Natesh MG

Romance

3.5  

Natesh MG

Romance

ಕಾಮನಬಿಲ್ಲು ನೀ, ಮಳೆ ಬಿಲ್ಲು ನಾ.

ಕಾಮನಬಿಲ್ಲು ನೀ, ಮಳೆ ಬಿಲ್ಲು ನಾ.

5 mins
664


" ದೇವರು "ಎಂಬ ಶಬ್ದ ಕೂಡ , ಆತನ ಎದುರಿಗೆ ಚಿಕ್ಕದಾಗಿ ಕಾಣಿಸುತ್ತಿತ್ತು. "ಕಾಣದ ದೇವರು , ಒಂದೊಮ್ಮೆ ವರ ಕೊಟ್ಟು ಹೋಗಿ ಬಿಡುವುದು "ಆಕೆ ಓದಿದ್ದಳು.

        ಆದರೆ ಅವ ಮಾತ್ರ , ಒಂದು ಕ್ಷಣವೂ ಬಿಟ್ಟಿರದೆ ಇದ್ದ ಆಕೆಯನ್ನು . ಆಕೆಯ ಕಣ್ಣಲ್ಲಿ ಕಣ್ಣೀರು ಸುರಿಯುತಿತ್ತು , ತನ್ನ ಗಂಡನ ನೋಡಿ .

     

ಅದೊಂದು ಸುಂದರ ಗಳಿಗೆಯಲ್ಲಿ , ಬಲಗಾಲಿಟ್ಟು ಆತನ ಮನೆಯೊಳಗೆ ಬಂದಿದ್ದಳು. ಹೆದರಿಕೆ ಇತ್ತು ಆಕೆಗೆ , ಯಾರದೋ ಮನೆಗೆ ಬಂದ ಹಾಗೆ .

ತನ್ನವರೆಲ್ಲರನ್ನೂ , ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬಂದಾಗ , ಎದುರಾಗುವ ಆತಂಕ ಅದು . ಕಣ್ಣಿನಲ್ಲೇ ಸಮಾಧಾನ ಹೇಳಿದ್ದ ಅವ .

       

ಹಿರಿಯರು ನೋಡಿ ಹೇಳಿದ ಸಂಬಂಧ , ಮಾತಿಲ್ಲದೆ ಒಪ್ಪಿದ್ದ ಆತ . ಆತನ ಮುಖದ ಮೇಲಿನ ಮಂದಹಾಸ ಮಾತ್ರ , ಹುಟ್ಟಿನಿಂದ ಬಂದ ಬಳುವಳಿಯ ತರಹ ಅನಿಸಿತ್ತು ಆಕೆಗೆ ...."ಹೆಣ್ಣು "ನೋಡಲು ಬಂದಾಗ .  ಮದುವೆ ನಿಕ್ಕಿ ಆದಾಗ , ಮತ್ತೊಮ್ಮೆ ಬಂದು ಹೋಗಿದ್ದ ಆತ .   ಕೇಳಿದ್ದ ಅವಳ ಎದುರಿನಲ್ಲಿ ಕುಳಿತು.  "ನಿಮ್ಮ ಬಳೆ ಸೈಜ್ ಎಷ್ಟು "ಎಂದು , ಕೇಳುವಾಗ ಆತನ ಮುಖ ಕೆಂಪೇರಿ ಹೋಗಿತ್ತು.    ನಕ್ಕಿದ್ದಳು , ಹೊಟ್ಟೆ ತುಂಬಾ ...ಮುಂದೆ ಕೈ ಹಿಡಿಯುವ ಗಂಡನ್ನು ಕಂಡು.     "ಸೀರೆ ನೀವೇ ಆರಿಸಿ , ಹಾಗೆ ಬಟ್ಟೆ ಜವಳಿ ಎಲ್ಲವೂ ಕೂಡ "ಎನ್ನುವಾಗ , ಆತನ ತಲೆ ತಗ್ಗಿದ್ದು ನೋಡಿ ಆಕೆಗೆ ನಗು.  ಹೇಳಿದ್ದ ಆಗ ಸ್ವಲ್ಪ ತಲೆ ಎತ್ತಿ , "ನಾಚಿಕೆ ಅಲ್ಲಾ ಕಣ್ರೀ ....ಮೊದಲ ಬಾರಿಗೆ ಹುಡುಗಿಯ ಜೊತೆಗೆ ಮಾತು ಆಡುತ್ತಿರುವುದು ...ನೋಡಿ ಎದೆ ಹೇಗೆ ಹೊಡೆದುಕೊಳ್ಳುತ್ತಿದೆ " ಎಂದು ಎದೆ ಮುಟ್ಟಿ ತೋರಿಸಿದ್ದ . ಆಗ ನಕ್ಕಿದ್ದ ಆತ . ಸೋತು ಹೋಗಿದ್ದಳು ಆಕೆ , ಕೇವಲ ಮಂದಹಾಸದ ಹುಡುಗ ಎಂದು ಕೊಂಡವಳಿಗೆ ...ಆತನ ಗುಳಿ ಬೀಳುವ ಕೆನ್ನೆ ನೋಡುತ್ತಾ ಕುಳಿತು ಬಿಟ್ಟಿದ್ದಳು . ಎರಡು ವರ್ಷ ಕಳೆದು ಹೋಗಿದ್ದೆ ಗೊತ್ತಾಗಿರಲಿಲ್ಲ ಆಕೆಗೆ , ಮದುವೆಯ ನಂತರ . ಪ್ರತಿಯೊಂದನ್ನೂ ಇಷ್ಟ ಪಡುತ್ತಿದ್ದ . ಆತನ ಸ್ವಭಾವ ನೋಡಿ ಆಶ್ಚರ್ಯ ಆಗಿತ್ತು . ಕಿಟಕಿಯಲ್ಲಿ ಹಣಕಿ ಹೋಗುವ ಕಾಗೆಗೆ ಕೇಳುತ್ತಿದ್ದ , "ಇಲ್ಲಿ ಬಂದು ನೋಡಿ , ಊರೆಲ್ಲಾ ಪ್ರಚಾರ ಮಾಡುತ್ತೀಯ ನೀನು "ಎಂದು . ಹಾಗೆ ಹೇಳುವಾಗ ಮುಖ ಕೆಂಪೇರಿತ್ತು ಅವಳದು. ಅದಕ್ಕೊಂದು ರೊಟ್ಟಿ ಚೂರು ಹಾಕಿ ಕಳುಹಿಸುತ್ತಿದ್ದ . ಬೆಳಿಗ್ಗೆ ರಸ್ತೆಯಲ್ಲಿ "ಅಂಬಾ" ಎಂದು ಕೂಗುವ ಯಾರದೋ ಮನೆಯ ಹಸು ಅವನ ಗೆಳತಿಯಾಗಿತ್ತು.

        

"ಬಸುರಿ ಹೊಟ್ಟೆ ಬಿಟ್ಟುಕೊಂಡು , ಊರೆಲ್ಲಾ ಓಡಾಡುತ್ತಿಯ. ಸಿಕ್ಕಿದ್ದು , ಕೊಟ್ಟಿದ್ದು ಎಲ್ಲಾ ತಿಂದರೆ , ಹೊಟ್ಟೆಯಲ್ಲಿರುವ ಕರುವಿನ ಕಥೆ ಹೇಳು " ಎಂದು ಹಸುವಿನ ಜೊತೆ ಆತ ಮಾತನಾಡುವಾಗ.... ಆಶ್ಚರ್ಯ ಎನಿಸುತ್ತಿತ್ತು ಆಕೆಗೆ.  ಜಗತ್ತಿನ ಪ್ರತಿಯೊಂದು ಕೂಡ ಅವನಿಗೆ ಇಷ್ಟವೇ. ಆಕಾಶದ ನಕ್ಷತ್ರವನ್ನು , ರಾತ್ರಿ ಇಬ್ಬರೂ ಎಣಿಸುತ್ತಿದ್ದಾಗ ....ಕಂಡಿತ್ತು ಜಾರುವ ನಕ್ಷತ್ರವೊಂದು. "ಪಾಪ "ಅಂದಿದ್ದ ಅದನ್ನು ನೋಡಿ . ಹೆದರಿಕೆಯಿಂದ ಹೆಜ್ಜೆಯಿಟ್ಟು ಬಂದವಳು , ಶಾಶ್ವತವಾಗಿ ಅವನೆದೆಯಲ್ಲಿ ಪ್ರತಿಷ್ಠಾಪನೆ ಆಗಿದ್ದಳು.

           

ಚಿಕ್ಕ ಮಗುವಿನಂತೆ ಆತ , ಆಕೆಯನ್ನು ನಕ್ಷತ್ರ ಎಣಿಸಲು ಎತ್ತಿಕೊಂಡು ಹೋಗುವಾಗ...."ಭೂಮಿಯ ಮೇಲೆ ಇಂತಹ ಗಂಡ ಕೂಡ ಇರುತ್ತಾನ "ಎಂದು ಅನಿಸುತಿತ್ತು ಆಕೆಗೆ .

ಅದೊಂದು ದಿನ ವಿಪರಿಮಿತ ಹೊಟ್ಟೆನೋವು ಆಕೆಗೆ. ಇತ್ತೀಚಿಗೆ ಮುಟ್ಟಿನಲ್ಲಿ ಕಾಣಿಸುವ ಸಣ್ಣ ಹೊಟ್ಟೆನೋವು , ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಉಸಿರಾಡಲು ಕೂಡ , ಕಷ್ಟ ಪಡುವಂತಹ ಹೊಟ್ಟೆನೋವು ಅದು.   ರಾತ್ರಿ ಆಕೆಯ ಕೈಯನ್ನೇ ಹಿಡಿದು ಕುಳಿತಿದ್ದ ಆತ .  ಸಮಾಧಾನ ಹೇಳುತ್ತಾ .

       

ತನಗೆ ಗೊತ್ತಿದ್ದ , ಜೀರಿಗೆ ಕಷಾಯ ಮಾಡಿ ಕೊಟ್ಟಿದ್ದ . ಆದರೂ ಕಡಿಮೆ ಆಗದ ಹೊಟ್ಟೆ ನೋವು ಆತನ ಆತಂಕ ಜಾಸ್ತಿ ಮಾಡಿತ್ತು . ತಡಮಾಡದೆ ಎತ್ತಿಕೊಂಡು , ಕಾರಿನಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದ. ಆಕೆಯ ನರಳುವಿಕೆ ಆತನ ಕಣ್ಣಲ್ಲಿ ನೀರು ತರಿಸುತ್ತಿತ್ತು . ಆದರೆ ಅದನ್ನು ಕೂಡ ತೋರ್ಪಡಿಸದೆ , ಮುಖ ತಿರುಗಿಸಿ ಸಾಂತ್ವನ ಹೇಳುತ್ತಿದ್ದ.

           

ಮಧ್ಯರಾತ್ರಿ ಮಡದಿಯನ್ನು ಆಸ್ಪತ್ರೆಗೆ ಸೇರಿಸಿದ ಮೇಲೆಯೇ , ನಿಟ್ಟುಸಿರು ಬಿಟ್ಟಿದ್ದು ಅವ . ವೈದ್ಯರ ದಂಡು ಧಾವಿಸಿ ಬಂದಾಗ , ಸಮಾಧಾನ ಹೇಳಿದ್ದ .  " ಕೆಲವರಿಗೆ ಹಾಗೆ ಹೊಟ್ಟೆ ನೋವು ಬರುತ್ತೆ ಅಂತೆ , ಮುಟ್ಟಿನ ಸಮಯದಲ್ಲಿ ...ಏನೋ ವ್ಯತ್ಯಾಸ ಆಗಿರಬೇಕು ಆಹಾರದಲ್ಲಿ , ಅದಕ್ಕೆ ಜಾಸ್ತಿ ಆಗಿದೆ " ಎನ್ನುವಾಗ , ಮುಖ ತಿರುಗಿಸಿಯೇ ಮಾತನಾಡಿದ್ದು ಅವ.

ತನ್ನ "ಕಣ್ಣೀರು "ಕಾಣಿಸಬಾರದು ಎಂದು.  ಹೊಟ್ಟೆ ನೋವು ಕಡಿಮೆ ಆಗಿತ್ತು , ವೈದ್ಯರ ಇಂಜೆಕ್ಷನ್ ಪ್ರಭಾವದ ಮೇಲೆ . ರಾತ್ರಿ ಇಡೀ ಆಕೆಯ ತಲೆ ಕೂದಲು ಸವರುತ್ತಾ ಕುಳಿತಿದ್ದ ಆತ . "ಒಂದು ಸಣ್ಣ ನಿದ್ದೆ ಮಾಡು ನೀನು , ಅಷ್ಟರಲ್ಲಿ ಸರಿ ಆಗುತ್ತೆ " ಎನ್ನುವಾಗ ಆತನ ಕಣ್ಣು ನೋಡಿದ್ದಳು .  "ನನಗೇನು , ನಿದ್ದೆ ಕಡೆಗೆ ಮಾಡ್ತೀನಿ ಬಿಡೆ " ಎಂದು ಹೇಳುವಾಗ ... ಸುಳ್ಳನ್ನು ಕೂಡ ಎಷ್ಟು ಚಂದವಾಗಿ ಹೇಳುತ್ತಾನೆ ಇವ ಅನಿಸಿತ್ತು .   ಮರುದಿನ ಸ್ಕ್ಯಾನಿಂಗ್ , ರಕ್ತ ಪರೀಕ್ಷೆ ಹೀಗೆ ...ಆಕೆಯ ರಕ್ತ ತೆಗೆಯುವಾಗ ಹಿಂಸೆ ಪಟ್ಟು ಬಿಟ್ಟಿದ್ದ , ತನ್ನದೇ ಕೈ ನೋವು ಆದ ಹಾಗೆ .

ನಕ್ಕಿದ್ದಳು ಅವಳು , ಅವನ ದೈರ್ಯ ನೋಡಿ . "ಸೊಳ್ಳೆ ಕಚ್ಚಿದ ಹಾಗೆ ಆಗುತ್ತೆ ಅಷ್ಟೆ "ಎಂಬ ಅವನ ಮಾತಿಗೆ , ಇವನೆಷ್ಟು ಸಹನೆ ಉಳ್ಳವನು.      ಇಂತಹ ಒಬ್ಬರು ಇದ್ದರೆ , ಎಂತಹ ನೋವನ್ನು ಕೂಡ ತಡೆದುಕೊಳ್ಳಬಹುದು ಎಂದು ಅನಿಸಿದ ಕ್ಷಣವದು.


ರಿಪೋರ್ಟ್ ಬಂದಾಗ ಇಬ್ಬರನ್ನು ಬರ ಹೇಳಿದ್ದಳು , ಲೇಡಿ ಡಾಕ್ಟರ್ ಒಳಗೆ.  ಅವಳಿಗೆ ಕಷ್ಟ ಆಗುತಿತ್ತು ವಿಷಯವನ್ನು ಹೇಳಲು , ಒಳಗೆ ಕುಳಿತ ಸುಂದರ ಜೋಡಿ ನೋಡಿ ."ಗರ್ಭಕೋಶದಲ್ಲಿ ಸಣ್ಣ ಟ್ಯೂಮರ್ ಇದೆ , ತಕ್ಷಣ ಆಪರೇಟ್ ಮಾಡಲೇಬೇಕು "ಎಂದಿದ್ದಳು ಪೀಠಿಕೆಯಂತೆ.   ಮೊದಲು ಗಾಬರಿಯಾಗಿದ್ದ ಅವ , ತಕ್ಷಣವೇ ಸುಧಾರಿಸಿಕೊಂಡು ಕೇಳಿದ್ದ.

"ಅಪಾಯ ಏನು ಇಲ್ಲಾ ಅಲ್ವೇ "ಎಂದು . "ಅಪಾಯ ಇಲ್ಲಾ , ಆದರೆ" ... ನಿಲ್ಲಿಸಿ ಬಿಟ್ಟಿದ್ದಳು ಮಾತನ್ನು ವೈದ್ಯ. " ಗರ್ಭಕೋಶ ತೆಗೆಯಬೇಕು "ಎಂದಿದ್ದಳು ನಿಧಾನವಾಗಿ .

 ಒಮ್ಮೆಲೇ "ಅಳು "ಉಕ್ಕಿ ಬಂದಿತ್ತು ಆಕೆಗೆ , ತನ್ನ ಗರ್ಭಕೋಶ ತೆಗೆಯುತ್ತಾರೆ ಎಂದಲ್ಲ .   ಮುಂದೆ "ಮಕ್ಕಳಾಗುವುದಿಲ್ಲ "ಎಂದು ಅರಿವಾಗಿ. ಆಕೆಯನ್ನು ತಬ್ಬಿ ಹಿಡಿದು ಹೇಳಿದ್ದ .

"ಅನಿವಾರ್ಯ ಆದರೆ ತೆಗೆಯಿರಿ ಡಾಕ್ಟ್ರೇ ...ಅವಳ ಹೊಟ್ಟೆ ನೋವು ನೋಡೋಕೆ ಸಾಧ್ಯವೇ ಇಲ್ಲಾ "ಎಂದು . ತಕ್ಷಣವೇ ಗಂಡನ ಮುಖ ನೋಡಿದಳು , ಅಲ್ಲಿ ಕಾಣಿಸಿದ್ದು ಪುಟ್ಟ ಸಾಂತ್ವಾನ .

"ಏನು ಆಗಿಯೇ ಇಲ್ಲಾ "ಎಂಬಂತೆ ಆತ ಕುಳಿತಿದ್ದು ಕೂಡ ಆಶ್ಚರ್ಯ . ಮಕ್ಕಳನ್ನು ಕಂಡರೆ ಅದೆಷ್ಟು ಇಷ್ಟ ಅವನಿಗೆ ಎಂದು ಅರಿವಿತ್ತು ಅವಳಿಗೆ.

    

ಖಂಡಿತ ಹೊರಗೆ ಹೋಗಿ , ಕಣ್ಣೀರು ಸುರಿಸುತ್ತಾನೆ ಎಂಬುದು ಕೂಡ ತಿಳಿದಿತ್ತು.  ಆದರೂ ತನಗೆ ಧೈರ್ಯ ತುಂಬುವುದಕ್ಕೆ , ಏನು ಆಗದ ಹಾಗೆ ಕುಳಿತಿದ್ದ ಅವನ ನೋಡಿ..... ಕಣ್ಣೀರು ಉಕ್ಕಿ ಬರುತ್ತಿತ್ತು."ಮಕ್ಕಳು ಆದರೆ , ನಮ್ಮಿಬ್ಬರ ಮದ್ಯೆ ಇಷ್ಟು ಗಾಢವಾದ ಪ್ರೀತಿ ಇರೋಲ್ಲ ಎಂದು ಅವ ಮಾಡಿಸಿದ್ದು ಇದು "ಎಂದು ನಕ್ಕಿದ್ದ. ಅವ ಎಂದರೆ ಅವನ ದೃಷ್ಟಿಯಲ್ಲಿ ದೇವರು ಎಂದು ಅರಿತಿದ್ದಳು .   ಗೊತ್ತಿತ್ತು ಅವಳಿಗೆ , ನಗುವಿನ ಹಿಂದೆ ಇದ್ದ ದುಃಖ. "ಇರಲಿ ಬಿಡೆ , ನಮಗೆ ಹುಟ್ಟುವ ಮಗುವೇ ಪ್ರಪಂಚ ಅಲ್ಲಾ ನಮಗೆ ... ಬೇಕಾದಷ್ಟು ಮಕ್ಕಳಿಗೆ ತಾಯಿ ಭಾಗ್ಯವೇ ಇಲ್ಲಾ , ಇನ್ನಷ್ಟು ಪುಟ್ಟ ಮಗುವಿಗೆ ತಂದೆ ಭಾಗ್ಯ ಕಸಿದು ಕೊಂಡು ಇರುತ್ತಾನೆ ಅವ ...... ಆತನ ಸಮಾಧಾನದ ನುಡಿಗಳಲ್ಲಿ , ದುಃಖ ಕಾಣಿಸದೇ ಇರುವ ಹಾಗೆ ನೋಡಿ ಕೊಳ್ಳುತ್ತಾ ಇದ್ದಿದ್ದು ಗೊತ್ತಾಗುತ್ತಿತ್ತು ಆಕೆಗೆ.  ಅಚ್ಚರಿ ಪಟ್ಟಿದ್ದಳು ನೋವಿನಲ್ಲಿ ಕೂಡ , ಆತನ ಮಾತು ಕೇಳಿ .   ಎಲ್ಲವನ್ನೂ ದೇವರ ಮೇಲೆ ಹಾಕುವಾಗ ನಗು ಬಂದಿತ್ತು.  "ಆಪರೇಷನ್ ಒಂದು ಮಾಡಿಸಿಕೊ , ಒಂದು ಪುಟ್ಟ ಜೀವಂತ ಬೊಂಬೆ ತರೋಣ ". ಕಣ್ಣಲ್ಲಿ ಕಣ್ಣಿಟ್ಟು ನುಡಿದಿದ್ದ.     ಕಾಣದ ದೇವರು ಕರುಣೆ ತೋರದೆ ಹೋಗಿದ್ದು ಗೊತ್ತಾಗುತ್ತಿತ್ತು . ಎದುರಿಗೆ ನಿಂತ ಗಂಡ , ಕಾಣುವ ದೇವರ ರೀತಿಯಲ್ಲಿ ಸಂತೈಸುತಿದ್ದ . ಹೃದಯದ ತುಂಬಾ , ಅವನದೇ ಮಾತುಗಳು ತೇಲಿ ಬರುತಿತ್ತು . ಮುಂದಿನ ಭವಿಷ್ಯ ಖಾಲಿ ಎಂದು ತೋರುತ್ತಿತ್ತು.   ವಿಧಿಯ ಜೊತೆಗಿನ , ಮುಸುಕಿನ ಗುದ್ದಾಟದಲ್ಲಿ ಅವಳು ಸೋತಿದ್ದಳು.  ಆತನ ಪ್ರೀತಿಯ ಮಳೆಗೆ , ಕರಗಿ ಮಂಜಾಗಿ ಹೋಗಿದ್ದಳು .                   

                     

ಆಪರೇಷನ್ ದಿನ ಕೂಡ ಹೇಳಿದ್ದ . " ನನ್ನ ಕೆನ್ನೆಯ ಗುಳಿಯಲ್ಲಿ ನಿನ್ನದೇ ನಗು ಇದೆ . ಅದರಲ್ಲಿ ಮುಂದಿನ ಚೆಂದದ ಕನಸು ಇದೆ ನಮ್ಮಿಬ್ಬರಿಗೂ "ಎಂದಿದ್ದ .  ಅರಿವಾಗಿತ್ತು ಆಕೆಗೆ , "ಹೆಣ್ಣಿಗೆ ಮಗು ಆಗುವುದಿಲ್ಲ ಎಂದರೆ , ಅಥವಾ ಇಲ್ಲದೇ ಇದ್ದರೆ ಸಮಾಜದ ಕೊಂಕು ಮಾತು ಕೇಳಬೇಕೆಂದು ".  ಆತನ ಕಣ್ಣಲ್ಲಿ , ಆಕೆಯ ಮನಸಿನಲ್ಲಿ ಮೂಡುವ ಭಾವನೆ ಅರ್ಥ ಆಗಿತ್ತು .

ಮನದ ದುಗುಡ ಅರ್ಥವಾಗಿತ್ತು ಅವನಿಗೆ .  ಆದರೂ ಆಕೆಯನ್ನು ಸಂತೈಸುವ ಕೈ , ಅವಳ ಕೈ ಒಳಗೆ ಸೇರಿತ್ತು .  "ಎಲ್ಲಾ ಇಲ್ಲಾ ಎನ್ನುವ ನಡುವೆ ನಾವಿಲ್ಲ ಈಗ . ಎಲ್ಲವೂ ಇದ್ದು , ಒಂದು ಮಾತ್ರ ಇಲ್ಲ ಎನ್ನುವುದು ನಿನ್ನ ಮನಸಲ್ಲಿ ಇರಲಿ "ಎಂದು ಕಿವಿಯಲ್ಲಿ ಗುಟ್ಟು ಹೇಳಿದ್ದ .  "ಅದು ಕೂಡ , ದೇವರಿಗೆ ಸವಾಲು ಹಾಕಿ ತರೋಣ " ಎಂದಾಗ ಕಣ್ಣಲ್ಲಿ ನೀರು ಉಕ್ಕಿ ಬರುತಿತ್ತು .ಆತನ ಮಾತು ಕೇಳಿ . " ಹೂ "ಅಂದಿದ್ದಳು , ತುಂಬಿದ ಕಣ್ಣಿನಿಂದ ನೋಡುತ್ತಾ ಅವನ .  ಆತನ ಮುಖದಲ್ಲಿ ಪುಟ್ಟ ಮಂದಹಾಸ . ಅದರಲ್ಲಿ ಮೂಡುವ ಗುಳಿ , ತಿಳಿಸಿ ಹೇಳಿತ್ತು ....  ನೀನೆಂದು ನನ್ನವಳು ಎಂದು .       

        


Rate this content
Log in

Similar kannada story from Romance