Shridevi Patil

Romance Inspirational Others

3.7  

Shridevi Patil

Romance Inspirational Others

ಸುಶೀಲೆಗೆ ಸೋತ ಗೌಡರು

ಸುಶೀಲೆಗೆ ಸೋತ ಗೌಡರು

3 mins
609


ನನಗೆ ಅಣ್ಣ ತಮ್ಮಂದಿರಿಲ್ಲ, ಆದ್ರ ಬೆನ್ನಿಗೆ ಬಿದ್ದ ತಮ್ಮನಂಗ ಕೋಟೆಪ್ಪ ಯಾವಾಗು ಅದಾನ.ಅದಕ್ಕ ನಾನು ನನ್ನ ಮಗಳನ ಅವಗ ಕೊಡಬೇಕು ಅಂತ ಮಾಡೇನಿ ಕಾಕಾ ಅಂತ ಗಿರಿಜಮ್ಮ ( ನನ್ನ ಅಮ್ಮನ ಅಮ್ಮ) ಹೇಳಿದಾಗ ನನ್ನ ಅಜ್ಜ ( ನನ್ನ ಅಪ್ಪನ ಅಪ್ಪ) ಖುಷಿಯಿಂದ ಒಪ್ಪಿಗೆಯನ್ನಿತ್ತು ಬಂದಿದ್ದರಂತೆ. ಆಗಿನ್ನೂ ನನ್ನ ಅಮ್ಮನಿಗೆ ಕೇವಲ ಹನ್ನೊಂದು ವರ್ಷವಂತೆ. ಈ ರೀತಿ ಮಾತಾಡುತ್ತಿರುವುದನ್ನು ಕೇಳಿಸಿಕೊಂಡ ನನ್ನ ಅಮ್ಮ , ಯಾವಾಗಲಾದರೂ ನನ್ನ ಅಪ್ಪ ಅವರ ಊರಿಗೆ ಹೋದರೆಂದರೆ ಸಾಕು, ಓಡಿ ಹೋಗಿ ಅಡಗಿಕೊಂಡು ಕೂರುತ್ತಿದ್ದರಂತೆ. ಜೊತೆಗೆ ಕದ್ದು ಕದ್ದು ಇಣುಕಿ ನೋಡುತ್ತಿದ್ದರಂತೆ. ಹೀಗೆ ಅಮ್ಮ ಕದ್ದು ನೋಡುತ್ತಿದ್ದದ್ದನ್ನು ಅಪ್ಪ ಸೂಕ್ಷ್ಮವಾಗಿ ಗಮನಿಸಿ, ಆ ಕಡೆಯೊಮ್ಮೆ ಕಣ್ಣು ಹಾಯಿಸಿದರೆ ಮುಗಿಯಿತು, ಅಮ್ಮ ಮತ್ತೆ ನಾಪತ್ತೆ ಆಗುತ್ತಿದ್ದರಂತೆ. ಅಪ್ಪ ಮರಳಿ ನಮ್ಮೂರಿಗೆ ಹೊರಡುವವರೆಗೂ ಕಾಣಿಸಿಕೊಳ್ಳುತ್ತಿರಲಿಲ್ಲವಂತೆ.


ಹೀಗೆ ನನ್ನ ಅಪ್ಪ ಅಮ್ಮನ ಮದುವೆ ಪ್ರಸ್ತಾಪವಾಗಿದ್ದು ಅಂತ ಅಮ್ಮ ಹೇಳಿದ್ದರು. ಈ ಪ್ರಸ್ತಾಪ ಆಗಿ ಸುಮಾರು ಮೂರು ವರುಷದ ನಂತರ ಅಂದರೆ ಅಮ್ಮನಿಗೆ ಹದಿನಾಲ್ಕು ವರ್ಷವಿದ್ದಾಗ ನನ್ನ ಅಮ್ಮ ಋತುಮತಿಯಾಗಿದ್ದಾರೆ. ನಮ್ಮ ಕಡೆ ಒಂದು ಸಂಪ್ರದಾಯವಿದೆ, ಅದೇನೆಂದರೆ ನಮ್ಮ ಹುಡುಗಿಯನ್ನು ನಿಮ್ಮ ಹುಡುಗನಿಗೆ ಮದುವೆ ಮಾಡಿಕೊಡುತ್ತೇವೆ ಎಂದು ಎರಡು ಮನೆಯವರು ಒಪ್ಪಿಕೊಂಡಿದ್ದರೆ, ಹುಡುಗಿಯು ಮೈನೆರೆತ ಸಮಯದಲ್ಲಿ ಹುಡುಗನಿಗೆ ಮೈಮೇಲೆ ಬಣ್ಣ ಹಾಕುತ್ತಾರೆ. ಅಂದರೆ ಋತುಮತಿಯಾದ ಆ ಹುಡುಗಿಯ ಜೊತೆ ಈ ಹುಡುಗನನ್ನು ಕೂರಿಸುವರು.

ಈ ಪದ್ಧತಿಯ ಪ್ರಕಾರ ನನ್ನ ಅಮ್ಮ ಋತುಮತಿ ಆದಾಗ ಅಪ್ಪ ನಮ್ಮೂರಲ್ಲಿ ನಮ್ಮ ಸಂಬಂಧಿಕರೊಬ್ಬರ ಮನೆಗೆ ಬಣ್ಣ ಹಚ್ಚುತ್ತಾ ಕೂತಿದ್ದರಂತೆ. ( ಅಪ್ಪ ಮಿಲಿಟರಿಯಿಂದ ಆ ಸಮಯಕ್ಕೆ ಹೇಳಿಮಾಡಿಸಿದಂತೆ ರಜೆಗೆ ಊರಿಗೆ ಬಂದಿದ್ದರಂತೆ) ಬಣ್ಣ ಹಚ್ಚುತ್ತಿದ್ದ ಮನೆಯವರು ನನ್ನ ಅಪ್ಪನಿಗೆ ನಡತೆಯಲ್ಲಿ ಮಾವ ಆಗಬೇಕಾದವರು. ಅವರು ಅಮ್ಮ ಋತುಮತಿಯಾದ ವಿಷಯ ತಿಳಿದ ಕೂಡಲೇ ಕೈಯ್ಯಲ್ಲಿ ಇರುವ ಆ ಬಣ್ಣ ಕಲಿಸಿದ ಬಕೆಟ್ ನ್ನೆ ಎತ್ತಿ ಅಪ್ಪನ ಮೈಮೇಲೆ ಸುರುವಿದ್ದರಂತೆ. ಒಂದು ಸಾರಿ ಹುಡುಗಿಯ ಹೆಸರಲ್ಲಿ ಹೀಗೆ ಬಣ್ಣ ಎರಚಿದರೆ ಎಂತಹ ಪರಿಸ್ಥಿತಿಯಲ್ಲೂ ಆ ಹುಡುಗ ಅದೇ ಹುಡುಗಿಯನ್ನೇ ಮದುವೆ ಆಗಬೇಕು.


ಹೀಗೆ ಅಪ್ಪನ ಮೇಲೆ ಬಣ್ಣ ಎರಚಿದ ಕಾರಣ , ಅಮ್ಮನ ಕೊನೆಯ ಆರತಿ ದಿನ ಅಮ್ಮನೊಡನೆ ಅಪ್ಪನನ್ನು ಕೂರಿಸಿದ್ದರಂತೆ. ಇನ್ನೊಂದು ವಿಶೇಷ ಅಂದರೆ ಅವತ್ತು ಆರತಿ ಕಾರ್ಯಕ್ರಮ ಮಾಡುವ ಜೊತೆಗೆ ಅಪ್ಪ ಅಮ್ಮನ ನಿಶ್ಚಿತಾರ್ಥವೂ ನಡೆದಿತ್ತಂತೆ. ಅಪ್ಪನ ಮನೆಯಿಂದ ಎಲ್ಲರೂ ಹೋಗಿ ಆರತಿ ಕಾರ್ಯಕ್ರಮ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮ ಎರಡನ್ನೂ ಮಾಡಿಕೊಂಡು ಬಂದಿದ್ದರಂತೆ.


ಇದಾಗಿ ಮುಂದೆ ಕೇವಲ ಹತ್ತು ತಿಂಗಳಿಗೆ ಮದುವೆ ನಿಶ್ಚಯ ಮಾಡಿದ್ದರಂತೆ. ಆ ಹತ್ತು ತಿಂಗಳು ಅಪ್ಪ ಅಮ್ಮ ಪತ್ರದ ಮೂಲಕ ತಮ್ಮ ಸಂಭಾಷಣೆ ಮಾಡುತ್ತಿದ್ದರಂತೆ. ಈಗಿನ ಹಾಗೆ ಆಗ ದೂರವಾಣಿ ಸಂಪರ್ಕ ಇರಲಿಲ್ಲವಲ್ಲ. ನನ್ನ ಅಮ್ಮನ ಅಮ್ಮ ಅಂತರ್ದೇಶಿ ಪತ್ರ ತರಿಸಿಕೊಟ್ಟು, ಹೇಗೆ ಬರೆಯಬೇಕೆಂದು ಕೂಡ ಹೇಳಿಕೊಟ್ಟಿದ್ದರಂತೆ. ಆಗಿನ್ನೂ ನನ್ನ ಅಮ್ಮನಿಗೆ ಬರಿ ಹದಿನಾಲ್ಕು ವರ್ಷ. ಜೊತೆಗೆ ಅಮ್ಮ ಏಳನೇ ತರಗತಿಯವರೆಗೆ ಮಾತ್ರ ಓದಿದ್ದು. ಅಮ್ಮ ಅಪ್ಪನಿಗೆ ಪತ್ರ ಬರೆಯಲು ಕಲಿತಿದ್ದೆ ನನ್ನ ಅಜ್ಜಿಯಿಂದ ಅಂತ ಹೇಳುತ್ತಿದ್ದರು. ಹೀಗೆ ಪತ್ರಗಳ ಮೂಲಕ ಭಾರತದ ಗಡಿಯಿಂದ ಹಾವೇರಿಯ ಪುಟ್ಟ ಹಳ್ಳಿಗೆ ಅಪ್ಪನ ಪ್ರೇಮಪತ್ರ ತಲುಪಿ , ಅಮ್ಮ ಒಮ್ಮೆ ಓದಿ, ಅದನ್ನು ಬಚ್ಚಿಟ್ಟಂತೆ ಮಾಡಿ, ಎಲ್ಲರೂ ಹೊರಗಡೆ ಹೋದಾಗ ಮತ್ತೊಮ್ಮೆ, ಮಗದೊಮ್ಮೆ ಓದಿ ಖುಷಿ ಪಡುತ್ತಿದ್ದರಂತೆ. ಆಮೇಲೆ ತಾವೂ ಅಪ್ಪನಿಗೆ ಉತ್ತರವಾಗಿ ಪತ್ರವನ್ನು ಬರೆಯುತ್ತಿದ್ದರಂತೆ.


ಅಮ್ಮ ಪತ್ರ ಬರೆದು ಹಾಕಿಯಾದ ಮೇಲೆ ತಮ್ಮೂರಿನ ಅಂಚೆಯಣ್ಣ ಬರುವ ಹಾದಿಯನ್ನೇ ಕಾಯುತ್ತಿದ್ದರಂತೆ. ತಮ್ಮ ಮನದರಸನ ಓಲೆ ಯಾವಾಗ ಬರುವುದೋ ಎಂದು ಕಾಯುತ್ತ ಕೂರುತ್ತಿದ್ದರಂತೆ. ಹೀಗೆ ಪತ್ರಗಳ ರವಾನೆಯಲ್ಲಿ ಹತ್ತು ತಿಂಗಳು ಕಳೆದದ್ದು ಗೊತ್ತಾಗಲೇ ಇಲ್ವಂತೆ. ಹತ್ತು ತಿಂಗಳ ನಂತರ ಅಪ್ಪ ರಜೆಗೆ ಬಂದಾಗ ಮದುವೆ ತಾರೀಖನ್ನು ಗೊತ್ತು ಪಡಿಸಿದ್ದಾರೆ. ಆಗ ಅಮ್ಮನಿಗೆ ಹದಿನೈದು ವರ್ಷ ಅಷ್ಟೇ. ಅಪ್ಪ ಅಮ್ಮನಿಗೆ ಬರೋಬ್ಬರಿ ಹದಿನಾಲ್ಕು ವರ್ಷಗಳ ವಯಸ್ಸಿನ ಅಂತರವಿದೆ.


ಮಾರ್ಚ್ ೧೫, ೧೯೮೨ ಅಪ್ಪ ಅಮ್ಮನ ಮದುವೆ ದಿನ.


ಅಮ್ಮ, ಅಪ್ಪನ ಮನೆ-ಮನಸ್ಸನ್ನು ತುಂಬಲು ಚಕ್ಕಡಿಯಲ್ಲಿ ಕೊಲ್ಲಾರಿಯ ಶೃಂಗಾರದಲ್ಲಿ ಮಾರ್ಚ್ ೧೪,೧೯೮೨ ರ ಸಾಯಂಕಾಲವೆ ನಮ್ಮೂರಿಗೆ ಮದುಮಗಳಾಗಿ ಬಂದಿದ್ದಾರೆ. ಹೀಗೆ ಬಂದವರು ಮರುದಿನ ಮಾರ್ಚ್ ೧೫ ರಂದು ಅರಿಶಿನ ಹಚ್ಚಿಸಿಕೊಂಡು, ಮಾಂಗಲ್ಯ ಕಟ್ಟಿಸಿಕೊಂಡು, ಸೇರು ಒದ್ದು ಮನೆ-ಮನ ಪ್ರವೇಶ ಮಾಡಿದ್ದಾರೆ. ಇನ್ನೊಂದು ಅಂದರೆ ಆಗೆಲ್ಲ ಮದುವೆಯಾದ ದಿನದ ರಾತ್ರಿ ಪೂರ್ತಿ ಮೆರವಣಿಗೆ ಮಾಡುತ್ತಿದ್ದರಂತೆ. ಅದೂ ಕೂಡ ಚಕ್ಕಡಿಯಲ್ಲಿ ಅಂದರೆ ಎತ್ತಿನ ಗಾಡಿಯಲ್ಲಿ. ಚಕ್ಕಡಿಯ ಮೇಲೆ ಮಂಚವನ್ನಿಟ್ಟು , ಅದನ್ನು ಚೆನ್ನಾಗಿ ಅಲಂಕರಿಸಿ ನನ್ನ ಅಪ್ಪ ಅಮ್ಮನನ್ನು ಕೂರಿಸಿ ಊರೆಲ್ಲ ಮೆರವಣಿಗೆ ಮಾಡಿದ್ದರಂತೆ. ಇವರ ಮೆರವಣಿಗೆಯ ಚಕ್ಕಡಿಯ ಮುಂದೆ ಸ್ನೇಹಿತರ ದಂಡು. ಕೂತು ಕೂತು ಸುಸ್ತಾಗಿದೆ ಅಂತ ಹೇಳಿದರೂ ಮೆರವಣಿಗೆಯನ್ನು ನಿಲ್ಲಿಸಿರಲಿಲ್ಲವಂತೆ. ರಾತ್ರಿ ಪೂರ್ತಿ ಮೆರವಣಿಗೆ ಆಗಿ ಬೆಳಿಗ್ಗೆ ಮನೆಗೆ ಬಂದಿದ್ದು ಅಂತ ಅಪ್ಪ ಖುಷಿಯಲ್ಲಿ ಹೇಳಿದ ನೆನಪು .


ಹೀಗೆ ಅಪ್ಪ ಯಾವಾಗಲೂ ನಮ್ಮ ಮದುವೆ ಹಾಗಾಯ್ತು, ಹೀಗಾಯ್ತು ಅಂತ ಹೇಳುತ್ತಿರುವಾಗ ಅಮ್ಮ ಬಂದವರೇ, ಅವರೂ ಕೂಡ ತಮ್ಮ ನೆನಪಿನ ಬುತ್ತಿಯ ಗಂಟಿನಿಂದ ಒಂದೊಂದೇ ನೆನಪಿನ ತುತ್ತನ್ನು ನಮಗೆ ಉಣಬಡಿಸುತ್ತಿರುತ್ತಾರೆ.


ಹೀಗೆ ಸುಶೀಲೆಯ ಸದ್ಗುಣಕ್ಕೆ ಸೋತು ಕೋಟೆಪ್ಪಗೌಡರು ಸುಶೀಲಾಳನ್ನು ಮದುವೆ ಆಗಿ ಪಾಟೀಲರ ಮನೆಯ ಹಿರಿ ಸೊಸೆಯ ಪಟ್ಟಕ್ಕೆ ಭಾಜನರನ್ನಾಗಿ ಮಾಡಿದ್ದಾರೆ. ನನ್ನಮ್ಮ ಆಗಿನಿಂದ ಸುಶೀಲಗೌಡಶ್ಯಾನಿ ಆಗಿ, ಅಪ್ಪನ ಮನದರಸಿಯಾಗಿ, ಅಪ್ಪನ ಪ್ರತಿಯೊಂದು ಯಶಸ್ಸಿನಲ್ಲೂ, ಖುಷಿಯಲ್ಲೂ , ನೋವಲ್ಲೂ , ದುಃಖದಲ್ಲೂ ಜೊತೆಯಾಗಿ, ಆಸರೆಯಾಗಿ ನಿಂತಿದ್ದಾರೆ.

ಈ ಬಾರಿಯ ಮಾರ್ಚ್ ಹದಿನೈದು ಬಂದರೆ ಅಪ್ಪ ಅಮ್ಮನ ವೈವಾಹಿಕ ಜೀವನ ನಲವತ್ತು ವಸಂತಗಳನ್ನು ಪೂರೈಸುತ್ತದೆ. ಹೊಂದಾಣಿಕೆ , ಪ್ರೀತಿ , ನಂಬಿಕೆ ಈ ತತ್ವದಡಿ ಬದುಕುತ್ತಿರುವವರು ನನ್ನ ಹೆತ್ತವರು. ಆದರ್ಶ ದಂಪತಿಗಳಾಗಿ ಅಪ್ಪ ಅಮ್ಮ ನಮಗೆ ದಾರಿದೀಪವಾಗಿದ್ದಾರೆ.





Rate this content
Log in

Similar kannada story from Romance