" ಸೋ ಕ್ಲೋ "
" ಸೋ ಕ್ಲೋ "
(ಒಂದು ಅನಿಸಿಕೆ )
ಒಂದು ಮನೆಯಲ್ಲಿ ಗಂಡ ಮಕ್ಕಳು ಊಟ ಮಾಡಿ ಮಲಗಿಬಿಟ್ಟಿದ್ದಾರೆ. ಈಗ ಮನೆಯ ಒಡತಿ ಊಟ ಮಾಡಬೇಕು. ಅಡುಗೆ ಮನೆಗೆ ಹೋಗಿ ತಟ್ಟೆಗೆ ಹಾಕಿಕೊಂಡು ತಿನ್ನುವಾಗ ಯಾವುದಕ್ಕೂ ಉಪ್ಪು ಹಾಕಿಲ್ಲ ಅಂತ ಗೊತ್ತಾಯ್ತು. ಆದರೆ ಯಾರೂ ಹೇಳದೆ ಹೇಗೆ ತಿಂದರು ಅನ್ನೋದೇ ಆಶ್ಚರ್ಯ. ಒಳಗೆ ಹೋಗಿ ಉಪ್ಪು ಹಾಕಿಕೊಳ್ಳಲು ನೋಡ್ತಾಳೆ ಡಬ್ಬಿಯಲ್ಲಿ ಉಪ್ಪುಖಾಲಿ. ದೊಡ್ಡ ಡಬ್ಬದಲ್ಲಿ ಇರಬಹುದೆಂದು ನೋಡಿದರೆ ಅದರಲ್ಲೂ ಇಲ್ಲ. ಉಪ್ಪೆಲ್ಲಾ ಏನು ಮಾಡಿದರು ಆಶ್ಚರ್ಯವಾಗಿದೆ. ಪಕ್ಕದ ಮನೆಯ ರಾಧಕ್ಕನ ಹತ್ತಿರ ಉಪ್ಪು ಕೇಳೋಣ ಎಂದುಕೊಂಡಾಗ ರಾತ್ರಿ ಹೊತ್ತು ಅವರು ಉಪ್ಪು ಎಣ್ಣೆ ಕೊಡಲ್ಲ. ಹೇಗೆ ತಿನ್ನೋದು ಅಂತ ಯೋಚನೆ ಮಾಡ್ತಾ ಉಪ್ಪಿನ ಕಾಯನ್ನೇ ಹಾಕಿಕೊಂಡು ತಿನ್ನೋಣ ಅಂತ ಹಾಕಿ ಕೊಂಡರೆ ಅದರಲ್ಲೂ ಉಪ್ಪಿಲ್ಲ ಆಶ್ಚರ್ಯ ಮತ್ತು ಭಯ. ಹೇಗೋ ಅಂತೂ ತಿಂದು ಬೆಳಗ್ಗೆ ವಿಷಯ ತಿಳಿಸೋಣ ಅಂತ ಮಲಗಿದರೆ ರಾತ್ರಿ ಕನಸಲ್ಲಿ ಮನೆಯೆಲ್ಲಾ ಉಪ್ಪಿನ ಮೂಟೆಗಳು.ರಸ್ತೆಯೆಲ್ಲಾ ಉಪ್ಪಿನ ರಾಶಿ. ಬೆಳಗಾಯ್ತು ಎದ್ದೊಡನೆ ಕೇಳಿದ್ದು ಉಪ್ಪು ಏನಾಯ್ತು. ರಾತ್ರಿ ಅಷ್ಟೊಂದು ಉಪ್ಪು ಏನು ಮಾಡಿದಿರಿ ಅಂತ. ನನಗೇನು ಗೊತ್ತಿಲ್ಲ ಊಟಕ್ಕೆ ಉಪ್ಪು ಸರಿಯಾಗೇ ಇತ್ತು ಊಟ ಮಾಡಿ ಮಲಗಿದ್ದೇವೆ. ನೀನು ನೋಡಿದ್ರೇ ಏನೇನೊ ಹೇಳ್ತಾ ಇದ್ದೀಯೆ ಅಂದು ಬಿಟ್ಟ ಗಂಡ. ಇವಳಿಗೆ ಹುಚ್ಚು ಹಿಡಿದ ಹಾಗಾಗಿ ಪಕ್ಕದ ಮನೆಯವರ ಹತ್ತಿರ ಕೇಳೋಣ ಅಂತ ಹೊರಗೆ ಬಂದರೆ ಅವರೇ ಸ್ವಲ್ಪ ಉಪ್ಪುಕೊಡು ಆ ಮೇಲೆ ಅಂಗಡಿ ಇಂದ ತಂದ ಮೇಲೆ ಕೊಡ್ತೀನಿ ಅಂದಾಗ ನಡೆದ ವಿಷಯ ತಿಳಿಸಿದಳು. ಅಲ್ಲಿಗೆ ಇನ್ನೂ ಐದಾರು ಹೆಂಗಸರು ಬಂದು ಇದೇ ವಿಷಯ ಮಾತನಾಡುತ್ತಿದ್ದಾರೆ. ಎಲ್ಲಾ ಹೆದರಿದ್ದಾರೆ. ಯಾರ ಮನೆಯಲ್ಲೂ ಉಪ್ಪುಕಾಣದಾಗಿದೆ. ಅಂಗಡಿಗೆ ಹೋದವರು ವಾಪಸ್ ಬಂದು ಹೇಳಿದರು ಎಲ್ಲೂ ಉಪ್ಪು ಸ್ಟಾಕ್ ಇಲ್ಲವಂತೆ. ಗೋಡೌನ್ಗಳಲ್ಲೂ ಉಪ್ಪು ಮಾಯವಾಗಿದೆ. ಇಡೀ ಊರಲ್ಲಿ ಉಪ್ಪಿನದೇ ವಿಷಯ. ಜನ ಭಯಭೀತರಾಗಿದ್ದರೆ. ಸರ್ಕಾರ ಉಪ್ಪು ಮಾಯವಾದ ಕಾರಣ ಕಂಡು ಹಿಡಿಯಲು ಒಂದು ತುರ್ತಾಗಿ ಕಮಿಟಿ ಮಾಡಿದೆ. ಬೇರೆ ಬೇರೆ ಊರುಗಳಿಂದಲೂ ಇದೇ ಪರಿಸ್ಥಿತಿ ಎಲ್ಲೂ ಉಪ್ಪು ಕಾಣುತ್ತಿಲ್ಲ.
ಇಡೀ ದೇಶದಲ್ಲಿ ಉಪ್ಪು ಮಾಯ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡು ಹಿಡಿಯಲು ಸರ್ಕಾರದ ಕಡೆಯಿಂದಒತ್ತಡ ಹೆಚ್ಚಾಗಿ ವಿಜ್ಞಾನಿಗಳು ಹಗಲು ರಾತ್ರಿ ಪ್ರಯತ್ನ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ MNC ಕಂಪನಿಗಳು ಹಣ ಮಾಡಿಕೊಳ್ಳಲು ಹವಣಿಸುತ್ತಿದೆ. ಎಷ್ಟು ಬೇಕಾದರೂ ಹಣ ಖರ್ಚುಮಾಡಲು ಮುಂದಾಗಿವೆ. ಜನಕ್ಕೆ ಬರೀ ಖಾರ ಸಪ್ಪೆ, ಸಿಹಿ, ಕಹಿ ತಿಂದು ನಾಲಿಗೆ ಸತ್ತುಹೋಗಿದೆ.
ಕೊನೆಗೂ ಕರ್ನಾಟಕದಿಂದಲೇ ಇದಕ್ಕೆ ಪರಿಹಾರ ಸಿಕ್ಕಿ ಬಿಟ್ಟಿದೆ ಅಂತ breaking news ಗಳು ಎಲ್ಲಾ ಚಾನೆಲಗಳೂ ಬೊಬ್ಬೆ ಹೊಡಿತಿದೆ. ಒಂದು ಕಂಪನಿ ಅದಕ್ಕೆ " ಸೋ ಕ್ಲೋ" ಅಂತ ನಾಮಕಾರಣ ಮಾಡಿ ಮಾರುಕಟ್ಟೆಗೆ ಬಿಟ್ಟಿದೆ. ಜನ ಅಂಗಡಿಗಳ ಮುಂದೆ ಎಲ್ಲಾ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ನಿಂತು ಹೇಗಾದರೂ ಪಡೆಯಲೇ ಬೇಕು ಅಂತ ಬೆಳಗ್ಗೆ ಯಿಂದ 
;ರಾತ್ರಿಯವರೆಗೂ ಕಾದಿದ್ದಾರೆ. ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಸ್ಟಾಕ್ ಮಾಡುವುದು ಅಪರಾಧ ಅಂತ ಘೋಷಣೆ ಮಾಡಿದ್ದರೂ ಯಾರೂ ಕೇಳುತ್ತಿಲ್ಲ. ಪಡಿತರ ಅಂಗಡಿಗಳ ಮುಂದೆ 'no stock 'ಬೋರ್ಡ್ ' ಹಾಕಿ ರಾತ್ರಿ ಹೊತ್ತು ಮಾರಿ ಕೊಳ್ಳುತ್ತಿದ್ದಾರೆ ಅಂತ TV ಗಳಲ್ಲಿ ನೋಡಿ ಬಡವರು ರಸ್ತೆ ರಸ್ತೆ ಗಳಲ್ಲಿ "ಉಪ್ಪು ಕೊಡಿ ಇಲ್ಲ ರಾಜಿ ನಾಮೆಕೋಡಿ, "ಅಂತ ಧರಣಿ ಕೂತಿದ್ದಾರೆ.ರಾಜಕಾರಣಿ ಒಬ್ಬರ ಮನೆಯಲ್ಲಿ ಸಾಕಷ್ಟು ಉಪ್ಪು ದಾಸ್ತಾನು ಇರೋದು ತಿಳಿದು ಮನೆಗೆ ಮುತ್ತಿಗೆ ಹಾಕಿದ್ದಾರೆ. ಎಲ್ಲಾ ಕಡೆ ಉಪು ಉಪ್ಪು ಉಪ್ಪಿನದೇ ಗಲಾಟೆ.
ಒಂದು ಹಳೇ ಹೋಟೆಲ್ ನಲ್ಲಿ ಕೂತು ಕಾಫೀ ಕುಡೀತಾ ವಯಸ್ಸಾದವರು ಯಾರೋ ಅವರ ಆನುಭವ ಹೇಳ್ತಾ ಇದಾರೆ. ಹತ್ತು ಜನ ನಿಂತು ಆಶ್ಚರ್ಯವಾಗಿ ಕೇಳ್ತಾ ಇದ್ದಾರೆ. ಮೊದಲು ಉಪ್ಪು ಅಂಗಡಿ ಹೊರಗೇ ಇಟ್ಟಿರುತ್ತಿದ್ದರು. ಹಣ ಕೊಡದೆ ಹಾಗೇ ತೊಗೊಂಡು ಹೋಗ ಬಹುದಾಗಿತ್ತು. ಉಪ್ಪು ದಾನ ಮಾಡಿದರೆ ಯಾರೂ ತೆಗೆದು ಕೊಳ್ತಿರಲಿಲ್ಲ. ಸಮುದ್ರದ ನೀರಲ್ಲಿ ಉಪ್ಪು ಮಾಡ್ತಿದ್ರು. ಈಗ ನೋಡಿದರೆ ಅದೇನೋ ಕೆಮಿಕಲ್ ಉಪ್ಪು ಅಂತ ಮಾರುತ್ತಿದ್ದಾರೆ, ಅಂದಾಗ ಒಬ್ಬರು ಹೇಳಿದ್ರು ಇದನ್ನೂ ban ಮಾಡ್ತಾರಂತೆ ತಾತಾ ಅದೇನೋ liguid ಉಪ್ಪು ಬರತ್ತಂತೆ ಒಂದು ಹನಿ ಹಾಕಿದ್ರೆ ಹತ್ತುಜನಕ್ಕೆ ಅಡುಗೆ ಮಾಡಬಹುದಂತೆ ದೊಡ್ಡ ಹೋಟೆಲ್ ಗಳು ಈಗಾಗ್ಲೇ ತರಿಸಿಕೊಂಡಿದ್ದಾರಂತೆ ಅಂದ. ಇಲ್ಲಿ ನೋಡಿ ಪೇಪರ್ ನಲ್ಲಿ ಬಂದಿರೋದು, ಸಮುದ್ರದ ಹತ್ತಿರ ಉಪ್ಪುಮಾಡಕ್ಕೆ ಪ್ರಯತ್ನ ಮಾಡ್ತಿದ್ದವರನ್ನ ಜೈಲಿಗೆ ಹಾಕಿದ್ದಾರೆ ಅಂತ ಮತ್ತೊಬ್ಬ ಹೇಳಿದ.ಸಮುದ್ರದ ನೀರು ಕದ್ದು ಬೇರೆ ಕಡೆ ಉಪ್ಪು ಮಾಡುತ್ತಿದ್ದ ಪ್ರಭಾವಿ ರಾಜಕಾರಣಿಯ ಮಗ ಸಿಕ್ಕಿಬಿದ್ದರೂ ಬಿಟ್ಟು ಬಿಟ್ಟಿದ್ದಾರೆ ಅಂತ ಇವತ್ತಿನ ಎಲ್ಲಾ ಪೇಪರ್ ನಲ್ಲೂ head lines . ಎಲ್ಲಾ ನಿಮ್ಮ ಕಾಲದಲ್ಲೇ ಚೆನ್ನಾಗಿತ್ತು. ನೋಡಿ ನಾವು ಯಂತ್ರಗಳಂತೆ ಹೇಗೆ ಇದ್ದೇವೆ ಅಂದರು ಹೋಟೆಲ್ ಓನರ್. ಕಲಿಯುಗದಲ್ಲಿ ಇದೆಲ್ಲಾ ಆಗಬೇಕಾಗಿದ್ದೇ ಬಿಡಿ. ನೀರನ್ನ ಮಾರೋದು ಅನ್ನವನ್ನು ಮಾರೋದು, ಗಂಡಸನ್ನ ಗಂಡಸು ಮದುವೆ ಮಾಡ್ಕೊಳ್ಳೋದು. ಮದುವೆ ಮಾಡ್ಕೊಳ್ದೆ ಗಂಡಸು ಹೆಂಗಸು ಇಬ್ಬರೂ ಒಂದೇ ಮನೆ ಮಾಡ್ಕೊಂಡು ಒಟ್ಟಿಗೆ ಇರೋದು, ಹೆತ್ತವರನ್ನೇ ಆಸ್ತಿಗಾಗಿ ಕೊಲೆ ಮಾಡೋದು, ಅಣ್ಣತಮ್ಮಂದಿರು ಆಸ್ತಿಗಾಗಿ ಒಬ್ಬರನ್ನ ಇನ್ನೊಬ್ಬ ಕೊಲೆ ಮಾಡೋದು, ಮಕ್ಕಳನ್ನ ಹಣಕ್ಕಾಗಿ ಮಾರೋದು,
ಇನ್ನೂ ಏನೇನೋ ಆಗಬಾರದ್ದೆಲ್ಲ ಆದರೆ ಇವತ್ತು ಉಪ್ಪಿಗೆ ಬಂದ ಗತಿ ನೀರಿಗೂ ಬರತ್ತೆ ಅಂದರು ಮತ್ತೊಬ್ಬ ವೃದ್ದರು. ಈಗ ಹೊಸದಾಗಿ ಇನ್ನೊಂದು ನಡೀತಿದೆ ತಾತ , ವಯಸ್ಸಾದ ಗಂಡ ಇಲ್ಲದೆ ಇರೋ ಹೆಂಗಸು ಹೆಂಡತಿ ಇಲ್ಲದೇ ಇರೋ ಗಂಡಸು ಒಟ್ಟಿಗೆ ಮನೆಮಾಡಿಕೊಂಡು ಇರೋದಂತೆ. ಮನೆಖರ್ಚು ಇಬ್ಬರೂ ಹಂಚಿಕೊಂಡು ಜೀವನ ಮಾಡೋದಂತೆ. ಮಕ್ಕಳೆಲ್ಲಾ ವಿದೇಶದಲ್ಲಿ ಇದ್ದರೆ
ಇನ್ನೇನು ಮಾಡ್ತಾರೆ ವಯಸ್ಸಾದ ಕಾಲದಲ್ಲಿ ಅಂದರು ಅಲ್ಲೇ ನಿಂತಿದ್ದ ಒಬ್ಬರು.
(ಸೋ ಕ್ಲೋ :sodium chloride)