ಏ ಹುಡುಗಾ!
ಏ ಹುಡುಗಾ!
ನನ್ನ ಸ್ವಾಭಿಮಾನವನ್ನೂ
ಮರೆತು ನಿನ್ನಲ್ಲಿಗೆ ಬಂದೆ
ನಿನ್ನಲ್ಲಿನದೊಂದು ಗುಣ
ನನಗಚ್ಛುಮೆಚ್ಚಿಹುದು..
ತನ್ನತನವ ಮರೆತು ನೀ
ಅನ್ಯರ ಪರ ದುಡಿದದ್ದು,
ಮನ್ನಿಸಿದ್ದೆ ನೀ ಸಣ್ಣವರ
ಸನ್ಮಾನಿಸಿದ್ದೆ ಜಾಣರನು
ಅಳ್ಳೆದೆಯ ಹೈಕಳಿಗೆಲ್ಲ
ಗುರುವಾಗಿದ್ದೆ ಸದ್ದಿಲ್ಲದೆ
ಕಳ್ಳಕಾಕರಿಗೆಲ್ಲ ಅಡ್ಡಾದೆ
ಬಳಗದೊಳಗೊಂದಾದೆ
ಆದರೂ, ನನ್ನದೊಂದು
ಪ್ರೀತಿಗೆ ಹೊರತಾದೆ?
ಎದುರೊಳಿದ್ದಾಗ ನಕ್ಕು
ಮರೆಯಾದಾಗ ಕಾಡಿದ್ದೆ
ಹಗುರವಾದ ಮನಸಿಲ್ಲಿ
ಭಾರವಾಗಿಹುದಿಲ್ಲಿ
ಮಧುರಭಾವನೆಗಳಲ್ಲಿ
ಮಿಡಿದು ಪರವಶವಿಲ್ಲಿ
ಕರೆದರೂ ಬಾರದವ ನೀ
ಬರೆದರೂ ಓದದವ ನೀ
ಬಂದರೂ ನೋಡದವ,
ಬಾರದಿರೆಂತು ಕಾಣುವೆ.
ನಿನ್ನಲ್ಲೇ ಪ್ರಾಣವಿಟ್ಟಿಹೆ
ತನ್ನೆಲ್ಲವನೂ ತೊರೆದು
ಬಂದವಳ ಉಪಚರಿಸಿ
ಒಲವನೆಲ್ಲ ಹರಿಸೊಮ್ಮೆ
ಬದುಕು ಸುಂದರವನ
ಅದಕೂ ಬೇಕು ಹೂವು
ಹಣ್ಣುಗಳ ಸಾಕಾರತನ
ಬಳ್ಳಿಚಿಗುರಿನ ಚೇತನ
ಇಳೆಗೆ ಕಳೆ ಮಳೆಯಂತೆ
ಕಡಲತೆರೆಗೆ ಮರಳಂತೆ
ಮೂಡಣಕೆ ರವಿಯಂತೆ
ಧ್ಯಾನಕ್ಕೂ ನಿನ್ನದೆ ಚಿಂತೆ.
