Jyothi Baliga

Tragedy Inspirational Others

3.9  

Jyothi Baliga

Tragedy Inspirational Others

ಅಂಜಲಿ

ಅಂಜಲಿ

8 mins
22.7K


ಇಂಜಿನಿಯರಿಂಗ್ ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ ಅಂಜಲಿ 'ವೀಸಾ' ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ 'ಪಂಚತಾರಾ' ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ‌ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಅಂಜಲಿಯ ಮೈ ಮನವನ್ನು ಆವರಿಸತೊಡಗಿತ್ತು‌. ಗೆಳತಿಯ ನೋಡಲೆಂದು ಹೊರಗೆ ಹೊರಟವಳು‌ ಮನಕ್ಷೋಭೆಯಿಂದ ಹಾಗೆಯೇ ಹಿಂತಿರುಗಿ

ಹೂದೋಟದಲ್ಲಿ ಹಾಕಿದ್ದ ಆರಾಮ ಆಸನದ ಮೇಲೆ ಕೂತು ಕಣ್ಣು ಮುಚ್ಚಿ ಮಲಗಿದಳು. ತಣ್ಣನೆಯ ಗಾಳಿಯ ಜೊತೆಗೆ ಪಟ ಪಟ ಎಂದು ಮಳೆಯ ಹನಿಗಳು ಮುಖಕ್ಕೆ ಬಡಿದರೂ ಅವಳು ಏಳದೇ ಕೂತಿರುವುದನ್ನು ನೋಡಿದ ಮ್ಯಾನೇಜರ್ ಒಳಗಿನಿಂದ ಕೊಡೆಯನ್ನು ತಂದು ಅಂಜಲಿ ಒದ್ದೆಯಾಗದಿರಲೆಂದು ತಲೆಯ ಮೇಲೆ ಹಿಡಿದ. ತನ್ನಿಂದ ಅವನಿಗೇಕೆ ತೊಂದರೆ ಎಂದು ಅಂಜಲಿ ಅವನ‌ ಜೊತೆಯಲ್ಲಿ ಹೆಜ್ಜೆಗೆ ಹೆಜ್ಜೆ ಹಾಕಿದಳು. ಪನ್ನೀರಿನಂತೆ ಬೀಳುತ್ತಿದ್ದ ಮಳೆಯ ಹನಿಯ ಬಿಂದುಗಳು ತನ್ನ ಆಕಾರವನ್ನು ಹೆಚ್ಚಿಸುತ್ತಿದ್ದಂತೆ ಅಂಜಲಿ ಸಂಪೂರ್ಣವಾಗಿ ಒದ್ದೆಯಾಗುವುದನ್ನು ನೋಡಿದ ಮ್ಯಾನೇಜರ್ ರಾಜೀವ್ ಪಾಂಡೆ ವೆರಾಂಡದ ಕಡೆ ಓಡಿದ. ಅವನು ವೆರಾಂಡಕ್ಕೆ ತಲುಪಿದರೂ ಅವಳ ನಡಿಗೆಯ ವೇಗ ಹೆಚ್ಚಾಗಲಿಲ್ಲ. ಅವಳಿನ್ನೂ ವೆರಾಂಡ ತಲುಪಲು ತುಂಬಾ ದೂರದಲ್ಲೇ ಇದ್ದಳು.ಗಾಳಿ ಮಳೆಯ ಜೊತೆಗೆ ಸಿಡಿಲಿನ ಬೆಳಕಿಗೆ ಅಂಜಲಿಯ ಮನದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ದುಃಖ ಉಮ್ಮಳಿಸಿ ಬಂದ‌ ಕಣ್ಣೀರು ಮಳೆ ಹನಿಯ ಜೊತೆಗೆ ಮಿಲನವಾದದ್ದು ರಾಜೀವನ ಕಣ್ಣಿಗೆ ‌ಕಾಣಿಸಿತು.

ಅಂಜಲಿ ಕೋಣೆಯೊಳಗೆ ಬಂದವಳೇ ಒದ್ದೆಯಾಗಿದ್ದರೂ ಹಾಗೆಯೇ ಹಾಸಿಗೆಯ ಮೇಲೆ ಬಿದ್ದಳು. ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುವಾಗ ಅವಳ ಜೀವನದಲ್ಲಿ ನಡೆದ ಘಟನೆಗಳು ಒಂದೊಂದರಂತೆ ಕಾಡಲು ಶುರುವಾಯಿತು.

****************************************************

ವೇಣುಗೋಪಾಲರಾಯರು ಹಾಗೂ ಸುನಂದಿ ದಂಪತಿಯ ಏಕಮಾತ್ರ ಪುತ್ರಿಯೇ ಅಂಜಲಿ.ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗು ಮುಖದಿಂದ ಸ್ವೀಕರಿಸುವ ಅಪ್ಪನೇ ಅವಳಿಗೆ ಸ್ಪೂರ್ತಿ. ಅಪ್ಪ ತಂದ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸುವ ಅಮ್ಮನೆಂದರೆ ಅಂಜಲಿಗೆ ಅಪಾರ ಪ್ರೀತಿ. ತನ್ನ ಓದಿಗಾಗಿ ಹಗಲು ರಾತ್ರಿ ಕಷ್ಟಪಡುತಿರುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನ್ನ ಮನಸ್ಸನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿದ್ದಳು.ತಂದೆಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುವ ಶಕ್ತಿ ಇಲ್ಲವೆಂದು ತಿಳಿದ ಅಂಜಲಿ ಮೆರಿಟ್ ಸೀಟ್ ಪಡೆದರೆ ಉಚಿತವಾಗಿ ಕಾಲೇಜಿನಲ್ಲಿ ಅಡ್ಮಿಷನ್ ಸಿಗುತ್ತದೆ ಜೊತೆ ಜೊತೆಗೆ ಸ್ಕಾಲರ್ಶಿಪ್ ನಿಂದ ಬರುವ ಹಣವನ್ನು ಹಾಸ್ಟೆಲ್ ವಾಸಕ್ಕೆ ಉಪಯೋಗಿಸುವ ಯೋಚನೆಯನ್ನು ಮಾಡಿ ಕಷ್ಟಪಟ್ಟು ಓದಿ ಸಿಯಿಟಿ ಯಲ್ಲಿ ರ‌್ಯಾಂಕ್ ಪಡೆದು ತನ್ನ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಳು.

ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆಂದು ತಿಳಿದ ಅಂಜಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೂ ಅಳೆದು ತೂಗಿ ತನ್ನ ಹಣವನ್ನು ಖರ್ಚು ಮಾಡುತ್ತಿದ್ದಳು. ಅಂಜಲಿಯ ಕಷ್ಟ ಅರಿತ ಗೆಳತಿಯರು ಅವಳ ಮನಸ್ಸಿಗೆ ನೋವಾಗದಂತೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.ಹಾಸ್ಟೆಲ್, ಲೈಬ್ರರಿ ಬಿಟ್ಟರೆ ಬೇರೆ ಯಾವುದೇ ವಿಷಯದ ಕಡೆ ಗಮನ ಕೊಡದ ಅಂಜಲಿ ಇಂಜಿನಿಯರಿಂಗ್ ನಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದಳು. ರಜೆಯಲ್ಲಿ ಮನೆಗೆ ಹೋಗಿ ಅಮ್ಮ ತಯಾರಿಸಿದ ರುಚಿಯಾದ ಊಟ ಮಾಡಿ ಅಪ್ಪನ ಹಿತವಾದ ಪ್ರೀತಿಯನ್ನು ಸವಿಯುತ್ತಿದ್ದ ಅಂಜಲಿಗೆ ದಿನಗಳು ಓಡುತ್ತಿದ್ದದ್ದೆ ತಿಳಿಯಲಿಲ್ಲ.

ಇನ್ನೇನೂ ಒಂದು ವರ್ಷದ ಇಂಜಿನಿಯರಿಂಗ್ ಕೋರ್ಸ್ ಬಾಕಿ ಇರುವ ಹೊತ್ತಿಗೆ ಅಂಜಲಿಯ ಸಹಪಾಠಿಯಾದ ಪ್ರಮೋದ ಅವಳ ಬಳಿ ಬಂದು ಪ್ರೇಮಭಿಕ್ಷೆ ಕೇಳಿದ.

"ನನಗೆ ಈ ಪ್ರೀತಿ ಪ್ರೇಮದಲ್ಲಿ ವಿಶ್ವಾಸವಿಲ್ಲ ಪ್ರಮೋದ್. ಓದು ಮುಗಿದ ಮೇಲೆ ನನಗೆ ನನ್ನದೇ ಕೆಲವು ಗುರಿಗಳು ಇವೆ. ಕೆಲಸಕ್ಕೆ ಸೇರಬೇಕು, ಇಷ್ಟು ವರ್ಷ ಬಾಡಿಗೆ ಮನೆಯ ಸಹವಾಸ ಸಾಕಾಗಿದೆ. ಅಪ್ಪ ಅಮ್ಮನಿಗಾಗಿ ಪುಟ್ಟ ಮನೆಯನ್ನು ಖರೀದಿಸಬೇಕು. ಸ್ವಲ್ಪ ಸಮಯ ಅವರ ಜೊತೆಯಲ್ಲಿ ಕಳೆಯಬೇಕು.ಅಪ್ಪ ಅಮ್ಮ ಇಷ್ಟಪಟ್ಟ ಹುಡುಗನ ಗುಣ ಸ್ವಭಾವ ಇಷ್ಟವಾದರೆ ‌ಅವನ ಜೊತೆಯಲ್ಲಿ ಮದುವೆಯಾಗುವುದು.." ಎಂದು ಹೇಳಿ ಅವನಿಗೆ ಸಮಾಧಾನ ಮಾಡಿದಳು.

ಅಂಜಲಿಯ ತಿರಸ್ಕಾರ ಪ್ರಮೋದ್ ಗೆ ಬೇಸರವಾದರೂ ಅವಳ ಬೆನ್ನು ಬಿಡದ ಬೇತಾಳದಂತೆ ಹಿಂದೆ ಸುತ್ತಲೂ ಶುರುಮಾಡಿದ. ಅವನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದೆಂದು ಅರಿತ ಅಂಜಲಿ ಪ್ರಾಂಶುಪಾಲರಿಗೆ ದೂರು ಕೊಡುವೆ ಎಂದು ಪ್ರಮೋದನಿಗೆ ಹೆದರಿಸಿದಳು.

ಓದು ಬಿಟ್ಟು ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕದೇ ಇರುತ್ತಿದ್ದ ಅಂಜಲಿಯ ಹಠದ ಸ್ವಭಾವವನ್ನು ಇಷ್ಟು ವರ್ಷದಿಂದ ನೋಡಿದ್ದ ಪ್ರಮೋದ್ ಗೆ ಅವಳು ನಿಜವಾಗಿಯೂ ಪ್ರಾಂಶುಪಾಲರಿಗೆ ದೂರು ಕೊಟ್ಟರೆ ತನ್ನ ವಿದ್ಯಾರ್ಥಿ ಜೀವನಕ್ಕೆ ಕಪ್ಪು ಚುಕ್ಕೆ ಬೀಳುವುದು ಖಚಿತವೆಂದು ತಿಳಿದು ಅಂಜಲಿಯ ವಿಷಯಕ್ಕೆ ಹೋಗುವುದನ್ನು ಕಡಿಮೆ ಮಾಡಿ ಸುಮ್ಮನಾಗುತ್ತಾನೆ.

ಸಮಯ ಯಾರಿಗೂ ಕಾಯದೇ ಓಡುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಇನ್ನೇನೂ ತಾವು 'ಇಂಜಿನಿಯರ್' ಆದೆವು ಎಂಬ ಖುಷಿಯಿಂದ ಅಂತಿಮ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಯನ್ನು ಬರೆದಿದ್ದರು.ವಿದ್ಯಾರ್ಥಿ ಜೀವನದ ಕೊನೆಯ ದಿನವನ್ನು ಮರೆಯದಂತೆ ಕಳೆಯಬೇಕೆಂದು ಯೋಚಿಸಿದ ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ.ಔತಣ ಕೂಟ ಮುಗಿಸಿದ ವಿದ್ಯಾರ್ಥಿಗಳು ಸಂಜೆಯ ಹೊತ್ತಿಗೆ ಊರಿಗೆ ಹೋಗಲಿರುವುದೆಂದು ಹಾಸ್ಟೆಲ್ ನಿಂದ ಲಗೇಜು‌ ಹಿಡಿದು ತಮ್ಮ ತಮ್ಮ ಮನೆಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬರುತ್ತಾರೆ. ಒಬ್ಬೊಬ್ಬರೇ ಅವರ ಊರಿನ‌ ಬಸ್ಸು ಬಂದಾಗ ಉಳಿದವರಿಗೆ 'ಬಾಯ್' ಎಂದು ಹೇಳಿ ಬಸ್ಸು ಹತ್ತಿ ಹೋದರು. ಸುಮಾರು ಎಂಟು ಗಂಟೆ ಕಳೆದರೂ ತನ್ನ ಊರಿಗೆ ಹೋಗುವ ಬಸ್ಸು ಬಾರದೇ ಮುಂದೇನೂ ಮಾಡುವುದೆಂದು ತೋಚದೇ ನಿಂತಿದ್ದ ಅಂಜಲಿ ಪರಿಚಿತ ಧ್ವನಿಯೊಂದು‌‌ ಕೇಳಿ‌ ಗೆಲುವಾಗುತ್ತಾಳೆ. ತನ್ನ ಗೆಳೆಯರನ್ನು ಬಸ್ಸು ಹತ್ತಿಸಲು ಬಂದಿದ್ದ ಪ್ರಮೋದ್ , ಅಂಜಲಿಯನ್ನು ಕಂಡು ಒಬ್ಬಳೇ ನಿಂತಿರುವ ಬಗ್ಗೆ ಕೇಳುತ್ತಾನೆ.

ಬಸ್ಸು ಬಾರದಿರುವ ಕಾರಣದಿಂದ ಇಲ್ಲಿ ನಿಂತಿರುವುದು ಎಂದು ಅಂಜಲಿ ಹೇಳಿದಾಗ "ಈ ಹೊತ್ತಿನಲ್ಲಿ ನೀನು‌ ಒಬ್ಬಳೇ ಇಲ್ಲಿ ನಿಲ್ಲುವುದು ಬೇಡಾ, ನಾನು ನಿನ್ನನ್ನು ಮನೆಗೆ ತಲುಪಿಸುತ್ತೇನೆ.." ಎಂದು ಪ್ರಮೋದ್ ಹೇಳುತ್ತಾನೆ. ಅಂಜಲಿ ಬೇಡವೆಂದು ಹೇಳಿದರೂ ಕೇಳದೆ ಅವಳ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿ ಕಾರಿನ ಡೋರ್ ತೆಗೆದು‌ ನಿಲ್ಲುತ್ತಾನೆ. ಪರಿಚಯವಿರದವರ ಜೊತೆಗೆ ನಿಲ್ಲುವ ಬದಲು ಪರಿಚಯದವನ ಜೊತೆಯಲ್ಲಿ ಮನೆಗೆ ತಲುಪುದು ಕ್ಷೇಮವೆಂದು ಅಂಜಲಿ ಕಾರಿನೊಳಗೆ ಕೂತುಕೊಳ್ಳುತ್ತಾಳೆ.

ಅಂಜಲಿಯ ಊರು ತಲುಪಲು ಏಳು ಗಂಟೆಯ ಪ್ರಯಾಣವಿರುವುದರಿಂದ ಪ್ರಮೋದ್ ಅರ್ಧದಾರಿಯಲ್ಲಿ ಊಟ ಮಾಡಲು ಕಾರು ನಿಲ್ಲಿಸುತ್ತಾನೆ. ಹಳೆಯ ಕಹಿನೆನಪುಗಳನ್ನು ಮರೆತ ಇಬ್ಬರೂ ನಗು ನಗುತ್ತಾ ಊಟ ಮುಗಿಸಿ ಕಾರನ್ನು ಏರುತ್ತಾರೆ.

ಪಾರ್ಟಿಯಲ್ಲಿ ಕುಣಿದು ಸುಸ್ತಾಗಿದ್ದ ಅಂಜಲಿ‌ ಚಳಿಗೆ ಮುದುಡಿ ಕಾರಿನಲ್ಲೇ ಮಲಗಿರುವಾಗ ಪ್ರಮೋದ್ ಗೆ ಕೆಟ್ಟ ವಿಚಾರ ಮನದಲ್ಲಿ ‌ಸುಳಿಯುತ್ತದೆ.‌ ಪ್ರಮೋದ್ ಗೆ ತಾನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ವಯಸ್ಸಿನ ಕಾಮನೆಯನ್ನು ತಡೆದುಕೊಳ್ಳಲಾಗದೇ ಜನಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಾನೆ.‌ ನಿದ್ದೆಯ ಮಂಪರಿನಲ್ಲಿದ್ದ ಅಂಜಲಿ ಊರು ಬಂತಾ? ಎಂದು ಕೇಳುವಾಗ ಬರ್ಹಿದೆಸೆಗಾಗಿ ಎಂದು ಸುಳ್ಳು ಹೇಳುತ್ತಾನೆ.‌

ತನ್ನ ಪ್ರೀತಿಯನ್ನು ತಿರಸ್ಕರಿಸಿದ ಅಂಜಲಿಯ ಜೀವನ ಹಾಳು ಮಾಡಲು ಇದೇ ಸರಿಯಾದ ಸಮಯವೆಂದು ಯೋಚಿಸಿದ ಪ್ರಮೋದ್ ಹಸಿದ ವ್ಯಾಘ್ರದಂತೆ ಅವಳ ದೇಹವನ್ನು ‌ಆಕ್ರಮಿಸುತ್ತಾನೆ. ಎದೆಯ ಮೇಲೆಲ್ಲಾ ಕಚ್ಚಿ ರಕ್ತ ಸೋರುತ್ತಿದ್ದರೂ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸುತ್ತಾನೆ. ಎಷ್ಟು ಚೀರಾಡಿದರೂ ತನ್ನನ್ನು ರಕ್ಷಿಸಲು ಯಾರು ಬರಲಾರರು ಎಂದು ಅಂಜಲಿಗೆ ಅರಿವಾದಾಗ ಸೋತು ಕಣ್ಣೀರು ಹಾಕುತ್ತಾಳೆ. ತನ್ನ ಕೆಲಸ ಮುಗಿಸಿದ ಪ್ರಮೋದ್ ಅವಳ ಕುತ್ತಿಗೆಯನ್ನು ಹಿಸುಕಿ ಸತ್ತು ಹೋದಳೆಂದು ತಿಳಿದು ಅಲ್ಲೇ ಬಿಟ್ಟು ಹೋಗುತ್ತಾನೆ.

ಅಂಜಲಿಯ ದೈವಬಲ ಚೆನ್ನಾಗಿತ್ತೋ, ಅಥವಾ ಪ್ರಮೋದ್ ‌ಗ್ರಹಚಾರ ಕೆಟ್ಟಿತ್ತೋ, ಅಂಜಲಿ ಸಾಯದೇ ಬದುಕಿರುತ್ತಾಳೆ. ಮುಂಜಾನೆಯ ಹೊತ್ತು ಪ್ರಜ್ಞೆ ಬಂದ ಅಂಜಲಿ ತನ್ನ ಇರುವಿಕೆಯನ್ನು ತಿಳಿಸಲು ಕಿರುಚಾಡುತ್ತಾಳೆ. ಆ ದಾರಿಯಲ್ಲಿ ಬರುತ್ತಿದ್ದ ಲಾರಿಯವರು ಕಿರುಚಾಟ ಕೇಳಿ ಗಾಡಿ ನಿಲ್ಲಿಸಿ ಸಾವು ಬದುಕಿನ ನಡುವೆ ಹೋರಾಡುತಿರುವ ಅಂಜಲಿಯನ್ನು ಲಾರಿಯಲ್ಲಿ ಹಾಕಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಅವಳ ಮನೆಗೆ ವಿಷಯ ತಿಳಿಸಿದಾಗ ಅಳುತ್ತಾ ರಾಯರು ಹಾಗೂ ಅವರ ಪತ್ನಿ ಬರುತ್ತಾರೆ. ಹದಿನೈದು ದಿನ ಸಾವು ಬದುಕಿನೊಂದಿಗೆ ಹೋರಾಡಿದ ಅಂಜಲಿ ಕೊನೆಗೂ ಬದುಕಿ ಉಳಿಯುತ್ತಾಳೆ.

ವೇಣುಗೋಪಾಲರಾಯರು ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅತ್ಯಾಚಾರದ ಕೇಸು ಆಗಿರುವುದರಿಂದ ಅಂಜಲಿ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಗುತ್ತದೆ. ವಿಚಾರಣೆಗಾಗಿ ಅವಳು ಠಾಣೆಗೆ ಹೋಗಿ ಬರುವುದರಿಂದ ಅವಳಿಗೆ ಅತ್ಯಾಚಾರವಾದ ವಿಷಯದ ಹೊರಬೀಳುತ್ತದೆ.ಈ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಮಾಧ್ಯಮದವರು ಇವಳ ಬಗ್ಗೆ ಮಾಹಿತಿಯನ್ನು ಕೇಳಲು ಒಬ್ಬೊಬ್ಬರಾಗಿ ಸೇರುತ್ತಾರೆ. ತಮ್ಮ ಮಗಳಂತೆ ಅಂಜಲಿ ಎಂಬ ಅಕ್ಕರೆಯು ತೊರದೇ, ಅವಳ ಸಾಧನೆಯ ಬಗ್ಗೆ ಅಸಮಾಧಾನವನ್ನು ಹೊಂದಿದವರು ಕೆಟ್ಟಕೆಟ್ಟದಾಗಿ ಮಾಧ್ಯಮದವರ ಬಳಿ ಹೇಳಿದಾಗ ಇದನ್ನೇ ದಾಳವಾಗಿ ಉಪಯೋಗಿಸಿದ ಪ್ರಮೋದ್ ಕೇಸ್ ಗೆಲ್ಲುತ್ತಾನೆ. ನ್ಯಾಯ ದೊರಕದೇ ಅಂಜಲಿಯ ಜೊತೆಗೆ ಹೆತ್ತವರು ಕುಸಿಯುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಹಾಳಾಯಿತು, ಇನ್ನೂ ಬದುಕಲು ಸಾಧ್ಯವಿಲ್ಲವೆಂದು ‌ಮೂವರು ಸೇರಿ ಕೀಟನಾಶಕ‌ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಧಿನಿಯಮವೋ, ದೇವರ ಇಚ್ಛೆಯೋ ಹೆತ್ತವರ ಕಳೆದುಕೊಂಡ ಅಂಜಲಿ ಮತ್ತೊಮ್ಮೆ ಸಾವು ಬದುಕಿನೊಡನೆ ಹೋರಾಡಿ ‌ಬದುಕುತ್ತಾಳೆ.

ಇಂಜಿನಿಯರಿಂಗ್ ನಲ್ಲಿ ಅಂಜಲಿ ರಾಜ್ಯಕ್ಕೆ ‌ಪ್ರಥಮ ಸ್ಥಾನ ಪಡೆದ ವಿಷಯ ತಿಳಿದು ಶುಭಕೋರಲು 'ರೀನಾ' ಪೋನ್ ಕರೆ ಮಾಡಿದಾಗ ತಾನು ಅನುಭವಿಸಿದ ನೋವು, ಹೆತ್ತವರ ಸಾವು ಎಲ್ಲವನ್ನೂ ಅಂಜಲಿ ರೀನಾಳಿಗೆ ತಿಳಿಸುತ್ತಾಳೆ. ಅಂಜಲಿಯ ಪರಿಸ್ಥಿತಿಗೆ ನೊಂದ ರೀನಾ ಆಸ್ಪತ್ರೆಗೆ ಬಂದು ಅವಳನ್ನು ಕರೆದುಕೊಂಡು ತನ್ನ ಊರಿಗೆ ಹೋಗುತ್ತಾಳೆ.

"ಇನ್ನೂ ಚಿಕ್ಕ ವಯಸ್ಸು ನಿನ್ನದು, ಕಹಿ ಘಟನೆಯನ್ನು ಮರೆತು ಬದುಕುವುದನ್ನು ಕಲಿ " ಎಂದು ಅವಳಿಗೆ ಬುದ್ದಿ ಹೇಳಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಾಳೆ.

ಎಲ್ಲವನ್ನೂ ಮರೆತು ದೂರದ ದಿಲ್ಲಿಯಲ್ಲಿ ನೆಲೆನಿಂತ ಅಂಜಲಿ ತಾನು ಕಲಿತ ವಿದ್ಯೆಗೆ ಸರಿಹೊಂದುವಂತ‌ ಕೆಲಸವನ್ನು ಹುಡುಕಿ ಜೀವನ ನಡೆಸುತ್ತಾಳೆ.

****************************************************

ಹಳೆಯ ನೆನಪಿನಿಂದ ಎಚ್ಚೆತ್ತು ಬೆವರಿನಿಂದ ಮುದ್ದೆಯಾದ ಅಂಜಲಿ ಗಟಗಟನೆ ಬಾಟಲ್ ನಿಂದ ನೀರು ಕುಡಿದಳು. ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಪ್ರಮೋದ್ ಗೊಂದು ಗತಿ ಕಾಣಿಸಬೇಕೆಂದು ಅವನ ಚಲನವಲನ ಗಮನಿಸಿದಳು.

ತನ್ನ ಮುಖ ಪರಿಚಯ ತಿಳಿಯಬಾರದೆಂದು‌ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಹೋಟೆಲ್ ನ ಒಬ್ಬ ಸರ್ವೆಂಟ್ 'ಗೆ ಹಣದ ರುಚಿ ತೋರಿಸಿ ಪ್ರಮೋದ್ ನ ಬಗ್ಗೆ ಸಂಪೂರ್ಣ ವಿಷಯ ಕಲೆ ಹಾಕಿದಳು. ಅವನು, "ಪ್ರಮೋದ್ ಇಲ್ಲಿಯ ಖಾಯಂ ಕಸ್ಟಮರ್ .ತಾನು ಮದುವೆಯಾಗುವ ಹುಡುಗಿಯ ಪರಿಚಯಮಾಡಿಕೊಳ್ಳಲು ಬಂದಿದ್ದಾನೆ" ಎಂದು ಹೇಳಿದಾಗ ಅಂಜಲಿಗೆ ಕೋಪದ ಜೊತೆಗೆ ಆ ಹುಡುಗಿಯ ಬಗ್ಗೆ ಮರುಕವಾಗುತ್ತದೆ. ನನ್ನಂತೆ ಮತ್ತೊಂದು ಹೆಣ್ಣಿನ ಬಾಳು ಹಾಳಾಗುವುದು ಬೇಡವೆಂದು ಯೋಚಿಸಿ ಪ್ರಮೋದ್ ನಂತಹ ಕ್ರಿಮಿಗಳನ್ನು ಹೊಸಕಿ ಹಾಕಲು ನಿರ್ಧಾರ ಮಾಡುತ್ತಾಳೆ.

ಸರ್ವೆಂಟ್ ಸಹಾಯದಿಂದ ಬಾಡಿಗೆ ಹಂತಕರ ಪರಿಚಯ ಮಾಡಿಕೊಂಡ ಅಂಜಲಿ, ಪ್ರಮೋದ್ ನ ಕೈಕಾಲು ಮುರಿಸುವುದಷ್ಟೇ ಅಲ್ಲದೇ ಅವನ ಪುರುಷತ್ವವನ್ನು ನಾಶ ಪಡಿಸಲು ಹಂತಕರಿಗೆ ಹೇಳುತ್ತಾಳೆ. ವಿಷಯ ಹೊರಬಾರದಂತೆ ಇಬ್ಬರಿಗೂ ಕೈ ತುಂಬಾ ಹಣಕೊಡುತ್ತಾಳೆ. ಪ್ರಮೋದ್ ಗೆ ಗತಿ ಕಾಣಿಸಿದ ಮಾಹಿತಿಯನ್ನು ಪಡೆದ ಮೇಲೆ ಹೋಟೆಲ್ ರೂಮ್ ಬಿಟ್ಟು ಕೊಟ್ಟು ರೀನಾಳ ಮನೆಗೆ ಬರುತ್ತಾಳೆ.

"ಅಂಜಲಿ, ಎಷ್ಟೋ ವರ್ಷದ ನಂತರ ತುಂಬಾ ಸಂತೋಷದಿಂದ ಇದ್ದಿಯಾ ? ಏನಿವತ್ತು ಯಾರಾದರೂ ಪ್ರಫೋಸ್ ಮಾಡಿದ್ದಾರಾ ?" ಎಂದು ರೀನಾ ಕೇಳುತ್ತಾಳೆ.

"ಇಲ್ಲ ರೀನಾ, ಇವತ್ತು ನನ್ನ ಹೆತ್ತವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಅದಕ್ಕೆ ತುಂಬಾ ಸಂತೋಷ "ಎಂದ ಅಂಜಲಿ ತಾನು ಪ್ರಮೋದ್ ಗೆ ಕೊಟ್ಟಿರುವ ಶಿಕ್ಷೆಯ ಕುರಿತು ಹೇಳುತ್ತಾಳೆ.

ಅಂಜಲಿಯ ಬಗ್ಗೆ ವಿಪರೀತ ಕಾಳಜಿ‌ ಇದ್ದ ರೀನಾ,

"ತಪ್ಪು ಮಾಡಿದೆ ಅಂಜಲಿ, ನೀನು ನ್ಯಾಯಲಯ, ಕೇಸು ಎಂದು ಬೀಳುವುದು ಬೇಕಿರಲಿಲ್ಲ . ಒಳ್ಳೆಯ ಹುಡುಗನನ್ನು ಹುಡುಕಿ ಮದುವೆಯಾಗಿ ಮಕ್ಕಳ ತಾಯಿಯಾಗಿದ್ದರೆ ನಿನ್ನ ಹೆತ್ತವರ ಆತ್ಮಕ್ಕೆ ಶಾಂತಿ ಸಿಗುತಿತ್ತು" ಎಂದು ರೀನಾ ಹೇಳುತ್ತಾಳೆ.

ರೀನಾಳ ಮಾತಿನಲ್ಲಿ ಸತ್ಯ ಇದೆ ಎಂದು ತಿಳಿದಿದ್ದರೂ, ಮರುಕ್ಷಣವೇ ತನ್ನ ಪರಿಸ್ಥಿತಿಯನ್ನು ನೆನಸಿಕೊಂಡು ತಾನು ಮಾಡಿದ್ದೆ ಸರಿ ಎಂದು ತೋರಿಸಲು ಹಾಕಿಕೊಂಡ ಸಲ್ವಾರ್ ಟಾಪ್ ತೆಗೆದು ತನ್ನ ಮೈ ಹಾಗೂ ಎದೆಯ ಭಾಗವನ್ನು ತೋರಿಸುತ್ತಾ, "ನೋಡಿಲ್ಲಿ ರೀನಾ , ಇಷ್ಟು ವರ್ಷ ಆದರೂ ಗಾಯ ಮಾತ್ರ ಮಾಗಿದೆ, ಕಲೆ ಹಾಗೆ ಇದೆ. ನಾನು ಮದುವೆಯಾದರೆ ನಾಳೆ ನನ್ನ ಗಂಡನಿಗೆ ನನ್ನ ಬಗ್ಗೆ ಸಂಶಯ ತಪ್ಪಿದ್ದಲ್ಲ. ಒಂದು ವೇಳೆ ಅವನು ತುಂಬಾ ಒಳ್ಳೆಯವನಾದರೂ, ಮಗುವಾದ ಮೇಲೆ ಯಾವುದೋ ಒಂದು ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕ್ಷಣಿಕ ಕೋಪಕ್ಕೆ ‌ಗುರಿಯಾಗಿ ನನ್ನ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಿದರೆ ನಾನು ಬದುಕಿಯೂ‌ ಸತ್ತಂತೆ . ನಾನು ಪ್ರೀತಿಸಿದ ಗಂಡ ಹಾಗೂ ‌ನನ್ನದೇ ಮಗುವನ್ನು ಕಳೆದುಕೊಂಡು ಬದುಕಬೇಕು. ಇಷ್ಟೆಲ್ಲಾ ಮುಂದಾಲೋಚನೆ ಮಾಡಿಯೇ ನಾನು ಮದುವೆಯಾಗುವುದಿಲ್ಲ ಎಂದು ನಿರ್ಧಾರ ಮಾಡಿ

ನನ್ನ ಜೀವನದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದೆ. ಯಾವಾಗ ಪ್ರಮೋದ್ ನನ್ನು ಮತ್ತೆ ನೋಡಿದೇನೊ ನನ್ನ ಮನಸ್ಸಿನಲ್ಲಿ ತುಂಬಿದ್ದ ಜ್ವಾಲಾಮುಖಿ ಸ್ಪೋಟವಾಯಿತು. ನನ್ನಿಂದಾಗಿ ಅಪ್ಪ ಅಮ್ಮನ ಸಾವು ಸಂಭವಿಸಿದ್ದು ನೆನಪಾಗಿ ಮನಸ್ಸು 'ನ್ಯಾಯ ಬೇಕೆಂದು' ಹಠ ಮಾಡಲು ಶುರುಮಾಡಿತು. ಅದಕ್ಕೆ ನಾನೇ ಪ್ರಮೋದ್ ಗೆ ಶಿಕ್ಷೆ ಕೊಟ್ಟೆ" ಎಂದು ಅಂಜಲಿ ಹೇಳಿದಳು.

 

" ಹಳೆಯದ್ದನ್ನೆಲ್ಲಾ ಮರೆತು ಬಿಡು, ನಿನ್ನನ್ನು ‌ಇಷ್ಟಪಡುವವನೊಂದಿಗೆ ನಿನ್ನ ಜೀವನ ನಡೆಸು ಎಂದು ನಿನಗೆಷ್ಟು ಸಲ ಹೇಳಿದ್ದೇನೆ ಅಂಜಲಿ, ಆದರೂ ನೀನು ನನ್ನ ಮಾತಿಗೆ ಬೆಲೆ ಕೊಡದೇ ಕಾನೂನು ಕೈಗೆ ತೆಗೆದುಕೊಂಡು ತಪ್ಪು ಮಾಡಿದೆ ಕಣೆ..." ಎಂದು ರೀನಾ ಹೇಳಿದಳು.

" ನಾನು ಯಾವುದೇ ತಪ್ಪು ಮಾಡಲಿಲ್ಲ ಕಣೆ, ನ್ಯಾಯಾಲಯದಲ್ಲಿ ಶಿಕ್ಷೆ ಸಿಗದಿದ್ದರೆ ಏನಾಯಿತು,

ನಾನು ಕೊಟ್ಟ ಶಿಕ್ಷೆಯಿಂದ ಜೀವಮಾನವಿಡೀ ಹೆಣ್ಣಿನ ಹಿಂದೆ ಅಲೆಯುವ ಹಾಗಿಲ್ಲ ರೀನಾ. ಪ್ರಪಂಚಕ್ಕೆ ತಿಳಿಯಬೇಕು ಇಂತಹ ಜೀವಿಗಳು ಭೂಮಿಯಲ್ಲಿ ಬದುಕಲು ಯೋಗ್ಯರಲ್ಲವೆಂದು. ನೀನೆನೂ ಹೆದರಬೇಡಾ ಕಣೆ,ಈ ದೇಶದ ನ್ಯಾಯಾಲಯದಲ್ಲಿ ಅಪರಾಧಿ ಅಥವಾ ನಿರಪರಾಧಿಯ ಪರವಾಗಲಿ ಬೇಗನೆ ವ್ಯಾಜ್ಯ ಪರಿಹಾರವಾಗುವುದಿಲ್ಲವೆಂದು ಗೊತ್ತಿದೆ ಅಲ್ವಾ ? ಸಾಕ್ಷಿ ಇದ್ದು, ಇಡೀ ದೇಶದ ಜನತೆ ಜೊತೆಗಿದ್ದರೂ ನ್ಯಾಯಕ್ಕಾಗಿ ಹೋರಾಡಿದ ನಿರ್ಭಯಳ ಕೇಸು ಎಂಟು ವರ್ಷ ನ್ಯಾಯಾಲಯದಲ್ಲಿ ಅಲೆದಾಡಿದೆ. ಇನ್ನೂ ನನ್ನಂತಹ ಸಾಮಾನ್ಯಳ ಕೇಸು ಮುಗಿಯುವ ಹೊತ್ತಿಗೆ ನಾನು ಬದುಕಿ ಇರ್ತಿನೋ ಇಲ್ವೋ ? ಒಂದು ವೇಳೆ ‌ನಾನು ಅಪರಾಧಿ ಎಂದು ಸಾಬೀತಾದರೂ ನನಗೇನೂ ಜೀವಭಯವಿಲ್ಲ. ಅಪರಾಧ ಸಾಬೀತಾಗುವವರೆಗೂ ನನ್ನಂತೆ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತೇನೆಂದು ಹೇಳಿ ನಸುನಕ್ಕು ಮಲಗಲು ಹೋದಳು.

****************************************************

ಅಂಜಲಿ 'ವೀಸಾ' ರಿನಿವಲ್ ಆದ ಮೇಲೆ ಅಮೇರಿಕಾಕ್ಕೆ ಹೋಗಲು ಮತ್ತದೇ ಹೋಟೆಲ್ ಬುಕ್ ಮಾಡಿರುವಳೆಂದು ತಿಳಿದ ಮ್ಯಾನೇಜರ್ ರಾಜೀವ್ ಪಾಂಡೆ ಗುಪ್ತವಾಗಿ ಅಂಜಲಿಯ ಪೂರ್ವಾಪರ ವಿಚಾರಿಸಿ ಕೊಂಡಿದ್ದ. ಅವಳು ರೆಸ್ಟೋರೆಂಂಟ್' ಗೆ ಬಂದಾಗ ಅವಳಲ್ಲಿ ಮಾತನಾಡಲು ಇದೆ ಎಂದು ಕಾರಿಡಾರ್ ಗೆ ಬರಲು ಹೇಳಿ, ತಾನು ಅಂಜಲಿಯ ಕಣ್ಣಲ್ಲಿ ನೋವು ಕಂಡು ಮರುಗಿದ್ದು, ಹೋಟೆಲ್ ನಿಂದ ಹೊರಟಾಗ ತಾನೇನೊ ಕಳೆದುಕೊಂಡ ಭಾವನೆ ಅನುಭವಿಸಿದ್ದು, ಕೂಲಂಕಷವಾಗಿ ಪರೀಕ್ಷಿಸಿದಾಗ ತಾನು ಮೊದಲ ನೋಟಕ್ಕೆ ಅವಳನ್ನು ಇಷ್ಟಪಟ್ಟದ್ದು, ಅವಳ ಬಗ್ಗೆ ವಿಚಾರಿಸಿದ್ದು ಎಲ್ಲವನ್ನೂ ಅಂಜಲಿಯ ಬಳಿ ಹೇಳುತ್ತಾನೆ. ತಾನು ಅನಾಥನಾಗಿದ್ದು ತನ್ನ ವಿದ್ಯಾಭ್ಯಾಸ ತಿಳಿಸಿ, ನಿನ್ನ ಬಗ್ಗೆ ಎಲ್ಲಾ ತಿಳಿದುಕೊಂಡೇ ಮದುವೆಯಾಗಲು ಒಪ್ಪಿದ್ದೇನೆ, ನನ್ನ ಪ್ರೀತಿಯನ್ನು ಸ್ವೀಕರಿಸು ಎಂದು ಕೇಳಿಕೊಳ್ಳುತ್ತಾನೆ.

ಒಂದು ಸಲ ಪ್ರಮೋದ್ ಪ್ರೀತಿಯನ್ನು ತಿರಸ್ಕರಿಸಿದಾಗ ಜೀವನದ ದೊಡ್ಡ ಆಸ್ತಿಯಾಗಿರುವ ಹೆತ್ತವರನ್ನು ಕಳೆದುಕೊಂಡೆ, ಗುರುತು ಪರಿಚಯ ಇಲ್ಲದ ಇವನ ಪ್ರೀತಿಯನ್ನು ತಿರಸ್ಕರಿಸಿದರೆ ಇನ್ನೇನಾಗುವುದೋ ಎಂದು ಹೆದರಿದ ಅಂಜಲಿ ಮೌನಕ್ಕೆ ಶರಣಾದಳು. ರಾಜೀವನ ಒತ್ತಾಯ ಹೆಚ್ಚಾದಾಗ ತಾನು ಯಾರನ್ನು ಮದುವೆಯಾಗಲಾರೆ, ಅನಾಥ ಮಕ್ಕಳ ಸೇವೆ ಮಾಡಿ‌ ನನ್ನ ಜೀವನ ಕಳೆಯುತ್ತೇನೆಂದು ನಿರ್ದಾಕ್ಷಿಣ್ಯವಾಗಿ ಹೇಳಿ ತನ್ನ ಕೋಣೆಗೆ ಹೋಗಿ ರೀನಾಳಿಗೆ ಪೋನ್ ಕರೆ ಮಾಡಿ ರಾಜೀವನ ಬಗ್ಗೆ ತಿಳಿಸುತ್ತಾಳೆ.

ಅದೇ ರಾತ್ರಿ ಅಮೇರಿಕಾಕ್ಕೆ ಹೋಗಲು ತನಗೆ ಫ್ಲೈಟ್ ಇರುವುದರಿಂದ ಏರ್ ಪೋರ್ಟ್ ಗೆ ಹೋಗಲು ಕಾರು ಬುಕ್ ಮಾಡುತ್ತಾಳೆ. ಕಾರ್ ಬಂದಿದೆಯೆಂದು ರಿಷೆಶ್ಪನ್ ಕೌಂಟರ್ ನಿಂದ ಪೋನ್ ಕರೆ ಬಂದಾಗ ತನ್ನ ಲಗೇಜು ಹಿಡಿದು ಕಾರಿನಲ್ಲಿ ಬಂದು ಕೂತು ಕೊಳ್ಳುತ್ತಾಳೆ. ಸ್ವಲ್ಪ ಮುಂದೆ ಹೋದಂತೆ ಕಾರು ನಿಂತಾಗ ಡ್ರೈವರ್ ಸೀಟ್ ನಲ್ಲಿ ರಾಜೀವ್ ನನ್ನು ಕಂಡು ಹೆದರಿಕೆಯಿಂದ ಅಂಜಲಿ ಮುಖ ಬಿಳುಚುತ್ತದೆ. ಮತ್ತದೇ ಹಳೆಯ ಘಟನೆ ‌ನೆನಪಾಗಿ ಕಣ್ಣೀರು ಸುರಿಸುತ್ತಾಳೆ.

" ಮದುವೆಯಾದ ಮೇಲೂ ಅನಾಥ ಮಕ್ಕಳ ಸೇವೆ ಮಾಡಬಹುದಲ್ವಾ ಅಂಜಲಿ? ನನ್ನ ಪ್ರೀತಿಯನ್ನು ತಿರಸ್ಕರಿಸುವುದೇ ನಿನ್ನ ಕೊನೆಯ ನಿರ್ಧಾರವೇ ?" ಎಂದು ರಾಜೀವ್ ಕೇಳುತ್ತಾನೆ.

"ಸತ್ತರೂ ಬದುಕಿದರೂ ಇದೇ ನನ್ನ ನಿರ್ಧಾರ ಮಿಸ್ಟರ್ " ಎಂದು ಹೇಳಿದಾಗ ರಾಜೀವ್'ನ ಗಂಟಲುಬ್ಬಿ ಕಣ್ಣಲ್ಲಿ ನೀರು ಕಂಡು ತನ್ನ ನಿರ್ಧಾರ ತಪ್ಪಾಗಿದೆಯೋ ? ಎಂದು ತಿಳಿಯಲು ರೀನಾಳಿಗೆ ಮೆಸೇಜ್ ಮಾಡುತ್ತಾಳೆ. 

ಪ್ರಮೋದ್ ತನ್ನ ಪುರುಷತ್ವ ಕಳೆದುಕೊಂಡ ನಂತರ ಕೊರಗಿ ಕೊರಗಿ ಆತ್ಮಹತ್ಯೆ ಮಾಡಿಕೊಂಡಿದಾನಂತೆ. ಇನ್ನೇನೂ ನೀನು ಯಾರಿಗೂ ಹೆದರಬೇಕಾಗಿಲ್ಲ ಅಂಜಲಿ. ದೇವರು ನಿನಗೆ ರಾಜೀವನ ರೂಪದಲ್ಲಿ ಮತ್ತೊಂದು ಅವಕಾಶವನ್ನು ನೀಡಿದ್ದಾನೆ. ಅವನನ್ನು ಕಳೆದುಕೊಳ್ಳಬೇಡಾ ಎಂದು ಮೆಸೇಜ್ ಮಾಡಿದಾಗ ಅಂಜಲಿ ಮತ್ತೊಮ್ಮೆ ರಾಜೀವ್ ಬಗ್ಗೆ ಯೋಚಿಸುತ್ತಾಳೆ.

ಇಷ್ಟು ಹೊತ್ತು ಅಂಜಲಿಯ ಸುದ್ದಿಗೆ ಹೋಗದೇ ಕಾರು ಚಲಾಯಿಸುತ್ತಿದ್ದ ರಾಜೀವ್ ಏರ್ ಪೋರ್ಟ್ ಬಂತೆಂದು ಹೇಳುತ್ತಾನೆ. ಅವನ ಕಣ್ಣಲ್ಲಿ ತುಂಬಿದ ಪ್ರೀತಿಯನ್ನು ಕಂಡ ಅಂಜಲಿಗೆ ಕತ್ತಲಾದ ತನ್ನ ಬದುಕಿಗೆ ಬೆಳಕಿನ ಕಿಂಡಿಯಾಗಿ ಬಂದ ರಾಜೀವ್ ನಿಗೆ ಅವಕಾಶ ಕೊಡಲು ಮುಂದಾಗುತ್ತಾಳೆ.

"ಬರುವ ವರ್ಷ ಇದೇ ಸಮಯದಲ್ಲಿ ನನ್ನ ಪ್ರಾಜೆಕ್ಟ್ ಮುಗಿದು ನಾನು ಭಾರತಕ್ಕೆ ಬರುತ್ತೇನೆ, ಅಲ್ಲಿಯವರೆಗೂ ನಿನ್ನ ಪ್ರೀತಿ ಹೀಗೆ ಇದ್ದರೆ ನಾನು ನಿನ್ನ ಬಾಳಸಂಗಾತಿಯಾಗುತ್ತೇನೆ. ಈ ಒಂದು ವರ್ಷದಲ್ಲಿ ನಿನಗೆ ನನ್ನ ಮೇಲಿರುವುದು ಪ್ರೀತಿಯೋ ಅಥವಾ ಅನುಕಂಪವೋ ಎಂದು ತಿಳಿಯುತ್ತದೆ. ಒಂದು ವೇಳೆ

ಬೇರೆ ಯಾವುದೇ ಹುಡುಗಿ ನಿನಗೆ ಇಷ್ಟವಾದರೆ ನೀನು ಮದುವೆಯಾಗು ಎಂದು ಹೇಳಿ ಲಗೇಜು ಹಿಡಿದು ಏರ್ ಪೋರ್ಟ್ ನೊಳಗೆ ಹೋಗುತ್ತಾಳೆ.

****************************************************

ಏರ್ಪೋರ್ಟ್ ನಿಂದ ಇಳಿದ ಅಂಜಲಿಯ ಕಣ್ಣುಗಳು ರಾಜೀವ್ ಗಾಗಿ ಹುಡುಕಾಡಿದವು. ಎಲ್ಲೂ ಅವನ ಸುಳಿವು ಕಾಣದೇ ಇದ್ದಾಗ ತನ್ನ ನಸೀಬು ಹಳಿಯುತ್ತಾ ಕಣ್ಣು ತುಂಬಿಕೊಂಡ ಅಂಜಲಿ ಎಂದಿನಂತೆ ತಾನು ಬರುವ ಪಂಚತಾರಾ ಹೋಟೆಲ್ ಗೆ ಬರುತ್ತಾಳೆ.

ಮುಖದ ಎದುರಿನಲ್ಲಿ ಹೂಗುಚ್ಛ ಹಿಡಿದು ನನ್ನನ್ನು ಇನ್ನಾದರೂ ಮದುವೆಯಾಗುವೆಯಾ ? ಎಂಬ ಧ್ವನಿ ಬಂದತ್ತ ನೋಡಿದಾಗ ತುಂಟ ನಗೆಯೊಂದಿಗೆ ರಾಜೀವ್ ನಿಂತಿರುವುದು ಕಂಡು‌ ಅಂಜಲಿಯ ಕಣ್ಣುಗಳಲ್ಲಿ ಹೊಳಪು ಮೂಡುತ್ತದೆ. ಅಂಜಲಿ ನಸುನಕ್ಕು ರಾಜೀವ್ ನ ಕೈಯಿಂದ ಹೂಗುಚ್ಛ ಪಡೆಯುತ್ತಾಳೆ.

ನಿನಗೊಂದು ಸರ್ಪ್ರೈಜ್ ಇದೆಯೆಂದು ರಾಜೀವ್ ಅಂಜಲಿಗೆ ತನ್ನ ಕಾರಿನಲ್ಲಿ ಕೂರಲು ಹೇಳುತ್ತಾನೆ. ಅಂಜಲಿಯನ್ನು ಕರೆದುಕೊಂಡು ಹೊರಟ ರಾಜೀವ್ ಪುಟ್ಟ ಮಕ್ಕಳು‌ ಸೇರಿರುವ‌ ಕಡೆ ಕಾರನ್ನು ನಿಲ್ಲಿಸುತ್ತಾನೆ. ಕಾರಿನಿಂದ ಇಳಿದ ಅಂಜಲಿ ಬೋರ್ಡ್ನಲ್ಲಿ ಬರೆದಿದ್ದ "ಸೇವಾಂಜಲಿ ಟ್ರಸ್ಟ್" ಹೆಸರು ನೋಡಿ ಕುತೂಹಲದಿಂದ ರಾಜೀವ್ ನ ಕಡೆ ನೋಡುತ್ತಾಳೆ.

"ನಾನು ಬೆಳೆದ ಅನಾಥಶ್ರಮ ಇದು. ಆರು ತಿಂಗಳ ಹಿಂದೆ ಇದನ್ನು ಮುನ್ನಡೆಸಿಕೊಂಡು ಹೋಗಲು ಆಗುವುದಿಲ್ಲ ಎಂದು ಟ್ರಸ್ಟ್ ನವರು ಹೇಳಿದಾಗ ನಿನ್ನ ಕನಸು ನೆನಪಾಯಿತು. ನೀನು ನನ್ನ ಬಾಳಿಗೆ ಜೊತೆಯಾದರೆ ನಾವಿಬ್ಬರೂ ಸೇರಿ ಮುನ್ನಡೆಸೋಣ , ನೀನು ನನ್ನನ್ನು ತಿರಸ್ಕರಿಸಿದರೆ ಈ ಪುಟ್ಟ ಮಕ್ಕಳ ಮುಖ ನೋಡಿ ನೋವು ಮರೆಯೋಣವೆಂದು ನಿನ್ನ ನೆನಪಿಗಾಗಿ ನಾನೇ ಈ ಅನಾಥಶ್ರಮವನ್ನು ಖರೀದಿಸಿ 'ಸೇವಾಂಜಲಿ' ನಾಮಕರಣ ಮಾಡಿದೆ ಎಂದು ರಾಜೀವ್ ಹೇಳಿದಾಗ ಅವನ ಪ್ರೀತಿಯ ಆಳ ತಿಳಿದು ಕಂಡು ಕಾಣದಂತೆ ಕಣ್ಣು ತುಂಬಿ ಅವನ ಎದೆಗೆ ಒರಗುತ್ತಾಳೆ.



Rate this content
Log in

Similar kannada story from Tragedy