ಕನ್ನಡ ಕಂಪು
ಕನ್ನಡ ಕಂಪು
ಕನ್ನಡ ಕಾನಿನ
ಬಣ್ಣದ ಹಕ್ಕಿಯ
ಚಿನ್ನದ ಕಂಠದಿ ಹೊಮ್ಮುತಿದೆ
ನನ್ನಯ ಕನ್ನಡ
ತನ್ನಯ ಮೈಬಿಚ್ಚಿ
ತನ್ಮಯ ಇಂಚರ ಚಿಮ್ಮುತಿದೆ
ಕನ್ನಡ ಹೂವಲಿ
ಕನ್ನಡ ಇಂಪಿದೆ
ಕನ್ನಡ ಹೆಣ್ಣನೇ ಚೆಲುವಿಟ್ಟಿದೆ
ಸಂಪಿಗೆ ನುಡಿಭಾಷೆ
ಹಂಪೆಯ ಕಲ್ಲನೆ
ಕಂಪಿಗೆ ಕರಗಿಸಿ ಹರಡಿಟ್ಟಿದೆ
ಮಲ್ಲೆಯ ಮೈಸೂರ
ಕಲ್ಲಿನ ಕೋಟೆಗೆ
ಮೆಲ್ಲಗೆ ಬೆಸೆದಿದೆ ನುಡಿಕಟ್ಟುತ
ಎಲ್ಲಿರೊ ಬೀದರ
ಮಳೆಬೀಡ ಕಡಲಿಗೆ
ತೆಳ್ಳಗೆ ಹಬ್ಬಿಸಿ ಒಲವೂಡುತ
ನಡೆ ಇದೆ ನೆಲನದಿ
ನೆಡೆತಿದೆ ಬಳುಕಲಿ
ಪಡಿಯಚ್ಚನಿಕ್ಕುತ ಕನಡತಿಯ
ಮಿಡಿತಿದೆ ಗೆಜ್ಜೆಯ
ದುಡಿತದ ಸದ್ದನು
ಒಡತಿಯ ಕನ್ನಡ ಬಿಂಕದಲಿ
ಹಬ್ಬವ ಹರಿದಿನ
ತಬ್ಬುತ ಕುಳಿತಿದೆ
ನಿಬ್ಬಣ ಹೊರುತಲಿ ಕನ್ನಡವು
ಎಬ್ಬಿಸಿ ಕಡಲಲೆ
ಹಬ್ಬುತ ಸೊಗಡನೆ
ತಬ್ಬುತ ನಡೆತಿದೆ ಎಲ್ಲರನು
ನನ್ನಯ ನುಡಿಯನೆ
ತನ್ನಯ ಮೈಯೊಳು
ಕನ್ನಡಿಸುತಲಿರೆ ಪ್ರಕೃತಿಮಾತೆ
ಕನ್ನಡ ಕಲಿಯದೆ
ಭಿನ್ನದ ಭಾಷೆಯ
ಮಣ್ಣೊಳ ನುಡಿದರೆ ಮೆಚ್ಚಳವ್ವ