Shilpashree NP

Tragedy Crime Others

4  

Shilpashree NP

Tragedy Crime Others

ನಗ್ನ ಗೊಂಬೆಯ ಬಣ್ಣ

ನಗ್ನ ಗೊಂಬೆಯ ಬಣ್ಣ

2 mins
330


ನನಗೆ ಸುಮಾರು ಎಂಟು ವರ್ಷ ಇದ್ದಾಗ ಕಡು ಬಡತನದ ಜೀವನ. ಗುಡಿಸಲಿನಲ್ಲಿ ಆಟ, ಹರಿದ ಬಟ್ಟೆ, ಮುರುಕು ರೊಟ್ಟಿ ತಿನ್ನುತ್ತಿದ್ದರೆ ಅದೇ ಮೃಷ್ಟಾನ್ನ ಭೋಜನ ಎನಿಸುತ್ತಿತ್ತು. ಗುಡಿಸಲಿನ ಪಕ್ಕದಲ್ಲಿರುವ ಜೋಪಡಿಯಲ್ಲಿ ಮಲಗಿದ್ದಾಗ ನನ್ನ ಕಂಗಳು ಆಕಾಶವನ್ನು ನೋಡುತ್ತಿದ್ದವು. ತಿಳಿಗುಲಾಬಿ ಬಣ್ಣದ ಆಕಾಶ ಎಷ್ಟು ಸೊಗಸು, ಆಗಸದಲಿ ನಾನು ಬಣ್ಣದ ಬಟ್ಟೆ ತೊಟ್ಟು ಆಟವಾಡುತ್ತಿದ್ದೆ. ಆ ಕಲ್ಪನೆ ಮನದಲ್ಲಿ ಚಿತ್ತಾರಗಳ ಮೂಡಿಸುತ್ತಿದ್ದವು.


ಆದರೆ ರಾತ್ರಿಯಾದರೆ ಮಾತ್ರ ನನ್ನ ಮನಸ್ಸಿಗೆ ಭಯವಾಗುತ್ತಿತ್ತು. ಅಪ್ಪ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಿದ್ದ. ಅವನ ಹೊಡೆತವನ್ನು ಸಹಿಸಲಾಗದೆ ಆಕೆ ಅಳುತ್ತಾ ಕುಳಿತಿರುತ್ತಿದ್ದಳು. ಅವನ ಹೊಡೆತದಿಂದ ತಪ್ಪಿಸಿಕೊಳ್ಳಲು ಮೂಲೆಯಲ್ಲಿ ಮಲಗಿದವಳಂತೆ ನಾನು ನಟಿಸುತ್ತಿದ್ದೆ. ಇದು ದಿನವು ಕರಾಳ ಅನುಭವವನ್ನು ನೀಡುತ್ತಿತ್ತು. ನನಗಿಂತ ಐದು ವರ್ಷ ದೊಡ್ಡವನಾದ ನನ್ನ ಅಣ್ಣ , ಒಂದು ದಿನ ಯಾರೋ ಕೊಡುವ ಬಿಡಿಗಾಸಿಗಾಗಿ ನನ್ನ ಮಾರಿಬಿಟ್ಟ.


ಯಾರೋ ಊರ ಹೊರಗಿನ ಯಾವುದೋ ಬಂಗಲೆಯಲ್ಲಿ ಕೆಲವು ದಿನಗಳು ನನ್ನನ್ನು ಕೂಡಿಹಾಕಿದ್ದರು. ನಾನು ಅಮ್ಮ ಬೇಕು ಬಿಟ್ಟು ಬಿಡಿ ಎಂದು ಕೂಗಾಡಿದೆ, ನೆಲದ ಮೇಲೆ ಬಿದ್ದು ಉರುಳಾಡಿದೆ. ಅತ್ತು ಅತ್ತು ಗಂಟಲು ಒಣಗಿತು, ನನ್ನ ಆ ಸಂಕಟ ವೇದನೆ ಯಾರಿಗೂ ಕೇಳಲಿಲ್ಲ. ಕಲ್ಲಿನ ಬಂಡೆ ಆದರೂ ಕರಗಬಹುದು ಈ ಕಟುಕರ ಮನ ಕರಗುವುದಿಲ್ಲ.


ಊಟ ತಿಂಡಿ ನೀರು ಇಷ್ಟನ್ನು ನೀಡಿ ಪ್ರಾಣಿಗಳಿಗಿಂತಲೂ ಹೀನಾಯವಾದ ಪರಿಸ್ಥಿತಿಯಲ್ಲಿ ನನ್ನನ್ನು ಇಟ್ಟಿದ್ದರು. ಈ ಕತ್ತಲಿನ ಜಗತ್ತಿಗಿಂತ ಕುಡುಕ ಅಪ್ಪನ ಜೋಪಡಿ ಹಿತವಾಗಿತ್ತು ಅನಿಸುತ್ತಿತ್ತು. ಅಮ್ಮನ ಮಡಿಲನು ಸೇರುವ ಬಯಕೆ ಮನದ ತುಂಬ ಆವರಿಸಿತ್ತು.


ಹೀಗೆ ಹಲವು ತಿಂಗಳುಗಳು ನನ್ನ ಜೀವನ ಕತ್ತಲ ಕೋಣೆಯಲ್ಲಿ ನಡೆಯುತ್ತಿತ್ತು. ಒಂದು ದಿನ ನನಗೆ ನೆಲದ ಮೇಲೆ ಬಿದ್ದಿರುವ ಕಡ್ಡಿಯಂತಹ ವಸ್ತು ಕಾಣಿಸಿತು. ಅದನ್ನು ಗೋಡೆಯ ಮೇಲೆ ಗೀಚಿದೆನು. ಹೀಗೆ ಗೋಡೆಗಳ ಮೇಲೆ ಚಿತ್ತಾರ ಬಿಡಿಸುವುದನ್ನು ರೂಢಿ ಮಾಡಿಕೊಂಡೆನು.


ಒಂದು ದಿನ ನನಗೆ ಬಣ್ಣದ ಬಟ್ಟೆ ತೋಡಿಸಿ ಸಿಂಗಾರ ಮಾಡಿದರು. ಅಂದು ಯಾವನೋ ಒಬ್ಬ ಸುಮಾರು ಐವತ್ತರ ಆಸುಪಾಸಿನ ಗಂಡಸು ಬಂದ, ನಂತರ ಅವನು ನನ್ನ ಮೈಮೇಲೆ ಬಿದ್ದ , ನನ್ನ ಬಟ್ಟೆಯನ್ನು ಹರಿದು ಹಾಕಿದನು, ನಾನು ಚೀರಾಡಿದೆ ಆದರೆ ಅವನಿಗೆ ಅದು ಕೇಳಲಿಲ್ಲ. ನನ್ನ ಬಾಯಿ ಮುಚ್ಚಿದ ಹಾಗೂ ಮೈ ಕೈಯೆಲ್ಲಾ ಹಿಂಡಿ ಹಿಪ್ಪೆ ಮಾಡಿದ. ದೇಹದ ಪ್ರತಿ ಭಾಗವು ಗಾಯವಾಗಿ ನೋಯುತ್ತಿತ್ತು. ಅವನು ಏನು ಮಾಡಿದ ನನಗೆ ತಿಳಿಯಲಿಲ್ಲ. ಆದರೆ ಅವನು ಮಾಡಿದ ಆ ಕೆಲಸ ನನ್ನ ಮನಸ್ಸಿಗೆ ಹಿಂಸೆಯಾಗಿತ್ತು. ನಾನು ರಕ್ತದ ಮಡುವಿನಲ್ಲಿ ಬೆತ್ತಲೆ ಆಗಿದ್ದೆ, ಆಮೇಲೆ ಜ್ವರ ಕೂಡ ಬಂದಿತ್ತು. ಆ ನಂತರ ಯಾವುದೋ ಒಬ್ಬ ಮನುಷ್ಯ ಬಂದು ಒಂದೆರೆಡು ಗುಳಿಗೆಗಳನ್ನು ಕೊಟ್ಟ. ಸ್ವಲ್ಪ ಹಿತವೆನಿಸುವಾಗಲೆ ಮತ್ತೆ ದಿನವು ನನ್ನ ದೇಹದ ಮೇಲೆ ನಿರಂತರವಾದ ಅತ್ಯಾಚಾರ ಮುಂದುವರೆಯಿತು.


ನನ್ನ ಮನಸ್ಸಿಗಾದ ಗಾಯವನ್ನು ಗೋಡೆಯ ಮೇಲೆ ಗೀಚಿ ಚಿತ್ತಾರ ಮೂಡಿಸುವ ಮೂಲಕ, ಮರೆಯಲು ಪ್ರಯತ್ನಿಸುತ್ತಿದ್ದೆ. ಆ ಚಿತ್ತಾರಗಳು ನನ್ನ ಮನಸ್ಸಿಗೆ ಮುದ ನೀಡುತ್ತಿತ್ತು. ಸ್ವಲ್ಪ ದೊಡ್ಡವಳಾದ ಮೇಲೆ ನನಗೆ ಹೊರಗೆ ಹೋಗುವ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅದು ಬಿಗಿಭದ್ರತೆಯ ನಡುವೆ. ಯಾರದೋ ಕೈ ಗೊಂಬೆಯಾಗಿ ನಾನು ಕಾಲ ಕಳೆಯುತ್ತಿದ್ದೆ. ನಾನು ಈ ಬಂಧನದಿಂದ ಹೊರಬರಲು ಸಾಧ್ಯ ಇಲ್ಲ, ಏಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಗೆ, ಅದು ಮೊಟ್ಟೆ ಇಡುವಷ್ಟು ದಿನ ಮುಕ್ತವಾಗಲು ಅವಕಾಶ ಇಲ್ಲ.


ಒಂದು ದಿನ ಯಾರೋ ಸಾಹಿತಿಯಂತೆ, ಅವನು ಬಂದು ನನ್ನ ಬಳಿ ಕುಳಿತನು. ನಾನು ಗೋಡೆಯ ಮೇಲೆ ಬರೆದ ಚಿತ್ತಾರವನ್ನು ಬೆರಗು ಕಣ್ಣಿನಿಂದ ನೋಡಿ. ನನ್ನಲ್ಲಿ ಯಾವುದೋ ಒಂದು ಉತ್ಕೃಷ್ಟವಾದ ಕಲೆ ಇದೆ ಎಂದು ಹೇಳಿದನು.

ಅವನು ಏನು ಹೇಳಿದ ನನಗೆ ತಿಳಿಯಲಿಲ್ಲ, ಆದರೆ ಚಿತ್ರ ಬರೆಯುವ ಈ ಕಲೆ ನನಗೆ ಈ ಕರಾಳ ಪ್ರಪಂಚದಿಂದ ಮುಕ್ತಿ ನೀಡುತ್ತಿತ್ತು. ಮರುದಿನ ಅವನು ನನಗೆ ಒಂದು ಬಿಳಿಯ ಹಾಳೆ ಹಾಗೂ ಒಂದಷ್ಟು ಬಣ್ಣಗಳನ್ನು ತಂದುಕೊಟ್ಟ. ಬಿಳಿಯ ಹಾಳೆಯ ಮೇಲೆ ಬಣ್ಣಗಳಿಂದ ಚಿತ್ತಾರ ಬಿಡಿಸು ಎಂದು ಹೇಳಿದನು. ಅವನು ನನ್ನ ಬಳಿ ಸಮಯ ಕಳೆಯಲು ಹಣ ನೀಡುತ್ತಿದ್ದನು. ಅವನು ಕೊಟ್ಟ ಹಾಳೆಯ ಮೇಲೆ ಬಣ್ಣದ ಚಿತ್ತಾರಗಳನ್ನು ಬರೆದೆನು. ಆಗ ನನಗೆ ತಿಳಿಯಿತು ಇದಕ್ಕೆ ಅವನು ಹೇಳಿದ್ದು ಉತ್ಕೃಷ್ಟವಾದ ಕಲೆ. ಆ ದಿನ ನನ್ನ ಜೀವಮಾನದಲ್ಲೇ ಮರೆಯಲಾಗದ ದಿನ, ಏಕೆಂದರೆ ನಾನು ಖಾಲಿ ಹಾಳೆಯಲ್ಲಿ ಬರೆದ ಬಣ್ಣ ಬಣ್ಣದ ಚಿತ್ತಾರ, ನನ್ನೊಳಗೆ ನೂರಾರು ಭಾವಗಳ ಚಿತ್ತಾರ ಮೂಡಿಸಿತ್ತು.



Rate this content
Log in

Similar kannada story from Tragedy