Surabhi Latha

Classics Inspirational Others

4  

Surabhi Latha

Classics Inspirational Others

ಗುರು

ಗುರು

2 mins
281



ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು,

"ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ" ಎಂದು ಹೇಳಿ ಯಾತ್ರೆಗೆ ಅನುಮತಿ ಕೋರಿದರು.


ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು? ಎಂದು ಗುರುಗಳು ತಮ್ಮ ಶಿಷ್ಯರಿಗೆ ಕೇಳಿದರು.


ಇದಕ್ಕೆ ಉತ್ತರಿಸಿದ ಶಿಷ್ಯರು,

"ಗುರುಗಳೇ ನಾವು ಅಂತರಂಗಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.


"ಸಂತೋಷ ಹೋಗಿಬನ್ನಿ ಶುಭವಾಗಲಿ" ಎಂದ ಗುರುಗಳು, ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು,

"ಈ ಕಾಯನ್ನೂ ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲ ಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನು ಇಟ್ಟು ಪೂಜೆ ಮಾಡಿಸಿಕೊಂಡು ಬನ್ನಿ" ಎಂದು ತಿಳಿಸಿದರು.


ಸರಿ ಎಂದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟು ಒಂದು ವಾರದ ಬಳಿಕ ಹಿಂತಿರುಗಿದರು.


ಶಿಷ್ಯರನ್ನು ಕಂಡ ಗುರುಗಳು,

"ಏನು ಕ್ಷೇತ್ರ ದರ್ಶನದಿಂದ ನೀವೆಲ್ಲ ಪುನೀತರಾದಿರಾ ನಿಮ್ಮ ಅಂತರಂಗ ಶುದ್ಧಿಯಾಯಿತೇ?" ಎಂದು ಕೇಳಿದರು.


 ಎಲ್ಲ ಶಿಷ್ಯರೂ ಒಕ್ಕೊರಲಿನಿಂದ ಹೌದೆಂದರು.

ಆಗ ಗುರುಗಳು "ನೀವು ಯಾತ್ರೆಗೆ ಹೊರಡುವಾಗ ನಾನು ಕೊಟ್ಟಿದ್ದ ಹಾಗಲಕಾಯಿಗಳಿಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದಿರಾ?, ದೇವರ ಬಳಿ ಇಟ್ಟು ಪೂಜೆ ಮಾಡಿಸಿದಿರಾ?" ಎಂದು ಕೇಳಿದರು.


ಶಿಷ್ಯರು ಹೌದೆಂದರು.


"ಸರಿ ಹಾಗಾದರೆ ಈ ಕಾಯಿಗಳನ್ನು ಹಾಕಿ ಇಂದು ಅಡುಗೆ ಮಾಡಿಸಿ" ಎಂದು ಅಪ್ಪಣೆ ಕೊಡಿಸಿದರು.


ಊಟಕ್ಕೆ ಕುಳಿತಾಗ ಹಾಗಲ ಕಾಯಿ ತಿಂದ ಗುರುಗಳು,

"ಅಯ್ಯೋ! !!.. ಇದೇನು ಇಷ್ಟು ಕಹಿಯಾಗಿದೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅದಕ್ಕೆ ಉತ್ತರ ಕೊಟ್ಟ ಶಿಷ್ಯ

"ಅಲ್ಲ ಗುರುಗಳೇ ಹಾಗಲ ಕಾಯಿಯ ಗುಣವೇ ಕಹಿ ಅದು ಸಿಹಿ ಆಗಲು ಹೇಗೆ ಸಾಧ್ಯ?" ಎಂದು ಕೇಳಿದರು.


ಆಗ ಗುರುಗಳು ಹೇಳಿದರು "ಪವಿತ್ರ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮಾತ್ರಕ್ಕೆ ನಿಮ್ಮ ಅಂತರಂಗಶುದ್ಧಿ ಆಗುವುದಾದರೆ ಈ ಹಾಗಲ ಕಾಯಿಯೂ ನಿಮ್ಮೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತವಾಗಿದೆ. ದೇವರ ದರ್ಶನದಿಂದ ಇದರ ಅಂತರಂಗ ಶುದ್ಧಿ ಆಗಿರಬೇಕಲ್ಲ. ಹಾಗಾದರೆ ಸಿಹಿ ಆಗುವ ಬದಲು ಕಹಿ ಏಕಾಯಿತು?" ಎಂದು ಪ್ರಶ್ನಿಸಿದರು.


 ಗುರುಗಳ ಅಂತರ್ಯ ಅರಿತ ಶಿಷ್ಯರು ತಲೆ ತಗ್ಗಿಸಿ ನಿಂತರು.


ಆಗ ಗುರುಗಳು ಹೇಳಿದರು "ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಬಳಿ ಹೋದರೆ ನೀವು ಪುನೀತರಾಗುವುದಿಲ್ಲ.

ನಿಮ್ಮಲ್ಲಿ ದುರ್ಗುಣ ತುಂಬಿಕೊಂಡು ಪುಣ್ಯ ಸ್ನಾನ ಮಾಡಿದರೆ ನಿಮ್ಮ ಅಂತರಂಗ ಶುದ್ಧಿ ಆಗುವುದಿಲ್ಲ.


ಮೊದಲು ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ. ಸತ್ಯವನ್ನೇ ನುಡಿಯಿರಿ, ಧರ್ಮದಿಂದ ನಡೆಯಿರಿ, ಎಲ್ಲರನ್ನೂ ನಿಮ್ಮಂತೆಯೇ ಕಾಣಿ.

ಮೋಸ, ವಂಚನೆ ಮಾಡಬೇಡಿ, ಜಗತ್ತಿನಲ್ಲಿರುವ ಎಲ್ಲವೂ ನನಗೇ ಬೇಕು ಎಂದು ಕೂಡಿಡುವ ಮನೋಸ್ಥಿತಿ ಬಿಡಿ (ಭ್ರಷ್ಟಾಚಾರ), ನಿಮ್ಮ ಬದುಕನ್ನು ಪರೋಪಕಾರಕ್ಕೆ ಮೀಸಲಿಡಿ.

ಆಗ ಭಗವಂತನೂ ಮೆಚ್ಚುತ್ತಾನೆ. ನೀವೂ ಪುನೀತರಾಗುತ್ತೀರಿ" ಎಂದು ಹೇಳಿದರು. 




Rate this content
Log in

Similar kannada story from Classics