ರಾಗ ರತಿಯ ರಂಗು
ರಾಗ ರತಿಯ ರಂಗು
ಸಂಜೆವೇಳೆಗೆ ಅವಳ ರಂಜಿಸುವಾತುರದಲಿ
ರವಿ ತಾನೋಡಿದ ಮೂಡಲಮನೆಗೆ..
ನಿಶೆಯ ಮುಖವರಳಿತಾಗ ರಂಗಿನಲಿ
ದಿಶೆಯೆಲ್ಲಾ ಬಣ್ಣದೋಕುಳಿ ಚೆಲ್ಲಿದಳು.
ಹರಿವಾಣದಲಿ ಪಕ್ವಾನ್ನಗಳನಿಟ್ಟು
ರಸೋಲ್ಲಾಸದ ಪಾಕ
ಪಾನೀಯಗಳ ಕೊಟ್ಟು
ಸರಸದಲಿ ಕರವಿಡಿದು ಮುದ್ದಿಸುತಿರೆ,
ಲಜ್ಜೆಯದು ಅಡ್ಡಗಟ್ಟಿ
ಕೆನ್ನೆಗಳು ಕೆಂಪೇರಿದವಲ್ಲಾ..
ಬಿಸುಪಲ್ಲದ ಹೊತ್ತು ತುಸು ಮತ್ತೇರಿ
ರಸನಿಮಿಷದ ಹಸೆಗೆ ಶಶಿಯಾಗಮನ,
ರಾಗರತಿಯ ತೋಳಲಿ ಕರಗಲೆಂಬ
ಆಶಯಕೆ ಹೂವ ಹಾಸಿದಳವಳು..
ಕಾಲನರಿವಿಲ್ಲದ ಗಳಿಗೆ ಒಲಿದಿರಲು
ಬೇಲಿದಾಟಿದ ಬಾಲೆಯಂತೆ ಚಾಂಚಲ್ಯತೆ ಮೈದುಂಬಿರಲು..
ಓಲೆಗರಿಯ ಕಚಗುಳಿಯಾಟಕೆ
ಸೋತ ಶೋಡಷೀ..
ಕುಣಿದಾಡಿದಳಾಗಸದ ತುಂಬಾ..
ಬಯಕೆ ನೂರಾರು ಮೂಡಿತಾಗಲೇ.
ಶಶಿಯನಾವರಿಸಿದಾ
ಕತ್ತಲೆಗೂ ದಿಗಂಭರವಾಗುವಾಸೆ ,
ತುಂತುರಿನ ಹನಿಯಲಿ ಮಿಂದು
ತುಟಿಗಿರಿಸಿ ರಸಹೀರುವಾಸೆ..
ಈ ಸಂಜೆವೆಣ್ಣು ಎಂತ ಚೆನ್ನ ಅಲ್ಲವೇ?
ಬಣ್ಣನೆಗೂ ನಿಲುಕದೆ
ಕ್ಷಣದಲ್ಲೇ ಇಲ್ಲವಾಗುವಳು..
ಕಣ್ಸನ್ನೆಯಲೇ ಕಾಡುತ ಓಡುತ
ಮತ್ತೆ ಬರುವಳು ಬಳುಕುತ
ಮುಂಜಾನೆ ಮಂಜಿನೊಡನೆ...

