Gireesh pm Giree

Abstract Drama Action

4  

Gireesh pm Giree

Abstract Drama Action

ಯಕ್ಷಗಾನ ಮತ್ತು ʼಬಯಲಾಟʼ!*

ಯಕ್ಷಗಾನ ಮತ್ತು ʼಬಯಲಾಟʼ!*

2 mins
281



ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪೋನ್ ರಿಂಗಣಿಸಿತು. ಯಕ್ಷಗಾನಕ್ಕೆ ಹೊರಟಿದ್ದ ಸ್ನೇಹಿತ ನನ್ನನ್ನೂ ಕರೆದಿದ್ದ. ನಿದ್ರೆ ಮರೆಯಾಯ್ತು. ಎದುರಲ್ಲಿದ್ದ ಅಂಗಿ ಸಿಕ್ಕಿಸಿಕೊಂಡು ಹೊರಟೆ. ನಿರೀಕ್ಷೆಯಂತೆ ಅಮ್ಮ ಒಪ್ಪಲಿಲ್ಲ. ಹಾಗೋ ಹೀಗೋ ಸತತ ಪ್ಯಯತ್ನದ ಬಳಿಕ ಅಮ್ಮ ಒಪ್ಪಿದರು. ಯಾವುದೇ ಕಾರಣಕ್ಕೂ ನಡುರಾತ್ರಿಯಲ್ಲಿ ಮನೆಗೆ ಮರುಳಬಾರದೆಂದು ಷರತ್ತಿನೊಂದಿಗೆ! 


ಬಯಲಾಟ ಇರುವ ಜಾಗ ನಮ್ಮ ಊರಿನಿಂದ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಇರಬಹುದು. ರಂಗಸ್ಥಳಕ್ಕೆ ನಡೆಯುವ ಮಾರ್ಗದುದ್ದಕ್ಕೂ ಗೆಳೆಯರ ಜೊತೆಗೂಡಿ ಆಟ ನೋಡುವ, ಬಣ್ಣದ ಲೋಕದಲ್ಲಿ ತೇಲಾಡುವ, ವಿವಿಧ ವೇಷಗಳನ್ನು ಕಣ್ತುಂಬಿಕೊಳ್ಳುವ, ಸಂಗೀತ ಸಂಗಮದಲ್ಲಿ ಸಿಗುತ್ತಿದ್ದ ಚಟ್ಟಂಬಡೆ ಸವಿಯುವ ಯೋಚನೆಗಳು…!


ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಬಹುದೂರದವರೆಗೂ ಕೇಳುತ್ತಿದ್ದ ಚಂಡೆಯ ಸದ್ದು ರೋಮಾಂಚನಗೊಳಿಸುವಂತಿತ್ತು. ರಂಗಸ್ಥಳ ಸಮೀಪಿಸುವಾಗ ಸ್ವರ್ಗದ ದ್ವಾರದ ಕಲ್ಪನೆ ಮನದಲ್ಲಿ ಮೂಡುವಂತಿತ್ತು. ರಂಗಸ್ಥಳದ ಎದುರಿದ್ದ ಕುರ್ಚಿ ಅದಾಗಲೇ ಭರ್ತಿಯಾಗಿತ್ತು. ಅರ್ಧ ತುಂಬಿದ್ದ ಚಾಪೆಯಲ್ಲೇ ಕೂತು ಆಟ ನೋಡುವುದೆಂದು ನಿರ್ಧರಿಸಿದ್ದೆ. ಬಣ್ಣದ ವೇಷಗಳು ರಂಗದಲ್ಲಿ ಮಿಂಚುತ್ತಿದ್ದವು. ಅಷ್ಟರಲ್ಲೇ ಗೆಳೆಯನ ಮತ್ತೊಂದು ಕರೆ ಬಂತು. ಅವನ ಮಾತು ಕೇಳಿ ಒಮ್ಮೆಗೆ ಹೃದಯ ನಿಂತಂತಾಯಿತು!


ಮರುದಿನ ಪರೀಕ್ಷೆ ಇದೆಯೆಂಬ ʼಶುಭಸುದ್ದಿʼ ಹೇಳಿದ್ದ ಆತ! ಓದುವುದಿರಲಿ, ಮರುದಿನದ ಪರೀಕ್ಷೆಗೆ ಯಾವ ಪಾಠ ಇದೆಯೆಂಬುದೇ ನೆನಪಿರಲಿಲ್ಲ. ಇನ್ನೇನು ಮಾಡುವುದು ಪರೀಕ್ಷೆ ಬರೆಯದಿದ್ದರೆ ಅಪ್ಪ ಬೈತಾರೆ, ಆದರೆ ಬರೆಯುವುದಾದರೂ ಏನನ್ನು! ಕೂತರೆ ಆಗದೆಂದು ಅರೆಮನಸ್ಸಿನಲ್ಲಿಯೇ ಮನೆಯತ್ತ ಹೊರಟೆ. ಗೆಳೆಯರನ್ನು ಕರೆಯಲಿಲ್ಲ, ಅವರಾದರೂ ಯಕ್ಷಗಾನ ಪೂರ್ತಿ ನೋಡಲೆಂದು…


ದಾರಿಯಲ್ಲಿ ಕಗ್ಗತ್ತಲು, ಬರೀ ಮೌನ. ದೂರದಲ್ಲಿ ದೊಡ್ಡ ಮರ ಮಾತ್ರ ಗೋಚರಿಸುತ್ತಿತ್ತು. ಮನದಲ್ಲಿ ಸಣ್ಣದೊಂದು ಕಂಪನ. ಇನ್ನೇನು ಮುಖ್ಯರಸ್ತೆ ದಾಟುವಷ್ಟರಲ್ಲಿ ಭಾರೀ ಗಾತ್ರದ ಮರವೂ ಅಲ್ಲಾಡಲಾರಂಭಿಸಿತು. ನಾನು ಸಮೀಪಿಸಿದಂತೆ ಮರ ಜೋರಾಗಿ ಅಲ್ಲಾಡಲಾರಂಭಿಸಿತು. ನನಗೆ ವಿಪರೀತ ಭಯವಾಯಿತು. ಇಲ್ಲೇನೋ ಇದೆ ಎಂದು ಒಂದೇ ಸಮನೆ ಮನೆಗೆ ಓಟಕಿತ್ತೆ. ಅಂತೂ ಮನೆ ತಲುಪುವಷ್ಟರಲ್ಲಿ ಬಳಲಿ ಬೆಂಡಾಗಿ ಹೋಗಿದ್ದೆ. ಮನೆಯ ಕದ ತಟ್ಟಿ ʼಅಮ್ಮ ಅಮ್ಮʼ ಎಂದು ಜೋರಾಗಿ ಕೂಗತೊಡಗಿದೆ. ನಡೆದ ಘಟನೆಯ ಎಲ್ಲವನ್ನು ಹೇಳಿಬಿಟ್ಟೆ. 


ಅಮ್ಮ ಎಂದಿನ ಬೈಗುಳ ಶುರುವಿಟ್ಟುಕೊಂಡಳು. ಅವಳ ಬೈಗುಳ ಕೇಳಿ ಅಪ್ಪನಿಗೆ ಎಚ್ಚರವಾಯಿತು. ಎಲ್ಲವನ್ನೂ ಕೇಳಿದ ಅಪ್ಪ, “ಅದು ಗಾಳಿಮರ. ಅದು ಗಾಳಿಗೆ ಎಷ್ಟು ಹೊತ್ತಿಗೆ ಬೇಕಾದರೂ ಅಲುಗಾಡುತ್ತದೆ. ನೀನು ಮಧ್ಯಾಹ್ನ ಹೋಗಿ ನೋಡು, ಸ್ವಲ್ಪ ಹೊತ್ತು ಅಲ್ಲೇ ಇರು, ಆಗ ನಿನಗೆ ನಿಜಾಂಶ ಅರಿವಿಗೆ ಬರುತ್ತದೆ. ಅದು ಬಿಟ್ಟು ಏನೇನೋ ಕಲ್ಪನೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ,” ಎಂದುಬಿಟ್ಟರು. ಧೈರ್ಯ ಕಳೆದುಕೊಂಡರೆ ಭಯ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಧೈರ್ಯದಿಂದ ನಡೆದರೆ ಎಲ್ಲವೂ ಭ್ರಮೆ ಎಂದು ತಿಳಿಯುತ್ತದೆ ಎಂಬ ಸತ್ಯದ ಅರಿವಾಯಿತು.




Rate this content
Log in

Similar kannada story from Abstract