ಸಂಜೆ ಹೂ ಮತ್ತು ಚಂದಿರ
ಸಂಜೆ ಹೂ ಮತ್ತು ಚಂದಿರ


ಮೈ ತಟ್ಟಿ ಮಲಗಿಸುವ
ಬಳೆಯ ಕೈಗಳ ಹುಡುಗಿಯಂತೆ
ಈ ಸಂಜೆ ಹೊತ್ತು
ಹೂಗಳು ಅರಳುವುದೇ ಹೀಗೆ !
ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು
ಕಾಯುವವ ದುಂಬಿ ಬಂದರೆ ಬರಲೆಂದು
ಅದೋ ಅಲ್ಲಿ ಆಗಸದ
ಹೊಂಬಣ್ಣದ " ಕ್ಯಾನ್ ವಾಸ್ ನಲ್ಲಿ " ಹೊರಟಿದೆ
ಸಮುದ್ರದಾಚೆಗಿನ ಊರಿಗೆ
ನೇಸರನ ದಿಬ್ಬಣ
ಮಬ್ಬು ಬೆಳಕಿನಲಿ ಸಾವಿರ ಮಾತುಗಳು
ನಿಟ್ಟುಸಿರು ಕತ್ತಲೆಗೆ ಕರುಣೆಯಿಲ್ಲ
ಕತ್ತಲೆಯ ಸೆರಗಿನಲಿ ಮುಖ ಮುಚ್ಚಿಕೊಂಡು
ಎಲೆ ,ಹಕ್ಕಿ ,ಬಣ್ಣ ಬದುಕು
ಕಪ್ಪದಾದ ಕರ್ರಗೆ
ಜೋಗುಳ ಹಾಡಿನ ತೂಕಡಿಕೆಗೆ
ತೊಟ್ಟಿಲು ತುಂಬಾ ನಿದ್ದೆ
ಯೌವನಕ್ಕಿಲ್ಲ ವನವಾಸ
ಇನ್ನೇನು ಮುಗಿದೇ ಹೋಗುವುದು
ನೀರವ ಕತ್ತಲು
ಉಳಿದಿರುವುದೆರಡು ಗಳಿಗೆ
ಕೋಳಿ ಕೂಗಿನೊಡನೆ
ಜೊತೆಗೆ ಬರುವುದು ಮುಪ್ಪು
ಎಸಳು ಜಾರಿ ಮುದುಡಿ ಸೇರುವುದು ಮಣ್ಣು
ಮೋಡದ ಮಧ್ಯೆ ಚಂದ್ರಮನದು ವೇದಾಂತ
ಜೀವನವಿಷ್ಟೇ ಹೂಗಳೇ
ಅರಳುವುದು , ಬಾಡುವುದು
ಮುಳುಗುವುದು , ಏಳುವುದು ಇಷ್ಟೇ !
ಕರಗುವ ರವಿಗೊಮ್ಮೆ ಕಾಡಬೇಡಿ
ಬೊಗಸೆ ಹಗಲ ಕಡದಲೇ
ನಲಿಯುವ ,ಬಿರಿಯುವ ನಿಮ್ಮದೊಂದು
ಹಿಡಿ ದುಃಖ ಹೆಚ್ಚು ಅಷ್ಟೇ !