Natesh MG

Horror Fantasy Thriller

3.3  

Natesh MG

Horror Fantasy Thriller

ಮೃತ್ಯು ಚುಂಬನ .ಒಂದು ಆತ್ಮದ ಕಥೆ.

ಮೃತ್ಯು ಚುಂಬನ .ಒಂದು ಆತ್ಮದ ಕಥೆ.

22 mins
710


ಬಾಡಿಗೆಯ ವಿಚಾರಕ್ಕೆ , ಹೀನಾಯವಾಗಿ ಬೈಯುತ್ತಾ ಇದ್ದ ....ಮನೆಯ "ಮಾಲಿಕನ "ಎದುರಿಗೆ ತಲೆ ತಗ್ಗಿಸಿ ಕುಳಿತಿದ್ದ.

        ಆರು ತಿಂಗಳು "ಬಾಡಿಗೆ" ಕೊಡಬೇಕಿತ್ತು ಅವ.

"ಯಾವನೋ ಕಥೆ ಬರೆಯುವವನಿಗೆ , ಮನೆ ಬಾಡಿಗೆಗೆ ಕೊಟ್ಟರೆ ಹೀಗೆ ಆಗುವುದು "ಎಂದು ಮೆಟ್ಟಿಲು ಇಳಿದು ಹೋಗಿದ್ದ ಆತ.

        

    ಇದೇ ಮಾತು , ಇದೇ ಶೈಲಿಯಲ್ಲಿ ಹೇಳಿ ಹೋಗಿದ್ದಳು ಗೆಳತಿ .

"ಕಥೆಗಾರನಿಗೆ ಭವಿಷ್ಯವೇ ಇಲ್ಲ "ಎಂದಿದ್ದಳು ಸೌಮ್ಯ.

         ನಿಜ ಇತ್ತು ಅವಳ ಮಾತಿನಲ್ಲಿ .

ಆದರೆ ಅವನ ಲೇಖನಿ ಮಾತ್ರ , ಅವನದೆ ಹೃದಯ .

   ಚಿತ್ರದಲ್ಲಿ ಮೂಡುವ ರೂಪ , ಅವನದೇ ಭಾವನೆ .

ಅದರಲ್ಲಿನ ಪಾತ್ರಗಳು , ಅವನದೇ ಕಥೆ ಅನಿಸಿ ಬಿಡುತ್ತಿತ್ತು.

       ಗೆಳತಿ ಬಿಟ್ಟು ಹೋಗಿದ್ದಳು , ಅವನ ಬೆಲೆಯಿಲ್ಲದ ಕಲೆಯನ್ನು ನೋಡಿ.

ಮನಸು "ಘಾಸಿ "ಆದಾಗ , ಬರೆದ ಕಾದಂಬರಿಗಳು ಸೋತು ಹೋಗುತ್ತಿತ್ತು.

  ಬಣ್ಣಗಳು ಮಾಸಿ , ಚಿತ್ರವನ್ನು "ಹಾಳು "ಮಾಡುತಿತ್ತು .

             ಸಾಲಾಗಿ ಬರೆದ ಆರು ಕಾದಂಬರಿಗಳು , ಆತನಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು .

          ಈ ಹಿಂದೆ .

   ಪ್ರಕಾಶನ "ಸಂಸ್ಥೆಯವರು" ಮುಗಿಬೀಳುವ ಕಾಲವೊಂದಿತ್ತು.

   ಸೋತು ಹೋಗಿದ್ದ ಅವ ಜೀವನದಲ್ಲಿ .

ಸಾಲಾಗಿ ಇತ್ತೀಚಿಗೆ "ಬರೆದ "ಕಾದಂಬರಿಗಳು , ಸೋತು ಹೋಗಿದ್ದಕ್ಕೆ.

ಆಗಲೇ ಹೊಡೆದಿತ್ತು ಮೊಬೈಲ್ ಮೆಸ್ .

ಸ್ವಾಭಾವಿಕ ಎಂಬಂತೆ ತೆಗೆದು ನೋಡಿದ್ದ. ಆಶ್ಚರ್ಯ ಆಗಿತ್ತು .

ಅವನ "ಖಾತೆಗೆ" ಹತ್ತು ಲಕ್ಷ ಜಮಾ ...

ಒಟ್ಟು ಬ್ಯಾಲನ್ಸ್ 10.01002 ರೂಪಾಯಿ.

            ಕಕ್ಕಾಬಿಕ್ಕಿ ಆಗಿ , ನೂರು ಸಲ ನೋಡಿದ ಅದನ್ನೇ .

      ಜೀವಮಾನದಲ್ಲಿ ಮೊದಲ ಬಾರಿಗೆ , ಇಷ್ಟು ಅಂಕಿಯ ದುಡ್ಡನ್ನು ನೋಡುತ್ತಿದ್ದ .

              ಯಾರಿಗೋ ಹೋಗಬೇಕಾದ ದುಡ್ಡು , ಅವನ "ಖಾತೆಗೆ "ಬಂದಿದೆ ಎನ್ನುವುದು ಖಚಿತ ಅವನಿಗೆ.

   ಗಡಿಬಿಡಿಯಿಂದ "ನಡೆದು "ಹೋಗಿದ್ದ ಸೀದಾ

ಬ್ಯಾಂಕ್ ಗೆ.

              ಹೇಳಿದ್ದ , "ಅದು ತನ್ನ ದುಡ್ಡು ಅಲ್ಲವೆಂದು" .

ನಾಲ್ಕು ಬಾರಿ , ಅಲ್ಲಿದ್ದ ನೌಕರ ಹೇಳಿದ ಮೇಲೆಯೇ ಅರಿವಾಗಿದ್ದು.

ಅಶೋಕ್ ಸಾಳ್ವೆ ಎಂಬ ಮನುಷ್ಯ , ಕಲ್ಕತ್ತಾ ದಲ್ಲಿ ...ಹಳೆಯ ಆತನ "ಬಹಳಷ್ಟು "ಕಾದಂಬರಿಗಳ ಪ್ರತಿಗಳನ್ನು ಕೊಂಡನೆಂದು.

ಅದಕ್ಕೆ ಬೆಲೆ ಕಟ್ಟಿ , ಆತನೇ ಹಾಕಿದ್ದಾನೆ ಎಂದು .

     ಎಲ್ಲವೂ "ಕನಸಿನಲ್ಲಿ "ನಡೆದಂತೆ ಭಾಸವಾಗಿತ್ತು.

ಐವತ್ತು ಸಾವಿರ ತೆಗೆದುಕೊಂಡು , ಅಲ್ಲಿಂದ ಹೊರ ಬಿದ್ದಿದ್ದ .

        ದಾರಿಯಲ್ಲಿ ಗುಣಗುಣಿಸಿತು ಮೊಬೈಲ್.

"ನಾ ಸಾಳ್ವೆ "ಎಂದು ...ಎಂದು ಪರಿಚಯ ಮಾಡಿಕೊಂಡಿದ್ದ ಅತ್ತ ಕಡೆಯ ಮನುಷ್ಯ.

        "ನನ್ನ ಮಗಳು ನಿಮ್ಮ ಕಾದಂಬರಿಗಳ ಅಭಿಮಾನಿ ,

ಅದಕ್ಕೆ ಎಲ್ಲವನ್ನೂ ನಾನೇ ಕೊಂಡು ಕೊಂಡೆ "...

          ಕೇಳುತ್ತಿದ್ದ ವಿಕಾಸ್ , ಮರು ಮಾತನಾಡದೆ .

"ಕಥೆ ಕಾದಂಬರಿಗಳ ವಿಷಯದ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ .

       ದುಡ್ಡು ಕಡಿಮೆಯಾದರೆ ಹೇಳಿ "ಎಂದಿದ್ದ ಸಾಳ್ವೆ.

"ಇಲ್ಲಾ , ನಾ ಇದನ್ನು ನಿರೀಕ್ಷೆ ಮಾಡಿರಲಿಲ್ಲ "ಎಂದಷ್ಟೇ ಹೇಳಲು ಸಾಧ್ಯವಾಗಿದ್ದು ವಿಕ್ಕಿಗೆ.

         "ಎಲ್ಲವನ್ನೂ ಮಗಳ ಬಯಕೆಯಂತೆ , ನಿಮ್ಮ ಕಾದಂಬರಿಗಳನ್ನು ಆಕೆಯ "ರೂಮಿನಲ್ಲಿ "ಇರುವ ಲೈಬ್ರರಿಯಲ್ಲಿ ಅಲಂಕರಿಸಿದೆ ನಾನು "...ಎನ್ನುವಾಗ ಆತ್ತಲಿನ "ದ್ವನಿ "ಸ್ವಲ್ಪ ಕುಸಿದಿತ್ತು .

          ಜೊತೆಗೆ ಆತನ ಕೊನೆಯ ಮಾತು ಮಾತ್ರ , ವಿಕ್ಕಿಗೆ ಚಿಂತಿಸುವಂತೆ ಮಾಡಿತ್ತು .

"ಕೇರಳದಲ್ಲಿ ನನ್ನದೊಂದು ಎಸ್ಟೇಟ್ ಕಾಲಿ ಇದೆ.

     ನನ್ನ ಮಗಳ ಬಯಕೆಯಂತೆ , ನೀವೊಂದು ಅಪರೂಪದ ಕಾದಂಬರಿ ಬರೆದುಕೊಡಬೇಕು "ಎಂದು ಯಾಚಿಸಿ ಕೇಳಿದ ಧ್ವನಿಗೆ ...."ಇಲ್ಲಾ "ಎಂದು ಹೇಳಲಿಕ್ಕೆ ಕಷ್ಟವಾಗಿತ್ತು.

       ಒಂದಷ್ಟು ದಿನ ಹೊರಗೆ ಹೋಗಿ , ಕಲೆಯ ಕೃಷಿ ಮಾಡಬೇಕು ಎಂದು ಮನಸು ತುಡಿಯುತ್ತಿತ್ತು.

        ಆತನಿಗೆ ಗೊತ್ತಿಲ್ಲದ ಹಾಗೆ "ಹೂ "ಅಂದಿದ್ದ .

         ಅತ್ತ ಕಡೆ ಸಂತೃಪ್ತಿಯ ಭಾವ .

ಅಡ್ರೆಸ್ ಕಳುಹಿಸಿ , "ಅಲ್ಲಿಗೆ ಹೋದ ಮೇಲೆ .... ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ "ಎಂದು ಹೇಳಿದ್ದು ....ಎಲ್ಲವೂ ಕೂಡ "ಕನಸಿನಲ್ಲಿ "ನಡೆದು ಹೋಗುತ್ತಿರುವಂತೆ ಭಾಸವಾಗಿತ್ತು.

             ಬಾಡಿಗೆ ಮನೆಯ ಮಾಲೀಕನ ಮುಂದಿದ್ದ ವಿಕ್ಕಿ .

ಆತನಿಗೆ ಕೊಡಬೇಕಾದ ದುಡ್ಡು ಕೊಟ್ಟು , ಇನ್ನಾರು ತಿಂಗಳ "ದುಡ್ಡು "ಕೂಡ ಕೊಟ್ಟಿದ್ದ .

       "ಯಾರಾದರೂ ನೆಲೆ ಇಲ್ಲದೇ ಬಂದರೆ , ದಯವಿಟ್ಟು ಒಂದಾರು ತಿಂಗಳು ಅವಕಾಶ ಕೊಡಿ "ಎಂದು ಅವರ ಕೈಯಲ್ಲಿ ...ಅವರದೇ "ಚಿತ್ರ "ಇಟ್ಟಿದ್ದ.

ಕಥೆ ,ಕಾದಂಬರಿ ,ಕವನ ಮತ್ತು ಚಿತ್ರಕಲೆಯಲ್ಲಿ ಮೊದಲಿನಿಂದಲೂ ಹುಚ್ಚು ಆತನಿಗೆ .    

       ಮಾಲೀಕ , ಕೆಳಗೆ ಕುಳಿತವನಿಗೆ "ಆಶೀರ್ವಾದ " ಮಾಡುತ್ತಿರುವ ಚಿತ್ರ ಅದು .

 ಕಣ್ಣು ತುಂಬಿ ಬಂದಿತ್ತು ಮಾಲಿಕನಿಗೆ.

     ಕುಂಚದಲ್ಲಿ ಅರಳಿದ ತನ್ನದೇ ಚಿತ್ರ , ಫೋಟೋ ಹೊಡೆದ ಪ್ರತಿಯಂತೆ ಕಾಣುತಿತ್ತು .

       ಆಗಲೇ ಅರ್ಥ ಆಗಿದ್ದು , ಎದುರಿಗಿನ ವ್ಯಕ್ತಿಯ ಕೈ ಚಳಕ ...ಮತ್ತು ಆತ ಅದೆಷ್ಟು "ರಾತ್ರಿ "ಕಳೆದಿರಬಹುದು ಇದನ್ನು ಬಿಡಿಸಲು ಎಂದು .

                  ಶಬ್ದವೇ ಇರಲಿಲ್ಲ ಇಬ್ಬರ ನಡುವೆ .

         ಆವತ್ತೇ ಸಂಜೆ , ಮನೆ ಖಾಲಿ ಮಾಡಿ ಹೊರಟಾಗ ...ತಾವೇ ಖುದ್ದು ಆತನನ್ನು "ಕೇರಳ " ಕಡೆಯ ಬಸ್ ಹತ್ತಿಸಿ ಬಂದಿದ್ದರು .

        

        ಆಗಲೇ ಶುರುವಾಗಿತ್ತು , ವಿಕ್ಕಿಯ ಜೀವನದ ಮತ್ತೊಂದು "ಭಯಾನಕ "ಘಟ್ಟ .

    ಬೆಂಗಳೂರು ಎಂಬ ಮಹಾನಗರದಲ್ಲಿ ಬೆಳೆದಿದ್ದ ವಿಕ್ಕಿಯ ಜೀವನ ಘಟ್ಟ ಇಳಿಯಬೇಕಾದರೆ , ಮತ್ತೊಂದು ಘಟ್ಟದ ಬಳಿ "ಹೋಗುತ್ತಿರುವುದು "ಅರಿವಾಗಿರಲಿಲ್ಲ.

           ತನ್ನ ಬಳಿ ಇದ್ದ "ಅಡ್ರೆಸ್ "ನೋಡಿ , ಬೆಳಿಗ್ಗೆ ಬಸ್ ಇಳಿದಿದ್ದ.

          ಸಣ್ಣ ಊರು ಅದು .

          ಆಗಲೇ ನಾಲ್ಕಾರು ಮಂದಿ , ಸಣ್ಣ ಗೂಡಂಗಡಿಯಲ್ಲಿ "ಚಹಾ "ಕುಡಿಯುತ್ತಿದ್ದರು .

    ಕೇಳಿದ ವಿಕ್ಕಿ ಅವರ ಬಳಿ , ಇಲ್ಲಿ "ಬ್ರಹ್ಮ ಕಮಲ ಎಸ್ಟೇಟಿಗೆ "ಹೋಗುವ ದಾರಿ ಯಾವುದೆಂದು.

  ಚಹಾ ಕುಡಿಯುತ್ತಿದ್ದ ಮಂದಿ "ಸ್ತಬ್ಧರಾಗಿ " ಹೋಗಿದ್ದರು , ವಿಕ್ಕಿಯ ಮಾತು ಕೇಳಿ .

         ಕೆಲವರಂತೂ ವಿಕ್ಕಿಯ ಮೇಲೆ , ದೃಷ್ಠಿ ಬದಲಾಯಿಸದೆ ನೋಡುತ್ತಿದ್ದರು .

     ಆದರೂ ಒಬ್ಬ ದೈರ್ಯ ಮಾಡಿ ತೋರಿಸಿದ , ದಾರಿಯನ್ನು .

   ಆತನ ಧ್ವನಿಯಲ್ಲಿನ ಸಣ್ಣ "ನಡುಕ "ಯಾಕೆಂದು ಕೇಳಲು ಹೋಗಿರಲಿಲ್ಲ ವಿಕ್ಕಿ.

      ಆದರೂ ಎಸ್ಟೇಟ್ ಬಗ್ಗೆ , ಇವರಿಗೆ ಬೇರೆಯ ಯಾವುದೋ ವಿಷಯ ಗೊತ್ತಿದೆ ಎಂದು ಮನಸಿಗೆ ಬಂದಿತ್ತು.

       ನಡೆದು ಹೋಗಿದ್ದ ನಿಧಾನವಾಗಿ ...ಅಲ್ಲಿನ ಸೌಂದರ್ಯ ಸವಿಯುತ್ತಾ .

ಮಂಜಿನಲ್ಲಿ ಮುಳುಗಿ ಹೋದ ಬೆಟ್ಟ , ಸುತ್ತಲಿನ ಹಸಿರು ಆತನಿಗೆ ಮತ್ತಷ್ಟು ಹುರುಪು ಕೊಟ್ಟಿತ್ತು .

        ಎಸ್ಟೇಟ್ ಬಾಗಿಲಿಗೆ ಬಂದು ನಿಂತಾಗಲೇ ತಿಳಿದಿದ್ದು.

"ತಾ ಹೋಗಬೇಕಾದ ಎಸ್ಟೇಟ್ ಇದೆ "ಎಂದು.

       ಎಸ್ಟೇಟ್ ಗೋಡೆಯಲ್ಲಿ , ಬಂಗಾರದ ಅಕ್ಷರದಲ್ಲಿ "ಬ್ರಹ್ಮ ಕಮಲ ಎಸ್ಟೇಟ್ "ಎಂದು ಬರೆದಿತ್ತು.

       ಭಾರವಾದ ಗೇಟ್ ದಬ್ಬಿಕೊಂಡು , ಬಾಗಿಲ ಬಳಿ ಬಂದಾಗ ಪ್ರತ್ಯಕ್ಷನಾಗಿದ್ದ ವೃದ್ಧ .

   ಆತನ "ಹಿಂದೆಯೇ "ಬಂದಿದ್ದಳು ತರುಣಿ .

    ಅರಿವಾಗಿತ್ತು ವಿಕ್ಕಿಗೆ , ಎಸ್ಟೇಟ್ ಕೆಲಸಗಾರರು ಇವರೆಂದು .

   ಇವನನ್ನೇ ಕಾಯುತ್ತಾ ಇದ್ದ ಹಾಗೆ , ವಿಕ್ಕಿಯ ಲಗೇಜ್ ಹೊತ್ತು ಒಳಗೆ ಸಾಗಿದ್ದರು .

            ಎಸ್ಟೇಟ್ ಕೇವಲ "ಮನೆಯಂತೆ "ಇರಲಿಲ್ಲ . ಬದಲಾಗಿ ಸಣ್ಣ "ಕೋಟೆಯಂತೆ "ಭಾಸವಾಗಿತ್ತು ಆತನಿಗೆ.

      "ಒಡೆಯರು ನೀವು ಬರುವ ಸುದ್ದಿ ಹೇಳಿದ್ದರು " ಎಂದು ಉಸುರಿದ್ದ ವೃದ್ಧ .

    ಒಳಗೆ ಬಂದಾಗ , ಆಶ್ಚರ್ಯದ ಮೇಲೆ ಆಶ್ಚರ್ಯ ವಿಕ್ಕಿಗೆ.

ದೊಡ್ಡದಾದ "ಪ್ರಾಂಗಣದಲ್ಲಿ "ಅವರ ವಂಶದ ಎಲ್ಲರ ಚಿತ್ರ ಅಲಂಕರಿಸಿತ್ತು , ಗೋಡೆಯ ಮೇಲೆ.

ದೊಡ್ಡ ದೊಡ್ಡ "ಗಾಜಿನ "ಅಡಿಯಲ್ಲಿ.

   ಆತನ ಪ್ರತಿ ಪೇಂಟಿಂಗ್ ಕೂಡ , ಅಲ್ಲಲ್ಲಿ ಗೋಡೆಯಲ್ಲಿ ನೇತಾಡುತ್ತಾ ಇತ್ತು.

   

      ಮಹಡಿ ಮೇಲಿದ್ದ ದೊಡ್ಡ ಕೋಣೆಯೊಂದನ್ನು ತೋರಿಸಿ , ಲಗೇಜ್ ಇಟ್ಟಿದ್ದ ವೃದ್ಧ.

 "ಸ್ವಾಮಿ , ಇಲ್ಲಿ ಎಲ್ಲವನ್ನೂ ನೀವು ಬಳಸಿ ಕೊಳ್ಳಬಹುದು .....ನಾ ಮತ್ತು ನನ್ನ ಮಗಳು ನಿಮಗೆ ತಿಂಡಿ ,ಅಡಿಗೆಯ ಉಸ್ತುವಾರಿ "ಎಂದು ಹೇಳುತ್ತಿರುವಾಗ ....ಆತನ "ಕಣ್ಣಲ್ಲಿ "ಯಾವುದೋ ಭಯ .

       ಆತನನ್ನೇ ನೋಡುತ್ತಾ , ತಂದೆಯ ಹಿಂದೆ ನಿಂತಿದ್ದ ಯುವತಿಯ " ಕಣ್ಣುಗಳಲ್ಲಿ "ಯಾವುದೋ ಭೀತಿ.

     ಕೋಣೆ ಇಷ್ಟ ಆಗಿತ್ತು , ದೊಡ್ಡದಾದ ಕಿಟಕಿಯಿಂದ ಕಾಣುವ ಹಸಿರು ..ಗುಡ್ಡ , ಬೆಟ್ಟ ಎಲ್ಲವೂ ಹೊಸ ಹುರುಪು ತಂದಿತ್ತು .

ಎಲ್ಲದಕ್ಕಿಂತ ಅವನ ಚಿಕಿತ ಗೊಳಿಸಿದ್ದು , ಇಡೀ ಮನೆ ಕೂಡ ಹಳೆಯ "ಆಂಟಿಕ್ "ವಸ್ತುಗಳಿಂದ ಅಲಂಕೃತವಾಗಿದ್ದು.

ಆಗ ಬಂದಿತ್ತು ಫೋನ್ , ಸಾಳ್ವೆ ಇಂದ .

       ಕುಶಲೋಪರಿ ವಿಚಾರಿಸಿ , "ನಿನ್ನಿಂದ ಅತ್ಯಂತ ಉತ್ಕೃಷ್ಟ ಕಾದಂಬರಿಯ ನಿರೀಕ್ಷೆಯಲ್ಲಿ ಇದ್ದೇನೆ " ಎಂದಿದ್ದ .

                  "ಸಮಯ ಎಷ್ಟು ಆದರೂ ಆಗಲಿ ವಿಕಾಸ್ ಅವರೇ , ನನ್ನ ಮಗಳಿಗೆ ನಿಮ್ಮ ಕಾದಂಬರಿ ನೋಡಿ ದಿಗ್ಭ್ರಮೆ ಆಗಬೇಕು "ಎನ್ನುವಾಗ ....ಆತನ ಮಾತಿನಲ್ಲಿ ಯಾಚನೆ ಇತ್ತು .

   ವಿಕ್ಕಿಯ ಹೃದಯದಲ್ಲಿ , ತನ್ನ "ಕಲೆಯನ್ನು" ಗುರುತಿಸಿದ ಮನುಷ್ಯನ ಬಗ್ಗೆ ಗೌರವ ಮೂಡಿತ್ತು .

     ತಿಂಡಿ ತಿಂದು , ಮನೆಯ ಹೊರಗಿನ ಗಾರ್ಡನ್ ಕಡೆ ಹೆಜ್ಜೆ ಹಾಕಿದ್ದ ವಿಕ್ಕಿ.

ಆಶ್ಚರ್ಯ ಆಗಿದ್ದು , ಸಾಕಷ್ಟು ಕಡೆ ಬ್ರಹ್ಮ ಕಮಲದ ಗಿಡಗಳು ಇದ್ದಿದ್ದು .

 ಜೊತೆಗೆ ಆರೈಕೆ ಇಲ್ಲದೇ , ಪಾಳು ಬಿದ್ದಂತೆ ಆಗಿತ್ತು ಒಳ್ಳೆಯ ಗಿಡಗಳು .

        ತಟ್ಟನೆ ಹಿಂದೆ ತಿರುಗಿ ನೋಡಿದ , ಹಿಂದೆ ಯಾರೋ ಬಂದ ಶಬ್ದವನ್ನು ಗ್ರಹಿಸಿ .

        ಯಾರು ಕೂಡ ಇರಲಿಲ್ಲ .

ದೂರದಲ್ಲಿ ನಿಂತು ನೋಡುತ್ತಾ ಇದ್ದ , ವೃದ್ಧನ ಮಗಳು ಮಾತ್ರ ಕಾಣಿಸಿದ್ದು .

   ಆದರೆ ತನ್ನ ಹಿಂದೆ , ಹೆಜ್ಜೆಯ "ಶಬ್ದ "ಖಚಿತವಾಗಿತ್ತು ಅವನಿಗೆ .

ಆಗಲೇ ಅನಿಸಿದ್ದು , "ಬೇರೆ ಏನೋ ಇದೆ ....ಈ ಬಂಗಲೆಯಲ್ಲಿ "ಎಂದು .

           ಒಂದಷ್ಟು ಹೊತ್ತು , ಒಣಗಿ ಹೋಗುತಿದ್ದ ಗಿಡಗಳಿಗೆ ನೀರು ಬಿಟ್ಟು ....ತನ್ನ ಪಾಡಿಗೆ ಕೋಣೆಗೆ ಹಿಂತಿರುಗಿದ್ದ .

       ಆತ ಕೋಣೆಯ ಒಳಗೆ ಕಾಲಿಡುವ ಮುನ್ನಾ , ಆತನ ಕೋಣೆಯಲ್ಲಿ "ಕೇಳಿಸುತ್ತಾ "ಇತ್ತು ಗೆಜ್ಜೆಯ ಶಬ್ದ .

     ಬಾಗಿಲು ತೆಗೆದ ತಕ್ಷಣ , ನಿಂತು ಹೋಗಿತ್ತು ಅದು .

ಆಗಲೂ ನಿಂತು ನೋಡುತ್ತಾ ಇದ್ದಳು , ವೃದ್ಧನ ಮಗಳು ಇವನತ್ತ .

           ಅವಳ ಕಾಲಿನಲ್ಲಿ ಕೂಡ ಗೆಜ್ಜೆ .

ವಿಕ್ಕಿಗೆ ಆಶ್ಚರ್ಯದ ಜೊತೆ ಕುತೂಹಲ .

ವೃದ್ಧನ ಮಗಳು ದೂರದಲ್ಲಿ ಇದ್ದರೆ , ತನ್ನ ಕೋಣೆಯಲ್ಲಿ ಕೇಳಿಸಿದ "ಶಬ್ದ "ಯಾವುದು ಎಂಬುದು.

        ತಲೆಯಿಂದ ಅದನ್ನು ಕಿತ್ತು ಬಿಸಾಡಿದ ಆತ .

ಭೂತ ,ಪ್ರೇತ , ಆತ್ಮದ ಚಿಂತೆ , ನಂಬಿಕೆ ಯಾವಾಗಲೂ ಇರಲಿಲ್ಲ ಅವನಿಗೆ .

     ಆದರೆ ಆತನ "ಕೋಣೆಯಲ್ಲಿ "ವಾಲುವ ಖುರ್ಚಿ ಹೊಸದಾಗಿ ಸೇರ್ಪಡೆ ಆಗಿತ್ತು .

ಮರದ ಖುರ್ಚಿ , ಅದರ ಅಂದಕ್ಕೆ ಮನ ಸೋತಿದ್ದ ಆತ .

      "ವೃದ್ಧನ ಕೆಲಸ ಇದು "ಎಂದು ಅನಿಸಿತ್ತು .

 ಮಾನಸಿಕವಾಗಿ ನೊಂದು ಬೆಂದು ಹೋಗಿದ್ದ ವಿಕ್ಕಿಗೆ , ಉತ್ತಮ ವಾತಾವರಣ ದೊರಕಿತ್ತು.

         ಆರು ವರ್ಷ "ಪ್ರೀತಿಸಿದ "ಪ್ರೇಯಸಿಯ ನೆನಪು ಕಾಡುತ್ತಿತ್ತು.

     ಕಾಡುವ ನೆನಪುಗಳು ದೂರವಾದ ಮೇಲೆ , ಒಂದು ಉತ್ತಮ "ಕಲಾಕೃತಿಯನ್ನು "ಬಿಡಿಸಬೇಕೆಂಬ ಹಂಬಲ ಹೆಚ್ಚಾಗುತ್ತಿತ್ತು.

ಕಥೆ "ಬರೆಯುವ "ತವಕ ಜಾಸ್ತಿ ಆಗುತಿತ್ತು .

ಆದರೆ , ಆತನ ಕೈ ಮುಂದೆ ಸಾಗುತ್ತಲೇ ಇರಲಿಲ್ಲ.

ಅಷ್ಟು ನೊಂದಿದ್ದ ವಿಕ್ಕಿ , ಸೌಮ್ಯ ಬಿಟ್ಟುಹೋಗಿದ್ದು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗಿರಲಿಲ್ಲ ಆತನಿಗೆ.

         ಮಂಜಾದ "ಕಣ್ಣಿನಿಂದ "ಹೊರಗಡೆ ಹಸಿರು ನೋಡುತ್ತಿದ್ದವನಿಗೆ , ಎಚ್ಚರಿಸಿದ್ದು ವೃದ್ಧನ ಧ್ವನಿ.

ಸಂಜೆ ಐದರ ವೇಳೆಗೆ , ನಿಂತಿದ್ದ ವೃದ್ಧ ಮಗಳೊಂದಿಗೆ.

    "ಸ್ವಾಮಿ "ಎಂದಿದ್ದ .

"ನಾ ಮನೆಗೆ ಹೋಗಿ ,ನಾಳೆ ಬೆಳಿಗ್ಗೆ ಪುನಃ ಬರುತ್ತೇನೆ.

ರಾತ್ರಿಯ ಅಡುಗೆ ಮಾಡಿದ್ದಾಳೆ ಮಗಳು "ಎಂದು ವಿಕ್ಕಿಯ ಮುಖ ನೋಡತೊಡಗಿದ.

 ಆತನ "ಕಂಗಳಲ್ಲಿ "ಬೇರೆ ಯಾವುದೋ ವಿಷಯ ಇತ್ತು .

      ಆತನ ಹಿಂದೆ ಹೊಳೆಯುತ್ತಿದ್ದ ಕಣ್ಣುಗಳು , ಏನನ್ನೋ ಹೇಳುವುದಕ್ಕೆ ಬಯಸುತ್ತಿತ್ತು.

 ವಿಕ್ಕಿಯ ಮನದಲ್ಲಿ ಕೂಡ , ನೂರಾರು ಪ್ರಶ್ನೆಗಳು ಇದ್ದವು.

ಯಾವುದೋ "ಎಸ್ಟೇಟ್ "ತರಹ ಕಾಣಿಸಿರಲಿಲ್ಲ ಬಂಗಲೆ ಆತನಿಗೆ .

   ಸಣ್ಣ ಕೋಟೆ ಯಂತೆ ಭಾಸವಾಗಿತ್ತು ಆತನಿಗೆ.

ಪ್ರತಿ ವಸ್ತು ಕೂಡ , ಯಾವುದೋ "ನಿಗೂಡ " ವಿಷಯವನ್ನು ಮುಚ್ಚಿಟ್ಟ ಹಾಗಿತ್ತು.

ತಿರುವಂಕೂರ್ ಮಹಾರಾಜರ ಪಾಳೆಗಾರರಾದ , ಸಾಳ್ವೆ ಕುಟುಂಬದ "ಕೋಟೆಯೆಂದು "ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ.

       ತಿರುಗಿ ವೃದ್ಧನ ಕಡೆ ನೋಡಿ "ಹೂ "ಅಂದಿದ್ದ.

ಆತನ ಕಣ್ಣಲ್ಲಿ ಇದ್ದ ಭಯ ನೋಡಿ , ಕೆಲ ವಿಷಯ ಪ್ರಸ್ತಾಪ ಮಾಡಬೇಕೆಂದು ಕೊಂಡವನು ಸುಮ್ಮನಾಗಿದ್ದ.

    ನಾಲ್ಕು ಎಕರೆ ಜಾಗದಲ್ಲಿ ಇದ್ದ ಕೋಟೆ , ಭಯಾನಕವಾಗಿ ನಿಂತಿತ್ತು ಸಂಜೆಯ ಸಮಯಕ್ಕೆ.

          ಸಂಜೆಯ ಸಮಯಕ್ಕೆ , ಅರ್ಧ ಕೋಟೆ ದೀಪದ ಅಲಂಕಾರದಿಂದ ಕಂಗೊಳಿಸುತ್ತಿತ್ತು.

    ವಿಕ್ಕಿಯ ಕುತೂಹಲ ಕೂಡ .

ಮಹಡಿಯಿಂದ ಇಳಿದು ಬರುತ್ತಿರುವಾಗ , ನೋಡಿದ ..ಸಾಲಾಗಿ ಗೋಡೆ "ಮೇಲಿದ್ದ "ವ್ಯಕ್ತಿಗಳ ಚಿತ್ರ.

   ಅವರ ಅರಸರ ವೇಷ , ಕೈಯಲ್ಲಿ ಇದ್ದ ಖಡ್ಗ ...ಹುಟ್ಟಿದ ಮತ್ತು ಮರಣದ ದಿನಾಂಕ ನೋಡುತ್ತಾ ...ಒಂದೊಂದೇ ಮೆಟ್ಟಿಲು ಕೆಳಗಿಳಿದು ಬರುತ್ತಿದ್ದ.

          ಮುನ್ನೂರು ವರ್ಷಗಳ ಹಿಂದಿನ , ಅರಸರ ಭಾವಚಿತ್ರವನ್ನು ಬರೆದ "ಕಲಾವಿದನ "ಬಗ್ಗೆ ಆಶ್ಚರ್ಯವಾಗಿತ್ತು.

    ಸ್ವಲ್ಪವೂ ಮಾಸದ ಚಿತ್ರಗಳು , ಒಂದೊಂದಾಗಿಯೇ ಗಮನ ಸೆಳೆಯುತ್ತಿದ್ದವು.

ದೊಡ್ಡದಾದ ಗಾಜಿನ "ಫ್ರೇಮಿನ "ಅಡಿಯಲ್ಲಿ ಕುಳಿತ ಚಿತ್ರಗಳ ಕಣ್ಣುಗಳು , ಆತನ ಕಣ್ಣನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು.

     ಹಾಗೆ ಕೆಳಗಿಳಿದು ಬಂದಿದ್ದ .

ಆಗಲೇ ಅರ್ಥವಾಗಿದ್ದು ಆತನಿಗೆ , ತಾನು ಇರುವುದು ಹಿಂದೆ "ಅರಸರು "ಆಳಿದ ಮನೆಯಲ್ಲಿ ಎಂದು .

                        ಕೊನೆಯ ಮೆಟ್ಟಿಲಿನ ಬಳಿ , ರಾಜಶೇಖರ್ ಸಾಳ್ವೆಯ ಚಿತ್ರವಿತ್ತು .

   ಅವರ ತೊಡೆಯ ಮೇಲೆ ಕುಳಿತಿದ್ದ ಬಾಲಕನೊಬ್ಬ.

ಮರಣದ ದಿನಾಂಕ ...6.3.1968.

         ನಿಜಕ್ಕೂ ದಂಗುಬಡಿದು ಹೋಗಿದ್ದ ವಿಕ್ಕಿ.

ತನ್ನೊಂದಿಗೆ "ಮಾತನಾಡಿದ "ಮನುಷ್ಯ ರಾಜ ಕುಟುಂಬಸ್ಥರೆಂದು.

         ಸಾಲಾಗಿ ನೋಡುತ್ತಾ , ಕೆಳಗಿಳಿದು ಬಂದು ಅವನಿಗೆ ಅಚ್ಚರಿ.

      ಮೂವರು ಹೆಣ್ಣು ಮಕ್ಕಳ ಜೊತೆಗೆ , ಭಾವಚಿತ್ರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ...ಸೂಟು ಬೂಟು ಧರಿಸಿ.

    ನಿಕ್ಕಿ ಆಗಿತ್ತು , ಈತನೇ ತನಗೆ ಕರೆ ಮಾಡಿದವ ಎಂದು.

ಹೆಸರು "ದಯಾಕರ್ ಸಾಳ್ವೆ "ಎಂದಿತ್ತು.

  ಆಗಲೇ ಅನಿಸಿದ್ದು ಆತನಿಗೆ , ತನ್ನ ಹಿಂದೆ ಕೂಡ ಯಾರೋ ಮೆಲ್ಲನೆ ಮೆಟ್ಟಿಲು ಇಳಿದು ಬರುತ್ತಾ ಇದ್ದಾರೆ ಎಂಬುದು .

ತಕ್ಷಣವೇ ತಿರುಗಿ ನೋಡಿದ್ದ , ಬರುತಿದ್ದ ಹೆಜ್ಜೆ ಶಬ್ದ ನಿಂತು ಹೋಗಿತ್ತು .

ವಿಕ್ಕಿಯ "ಎದೆಬಡಿತ " ಜಾಸ್ತಿಯಾಗಿತ್ತು ಒಮ್ಮೆಲೆ.

           ವೃದ್ಧ ಹೊರಗಡೆಯಿಂದ ಎಳೆದುಕೊಂಡು ಹೋಗಿದ್ದ , ಬಾಗಿಲಿನ ಚಿಲಕ ಹಾಕಿ ...

 ಅಲ್ಲಿದ್ದ "ಸೋಫಾದ "ಮೇಲೆ ಕುಸಿದಿದ್ದ .

   ಯಾವತ್ತೂ ಭೂತ , ಪ್ರೇತದ ಬಗ್ಗೆ ನಂಬಿಕೆ ಇಲ್ಲದ ಮನುಷ್ಯ ಆತ .

    ಆದರೆ ಆವತ್ತು ನಿಕ್ಕಿ ಆಗಿತ್ತು .

ತನಗೆ ಕಾಣದ ಯಾವುದೋ "ಶಕ್ತಿ "ಅಲ್ಲಿ ಇದೆಯೆಂದು .

ಸಾಲಾಗಿ "ಮುಖಗಳು "ಹಾದು ಹೋಗುತ್ತಿದ್ದವು .

   ಅವ ಬಸ್ ಇಳಿದಾಗ , ಅಲ್ಲಿದ್ದ ಕೆಲವರ ಭಯದ ದೃಷ್ಠಿ ನೆನಪಾಗಿತ್ತು .

        ವೃದ್ಧನ ಕಣ್ಣಿನಲ್ಲಿ ಕಾಣುವ ಭಯ , ಆತನ ಮಗಳ ಕಣ್ಣಲ್ಲಿ ಏನೋ ಹೇಳಬೇಕೆಂದು ಕೊಂಡ ವಿಷಯಗಳು ನೆನಪಾಗಿತ್ತು .

     ಪೂರ್ತಿ "ನೆಂದು "ಹೋಗಿದ್ದ ಆತ ಭಯದಲ್ಲಿ.

      ಕೈ ಕಾಲು ಶಕ್ತಿ ಕಳೆದು ಕೊಂಡಿತ್ತು .

     ಆದರೂ ವಿಕ್ಕಿಯ ವಿಶೇಷತೆ , ಕೆಲವೇ ಕ್ಷಣದಲ್ಲಿ ತೀರ್ಮಾನ ತೆಗೆದು ಕೊಳ್ಳುವ ಅವನ ಸ್ವಭಾವ .

       

                ನಿಧಾನವಾಗಿ ಹೆಜ್ಜೆ ಹಾಕಿದ್ದ , ರೂಮಿನ ಕಡೆ .

                 ಪ್ರಯಾಸದಿಂದ.

ರೂಮಿನ ಒಳಗೆ ಹೋಗಿ , ಬಾಗಿಲ ಚಿಲಕ ಹಾಕಿದ

ಮೇಲೆಯೇ ....ಆತನ ಎದೆಬಡಿತ ಕಡಿಮೆಯಾಗಿದ್ದು.

           ಹಾಸಿಗೆ ಮೇಲೆ ಕುಳಿತಿದ್ದವ ಒಮ್ಮೆಲೇ ಬೆಚ್ಚಿ ಬಿದ್ದಿದ್ದ , ಗಡಿಯಾರದ ಗಂಟೆಯ ಸದ್ದು ಕೇಳಿ .

   ಬೆಳಿಗ್ಗೆಯಿಂದ ಕೇಳದ ಸದ್ದು , ಒಮ್ಮೆಲೇ ಶುರುವಾಗಿತ್ತು .

        ಆಗ ಗಮನಕ್ಕೆ ಬಂದಿದ್ದು , ಕೋಣೆಯಲ್ಲಿ ಇದ್ದ ತೂಗು ಕುರ್ಚಿ .

       ಯಾರೋ ಕುಳಿತ ಹಾಗೆ , ತನ್ನ ಪಾಡಿಗೆ ಅದು ತೂಗುತ್ತಿತ್ತು .

    ಕಾಲಿನಿಂದ ಶುರುವಾದ ನಡುಕ , ಒಮ್ಮೆಲೇ ಇಡೀ ಮೈ ಆವರಿಸಿದ ಅನುಭವ .

         ಸಣ್ಣದಾದ "ಗೆಜ್ಜೆ "ಶಬ್ದ ಮತ್ತೆ .

           ಕಣ್ಣು ಮುಚ್ಚಿ ಬಿಟ್ಟಿದ್ದ ವಿಕ್ಕಿ .

ಆವತ್ತೇ ತನ್ನ ಕೊನೆ ರಾತ್ರಿ ಆಗುತ್ತದೆ , ಎಂಬ ಬಗ್ಗೆ ಯಾವ ಸಂಶಯ ಇರಲಿಲ್ಲ ಅವನಿಗೆ .

       ಗೆಜ್ಜೆ ಶಬ್ದ ದೂರವಾದ ಮೇಲೆ , ಕಣ್ಣು ತೆರೆದಿದ್ದ .

                 ಊಟಕ್ಕೆ ಕೂಡ , ಕೆಳಗೆ ಇಳಿದು ಹೋಗಲು ದೈರ್ಯ ಇರಲಿಲ್ಲ ಆತನಿಗೆ .

    ಗಂಟಲು "ಒಣಗಿ "ಹೋಗಿತ್ತು .

ಆದರೂ ದೈರ್ಯ ಮಾಡಿದ್ದ , ಯಾವುದೇ ಶಕ್ತಿ ಇರಲಿ ...ಅದನ್ನು ಎದುರಿಸಬೇಕೆಂದು.

            ಹತ್ತು ನಿಮಿಷ ಕಳೆದು ಹೋಗಿತ್ತು , ಆದರೂ ಎದೆಯಾಳದಿಂದ "ಭಯ "ಹುಟ್ಟಿ ಬರುತ್ತಿತ್ತು.

      ಎಲ್ಲವೂ ಬ್ರಮೆಯಂತೆ ಒಮ್ಮೆ ತೋಚಿದರೆ , ಮತ್ತೊಮ್ಮೆ ಕಣ್ಣೆದುರಿಗೇ ನಡೆದ "ಘಟನೆಗಳು" ನೆನಪಿಗೆ ಬರುತ್ತಿತ್ತು.

     ನೀರಿನ "ದಾಹ "ವಿಪರಿಮಿತವಾಗಿ ಏರುತ್ತಿತ್ತು.

             ಆತ್ಮವೇ ಇದು , ಪ್ರೇತವೇ ?...ಏನೂ ತಲೆ ಹರಿಯದ ಪ್ರಶ್ನೆ.

       ರೂಮಿನಿಂದ ನಿಧಾನವಾಗಿ , ಮೆಟ್ಟಿಲು ಇಳಿದಿದ್ದ ಕಿಚನ್ ಕಡೆಗೆ.

ಹೊಟ್ಟೆಯ "ಹಸಿವು "ಅರಿವಿಗೆ ಬಂದಿರಲಿಲ್ಲ.

           ನಡುಗುವ ಕೈಯಿಂದ , ಕಿಚನ್ ನಲ್ಲಿ ಇತ್ತ ಫಿಲ್ಟರ್ ಕಡೆಗೆ ಲೋಟ ಹಿಡಿದಿದ್ದ .

      ಒಂದು ಲೋಟ ನೀರು ಕುಡಿದ ಮೇಲೆಯೇ , ಆತನ ಬಾಯಾರಿಕೆ ಒಂದು ಹಂತಕ್ಕೆ ಬಂದಿದ್ದು .

ಮತ್ತೊಮ್ಮೆ ಸ್ಪಷ್ಟವಾಗಿ " ಕೇಳಿಸುತ್ತಿತ್ತು "ಗೆಜ್ಜೆಯ ಧ್ವನಿ.

ಯಾರೋ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಬರುವ ಸದ್ದು.

   

         ತನ್ನ ಬಳಿಯೇ ಅದು ನಿಂತಿದ್ದು ನೋಡಿ , ವಿಕ್ಕಿಯ ಕೈಯಲ್ಲಿದ್ದ ನೀರಿನ ಲೋಟ ಕೆಳಗೆ ಬಿದ್ದಿತ್ತು.

 ಆತನಿಗೂ ಅರಿವು ಇಲ್ಲದಂತೆ.

          ಬಿಟ್ಟ ಕಣ್ಣುಗಳಿಂದ ನೋಡುತ್ತಾ ಇದ್ದ .

ಮನಸಿನಲ್ಲಿ ಮೊದಲ ಬಾರಿಗೆ , ನೆನಪಿಗೆ ಬಂದ ದೇವರ ಸ್ತೋತ್ರ ಪಠಿಸುತ್ತಿದ್ದ.

          ಕೆಳಗೆ ಬಿದ್ದ ನೀರಿನಲ್ಲಿ ಆಗ ಮೂಡಿದ್ದು ," Hi " ಎಂಬ ಶಬ್ದ .

"ಭಯವನ್ನು ಮೆಟ್ಟಿ ನಿಲ್ಲಬೇಕು "ಎಂದುಕೊಂಡವನು , ಹಾಗೆಯೇ "ಅಕ್ಷರವನ್ನು "ನೋಡುತ್ತಾ ಕುಳಿತಿದ್ದ ವಿಕ್ಕಿ..

     ತಲೆಯಲ್ಲಿ ಸಂಘರ್ಷ ಶುರುವಾಗಿತ್ತು.

       ನೆಲದ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಮತ್ತೊಮ್ಮೆ "Hi "ಶಬ್ದ ಮೂಡಿತ್ತು .

     ಆಗಲೇ ಅರಿವಾಗಿದ್ದು , ಯಾವುದೋ ಶಕ್ತಿ ತನ್ನ ಬಳಿ ಮಾತನಾಡಲು ಇಚ್ಚಿಸುತ್ತಿದೆ ಎಂದು.

          ಹೆದರಿಕೆಯಿಂದಲೇ "Hi "ಎಂದಿದ್ದ .

"ಹೇಗಿದ್ದೀರಾ "ಎಂದು ಸ್ಪಷ್ಟವಾಗಿ ಮೂಡಿತ್ತು ಶಬ್ದಗಳು , ಕಪ್ಪು ಗ್ರೈನೆಟ್ ನೆಲದ ಮೇಲೆ.

                  "ಹೆದರಬೇಡಿ "ಎಂದು , ಅದರ ಮುಂದೆ ಮತ್ತೊಂದು ಶಬ್ದ.

             ಆತನದೇ ಉಸಿರಾಟದ "ಶಬ್ದ "ಕೇಳಿಸುತ್ತಿತ್ತು , ವಿಕ್ಕಿಗೆ ನಿಶಬ್ದದ ರಾತ್ರಿಯಲ್ಲಿ.

           ನೋಡುತ್ತಾ ಕುಳಿತಿದ್ದ , ನೆಲದ ಮೇಲಿನ ಅಕ್ಷರವನ್ನು .

           "Good night "ಎಂದು ಅಲ್ಲಿ ಅಕ್ಷರಗಳು ಮೂಡಿದ ಮೇಲೆಯೇ , ಆತನ ಬಡಿಯುವ ಹೃದಯ ತಹಬಂದಿಗೆ ಬಂದಿದ್ದು.

         ಕನಸಿನಲ್ಲಿ ನಡೆದುಹೋದ ಹಾಗೆ , ನಡೆದುಹೋಗಿ ಮಲಗಿದ್ದ ರೂಮಿನಲ್ಲಿ.

    ಆತನ ಮನ , ಪ್ರತಿ ಘಟನೆಯ ವಿಮರ್ಶೆಯಲ್ಲಿ ತೊಡಗಿತ್ತು .

ಸಾಳ್ವೆ ಎಂಬ ವ್ಯಕ್ತಿ ಕರೆ ಮಾಡಿದ್ದು , ತಾ ಇಲ್ಲಿಗೆ ಬಂದಿದ್ದು ...ಎಲ್ಲವೂ ಕೂಡ ಕನಸಿನಲ್ಲಿ ನಡೆದು ಹೋಗುತ್ತಿರುವ ಹಾಗೆ ಭಾಸವಾಗುತ್ತಿತ್ತು .

                  " Good night " ಎಂದು ಮೂಡಿದ ಶಬ್ದ ಮನಸ್ಸಿಗೆ ಸಮಾಧಾನ ಮೂಡಿದರೂ ಕೂಡ , ಕಣ್ಣು ಮುಚ್ಚಲು ಸಾಧ್ಯವಾಗಿರಲಿಲ್ಲ.

            ಸತ್ತ ವ್ಯಕ್ತಿಯ ಆತ್ಮ ಎಂಬುದು ಇದೆಯೇ?.

    ಆತ್ಮಗಳು ಕೂಡ ತಿರುಗಾಡುತ್ತಾ ಇರುತ್ತವೆಯೇ?.

ದೆವ್ವ ಎಂದರೆ ಏನು , ಆತ್ಮ ಎಂದರೆ ...ತಲೆಯಲ್ಲಿ ಸಾಲಾಗಿ ಬರುತಿತ್ತು ಪ್ರಶ್ನೆಗಳು .

      

             ಮರುದಿನವೇ ಬೆಳಿಗ್ಗೆ , ಬೆಳಕು ಮೂಡಿದ ತಕ್ಷಣ ಹೊರಟು ಬಿಡಲು ನಿಶ್ಚಯಿಸಿ ಕಣ್ಣು ಮುಚ್ಚಿದ್ದ.

     ನಿದ್ದೆಯೂ ಅಲ್ಲದ , ಎಚ್ಚರ ಅಲ್ಲದ ಪರಿಸ್ಥಿತಿ.

ಸುಂದರ ಮುಖದ , ಯುವತಿಯೊಬ್ಬಳ "ಚಿತ್ರ "ಕಣ್ಣ ಮುಂದೆ ಬರುತ್ತಿತ್ತು.

         ಪದೇಪದೇ ಆಕೆಯ ಚಿತ್ರವೇ ,

         ಏನನ್ನೋ ಹೇಳುತ್ತಿರುವ ಹಾಗೆ.

      ಹಾಗೆಯೇ ಗಾಢವಾಗಿ ನಿದ್ದೆ ಹೋಗಿದ್ದ ವಿಕ್ಕಿ.

            ಬೆಳಿಗ್ಗೆ ಎದ್ದವನು , ಸಣ್ಣದಾದ ತಲೆ ಸಿಡಿತದ ಜೊತೆ ....ಮುಂದೆ ಇದ್ದ ಗಾಜಿನ ಕಿಟಕಿಯತ್ತ ಮುಖ ಮಾಡಿದ್ದ.

   "Hi . Good morning "ಎಂದು ಮಂಜಿನ ಹೊದಿಕೆ ಮೇಲೆ ಮೂಡಿದ ಶಬ್ದ ನೋಡಿದ ಕೂಡಲೇ , ಒಮ್ಮೆಲೆ ನೆನಪಿಗೆ ಬಂದಿದ್ದು ...ಹಿಂದಿನ ದಿನದ ರಾತ್ರಿಯ ಘಟನೆ.

       ಅದೇ "ಸಮಯಕ್ಕೆ "ಗುಣಗುಣಿಸುತ್ತಾ ಇತ್ತು ಮೊಬೈಲ್.

 "ಯಾವುದೋ ಅನ್ನೋನ್ ನಂಬರ್ "ಎಂದವನೇ ಫೋನ್ ಎತ್ತಿದ್ದ.

ಅತ್ತಲಿಂದ ಹೆಣ್ಣು ದ್ವನಿ .

            "ತಾವು ವಿಕಾಸ್ ಅಲ್ಲವೇ "ಎಂದಿತ್ತು , ಹೆಣ್ಣಿನ ದ್ವನಿ .

       "ಹೂ "ಅಂದಿದ್ದ .

"ರಾತ್ರಿ ತಾವು ಬಂಗಲೆಯಲ್ಲೇ ಇದ್ದರಲ್ಲವೇ?".

           ಉತ್ತರಕ್ಕೆ ಕಾಯದೆ , "ನಾನು ಪದ್ಮಿನಿ ... ದಯಾಕರ್ ಸಾಳ್ವೆ ಯವರ ಹಿರಿಯ ಮಗಳು " ಎಂದಿದ್ದಳು .

     ಪದೆ ಪದೇ ಕೇಳಿದ್ದಳು , "ತಮಗೆ ಏನು ತೊಂದರೆ ಆಗಿಲ್ಲವೇ "ಎಂದು .

ಆಗಲೇ ಚುರುಕಾಗಿ ಮೂಡುತ್ತಿತ್ತು , ಅಕ್ಷರಗಳು ಕಿಟಕಿಯ ಗಾಜಿನ ಮೇಲೆ .

"ಆಗಿಲ್ಲಾ ಎಂದು ಹೇಳಿ "ಎಂದು .

             "ಇಲ್ಲಾ , ಏನು ತೊಂದರೆ ಇದೆ ಈ ಬಂಗಲೆಯಲ್ಲಿ " ಎಂದು ಮರುಪ್ರಶ್ನಿಸಿದ್ದ .

ಏನೋ ಅರಿವಿಲ್ಲದಂತೆ.

      ಎದುರಿಗಿದ್ದ "ಅಕ್ಷರಗಳನ್ನು "ನೋಡುತ್ತಾ.

ಅತ್ತ ಕಡೆಯ ಧ್ವನಿಯಲ್ಲಿ ಆಶ್ಚರ್ಯವಿತ್ತು.

         ಹೇಳಿದ್ದಳು ಆಕೆ , "ನೋಡಿ ಮಿಸ್ಟರ್ ವಿಕಾಸ್...

ನನ್ನ ತಂದೆ ನಿಮಗೆ ಬೇರೆಯ ಕೆಲಸ ಒಪ್ಪಿಸಿ ರಬಹುದು.

     ಅದನ್ನು ಬಿಟ್ಟು ಬೇರೆಯ ಕಡೆ ಗಮನಹರಿಸಲು ಹೋಗಬೇಡಿ.

ಒಂದೇ ಒಂದು ಅಮೂಲ್ಯವಾದ ವಸ್ತು ನಾಪತ್ತೆಯಾದರೂ ಕೂಡ ,ಹೊಣೆ ನಿಮ್ಮದೇ " ಎಂದಿದ್ದಳು.

                

        ಒಮ್ಮೆಲೆ ಸಿಟ್ಟು ಬಂದಿತ್ತು , ವಿಕ್ಕಿಗೆ .

ಆಕೆಯ ದಿಮಾಕಿನ ಮಾತು ಕೇಳಿ.

"ನಿಮ್ಮ ತಂದೆಯವರ ವಿನಂತಿ ಮೇರೆಗೆ ಬಂದಿದ್ದೇನೆ

ಇಲ್ಲಿ ನಾ, ಅವರೇ ಹೇಳಿದರೆ ...ಹೊರಟು ಬಿಡುವೆ " ಎಂದಿದ್ದ .

     ನಕ್ಕಿದ್ದಳು ಪದ್ಮಿನಿ ರಾಣಿ .

"ಅಪ್ಪನಿಂದ ಫೋನ್ ಬರುವಷ್ಟರಲ್ಲಿ , ನಿಮಗೆ ಬಂಗಲೆಯಲ್ಲಿ ಏನಾದರೂ ಆದರೆ ಎಂಬ ಭಯ ಅಷ್ಟೇ " ಎಂದು , ಮತ್ತೊಮ್ಮೆ ನಕ್ಕಿದ್ದಳು.

      ಸುಸ್ತಾಗಿ ಹೋಗಿದ್ದ ವಿಕ್ಕಿ , ಆಕೆಯ ಮಾತು ಕೇಳಿ .

        ಆಗಲೇ ಕಾಣಿಸಿದ್ದು , ಗಾಜಿನ ಮೇಲೆ ಮೂಡುತ್ತಿದ್ದ ಅಕ್ಷರಗಳು .

          "Thanks "ಎಂದು ಬರೆದಿತ್ತು ಅಲ್ಲಿ .

ಖಚಿತವಾಗಿತ್ತು , ಬಂಗಲೆಯಲ್ಲಿ ಬಹಳ ದೊಡ್ಡ ಘಟನೆಗಳು ನಡೆದು ಹೋಗಿರಬಹುದೆಂದು.

    ಆದರೆ ಸಮಾಧಾನ ತಂದಿದ್ದು , ನಿಗೂಢ ಶಕ್ತಿಯೊಂದು ಆತನ ಪರಿಚಯ ಮಾಡಿಕೊಂಡಿದ್ದು.

        ಕಥೆಗೆ "ಸ್ಪೂರ್ತಿ "ಸಿಕ್ಕಿತ್ತು .

ತಲೆಯಲ್ಲಿದ್ದ "ಹೆದರಿಕೆ "ಹಾರಿಹೋಗಿತ್ತು ಒಮ್ಮೆಲೆ.

    ಬ್ಯಾಗ್ ತೆರೆದು , ಪುಸ್ತಕದ ಮೇಲೆ ಕಥೆಯ ಶೀರ್ಷಿಕೆ ಬರೆದಿದ್ದ.

        "ನಿಗೂಢ ಶಕ್ತಿ "ಎಂದು.

ಬೆಳಗಿನ ಸಮಯದಲ್ಲಿ , ಆತನ ತಲೆಯಲ್ಲಿ ಇದ್ದಿದ್ದು ಒಂದೇ ವಿಷಯ .

         ಅದು ಕಾದಂಬರಿ.

ಕಣ್ಣು ಮುಚ್ಚಿ ಆಲೋಚಿಸುತ್ತಾ ಇದ್ದ , "ಕಥೆಯ ಶುರು ಹೇಗೆ "ಎಂದು.

    ಆಗಲೇ ಬದಲಾಗಿತ್ತು , ಶೀರ್ಷಿಕೆಯ ಅಕ್ಷರಗಳು.

            ಮೃತ್ಯು ಚುಂಬನ.

           ಒಂದು ಆತ್ಮದ ಕಥೆ.

ಕಣ್ಣ ತೆರೆದ ಅವನು, ಆಶ್ಚರ್ಯದಿಂದ ನೋಡುತ್ತಿದ್ದ.....ಬದಲಾದ ಅಕ್ಷರಗಳನ್ನು.

     ಸಾಲಾಗಿ ಮೂಡುತ್ತಿತ್ತು , ಅದರ ಮೇಲೆ ಅಕ್ಷರಗಳು.

       "ನಮಸ್ತೆ . ನನ್ನ ಮನೆಗೆ ಬಂದಿದ್ದಕ್ಕೆ.

        ನಾನೇ ನಿಮ್ಮ ಬರಹದ ಪ್ರೇಮಿ .

ನಮ್ಮ ತಂದೆಯಾದ ಸಾಳ್ವೆ ಅವರ , ಎರಡನೇ ಮಗಳು ರಾಗಿಣಿ ಸಾಳ್ವೆ .

       ನಾವು ಮೂವರು ಹೆಣ್ಣು ಮಕ್ಕಳು .

ನಿಮ್ಮ ಜೊತೆ ಮಾತನಾಡಿದ್ದು , ನನ್ನ ಅಕ್ಕ ಪದ್ಮಿನಿ.

    ನಾನು ರಾಗಿಣಿ , ಮತ್ತು ನನ್ನ ತಂಗಿ ವಾಣಿ".

           ನೋಡುತ್ತಾ ಕುಳಿತಿದ್ದ ವಿಕ್ಕಿ , ಖಾಲಿ ಹಾಳೆಯ ಮೇಲೆ ಮೂಡುವ "ಅಕ್ಷರಗಳನ್ನು "ನೋಡುತ್ತಾ.

        "ನಿಮಗೆ ನಾ ಕಥೆ ಹೇಳುವ ಮುನ್ನಾ ,ಹಲವು ವಿಷಯಗಳು ಅರ್ಥ ಆಗಬೇಕು.

ನಿಮ್ಮದೇ ಬಲಭಾಗದ ಕೊಠಡಿಯಲ್ಲಿ ,ದೊಡ್ಡದಾದ ನನ್ನ ತಾತನ ಭಾವಚಿತ್ರವಿದೆ.

   ಅದರ ಹಿಂದೆ ಹಲವಾರು ಕೊಠಡಿಗಳ ಚಾವಿ ಗಳು ಇದೆ".

ಅಕ್ಷರಗಳು ಸಾಲಾಗಿ ಮೂಡುತ್ತಿತ್ತು.

            "ಇವತ್ತು ರಾತ್ರಿ ಮಹಡಿಯ ಕೊನೆಯ ರೂಮಿನ ಕಡೆ ಹೋಗಿ , ಒಮ್ಮೆ ತೆರೆದು ನೋಡಿ.

    ನಾನು ಜೊತೆಗೆ ಇರುತ್ತೇನೆ".

ಅಲ್ಲಿಗೆ ಮುಗಿದಿತ್ತು "ಅಕ್ಷರಗಳ "ಸರಮಾಲೆ.

ಹಾಗೆಯೇ ಗೆಜ್ಜೆ ಶಬ್ದ ಕೂಡ , ಆತನ ಬಳಸಿ ಹೊರಗೆ ಹೋಗಿತ್ತು .

          ಎಲ್ಲವೂ ಬ್ರಮೆಯಂತೆ ಭಾಸವಾಗುತ್ತಿದ್ದರೂ, ಇದು "ವಾಸ್ತವ "ಎನ್ನುವುದು ಹಲವಾರು ಬಾರಿ ಖಚಿತಪಡಿಸಿಕೊಂಡಿದ್ದ ವಿಕ್ಕಿ.

        ಒಂದು ವಿಶೇಷ ಅನುಭೂತಿ ಶುರುವಾಗಿತ್ತು ಆತನಿಗೆ .

ನೂರಾರು ಬಾರಿ ಇಂತಹ ಕಥೆಗಳನ್ನು ಕೇಳಿ ನಕ್ಕಿದ್ದ ಆತ .

ಆದರೆ ಒಂದೇ ದಿನಕ್ಕೆ ಅನುಭವಕ್ಕೆ ಬಂದಿತ್ತು , ವಿಜ್ಞಾನಕ್ಕೆ ನಿಲುಕದ "ಸಾವಿರ "ವಿಷಯಗಳು ನಮ್ಮನ್ನು ಸುತ್ತುವರೆದಿದೆ ಎಂದು.

           ಹೊರಗಡೆಯಿಂದ ಕೇಳಿಸಿತ್ತು , ಬಾಗಿಲು ತಟ್ಟುವ ಶಬ್ದ.

          ಆಗಲೇ ನೆನಪಾಗಿದ್ದು ವಿಕ್ಕಿಗೆ , ಹೊರಗಡೆಯ ಬಾಗಿಲು ಕೂಡ ತೆರೆದಿಲ್ಲ ಎಂದು.

    ಧಾವಿಸಿ ನಡೆದಿದ್ದ ಕೆಳಗೆ , ತಲೆಯಲ್ಲಿ ನೂರಾರು ವಿಷಯಗಳನ್ನು ತುಂಬಿಕೊಂಡು.

ಬಾಗಿಲು ಚಿಲಕ ತೆಗೆದು ನೋಡಿದಾಗ , ನಿಂತಿದ್ದ ವೃದ್ಧ ಕುಂಜಪ್ಪ ಮತ್ತು ಆತನ ಮಗಳು.

   ವೃದ್ಧ ಕುಂಜಪ್ಪನ ಮುಖದಲ್ಲಿ ಆಶ್ಚರ್ಯವಿತ್ತು.

            

              ಹಿಂದಿದ್ದ ಅವನ  "ಮಗಳ "ಮುಖದ ಮೇಲೆ ಅಪನಂಬಿಕೆ.

     ಒಂದೂ ಮಾತನಾಡದೆ , ಹಿಂದಿನ ದಿನ ಸಾಯಂಕಾಲ ನೀರು ಹಾಕಿದ ಗಿಡದ ಕಡೆಗೆ ತೆರಳಿದ ವಿಕ್ಕಿ.

       ಆಶ್ಚರ್ಯ ಪಡುವ ಸಂಗತಿ ಅವನದಾಗಿತ್ತು.

ಎಲ್ಲಾ "ಗಿಡಗಳಿಗೆ "ಆಗಲೇ ಯಾರೋ ನೀರು

ಹಾಯ್ಸಿದಂತೆ ತೋರುತಿತ್ತು.

                    ಅಷ್ಟರಲ್ಲಿ ಬೆಳಗಿನ ತಿಂಡಿಗೆ ಬರಬೇಕೆಂದು ಹೇಳಿಹೋಗಿದ್ದ ಕುಂಜಪ್ಪ.

              ಯಾರಲ್ಲಿಯೂ ಮಾತಿರಲಿಲ್ಲ.

ವಿಕ್ಕಿ ತಿಂಡಿ ತಿನ್ನುವಾಗ , ಹೊರಗೆ ನಿಂತು ನೋಡುತಿದ್ದ ಕುಂಜಪ್ಪ .

     ಆತನ ಕಣ್ಣಲ್ಲಿ ನೀರಿತ್ತು.

ಎಷ್ಟೋ ದಿನದ ಮೇಲೆ , ಮಾನವನೊಬ್ಬ ರಾತ್ರಿ ಜೀವಂತವಾಗಿ ಇದ್ದಿದ್ದು ನೋಡಿ.

      ಎಷ್ಟೋ ಬಾರಿ , ಹಿಂದಿನ ದಿನವೇ ಹೇಳಬೇಕೆಂದು ಕೊಂಡಿದ್ದ ಆತ.

  "ರಾತ್ರಿ ಇಲ್ಲಿ ಸುರಕ್ಷಿತ ಅಲ್ಲವೆಂದು".

ಆದರೂ ಬಾಯಿ ಮುಚ್ಚಿದ್ದು , ಆತನ ಅಕ್ಕರೆಯ ರಾಗಿಣಿ.

      ತನ್ನ ಮಗಳಂತೆ "ಆಕೆಯನ್ನು "ಕೂಡ ಭುಜದ ಮೇಲೆ ಹೊತ್ತು ಬೆಳೆಸಿದ್ದ.

              ಇಡೀ ಕುಟುಂಬವೇ ಅವನನನ್ನು ಆಳಿನ ಹಾಗೆ ನೋಡುತ್ತಿದ್ದರೆ , ರಾಗಿಣಿ ಆತನನ್ನು ಅಜ್ಜನೆಂದು ಕರೆಯುತ್ತಿದ್ದಳು.

      "ಯಾವ ದೆವ್ವದ ಕೆಟ್ಟ ದೃಷ್ಟಿಯೋ" ಎಂದುಕೊಂಡು ಹಿಂತಿರುಗಿದ ಕುಂಜಪ್ಪ .

     ವಿಕ್ಕಿಗೆ "ಅರಿವಾಗಿತ್ತು "ಕುಂಜಪ್ಪನ ನಿಷ್ಠೆ , ಈ ರಾಜ ಕುಟುಂಬದ ಜೊತೆ.

ರಾತ್ರಿ ಆಗುವುದನ್ನ ಕಾಯುತ್ತಿದ್ದ ಆತ .

           ಅಷ್ಟರಲ್ಲಿ , ಒಂದೆರಡು ಬಾರಿ ಮಹಡಿಯನ್ನು ಸುತ್ತಿದ್ದ.

ದೊಡ್ಡ ದೊಡ್ಡ ತೇಗದ ಬಾಗಿಲುಗಳು ಪ್ರತಿ ರೂಮಿಗೆ .

     ಆತ ಎಂದೂ ಕಾಣದಷ್ಟು ದೊಡ್ಡ ಬೀಗ ಅದಕ್ಕೆ.

"ಇಡೀ ಬಂಗಲೆ ಸುತ್ತುವುದಕ್ಕೆ ಅರ್ಧ ದಿನ ಬೇಕು " ಎಂದುಕೊಂಡ ಮನಸ್ಸಿನಲ್ಲಿಯೇ.

      ಆತನ ಪ್ರತಿ ಹೆಜ್ಜೆಯನ್ನು ಹಿಂಬಾಲಿಸುತ್ತಿತ್ತು , ಒಂದು ಜೊತೆ ಕಣ್ಣುಗಳು.

       ಆ ಕಣ್ಣುಗಳಲ್ಲಿ ಆತನಿಗೆ ಏನೋ "ತಿಳಿಸುವ " ಬಯಕೆ.

ಸುಹಾಸಿನಿ ಆಕೆ , ಕುಂಜಪ್ಪನ ಮಗಳು.

      ದೇವರು ಹುಟ್ಟುವಾಗಲೇ , ಆಕೆಯ ಮಾತನ್ನು ಕಸಿದು ಕೊಂಡಿದ್ದ .

    ಆದರೂ , ರಾಗಿಣಿಯ ಗೆಳತಿಯಾಗಿ ಬೆಳೆದವಳು ಅವಳು .

        ಬಂದ "ಮನುಷ್ಯನ "ಗುರುತು ಹಿಡಿದಿದ್ದಳು ಆಕೆ.

ಎಷ್ಟೋ ಬಾರಿ ರಾಗಿಣಿ ವಿಕ್ಕಿಯ ಕಾದಂಬರಿಯ ಹಿಂದಿದ್ದ , ಆತನ ಫೋಟೋವನ್ನು ತೋರಿಸಿದ್ದಳು.

                ಮಧ್ಯಾಹ್ನ ಊಟಕ್ಕೆ ಕುಳಿತಾಗ ಕೇಳಿದ್ದ ವಿಕ್ಕಿ ಅವಳನ್ನು .

          "ನಿನ್ನ ಹೆಸರೇನೆಂದು ".

 ನಿಂತಿದ್ದ ಕುಂಜಪ್ಪ ನುಡಿದಿದ್ದ .

"ಮಾತು ಬರೋಲ್ಲ ಸ್ವಾಮಿ ಆಕೆಗೆ "ಎಂದು .

            ಆಗಲೇ ಅರಿವಾಗಿದ್ದು , ತಾನು ಈ ಮನೆ ಹೊಕ್ಕ ಮೇಲೆ ಅವಳ ದ್ವನಿ ಕೇಳಿಲ್ಲ ಎಂಬುದು .

   ಊಟವಾದ ಮೇಲೆ ಆಕೆ , ಅವನ ಎದುರಿಗೆ ಬಂದು ನಿಂತಿದ್ದಳು.

ಸನ್ನೆ ಮಾಡಿ ಕರೆದಿದ್ದಳು , ಆತನನ್ನು ಮಹಡಿಯ ಕಡೆ ಕೈ ತೋರಿಸುತ್ತಾ.

             ಸುಮ್ಮನೆ ನಡೆದಿದ್ದ ವಿಕ್ಕಿ .

ಆಕೆಯ "ಗೆಜ್ಜೆಯ "ಶಬ್ದವನ್ನು ಕೇಳುತ್ತಾ .

        ಮಹಡಿಯ ಮತ್ತೊಂದು ಬದಿಯಲ್ಲಿದ್ದ ಕೋಣೆಯತ್ತ ಕರೆದೊಯ್ದು , ಅದರ ಬಾಗಿಲು ತೆರೆದು ಒಳಗೆ ಹೋಗಿದ್ದಳು ಅವಳು .

      ಒಳಗೆ ಕಾಲು ಇಟ್ಟಿದ್ದ ವಿಕ್ಕಿ .

ಆದರೆ ಆತನ ಕಾಲನ್ನು ಅಲ್ಲೇ ತಡೆದಿದ್ದು , ಗೋಡೆಯ ಮೇಲೆ ಇದ್ದ ಸುಂದರಿಯ ಫೋಟೋ.

  ಅವಳೇ "ರಾಗಿಣಿ "ಎನ್ನುವ ಬಗ್ಗೆ , ಯಾವುದೇ ಸಂದೇಹ ಇರಲಿಲ್ಲ ಆತನಿಗೆ .

            ಒಳಗೆ ಬಂದವನಿಗೆ ಕಾಣಿಸಿದ್ದು , ತಾನು ಬರೆದ ಎಲ್ಲಾ ಕಾದಂಬರಿಗಳ ಸಂಗ್ರಹ.

ಸುಹಾಸಿನಿ ಮಾತ್ರ , ಮಂಕು ಹಿಡಿದಂತೆ ರಾಗಿಣಿಯ ಫೋಟೋದ ಮುಂದೆಯೇ ನಿಂತಿದ್ದಳು .

            

             ಹಗಲಿನ ವೇಳೆಯಲ್ಲಿ ಅತಿ ಕೆಟ್ಟ ನಿಶ್ಯಬ್ದ ಅದು .

ಸುಹಾಸಿನಿಯ ಅಳುವಂದೇ ಕೇಳಿಸುತ್ತಿತ್ತು.

    ಬಿಕ್ಕಿಬಿಕ್ಕಿ ಅಳುತ್ತಿದ್ದಳು ಆಕೆ , ತನ್ನ ಒಡತಿಯನ್ನು ...ಗೆಳತಿಯನ್ನು ನೆನೆದು.

        ನೋಡುತ್ತಾ ಇದ್ದ ವಿಕ್ಕಿ , ರಾಗಿಣಿ ಕೋಣೆಯನ್ನು .

ರಾಜಕುಮಾರಿಗೆ ಇರುವ ಎಲ್ಲಾ "ಐಷಾರಾಮಿ " ವಸ್ತುಗಳು ಇದ್ದವು ಅಲ್ಲಿ .

           ಕೇರಳದಲ್ಲಿ ಹುಟ್ಟಿ , ಕನ್ನಡದ ಕಾದಂಬರಿ ಓದುವುದು ಕೂಡ ಆಶ್ಚರ್ಯ ಎನಿಸಿತ್ತು.

     ಅದಕ್ಕೆ ಉತ್ತರ ಕೊಡುವಂತೆ ನೇತಾಡುತ್ತಿತ್ತು , ಅವಳು ಕರ್ನಾಟಕದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಡೆದ .....ಎಂಬಿಎ ಡಿಗ್ರಿ ಸರ್ಟಿಫಿಕೇಟ್.

       

           ಬಿಕ್ಕಿ ಅಳುತ್ತಿದ್ದ ಅಳು ಕಡಿಮೆಯಾಗಿರಲಿಲ್ಲ.

ಆಗ ಆಕೆಯನ್ನು ತಿರುಗಿಸಿ ಕೇಳಿದ್ದ , ಏನಾಯ್ತು ರಾಗಿಣಿಗೆ ಎಂದು .

             ಒಮ್ಮೆಲೆ ಆಕೆಯ ಅಳು ನಿಂತಿತ್ತು .

ಕಣ್ಣುಗಳಲ್ಲಿ "ಕೆಂಪು " ಸೇರ ತೊಡಗಿತ್ತು.

   ಮಾತನಾಡಲು ಬಾರದ ಆಕೆಗೆ ಕಷ್ಟವಾಗುತ್ತಿತ್ತು ಹೇಳುವುದು.

                 ತೋರಿಸಿದ್ದಳು ರಾಗಿಣಿಯ ಫೋಟೋದಲ್ಲಿದ್ದ ಕುತ್ತಿಗೆಯನ್ನು .

ಹೊರಗೆ ದೃಷ್ಟಿ ಬೊಂಬೆಯಂತೆ "ನೇತಾಡುತ್ತಿದ್ದ  "ಪ್ರೇತದ ಮುಖವಾಡದ ಕಡೆ ಕೈ ತೋರಿಸಿದಳು.

      ಅಷ್ಟೇ , ಅವನ ಅಲ್ಲಿಯೇ ಬಿಟ್ಟು ಕೆಳಗೆ ಇಳಿದು ಹೋಗಿದ್ದಳು ಆಕೆ .

       ಅರ್ಥವಾಗಿತ್ತು ವಿಕ್ಕಿಗೆ , ಯಾವುದೋ ಮಾಟ-ಮಂತ್ರಕ್ಕೆ .....ಅಥವಾ ಪ್ರೇತಕ್ಕೆ ರಾಗಿಣಿ ಬಲಿಯಾಗಿದ್ದಾಳೆ ಎಂದು.

          ಭಯ ಮತ್ತೆ ಶುರುವಾಗಿತ್ತು ಆತನಿಗೆ.

ಅಂದರೆ ರಾಗಿಣಿ ಆತ್ಮದ ಜೊತೆ , ಆಕೆಯನ್ನು ಹತ್ಯೆಮಾಡಿದ ಪ್ರೇತ ಕೂಡ ಇದೇ ಬಂಗಲೆಯಲ್ಲಿ ಇದೆಯೆಂದು.

   ಆದರೆ ಈ ಬಗ್ಗೆ ರಾಗಿಣಿ ಏನು ಬರೆಯದೇ ಇದ್ದಿದ್ದು ದೈರ್ಯ ತಂದಿತ್ತು .

       ಸಂಜೆ ಸೂರ್ಯ "ಮುಳುಗುವುದನ್ನೇ " ಕಾಯುತ್ತಿದ್ದ ವಿಕ್ಕಿ.

ಅದೇ ಸಮಯಕ್ಕೆ ಹೊರಟು ನಿಂತಿದ್ದ ಕುಂಜಪ್ಪ , ಮತ್ತು ಅವರ ಮಗಳು.

ಕುಂಜಪ್ಪನ ಕಣ್ಣಲ್ಲೇ ಅದೇ ಭಯ .

         ಅವನ ಮಗಳ ಕಣ್ಣಲ್ಲಿ ಕೂಡ , ಬೇರೆ ಏನೋ ಸುಳಿವು .

    ಅರ್ಥವಾಗದ "ಸುಳಿವು "ಅದು .

ಅವರು ಹೋದೊಡನೆ ಬಾಗಿಲ ಚಿಲಕ ಹಾಕಿ ,ರೂಮಿನ ಕಡೆ ಹೆಜ್ಜೆ ಹಾಕಿದ್ದ.

            ಕಾಯುತ್ತಿದ್ದ ಆತ , ಗೆಜ್ಜೆಯ ಶಬ್ದ ಬರಲೆಂದು .

     

ನಿಧಾನವಾಗಿ ಕೇಳಿ ಬರುತಿದ್ದ ಗೆಜ್ಜೆಯ ಶಬ್ದ , ಈಗ ದೊಡ್ಡದಾಗಿ ಕೇಳಿಸತೊಡಗಿತು.

            "ರಾಗಿಣಿಯ ಆತ್ಮ ಹಾಗಾದರೆ , ಅವಳ ರೂಮಿನಲ್ಲೇ ಇತ್ತೆ ?"... ತಲೆ ಗೊಡವಿದ ವಿಕ್ಕಿ.

        ಆಕೆ ಬಂದು ನಿಂತ ಶಬ್ದ ಖಚಿತವಾದ ಮೇಲೆ , ಎದ್ದು ಪಕ್ಕದ ಕೋಣೆಯ ಕಡೆ ಹೆಜ್ಜೆ ಹಾಕಿದ್ದ.

      ಮುಂಚಿನ ಭಯ ಇರಲಿಲ್ಲ ಆತನಿಗೆ ಈಗ .

ಕುತೂಹಲ ಇತ್ತು , ಅದಕ್ಕೂ ಮಿಗಿಲಾಗಿ ಯಾವುದೋ ರಹಸ್ಯ ಭೇದಿಸುವ ದಾವಂತವಿತ್ತು.

             ಬೀಗ ಹಾಕದ ಪಕ್ಕದ ಕೊಠಡಿಯ ಬಾಗಿಲನ್ನು ಶ್ರಮಪಟ್ಟು , ನೂಕಿ ತೆಗೆದಿದ್ದ.

     ರಾಗಿಣಿ ಹೇಳಿದ ಹಾಗೆ , ದೊಡ್ಡದಾದ ಕೋಣೆ .

ಅದರಲ್ಲಿ ಸಾಕಷ್ಟು "ಹಳೆಯ "ಪೀಠೋಪಕರಣಗಳು .

ಹಳೆಯ ಕೆಲ "ಪುಸ್ತಕಗಳನ್ನು "ಸಾಲಾಗಿ ಸೇರಿಸಿ ಇಟ್ಟಿದ್ದರು.

            ದೊಡ್ಡದಾದ ಫೋಟೋ ಇತ್ತು ಗೋಡೆಯ ಮೇಲೆ .

   ಗಾಜಿನ ಕಟ್ಟು ಹಾಕಿಸಿ .

ಬೇಟೆ ಆಡಿ , ಸತ್ತ ಹುಲಿಯ ಮೇಲೆ ಕಾಲಿಟ್ಟು ನಿಂತಿದ್ದ ವಯಸ್ಕನೊಬ್ಬ .

             ನಿಧಾನಕ್ಕೆ ಕೈ ಹಾಕಿದ್ದ ವಿಕ್ಕಿ , ಫೋಟೋ ಹಿಂದೆ .

          ಒಮ್ಮೆಲೇ ಹೆದರಿ ಹಿಂದೆ ಸರಿದಿದ್ದ .

     ಇಲಿಯೊಂದು ಆತನ ಕೈ ಮೇಲೆ ಹತ್ತಿ , ಇಳಿದು ಹೋಗಿತ್ತು .

               ಬೆವರು ಸುರಿಯುತಿತ್ತು ದೇಹದಿಂದ .

ಯಾವುದೋ "ಅರಿವಿಗೆ "ಬಾರದ ಭಯ ಅದು.

    ಮತ್ತೊಮ್ಮೆ ಕೈ ಸರಿಸಿದಾಗ , ಸಿಕ್ಕಿತ್ತು ಬೀಗದ ಗೊಂಚಲು.

                ಆತನ ಕೈಗೆ ಬೀಗ ಸಿಕ್ಕಿದ ಕೂಡಲೇ , ಗೆಜ್ಜೆಯ ಹೆಜ್ಜೆ ಶಬ್ದ ನಿಧಾನವಾಗಿ ಕೋಣೆಯ ಹೊರಗೆ ನಡೆದಿತ್ತು .

          

        ಮಹಡಿಯ ಕೊನೆಯ ಕೋಣೆಯ ಮುಂದೆ ಗೆಜ್ಜೆ ಶಬ್ದ ನಿಂತಿದ್ದು ನೋಡಿ , ಅತ್ತ ನಡೆದಿದ್ದ .

           ಕಷ್ಟ ಪಟ್ಟು , ಒಂದೊಂದೇ ಬೀಗದ ಕೀಯನ್ನು ಪ್ರಯತ್ನ ಮಾಡುತಿದ್ದ .

         ಹಳೆಯ ಕಾಲದ ಬೀಗ , ಒಮ್ಮೆಲೇ ಪಟ್ಟನೆ ತೆರೆದು ಕೊಂಡಿತ್ತು .

ಬಂದ ದಿನವೇ ಬಂಗಲೆಯ ಎಲ್ಲಾ ಕೋಣೆಯಲ್ಲಿ , ಎಡಬದಿ ದೀಪದ "ಸ್ವಿಚ್ "ಇರುವುದನ್ನು ಗಮನಿಸಿದ್ದ ವಿಕ್ಕಿ.

          ಹಾಗೆಯೇ ಮೊಬೈಲ್ ಟಾರ್ಚ್ ಹಾಕಿ , ದೀಪದ ಸ್ವಿಚ್ ಹಾಕಿದವನೇ ....ಒಳಗಡೆಯ ಚಿತ್ರಣ ನೋಡಿ ಬೆಚ್ಚಿ ಹಿಂದೆ ಸರಿದಿದ್ದ.

        ಆತನನ್ನೇ ದೃಷ್ಠಿಸಿ "ನೋಡುತ್ತಿದ್ದವು "ಹುಲಿಯ ಮುಖಗಳು . ಕಾಡು "ಎಮ್ಮೆಯ "ಮುಖ.

        ಇಡೀ ಕೋಣೆ ಸಂಪೂರ್ಣ ಜೇಡರ ಬಲೆಯಿಂದ , ದೂಳಿನಿಂದ ಕೂಡಿತ್ತು.

            ದೂಳಿನಲ್ಲಿ , ಆತನಿಗೆ ಕಾಣಿಸಿದ್ದು ಹೆಜ್ಜೆಯ ಗುರುತುಗಳು .

ಒಂದೇ ಗಾತ್ರದ ಹೆಜ್ಜೆಯ ಗುರುತು , ಸಾಕಷ್ಟು ಬಾರಿ ಕೋಣೆಯ ತುದಿಯಲ್ಲಿ ಇದ್ದ "ಪೆಟ್ಟಿಗೆ "ಕಡೆ ಹೋಗಿತ್ತು .

         ಅತ್ತ ಕಡೆಯೇ ಹೆಜ್ಜೆ ಹಾಕಿದ್ದ .

      ದೊಡ್ಡ ಮರದ ಪೆಟ್ಟಿಗೆ ಮುಂದಿದ್ದ ವಿಕ್ಕಿ .

ಆತನನ್ನೇ "ಗುರಾಯಿಸಿ "ನೋಡುತಿದ್ದ ಹಾಗೆ ಭಾಸವಾಗುತ್ತಿತ್ತು ...ಅಲ್ಲಿದ್ದ ಹುಲಿ ತಲೆಗಳು ಮತ್ತು ಇತರೆ ಕಾಡು ಪ್ರಾಣಿಗಳ ತಲೆ .

        ಪ್ರಾಯಾಸದಿಂದ ಮರದ ಪೆಟ್ಟಿಗೆಯ ಬಾಗಿಲು ತೆರೆದಿದ್ದ .

              ಮೊದಲು ಕಾಣಿಸಿದ್ದು , ಬೆಳ್ಳಿಯ ಹಿಡಿಕೆ ಯುಳ್ಳ ಒಂದೆರಡು ಚಾಕುಗಳು.

        ದೂಳಿನ ಕಮಟು ವಾಸನೆ , ಮೂಗಿಗೆ ರಾಚುತಿತ್ತು .

ನಿಧಾನವಾಗಿ ಒಂದೊಂದೇ ವಸ್ತುವನ್ನು ಹೊರಗೆ ತೆಗೆದಿದ್ದ .

              ಕಬ್ಬಿಣದಲ್ಲಿ "ಮಾಡಿದ "ಹುಲಿಯ ಪಂಜ .

              ಕೈಗೆ ಧರಿಸಿ ಕೊಳ್ಳಬಹುದಿತ್ತು ಅದು.

       ಆಗ ಗೆಜ್ಜೆಯ ಸದ್ದು ಸ್ವಲ್ಪ ಜೋರಾಗಿ ಬಂದಿತ್ತು .

"ಏನನ್ನೋ ಹೇಳಲು ಬಯಸುತ್ತಿದ್ದಾಳೆ ರಾಗಿಣಿ "ಎಂದು ಅರ್ಥವಾಗಿತ್ತು .

   ತಕ್ಷಣವೇ "ಧೂಳಿನಲ್ಲಿ "ಮೂಡಿತ್ತು ಅಕ್ಷರಗಳು.

"ಹುಲಿಯ ಪಂಜಾವನ್ನು ನೋಡಿ , ಹಾಗೆಯೇ ಕೆಳಗೆ ಮತ್ತೊಂದು ವಸ್ತು ಇದೆ "ಎಂದು ....ಪಟ ಪಟನೆ ಅಕ್ಷರಗಳು ಬರೆದುಕೊಂಡು ಹೋಗುತ್ತಿದ್ದಳು ರಾಗಿಣಿ .

          ಗಮನವಿಟ್ಟು ಹುಲಿಯ ಪಂಜವನ್ನೇ ನೋಡಿದ .

ಆಕ ಕಾಣಿಸಿದ್ದು ಪಂಜಾದ ಕಬ್ಬಿಣದ "ಉಗುರಿನಲ್ಲಿ " ಅಲ್ಲಲ್ಲಿ ಇದ್ದ ರಕ್ತದ ಕಲೆ.

   

 ಒಣಗಿ "ಕಪ್ಪು "ಬಣ್ಣಕ್ಕೆ ತಿರುಗಿತ್ತು ಅದು .

     ಒಳಗೆ ಕೈ ಹಾಕಿ ತೆಗೆದಿದ್ದ , ಉದ್ದದ ಎರಡು ಕೋರೆ ಹಲ್ಲುಗಳನ್ನು.

             ಬೆಳ್ಳಿಯ ಹಿಡಿಯಲ್ಲಿ ಕಟ್ಟಿಸಿ ಇಟ್ಟಿದ್ದರು ಅದನ್ನ.

ಅರ್ಥವಾಗಲಿಲ್ಲ , ಅದು ಯಾವುದಕ್ಕೆ ಬಳಸುತ್ತಾರೆ ಎಂದು .

     ಒಮ್ಮೆ ಪರಿಶೀಲಿಸಿ , ಎಲ್ಲವನ್ನೂ ಮೊದಲಿನ ಹಾಗೆ ಜೋಡಿಸಿ ಇಟ್ಟಿದ್ದ .

             ಗೆಜ್ಜೆಯ ಶಬ್ದ , ಕೋಣೆಯ ಹೊರಗೆ ನಿಂತಿದ್ದು ನೋಡಿ ...ತಾನು ಅತ್ತ ಕಾಲು ಹಾಕಿದ .

           ಆಗ ಗಮನಿಸಿದ , ಧೂಳಿನಲ್ಲಿ ಆಕೆ ಬರೆದ ಅಕ್ಷರಗಳು ಮಾಯವಾಗಿದ್ದು.

           ಆತನ ಇಡೀ "ಮೈ "ದೂಳಿನಿಂದ ಕೂಡಿತ್ತು.

ಮೊದಲಿನ ಹಾಗೆ ಬೀಗ ಹಾಕಿ , ಅದರ ಚಾವಿಯನ್ನು ಮೊದಲ ಸ್ಥಾನದಲ್ಲಿಟ್ಟು ....ತನ್ನ ರೂಮಿಗೆ ಹಿಂತಿರುಗಿದ .

   ಮೊದಲು ಆತ ಹೊಕ್ಕಿದ್ದು , ಸ್ನಾನದ ಕೊಠಡಿಯನ್ನು.

            ಗೊತ್ತಿತ್ತು , "ರಾಗಿಣಿ ಆತ್ಮ ತನ್ನ ಕೋಣೆಯಲ್ಲಿಯೇ ಇದೆಯೆಂದು".

ಹೊರಗಡೆಯಿಂದ "ಕೇಳಿಸುವ "ಗೆಜ್ಜೆಯ ಶಬ್ದದಿಂದ.

                ಹೊರಗೆ ಬಂದವ , ತನ್ನ ಕಾದಂಬರಿಯ ಹಾಳೆಗಳು ಒಂದೊಂದೇ ತೆರೆದು ...ಪುಟ ಬದಲಾಯಿಸಿ ಹೋಗುತ್ತಾ ಇದ್ದಿದ್ದು ನೋಡಿದ .

      ಮತ್ತೊಮ್ಮೆ ಖಚಿತವಾಗಿತ್ತು , "ರಾಗಿಣಿ ಬರೆಯುತ್ತಿದ್ದಾಳೆ "ಎಂದು.

                 "ಇದೆ ಬಂಗಲೆಯ ನೆಲಮಾಳಿಗೆಯಲ್ಲಿ , ಹಿಂದಿನ ನನ್ನ ಹಿರಿಯರು ಶೇಖರಿಸಿಟ್ಟ ನಿಧಿ ಇದೆ".

       ಓದುತ್ತಾ ಹೋಗುತ್ತಿದ್ದ ವಿಕ್ಕಿ , ರಾಗಿಣಿ ಬರೆದಿದ್ದು.

ಎಲ್ಲವೂ ಸುಂದರವಾಗಿತ್ತು .

ನಾನು , ಅಕ್ಕ ಹಾಗೂ ತಂಗಿ .

  ಅಕ್ಕ ಪದ್ಮಿನಿ ದೇವಿಯ ವಿವಾಹ ಆಯಿತು , ಉದ್ಯಮಿ ಜೊತೆಗೆ .

    ಅಪ್ಪ ಮೊದಲಿನಿಂದಲೂ ದೊಡ್ಡ "ಉದ್ಯಮ " ಹೊರಗಿನ ನಗರದಲ್ಲಿ.

ಅಕ್ಕ ಪದ್ಮಿನಿಯೇ ಇಲ್ಲಿಯ ಎಲ್ಲಾ ಜವಾಬ್ದಾರಿ" .

                  ನಿಂತಿತ್ತು ಬರಹ ಅಲ್ಲಿಗೆ .

ಮೊದಲ ಬಾರಿಗೆ , ರಾಗಿಣಿಯ ಆತ್ಮದ ಜೊತೆ ಮಾತಾಡಿದ್ದ .

       "ಮುಂದೆ ಬರೆ , ಸಂಪೂರ್ಣ ವಿಷಯ" ಎಂದು .

"ಆಕೆಗೆ ತನ್ನ ಮಾತು ಕೇಳಿಸಿ ಇರುತ್ತೆ "ಎನ್ನುವುದು ಅರಿವಾಗಿದ್ದು , ಮತ್ತೆ ಪುಟದ ಮೇಲೆ ಮೂಡತೊಡಗಿದ ಅಕ್ಷರಗಳು.

           "ಮದುವೆ ನಂತರ ಕೂಡ ,ಅಕ್ಕನದೇ ಜವಾಬ್ದಾರಿ .

ಇಡೀ ಬಂಗಲೆ "ಆಳಿನಿಂದ "ತುಂಬಿ ತುಳುಕುತ್ತಾ ಇದ್ದ ಸಮಯ ಅದು .

     ಎಲ್ಲವೂ ಅವಳದೇ ಅಂತಿಮ ಮಾತು" .

ನೋಡುತ್ತಿದ್ದ ವಿಕ್ಕಿ, ಪಟಪಟನೆ ಮೂಡುವ ಅಕ್ಷರಗಳನ್ನು.

"ಇವತ್ತು ನಾ ನೆಲೆ ಇಲ್ಲದ ಆತ್ಮ ಆಗುವುದಕ್ಕೆ ಅವಳೇ ಕಾರಣ".

       ಬೆಚ್ಚಿ ಬಿದ್ದಿದ್ದ ವಿಕ್ಕಿ , ಅಕ್ಷರಗಳನ್ನು ನೋಡಿ.

         "ಆಸೆ ಅತಿ ಆಗಿತ್ತು ಅವಳಿಗೆ ".

ಮತ್ತೆ "ಮೂಡುತ್ತಿತ್ತು "ಅಕ್ಷರಗಳು .

"ನೀವು ಆಗ ನೋಡಿದ ಹುಲಿಯ ಪಂಜಾ ದಿಂದ , ಮಲಗಿದ ನನ್ನ ತೆರೆದು ಹಾಕಿ ಬಿಟ್ಟಳು ಅವಳು .

         ಅಲ್ಲಿದ್ದ ಉದ್ದದ ಹಲ್ಲುಗಳನ್ನು , ಕುತ್ತಿಗೆಗೆ ನಾಟಿಸಿದಳು.

     ಆವತ್ತೇ ಶುರು ಮಾಡಿದ್ದು ಅವಳು ಕಥೆಯನ್ನು .

ಪ್ರೇತದ ಭಾದೆಯಿಂದ ನಾ ಸತ್ತೆ ಎಂದು .

          ನಾ ಕೂಗಿ ಕೊಳ್ಳುತಿದ್ದೆ , ಆದರೆ ಇಡೀ ಮನೆಯ ಆಳುಗಳು ಅವಳ ಮಾತನ್ನೇ ಕೇಳುತ್ತಿದ್ದರು .

ಕುಂಜಪ್ಪ ಅಜ್ಜ ಮತ್ತು ಅವನ ಮಗಳ ಹೊರತು ಪಡಿಸಿ.

   ಕುಗುವಾಗ ನನ್ನ , ನನ್ನದೇ ಕೊಠಡಿಯಲ್ಲಿ ಇಬ್ಬರು ಆಳುಗಳು ಗಟ್ಟಿಯಾಗಿ ಹಿಡಿದು ಕೊಂಡಿದ್ದರು .

     ಬಾಯಿಗೆ ಬಟ್ಟೆ ತುರುಕಿ "..

ವಿಕ್ಕಿ ನಡುಗಿ ಹೋದ , ಮೂಡಿತಿದ್ದ ಅಕ್ಷರಗಳನ್ನು ನೋಡುತ್ತಾ .

   ಆದರೆ ತನ್ನ ಅವಳ ತಂದೆ , ತನ್ನನ್ನು ಇಲ್ಲಿ ಯಾಕೆ ಬರುವಂತೆ ಹೇಳಿ...... ಪ್ರಯೋಗ ಮಾಡಲು ಹೊರಟಿದ್ದ ಎಂಬುದು ಮಾತ್ರ ಅರ್ಥ ಆಗಿರಲಿಲ್ಲ.

          ಕಥೆಗೆ ವಸ್ತು ಹುಡುಕಿ ಬಂದವ , ಅವನೇ ಕಥೆಯ ಪಾತ್ರವಾಗಿ ಹೋಗುತಿದ್ದ .

            ಆದರೆ ನೋಡುತಿದ್ದ , ಮೂಡುತ್ತಿದ್ದ ಅಕ್ಷರವನ್ನು .

         "ಅಕ್ಕ ನನ್ನ ಸಾಯಿಸಿ , ಮರುದಿನ ನನ್ನ ತಂಗಿಯನ್ನು ಕೂಡ ...ಇದೇ ತರಹ ಸಾಯಿಸಿ ಬಿಟ್ಟಳು .

     ಸಾವಿರಾರು ಕೋಟಿಯ ಆಸ್ತಿಗೆ , ನಿಧಿಯ ಪೆಟ್ಟಿಗೆಗೆ.

                ನಾ ಕೂಗಿ ಹೇಳುತ್ತಿದ್ದೆ , ಶವ ಸಂಸ್ಕಾರದ ವೇಳೆಯಲ್ಲಿ .

ನನ್ನ ಸುಡಬೇಡಿ ಎಂದು .

ಅಪ್ಪನಿಗೆ ಅಳುತ್ತಾ ಹೇಳುತ್ತಿದ್ದೆ , ನನ್ನ ಕಥೆಯನ್ನು .

   ಯಾರಿಗೂ ಕೇಳಿಸುತ್ತಿರಲಿಲ್ಲ ನನ್ನ ಮಾತು .

ಆಗಲೇ ಗೊತ್ತಾಗಿದ್ದು , ನಾನು ದೇಹ ಬಿಟ್ಟ ಅತ್ಮವಾಗಿ ಹೋದೆ "ಎಂಬುದು .

        

           ಆತ್ಮ ಕೂಡ "ಭಾವುಕವಾಗಿ "ಹೋಗಿತ್ತು .

          ವಾಕ್ಯ ರಚನೆ ನಿಧಾನವಾಗಿ ಮೂಡುತ್ತಿತ್ತು .

"ಆಶ್ಚರ್ಯವೆಂದರೆ ತಂಗಿಯ ಆತ್ಮ ನನಗೆ ಕಾಣಿಸಲಿಲ್ಲ ,ಬಹುಶಃ ಆಕೆಗೆ ಮುಕ್ತಿ ಪ್ರಾಪ್ತವಾಗಿರಬೇಕು.

     ಮನೆಯಲ್ಲೇ ಓಡಾಡುತ್ತಿದ್ದೆ , ಎಲ್ಲರನ್ನೂ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದೆ.

         ಆರು ತಿಂಗಳುಗಳ ಕಾಲ ಹೀಗೆ ಓಡಾಡುತ್ತಾ ಇದ್ದಾಗ , ನನ್ನ ಪತ್ತೆ ಹಚ್ಚಿದವಳು ಸುಹಾಸಿನಿ.

ನನ್ನ ಹೆಜ್ಜೆ ಶಬ್ದ , ಅವಳಿಗೆ ಮಾತ್ರ ಕೇಳಿಸುತ್ತಿತ್ತು.

                ಆದರೆ ನನ್ನ ಮಾತುಗಳು ಅಲ್ಲ".

ಅರಿವಾಗಿತ್ತು ವಿಕ್ಕಿಗೆ , ಸುಹಾಸಿನಿಯ ಪಾತ್ರ ಬಂದಕೂಡಲೇ.

    ಮಾತು ಬಾರದ ಅನಕ್ಷರಸ್ತೆ , ಸಾಕಷ್ಟು ಬಾರಿ ಕಣ್ಣಿನಲ್ಲೇ ಹೇಳಿದ್ದಳು.

"ಅದೇನೋ ಗೊತ್ತಿಲ್ಲ , ಕುಂಜಪ್ಪ , ಸುಹಾಸಿನಿ ಯಾರೋ ಮಾಟಗಾರನನ್ನ ಬೇಟಿ ಮಾಡಿದ್ದರು.

        ಅದರ ನಂತರವೇ ನನ್ನಲ್ಲಿ ಒಂದಷ್ಟು ಶಕ್ತಿ ಸಂಚಯ ವಾಗಿದ್ದು.

    ನಿರ್ಜೀವ ವಸ್ತುಗಳ ಮೇಲೆ ನನ್ನ ಶಕ್ತಿ ಅಪರಿಮಿತ.

            ಅವತ್ತಿನಿಂದಲೇ ಅಕ್ಕನಿಗೆ ಸಹಾಯ ಮಾಡಿದ ಆಳುಗಳನ್ನು ತೆರೆದು ಹಾಕಿದೆ , ಅದೇ ಹುಲಿ ಪಂಜಾ ದಿಂದ.

        ಅಕ್ಕ ಪಾರಾದಳು , ಜೊತೆಗೆ ಕುಟುಂಬದ ಪುರೋಹಿತರ "ಶ್ರೀರಕ್ಷೆಯ "ಯಂತ್ರ ಅವಳ ಕೊರಳು ಸೇರಿತು".

       ಸಾಲಾಗಿ ಅಕ್ಷರಗಳು ಓಡುತ್ತಿತ್ತು , ಬಿಳಿ ಹಾಳೆಯ ಮೇಲೆ.

        

         ನಿನ್ನ ತಂದೆಯವರು ನನ್ನ ಕರೆಸಿದ್ದು ಹೇಗೆ ಎಂದಿದ್ದ ವಿಕ್ಕಿ.

         ಅದಕ್ಕೆ ಉತ್ತರವೆಂಬಂತೆ ಅಕ್ಷರಗಳು ಮೂಡತೊಡಗಿತ್ತು.

"ನನ್ನ ವಿರುದ್ಧ ಇದ್ದವರನ್ನು , ಯಮಪುರಿಗೆ ಅಟ್ಟಿದೆ.

ಅವತ್ತಿನಿಂದ ಈ ಬಂಗಲೆ "ಭೂತಬಂಗಲೆ "ಎಂದಾಯಿತು.

             ಮನೆ ಪುರೋಹಿತರಲ್ಲಿ ಅಪ್ಪ ಕೇಳಿದ್ದ , ಮನೆಯ ಪರಿಸ್ಥಿತಿಯ ಬಗ್ಗೆ.

ಉತ್ತರ ಸಿಕ್ಕಿತ್ತು ಆತನಿಗೆ , ನನ್ನ ದೇಹಾತ್ಮ ಅಲ್ಲಿ ಇದೆ ಎಂದು.

ನನ್ನ ಆತ್ಮದ ಉದ್ದೇಶ ಈಡೇರಿದರೆ , ತಕ್ಷಣ ನನಗೆ ಮುಕ್ತಿಯೆಂದು ಹೇಳಿದ್ದರು ಪುರೋಹಿತರು.

              ಕುಂಜಪ್ಪನ ಬಳಿ ಸುಳ್ಳು ಹೇಳಿಸಿದೆ ಅಪ್ಪನಿಗೆ.

              ನಿಮ್ಮ ಪ್ರೀತಿಯ ಬಲೆಯಲ್ಲಿ ನಾ ಬಿದ್ದಿದ್ದೆ ಎಂದು".

ಆಶ್ಚರ್ಯ ಆಗಿತ್ತು ವಿಕ್ಕಿಗೆ.

ತನ್ನ "ಅವಶ್ಯಕತೆ " ಏನಿತ್ತು ಆಕೆಗೆ ಎಂಬುದರ ಬಗ್ಗೆ.

       

          ಅಕ್ಷರಗಳು ಮೂಡುತ್ತಾ ಹೋಗುತ್ತಿತ್ತು .

"ಅಪ್ಪನಿಗೆ ಅನಿಸಿದ್ದು , ನಿಮ್ಮ ಇಲ್ಲಿ ಕರೆಸಿದರೆ ನಾ ಮುಕ್ತಿ ಪಡೆಯಬಲ್ಲೆ "ಎಂದು .

       ರಾತ್ರಿ ಎರಡು ಗಂಟೆ ದಾಟಿ ಹೋಗಿತ್ತು.

ಕಾದಂಬರಿ ಬರೆಯಲು ಬಂದವನು , ವಿಜ್ಞಾನಕ್ಕೆ ನಿಲುಕದ ಆತ್ಮದ ಜೊತೆ ಕುಳಿತಿದ್ದ.

          ಅರ್ಥ ಆಗದ , ಬಹಳಷ್ಟು ವಿಷಯಗಳು ಇದ್ದವು ಆತನ ಮುಂದೆ .

      ಆದರೆ ಒಂದಂತೂ ಸ್ಪಷ್ಟವಾಗಿತ್ತು.

ತನ್ನನ್ನು ಬೇರೆಯ ಯಾವುದೋ ಉದ್ದೇಶಕ್ಕೆ

ಕರಿಸಿದಂತಿದೆ ಎಂದು.

ಕೇಳಿದ್ದ , ಅದನ್ನೇ .

ನಾ ಕೇವಲ ಕಥೆಗಾರ .

ಈಗ ಚಾಲ್ತಿಯಲ್ಲಿ ಇಲ್ಲಾ ಕೂಡ ನಾನು .

     ಸೋತು ಸುಣ್ಣವಾಗಿದ್ದ ನನಗೆ ಕಾದಂಬರಿಯ ಆಸೆ ತೋರಿಸಿ ಕರೆಸಿದ್ದು ಯಾಕೆ ?.

          ಭಯವಾಗಿತ್ತು ವಿಕ್ಕಿಗೆ .

ಎಲ್ಲಿ ತನ್ನ ಮೇಲೆ ಸಿಟ್ಟು ಆಗುತ್ತಾಳೆ , ಎಂಬುದರ ಚಿಂತೆ ಶುರುವಾಗಿತ್ತು .

   "ನಿಮ್ಮ ಹಳೆಯ ಕಾದಂಬರಿಯಲ್ಲಿ , ಹೆಂಗಸು ಒಬ್ಬಳು ಸೇಡು ತೀರಿಸಿ ಕೊಳ್ಳುವ ಕಥೆ ಇದೆ "ಎಂದಿದ್ದಳು ರಾಗಿಣಿ.

       "ನನ್ನ ಶಕ್ತಿ ಈ ಮನೆಗೆ ಮಾತ್ರ ಸೀಮಿತ .

ಮನೆಗೆ ಅಕ್ಕ ಬರುವ ಹಾಗೆ ಮಾಡಬೇಕು ನೀವು , ಹಾಗೆ ಕಾದಂಬರಿಯ ಕೊನೆ ಪಾತ್ರ ಅವಳ ಮರಣವೇ ಆಗಿರಬೇಕು ".

"ಅದಕ್ಕೆ , ನೀವೇ ಸಮರ್ಥರು" .

ಅಕ್ಷರಗಳು ಮೂಡುತ್ತಿದ್ದ ಹಾಗೆ , ವಿಕ್ಕಿ ಬೆವೆತು ಹೋಗಿದ್ದ .

ಅವಳ ಕೋರಿಕೆ ಕೇಳಿ .

"ಮಾಡುತ್ತೀರಾ ಅಲ್ವಾ ಸಹಾಯ ?".... ಕೊನೆಯಲ್ಲಿ ಪ್ರಶ್ನಾರ್ಥಕ "ಚಿನ್ಹೆಯೊಂದಿಗೆ "ನಿಂತಿತ್ತು ಬರಹ.

              

             ಕೇವಲ ಮೂರು ದಿನದಲ್ಲಿ ಆದ ಬೆಳವಣಿಗೆ , ಈಗ ನಡೆಯುತ್ತಿರುವ ಘಟನೆ ...ಕೋರಿಕೆ ಎಲ್ಲವೂ ಕನಸಿನಂತೆ ಭಾಸವಾಗುತ್ತಿತ್ತು ಅವನಿಗೆ.

      "ಅಕ್ಕನ ಕೊರಳಲ್ಲಿ ತಾಯಿತ ಇದೆ .

ನಾ ಅವಳ ಏನು ಮಾಡಲು ಸಾಧ್ಯವಿಲ್ಲ , ನೀವೇ ಹುಡುಕಿ ಕೊಡಿ ಒಂದು ಮಾರ್ಗ "ಎಂದು ಬರೆದಿತ್ತು ಆತ್ಮ.

           "ಸಮಯ ಬೇಕು ನನಗೆ , ಕೊಲೆ ಮಾಡಲು ನಾ ತಯಾರಿಲ್ಲ "ಎಂದಿದ್ದ ವಿಕ್ಕಿ.

       

        " ನನಗೆ ಇನ್ನು ಉಳಿದಿರುವುದು ಕೇವಲ ಮೂರು ತಿಂಗಳು ವಿಕಾಸ್ .

    ಅಷ್ಟರಲ್ಲಿ ನಾ ಅಂದುಕೊಂಡ ಹಾಗೆ ಆದರೆ , ನಾ ಮೋಕ್ಷ ಪಡೆಯಬಲ್ಲೆ .

ಇಲ್ಲದಿದ್ದರೆ ಈಗಿರುವ ಶಕ್ತಿಯನ್ನು ಕೂಡ ಕಳೆದುಕೊಂಡು , ಅಂತರಿಕ್ಷದಲ್ಲಿ ಪ್ರೇತಾತ್ಮವಾಗಿ ಇರಬೇಕು".

      

           "ಸಮಯ ತೆಗೆದುಕೊಳ್ಳಿ .

ನಿರಾಸೆ ಮಾಡಬೇಡಿ ದಯವಿಟ್ಟು "ಎಂದು ಬರೆದ ಮೇಲೆ ...ಗೆಜ್ಜೆ ಶಬ್ದ ಕೇಳಿಸಿತ್ತು .

ಕೋಣೆಯಿಂದ" ಹೊರಗೆ "ನಡೆದುಹೋದ ಸದ್ದು ಅದು.

      

           ಬೆಳಿಗ್ಗೆ ಸೂರ್ಯ ಹುಟ್ಟುವ ತನಕ , ಆಲೋಚನೆ ಮಾಡಿದ ವಿಕ್ಕಿ.

       ಬೀದಿಗೆ ಬಿದ್ದವನ ಬ್ಯಾಂಕ್ ಖಾತೆಗೆ , ದುಡ್ಡು ಹಾಕಿಸಿದ ರಾಗಿಣಿಯ" ಋಣ "ಅವನ ಮೇಲೆ ಇತ್ತು.

     ಆಕೆಯ" ಕಥೆಯೇ "ಕಾದಂಬರಿ ಆಗುತ್ತಿತ್ತು.

ನಿಸ್ಸಂದೇಹವಾಗಿ ಇದೇ ವಿಷಯದ ಕಾದಂಬರಿ , ಮತ್ತೊಮ್ಮೆ ಆತನ ಉನ್ನತ ಸ್ಥಾನಕ್ಕೆ ಕರೆದೊಯ್ಯುವಲ್ಲಿ .....ಯಾವ ಸಂದೇಹವೂ ಇರಲಿಲ್ಲಾ.

          ಬೆಳಿಗ್ಗೆ ಎಂದಿನಂತೆ , ಕುಂಜಪ್ಪ ಮತ್ತು ಆತನ ಮಗಳು ಸುಹಾಸಿನಿ ಕೆಲಸಕ್ಕೆ ಬಂದಿದ್ದರು.

           ಸುಹಾಸಿನಿ ನೋಟ ಅವನ ಮೇಲೆಯೇ .

ಆಕೆಯ ಕಣ್ಣಲ್ಲೇ ಬೇಡಿಕೆ ಇತ್ತು , "ತನ್ನ ಗೆಳತಿಗೆ ಸಹಾಯ ಮಾಡೆಂದು".

ಆಗಲೇ ಸ್ಪಷ್ಟವಾಗಿ ನೋಡಿದ್ದ ಸುಹಾಸಿನಿಯನ್ನು.

     ಹೊಳೆಯುವ ಅವಳ "ಕಣ್ಣಲ್ಲಿ "ನಿಷ್ಠೆ ಕಾಣಿಸುತ್ತಿತ್ತು.

         ಚೆಂದದ ಮುಗ್ದ ಮುಖ , ಗೆಳತಿಯ ಗೋಳನ್ನು ತಿಳಿಸುತ್ತಿತ್ತು ಆತನಿಗೆ.

ದೇವರು ಅದೆಷ್ಟು ಕಠೋರ ಅನಿಸಿತು , ಅವಳ ಮಾತು ಕಸಿದುಕೊಂಡ ಬಗ್ಗೆ .

       ತೀರ್ಮಾನ ಮಾಡಿದ್ದ , ಕಾದಂಬರಿ ಬರೆಯಬೇಕೆಂದು.

ಕೊನೆಯ ಪುಟದಲ್ಲಿ , ಶತ್ರುವಿನ ಮರಣದ ರೂಪರೇಷೆಯ ಸಮೇತ .

               ವಾರ ಕಳೆದುಹೋಗಿತ್ತು.

"ಸಹಾಯ ಮಾಡುವುದಾಗಿ ತಿಳಿಸಿದ್ದ " ವಿಕ್ಕಿ.

ಇದರ ಮಧ್ಯೆ ಸಾಳ್ವೆ ಎರಡು ಬಾರಿ ಆತನ ಆರೋಗ್ಯ , ಮತ್ತು ಅಲ್ಲಿನ ವಸತಿಯ ಬಗ್ಗೆ ವಿಚಾರಿಸಿದ್ದರು.

         ಅವರ ಮಾತಿನಲ್ಲಿ , ಆಶ್ಚರ್ಯ ಧ್ವನಿಸುತ್ತಿತ್ತು.

   ಕುಂಜಪ್ಪ ಹೇಳಿದ ಹಾಗೆಯೇ , ತನ್ನ ಮೆಚ್ಚಿನ ಮಗಳ ಆತ್ಮ "ಲೇಖಕನಿಗೆ "ಏನು ಮಾಡಿರಲಿಲ್ಲ.

          ವಿಕ್ಕಿ ಬೇಡವೆಂದರೂ ಕೂಡ , ಮತ್ತೆ ಹತ್ತು ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ್ದರು ಆತನ ಖಾತೆಗೆ.

   "ಆತ ಇನ್ನಷ್ಟು ದಿನ ಇದ್ದು , ತನ್ನ ಮಗಳ ಆತ್ಮಕ್ಕೆ ಮುಕ್ತಿ ದೊರೆಯಲಿ ಎಂಬ ಆಸೆ "ಅವರದು.

          ಪ್ರತಿದಿನ ಬರೆಯುತ್ತಿದ್ದ ವಿಕ್ಕಿ.

ಪ್ರತಿದಿನ ಕೂಡ " ಗೆಜ್ಜೆ "ಶಬ್ದ ಕೇಳಿಸುತ್ತಿತ್ತು ಆತನಿಗೆ.

      ದಿನವೂ ಮಾತನಾಡಿಸುತ್ತಿತ್ತು ರಾಗಿಣಿಯ ಆತ್ಮ.

ಬರವಣಿಗೆಯ ಮೂಲಕ.

ಶುಭೋದಯ , ಶುಭರಾತ್ರಿ ಹೇಳುವ ಮೂಲಕ.

    ತನ್ಮಯನಾಗಿ ಹೋಗಿದ್ದ ವಿಕ್ಕಿ , ಕಾದಂಬರಿ ಬರೆಯುತ್ತಾ .

    ಗಂಟೆಗೆ ಒಮ್ಮೆ , ಆತನ ನೋಡಿ ಹೋಗುತ್ತಿತ್ತು ಸುಹಾಸಿನಿಯ ಸುಂದರ ಕಣ್ಣುಗಳು.

                    ತಿಂಗಳು ಕಳೆದಿತ್ತು.

ರಾಣಿ "ಪದ್ಮಿನಿ "ಫೋನ್ ಮಾಡಿದ್ದಳು .

"ಲೇಖಕರು ಸುಖವಾಗಿ ಇದ್ದ ಹಾಗೆ ಇದೆ ಅಲ್ಲಿ " ಎಂದಿದ್ದಳು ಪರೀಕ್ಷಿಸಲು.

      "ಹೂ "ಅಂದಿದ್ದ ವಿಕ್ಕಿ .

"ತಮಗೇನು ತೊಂದರೆ ಆಗಿಲ್ಲ ತಾನೇ?.... ಭೂತಬಂಗಲೆ ಯನ್ನಾಗಿ ಮಾಡಿಬಿಟ್ಟಿದ್ದರು ನಮ್ಮ ಜನ.

           ಹಾಗೆ ಆಗಿತ್ತು ಕೂಡ ಹಿಂದಿನ ಘಟನೆಗಳು" .

ಪದ್ಮಿನಿಯ ಮಾತಿನಲ್ಲಿ , ತಿಳಿದುಕೊಳ್ಳುವ ಕುತೂಹಲವಿತ್ತು.

"ಆದರೆ ನೀವು ತಿಂಗಳ ಮೇಲೆ , ಸುರಕ್ಷಿತವಾಗಿ ಇದ್ದಿದ್ದು ನೋಡಿ ಧೈರ್ಯ" ಎಂದು ನಕ್ಕಿದ್ದಳು.

          ನಕ್ಕಿದ್ದ ವಿಕ್ಕಿ.

"ನನಗೇನು ಅನುಭವಕ್ಕೆ ಬಂದಿಲ್ಲ , ಆದರೂ ನಾ ಕಾಲಿಟ್ಟ ಕಡೆ ಯಾವ ದುಷ್ಟ ಶಕ್ತಿಯು ಕೂಡ ಇರುವುದಿಲ್ಲ " ಎಂದಿದ್ದ.

       ನಿಜ ಅನಿಸತೊಡಗಿತ್ತು ,ಪದ್ಮಿನಿಗೆ ಸಹ.

ಆದರೂ ಹೆದರಿಕೆ ಇತ್ತು ಆಕೆಗೆ .

ಹಾಗೆಯೇ ಆಕೆ ಬಂಗಲೆಗೆ ಬರಲೇ ಬೇಕಿತ್ತು .

   ನಿಧಿಯನ್ನು ಸಾಗಿಸಲು .

ತಂದೆಗೆ ಕೂಡ ತಿಳಿಯದಂತೆ .

       

                  "ನೀವು ಲೇಖಕರೋ ,ಮಾಯಾವಿಗಳೋ " ಎಂದಿದ್ದಳು.

      ನಿಧಾನವಾಗಿ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಳು ಅವಳು.

  "ಮಾಯಾವಿ ಆಗಿದ್ದೆ , ಕಡೆಗೆ ಲೇಖಕ ಆದೆ ....ನನ್ನ ಸಾಕಷ್ಟು ಕಾದಂಬರಿಗಳಲ್ಲಿ ಅದನ್ನು ವಿವರಿಸಿದ್ದೇನೆ

ಕೂಡ " ಎಂದಿದ್ದ ವಿಕ್ಕಿ.

      ಅತ್ತ ಕಡೆ "ಸಮಾಧಾನದ "ಉಸಿರು.

          ಮತ್ತೊಂದು ತಿಂಗಳು ಕಳೆಯುವಷ್ಟರಲ್ಲಿ , ಕಾದಂಬರಿ ಸಂಪೂರ್ಣವಾಗಿ ಬರೆದಿದ್ದ .

          ಕೊನೆಯ "ನಾಲ್ಕು "ಪುಟಗಳನ್ನು ಬಿಟ್ಟು.

ಅಷ್ಟರಲ್ಲಿ ಊರಿನಲ್ಲಿ ಕೂಡ ಪ್ರಚಾರವಾಗಿತ್ತು .

"ಭೂತಬಂಗಲೆಯಲ್ಲಿ ಭೂತ ಪರಾರಿಯಾಗಿದೆ " ಎಂದು.

         ರಾತ್ರಿ ಮಾತಾಡುತ್ತಿದ್ದ ರಾಗಿಣಿಯ ಜೊತೆ.

ಹೇಳಿದ್ದ ಆಕೆಗೆ , "ಒಮ್ಮೆಯೂ ನಿನ್ನ ಗೆಜ್ಜೆ ಶಬ್ದ ಕೇಳಿಸಬಾರದು "ಎಂದು.

         ಕುಂಜಪ್ಪನಿಗೆ ಹೇಳಿ , ನಾಲ್ಕಾರು ಆಳುಗಳನ್ನು ಬರುವಂತೆ ಮಾಡಿದ್ದ.

        ಮೊದಲು ಹೆದರಿಕೆಯಿಂದ ಬಂದವರು , ಸಂತೋಷದಿಂದ ಹಿಂತಿರುಗಿ ಹೋಗಿದ್ದರು.

         ಅರಮನೆಯಂತೆ ಇದ್ದ ಬಂಗಲೆಗೆ , ಹೊಸ ರೂಪ ಬಂದಿತ್ತು.

ಆಳುಕಾಳುಗಳು" ಭಯವಿಲ್ಲದೆ "ಕೆಲಸ ಮಾಡಿ ಹೋಗುತ್ತಿದ್ದರು.

ಸಾಳ್ವೆ ಮತ್ತು ಪದ್ಮಿನಿಗೆ , ಪ್ರತಿ ವಿಷಯ ತಿಳಿಯುವಂತೆ ಮಾಡಿದ್ದ. ಕುಂಜಪ್ಪನ ಮೂಲಕ.

ರಾತ್ರಿ ಫೋನ್ ಮಾಡಿದ್ದ ವಿಕ್ಕಿ , ಸಾಳ್ವೆಗೆ.

       "ಸರ್ , ನನ್ನ ಕಾದಂಬರಿ ಮುಗಿದಿದೆ .

ಅದನ್ನು ನಿಮ್ಮ ಮಗಳಿಗೆ ಅರ್ಪಣೆ ಮಾಡುತ್ತೇನೆ ಕೂಡ.

     ನಿಮ್ಮ ಮನೆಯಲ್ಲೇ ಅದರ ಕಾರ್ಯಕ್ರಮ ಆಗಲಿ ಎಂಬುದು ನನ್ನ ಆಸೆ .

    ತಮ್ಮೆಲ್ಲರ ಸಮುಖ , ನಿಮ್ಮ ಹಿರಿಮಗಳಿಂದ ನನ್ನ ಕಾದಂಬರಿ ಲೋಕಾರ್ಪಣೆ ಆಗಲಿ "ಎಂದು ವಿಕ್ಕಿ ನುಡಿದಿದ್ದು ಕೇಳಿ ಸಂತೋಷದಿಂದ ಒಪ್ಪಿದ್ದರು.

        ಪದ್ಮಿನಿ ಕೂಡ , ಸಂತೋಷ ವ್ಯಕ್ತಪಡಿಸಿ ... ದಿನಾಂಕವನ್ನು "ನಿಗದಿ "ಮಾಡುವಂತೆ ಹೇಳಿದ್ದಳು.

                 ಆವತ್ತು ಸಂಜೆ ಕುಂಜಪ್ಪನಿಗೆ ಮತ್ತು ಸುಹಾಸನಿಗೆ , ಅಲ್ಲೇ ಉಳಿಯುವಂತೆ ತಿಳಿಸಿದ್ದ ವಿಕ್ಕಿ.

        ರಾತ್ರಿ ಊಟದ ನಂತರ , ಆತನ ರೂಮಿನಲ್ಲಿ ಕುಳಿತಿದ್ದರು ಮೂವರು .

     ನಿಧಾನವಾಗಿ ಗೆಜ್ಜೆ ಇಲ್ಲದ ಹೆಜ್ಜೆ ಶಬ್ದ , ಅವರನ್ನು ಕೂಡಿಕೊಂಡಿತ್ತು.

    

           "ರಾಗಿಣಿ "ಅಂದಿದ್ದ , ತೂಗು ಕುರ್ಚಿಯ ಕಡೆ ನೋಡುತ್ತಾ.

   "ಇನ್ನು ಐದು ದಿನಕ್ಕೆ , ಬಂಗಲೆಯಲ್ಲಿ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ.

         ಪದ್ಮಿನಿ ಕೂಡ ಬರುತ್ತಾಳೆ .

ಆದರೆ ನಾ ಮಾತ್ರ ಆಕೆಯನ್ನು ಕೊಲೆ ಮಾಡುವುದಿಲ್ಲ " ಎಂದು ಕುರ್ಚಿಯ ಕಡೆ ನೋಡಿದ್ದ.

     ಸುಹಾಸಿನಿ ಎದ್ದು ಹೋಗಿ , ಬಿಳಿ ಕಾಗದ ಮತ್ತು ಪೆನ್ನನ್ನು ಇಟ್ಟು ಬಂದಿದ್ದಳು ಕುರ್ಚಿಯ ಮುಂದೆ.

       "ಮತ್ತೆ ನಾ ಅಂತರ ಪಿಶಾಚಿಯಾಗಿಯೇ ಇರಲಿ ಎಂದೆ ?".. ವಾಕ್ಯ ಮೂಡಿತು ಕಾಗದ ಮೇಲೆ.

     " ಇಲ್ಲಾ , ಆವತ್ತೇ ನಿನ್ನ ಮುಕ್ತಿ "ಎಂದಿದ್ದ ವಿಕ್ಕಿ.

                ಅರ್ಥವಾಗದೆ ನೋಡುತ್ತಿದ್ದರು, ಕುಂಜಪ್ಪ ಮತ್ತು ಸುಹಾಸಿನಿ.

ರಾಗಿಣಿಯ ಆತ್ಮ ಸಹ.

ಬಿಡಿಸಿ ಹೇಳುತಿದ್ದ ವಿಕ್ಕಿ.

"ರಾಗಿಣಿಗೆ ಪದ್ಮಿನಿಯನ್ನು ಮುಟ್ಟುವ ಶಕ್ತಿ ಇಲ್ಲಾ , ಆದರೆ ಆಕೆ ಮಹಡಿ ಹತ್ತುವಾಗ ....ನಿಮ್ಮ ವಂಶಸ್ಥರ ಒಂದು ಫೋಟೋ ಕೆಡಗಬಹುದು ನೀನು ಅವಳ ಮೇಲೆ".

          "ಗಾಜಿನ ಫ್ರೇಮ್ ಹಾಕಿದ ದೊಡ್ಡ ಫೋಟೋಗಳು , ಹೆಚ್ಚುಕಡಿಮೆ ನೂರಾರು ಕೆಜಿ ಭಾರವಿದೆ.

            ಅದನ್ನು ತೂಗಿ ಹಾಕಿದ್ದು , ದೊಡ್ಡ

ಸರಪಳಿಯಿಂದ .

          ಈಗಾಗಲೇ ಸಾಕಷ್ಟು ತುಕ್ಕು ಹಿಡಿದಿದೆ ಅದು .

ಯಾವಾಗಲಾದರೂ ಅದು ಕಳಚಿ ಅಚಾತುರ್ಯ ಸಂಭವಿಸಬಹುದು.

ಅವತ್ತೇ ಉಂಟಾಗಲಿ ಅಲ್ಲವೇ ಅದು" , ಎಂದು ತೂಗು ಕುರ್ಚಿಯ ಕಡೆ ನೋಡಿದ ವಿಕ್ಕಿ.

             ಅಕ್ಷರಗಳು ಮೂಡುತ್ತಿದ್ದವು ಸಾಲಾಗಿ.

   "ಖಂಡಿತಾ , ಉಪಕಾರ ಮಾಡಿದ ನಿಮಗೆ ನಾನೇನು ಕೊಡಬಲ್ಲೆ "ಎಂದು ಬರೆದಿತ್ತು.

           ನಕ್ಕಿದ್ದ ವಿಕ್ಕಿ .

"ನಿನ್ನಿಂದ ನಾ ಮತ್ತೆ ಪೆನ್ನು ಹಿಡಿಯುವಂತಾಯ್ತು.

       ಹೊಸ ಜೀವನಕ್ಕೆ ಕೂಡ , ನಿನ್ನ ತಂದೆಯಿಂದ ಸಾಕಷ್ಟು ಪಡೆದಿದ್ದೇನೆ .

ಆದರೂ ನೀ ಮತ್ತು ಸುಹಾಸಿನಿ ಒಪ್ಪಿದರೆ "... ಎಂದು ಸುಹಾಸಿನಿಯ ಕಡೆ ನೋಡಿದ್ದ ವಿಕ್ಕಿ.

     ಸಂತಸ ವ್ಯಕ್ತಪಡಿಸಿತ್ತು ಆತ್ಮ.

ಸುಹಾಸಿನಿಯ "ಮುಖದ "ಮೇಲೆ ನಾಚಿಕೆ ಮೂಡಿತು.

ಆಕೆಯ "ಕಣ್ಣುಗಳು" ನೆಲವನ್ನು ನೋಡುತ್ತಿದ್ದವು.

    ಕಾದಂಬರಿಯ ಕೊನೆಯ "ನಾಲ್ಕು "ಪುಟದ ಮುಕ್ತಾಯವನ್ನು , ಬಂಗಲೆಯಿಂದ ಆಚೆ ಹೋದ ಮೇಲೆ ಬರೆಯಬೇಕೆಂದುಕೊಂಡಿದ್ದ ವಿಕ್ಕಿ.

        ಬಂಗಲೆಯಲ್ಲಿ ತಯಾರಿ ಜೋರು ನಡೆದಿತ್ತು.

ಪದ್ಮಿನಿಯ ವಿವಾಹದ ನಂತರ ಹೊಸದಾಗಿ ಬಣ್ಣ ಕಾಣುತ್ತಿತ್ತು ಗೋಡೆಗಳು.

ಸಾಳ್ವೆ , ಪದ್ಮಿನಿ ಕೂಡ ....ತಮ್ಮ ಬಳಗವನ್ನು ಸಂತೋಷದಿಂದ ಆಮಂತ್ರಿಸಿದ್ದರು.

     ಪದ್ಮಿನಿಯ ಖುಷಿ ಹೇಳ ತೀರದು .

ಏಕೈಕ ವಾರಸುದಾರಳಾಗಿ , ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ..

ಮತ್ತು ಹುದುಗಿಸಿಟ್ಟ "ನಿಧಿಯ "ವಾರಸುದಾರಳಾಗಿದ್ದಳು ಅವಳು.

        ಹಿಂದಿನ ದಿನವೇ , ತಂದೆಯ ಜೊತೆ ಪಯಣ ಬೆಳೆಸಿದ್ದಳು ಬಂಗಲೆಯ ಕಡೆಗೆ.

ವಿಕಾಸ್ ಎಂಬ ಮನುಷ್ಯನ ನೋಡುವ ತವಕ ಇತ್ತು ಆಕೆಗೆ .

ಜೊತೆಗೆ , "ಆತನಿಗೆ ಏನಾದರೂ ತಿಳಿದಿರಬಹುದು " ಎಂಬ ಚಿಂತೆ ಕಾಡುತಿತ್ತು .

        ಬಂಗಲೆಯ ಒಳಗೆ ಕಾಲು ಇಡುವಾಗ ಹೊಡೆದುಕೊಳ್ಳುತ್ತಿತ್ತು , ಆಕೆಯ ಹೃದಯ.

         ಆದರೆ ಅವಳಿಗೆ ಆಶ್ಚರ್ಯ ತರಿಸಿದ್ದು ,    ಬಂಗಲೆಯ ವಾತಾವರಣ.

       ಹೊರಗೆ ಹಚ್ಚಹಸಿರಿನ ಲಾನ್ , ಗುಲಾಬಿ ಗಿಡಗಳು ಬಿಟ್ಟ "ಹೂವುಗಳು "ಕಣ್ಣಿಗೆ ಇಂಪು ಕೊಡುತ್ತಿತ್ತು.

         ಹೆದರುತ್ತಲೇ ಒಳಗೆ ಕಾಲಿಟ್ಟಿದ್ದಳು.

ಸಾಳ್ವೆ ಅವರ ಮುಖದಲ್ಲಿ ಖುಷಿ ಎದ್ದುಕಾಣುತ್ತಿತ್ತು.

         "ಅದೆಷ್ಟು ದಿನಗಳಾಯಿತು ನನ್ನದೇ ಮನೆಯ ನೋಡಿ "ಎಂದುಕೊಂಡರು ಮನಸ್ಸಿನಲ್ಲಿಯೇ.

         ಒಳಗೆ ನಿಂತಿದ್ದ ವಿಕಾಸ್ , ಅವರ ಬರುವನ್ನೇ ನಿರೀಕ್ಷಿಸುತ್ತಾ.

         ಮೊದಲ ಬಾರಿಗೆ ನೋಡುತ್ತಿದ್ದಳು ಪದ್ಮಿನಿ ವಿಕಾಸ್ ನನ್ನ.

ಆರು ಅಡಿಯ ಸ್ಪುರದ್ರೂಪಿ ತರುಣನನ್ನು.

ಕಣ್ಣುಗಳು "ಹೊಳೆಯುತ್ತಿತ್ತು "ಆತನದು.

          ಆತನಲ್ಲಿ ಯಾವುದೋ ಶಕ್ತಿ ಇರುವುದು ಖಚಿತವಾಗಿತ್ತು ಆಕೆಗೆ.

ಒಳಗೆ ಬಂದ ಸಾಳ್ವೆ , ಸೀದಾ ಅವನನ್ನು ಬರಸೆಳೆದು ಅಪ್ಪಿ ಕೊಂಡಿದ್ದರು .

ಅವರ ಕಣ್ಣಿನಿಂದ ಆನಂದ ಭಾಷ್ಪ .

ತನ್ನ ಮಡಿದ ಮಗಳ , ಪ್ರಿಯತಮನ ಮೇಲಿನ ಅಕ್ಕರೆ ಅದು .

      ಅವಳಿಗಾಗಿ , ಯಾರು ಕೂಡ ಕಾಲಿಡದ ಜಾಗಕ್ಕೆ ಆತ ತಿಂಗಳಗಟ್ಟಲೆ ಕುಳಿತು ಬರೆದಿದ್ದ .

                  ಮಾತನಾಡಲು ದ್ವನಿಯೇ ಇರಲಿಲ್ಲಾ ಅವರಿಗೆ.

                  ವಿಕ್ಕಿಗೆ ಕೂಡ , ಮರುದಿನ ಅವರ ವಂಶ ನಿರ್ವಂಶ ಆಗುವುದು ತಿಳಿದಿತ್ತು.

"ಹೇಗೆ ತಡೆದುಕೊಳ್ಳ ಬಲ್ಲ ಈತ , ಎರಡು ಮಕ್ಕಳನ್ನು ಈಗಾಗಲೇ ಕಳೆದುಕೊಂಡವ .

ಮತ್ತೊಬ್ಬ ಮಗಳು ಮರಣದ ವಾರ್ತೆ ಹೇಗೆ

ತಾಳಬಲ್ಲ ",ಎಂಬುದೇ ಆತನ ತಲೆಯೊಳಗೆ ಓಡುತ್ತಿದ್ದ ವಿಚಾರ.

              ಮೊದಲೇ ವಿಕ್ಕಿ ತಿಳಿಸಿದ ಹಾಗೆ ಕುಂಜಪ್ಪ ಮತ್ತು ಸುಹಾಸಿನಿ , ಬಂಗಲೆ ಕಡೆ ಕಾಲು ಹಾಕಿರಲಿಲ್ಲ ಆವತ್ತು .

ಪದ್ಮಿನಿಗೆ ಅನುಮಾನ ಬಂದೀತು ಎಂದು .

               ರಾತ್ರಿ ಊಟವಾದ ಮೇಲೆ ಎಲ್ಲರೂ ಅವರವರ ಕೋಣೆ ಸೇರಿದ್ದರು.

       ಆಗ ಬಂದಿದ್ದಳು "ಪದ್ಮಿನಿ "ವಿಕ್ಕಿಯ ಕೋಣೆಗೆ.

ಅವಳ ಬಾಯಿಯಿಂದ ವಿಸ್ಕಿ ವಾಸನೆ ಬರುತಿತ್ತು .

        ಕೋಣೆಗೆ ಯಾರೋ ಬಂದ ಸದ್ದು ಕೇಳಿ ಎದ್ದು ನಿಂತಿದ್ದ .

   ಬಂದವಳೇ ಆತನನ್ನು "ಅಪ್ಪಿ "ಹಿಡಿದಿದ್ದಳು.

             ಕಿವಿಯಲ್ಲಿ ಉಸುರಿದ್ದಳು , "ನನ್ನ ತಂಗಿಯ ಪ್ರಿಯತಮನ ಜೊತೆ ಇವತ್ತು ಇರಬಹುದೇ "ಎಂದು.

     ಅಸಹ್ಯ ಆಗಿತ್ತು ವಿಕ್ಕಿಗೆ.

ಹಾಗೆಯೇ ಅವಳ ತಾಕತ್ತಿನ ಪರಿಚಯ ಕೂಡ ಆಗಿತ್ತು.

     ಕಷ್ಟಪಟ್ಟು ಬಿಡಿಸಿ ಕೊಂಡಿದ್ದ , ಆಕೆಯ ಹಿಡಿತವನ್ನು .

      ಆಕೆಯ ಕಣ್ಣಲ್ಲಿ ಕಾಮವಿತ್ತು .

ನಶೆ ಏರಿದ ಕಣ್ಣು ಕೆಂಪಗಾಗಿತ್ತು ಸಿಟ್ಟಿನಲ್ಲಿ .

     ಮುಖಕ್ಕೆ ಉಗುಳಿ ಹೋಗಿದ್ದಳು , ಪದ್ಮನಿ ತನ್ನ ಕೋಣೆಯತ್ತ.

       ಆಗ ನೋಡಿದ ವಿಕ್ಕಿ , ಕುರ್ಚಿ ತೂಗಾಡುತ್ತಾ ಇದ್ದಿದ್ದು.

  ರಾಗಿಣಿಯ ಆತ್ಮ ಅದು .

ಸಣ್ಣ ಹೆಜ್ಜೆ ಸದ್ದಿನ ಜೊತೆ , ಅವನ ದಾಟಿ ಹೋಗಿತ್ತು .

ಮರುದಿನ ಬೆಳಿಗ್ಗೆಯಿಂದಲೇ ಶುರುವಾಗಿತ್ತು , ಮನೆಯಲ್ಲಿ ಸಂಭ್ರಮದ ವಾತಾವರಣ.

ಬಂಧು-ಬಳಗ ಸ್ನೇಹಿತರು ಎಲ್ಲರೂ ಕೂಡ ಬರುತ್ತಿದ್ದರು.

          ಸ್ವತಃ ಸಾಳ್ವೆಯೇ ನಿಂತು , ಎಲ್ಲರನ್ನೂ ಬರಮಾಡಿಕೊಳ್ಳುತ್ತಾ ಇದ್ದರು.

       ಬಹುತೇಕ ಮಂದಿ ಸೇರಿದ ಮೇಲೆ , ಸಾಳ್ವೆ ತಮ್ಮ ಮಾತನ್ನು ಆರಂಭಿಸಿದ್ದರು.

           " ನನ್ನದೇ ಈ ಜಾಗಕ್ಕೆ ಯಾವತ್ತೂ ಬರುತ್ತಿರಲಿಲ್ಲ ನಾನು ಬಹುಶಃ .

      ಸಾಲಾಗಿ ಎರಡು ಮಕ್ಕಳನ್ನು ಕಳೆದುಕೊಂಡೆ.

ಮನೆಯ ನಂಬಿಕಸ್ತ ಆಳುಗಳನ್ನು ಕಳೆದುಕೊಂಡೆ ಇದೇ ಬಂಗಲೆಯಲ್ಲಿ.

       ಭೂತ ಬಂಗಲೆ ಎಂದು ಹೆಸರಾಗಿ ಹೋಯಿತು ಇದು".

     ಅವರ ದ್ವನಿ ಕುಸಿದು ಹೋಗಿತ್ತು , ತಮ್ಮ ಮಕ್ಕಳ ಸಾವಿನ ಬಗ್ಗೆ ಹೇಳುವಾಗ.

        "ಆದರೂ ಒಂದು ಆಸೆ ಇತ್ತು , ನನ್ನ ಪೂರ್ವಜರು ವಾಸಿಸಿದ ಬಂಗಲೆ ಯಾವತ್ತೂ ಭೂತಬಂಗಲೆ ಆಗಬಾರದೆಂದು.

          ಇವತ್ತು ಎಲ್ಲಾ ಸರಿ ಆಗಿದೆ , ಈ ಎದುರಿಗೆ ನಿಂತ ಬರಹಗಾರ ವಿಕಾಸ್ ನಿಂದ "ಎಂದಿದ್ದರು .

          ವಿಕಾಸ್ ನ ಹೊಗಳಿಕೆ ಕಂಡು , ಪದ್ಮಿನಿ ಹೊಟ್ಟೆಯಲ್ಲಿ ರೋಷ ಉಕ್ಕಿ ಬರುತ್ತಿತ್ತು .

ಹಿಂದಿನ ದಿನದ "ರಾತ್ರಿಯ" ಘಟನೆ ನೆನಪಾಗಿ.

              "ನನ್ನದೇ ತೃಪ್ತಿಗೆ , ಆತನ ಸಹಾಯಕ್ಕೆ ನಾ ಚಿರಋಣಿ "ಎಂದಿದ್ದರು ಸಾಳ್ವೆ.

        ತಮ್ಮ ಸಹಾಯಕನ ಕರೆದು , ಆತನ ಕೈಯಲ್ಲಿದ್ದ ಲಕೋಟೆಯನ್ನು ಕೊಟ್ಟಿದ್ದರು ವಿಕ್ಕಿಯ ಕೈಗೆ.

          "ಇಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ನನ್ನ ಪುಟ್ಟ ಮನೆ , ಮತ್ತು ಅದಕ್ಕೆ ಹೊಂದಿಕೊಂಡಂತಿರುವ ತೋಟವನ್ನ ...ವಿಕಾಸ್ ಹೆಸರಿಗೆ ನೋಂದಾಯಿಸಿದ್ದೇನೆ.

        ಇದೇ ನಾ ಸಲ್ಲಿಸುವ ಸಣ್ಣ ಕೃತಜ್ಞತೆ ಅವರಿಗೆ " ಎಂದು ವಿಕಾಸ್ ಬೆನ್ನ ಮೇಲೆ ಕೈ ಹಾಕಿ ನುಡಿದಿದ್ದರು .

        ಚಪ್ಪಾಳೆಯ ಸುರಿಮಳೆ ಆಗಿತ್ತು.

ಮಾತು ಕಟ್ಟಿ ಹೋಗಿತ್ತು ವಿಕ್ಕಿಗೆ.

ಅವರ ಹೃದಯ ವೈಶಾಲ್ಯವನ್ನು ಕಂಡು.

ಮುಂದಿನದನ್ನು ನೆನೆದು.

             ತಂದೆ ವಿಕ್ಕಿಗೆ ಕೊಟ್ಟ ಬಹುಮಾನ ಕೇಳಿ ,ಸಿಟ್ಟು ನೆತ್ತಿಗೇರಿತ್ತು ಪದ್ಮಿನಿಗೆ.

      ವಿಸ್ಕಿ ನೆನಪಾಗಿತ್ತು .

ಬಂಗಲೆಯೊಳಗೆ ಕಾಲಿಟ್ಟಿದ್ದಳು .

ತನ್ನ ರೂಮಿನ ಕಡೆ ಹೋಗಲು , ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದಾಗ ....ಮೇಲೆ ಕಾಣಿಸಿತು ಆಕಾರ ಒಂದು .

   ಕುಂಜಪ್ಪ ನಿಂತಿದ್ದ ಮೇಲೆ , ಅವಳ ಕಡೆಯೇ ನೋಡುತ್ತಾ .

    ಆಕೆಯ ದೃಷ್ಠಿ "ಕುಂಜಪ್ಪನ "ಮೇಲೆಯೇ ಇತ್ತು .

ಗೋಡೆಗೆ ತೂಗು ಹಾಕಿದ ಬೃಹತ್ ಗಾತ್ರದ , ಅವರ ವಂಶಸ್ಥರ ಫೋಟೋ .....ತಾನಾಗೇ ಸರಪಳಿ ತುಂಡರಿಸಿ ಅವಳ ಮೇಲೆ ಬಿದ್ದಿತ್ತು.

     ದೊಡ್ಡ ಶಬ್ದದೊಂದಿಗೆ.

ಹೊರಗಡೆ ಮಾತನಾಡುತ್ತಿದ್ದ ಸಾಳ್ವೆ ಸಹಿತ , ಎಲ್ಲರೂ ನುಗ್ಗಿ ಹೋಗಿದ್ದರು ಒಳಗೆ.

         ಆಗ "ಕಾಣಿಸಿದ್ದು" ಪದ್ಮಿನಿಯ ಮೃತ ದೇಹ .

ಆಕೆಯ ಮೈ ತುಂಬಾ ಗಾಜುಗಳು ಹೊಕ್ಕಿದ್ದವು.

      ಕುತ್ತಿಗೆಯ ತನಕ ಫೋಟೋ , ಅವಳ ದೇಹವನ್ನು ನಜ್ಜುಗುಜ್ಜಾಗಿ ಮಾಡಿತ್ತು.

ಆಕೆಯ ಬಾಯಿಯಿಂದ , ರಕ್ತ ನೆಲದ ಮೇಲೆ ಹರಿದು .... ಮಹಡಿಯ ಮೆಟ್ಟಿಲ ಮೇಲಿಂದ ಜಾರುತ್ತಿತ್ತು.

                   ವಿಕ್ಕಿ ಮಾತ್ರ ಒಳಗೆ ಹೋಗಿರಲಿಲ್ಲ .

ಸುಹಾಸಿನಿ ಅವನ ಜೊತೆ ನಿಂತಿದ್ದಳು .

ಕುಂಜಪ್ಪ ಮರೆಯಾಗಿ ಹೋಗಿದ್ದ , ತನಗೆ ಒಪ್ಪಿಸಿದ ಕೆಲಸವನ್ನು ಮಾಡಿ.

          ಆಗ ಕೇಳಿಸಿತ್ತು ಗೆಜ್ಜೆಯ ಶಬ್ದ , ವಿಕ್ಕಿಗೆ.

ಸಣ್ಣದಾದ "ಬೆಳಕಿನ "ಕಿರಣ ಅವರ ಹಾದು ಹೋದ ಅನುಭವ .

           ಆಗ ಬಿದ್ದಿತ್ತು ನೀರಿನ ಹನಿಯೊಂದು ಆತನ ಕೈ ಮೇಲೆ.

       "ಬಿಸಿಲಿನ ವೇಳೆಯಲ್ಲಿ , ಅದು ಮಳೆ ಹನಿ ಆಗಿರಲಿಕ್ಕಿಲ್ಲ " ಎಂಬಂತೆ ಆಕಾಶ ನೋಡಿದ ವಿಕ್ಕಿ.

        ಕಾಣಿಸಿದ್ದು , ಬಿಳಿ ಮೋಡದಲ್ಲಿ ಮೂಡಿದ ರಾಗಿಣಿಯ ಮಂದಹಾಸದ ಮುಖ .

     

 

       

           

              

     

             

       

     

           

                      

        

      

      

  

      

       


Rate this content
Log in

Similar kannada story from Horror