ಜಾತ್ರೆಗೆ ಹೊಂಟಾಗ [ಅಂಶ ತ್ರಿಪದಿ]
ಜಾತ್ರೆಗೆ ಹೊಂಟಾಗ [ಅಂಶ ತ್ರಿಪದಿ]
ಎತ್ತೀನ ಚಕಡ್ಯಾಗ ಜಾತ್ರೀಗಿ ಹೊಂಟಾಗ
ಕತ್ತೀನ ಗಗರ ಗಲ್ಲೆಂದೂ/ ಗೆಣೆಕಾರ
ಮುತ್ತೀದ ಮೋಡ ಕೆಂದೂಳೊ
ಕಬ್ಬಳ್ಳೀ ಕೆರೆಹತ್ರ ಕಬ್ಬೀನ ವಲಮ್ಯಾಗ
ಹೊಬ್ಬಟ್ಟು ಎಳ್ಳ ಪುಡಿರೊಟ್ಟೀ |ನೀರೂರಿ
ಹಬ್ಬವು ಕಣೋ ಉಣ್ವಾಗ
ಹಳ್ಳಿಯ ಅಡಿಗೆಯೂ ಕಳ್ಳೀನ ಒಲವೂಡಿ
ಬೆಳ್ಳೀಯ ಮನವ ಬಿರಿಸ್ಯಾದ | ಗೆಣೆಕಾರ
ಜೊಳ್ಳಲ್ಲೊ ಜಟ್ಟಿ ಶಿಲೆಗುದ್ದೊ
ದಂಡೀನ ದುರುಗೇಯ ದಂಡೆತ್ತಿ ಜಾತ್ರೀಗೀ
ಬಂಡಿಯ ಸಾಲು ಬರುವಾಗ | ಮೂಡ್ಯಾವ
ದಂಡೆಯ ಮ್ಯಾಗ ಜಲಬಿಂಬ
ಪರವೂರ ಬಂಡ್ಯಾನ ಹರೆಯಾದ ಹುಡುಗಿಯೊ
ಕಿರುನೋಟ ಬೀರಿ ನಗತಾಳ್ಯೋ/ನಂಗೆಳೆಯಾ
ಜರಿಯದ ಸ್ವಬಗು ನಮಹಳ್ಳೀ
ಬಣ್ಣದ ಜೂಲೆಲ್ಲ ಕಣ್ಣನೇ ಕುಕ್ಕುತಾ
ಅಣ್ಣಯ್ಯ ರವಿಯೊ ಇಳಿಹೊತ್ತೂ /ನಂಗೆಳೆಯಾ
ಬಣ್ಣಿಸ ಲೆಂತೋ ಸೊಬಗ್ಹೋರಿ
ಗೂಡ್ಸೇರಿ ಹಕ್ಕೆಲ್ಲ ನಾಡೆಲ್ಲ ನಲಿವುಕ್ಕಿ
ಹಾಡ್ಯಾರ ಹಳ್ಳೀ ಸೋಬಾನ /ನಂಗೆಳೆಯಾ
ಗಾಡ್ಯಾನ ಸದ್ದು ನಭಹೊಕ್ಕೊ
ಓಡೈತೋ ಸುದ್ದಿಯ ಗಿಡುಗಂತ ಖಗಕಾಲ
ಮೂಡೈತೊ ಹಿಗ್ಗು ಮೊಗತುಂಬಾ |ಗೆಣೆಕಾರ
ನಾಡೈತೊ ಒಲವು ಎದೆಹುಟ್ಟೀ