ಕೊರೊನ ರಾಮಾಯಣ
ಕೊರೊನ ರಾಮಾಯಣ
ಅಜಿತ: ಲೇ ಅಜ್ಜ , ಮಕಕ್ಕೆ ಮಾಸ್ಕ ಹಾಕೊಂಡೋಗು ಹೊರಗ, ಕೋರೋನ ಬಂದೈತಿ, ಗೊತ್ತಿಲ್ಲೇನು ಮತ್ತ.
ಅಜ್ಜ: ಯಾಕ್ಲ್ ಮಗನೆ, ನನ್ನ ಕೂಡ್ ನಕ್ಷಾಟೆ ಮಾಡ್ಲಿಕತ್ತಿಯೇನು, ಕೋರೋನ ಬಂದು ಬಾಳ್ ವರ್ಷ ಆಗ್ಯಾವ. ನಂಗೆ ಹೇಳ್ತೀಯಲಲೆ
ಅಜತ: ಅಜ್ಜ, ಕೋರೋನ ಅಂದ್ರೆ ಏನ್ ಗೊತ್ತ್ ನಿಂಗೆ ?
ಅಜ್ಜ: ಬಿಡೋ ಮಾರಾಯ, ಕೊರೊನ ಬಂದು ಬೋ ವರ್ಷ್ ಗಳಾದ್ವು. ನಿಮ್ಮಜ್ಜಿ, ನಿಮ್ಮ್ ಮುತ್ತಜ್ಜಿಗೂ ಕೊರೊನ ಇತ್ತ.
ಅಜಿತ: ಅಜ್ಜ, ಅದಂಗಲ್ಲಜ್ಜ.
ಅಜ್ಜ : ತಡಿಯೊ ಸ್ವಲ್ಪ, ಹೇಳತನಕ. ನಿಮ್ಮ್ ಮುತ್ತಜ್ಜ ಅವನತ್ರನು ಕೊರೊನ ಇತ್ತ
ಅಜಿತ: ಅಜ್ಜ, ಮತ್ತೆ ಹ್ಯಾಂಗೆ ನೀ ಇನ್ನ ಬದುಕಿದಿ ಮತ್ತ.
ಅಜ್ಜ: ನಿನ್ನ ಬಾಯಾಗೆ ಮನ್ಹಾಕ. ಕೊರೊನನ ನಾವು ನಿಮ್ಮಂಗೆ ತಲೆ ಮ್ಯಾಲೆ ಕೂರಿಸಿಕೊಂಡಿದ್ದ್ವಿ ಅಂದ್ಕೊಂಡ್ಯಾ
ಅಜಿತ: ಮತ್ತ್ ಇನ್ನೆಲ್ಲಿ ಕೂರಿಸಿಕೊಂಡಿದ್ರಿ ಅಜ್ಜ.
ಅಜ್ಜ: ಲೇ ಇವಳೆ, ಬಾರೆ ಇಲ್ಲಿ ಒಂತಟುಕು.
ಅಜ್ಜಿ : ಏನ್ರಿ ಅದು ನಿಮ್ಮ್ ಗೋಳು.
ಅಜ್ಜ: ಏನಿಲ್ಲ ಕಣೆ, ಈ ಮಂಗ್ಯಾ ನನ್ ಮಗನಿಗೆ ವಸಿ ನೀನೆ ಹೇಳು
ಅಜ್ಜಿ: ನಾ ಹೇಳೋದ್ ಏನ್ ಬಂತು, ಅವ ಕಲಿತವಿದಾನ, ಅವನೇ ನಮಗ್ ಹೇಳ್ತಾನ
ಅಜ್ಜ: ಅದು ಆಂಗಲ್ಲೇ ಶಿವ. ಅದು ನಮ್ಮನ್ಯಾಗೆ ಕೊರೊನನ ನಾವು ಎಲ್ಲಿ ಕುಂದಿರಿಸದಿವಿ ಅಂತ ಕೇಳ್ಲಿಕ್ತ್ಯಾನ
ಅಜ್ಜಿ: ಲೋ ಅಜಿತ, ನೀ ಇಷ್ಟೆಲ್ಲಾ ಪ್ರಪಂಚ ಸುತ್ತೀಯಾಪ್ಪಾ , ಇಷ್ಟು ಸಣ್ಣ ವಿಷ್ಯ ತಿಳಿದಿಲ್ಲೆನ್ ಮತ್ತ್
ಅಜಿತ: ಅಯ್ಯ್ಯೋ ಅಜ್ಜಿ ಲಗೂನ ಹೇಳ್ ಮತ್ , ನೀವು ಕೊರೊನನ ಹ್ಯಾಂಗೆ ಓಡಿಸಿದ್ರಿ ಅಂತ, ನಾಳೆ ಪೇಪರ್ ನಾಗೆ ನಿನ್ನ್ ಚಿತ್ರ ಬರೋಹಾಗೆ ಮಾಡ್ತೀನ .
ಅಜ್ಜಿ : ಹೌದೇನ್ , ತಡಿ ಮತ್ತ ನಾ ಸೀರಿ ಬ್ಯಾರೆ ಹುಟ್ಟ್ಕೊಂಡ್ ಬರ್ರ್ತೀನಿ.
ಅಜ್ಜ : ಲೇ ಮೊದ್ಲು ವಿಸ್ಯ ಹೇಳು, ಆಮೇಲ್ ನಾ ನೀ
ಬಜಾರ್ಗೆ ಹೋಗಿ ಕೊರೊನ ಸೀರಿ ಕೊಂಡ್ಕೊಳ್ಳೋನು
ಅಜ್ಜಿ: ಸರಿ ಮತ್ತ , ಅಜಿತ, ನನ್ನ ಜೋಡಿ ಚಪ್ಪಲ್ ಒಳಗದಾವೆ, ತಂದ್ ಕೊಡೊಪ.
ಅಜಿತ : ಏನ್ ಅಜ್ಜಿ ನೀ, ಕೊರೊನ ಕಥಿ ಹೇಳ್ತೀನಿ ಅಂದು, ಜೋಡು ಕೇಳಾಕತ್ತಿಯ
ಅಜ್ಜ: ಅದುಕ್ಕೆ ನಾ ಹೇಳಿದ್ದು, ಇವ ಬರಿ ಪೇಪರ್ ಮ್ಯಾಲೆ ಡಿಗ್ರಿ ತಗೊಂಡ್ಯಾನ್, ತಲ್ಯಾಗ ಬರೇ ಸೆಗಣಿ ತುಂಬೈತಿ
ಅಜಿತ: ಅಜ್ಜಿ ನೋಡಜ್ಜಿ ಅಜ್ಜನ
ಅಜ್ಜಿ: ನೀ ಸುಮ್ನಿರಪ, ನಿಮ್ಮ ಅಜ್ಜನ ೫೦ ವರ್ಷದಿಂದ ನೋಡಿ ನೋಡಿ ನನ್ನ ತಲ್ಯಾಗಿನ್ ಕೂದ್ಲು ಎನಿಸ್ಕೊತ ಕುಂದ್ರದಾಗೈತಿ, ನೀ ನನ್ನ ಜೋಡು ತರ್ರ್ತೀಯ ಇಲ್ಲ ನಾ ಹೋಗ್ಲಾ
ಅಜಿತ : ಈಗ್ಲೇ ತಂದೆಬೆ.
ಅಜ್ಜಿ: ರೀ ನೀವು ಮಕ ಗಿಕ ತೊಳ್ಕೊರೀ.
ಅಜಿತ: ಕೊರೊನ ಅಜ್ಜಿ.
ಅಜ್ಜಿ: ನಿಮ್ಮಜ್ಜ ನಿನ್ ಹೆಸ್ರು ಚಲೊತ್ನ ಇಟ್ಟ್ಯಾನ, ಮಂಗ್ಯಾ ನನ್ನ ಮಗನ.
ಅಜಿತ: ಯಾಕಜ್ಜಿ
ಅಜ್ಜಿ: ರೀ ನಿಮ್ಮ್ ಚಾಳೀಸು ಕೊಡ್ರಿ, ಇದುನ್ನ ಹಾಕೊಂಡು ನೋಡೊಯಪ್ಪ ಕೊರೊನನ.
ಅಜಿತ: (ಕಣ್ಣುಜ್ಜುತ್ತಾ) ಎಲ್ಲಜ್ಜಿ ?
ಅಜ್ಜ: (ಕೋಲ್ನಿಂದ ತಲೆ ಮೇಲೆ ಕುಕ್ಕಿ) ಲೇ ಜಾಸ್ತಿ ಮಾತಾಡಿದ್ರ ಕಾಲಾಗಿರವು, ಕೈನಾಗೆ ಬರ್ರ್ತಾವ ನೋಡ್ ಮತ್ತ.
ಅಜಿತ: (ತಲೆ ಕೆರ್ಕೊತಾ) ನಂಗ್ ಒಂದು ತಿಳಿಯಂಗಿಲ್ಲ.
ಅಜ್ಜಿ: ಅಜಿತು ನನ್ನ ಕಾಲ್ನಾಗಿರೋದ ಕೊರೊನ ಅಲ್ಲೇನು. ನಿಮ್ಮಜ್ಜ ಬಜಾರ್ ಕರ್ಕೊಂಡೋಗಿ ಕೊಡಿಸಿ ೨೦ ವರ್ಷ ಆಗ್ಯಾವು, ನನ್ನ ತಲೆನಾಗೆ ಕೂದ್ಲು ಉದಿರಿದ್ರೂ, ಈ ಕೊರೊನ ನನ್ನ ಬಿಡಾಂಗಿಲ್ ನೋಡ್ ಮತ.
ಅಜ್ಜ: (ಜೋರಾಗಿ ನಗುತ್ತ, ಬಿಳಿ ಮೀಸೆ ತಿವಿರುತ್ತ, ) ಇಂಗು ತಿಂದ ಮಂಗ್ಯಾ ನಮ್ಮ್ ಅಜಿತ.
ಅಜಿತ: ಅಯ್ಯಯ್ಯೋ ನಾ ಕೊರೊನ ವೈರಸ್ ಬಗ್ಗೆ ಕೇಳಿದ್ರೆ ಇವ್ರು ಕೊರೊನ ಸ್ಯಾಂಡಲ್ಸ್ ಬಗ್ಗೆ ಕಥೆ ಹೇಳಿದ್ರಲ್ಲಪ್ಪ. ಈ ಕೊರೊನನು ಬೇಡ ಕರೀನಾನು ಬೇಡ (ಜೋರಾಗಿ ಅಳುತ್ತಾನೆ)