Shilpashree NP

Tragedy Classics Others

4  

Shilpashree NP

Tragedy Classics Others

ಆಟಕ್ಕುಂಟು ಲೆಕ್ಕಕ್ಕಿಲ್ಲ.

ಆಟಕ್ಕುಂಟು ಲೆಕ್ಕಕ್ಕಿಲ್ಲ.

2 mins
405


ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಪಟ್ಟಿ ಮಾಡಿದಳು.ಆ ಪೂಜೆಯಲ್ಲಿ ಓಡಾಡಿಕೊಂಡು ಎಲ್ಲಾ ಪೂಜಾಸಾಮಗ್ರಿಗಳನ್ನು ಜೋಡಿಸಿದಳು. ಜೊತೆಗೆ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಲ್ಲ, ಕೆಲಸದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಬಳಗದವರೆಲ್ಲ ಕರೆದು ಬಂದಳು. ಆದರೆ ಮನೆಯವರಿಗೆ ಪೂಜೆಯ ದಿನ ಮಾತ್ರ ಇವಳ ಉಪಸ್ಥಿತಿ ಬೇಕಾಗಿರಲಿಲ್ಲ. ಆ ಪೂಜೆಗೆ ಕುಳಿತುಕೊಳ್ಳಲು ಇವಳು ಮುಖ್ಯವಲ್ಲ, ಇವಳು ಆಟಕ್ಕುಂಟು ಲೆಕ್ಕಕ್ಕಿಲ್ಲ.


ಬಂಧುಬಳಗದವರು ಬಂದಿದ್ದಾರೆ ಎಲ್ಲರಿಗೂ ಅಡಿಗೆ ಮಾಡಬೇಕು. ಒಂದು ವಾರಕ್ಕೆ ಮೊದಲೇ ಎಲ್ಲ ತಯಾರಿ ನಡೆಸಿದಳು. ರುಚಿಯಾದ ಭಕ್ಷ್ಯ ಭೋಜನಗಳು ರೆಡಿಯಾಯಿತು. ಬಂದವರೆಲ್ಲ ಮನಃಸ್ಪೂರ್ತಿಯಾಗಿ ತಿಂದರು, ಆದರೆ ಈ ಸಕಲ ಮರ್ಯಾದೆ ಹೊಗಳಿಕೆ ಮಾತ್ರ ಮತ್ತಾರಿಗೊ, ಕಷ್ಟಪಟ್ಟು ಅಡಿಗೆ ಮಾಡಿದ ಕೈಗಳಿಗೆ ಹೊಗಳಿಕೆ ಸಿಗಲೇ ಇಲ್ಲ, ಇವಳು ಆಟಕ್ಕುಂಟು ಲೆಕ್ಕಕ್ಕಿಲ್ಲ


ಮನೆಯಲ್ಲಿ ಮದುವೆ ಸಂಭ್ರಮ ಎಷ್ಟೊಂದು ಕೆಲಸ. ತನ್ನ ಹತ್ತಿರದವರ ಮದುವೆ, ಮನೆಯವರಿಗೆ ಬೇಕಾದ ಎಲ್ಲಾ ಆಗತ್ಯ ಪೂರೈಸಿದಳು, ಮದುವೆಗೆ ಯಾರ್ಯಾರಿಗೆ ಕರೆಯಬೇಕು ಎಂಬ ಆಮಂತ್ರಣ ಪಟ್ಟಿಯನ್ನು ತಯಾರಿಸಿದಳು. ಪ್ರತಿಯೊಬ್ಬರಿಗೂ ಉಪಚಾರ ಮಾಡುವುದನ್ನು ಮರೆಯಲ್ಲಿಲ್ಲ. ಮದುವೆಯ ಎಲ್ಲಾ ವಸ್ತುಗಳನ್ನು ತಾನೇ ಮುಂದೆ ನಿಂತು ತೆಗೆದುಕೊಟ್ಟಳು. ಆದರೆ ಮದುವೆ ಮಂಟಪದಲ್ಲಿ ಇವಳು ದೂರ ಉಳಿದಳು. ಅವಳೇಕೆ ಮದುವೆ ಮಂಟಪದ ಬಳಿ ಸುಳಿಯಲಿಲ್ಲ, ಎಂಬುದರ ಗೊಡವೆಗೆ ಯಾರು ಹೋಗಲಿಲ್ಲ. ಇವಳು ಆಟಕ್ಕುಂಟು ಲೆಕ್ಕಕ್ಕಿಲ್ಲ.


ಅಂದು ಮನೆಯಲ್ಲಿ ಎಲ್ಲರೂ ನಾದಿನಿಯ ಗೆಲುವಿನ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ನಾದಿನಿಯಲ್ಲಿದ್ದ ಸಂಗೀತ ಕಲೆಯನ್ನು ಪ್ರೋತ್ಸಾಹಿಸಿ, ಸಂಗೀತ ಶಾಲೆಗೆ ಸೇರಿಸಿದವಳು ಇವಳು. ಸಂಗೀತ ಏಕೆ ಸುಮ್ಮನೆ ಮನೆಯಲ್ಲಿರಲಿ ಎಂದವರಿಗೆ ಉತ್ತರಿಸಿದವಳು ಇವಳು. ಈ ದಿನ ಅವಳು ಸಾಧನೆಯ ಉತ್ತುಂಗದಲ್ಲಿ ಇರುವುದಕ್ಕೆ ಕಾರಣ ಇವಳು ಎಂಬುದನ್ನು ಸ್ವತಃ ನಾದಿನಿಯೆ ಮರೆತುಬಿಟ್ಟಿದ್ದಾಳೆ.


ಅತ್ತಿಗೆಯ ಕುಡುಕ ಗಂಡನಿಗೆ ಬುದ್ಧಿವಾದ ಹೇಳಿದಳು. ಅವರು ಜೀವನ ನಡೆಸಲಾಗದೆ ನರಳುತ್ತಿದ್ದಾಗ ಅತ್ತಿಗೆಗೆ ಸಹಾಯ ಮಾಡಿದಳು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದಳು. ಅವರ ಜೀವನ ಸುಧಾರಿಸಲು ಸಹಕರಿಸಿದಳು. ಅತ್ತಿಗೆಯ ಗಂಡನಿಗೆ ಒಳ್ಳೆಯ ಉದ್ಯೋಗ ಕೊಡಿಸಲು ಸಹಾಯ ಮಾಡಿದಳು. ಇಂದು ಅವರ ಮಕ್ಕಳ ಮದುವೆಗೆ ಇವಳು ಬಂದರು ಸರಿ ಬಿಟ್ಟರು ಸರಿ. ಇವಳ ಬಗ್ಗೆ ಅವರಿಗೆ ಯಾವುದೇ ರೀತಿಯ ಕೃತಜ್ಞತೆ ಮನೋಭಾವ ಇಲ್ಲ.


ಇನ್ನು ಓದಿನಲ್ಲಿ ಹಿಂದುಳಿದ ಮೈದುನನಿಗೆ ಬುದ್ಧಿ ಹೇಳಿದಳು. ಒಂದು ಸಣ್ಣ ಉದ್ಯೋಗವನ್ನು ಆರಂಭಿಸಲು ಅವನಿಗೆ ಪ್ರೋತ್ಸಾಹಿಸಿ ಸಹಕಾರ ಕೊಟ್ಟಳು. ಅವನು ಉದ್ಯೋಗ ಆರಂಭಿಸಿದಾಗ ತನಗೆ ತಿಳಿದವರಿಗೆ, ಅವನ ಬಳಿ ಸಾಮಾನುಗಳನ್ನು ಖರೀದಿಸುವಂತೆ ಮನವಿ ಮಾಡಿದಳು. ಇಂದು ಅವನು ಉದ್ಯೋಗದಲ್ಲಿ ಉತ್ತಮ ಸ್ಥಾನದಲ್ಲಿದ್ದಾನೆ. ಆದರೆ ತಾನು ಈ ಸ್ಥಾನಕ್ಕೆ ಬರಲು ಕಾರಣಳಾದವಳನ್ನು ಮರೆತು ಬಿಟ್ಟಿದ್ದಾನೆ.


ಸಂಕಟದಲ್ಲಿದ್ದ ತನ್ನವರಿಗೆ ಸಹಾಯಮಾಡಿದಳು ಇವಳು. ದಾರಿತಪ್ಪುತ್ತಿದ್ದ ತನ್ನ ತಮ್ಮನಿಗೆ ಸರಿದಾರಿಗೆ ತಂದವಳು ಇವಳು. ಆದರೆ ಅಕ್ಕನಿಂದ ತನ್ನ ಜೀವನ ಸರಿ ಹೋಯಿತು ಎಂದು, ಅವನ ಬಾಯಿಯಲ್ಲಿ ಒಂದು ಸಣ್ಣ ಮಾತು ಬರುವುದಿಲ್ಲ, ಇವಳು ಆಟಕ್ಕುಂಟು ಲೆಕ್ಕಕ್ಕಿಲ್ಲ


ಮದುವೆಗೆ ಮುನ್ನ ಕೂಡ ಗಂಡಿನ ಕಡೆಯವರು ಬಂದರು, ಶೃಂಗಾರ ಮಾಡಿಕೊಂಡು ಬಾ ಎಂದರು. ವರನ ಕಡೆಯವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದಳು. ಹಿರಿಯರು ಹೇಳಿದ್ದಕ್ಕೆಲ್ಲ ತಲೆಬಾಗಿದಳು. ಹುಡುಗನ ಕಡೆಯವರಿಗೆ ಒಪ್ಪಿಗೆಯಾಯಿತು ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ಇವಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಯಾರೂ ಕೇಳಲಿಲ್ಲ. ಇದು ಇವಳ ಜೀವನದ ಪ್ರಶ್ನೆ ಎಂದು ಅವರಾರಿಗೂ ಅರಿವಾಗಲೇ ಇಲ್ಲ, ಏಕೆಂದರೆ ಇವಳು ಆಟಕ್ಕುಂಟು ಲೆಕ್ಕಕ್ಕಿಲ್ಲ.



Rate this content
Log in

Similar kannada story from Tragedy