ಮುಕ್ತಾಯ
ಮುಕ್ತಾಯ
ಬೆಳಗ್ಗೆಯಿಂದ "ಒಂದೇ ಸಮನೇ ತಲೆನೋವು ,ಸಣ್ಣ ಜ್ವರ ". ಒಂದು ಪ್ಯಾರಸಿಟಮಾಲ್ ನುಂಗಿ ಕೆಲಸಕ್ಕೆ ಬಂದಿದ್ದೆ.
ಕೆಲಸ ಮಾಡುತ್ತಿರುವಾಗಲೇ , ಮನೆಯಿಂದ ಅಮ್ಮನ ಫೋನ್ ಬಂದಿತ್ತು . "ಹಲೋ" ಎಂದವನಿಗೆ ಅತ್ತ ಕಡೆಯಿಂದ ಕೇಳಿಸಿದ್ದು "ಅಮ್ಮನ ಅಳು" . "ಒಂದೂ ಮಾತಿಲ್ಲದ ಅಳು ".ತಕ್ಷಣ ಗೊತ್ತಾಗಿತ್ತು "ಏನೋ ಅನಾಹುತ ಆಗಿದೆ" ಎಂದು . ತಿರುಗಿ ಅಮ್ಮನಿಗೆ ಫೋನ್ ಮಾಡಿದ್ದೆ .ಆಗ ಪ್ರಯಾಸದಿಂದ ಹೇಳಿದ ಮಾತು ಒಂದೇ ..."ನಿನ್ನಪ್ಪನಿಗೆ ಪ್ಯಾರಲಿಸಿಸ್ ಆಗಿದೆ ಕಣೋ " ,ಎಂದು . ಆಸ್ಪತ್ರೆ ಹೆಸರು ಹೇಳಿ , ಫೋನ್ ಇಟ್ಟು ಬಿಟ್ಟಿದ್ದಳು . ಆರೋಗ್ಯವಾಗಿಯೇ ಇದ್ದ , ಅಪ್ಪ , ಅಮ್ಮ ಮತ್ತು ತಂಗಿಯನ್ನು ಹತ್ತು ವರ್ಷದ ಬಳಿಕ , ನಾ ಕೆಲಸ ಮಾಡುವ ಅಮೆರಿಕಕ್ಕೆ ಒತ್ತಾಯಮಾಡಿ ಕರೆಸಿದ್ದೆ . "ಮೂರು ತಿಂಗಳ ಅವಧಿಗೆ ಇಲ್ಲಿಗೆ ಬಂದವರು" , ಕೇವಲ ಹತ್ತು ದಿನದಲ್ಲಿ "ಅಪ್ಪನಿಗೆ "ಬೇಜಾರು ಆಗಿತ್ತು .
"ಮೊದಲು ನಮ್ಮನ್ನು ಊರಿಗೆ ಕಳುಹಿಸು ಮಾರಾಯ . ಇಲ್ಲಿ ಬಂದು ನಿನ್ನ ನಾಯಿಯ ಹೇಲು ತೆಗೆಯುವಂತೆ ಆಯ್ತು ನೋಡು" , ಎಂದು ನಕ್ಕಿದ್ದರು. ಆದರೆ ಅದೇ ಸಮಯಕ್ಕೆ ಗ್ರಹಚಾರದಂತೆ ವಕ್ಕರಿಸಿತ್ತು "ಕೂರೋನ ".
ಇಂತಹ ಮುಂದುವರೆದ ದೇಶದಲ್ಲಿ , "ಇದು ಒಂದು ಲೆಕ್ಕವೇ ಅಲ್ಲ ಎಂಬ ಭಾವನೆ ನನ್ನದು ". ನಿಜ , ಅಮೆರಿಕ ಅಂದರೆ ಭಾರತದ ಹಾಗಲ್ಲ . ಇಲ್ಲಿ ಪ್ರತಿಯೊಂದಕ್ಕೂ ಒಂದು" ಶಿಸ್ತು" ಇದೆ . ಅಪ್ಪ-ಅಮ್ಮನ ಭೇಟಿಗೆ ಕೂಡ ಇಲ್ಲಿ "ಅಪಾಯಿಂಟ್ಮೆಂಟ್ "ಇದೆ . ದೇವಸ್ಥಾನವಿದೆ , ಆದರೆ "ಗಂಟೆ "ಜೋರಾಗಿ ಬಾರಿಸು ವಂತಿಲ್ಲ . ಇಲ್ಲಿ "ನೀರಿನಕಿಂತ ಬೀರು "ಕಡಿಮೆ ದರದಲ್ಲಿ ಸಿಗುತ್ತದೆ ನಿಜ ...ಆದರೆ ನೀರಿನಲ್ಲಿ , ಭಾರತದ ರುಚಿ ಯಾವತ್ತೂ ಕಾಣಿಸಿಲ್ಲ ನನಗೆ . ಯಾವುದೇ ಸಂಸ್ಕೃತಿ ಇಲ್ಲವೇ ಇಲ್ಲ ಇಲ್ಲಿ. "ಕೇವಲ ಮೋಜು ಕುಣಿತದ ಸಂಸ್ಕೃತಿಗೆ ಆಗಿಹೋಗಿದೆ " . ಓದುವಾಗ ಇದ್ದ ಅಮೆರಿಕದ "ಹುಚ್ಚು ಈಗಿಲ್ಲ ನನಗೆ ನಿಜ ". ಆದರೆ "ನನ್ನವಳಿಗೆ , ನನ್ನ ಮಕ್ಕಳಿಗೆ , ಅಮೆರಿಕಕ್ಕಿಂತ ಬೇರೆ ದೇಶವೇ ಇಲ್ಲ". ಅಪ್ಪನನ್ನು ನೋಡಲು ಧಾವಿಸಿ ಹೋಗಿದ್ದೆ ಆಸ್ಪತ್ರೆಯ ಕಡೆಗೆ . ಆದರೆ ನನ್ನ "ದುರ್ದೈವ" ಆಸ್ಪತ್ರೆಯ ಬಾಗಿಲಲ್ಲೆ..."ನನ್ನ ಜ್ವರ ಪತ್ತೆ ಹಚ್ಚಿ ನನ್ನನ್ನು ಕೂರೋನ ಶಂಕಿತರ ಪಟ್ಟಿಯಲ್ಲಿ ಸೇರಿಸಿದ್ದು "ನಡೆದುಹೋಗಿತ್ತು . ಒಮ್ಮೆ "ಅಪ್ಪನ ನೋಡಿ ಬರುತ್ತೇನೆ "ಎಂದರೂ ಕೂಡ ,ನನ್ನನ್ನು ಅದೇ "ಆಸ್ಪತ್ರೆಯಲ್ಲಿ "ಮಲಗಿಸಿದ್ದರು. ಸಂಪೂರ್ಣ ಗಾಜಿನ ಕೊಠಡಿಯಲ್ಲಿ . ಅಪ್ಪನ ಚಿಂತೆ ನನಗಾದರೆ , ಆಸ್ಪತ್ರೆಯವರಿಗೆ ...ನನ್ನ ರಕ್ತ ತೆಗೆಯುವ ಹೆಬ್ಬಯಕೆ . ಗೋಗರೆದೆ ಸಿಬ್ಬಂದಿ ಬಳಿ , ಡಾಕ್ಟರ್ ಬಳಿ ...ಒಮ್ಮೆ ಹೋಗಿ "ಅಪ್ಪನ " ನೋಡಿಕೊಂಡು ಬರುತ್ತೇನೆ ಎಂದು. ಆದರೆ ಡಾಕ್ಟರ್ ಹೇಳಿದ್ದು ಒಂದು ಕ್ಷಣ "ನನ್ನ ಎದೆ ಬಡಿತವನ್ನೇ ನಿಲ್ಲಿಸಿತ್ತು ". " ಕೂರೋನ ಪಾಸಿಟಿವ್ ಬಂದಿದೆ ನಿಮಗೆ ಎಂದು ಹೇಳಿ ", ಅಲ್ಲಿಯೇ ವೆಂಟಿಲೇಟರ್ ಚಿಕಿತ್ಸೆ ಶುರುಮಾಡಿದ್ದರು .
ನನ್ನ ಫೋನ್ ಕೂಡ "ಕಸಿದುಕೊಂಡಿದ್ದರು ಅವರು". " ನಾನು ಇದೇ ಆಸ್ಪತ್ರೆಯಲ್ಲಿ ಇದ್ದೇನೆ ಅಪ್ಪ ಎಂದು ಕೂಗಿಕೊಳ್ಳಲು ಕೂಡ ಆಗದ ಸ್ಥಿತಿ ನನ್ನದು" . "ಅಮ್ಮ ಏನು ಅಂದುಕೊಂಡಿರಬೇಕು ನಾನಿನ್ನೂ ಬಂದಿಲ್ಲವೆಂದು ".
ತಂಗಿಗೆ ಕೂಡ ನಾನು "ಅಹಂಕಾರಿ "ಎಂದು ಅನಿಸಿರಬೇಕು. ಆದರೆ ಅಪ್ಪನಿಗೆ ,
" ಒತ್ತಾಯ ಮಾಡಿ ಕರೆಸಿದ ಅಪ್ಪನಿಗೆ ಮಾತ್ರ ಎಷ್ಟು ನೋವಾಗಿರಬೇಕು ". " ಚಿಕ್ಕ ಹಳ್ಳಿಯ ಪೋಸ್ಟ್ ಮಾಸ್ಟರ್ ಹುದ್ದೆಯಲ್ಲಿದ್ದ ಅವರು, ನನ್ನ ಓದಿಗಾಗಿ ನನ್ನ ಶ್ರೇಯಸ್ಸಿಗಾಗಿ ...ಎಲ್ಲಾ ತಮ್ಮ ಸುಖವನ್ನು ಬದಿಗಿಟ್ಟು ನನ್ನ ಬೆಳೆಸಿದ್ದು ನೆನಪಾಗಿ ಒಮ್ಮೆ ಕೆಮ್ಮು ಶುರುವಾಯಿತು ".
" ಕೆಮ್ಮು ಮಾತ್ರ ಜಾಸ್ತಿಯಾಗುತ್ತಲೇ ಇತ್ತು " . ಆದರೆ ಅದರ ಮಧ್ಯೆ ನನ್ನನ್ನು "ಕಂಗಾಲು"ಮಾಡಿದ್ದು , "ನನ್ನಿಂದ ಮನೆಯಲ್ಲಿ ಯಾರು ಯಾರಿಗೆ ಈ ಸೋಂಕು ಬಂದಿದೆ ಎಂದು" . ಎದೆಯಲ್ಲಿ ಧೈರ್ಯವಿತ್ತು ,ಮೊಟ್ಟಮೊದಲ ಬಾರಿಗೆ ಅಮೆರಿಕಕ್ಕೆ ಕಾಲಿಟ್ಟ ದಿನದ ಆತ್ಮವಿಶ್ವಾಸವಿತ್ತು . ಖಂಡಿತ "ಇನ್ನೊಂದೆರಡು ದಿನದಲ್ಲಿ ನನಗೆ ಗುಣವಾಗುತ್ತದೆಂದು". ಆದರೆ ಎರಡು ದಿನ ಕಳೆದರೂ "ನನಗೆ ಕೆಮ್ಮು ಹೆಚ್ಚಾಗುತ್ತಲೇ ಹೋಗುತ್ತಿತ್ತು" .ಆದರೂ "ಒಮ್ಮೆ ಅಪ್ಪನ ನೋಡಿಕೊಂಡು ಬರುವ ಆಸೆ ". ಅದನ್ನೇ ವ್ಯಕ್ತಪಡಿಸಿದ್ದೆ "ವೈದ್ಯರ "ಬಳಿ. " ನಿನ್ನಿಂದ ನಿನ್ನ ತಾಯಿ ,ತಂಗಿ ಕೂಡ ಸೂಂಕಿತರಾಗಿದ್ದಾರೆ ...ಸದ್ಯ ನೀ ಮಾಡುವ ಉಪಕಾರವೆಂದರೆ ನೀನಿಲ್ಲೇ ಮಲಗುವುದು " ಎಂದು ಹೇಳಿ ಹೋಗಿದ್ದರು ಅವರು.
ಸ್ವಲ್ಪ ಸಮಯದ ನಂತರ ಕೈಗೆ ಬೇಡಿ ಬಂದಿತ್ತು , "ನಾನೆಲ್ಲಿ ಎದ್ದು ಹೊರಗೆ ಹೋಗಿ ಬಿಡುತ್ತೇನೆ "ಎಂಬ ಭಯದಿಂದ .
ತಲೆ ಮೇಲೆ ಬಂಡೆ ಬಿದ್ದ ಅನುಭವ . ಆದರೂ ನಮ್ಮ ಅಮೆರಿಕದಲ್ಲಿ , ಖಂಡಿತ ಚಿಕಿತ್ಸೆ ಇದ್ದೇ ಇರುತ್ತದೆ ಎಂಬ ಭಾವನೆ ನನ್ನದು. ಆರು ದಿನ ದಾಟಿ ಹೋಗಿತ್ತು , ಗಾಜಿನ ಕೊಠಡಿಯಲ್ಲಿ ಬಂದಿಯಾಗಿ ಹೋಗಿದ್ದೆ ನಾನು . ವಿಪರಿಮಿತವಾಗಿ ಕಾಡುವ ಕೆಮ್ಮು , ಜೊತೆಗೆ ಜ್ವರ ನಿಲ್ಲುವ ಗೋಚರ ಕೂಡ ಕಾಣಿಸಲಿಲ್ಲ . ನನ್ನ ರೋಗದ ಬಾಧೆಕಿಂತ , ನನ್ನ ಹಿಂಸೆಗೆ ಈಡು ಮಾಡಿದ್ದು ಅಪ್ಪ , ಅಮ್ಮ ..ಮತ್ತು ಮುದ್ದಿನ ತಂಗಿ . "ಅವರ ಪರಿಸ್ಥಿತಿ ಏನು ಆಗಿದೆ ಎಂದು ಹೇಳುವವರು ಇರಲಿಲ್ಲ ". ಅಷ್ಟರಲ್ಲೇ ಗಾಜಿನ ಕೊಠಡಿಯ ಅತ್ತ , "ಶವವೊಂದನ್ನು" ನಿಲ್ಲಿಸಿ , "ಮುಖಕ್ಕೆ ಮುಚ್ಚಿದ ಬಟ್ಟೆ ತೆಗೆದಿದ್ದಳು "ನರ್ಸ್ ." ಅಪ್ಪ ಅದು ".ಜಗ್ಗಿ ನೋಡಿದೆ , "ಬೇಡಿಯನ್ನು "..ಅಪ್ಪನ ಬಳಿ ಧಾವಿಸಿ ಹೋಗಬೇಕೆಂದು
."ಅಪ್ಪನ ಶವದ ಮುಖ ಆಗಲೇ ಮುಚ್ಚಿಬಿಟ್ಟು ಮುಂದೆ ತಳ್ಳಿ ಕೊಂಡು ಹೋಗಿದ್ದಳು ಆಕೆ. ಜೋರಾಗಿ ಕಿರುಚಿದ , "ಒಮ್ಮೆ ನನ್ನ ಹೊರಗೆ ಬಿಡಿ ಎಂದು "."ಅಪ್ಪನ ಮುಖ ಆದರೂ ನೋಡಿ ಬರುತ್ತೇನೆ "ಎಂದು .
ದ್ವನಿ ನನ್ನಲ್ಲೇ ಉಳಿಯಿತು . ಹೊರಗೆ ಯಾರಿಗೂ ಅದು ಕೇಳಿಸುತ್ತಿರಲಿಲ್ಲ. ಕಣ್ಣೀರು ಅದರಷ್ಟಕ್ಕೆ ಅದು , ಜಾರಿ ಕೆಳಗೆ ಹರಿದುಬರುತ್ತಿತ್ತು . ಅಪ್ಪನಿಗೆ ಏನು ಅನಿಸಿರಬೇಕು ತಾನು ಸಾಯುವಾಗ ?. ಇದ್ದ ಒಬ್ಬ ಮಗ ದೂರದ ಊರಿಗೆ ಕರೆಸಿಕೊಂಡು ,ತಮ್ಮನ್ನು ಅನಾಥರನ್ನಾಗಿ ಮಾಡಿ ಹೋದ ಎಂದೇ?. ಅಥವಾ ದುಡ್ಡಿನ ಹಿಂದೆ ಬಿದ್ದು ,ಅಮೆರಿಕದಲ್ಲಿ ಉಳಿದ ಮಗ ಕೂಡ ಅಮೆರಿಕದ ಮನುಷ್ಯನೇ ಆಗಿಹೋದ ಎಂದುಕೊಂಡನೇ ? . ಸತತವಾಗಿ ಬರುವ ಕೆಮ್ಮಿನಿಂದ ಕಣ್ಣೀರು , ತಾನಾಗೆ ಬರುತ್ತಿತ್ತು "ಅಪ್ಪನ ಶವ ನೋಡಿ ". ಮುಖ ನೋಡಲಾಗದೆ , ಕೆಮ್ಮು ಜಾಸ್ತಿಯಾಗಿತ್ತು , ಮಾನಸಿಕ ಆಘಾತದಿಂದ. ಇಡೀ ದಿನ ಗಾಜಿನ ಕೊಠಡಿಯಲ್ಲಿ ಕಳೆಯುತ್ತಿದ್ದೆ . ಆದರೆ ಮತ್ತೊಮ್ಮೆ ಕೆಮ್ಮು ಜಾಸ್ತಿಯಾಗಿ , ಮೂಗು ಬಾಯಿಯಲ್ಲಿ ರಕ್ತ ಬರತೊಡಗಿತ್ತು .."ತಂಗಿಯ ಹೆಣವನ್ನು ತಳ್ಳಿಕೊಂಡು ಹೋದಾಗ". ಕಣ್ಣಲ್ಲಿ ನೀರು ಬತ್ತಿ ಹೋಗಿತ್ತು . ಕೇವಲ ಮೂಕ ಪ್ರೇಕ್ಷಕನಾಗಿ ಉಳಿದು ಹೋಗಿದ್ದೆ . ಊರಿನಲ್ಲಿ ಸುಖವಾಗಿ ಇದ್ದ , ಹೆಚ್ಚುಕಡಿಮೆ ನನ್ನನ್ನು ಮರೆತೆ ಬಿಟ್ಟಿದ್ದ ...."ಅಪ್ಪ ಅಮ್ಮ ಮತ್ತು ಮುದ್ದು ತಂಗಿಯನ್ನು ನನ್ನಲ್ಲಿಗೆ ಕರೆಸಿ ಅವರಿಗೆ , ನಾನೇ ಕಾಯಿಲೆ ಅಂಟಿಸಿದ್ದೆ ". ಅಪ್ಪ , ತಂಗಿ ನಂತರ ಬರುವುದು "ಅಮ್ಮನ ಶವವೇ "ಎಂದು ಖಾತ್ರಿಯಾಗಿತ್ತು.
ಆಶ್ಚರ್ಯ ಎಂದರೆ ಹೆಂಡತಿ-ಮಕ್ಕಳ ವಿಷಯ ಕೂಡ ನೆನಪಾಗಿರಲಿಲ್ಲ . ಅವರು ಕೂಡ ನನ್ನ ಹಾಗೆ ಎಲ್ಲೋ ಆಸ್ಪತ್ರೆಯಲ್ಲಿ ಇರಬೇಕು ಅಥವಾ......ತಿರುಗಿ ಕಷ್ಟಪಟ್ಟು ಮಲಗಿದೆ , "ಹೊರಗಡೆ ಅಮ್ಮನ ಶವ ಬರಬಹುದೆಂದು ".
ಮೊದಲ ಬಾರಿಗೆ ಅಮೇರಿಕಾಕ್ಕೆ ಬಂದ ಮೇಲೆ ,"ಬೇಡಿಕೊಂಡೆ ದೇವರನ್ನು ". "ಅಮ್ಮನ ಶವ ನೋಡುವ ಮುನ್ನಾ ನನ್ನನ್ನೇ ಮೊದಲು ಕರೆಸಿಕೂ ಎಂದು"
