Shilpashree NP

Tragedy Classics Others

4  

Shilpashree NP

Tragedy Classics Others

ಸೆಲೆಬ್ರಿಟಿ ಮಗಳು

ಸೆಲೆಬ್ರಿಟಿ ಮಗಳು

4 mins
46


"ಅವಳೇ ಫೇಮಸ್ ಹಿರೋ ಜೀವನ್ ಮಗಳು" ಹೀಗೆ ನನ್ನನ್ನು ಎಲ್ಲರೂ ಕರೆಯುತ್ತಾರೆ. ನನಗೆ ನನ್ನದೇ ಆದ ಹೆಸರು ಇದೆ ಅದು "ಚಂದನ" ಆದರೆ ಯಾರೂ ನನ್ನನ್ನು ಆ ಹೆಸರಿಂದ ಕರೆಯಲ್ಲ.


ನಮ್ಮ ತಂದೆ ಪ್ರಖ್ಯಾತ ಹಾಗೂ ಬೇಡಿಕೆಯಲ್ಲಿರುವ ಸಿನಿಮಾ ನಟ.


ನನ್ನ ಬಗ್ಗೆ ನಿಮಗೆ ಹೇಳಬೇಕು.


ಬೆಳಗ್ಗೆ ಸಾವಿತ್ರಮ್ಮ "ಎದ್ದೇಳು ಪುಟ್ಟಿ ಬೆಳಗ್ಗೆ ಆಯ್ತು ಅಂತ ಬಂದು ಕರೀತಾರೆ "ಅವರ ಮುಖವೇ ಮೊದಲು ದರ್ಶನವಾಗುವುದು." ಸಾವಿತ್ರಮ್ಮನ ಧ್ವನಿ ನನಗೆ ಸುಪ್ರಭಾತ. ನಮ್ಮ ಮನೆಯಲ್ಲಿ sorry ಅರಮನೆಯಲ್ಲಿ ಎಷ್ಟು ರೂಮು ಇದೆ ,ಎಷ್ಟು ಮಂದಿ ಆಳುಗಳು ಎಂಬುದು ನನಗೆ ತಿಳಿದಿಲ್ಲ. ಮನೆ ಕೆಲಸ ಮಾಡಲು ಅಡುಗೆ ಮಾಡಲು ಬಟ್ಟೆ ಒಗೆಯಲು, ಮೇಕಪ್ ಮಾಡಲು, care taker's, ತಂದೆ ತಾಯಿಗೆ ಪರ್ಸನಲ್ ಅಸಿಸ್ಟೆಂಟ್ ,ಕಾರ್ ಡ್ರೈವರ್ , costume ಡಿಸೈನರ್, ಅಕೌಂಟ್ಸ್ ನೋಡಿಕೊಳ್ಳಲು, ಜಿಮ್ ಟ್ರೈನರ್ ಹೀಗೆ ಕೆಲಸ ಮಾಡುವ ಆಳುಕಾಳುಗಳು ಇದ್ದಾರೆ.


ನಾನು ನನ್ನ ಮನಸ್ಸಿಗೆ ಇಷ್ಟ ಇದ್ದಾಗ ಕಾಲೇಜಿಗೆ ಹೋಗುತ್ತೇನೆ ಇಲ್ಲದಿದ್ದರೆ ಪಾರ್ಟಿ ಅಲ್ಲಿ ಇರುತ್ತೇನೆ ಅಲ್ಲಿಗೆ ಸ್ನೇಹಿತರು ಬರುತ್ತಾರೆ. ಮನೆಗೆ ಶಾಪಿಂಗ್ ಮಾಲ್ ಬರುತ್ತದೆ ಅಂದರೆ ಹೊಸ ವಿನ್ಯಾಸದ ಉಡುಗೆ ತೊಡುಗೆಗಳು ಮನೆಗೆ ತಂದುಕೊಡುತ್ತಾರೆ. ನಮ್ಮ ಮನೆಯಲ್ಲಿ ಎಷ್ಟು ಕಾರುಗಳಿವೆ ಎಂದರೆ ಎಣಿಸಲೂ ಸಾಧ್ಯವಿಲ್ಲ.


ಸಿನಿಮಾದವರ ಪಾರ್ಟಿಯನ್ನು ಬಿಟ್ಟು ಬೇರೆ ಯಾವ ಕಾರ್ಯಕ್ರಮಕ್ಕೆ ನಾವು ಭಾಗವಹಿಸುವುದಿಲ್ಲ. ಸಂಬಧಿಗಳು ಯಾರೆಂದು ತಿಳಿದಿಲ್ಲ. ಮನೆಯಲ್ಲೇ ಬ್ಯೂಟಿ ಪಾರ್ಲರ್ ಕೂಡ ಇದೆ. ಹಾಲಿಡೇ ಹೋಗಬೇಕೆಂದರೆ ವಿದೇಶಕ್ಕೆ ಹೋಗಬೇಕು. ನಮ್ಮ ದೇಶದಲ್ಲಿ ಯಾವ ಸ್ಥಳಗಳನ್ನು ನೊಡಿದ ನೆನಪಿಲ್ಲ ಕಾರಣ ನಾವು ಏಲ್ಲಿಗೆ ಹೋಗಬೇಕೆಂದರೂ ನಮಗೆ ಸೆಕ್ಯೂರಿಟಿ ಬೇಕು ಆದ್ದರಿಂದ ನಾವು ಹೆಚ್ಚಾಗಿ ಎಲ್ಲೂ ಹೋಗುವಂತಿಲ್ಲ.


"ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಅನ್ನುವ ಗಾದೆಯ ಹಾಗೆ.


ಆದರೆ ನಾನು ಸಣ್ಣವಳಿದ್ದಾಗ ಈ ರೀತಿ ಇರಲಿಲ್ಲ ನಾನು ಸಾಮಾನ್ಯರಂತೆ ಖುಷಿಯಾಗಿದ್ದೆ. ಆಗ ನಮ್ಮ ತಂದೆ ಸಣ್ಣದೊಂದು ಹೊಟೆಲ್ ನಡೆಸುತ್ತಿದ್ದರು. ನಾನು ಹೊಟೆಲ್ ಗೆ ಹೋಗುತ್ತಿದ್ದೆ ,ಅಲ್ಲಿ ಬರುವವರೆಲ್ಲಾ ನನ್ನನ್ನು ಪ್ರೀತಿಯಿಂದ ಚಂದನ ಎಂದು ಮತಾಡಿಸುತ್ತೀದ್ದರು. ಹೋಟೆಲ್ ನ ಪಕ್ಕದಲ್ಲಿ ಇದ್ದ ಆಟದ ಮೈದಾನದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಮರಳಿನಲ್ಲಿ ಮನೆ ಕಟ್ಟುವುದು, ಕುಂಟೆಬಿಲ್ಲೆ ಆಟ, ಜೂಟಾಟ ,ಗೋಲಿ ಆಟ ಆಡುತ್ತಿದ್ದೆ.

ನನ್ನ ತಾಯಿ ಒಂದು ಕ್ಷಣವೂ ನನ್ನನ್ನು ಬಿಟ್ಟಿರುತ್ತಿರಲಿಲ್ಲ. ತಂದೆ ದಿನಾಲು ಅಂಗಡಿಯಿಂದ ಬರುವಾಗ ಚಾಕ್ಲೇಟ್ , ತಿಂಡಿಗಳನ್ನು ತರುತ್ತೀದ್ದರು. ಹೋಟೆಲ್ ನಿಂದ ಬಂದೊಡನೆ ಅಪ್ಪ "ಮಗಳೇ ಎಲ್ಲಿದ್ದೀಯಾ ಬಾ ಎಂದು ಕರೆಯುತ್ತಿದ್ದರು".ತಿಂಗಳಿಗೊಮ್ಮೆ ಪ್ರವಾಸ ಹೋಗುತ್ತಿದ್ದೆವು. ಗೊಂಬೆ, ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು.


ನಮ್ಮ ಮನೆಯಲ್ಲಿ ಒಂದು ರೂಮು ಅಡುಗೆಮನೆ ಇತ್ತು. ಮನೆ ಸಣ್ಣದಾದರೂ ಮನಸ್ಸಿನಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತಿತ್ತು. ಮನೆಯಲ್ಲಿ ಪ್ರೀತಿ ಸದಾ ಸಿಗುತ್ತಿತ್ತು.


 ಶಾಲೆಗೆ ಬೇಸಿಗೆರಜೆ ಇದ್ದಾಗ ಅಜ್ಜನ ಮನೆಯಾದ ಸಂಡೂರಿಗೆ ಹೋಗುತ್ತಿದ್ದೇ ಅಲ್ಲಿ ನನ್ನ ಚಿಕ್ಕಪ್ಪ ಮತ್ತು ಅತ್ತೆ ಮಕ್ಕಳು ಬರುತ್ತಿದ್ದರು. ಅಜ್ಜಿ ನಮಗೆಲ್ಲ ಕೈತುತ್ತು ಕೊಡುತ್ತಿದ್ದರು ಅಜ್ಜಯ್ಯ ನಮಗೆ ಕಥೆ ಹೇಳುತ್ತಿದ್ದರು. ತೋಟದಲ್ಲಿ ಬೆಳೆದ ಹಣ್ಣುಗಳನ್ನು ಕಿತ್ತು ತಿನ್ನುತ್ತೀದ್ದೆವು. ಹಳ್ಳಿಯಲ್ಲಿದ್ದ ಕಾಡಿಗೆ ಎಲ್ಲ ಮಕ್ಕಳು ಸೇರಿಕೊಂಡು ಹೋಗುತ್ತಿದ್ದೆವು. ಅಲ್ಲಿ ಸಿಗುತ್ತಿದ್ದ ಹಣ್ಣು, ಗಿಡ ಎಲೆ , ಪಕ್ಷಿಗಳ ಪುಕ್ಕ ,ಬೀಜಗಳು ಎಲ್ಲವನ್ನು ಸಂಗ್ರಹಿಸಿಕೊಂಡು ತಾತನ ಮನೆಯ ಜಗಲಿ ಕಟ್ಟೆಯಲ್ಲಿ ಕುಳಿತು ಕೊಂಡು ಎಲ್ಲರೂ ಒಟ್ಟಿಗೆ ಆಟವನ್ನು ಆಡುತ್ತಿದ್ದೆವು.


ಜಾತ್ರೆ ಬಂದಾಗ ನಮಗೆಲ್ಲ ಸಂಭ್ರಮ ದೇವರ ರಥವನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದೆವು. ಜಾತ್ರೆಯಲ್ಲಿ ತೇರು ಎಳೆಯುವುದು ಅಂಗಡಿಗಳಿಗೆ ಹೋಗಿ ಗೊಂಬೆ ,ಬಣ್ಣ ಬಣ್ಣದ ಬಳೆಗಳನ್ನು ಕೊಂಡುಕೊಳ್ಳುವುದು ಏನೋ ಒಂದು ಮಜಾ ಕೊಡುತ್ತಿತ್ತು.

ಆ ದಿನಗಳನ್ನು ನೆನೆಸಿಕೊಂಡರೆ ಮತ್ತೆ ಬಾಲ್ಯಕ್ಕೆ ಮರಳಬೇಕು ಎಂಬ ಆಸೆಯಾಗುತ್ತದೆ.


ನನಗೆ ಎಂಟು ವರ್ಷ ಇರಬೇಕು ಆಗ ತಂದೆಯ ಸ್ನೇಹಿತರೊಬ್ಬರು ಹೋಟೆಲ್ ಗೆ ಬಂದರು. "ನಾಟಕ ಕಂಪನಿಗೆ food supply ಮಾಡುತ್ತೀಯ ನಿನಗೆ ಕಾಂಟ್ರಾಕ್ಟ್ ಕೊಡುತ್ತೇನೆ " ಎಂದು ಹೇಳಿದರು. ಆಯಿತೆಂದು ನಮ್ಮ ತಂದೆಯವರು ಒಪ್ಪಿಕೊಂಡರು. ಅಂದಿನಿಂದ ಅಪ್ಪ ದಿನಾಲು ಮಧ್ಯಾಹ್ನದ ಭೋಜನವನ್ನು ತೆಗೆದುಕೊಂಡು ಕಂಪನಿಗೆ ಹೋಗುತ್ತಿದ್ದರು. ಸಂಜೆ ನಾಟಕ ನೋಡಿಕೊಂಡು ಹೋಟೆಲ್ ಗೆ ಪಾತ್ರೆ ಗಳನ್ನು ತೆಗೆದುಕೊಂಡು ವಾಪಸ್ಸು ಬರುತ್ತಿದ್ದರು. ಶಾಲೆಗೆ ರಜೆ ಇದ್ದಾಗ ನಾನು ಅವರೊಂದಿಗೆ ನಾಟಕ ನೋಡಲು ಹೋಗುತ್ತಿದ್ದೆ.


ಒಂದು ದಿನ " ಕೃಷ್ಣ ಲೀಲಾ" ನಾಟಕ ಪ್ರದರ್ಶನವಾಗಬೇಕು ಅಷ್ಟರಲ್ಲಿ ಅರ್ಜುನನ ಪಾತ್ರಧಾರಿ ತಲೆತಿರುಗಿ ಬಿದ್ದ. ಮೂರು ದಿನಗಳಿಂದ ಆತನಿಗೆ ಜ್ವರ ಬಂದಿತ್ತು. ಆಗ ನಾಟಕ ಕಂಪನಿಯ ನಿರ್ವಾಹಕರು ಏನು ಮಾಡುವುದೆಂದು ಯೋಚನೆ ಮಾಡುತ್ತ ಕುಳಿತುಕೊಂಡರು. ಅಪ್ಪಗೆ ನಾಟಕದಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ ಅಪ್ಪ ನಟನೆಯನ್ನು ಮಾಡುತ್ತಿದ್ದರು. ಆದ್ದರಿಂದ ನಾನು ಈ ಪಾತ್ರವನ್ನು ಮಾಡುತ್ತೇನೆ ಎಂದು ಕೇಳಿಕೊಂಡರು ಸರಿ ಎಂದು ನಾಟಕದ ತಂಡದ ಮುಖ್ಯಸ್ಥ ಒಪ್ಪಿಕೊಂಡರು. ತಂದೆ ನೋಡಲು ಸುಂದರವಾಗಿದ್ದರು , ಶರೀರ ಅರ್ಜುನನ ಪಾತ್ರಕ್ಕೆ ಹೊಂದುತ್ತಿತ್ತು. ದಿನಾಲೂ ನಾಟಕವನ್ನು ನೋಡಿದ್ದರಿಂದ ಅಂದು ಬಹಳ ಚೆನ್ನಾಗಿ ಆ ಪಾತ್ರವನ್ನು ನಿರ್ವಹಿಸಿದರು. ನಂತರ ಜನರು ಅವರ ನಟನೆಯನ್ನು ಬಹಳ ಮೆಚ್ಚಿದರು. ಅಂದಿನಿಂದ ನಾಟಕ ಮಂಡಳಿಯಲ್ಲಿ ಇವರು ಒಂದು ಭಾಗವಾಗಿ ಹೋದರು.


ದಿನೇದಿನೇ ಹೋಟೆಲ್ ವ್ಯವಹಾರ ಕಡಿಮೆಯಾಗಲಾರಂಭಿಸಿತು. ತಂದೆಯವರಿಗೆ ಆಸಕ್ತಿಯು ಕಡಿಮೆಯಾಗಿತ್ತು. ತಾಯಿ ಹೋಟೆಲನ್ನು ನೊಡಿಕೊಳ್ಳಲಾರಂಭಿಸಿದರು.


ಒಮ್ಮೆ ನಾಟಕ ನೋಡಲು ಪ್ರಸಿದ್ಧ ನಿರ್ಮಾಪಕರು ಕಂಪನಿಗೆ ಬಂದಿದ್ದರು. ಅಂದು ಅಪ್ಪನ ಅಭಿನಯ ನೋಡಿ ಸಿನಿಮಾದಲ್ಲಿ ನಟನೆ ಮಾಡುವಂತೆ ಕೇಳಿಕೊಂಡರು. ಅಂದಿನಿಂದ ನಮ್ಮ ತಂದೆಯ ಸಿನಿಮಾದ ಜರ್ನಿ ಆರಂಭವಾಗಿದ್ದು ನಿಲ್ಲಲೇ ಇಲ್ಲ. ಜನಪ್ರಿಯ ನಟನಾದರು.


ಅವರು ಪ್ರಸಿದ್ಧಿಯಾದಂತೆ ನಮ್ಮ ಖಾಸಗಿತನವೇ ಮರೆಯಾಗುತ್ತ ಬಂದಿತ್ತು ಅಷ್ಟೇ ಅಲ್ಲ ತಂದೆಯವರ ನಡವಳಿಕೆಯಲ್ಲಿ ಕೂಡ ಬದಲಾವಣೆಯಾಯಿತು. ನಾನು ಅಮ್ಮ ನಮ್ಮ ಕುಟುಂಬ ಪ್ರಪಂಚವಾಗಿತ್ತು ಆದರೆ ಪ್ರಸಿದ್ಧ ನಟನಾದ ಮೇಲೆ ಅವರ ಪ್ರಪಂಚವೇ ಬದಲಾಯಿತು. ಸಿನಿಮಾದವರು ಮೀಡಿಯಾದವರು ಅವರ ಪ್ರಪಂಚವಾದರೂ.


ಅವರು ನನ್ನನ್ನು ಮಾತನಾಡಿಸಿದರೆ ಅದೃಷ್ಟವೆಂಬಂತೆ ಅನಿಸತೊಡಗಿತ್ತು. ಯಾವಾಗಲೂ ಶೂಟಿಂಗ್ ಎಂದು ಬಿಜಿಯಾಗಿರುತ್ತಾರೆ. ಅವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಿ ಏಸ್ಟೋ ದಿನಗಳಾಗಿದೆ. ಅದಲ್ಲದೆ ಅವರು ಪಾರ್ಟಿ ಎಂಬ ಹೆಸರಿನಲ್ಲಿ ಮದ್ಯಪಾನ ಧೂಮಪಾನ ಬೇರೆ ಚಟಗಳನ್ನು ಕೂಡ ರೂಢಿ ಮಾಡಿಕೊಂಡಿದ್ದಾರೆ. ಬರಬರುತ್ತಾ ಅವರಿಂದ ನಮಗೆಲ್ಲಾ ಅದು ಅನಿವಾರ್ಯವಾಯಿತು. ಅವರ ಸಿನಿಮಾ ಸ್ನೇಹಿತರು ಮನೆಗೆ ಬಂದರೆ ಮುಜುಗರವಾಗುತ್ತದೆ. ಅವರ ಸ್ನೇಹಿತರು ಅಸಭ್ಯವಾಗಿ ಮುಟ್ಟಿ ಮಾತನಾಡಿಸುತ್ತಾರೆ ,ಅಸಭ್ಯವಾಗಿ ನೋಡುತ್ತಾರೆ. ಎಲ್ಲರೂ ಆಗಲ್ಲ ಆದರೆ ಬಹಳ ಮಂದಿ ಹೀಗೆ ಇರೋದು.


ಅದು ಸಾಲದೆಂಬಂತೆ ತಂದೆ-ತಾಯಿಯರ ಮಧ್ಯೆ ಸಂಬಂಧವು ಕೂಡ ಹಾಳಾಗಿ ಹೋಗಿದೆ. ಮೊದಮೊದಲು ನನ್ನ ತಂದೆ ಹೊಸ ಸಿನಿಮಾ ನಟಿಯರ ಜೊತೆ ಏಕಾಂಗಿತನದಿಂದ ಕಾಲಕಳೆಯುತ್ತಿದ್ದರು. ಬಹಳ ಸಲುಗೆಯಿಂದ ವರ್ತಿಸುತ್ತಿದ್ದರು.ಇಬ್ಬರೂ ಇದೇ ವಿಷಯಕ್ಕೆ ಜಗಳವಾಡುತ್ತಿದ್ದರು. ಅಪ್ಪ ಮನೆಗೆ ಬರುವುದೇ ಕಡಿಮೆಯಾಯಿತು. ಅಮ್ಮ ದಿನವೂ ಇದನ್ನು ಸಹಿಸಿಕೊಂಡು ಸಾಕಾಗಿ ಕೊನೆಗೆ ತಾವೇ ಬದಲಾಗಲು ಆರಂಭಿಸಿದರು. ಮಹಿಳಾ ಮಂಡಳಿ ಪಾರ್ಟಿ ಹೀಗೆ ತಮ್ಮದೇ ಆದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದರು.


ತಂದೆಯವರ ಕೆಟ್ಟ ನಡವಳಿಕೆ ಹಾಗೂ ಕೆಟ್ಟ ಚಟಗಳಿಂದ ಮಾಧ್ಯಮಗಳಲ್ಲಿ ವಿರೋಧಿಗಳು ಸೃಷ್ಟಿಯಾದರು. ಸ್ವಲ್ಪ ದಿನ ಮಾಧ್ಯಮಗಳು ಅವರ ಬಗ್ಗೆ ಕೆಟ್ಟದಾಗಿ ರಿಪೋರ್ಟ್ ಕೊಡುತ್ತಿದ್ದರು ಆದರೂ ಕೂಡ ಜನರು ಮಾತ್ರ ತಂದೆಯವರ ಮೇಲಿನ ಅಭಿಮಾನವನ್ನು ಕಡಿಮೆ ಮಾಡಿಕೊಂಡಿಲ್ಲ.


ಸಿನಿಮಾದಲ್ಲಿ ನಟಿಸುವವರು ಒಳ್ಳೆಯ ಪಾತ್ರಗಳನ್ನು ಮಾಡಿದ ಕೂಡಲೇ ನಿಜಜೀವನದಲ್ಲೂ ಹಾಗೆ ಇರುತ್ತಾರೆ ಎಂಬ ಕುರುಡು ನಂಬಿಕೆಯಿಂದ ಜನರು ಅಭಿಮಾನ ತೋರಿಸುತ್ತಾರೆ. ಅದನ್ನು ಬಂಡವಾಳವಾಗಿ ಮಾಡಿಕೊಂಡು ಹಣ ದೋಚುವುದು ಕೆಲವು ನಟರ ಅಭ್ಯಾಸವಾಗಿಬಿಟ್ಟಿದೆ. ಜನರು ತಮ್ಮ ಕಣ್ಣಿಗೆ ಕಟ್ಟಿಕೊಂಡ ಕಪ್ಪು ಪಟ್ಟಿಯನ್ನು ತೆಗೆದು ನಟರು ಕೂಡ ಸಾಮಾನ್ಯ ಮನುಷ್ಯ ಅವರ ವೃತ್ತಿಯನ್ನು ಅವರು ಮಾಡುತ್ತಾರೆ ಅವರೇನು ದೇವತೆಗಳಲ್ಲ ಎಂಬುದನ್ನು ತಿಳಿದು ಕೊಂಡು ಅವರಿಗೆ "ಸೆಲೆಬ್ರಿಟಿ ಸ್ಥಾನವನ್ನು" ಕೊಡುವುದನ್ನು ನಿಲ್ಲಿಸಿದರೆ ಸಮಾಜದ ಉದ್ಧಾರವಾಗಬಹುದು. ನಮ್ಮಂತೆ ಮಕ್ಕಳು "ಸೆಲೆಬ್ರಿಟಿ ಮಕ್ಕಳಾಗಿ" ಹಿಂಸೆಯನ್ನು ಅನುಭವಿಸುವುದು ಕಡಿಮೆಯಾಗುವುದು.


ಮತ್ತೆ ನನ್ನನ್ನು ಸಿನಿಮಾ ಎಂಬ ಲೋಕದಲ್ಲಿ ಬಲವಂತವಾಗಿ ತಳ್ಳಲು ನಮ್ಮ ತಂದೆ ತಾಯಿಗಳು ನಿರ್ಧರಿಸಿದ್ದಾರೆ. ನನಗೆ ನಟನೆ ಎಂಬುದು ಏನೆಂದು ಗೊತ್ತಿಲ್ಲ ಅದರ ಬಗ್ಗೆ ಆಸಕ್ತಿ ಕೂಡ ಇಲ್ಲ ಆದರೆ ನನ್ನ ವೇಷಭೂಷಣವನ್ನು ಸೆಲೆಬ್ರಿಟಿ ಅಂತೆ ಮಾಡಿ ಬಲವಂತವಾಗಿ ನನ್ನಿಂದ ನಟನೆ ಮಾಡಿಸಲು ಈ ಸಿನಿಮಾ ಜಗತ್ತು ಹಾತೊರೆಯುತ್ತಿದೆ. ನಾನು ಸಿನಿಮಾರಂಗದಲ್ಲಿ ಜನಪ್ರಿಯವಾಗದಿದ್ದರೆ ಒಬ್ಬ ಸೆಲೆಬ್ರಿಟಿ ಗೆ ನನ್ನ ಮದುವೆ ಮಾಡಿ "ಸೆಲೆಬ್ರಿಟಿ ಹೆಂಡತಿ "ಎಂಬ ಹಣೆಪಟ್ಟಿಯನ್ನು ಕಟ್ಟಲು ಕೂಡ ತಯಾರಾಗುತ್ತಾರೆ !!!


ನನಗೆ ನನ್ನದೇ ಆದ ವೈಯಕ್ತಿಕ ಬದುಕಿದೆ ಆಸೆ-ಆಕಾಂಕ್ಷೆಗಳಿಗೆ ದಯವಿಟ್ಟು ನನ್ನನ್ನು "ಸೆಲೆಬ್ರಿಟಿ ಮಗಳು" ಎಂದು ಕರೆಯುವುದನ್ನು ನಿಲ್ಲಿಸಿ.ನನ್ನ ಖಾಸಗಿ ಬದುಕಿಗೆ ಅನುಕೂಲ ಮಾಡಿ ಕೊಡಿ ಎಂದು ಕೂಗಿ ಕೂಗಿ ಹೇಳಬೇಕು ಎಂದು ಮನಸ್ಸು ಬಯಸುತ್ತಿದೆ.


Rate this content
Log in

Similar kannada story from Tragedy