ಪತ್ರ
ಪತ್ರ
ಸವಿ ಜೇನು ಅಂದರೆ ನೀನು, ಎಷ್ಟೋ ಸಮಸ್ಯೆಗಳು ಮಾತಿನಿಂದ ಬರುತ್ತದೆ ಅಂತಾರೆ ಆದರೆ ನಿನ್ನ ಮಾತು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುವ ಬಯಕೆ ಹೊಮ್ಮುತ್ತದೆ
ಈಗಿನ ಕಾಲದಲ್ಲೂ ಇಷ್ಟು ಮೃದು ಮನಸಿನ ಹುಡುಗ ಇರ್ತಾರ ಅನಿಸಿತ್ತು. ಸಾಕಷ್ಟು ಅನುಮಾನವೂ ಬರುತ್ತಿತ್ತು ನೀನು ಒಲಿಸಿಕೊಳ್ಳೊಕೆ ನಾಟಕ ಆಡುತ್ತಿದ್ದೀಯಾ ಅಂತ, ಆದರೆ ಕಾಲ ಕಳೆದಂತೆ ನೀನು ನನಗೆ ಹತ್ತಿರ ಆದಂತೆ ನೀನು ಏನು ಎಂದು ಅರಿತೆ. ನನ್ನಲ್ಲಿ ನಿನ್ನಲ್ಲಿ ಹೆಚ್ಚು ಸಾಮ್ಯತೆ ಇದೆ ಕಣೋ. ಏನು ಗೊತ್ತ ? ನೀನು ಸುಳ್ಳು ಹೇಳೊಲ್ಲ ,ಸುಳ್ಳು ಹೇಳೋರ ಕಂಡರೆ ಆಗೊಲ್ಲ. ನಂಗೂ ಅಷ್ಟೇ ,
ಪ್ರತಿಯೊಂದು ವಿಷಯ ಬಿಚ್ಚು ಮನಸ್ಸಿನಿಂದ ಆಡುತ್ತೀಯ. ಹಾಗೇ ನಾನೂ ಸಹ. ಆದರೆ ನಿನಗಿರುವ ತಾಳ್ಮೆ ನನಗಿಲ್ಲ ಕಣೋ, ನಂಗೆ ಮುಂಗೋಪ ಜಾಸ್ತಿ. ಅದನ್ನು ಸಹಿಸಿಕೊಂಡು ನೀನು ಇರುತ್ತೀಯಲ್ಲ. ಅದೇ ನಂಗೆ ಒಂದೊಂದು ಸಾರಿ ನಗು ಬರುತ್ತದೆ. ಆದರೂ "ಇಷ್ಟೊಂದು ಯಾಕೋ ಪ್ರೀತಿಸ್ತಿಯ" ಅಂದರೆ "ಗೊತ್ತಿಲ್ಲ" ಅನ್ನೊ ನಿನ್ನ ಮುಗ್ದ ಉತ್ತರ ನಂಗೆ ಇಷ್ಟ ಕಣೊ
ನೀನು ಬಿಸಿನೆಸ್ ಮಾಡ್ತೇನೆ ಅಂದಾಗ ಆಶ್ಚರ್ಯ ಆದರೂ ಸಂತಸವಾಗಿತ್ತು . ನೀನು ಬಿಸಿನೆಸ್ ದೂರದ ಊರಿನಲ್ಲಿ ಮಾಡುವ ಪ್ಲಾನ್ ಏನೋ ಸರಿ, ಆದರೆ ಹೇಗೆ ಬಿಟ್ಟಿರಲಿ ನಿನ್ನ!?
ಅವತ್ತು ನಿನ್ನ ಎದೆಗೆ ತಲೆ ಇಟ್ಟು ಅತ್ತಾಗ, ಸಮಯ ಹೋದದ್ದೇ ತಿಳಿದಿರಲಿಲ್ಲ. ನೀನು ಕಂಬದಂತೆ ಕಣ್ಣು ತುಂಬಿ ನಿಂತೇ ಇದ್ದೆ .
ಆದರೂ ಈಗ ನೆನೆಸಿಕೊಂಡರೆ ನೀನು ಅಲ್ಲಿ ಹೋಗಿ ಎಷ್ಟು ಹೆಸರು, ಹಣ ಮಾಡಿದೆ ತುಂಬಾ ಸಂತೋಷ ಆಗುತ್ತೆ.
ಅಷ್ಟೇ ಅಲ್ಲ ನೀನು ದೊಡ್ಡ ವ್ಯಕ್ತಿ ಆದರೂ ನನ್ನ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ಅದೇ ಕಣೋ ನಂಗೆ, ನಿನ್ನ ಮೇಲಿನ ಗೌರವ ಹೆಚ್ಚಾಗಲು ಕಾರಣ.
ನಿನ್ನ ನೆನೆದಾಕ್ಷಣ ನೋಡಬೇಕು ಎಂಬ ಬಯಕೆ ತಡೆಯಲು ಆಗೊಲ್ಲ ಕಣೋ. ಯಾವಾಗ ಮತ್ತೆ ನಾವು ಒಬ್ಬರನ್ನೊಬ್ಬರು ನೋಡುವ ಸಮಯ ಬರುತ್ತೊ ಅಂತ ಕಾದಿದ್ದೀನಿ ಕಣೊ!
ಬೇಗ ಮನದ ಬಯಕೆ ತೀರಿಸು ಮಾರಾಯ ಹೆಚ್ಚು, ದಿನ ನಿನ್ನ ಬಿಟ್ಟಿರಲು ಸಾಧ್ಯವಿಲ್ಲ .
ನಿನಗಾಗಿ ಕಾಯುತ್ತಿರುವ ನಿನ್ನ
ಕೃಪಾ

