಿದ್ಲು ಅಂತಾ ಬಂದೆ. ಈ ಐದಾರು ತಿಂಗಳಿಂದಾ ನನಗೆ ನಿಮ್ಮ ಬಗ್ಗೆ ನಂಬಿಕೆ ಬಂದಿರಲಿಲ್ಲಾ. ನೀವೂ ಎಲ್ಲಾ ಡಾಕ್ಟರ್ಸ ತರಾ ಸುಮ್ನೆ ದುಡ್ಡಿಗಾಗಿ ಮಾತಾಡ್ತಿರಾ ಅನ್ಕೊಂಡಿದ್ದೆ, ಆದ್ರೆ ಇವತ್ತು ಅದೆಲ್ಲಾ ಸುಳ್ಳು ಅಂತ ಸಾಬೀತಾಯ್ತು. ನನ್ ಹೆಂಡ್ತಿ ಮುಖ ನೋಡಿ ಡಾಕ್ಟರ್, ಈ ಏಳೆಂಟು ವರ್ಷದಲ್ಲಿ ಇವತ್ತಿನಷ್ಟು ಸಂತೋಷ ಇವಳ ಮುಖದಲ್ಲಿ ನಾನೆಂದೂ ಕಂಡಿರಲಿಲ್ಲ. ನಮ್ಮ ಈ ಖುಷಿಗೆ ನೀವೇ ಕಾರಣಾ, ನಿಮಗೆ ಏನು ಬೇಕೋ ಕೇಳಿ ಡಾಕ್ಟರ್'. ಒಂದೇ ಉಸಿರಲ್ಲಿ ಹೇಳಿದ ವಿಜಯ್.


'ವಿದ್ಯಾ-ವಿಜಯ್ ಅವರೇ ಇದರಲ್ಲಿ ನಾನೇನು ಪವಾಡ ಮಾಡಿಲ್ಲಾ ಸುಮ್ನೆ ಅಷ್ಟೊಂದು ಹೊಗಳ್ಬೇಡಿ. ಡಾಕ್ಟರ್ ಆಗಿ ನಮ್ಮಿಂದಾ ಏನು ಸಾಧ್ಯ ಆಗತ್ತೋ ಅದನ್ನ ಮಾಡ್ತಿವಿ. ಇದು ನಮ್ ಡ್ಯೂಟಿ. ಹಾಗಂತಾ ಡಾಕ್ಟರ್ ಹತ್ರಾ ಹೋದ್ರೆ ಎಲ್ಲಾ ಸರಿ ಆಗೆ ಆಗತ್ತೆ ಅಂತಲ್ಲಾ. ನಮ್ಮ ವಿಜ್ಞಾನ ಎಷ್ಟೇ ಬೆಳೆದಿದ್ರೂ, ಕೆಲವೊಮ್ಮೆ ವಿಜ್ಞಾನಕ್ಕೂ ಸವಾಲು ಎಸೆಯೋ ಘಟನೆ ನಡೆಯುತ್ತೆ.  ಕೆಲವು ಸಲಾ ರೋಗ ಉಲ್ಬಣಿಸಿ ಕೊನೆ ಹಂತಕ್ಕೆ ಬಂದ್ಮೇಲೆ ಜನ ಆಸ್ಪತ್ರೆಗೆ ಬರ್ತಾರೆ ಆಗಾ ಅವ್ರನ್ನಾ ಉಳಸ್ಕೊಳ್ಳೋದು ನಮಗೂ ಕಷ್ಟ. ಇದನ್ನಾ ನೀವೆಲ್ಲಾ ಅರ್ಥ ಮಾಡ್ಕೋಬೇಕು. ನಾವೂ ಮನುಷ್ಯರೇ ಅಲ್ವಾ?'


ಈ ಹೊಗಳಿಕೆ-ತೆಗಳಿಕೆಗಿಂತಾ ತಾಳ್ಮೆ ಅನ್ನೊದು ತುಂಬಾ ಮುಖ್ಯ ರೀ. ನಿಮ್ ಹೆಂಡ್ತಿಗಿರೋ ತಾಳ್ಮೆನೇ ನಿಮ್ ಇವತ್ತಿನ ಈ ಖುಷಿಗೆ ಕಾರಣಾ. ಮಕ್ಕಳೇ ಆಗಲ್ಲಾ ಅಂತ ಬೇಸರ ಮಾಡ್ಕೊಂಡು ಕೆಟ್ಟ ಯೋಚನೆ ಮಾಡೋ ಬದಲು ತಾಳ್ಮೆಯಿಂದ ಕಾಯೋದು ಸರಿ. ಇಷ್ಟ ವರ್ಷಾ ವಿದ್ಯಾ ಅವರು ಮಾಡಿದ್ದು ಅದೇ ಅಲ್ವ? ಏನ್ ವಿದ್ಯಾ?' ಎಂದು ಡಾಕ್ಟರ್ ಕವನಾ ಕೇಳಿದರು.


'ಡಾಕ್ಟರ್ ನಂಗೆ ಏನು ಹೇಳ್ಬೇಕು ಅಂತಾ ಗೊತ್ತಾಗ್ತಿಲ್ಲಾ. ಆದ್ರೆ ನಿಮ್ ಮಾತು ಸತ್ಯ. ಹೆಣ್ಣಿಗೆ ತಾಳ್ಮೆ ತುಂಬಾ ಮುಖ್ಯ. ನಾನು ಎರಡು ಸಲ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ. ಆದ್ರೆ ಅವಾಗಾ ನಾನೇನಾದ್ರು ಸತ್ರೆ ನನ್ನ ಹಿಂದೆನೇ ನನ್ನ ಗಂಡಾನೂ ಸಾಯ್ತೀನಿ ಅಂತ ಎಚ್ಚರಿಸಿದ್ರು. 'ಮಕ್ಕಳು ಆಗದೇ ಇದ್ರು ಪರ್ವಾಗಿಲ್ಲ ವಿದ್ಯಾ, ನೀ ನಂಗೆ ಬೇಕು ಕಣೇ. ಸಾಯೋವರ್ಗು ನಿನ್ನ ಜೋತೆನೆ ಇರ್ತೀನಿ ಅದೇ ತರಾ ನೀನು ನಂಗ್ ಭಾಷೆ ಕೊಡು ವಿದ್ಯಾ' ಅಂತಾ ಅಂದ್ರು. ಡಾಕ್ಟರ್ ಆವತ್ತಿಂದ ನನಗೆ ಅನ್ಸಿದ್ದು ಒಂದೇ, ಮಕ್ಕಳೇ ನಮ್ಮ ಅಂತಿಮ ಗುರಿಯಲ್ಲಾ. ಇನ್ಮುಂದೆ ಮಕ್ಕಳಾಗದಿದ್ರೂ ಸರಿ, ಪ್ರಾಣಕ್ಕಿಂತ ಜಾಸ್ತಿ ಪ್ರೀತ್ಸೊ ನನ್ ಗಂಡನಿಗೊಸ್ಕರ ನಾನು ಬದುಕ್ಬೇಕು ಅಂತಾ. ನನ್ನ ತಾಳ್ಮೆಗಿಂತ, ನನ್ನ ಗಂಡನ ಪ್ರೀತಿನೇ ಇವತ್ತಿನ ಈ ಖುಷಿಗೆ ಕಾರಣ.' ವಿದ್ಯಾಳ ಮಾತು.


ಡಾಕ್ಟರ್, ನಿಮ್ಮನ್ನಾ ಡಾಕ್ಟರ್ ಅನಂತ್ ಕರೀತಿದಾರೆ. ಥರ್ಡ್ ಫ್ಲೋರಲ್ಲಿ ಇದಾರೆ. ಆಫೀಸ್ ಬಾಯ್ ಹೇಳಿಹೋದ.


ಸರಿ ವಿದ್ಯಾ ವಿಜಯ್ ಮತ್ತೇ ಭೇಟಿಯಾಗೋಣಾ. ನಾನು ಹೇಳಿದ ತರಾ ಮಾಡಿ ಆಯ್ತಾ.. ಊಟ ಚನ್ನಾಗಿ ಮಾಡಿ ಯಾಕಂದ್ರೆ ನೀವ್ ಈಗಾ ಒಂದಲ್ಲ ಎರಡು ಹೊಟ್ಟೆಗೆ ತಿನ್ಬೇಕು. ಸೊಪ್ಪು, ಹಸಿ ತರಕಾರಿ, ಹಣ್ಣು, ಹಾಲು ತಗೋಬೇಕು. ಭಾರ ಎತ್ತಬೇಡಿ. ಸಣ್ಣಪುಟ್ಟ ಮನೆಗೆಲಸ ಮಾಡಿ . ಪ್ರತಿ ತಿಂಗಳು ಚೆಕಪ್ಗೆ ಬನ್ನಿ. ನಂಗ್ ಸ್ವಲ್ಪ ಕೆಲ್ಸಾ ಇದೆ ಬರ್ಲಾ. ಹ್ಯಾವ್ ಅ ನೈಸ್ ಡೇ.


ತುಂಬಾ ಥ್ಯಾಂಕ್ಸ್ ಡಾಕ್ಟರ್. ಮತ್ತೆ ಸೀಗೊಣಾ ಎನ್ನುತ್ತ ವಿದ್ಯಾ ವಿಜಯ್ ಕೂಡ ಹೊರಟು ಹೋದರು.


ಕಿಡಕಿಯಿಂದ ಹೊರಗಿನ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದ ಅನಂತನಿಗೆ ಕವನಾ ಬಂದಿದ್ದು ಗೊತ್ತಾಗ್ಲಿಲ್ಲ.


'ಅನಂತ್...? ಅನಂತ್...?'


'ಓಹ್, ಕವನಾ. ಬನ್ನಿ ಬನ್ನಿ. ಕುತ್ಕೋಳಿ. ಆವಾಗಿಂದ ಕಾಯ್ತಾ ಇದ್ದೆ.'


'ಏನಾದ್ರು ಎಮರ್ಜೆನ್ಸಿ ಇತ್ತಾ ಡಾಕ್ಟರ್?'


'ಟೈಮ್ ನೋಡಿದಿರಾ? ಆಗ್ಲೇ 3 ಗಂಟೆ. ನಿಮ್ಗಂತೂ ಪೇಷಂಟ್ ಸಿಕ್ರೆ ಮುಗಿದೇ ಹೋಯ್ತು. ಊಟಾನು ಬೇಡಾ, ಗಂಡಾನು ಬೇಡ ಅಲ್ವಾ?'


'ಓಹ್.. ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ ಅನಂತ್. ವಿದ್ಯಾ-ವಿಜಯ್ ಅಂತಾ ಹೇಳಿದ್ನಲ್ಲಾ ನೆನಪಿದ್ಯಾ?'



'ಹಾಂ.. ನೆನಪಿದೆ. ಅದೇ ಮದ್ವೆ ಆಗಿ ಒಂಬತ್ತು ವರ್ಷ ಆಗಿತ್ತು ಆದ್ರೆ ಮಕ್ಕಳು ಆಗಿರ್ಲಿಲ್ಲಾ ಅಂದಿದ್ದೆ. ಅವರೇ ತಾನೆ? ಏನಾಯ್ತು ಅವರ ರಿಪೋರ್ಟ್? ಎನಿ ಇಂಪ್ರೂವ್ಮೆಂಟ್ಸ್?'



ಯೆಸ್ ಅನಂತ್.. ಶಿ ಈಸ್ ಪ್ರೆಗ್ನೆಂಟ್...! ಅವರ ಜೊತೆ ಮಾತಾಡ್ತಾ ಮಾತಾಡ್ತಾ ಟೈಮ್ ಹೋಗಿದ್ದೆ ಗೊತ್ತಾಗ್ಲಿಲ್ಲಾ. ಅನಂತ್ ಜಗತ್ತಿನಲ್ಲಿ ಒಂದು ಹೆಣ್ಣಿಗೆ ಇದಕ್ಕಿಂತಲೂ ಖುಷಿ ಇನ್ನೆನಿದೆ ಅಲ್ವಾ? ಅವಳ ಮುಖದಲ್ಲಿ ಇವತ್ತೇನೋ ಒಂದು ಸಾರ್ಥಕತೆ ಇತ್ತು. ಅವರ ರಿಪೋರ್ಟ್....



ಹಲೋ ಹಲೋ,, ಪ್ಲೀಸ್ ಸ್ಟಾಪ್. ದಿನಾ ಇಂತಾ ಸಾವ್ರಾ ಕತೆ ಹೇಳ್ತಿರ್ತಿಯಾ ಇವಾಗ ಊಟಾ ಮಾಡಣ್ವಾ?


......(ಮೌನ)


ಕವನಾ ಯಾಕೋ ಮಂಕಾದಂತೆ ಅನಿಸಿತು ಅನಂತನಿಗೆ. ರೆಸ್ಟ್ ಲೆಸ್ ಆಗಿ ಕೆಲ್ಸಾ ಮಾಡಿದ್ರಿಂದ ಇರಬಹುದೇನೊ ಅಂತಾ ಸುಮ್ಮನಾದ.

ಡಾಕ್ಟರ್ ಅನಂತ್ ಮತ್ತು ಕವನಾ ಇಬ್ಬರೂ ದಂಪತಿಗಳು. ಅನಂತ್ ಫೇಮಸ್ ಸೈಕಿಯಾಟ್ರಿಸ್ಟ್. ಕವನಾ ಕೂಡ ಹೆಸರಾಂತ ಗೈನಾಕಾಲಜಿಸ್ಟ್. ಇಬ್ಬರಿಗೂ ಆರಂಕಿಯ ಸಂಬಳ. ಇಬ್ಬರು ಉತ್ತಮ ವ್ಯಕ್ತಿತ್ವವುಳ್ಳವರು. ಅನಂತ್ ಸ್ವಲ್ಪ ಮುಂಗೋಪಿ ಆದರೂ ಇನ್ನೊಬ್ಬರ ಕಷ್ಟಕ್ಕೆ ಮರುಗುವ ಸ್ವಭಾವ. ಇಬ್ಬರಲ್ಲೂ ಅನ್ಯೋನ್ಯತೆ ಇತ್ತು. ಅತ್ತೆ, ಮಾವ, ಗಂಡ, ಮನೆ, ಕಾರು ಎಲ್ಲವೂ ಇತ್ತು. ಮಾವನೆಂದರೆ ಕವನಾಳಿಗೆ ಅಪ್ಪನೇ ಆಗಿದ್ದರು. ಅವಳೆಂದರೆ ಅವರಿಗೇನೊ ವಿಶೇಷ ಮಮಕಾರವಿತ್ತು. ಅವಳು ನೈಟ್ ಡ್ಯೂಟಿ ಎಂದರೇ ಉಮಾಪತಿ ಅವರಿಗೇ ಏನೋ ಕಳವಳ, ಗಾಬರಿ. ಅವಳು ಮುಂಜಾನೆ ಬರೋವರ್ಗು ಉಮಾಪತಿಯವರಿಗೆ ಟೆನ್ಷನ್ ತಪ್ಪಿದ್ದಲ್ಲಾ. ಇನ್ನು ಅತ್ತೆ ಶಾರದಾ ಆಚಾರ-ವಿಚಾರ, ಮಡಿ-ಮೈಲಿಗೆಗಳೇ ಜೀವನವೆಂದು ಭಾವಿಸಿದವರು. ಈ ಜಾತಿ-ಗೀತಿ ಎಂಬ ಜಾತಕದ ಆಚೆಗಿರುವ ಜಗತ್ತಿನ ಅಸ್ತಿತ್ವದ ಬಗ್ಗೆ ಅವರಿಗೇ ಕಲ್ಪನೆಯೂ ಇರಲಿಲ್ಲ. ಮಂತ್ರದೊಂದಿಗೆ ಎದ್ದು, ಮಂತ್ರದೊಂದಿಗೆ ಮಲಗುವಷ್ಟು ಸಂಪ್ರದಾಯವಾದಿ ಈ ಶಾರದಾ ಅತ್ತೆ. ಅನಂತ್, ಕವನಾಳನ್ನು ಪ್ರೀತಿಸಿ ಮದುವೆ ಆಗಿದ್ದು ಶಾರದಾಗೆ ಸ್ವಲ್ಪಮಟ್ಟಿಗೆ ಆಘಾತ ನೀಡಿತ್ತು.


'ಜಾತಕಾ ನೋಡಿಲ್ಲ, ಜಾತಿ ಗೊತ್ತಿಲ್ಲ ಮೇಲಾಗಿ ಅಪ್ಪ ಇಲ್ಲದ ಮಗಳು ಹೇಗೋ ಏನೋ. ಈ ಕೆಲಸ ಮಾಡೋ ಹುಡುಗಿರ್ಗೆ ಸ್ವಲ್ಪ ಧಿಮಾಕಿರತ್ತೆ ಅನಂತು. ನಮಗ್ಯಾಕೆ ಹೊರಗೆ ದುಡಿಯೊ ಹುಡುಗಿ ಬೇಕು ಹೇಳು? ಲಕ್ಷಣವಾಗಿ ಮನೆಲಿದ್ದು ಗಂಡ, ಮಕ್ಕಳು, ಅತ್ತೆ ಮಾವನ್ನ ನೊಡ್ಕೊಳೊ ಹುಡ್ಗಿ ಸಾಕು ಕಣೋ. ಅದಿಕ್ಕೆ ಹೇಳ್ತಿದಿನಿ ನಿಮ್ಮ ಸೋದರತ್ತೆ ಮಗಳು ಶೃತಿ ಇದಾಳಲ್ಲಾ, ಅವಳನ್ ನೋಡೋ ಹೇಗಿದಾಳೆ. ಆಚಾರ-ವಿಚಾರಾ ಅಂದ್ರೆ ನಂಗಿಂತ್ಲೂ ಒಂದ್ ಕೈ ಮುಂದೆನೆ ಕಣೋ. ಅಡ್ಗೆನು ಚನ್ನಾಗಿ ಮಾಡ್ತಾಳೆ. ಹಿರಿಯರು ಅಂದ್ರೆ ಭಯ ಭಕ್ತಿ ಇದೆ. ಅಲ್ದೆ ನಿಂದು ಅವಳದೂ ಜಾತಕಾ ತುಂಬಾ ಚನ್ನಾಗಿ ಕೂಡತ್ತಂತೆ ಶಾಸ್ತ್ರೀಗಳು ಹೇಳಿದ್ರು. ನನಗೂ ಇಷ್ಟಾ ಆಗಿದೆ. ನಿಮ್ಮಪ್ಪಾ ಮಾತ್ರ ಅನಂತು ಒಪ್ಪಿದ್ರೆ ನನಗೂ ಒಪ್ಪಿಗೆ ಅಂದಿದಾರೆ. ಸುಮ್ನೆ ನಾವ್ ಹೇಳ್ದಂಗೆ ಶೃತಿನ ಮದುವೆ ಆಗು. ನಿನ್ನ ಜೀವನಾನು ಚನಾಗಿರತ್ತೆ. ಏನಂತಿಯಾ ಅನಂತು?' ಅಮ್ಮನ ಮಾತು ಮುಗಿದಿತ್ತು.


ಅಮ್ಮಾ, ಶೃತಿ ಒಳ್ಳೆ ಹುಡ್ಗಿನೇ ಸರಿ . ಪೂಜೆ-ಪುನಸ್ಕಾರ ತಿಳಿದಿರುವ ಹುಡುಗಿ. ಅದೂ ಸರಿ . ಹಾಗಂದ ಮಾತ್ರಕ್ಕೆ ಕವನಾ ಕೆಟ್ಟವಳು ಅಂತಲ್ಲಾ ಅಮ್ಮ. ಅಪ್ಪ ಇಲ್ಲ ಅಂದ ಮಾತ್ರಕ್ಕೆ ಅವಳನ್ಯಾಕೆ ಕೀಳಾಗಿ ಕಾಣ್ತಿಯಾ ಅಮ್ಮ? ಕವನಾ ಸಹ ಒಳ್ಳೆ ಫ್ಯಾಮಿಲಿ ಹುಡುಗಿ. ಜಾತಕಾ ಕೂಡ್ಬಿಟ್ರೆ ಎಲ್ಲಾ ಒಳ್ಳೆದೇ ಆಗತ್ತೆ ಅನ್ನೋಕೆ ಏನ್ ಗ್ಯಾರಂಟಿ ಇದೆ? ಒಬ್ರನ್ನ ಒಬ್ರು ಅರ್ಥಾ ಮಾಡ್ಕೊಂಡ್ರೆ ಸಾಕು, ಜೀವನ ಚನಾಗಿರತ್ತೆ. ನನ್ನ ಲೈಫ್ ಪಾರ್ಟನರ್ ಕವನಾನೇ ಅಮ್ಮಾ. ಇನ್ನೊಂದ್ ವಿಷ್ಯ ಅಮ್ಮಾ , ಮದುವೆ ಆದಮೇಲೆ ನೀನೇ ಕವನಾ ಬಗ್ಗೆ ಹೆಮ್ಮೆ ಪಡ್ತಿಯಾ.ಈ ಮನೆಗೆ ಇವಳೇ ಸರಿಯಾದ ಸೊಸೆ ಅಂತಿಯಾ.ನೋಡ್ತಿರು ಅಮ್ಮಾ.'


ತಾಯಿ ಮಗನ ಸಂಭಾಷಣೆ ಕೇಳಿದ ಉಮಾಪತಿಯವರು ಯಾವ ಪ್ರತಿಕ್ರಿಯೆ ತೋರದೇ ಕೋಣೆಯಲ್ಲಿ ಮಲಗಿದರು. ಶಾರದಮ್ಮನವರಿಗೆ ಮಾತ್ರ ರೆಪ್ಪೆ ಮುಚ್ಚಲಿಲ್ಲ. ಮಗನ ನಿರ್ಧಾರವನ್ನು ಗಂಡನಿಗೆ ಹೇಳುವ ಪ್ರಯತ್ನ ಮಾಡಿ ಸೋತರು. ಕೊನೆಗೆ ವಿಧಿಯಿಲ್ಲದೆ ಮಲಗಿದರು.

ಎರಡು ಮೂರು ದಿನ ಅಮ್ಮ ಮಗ ಸರಿಯಾಗಿ ಮಾತು ಆಡಿರಲಿಲ್ಲ. ಕೊನೆಗೂ ತಾಯಿಯ ಮನಸ್ಸು ಕರಗಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಮದುವೆ ಆಡಂಬರವಿಲ್ಲದೆ ತುಂಬಾ ಸರಳವಾಗಿ ನಡೆದಿತ್ತು. ತನ್ನ ತಾಯಿ ಒಬ್ಬಂಟಿಯಾದಳು ಎನ್ನುವ ಕೊರಗು ಕವನಾಳನ್ನು ಕಾಡದೇ ಬಿಡಲಿಲ್ಲ. ಆದರೆ ಗಂಡನ ಪ್ರೀತಿ, ಮಾವನ ಮಮಕಾರ, ಕೆಲಸದ ಒತ್ತಡ ಇದೆಲ್ಲವನ್ನು ಸ್ವಲ್ಪಮಟ್ಟಿಗೆ ಮರೆಯುವಂತೆ ಮಾಡಿತ್ತು. ಅನಂತ್ ಅವನ ತಾಯಿಗೆ ಹೇಳಿದಂತೆ ಕೆಲವೇ ದಿನಗಳಲ್ಲಿ ಅತ್ತೆಯ ಮನಸ್ಸು ಗೆದ್ದಿದ್ದಳು ಕವನಾ. ಎಲ್ಲವೂ ಸುಸೂತ್ರವಾಗಿ ನಡೀತಾ ಇತ್ತು. ಹೀಗೆ ಎರಡು ವರ್ಷ ಕಳೆದಿತ್ತು. ಎಲ್ಲ ರೀತಿಯ ಖುಷಿಯು ಅಲ್ಲಿತ್ತಾದರೂ ಅಲ್ಲೊಂದು ಕೊರತೆ ಇತ್ತು. ಹೌದು. ಅನಂತ್ ಕವನಾಳಿಗೆ ಇನ್ನು ಮಕ್ಕಳಾಗಿರಲಿಲ್ಲ.ಅದೊಂದು ವಿಷಯಕ್ಕೆ ಶಾರದಾ ಮತ್ತು ಕವನಾಳ ಮಧ್ಯೆ ಮತ್ತೆ ಮನಸ್ತಾಪಗಳು ಉಂಟಾಗಲು ಶುರುವಾಯಿತು.


ಕವನಾ ಎಂದಿನಂತೆ ಆಸ್ಪತ್ರೆಗೆ ಹೋಗಿದ್ದಳು. ಅನಂತ್ ಅಂದು ರಜೆಯಲ್ಲಿದ್ದ. ಇದೇ ಸರೀಯಾದ ಸಮಯವೆಂದು ಶಾರದಾ ಮಾತು ಆರಂಭಿಸಿದರು.


'ಲೋ ಅನಂತು, ನಾನ್ ಮೊದ್ಲೆ ಬಡ್ಕೊಂಡೆ ಈ ಹುಡ್ಗಿ ಬೇಡಾ ಅಂತಾ . ಜಾತಕಾನೂ ಹೊಂದಲ್ಲಾ ಅಂತ ಹೇಳ್ದೆ, ಆದ್ರೆ ನೀನು ನಂಗೆ ಏನೇನೋ ಹೇಳಿ ಕವನಾನೇ ಮದುವೆ ಆಗ್ತಿನಿ ಅಂದೆ. ಒಬ್ನೆ ಮಗಾ, ಹೇಗೊ ಚನ್ನಾಗಿರಲಿ ಅಂತಾ ನಾವೂ ಒಪ್ಪಿಗೆ ಕೊಟ್ವಿ. ಈಗ್ ನೋಡೊ ಎನಾಗಿದೆ ಅಂತಾ. ಹೊರಗಡೆ ಹೋದರೆ ಸಾಕು ಮಾರ್ಕೆಟ್ವರಗು ಎಲ್ರೂದು ಒಂದೇ ಪ್ರಶ್ನೆ 'ಮೊಮ್ಮಗು ಯಾವಾಗಾ ಅಂತಾ'. ನಂಗೂ ಹೇಳಿ ಹೇಳಿ ಸಾಕಾಗಿದೆ. ಈ ಕಾಲದ ಹೆಣ್ಮಕ್ಕಳೇ ಹೀಗೆ . ಬೇಗಾ ಮಕ್ಕಳು ಬೇಡಾ ಅಂತಾ. ಅದೆಲ್ಲ ಬೇಡಪ್ಪಾ ದೇವರು ಕೊಡೊವಾಗಾ ಬೇಡಾ ಅಂದರೆ ನಾವು ಬೇಕು ಅಂದಾಗಾ ಮಕ್ಕಳು ಆಗತ್ತಾ? ನಮಗೂ ಮೊಮ್ಮಕ್ಕಳ ಜೊತೆ ಆಡೊ ವಯಸ್ಸಿದು ಅನಂತು. ನೀನೆ ಸ್ವಲ್ಪ ಯೋಚಿಸು.' ಅಳುತ್ತಲೆ ಸೋಫಾ ಮೇಲೆ ಕೂತರು ಶಾರದಮ್ಮ.


'ಅಮ್ಮಾ ಇವಾಗೇನು ಮುಳುಗೋಯ್ತು ಅಂತಾ ಅಳ್ತಿದಿಯಾ? ಜಾತಕಾ ಕೂಡದೋರ್ಗೆಲ್ಲಾ ಮಕ್ಕಳಾಗತ್ತಾ? ಇನ್ನು ಯಾವ ಕಾಲದಲ್ಲಿ ಇದಿಯಾ ಅಮ್ಮಾ? ನಮಗೇನು ಮಕ್ಕಳ ಆಸೆ ಇಲ್ಲಾ ಅನ್ಕೊಂಡಿದಿಯಾ? ಯಾರೋ ಏನೋ ಕೇಳಿದ್ರು ಅಂತ ನೀನು ಕವನಾ ಮೇಲೆ ಮುನಸ್ಕೊಳ್ಳೊದು ಸರಿನಾ ಅಮ್ಮಾ? ನಮಗೇನ್ ಅಂತಾ ವಯಸ್ಸಾಗಿದೆ ಹೇಳು. ಮದುವೆ ಆಗಿ ಎರಡೂವರೆ ವರ್ಷ ಆಗಿದೆ ಅಷ್ಟೇ. ನನ್ನ ಸ್ನೇಹಿತರು ಒಂದಿಬ್ಬರು ಇನ್ನೂ ಮದುವೆನೇ ಆಗಿಲ್ಲಾ ಗೊತ್ತಾ ನಿನಗೆ?  ಅಮ್ಮಾ ಕವನಾಗೂ ಮಗು ಅಂದ್ರೆ ಆಸೆ ಇದೆ ಅವಳೇ ಹೇಳಿದಾಳೇ ತಾನೇನಾದ್ರು ಗರ್ಭಿಣಿ ಆದ್ರೆ ಅವತ್ತಿಂದಾನೇ ಆಸ್ಪತ್ರೆಗೆ ರಜಾ ಹಾಕ್ತಿನಿ ಅಂತಾ. ನೀನು ಅನ್ಕೊಂಡಿರೊ ತರಾ ನಾವ್ ಯಾವ ಪ್ಲ್ಯಾನಿಂಗೂ ಮಾಡಿಲ್ಲಾ. ಕವನಾ ಮೊದ್ಲೆ ಅಪ್ಸೆಟ್ ಆಗಿದಾಳೆ ನೀನು ಪದೇ ಪದೇ ಇದೇ ವಿಷಯಾ ಕೇಳ್ತಿದ್ರೆ ಹೇಗಮ್ಮಾ?' ಅನಂತ್ ಅಮ್ಮನ ಮಾತಿಗೂ ಕಾಯದೇ ತನ್ನ ಕೋಣೆಗೆ ಹೋದ.


ಕವನಾಳ ಪರವಾಗಿ ಮಗ ಮಾತಾಡಿದ್ದು ಶಾರದಾಳಿಗೆ ಇನ್ನೂ ಕೋಪ ತರಿಸಿತು. ಗಂಡನ ಬಳಿ ಕೇಳಿದಳು. 'ಕೇಳಿದ್ರಾ ನಿಮ್ಮ ಮಗ ಹೇಗೆ ಮಾತಾಡಿ ಹೋದ ಅಂತಾ. ಏನೇ ಆದ್ರು ಹೆಂಡತಿನ ಮಾತ್ರಾ ಬಿಟ್ಟುಕೊಡಲ್ಲಾ. ನನಗೇನು ಕವನಾ ಬಗ್ಗೆ ಪ್ರೀತಿ ಇಲ್ವಾ? ಈಗಲೇ ಅವಳಿಗೆ ಮೂವತ್ತೆರಡು ಮುಗಿತಾ ಬಂತು ಬೇಗಾ ಒಂದ್ ಮಗು ಮಾಡ್ಕೋಳಿ ಅಂದಿದ್ರಲ್ಲಿ ತಪ್ಪೇನಿದೆ? ಅದೇ ಶೃತಿನ ಮದುವೆ ಆಗಿದ್ರೆ..?' ಅಂತ ಶಾರದಮ್ಮ ರಾಗ ಎಳೆದರು.



'ಲೇ ಶಾರದಾ ಏನೆ ಆಗಿದೆ ನಿಂಗೆ? ಇನ್ನೂ ಶೃತಿ ಹುಚ್ಚು ಹೋಗಿಲ್ವಾ ನಿಂಗೆ? ಕವನಾ ಈ ಮನೆ ಸೊಸೆ ಆಗಿ ಮೂರು ವರ್ಷಾ ಆಗ್ತಾ ಬಂತು ಇನ್ನಾದ್ರು ಸುಮ್ನಾಗು. ನೀನು ಮೊಮ್ಮಗು ಬಗ್ಗೆ ಮಾತಾಡಿದ್ದು ತಪ್ಪಲ್ಲಾ ಕಣೇ, ಆದ್ರೆ ಮಾತಾಡಿದ್ದ ರೀತಿ ತಪ್ಪು. ಅಲ್ಲಾ ಕಣೇ ನಮಗೆ ಅನಂತ್ ಹುಟ್ಟಿದ್ದು ಐದು ವರ್ಷಕ್ಕೆ ತಾನೇ? ಅದ್ನೆಲ್ಲಾ ಮರ್ತಿದಿಯಾ ಅನ್ಸುತ್ತೆ. ಆಗಾ ನಮ್ಮಮ್ಮಾನು ಇವಳಿಗೆ ಮಕ್ಕಳಾಗೋದು ಅನುಮಾನಾ, ಉಮಾಪತಿಗೆ ಬೇರೆ ಮದುವೆ ಮಾಡೋಣಾ ಅಂದಿದ್ದು ನೆನಪಿದೆ ತಾನೇ? ಆಗಾ ನಾನು ನಿನ್ನ ಪರವಾಗಿ ಮಾತಾಡಿದ್ದೆ, ಬೇರೆ ಮದುವೆ ಬೇಡ ಅಂದಿದ್ದೆ ಅದೇ ಮಾತು ಇವತ್ತು ಅನಂತ್ ಹೇಳಿದ್ದು. ಗೊತ್ತಾಯ್ತಾ? ಅವರಿಗೂ ಏನೋ ಕೆಲಸದ ಒತ್ತಡ ಇದೆ. ಎಲ್ಲಾ ಒಳ್ಳೆದಾಗತ್ತೆ ಇವಾಗ ಹಸಿವಾಗ್ತಿದೆ ಊಟಕ್ಕೆ ಬಡಿಸು, ನಾನ್ ಹೋಗಿ ಅನಂತುನ ಕರಿತಿನಿ.'


ಶಾರದಾ ಮಾತಾಡದೇ ಅಡಿಗೆಮನೆಗೆ ನಡೆದಳು. ಗಂಡನ ಅರ್ಧ ಮಾತು ಅವಳ ಮನಸ್ಸಿಗೆ ನಾಟಿತ್ತು. ಅನಂತ್ ಸಹ ಅಮ್ಮನ ಬಳಿ ಕ್ಷಮೆ ಕೇಳಿದ. ಶಾರದಾಳಿಗೆ ಇನ್ನೂ ಸಂಕಟ ಜಾಸ್ತಿ ಆಯ್ತು. ಅನಂತು ಇದರಲ್ಲಿ ನಿನ್ನದಾಗಲಿ, ಕವನಾದಾಗಲಿ ತಪ್ಪಿಲ್ಲ. ನಾನೆ ಆತುರಪಟ್ಟೆ ಎಂದಳು.


'ಆಯ್ತಾಯ್ತು ಈಗ ಊಟಾ ಮಾಡಿ' ಎಂದರು ಉಮಾಪತಿ.


ಮತ್ತೆ ಎಂದಿನಂತೆ ದಿನಚರಿ ಶುರುವಾಯಿತು. ಐದಾರು ವರ್ಷಗಳೇ ಕಳೆದಿತ್ತು. ಶಾರದಾ ತನ್ನ ಮಾತಿನಂತೆ ಮಗು ವಿಷಯವಾಗಿ ಅನಂತ್ ಕವನಾ ಬಳಿ ಮಾತಾಡಿರಲಿಲ್ಲ.

ಅನಂತ್ನಿಗೆ ಅವತ್ತು ಬಿಡುವಿಲ್ಲದಷ್ಟು ಕೆಲಸ. ಮನೋರೋಗಿಗಳ ಮನಸ್ಸು ಅರಿಯುವುದೂ ಸುಲಭದ ಮಾತಲ್ಲ. ಅನಂತ್ ಈ ಕೆಲಸವನ್ನು ಮನಸಾರೆ ಮಾಡ್ತಿದ್ದ. ಅವನಿಗೆ ಪ್ರತಿ ಮನೋರೋಗಿಯಲ್ಲೂ ಒಬ್ಬ ಹೊಸ ಮನುಷ್ಯ ಕಾಣುತ್ತಿದ್ದ. ಕೆಲವೊಮ್ಮೆ ಅವರಿಂದ ಏಟು ಸಹ ಕಾಣುತ್ತಿದ್ದ. ಆದರೂ ಅವನಿಗೆ ತನ್ನ ವೃತ್ತಿ ಶ್ರೇಷ್ಠ ಎನಿಸುತ್ತಿತ್ತು. ಅವರು ಗುಣಮುಖರಾಗುತ್ತಿದ್ದರೆ ಈತನಿಗೇನೋ ಸಾಧಿಸಿದ ಸಾರ್ಥಕಭಾವ. ರೋಗಿಯ ಜೊತೆ ಬೆರೆತ ಕೆಲವೇ ಸಮಯದಲ್ಲಿ ಅವರ ಮನಸ್ಥಿತಿ ಅರಿತು ಬಿಡುತ್ತಿದ್ದ. ಹಾಗಾಗಿಯೇ ಡಾಕ್ಟರ್ ಅನಂತ್ ಹೆಸರುವಾಸಿ ಆಗಿದ್ದರು.

ಅನಂತ್ ಯಾವ್ದೋ ಫೈಲ್ ನೋಡ್ತಾ ಕವನಾ ಬಂದಿದ್ದು ಗಮನಿಸಲಿಲ್ಲ. ಕವನಾ ಸ್ವತಃ ಮಾತಿಗೆಳೆದಳು.


'ಏನ್ರೀ ಸಾಹೆಬ್ರೆ ಬೆಳಿಗ್ಗೆಯಿಂದ ಕಾಫಿಗೂ ಬಂದಿಲ್ಲ ಅಸ್ಟೊಂದ್ ಕೆಲ್ಸಾ ಬಾಕಿ ಇದೆಯಾ? ಸರಿ ಬನ್ನಿ ಊಟ ಮಾಡಿದ್ರಾಯ್ತು. ಟೈಮ್ ಆಯ್ತು.'


'ಇಲ್ಲ ಕವನಾ, ಇವತ್ತು ನೀನೊಬ್ಳೆ ಮಾಡು, ನಂಗಿನ್ನು ಸ್ವಲ್ಪ ಕೆಲಸ ಇದೆ. ಬೇಕಾದ್ರೆ ಸಂಜೆ ಕಾಫಿಗೆ ಸಿಗ್ತಿನಿ. ಆಯ್ತಾ?'

ಕವನಾ ಏನೂ ಹೇಳದೆ ಡಾಕ್ಟರ್ ಶೀಲಾ ಜೊತೆ ಊಟ ಮಾಡಿದಳು.


'ಶೀಲಾ :ಏನ್ರಿ ಡಾಕ್ಟರ್ ಕವನಾ ಈಗಂತೂ ಆಸ್ಪತ್ರೆ ತುಂಬಾ ನಿಮ್ದೆ ಸುದ್ದಿ. ಕಂಗ್ರಾಟ್ಸ್ ರಿ.'



'ಆ ತರ ಏನಿಲ್ಲಾ ಶೀಲಾ. ನನ್ನ ಡ್ಯೂಟಿ ನಾನ್ ಮಾಡಿದಿನಿ. ಇದರಲ್ಲಿ ಯಾವ ವಿಶೇಷವೂ ನಂಗೆ ಕಾಣಿಸ್ತಿಲ್ಲಾ'


ಕವನಾ ಯಾಕೋ ಸ್ವಲ್ಪ ಮಂಕಾಗಿದ್ಲು. ಇಡೀ ಆಸ್ಪತ್ರೆ ತುಂಬಾ ಎಲ್ಲಾ ಕಡೆ ಇವಳೇ ಮಾತಾಗಿದ್ರೂ, ಸ್ವತಃ ಕವನಾ ಬಳಿ ಮಾತಿರಲಿಲ್ಲ. ದೈಹಿಕವಾಗಿ ಅವಳು ಅಲ್ಲಿದ್ದಳು, ಮನಸ್ಸು ಮಾತ್ರ ಇನ್ನೆಲ್ಲೋ ಸಂಚಾರ ಕೈಗೊಂಡಿತ್ತು. ತುಂಬ ಗಹನವಾಗಿ ಯೋಚಿಸುತ್ತಿದ್ದಳು.


ಶೀಲಾ ಕೇಳಿದಳು ರೀ ಕವನಾ ಏನಾಗಿದೆ ನಿಮಗೆ? ನಾನು ಈ ನಡುವೆ ಗಮನಿಸ್ತಿದಿನಿ ತುಂಬಾ ಡಲ್ ಇರ್ತಿರಲ್ಲಾ ಯಾಕೆ? ಎನಿ ಪ್ರಾಬ್ಲಂ?


'ಏನಿಲ್ಲಾ ಶೀಲಾ. ಜೀವನಾ ತುಂಬಾ ವಿಚಿತ್ರ ಅಲ್ವಾ? ಐಶ್ವರ್ಯ ಅಂತ ಹೆಸರು ಇಟ್ಕೊಂಡಿರ್ತಾರೆ ಆದ್ರೆ ಪಾಪಾ ಐಶ್ವರ್ಯ ಇರಲ್ಲ. ವೈದ್ಯನ ಮನೇಲೂ ರೋಗ ಇರತ್ತೆ'. ಕವನಾಳ ಅಸಂಬದ್ಧ ಮಾತು ಶೀಲಾಳಿಗೆ ದ್ವಂದ್ವ ಮೂಡಿಸಿತು. ತನಗೆ ಕೆಲಸ ಇದೆ ಎಂದು ಹೇಳಿ ಶೀಲಾ ಹೋದಳು.


ಶೀಲಾ ನೇರವಾಗಿ ಡಾಕ್ಟರ್ ಅನಂತ್ ಬಳಿ ಬಂದಳು.

'ಡಾಕ್ಟರ್ ಅನಂತ್...ನಿಮ್ಮ ಜೊತೆ ಮಾತಾಡಬೇಕಿತ್ತು.


'ಓಹ್ ಡಾಕ್ಟರ್ ಶೀಲಾ. ! ನೋಡಿ ಇವಾಗ ಮುಗಿತು ನನ್ನ ಕೆಲಸ. ಬನ್ನಿ ಊಟ ಮಾಡಣಾ.'


'ನನ್ನ ಊಟ ಆಯ್ತು ಡಾಕ್ಟರ್. ನಾನು ಕವನಾ ಒಟ್ಟಿಗೆ ಊಟ ಮಾಡಿದ್ವಿ‌. ನೀವ್ ಊಟ ಮಾಡಿ . ಹಾಗೆ ಮಾತಾಡ್ತಿನಿ.'



'ಏನ್ ವಿಷಯ ಶೀಲಾ? ಎಲ್ಲಾ ಸರಿ ಇದೆ ತಾನೇ?'



'ಅದನ್ನ ನೀವ್ ಹೇಳಬೇಕು ಡಾಕ್ಟರ್. ಮನೇಲಿ ಏನಾದ್ರು ಸಮಸ್ಯೆನಾ? ಡಾಕ್ಟರ್ ಕವನಾ ತುಂಬಾ ಡಲ್ ಆಗಿದಾರೆ. ಒಂದು ವಾರದಿಂದ ಅವ್ರನ್ನಾ ನೋಡ್ತಿದಿನಿ. ಮೊದಲಿನ ತರ ಇಲ್ಲ ಅವರು. ಯಾರ ಜೊತೆನೂ ಜಾಸ್ತಿ ಮಾತಾಡ್ತಿಲ್ಲಾ. ನೀವೂ ಗಮನಿಸಿರಬೇಕಲ್ಲಾ.'



'ಹಾಂ..ಗಮನಿಸ್ತಿದಿನಿ. ಏನೋ ಡೀಪ್ ಆಗಿ ಥಿಂಕ್ ಮಾಡ್ತಾ ಇರ್ತಾಳೆ. ಊಟಾ ನಿದ್ದೆನೂ ಸರಿ ಮಾಡ್ತಿಲ್ಲಾ. ಈ ಕೆಲಸದ ಟೆನ್ಷನ್ ಮಧ್ಯೆ ಅವಳ ಬಗ್ಗೆ ನೋಡೊಕಾಗ್ಲಿಲ್ಲ. ನೆನಪಿಸಿದ್ದು ಒಳ್ಳೆಯದಾಯ್ತು. ಥ್ಯಾಂಕ್ಸ್ ಶೀಲಾ'.



'ನೀವೇ ಸೈಕಿಯಾಟ್ರಿಸ್ಟ್ ! ಒಂದ್ ವಾರದಿಂದ ನಿಮ್ಮ ಹೆಂಡತಿಗೆ ಏನಾಗಿದೆ ಅಂತಾ ನಿಮಗೇ ಗೊತ್ತಿಲ್ವಾ ಡಾಕ್ಟರ್?'



'ಶೀಲಾ ಹಾಗಲ್ಲ‌. ಕವನಾ ಎಲ್ರ ತರಾ ಅಲ್ಲ ಅಂತ ನಿಮಗೂ ಗೊತ್ತು. ಬೇರೆಯವ್ರ ತರಾ ಎಮೋಷನ್ಸ್ ಹೊರ ಹಾಕಲ್ಲ ಅವಳು. ಮನಸಲ್ಲಿ ಏನೋ ಇದೆ ಅನ್ಸುತ್ತೆ. ಇವತ್ತು ಮನೆಗೆ ಹೋಗಿ ವಿಚಾರಿಸ್ತಿನಿ'.



'ಆಯ್ತು ಡಾಕ್ಟರ್. ನಾನು ಹೊರಡ್ತಿನಿ.'



ಸಮಯ ಆಗಲೇ ಹತ್ತು ಗಂಟೆ ಆಗಿತ್ತು. ಕವನಾ ಮಲಗಿದ್ದರೂ, ನಿದ್ದೆ ಬಂದಿರಲಿಲ್ಲ. ಮಗ್ಗಲು ಬದಲಿಸಿದಳು ಆದರೂ ನಿದ್ರಾದೇವಿ ಕವನಾಳ ಮೇಲೆ ಕೃಪೆ ತೋರಲಿಲ್ಲ.

'ಕವನಾ ನಿದ್ದೆ ಬರ್ತಿಲ್ವಾ? ತಲೆನೋವಾ? ತಲೆ ಒತ್ಲಾ?' ಎನ್ನುತ್ತಲೇ ಅನಂತ್ ಅವಳ ಹಣೆ ಮೇಲೆ ಕೈ ಇಟ್ಟ.


'ಇಲ್ಲ ಅನಂತ್ ನಾನು ಚನ್ನಾಗೇ ಇದಿನಿ. ನೀವು ಮಲ್ಕೋಳಿ ಎಂದಳು ಕವನಾ'.


'ಇತ್ತೀಚೆಗೆ ನೀನು ಮಂಕಾದಂತೆ ಅನಿಸ್ತಿದೆ. ಮೊದಲಿನ ಕವನಾ ನೀನೆನಾ ಅನ್ನುವಷ್ಟು ಬದಲಾಗಿದಿಯಾ. ಏನಾಗಿದೆ ನಿಂಗೆ?' ಅನಂತ್ ಕೇಳಿದ.

ಅವಳಿಗೂ ಏನೋ ಮಾತಾಡುವ ಮನಸ್ಸಾಯ್ತು.


'ಅನಂತ್ ಒಂದ್ ವಿಚಿತ್ರ ಗೊತ್ತಾ? ನಾನು ಗೈನಕಾಲಜಿಸ್ಟ್. ದಿನಕ್ಕೆ ಕಮ್ಮಿ ಅಂದ್ರು ನಲವತ್ತರಿಂದ ಐವತ್ತು ಪೇಷಂಟ್ಸ್ ನೋಡ್ತಿನಿ.ಅವರ ಜೊತೆ ಮಾತಾಡಿ ಅವರ ಸಮಸ್ಯೆ ಪರಿಹಾರ ಮಾಡೋಕೆ ಪ್ರಯತ್ನ ಪಡ್ತಿನಿ ಆದ್ರೆ ಸ್ವತಃ ನನ್ನ ಸಮಸ್ಯೆಗೆ ನನಗೆ ಪರಿಹಾರ ಸಿಗ್ತಿಲ್ಲಾ. ನನಗೆ ಮಕ್ಕಳ ಭಾಗ್ಯ ಇಲ್ವೇನೋ ಅನಿಸ್ತಿದೆ. ಮದುವೆ ಆಗಿ ಇದು ಒಂಬತ್ತನೇ ವರ್ಷ.'


'ಹೇಯ್ ಕವನಾ ಅದಕ್ಕಾ ನೀನು ಚಿಂತೆ ಮಾಡ್ತಿರೋದು. ಮಕ್ಕಳಾಗದಿದ್ರೆ ಅದಕ್ಕೆ ನೀನೇ ಕಾರಣಾ ಅಂತಾ ಯಾಕೆ ತಿಳಿತಿಯಾ? ನನ್ನಲ್ಲೂ ದೋಷ ಇರಬಹುದಲ್ಲಾ. ವಿದ್ಯಾ ವಿಜಯ್ ಅಂತಾ ನಿನ್ನ ಪೇಷಂಟ್ ಬಗ್ಗೆ ನೀನ್ ಏನ್ ಹೇಳಿದ್ದೆ ಅಂತ ನೆನಪಿದೆ ತಾನೆ? ತಾಳ್ಮೆ ಇರಬೇಕು ಅಂತಲ್ವಾ? ನಾವು ತಾಳ್ಮೆಯಿಂದ ಕಾಯೋಣ. ಆಯ್ತಾ. ರಿಪೋರ್ಟ್ ಬಂದಿದೆ ಅಂತಾ ಹೇಳಿದ್ಯಲ್ಲಾ . ಏನಿದೆ ಅದರಲ್ಲಿ?

ಅನಂತ್ ನಿಮ್ಮ ರಿಪೋರ್ಟ್ ಸಹಾ ನಾರ್ಮಲ್ ಇದೆ. ನಂದೂ ನಾರ್ಮಲ್ ಇದೆ. ಆದರೂ !'



'ಇನ್ನು ಜಾಸ್ತಿ ಇದೇ ವಿಷಯ ಮಾತಾಡಿ ಅವಳಿಗೆ ಬೇಸರ ಮಾಡೋದು ಬೇಡವೆನಿಸಿ ' ಹೋಗ್ಲಿ ಬಿಡಮ್ಮಾ. ಮಕ್ಕಳೇನು ಇವತ್ತಲ್ಲಾ ನಾಳೆ ಆಗ್ಬೊದು. ಇವಾಗ ಮಲಗು ತುಂಬಾ ಸುಸ್ತಾಗಿದಿಯಾ.'

ಅವಳಿಗೆ ಅನಂತ್ ಮಕ್ಕಳ ವಿಷಯದಲ್ಲಿ ಜೋಕ್ ಮಾಡ್ತಿದಾನೆ ಅಂತ ಬೇಜಾರಾಯ್ತು.



ಬೆಳಿಗ್ಗೆ ಎದ್ದಾಗ ಕವನಾಳಿಗೆ ಜ್ವರ ಬಂದ ಹಾಗಿತ್ತು. ಉಮಾಪತಿಯವರು ಅವಳನ್ನ ಆಸ್ಪತ್ರೆಗೆ ಹೋಗಲು ಬೇಡ ಎಂದರು. ತಿಂಡಿ ಸಹ ತಿಂದಿರಲಿಲ್ಲ ಕವನಾ. ಕೊನೆಗೆ ತಲೆ ತಿರುಗಿ ಬಿದ್ದೆಬಿಟ್ಲು. ಎಚ್ಚರ ಆದಾಗ ಅವಳ ಅತ್ತೆ ಪಕ್ಕದಲ್ಲಿ ತಟ್ಟೆ ಹಿಡಿದು ಕೂತಿದ್ರು.


'ಕವನಾ ನೀನು ಹೀಗೆ ಊಟಾ ನಿದ್ದೆ ಬಿಟ್ರೆ ಏನ್ ಸಿಗತ್ತೆ ? ನೀನ್ ತಿಂಡಿ ತಿಂದಿಲ್ಲಾ ಅಂತಾ ನಮ್ಮ ಅನಂತ್ ಕೂಡಾ ಹಾಗೇ ಆಸ್ಪತ್ರೆಗೆ ಹೋಗಿದಾನೆ. ಈಗ ಸಮಾಧಾನಾ ಆಯ್ತಾ ನಿನಗೆ? ನಾನ್ ಮೊದಲೇ ಬಡ್ಕೊಂಡೆ. ಈ ಜನ್ಮದಲ್ಲಿ ನಿಮಗ್ಯಾರಿಗೂ ಬುದ್ಧಿ ಬರಲ್ಲಾ. ಶಾಸ್ತ್ರ-ಸಂಪ್ರದಾಯ ಸುಮ್ ಸುಮ್ನೆ ಮಾಡಿದಾರಾ? ಎಲ್ಲಾ ನಮ್ಮ ಕರ್ಮಾ'. ಶಾರದಮ್ಮ ತಿಂಡಿ ತಟ್ಟೆ ಕವನಾಳ ಬಳಿ ಇಟ್ಟು ಹೋದರು.

ಆಗ ಉಮಾಪತಿ ಬಂದರು.


'ಅಮ್ಮ ಕವನಾ ನಿಮ್ಮತ್ತೆ ಮಾತಿಗೆ ನೊಂದ್ಕೊ ಬೇಡಮ್ಮ. ಅವಳ ಮನಸ್ಸು ಹೇಗೆ ಅಂತಾ ನಿಂಗೇ ಗೊತ್ತಲ್ವಾ. ಮೊಮ್ಮಗು ಬೇಕು ಅನ್ನೊದನ್ನೆ ಆ ತರ ಹೇಳಿದಾಳೆ. ಅಷ್ಟೇ. ನಾನು ಈಗಷ್ಟೇ ಅನಂತನಿಗೆ ಫೋನ್ ಮಾಡಿ ಮನೆಗೆ ಬಾ ಅಂತ ಹೇಳಿದಿನಿ ಇನ್ನೇನು ಬರ್ತಾನೆ ಅಷ್ಟರಲ್ಲಿ ನೀನೂ ರೆಡಿ ಆಗಿರು. ಇಬ್ಬರೂ ಎಲ್ಲಾದರೂ ಸುತ್ತಾಡ್ಕೊಂಡು ಬನ್ನಿ. ಬರೀ ಕೆಲಸಾ ಕೆಲಸಾ ಅಂತ ಅನ್ಕೊಂಡೇ ಒಂದು ಮಗು ಕಳ್ಕೊಂಡಿದಿರ. ಇನ್ಮೇಲಿಂದ ಸ್ವಲ್ಪ ನಿಮಗೂ ಅಂತ ಸಮಯ ಮೀಸಲಿಡಿ.'


ಮಾವನ ಯಾವ ಮಾತು ಅವಳ ಕಿವಿ ಹೊಕ್ಕಿರಲಿಲ್ಲ, ಕೊನೆಯ ಮಾತೊಂದನ್ನು ಬಿಟ್ಟು.

ಹೌದು ಕೆಲ ವರ್ಷಗಳ ಮುಂಚೆ ಕವನಾ ಗರ್ಭಿಣಿ ಆಗಿದ್ದಳು. ಆದರೆ ಕೆಲಸದ ಒತ್ತಡದಲ್ಲಿ ನಾಲ್ಕು ತಿಂಗಳಿಗೆ ಗರ್ಭಪಾತವಾಗಿತ್ತು. ಅದೇ ಕೊನೆ ಮತ್ತೆ ಕವನಾಳಿಗೆ ಗರ್ಭ ನಿಂತಿರಲಿಲ್ಲ..ಇದು ಹೋದ ಜನ್ಮದ ಪಾಪವಿರಬೇಕೆಂದು ಶಾರದಮ್ಮ ಪಾಪ ನಿವಾರಣೆಗಾಗಿ ಎಲ್ಲ ದೇವರಿಗೂ ಹರಸಿಕೊಂಡಿದ್ದರು.



ಆಸ್ಪತ್ರೆಯಿಂದ ಬಂದ ಅನಂತ್ ಕವನಾಳನ್ನು ನೋಡಿ 'ನೀನಿನ್ನು ರೆಡಿ ಆಗಿಲ್ವಾ, ನೋಡಿಲ್ಲಿ ಸಿನಿಮಾ ಟಿಕೆಟ್ ತಂದಿದಿನಿ ಬೇಗ ರೆಡಿ ಆಗಿ ಬಾ. ಇವತ್ತು ಡಿನ್ನರ್ ಹೊರಗೆ ಓಕೆ. ಹತ್ತು ನಿಮಿಷದಲ್ಲಿ ಬಾ ನಾನು ಕಾರಲ್ಲಿರ್ತಿನಿ ಆಯ್ತಾ'.


ಅನಂತ್ ಕಾರಲ್ಲಿಯೇ ಕಾಯ್ತಿದ್ದ ಆದರೆ ಅರ್ಧ ಗಂಟೆ ಕಳೆದರೂ ಕವನಾ ಬರಲಿಲ್ಲ ಇವನಿಗೋ ಸಿಟ್ಟು. ಹಾಗೆ ಹೋದವನೇ ಬೈಯಲು ಆರಂಭಿಸಿದ.


'ನಿಂದು ಯಾಕೋ ಅತಿ ಆಯ್ತು ಕವನಾ. ಈ ತರಾ ಹಠ ಮಾಡಿ ಮಾಡಿ ಒಂದ್ ಮಗು ಕಳ್ಕೊಂಡಿದಿವಿ ಆದರೂ ನಿನ್ನ ಹಠಾ ಅಂತೂ ಕಮ್ಮಿ ಆಗಿಲ್ಲಾ. ನೀನೊಂದು ಮಾತು ಹೇಳಿದ್ದೆ ನೆನಪಿದೆಯಾ ನಿನಗೆ? ಗರ್ಭಿಣಿ ಆದರೆ ಅವತ್ತಿಂದಾನೇ ಕೆಲಸಕ್ಕೆ ರಜೆ ಹಾಕ್ತಿನಿ ಅಂದಿದ್ದೆ ಹಾಗೆ ಮಾಡಿದ್ದಿದ್ರೆ ಬಹುಷಃ ನಮ್ಮ ಮಗು ಉಳಿತಿತ್ತೊ ಏನೋ. ಅಮ್ಮಾ ಕೆಲಸಾ ಮಾಡೋದ್ ಬೇಡಾ ಅಂದ್ರು ನಾನು ಅಮ್ಮನಿಗೆ ಸಮಾಧಾನ ಮಾಡಿ ನಿನ್ನ ಪರವಾಗಿ ಮಾತಾಡಿದ್ದೆ, ಆದರೆ ಆಗಿದ್ದೇನು? ನೀನು ಬರೀ ಕೆಲಸ ಕೆಲಸ ಅನ್ಕೊಂಡು ಮಗೂ ಬಗ್ಗೆ ನಿರ್ಲಕ್ಷ್ಯ ತೋರಿದೆ. ಆ ಮಗು ಶಾಪಾನೋ ಏನೋ ಮತ್ತೆ ಮಕ್ಕಳಾಗ್ತಿಲ್ಲಾ. ತಗೋ ಈ ಟಿಕೆಟ್ಸ್ ಹರಿದು ಹಾಕು. ಇಲ್ಲಿವರೆಗೂ ನಾನು ತಮಾಷೆಗೂ ನಿನ್ನ ಮೇಲೆ ಕೋಪ ಮಾಡ್ಕೊಂಡಿರಲಿಲ್ಲಾ. ಆದ್ರೆ ಇವತ್ತು..ಛೇ!'

ಅನಂತ್ ಕೋಪಿಸಿಕೊಂಡು ಮತ್ತೆ ಆಸ್ಪತ್ರೆಗೆ ಹೋಗುವುದಾಗಿ ಹೊರನಡೆದ.


ದಾರಿಯುದ್ದಕ್ಕೂ ಕವನಾ ಬಗ್ಗೆಯೇ ಯೋಚಿಸತೊಡಗಿದ. ಅರ್ಧ ದಾರಿ ಬಂದಿದ್ದ ಅನಂತನಿಗೇ ಕವನಾ ಕೈಯಲ್ಲಿ ಪೆನ್ನು ಹಿಡಿದದ್ದು ನೆನಪಾಯಿತು. ತಕ್ಷಣವೇ ಅನಂತನಿಗೆ ಏನೋ ಹೊಳೆಯಿತು ಓಹ್ ಮಾಯ್ ಗಾಡ್ ಎಂದವನೇ ಗಾಡಿಯನ್ನು ಯು-ಟರ್ನ್ ಮಾಡಿದ. ಮನೆ ಮುಟ್ಟೊವರೆಗೂ ಕವನಾ ಕ್ಷಮಿಸು ಎನ್ನುತ್ತಲೇ ಇದ್ದ.



ಆಸ್ಪತ್ರೆಯ ತುಂಬೆಲ್ಲಾ ಗುಸುಗುಸು ಸುದ್ದಿ. ಎಲ್ಲವೂ ಅಸ್ಪಷ್ಟ. ಹೀಗಾಗ್ಬಾರದಿತ್ತು ಛೇ! ಎನ್ನುತ್ತಿದರು.. ವಿದ್ಯಾ ವಿಜಯ್ ಸಹ ಅವರ ಆರು ವರ್ಷದ ಮಗನನ್ನು ಕರೆದುಕೊಂಡು ಬಂದರು.


ವಿದ್ಯಾ ಆಳುತ್ತಿದ್ದಳು.


ಡಾಕ್ಟರ್ ಇದು ನಿಜಾನಾ ? ವಿದ್ಯಾ, ಡಾಕ್ಟರ್ ಶೀಲಾಳಿಗೆ ಪ್ರಶ್ನಿಸಿದಳು.



ನಮಗೂ ಇನ್ನು ಸರಿಯಾಗಿ ಗೊತ್ತಾಗಿಲ್ಲ. ಡಾಕ್ಟರ್ ಅನಂತ್ ಫೋನ್ ರೀಸಿವ್ ಮಾಡ್ತಿಲ್ಲಾ ಇರಿ..

ಹೇ ಎಲ್ಲಾ ಬನ್ನಿ ಟಿವಿಲಿ ಬರ್ತಾ ಇದೆ.. ಆಫೀಸ್ ಬಾಯ್ ಕೂಗಿದ.

ಎಲ್ಲರಿಗೂ ಶಾಕ್. "ಫೇಮಸ್ ಡಾಕ್ಟರ್ ಕವನಾ ಇನ್ನಿಲ್ಲ" , "ಆತ್ಮಹತ್ಯೆಗೆ ಶರಣಾದ ಕವನಾ" ನಾನಾ ಹೆಡ್ ಲೈನ್ಸ್ ಗಳು.

ವಿದ್ಯಾ ಒಂದು ಕ್ಷಣ ತನ್ನ ಕಣ್ಣು ತಾನೇ ನಂಬಲಿಲ್ಲ. ಡಾಕ್ಟರ್ ಕವನಾ ಆತ್ಮಹತ್ಯೆ ಮಾಡ್ಕೊಂಡ್ರಾ? ಅದ್ಹೇಗೆ ಸಾಧ್ಯ? ನನಗೆ ತಾಳ್ಮೆ ಬಗ್ಗೆ ಅವರೇ ಅಲ್ವಾ ಹೇಳಿದ್ದು? ಆತ್ಮಹತ್ಯೆ ಮಹಾಪಾಪ ಎಂದಿದ್ದು...!! ವಿದ್ಯಾ ದುಃಖದಲ್ಲಿದ್ದಳು. ವಿಜಯ್ ಬಂದು ವಿದ್ಯಾಳನ್ನು ಸಂತೈಸುತ್ತಿದ್ದ.

ಹೌದು ಕವನಾ ಆತ್ಮಹತ್ಯೆಗೆ ಶರಣಾಗಿದ್ದಳು. ನೆನ್ನೆ ಅವಳ ಕೈಯಲ್ಲಿ ಪೆನ್ನು ನೋಡಿದ್ದ ಅನಂತ್ ಕಾರಿನಲ್ಲಿ ಅದರ ಬಗ್ಗೆ ಯೋಚಿಸಿದ ತಕ್ಷಣ ಅವನಿಗೆ ಕವನಾಳ ಮನಸ್ಥಿತಿ ಅರ್ಥವಾಗಿತ್ತು. ಆ ತರದ ಎಷ್ಟೋ ಕೇಸ್ ಹ್ಯಾಂಡಲ್ ಮಾಡಿದ್ದ ಅನಂತ್.. ಅವನಿಗೆ ತಿಳಿದಿತ್ತು ಈ ತರ ಕಂಡಿಷನ್ ಇದ್ದವರು ಕೊನೆದಾಗಿ ಅವರ ಮನಸಲ್ಲಿರೊದನ್ನೆಲ್ಲಾ ಒಂದು ಪತ್ರದಲ್ಲಿ ಬರ್ದಿಟ್ಟು ಮನೆ ಬಿಟ್ಟು ಹೋಗ್ಬೋದು ಇಲ್ಲಾ ಆತ್ಮಹತ್ಯೆ ಮಾಡ್ಕೋಬಹುದು ಅಂತ. ಅವನಿಗಿದ್ದ ಭಯಾ ಅಂದ್ರೆ ಕವನಾ ಮನೆ ಬಿಟ್ಟು ಹೋಗ್ತಾಳೆ ಅನ್ನೋದು ಯಾಕಂದ್ರೆ ಆತ್ಮಹತ್ಯೆ ಮಾಡ್ಕೋಳೊವಷ್ಟು ವೀಕ್ ಮೈಂಡ್ ಅವಳಿಗೆ ಇಲ್ಲ ಎಂದು ಭಾವಿಸಿದ್ದ . ಆದಾಗ್ಯೂ ತನ್ನ ತಂದೆಗೆ ಫೋನ್ ಮಾಡಿ ಕವನಾ ಮನೆ ಬಿಟ್ಟು ಹೋಗೊ ನಿರ್ಧಾರ ಮಾಡಿದಾಳೆ ಅಂತ ಅನ್ಸತ್ತೆ ಅಪ್ಪಾ. ನೀವು ಅಮ್ಮಾ ಅವಳನ್ನ ತಡೆಯಿರಿ ನಾನು ಇನ್ನೊಂದ್ ಅರ್ಧಾ ಮುಕ್ಕಾಲು ಗಂಟೆ ಅಂದ್ರೆ ಮನೆ ರೀಚ್ ಆಗ್ತಿನಿ ಬಾಯ್ ಅಪ್ಪಾ.. ಫೋನ್ ಕಟ್ ಮಾಡಿ ಮನೆಗೆ ನಡೆದಿದ್ದ ಅನಂತ್. ತನ್ನ ಅಪ್ಪಾ ಅಮ್ಮಾ ಅವಳನ್ನ ತಡೆದಿರಬಹುದೆಂದು ಆತನ ಊಹೆ. ಆದರೆ ವಿಧಿಯ ಮುಂದೆ ಅನಂತನ ಯೋಚನೆ ತೃಣಸಮಾನವಾಗಿತ್ತು. ಅವಳು ನೇಣಿಗೆ ಶರಣಾಗಿದ್ದಳು. ಉಮಾಪತಿಗೇ ಹೃದಯಾಘಾತವಾಗಿತ್ತು. ಶಾರದಮ್ಮ ಕವನಾಳನ್ನೇ ದಿಟ್ಟಿಸಿ ನೋಡುತ್ತಾ ಕಲ್ಲಿನಂತೆ ನಿಂತಿದ್ದರು. ಪೋಲೀಸರು ಮತ್ತು ಫಾರೆನ್ಸಿಕ್ ನವರು ಬಂದರು. ಪೋಸ್ಟ್ಮಾರ್ಟಮ್ ಆದ್ಮೇಲೆ ಬಾಡಿ ಕೊಡ್ತಿವಿ ಮನೆಯವರು ಯಾರಾದರೂ ಒಬ್ರು ಬನ್ನಿ ಎಂದರು.


ಅವಳ ಕೈಯಲ್ಲಿ ಚೀಟಿ ಇತ್ತು. ಅದರಲ್ಲಿ ತನ್ನ ಗಂಡ, ತಾಯಿ , ಅತ್ತೆ ಮಾವನಿಗೆ ಕ್ಷಮಿಸಿ ಎಂದು ಬರೆದಿದ್ದಳು. ಮಕ್ಕಳಿಲ್ಲದ ಜೀವನ ನನಗೆ ಉಸಿರುಗಟ್ಟುವಂತೆ ಮಾಡುತ್ತಿದೆ. ನನ್ನ ಹಠದ ಪರಿಣಾಮವಾಗಿ ಒಂದು ಮಗು ಕಳೆದುಕೊಂಡು ನನ್ನ ಜೀವನ ಬರಡಾಗಿದೆ. ನನ್ನಿಂದ ಎಲ್ಲರಿಗೂ ಬೇಜಾರು ಅದಿಕ್ಕೆ ಈ ನಿರ್ಧಾರ ಮಾಡಿದಿನಿ. ಜಗತ್ತು ಎಷ್ಟೇ ಮುಂದುವರೆದಿರಬಹುದು, ನಾವೆಷ್ಟೇ ಎಜುಕೇಟೆಡ್ ಆಗಿರಬಹುದು. ಹೆಣ್ಣು ಏನೆಲ್ಲಾ ಸಂಪಾದಿಸಿದ್ರೂ ಕೊನೆಗೆ ಅವಳ ಜನ್ಮಕ್ಕೆ ಸಾರ್ಥಕತೆ -ಮುಕ್ತಿ ಸಿಗುವುದು ಅವಳು ತಾಯಿಯಾದಾಗಲೇ. ಆ ಮುಕ್ತಿ ಬಹುಷಃ ನನಗೆ ಸಿಗಲಾರದೋ ಏನೋ. ಕ್ಷಮಿಸಿ. ನನ್ನ ಸಾವಿಗೆ ನನ್ನ ಮನೆಯವರು ಯಾರೂ ಕಾರಣರಲ್ಲಾ ಅನಂತ್ ನನ್ನ ಕ್ಷಮಿಸಿ. ಇಂತಿ ನಿಮ್ಮ ಕವನಾ



ಮೀಡಿಯಾ ಮೂಲಕ ಈ ಸುದ್ದಿ ಎಲ್ಲರಿಗೂ ತಲುಪಿತ್ತು. ಪೋಸ್ಟ್ಮಾರ್ಟಂ ರಿಪೋರ್ಟ್ ಬಂತು . ಕವನಾ ಸ್ವಯಂ ಪ್ರೇರಿತಳಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಎಲ್ಲರಿಗೂ ಶಾಕ್ ನೀಡಿದ್ದ ವಿಷಯವೇ ಬೇರೇ ಇತ್ತು. ಅದೇ ಕವನಾ ಎರಡು ತಿಂಗಳ ಗರ್ಭಿಣಿ ಅಂತಾ !

ಶಾರದಾಳಿಗೆ ಕವನಾ ಬೆಳಿಗ್ಗೆ ತಲೆ ತಿರುಗಿ ಬಿದ್ದಿದ್ದು ನೆನಪಾಯಿತು. ಅಯ್ಯೋ ನನಗೆ ಅಷ್ಟು ಗೊತ್ತಾಗದೇ ಹೋಯ್ತಾ, ಬೆಳಿಗ್ಗೆನೇ ಗೊತ್ತಾಗಿದ್ದಿದ್ರೆ ನನ್ನ ಸೊಸೆಯನ್ನ ಉಳಸ್ಕೊಬಹುದಿತ್ತು ಎಂದು ಅಲ್ಲೇ ಕುಸಿದು ಕೂತರು.



ಅನಂತ್ ಮಾತಾಡದೇ ಮೌನಿಯಾದ. "ದೇವರು ಕೊಟ್ಟಾಗ ತಗೋಬೇಕು ಅನಂತು. ನಮಗೆ ಬೇಕು ಅಂದಾಗ ಮಕ್ಕಳು ಸಿಗಲ್ಲಪ್ಪ"  ಹಿಂದೆಂದೋ ಅಮ್ಮ ಹೇಳಿದ ಮಾತಿಗೆ ಸಮಯ ಇವತ್ತು ಉತ್ತರಿಸಿತ್ತು. ಈಗ ಅವನಿಗೆ ಮಗು ಆಗಲೀ, ಕವನಾ ಆಗಲೀ ಕೈಗೆ ಸಿಗದಷ್ಟು ದೂರ ಚಲಿಸಿದ್ದರು. 


Rate this content
Log in

Similar kannada story from Tragedy